ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿ
ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿkai Stachowiak / publicdomainpictures.net

ಮಹಿಳಾದಿನ ವಿಶೇಷ: ಮೈಸೂರಿನ ಮೂಲೆಯಿಂದ ವಿದೇಶಗಳನ್ನೂ ತಲುಪಿದ್ದೇವೆ!

ನಮ್ಮ ಕಲ್ಪನೆಗಳಿಗೆ ವಾಸ್ತವದ ರೂಪ ಕೊಡುವ, ಉತ್ಸಾಹದಿಂದ ಬದುಕಲು ಉತ್ತೇಜಿಸುವ ತಂತ್ರಜ್ಞಾನವೆಂಬ ಸ್ನೇಹಿತನಿಗೆ ಥ್ಯಾಂಕ್ಸ್ ಹೇಳುತ್ತಿದ್ದಾರೆ ಲೇಖಕಿ ಮತ್ತು ಉದ್ಯಮಿ ಧರ್ಮಶ್ರೀ ಅಯ್ಯಂಗಾರ್

ದಿನಾ ಬೆಳಿಗ್ಗೆ ಎದ್ದಾಗ ಸುಪ್ರಭಾತದ ಥರ ಫೇಸ್ಬುಕ್ ತೆಗೆದು Whats on your mind ಅಂತ ಅದು ಕೇಳೋ ಪ್ರಶ್ನೆಗೆ ಶಿಸ್ತಾಗಿ ಕೂತು ಇಷ್ಟಿಷ್ಟುದ್ದ ಸ್ಟೇಟಸ್ ಬರೆದು ಅಪ್‌ಡೇಟ್ ಮಾಡೋವಾಗಲೇ ಜ್ಞಾನೋದಯ ಆಗಿದ್ದು, ಬರೆವಣಿಗೆ ಅನ್ನೋ ಮನಸ್ಸಿನ ಮೂಲೆಯಲ್ಲಿ ಬಚ್ಚಿಟ್ಟುಕೊಂಡ ಆಯಾಮವನ್ನು ತಂತ್ರಜ್ಞಾನ ಎಷ್ಟು ಸಮರ್ಥವಾಗಿ ಹೊರಗೆಳೆದು ತರುತ್ತೆ ಅಲ್ವಾ ಅಂತ!

ಬರೆವಣಿಗೆ ಪ್ರಾಯಶಃ ಭೂಮಿ ಮೇಲೆ ಸೂರ್ಯ ಚಂದ್ರರಷ್ಟೇ ಪ್ರಾಚೀನ. ಅಂತರಂಗದ ಆಲೋಚನೆಗಳ ಪ್ರತಿನಿಧಿಯಾದ ಅಕ್ಷರಗಳು ಕಲ್ಲುಗಳ ಮೇಲೆ, ತಾಳೆಗರಿಗಳ ಮೇಲೆ, ಕಾಗದದ ಮೇಲೆ ಹೀಗೆ ನಾನಾ ಮಾಧ್ಯಮಗಳಲ್ಲಿ ವಿಜೃಂಭಿಸಿ ಈಗ ಕಂಪ್ಯೂಟರ್ ಮತ್ತು ಮೊಬೈಲು ಪರದೆಗಳ ಮೇಲೂ ರಾರಾಜಿಸುತ್ತಾ update ಆಗುತ್ತಿವೆ.

ಬೆರಳು ತೋರಿಸಿದರೆ ಹಸ್ತ ನುಂಗೋ ಕಾಲ ಹೋಯ್ತು, ಬೆರಳು ತಾಕಿದರೆ ಸಾಕು ಅಕ್ಷರಗಳನ್ನು ಝಳಪಿಸೋ ಟಚ್ ಸ್ಕ್ರೀನ್ ತಂತ್ರಜ್ಞಾನ ಬಂತು. ಏನೋ ಹೊಳೆಯುತ್ತೆ, ಬರೆದಿಡೋಣ ಅನ್ಕೊಂಡಾಗ ಬುಕ್ ಸಿಗಲ್ಲ, ಪೆನ್ನಲ್ಲಿ ಇಂಕ್ ಇರಲ್ಲ, ಪೆನ್ಸಿಲಲ್ಲಿ ಲೆಡ್ ಇರಲ್ಲ, ಬುಕ್ ಇದ್ರೂ ಪೇಜ್ ಖಾಲಿ ಇರಲ್ಲ, ಕೊನೆಗೆ ಎಲ್ಲವನ್ನೂ ಹೊಂಚಿಕೊಳ್ಳೋ ಹೊತ್ತಿಗೆ ತಲೆಯಲ್ಲಿ ಆಲೋಚನೆಗಳೇ ಇರಲ್ಲ ಅಂತ ಬರೆಯೋಕ್ಕೆ ಸೋಮಾರಿತನ ಮಾಡ್ಕೊಳೋ ಹಾಗೇ ಇಲ್ಲ. ಟೈಪ್ ಮಾಡಕ್ಕೂ ಸೋಮಾರಿತನವೇ, ಅದೇನೋ ವಾಯ್ಸ್ ಪತ್ತೆ ಹಚ್ಚಿ ನಾವು ಮಾತಾಡಿದ್ದನ್ನ ಹಾಗ್ ಹಾಗೇ ಅಕ್ಷರರೂಪಕ್ಕೆ ಬಟ್ಟಿ ಇಳಿಸೋ ತಂತ್ರಜ್ಞಾನವೂ ಬಂದಿದೆ!

"ಅಯ್ಯೋ ಕಂಪ್ಯೂಟರ್, ಮೊಬೈಲು ನೋಡಿ ನೋಡಿ ಮಕ್ಕಳು ಕೆಟ್ಟೋಗ್ತಾರಪ್ಪ"ಗಳಿಂದ ಪೋಷಕರು "ಐಪ್ಯಾಡ್ ಕೊಡ್ಸಿದೀವ್ ರೀ.. ಮಗ ಅದ್ರಲ್ಲೇ ಲಿಟರೇಚರ್ ಥೀಸೀಸ್ ಟೈಪ್ ಮಾಡೋದು"ಗಳವರೆಗೂ ಬರಹ ಅನ್ನೋ ಪ್ರಖರ ಸೂರ್ಯನಿಗೆ ಟೆಕ್ನಾಲಜಿ ಎಂಬ ಕೂಲ್ ಕೂಲ್ ಸ್ನೇಹಿತ ಸಾಥ್ ಕೊಡುತ್ತಿದ್ದಾನೆ. ಅದೊಂದೇ ಅಲ್ಲ, ರೈಟಿಂಗ್ ಬಿಡಿಪ್ಪಾ ನಮ್ಮಂಥವರಿಗಲ್ಲ ಅಂತ ಹಿಂಜರಿಯುತ್ತಿದ್ದವರೂ ಫೇಸ್ಬುಕ್, ಟ್ವಿಟ್ಟರ್ ಮೊದಲಾದ ಸಾಮಾಜಿಕ ತಾಣಗಳಲ್ಲಿ ಧೈರ್ಯವಾಗಿ ತಮಗನ್ನಿಸಿದ್ದನ್ನು ಅಕ್ಷರ ರೂಪಕ್ಕಿಳಿಸುತ್ತಾ ತಮ್ಮೊಳಗಿನ ಬರಹಗಾರನನ್ನು ಹೊರತರುವ ಪ್ರಯತ್ನ ಮಾಡೋದು ಖುಷಿಯ ವಿಚಾರ.

ಮಾಮೀಸ್ ಆಹಾರ ಉತ್ಪನ್ನಗಳು
ಮಾಮೀಸ್ ಆಹಾರ ಉತ್ಪನ್ನಗಳುhttps://www.facebook.com/Maamis-523800778135887/

ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಆನ್‌ಲೈನ್ ಮಾರ್ಕೆಟಿಂಗ್ ವಿಚಾರದಲ್ಲೂ ತಂತ್ರಜ್ಞಾನದ ಕೊಡುಗೆ ಬಹಳ ದೊಡ್ಡದು. ಯಾವುದೇ ಉದ್ಯಮದ ಹಿನ್ನೆಲೆ ಇರದ ನನ್ನಂಥವರೂ ಟೆಕ್ನಾಲಜಿ ಮತ್ತು ಅದಕ್ಕಿರುವ ಸಾಮಾಜಿಕ ವ್ಯಾಪ್ತಿಯನ್ನು ನೋಡಿ ನಾವೂ ಯಾಕೆ ಸಣ್ಣದಾಗಿ ಒಂದ್ ಕಂಪನಿ ಶುರು ಮಾಡಬಾರದು ಅಂತ ಶುರು ಮಾಡಿದ ಉದ್ಯಮವೇ ಮಾಮೀಸ್! ಮೈಸೂರಿನ ಮೂಲೆಯೊಂದರಲ್ಲಿ ಕೂತು ನಾನೂ ನನ್ನ ದೊಡ್ಡಮ್ಮನ ಮಗಳು ಭಾರತದ ಉದ್ದಗಲಕ್ಕೂ ಅಲ್ಲದೇ ವಿದೇಶಗಳಿಗೂ ನಮ್ಮ ದೇಸಿ ಆಹಾರ ಉತ್ಪನ್ನಗಳನ್ನು ತಲುಪಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಫೇಸ್ಬುಕ್.

ಒಂದು ಕಾಲಕ್ಕೆ ಹೀಗೆ ಕೂತ ಕಡೆಯಿಂದ ವಿಶ್ವದ ಮೂಲೆ ಮೂಲೆಗೆ ಥಟ್ ಅಂತ ಸಂದೇಶ ರವಾನಿಸೋದು, ವ್ಯಾಪಾರ ಮಾಡೋದು ಎಲ್ಲ ಚಂದಮಾಮ ಕಥೆಯಂತೆ ತೋರುತ್ತಿತ್ತು! "ಹುಚ್ಚು ಕಲ್ಪನೆಯೆಲ್ಲ ಬಿಡಿ, ಕೆಲ್ಸ ನೋಡಿ" ಅನ್ನೋ ಮಾತಿಗೆ ಅವಕಾಶ ಕೊಡದ ಹಾಗೆ ನಮ್ಮ ಎಷ್ಟೋ ಕಲ್ಪನೆಗಳಿಗೆ ವಾಸ್ತವದ ರೂಪ ಕೊಡುತ್ತಾ, ಎಲ್ಲರ ನಡುವೆ ನಮ್ಮನ್ನು ಸದಾ ಕಾಲ ಪ್ರಸ್ತುತವಾಗಿರುವಂತೆ ಮಾಡುತ್ತಾ, ಉತ್ಸಾಹದಿಂದ ಬದುಕಲು ಉತ್ತೇಜಿಸುತ್ತಿರುವ ತಂತ್ರಜ್ಞಾನವೆಂಬ ಸ್ನೇಹಿತನಿಗೊಂದು ತುಂಬು ಹೃದಯದ ಥ್ಯಾಂಕ್ಸು!

- ಧರ್ಮಶ್ರೀ ಅಯ್ಯಂಗಾರ್ ಲೇಖಕಿ ಮತ್ತು ಉದ್ಯಮಿ

ಸರ್ವವ್ಯಾಪಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸವಲತ್ತುಗಳನ್ನು ವಿವಿಧ ಕ್ಷೇತ್ರಗಳ ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಈ ನಿಟ್ಟಿನಲ್ಲಿ ವಿಚಾರವಿನಿಮಯ ಸಾಧ್ಯವಾಗಿಸುವುದು ಮಹಿಳಾದಿನದ ಅಂಗವಾಗಿ ಪ್ರಕಟವಾಗುತ್ತಿರುವ ಈ ಸರಣಿಯ ಉದ್ದೇಶ. ಇದೇ ವಿಷಯದ ಬಗ್ಗೆ ನಿಮ್ಮ ಅನುಭವವನ್ನೂ ಹಂಚಿಕೊಳ್ಳುವ ಆಸಕ್ತಿಯಿದ್ದರೆ ದಯಮಾಡಿ ನಮ್ಮ ಫೇಸ್‌ಬುಕ್ ಪುಟಕ್ಕೆ ಬನ್ನಿ!

Related Stories

No stories found.
logo
ಇಜ್ಞಾನ Ejnana
www.ejnana.com