ಶುಕ್ರಗ್ರಹ ಸಮೀಪಿಸಿದ ಪಾರ್ಕರ್‌ ಸೋಲಾರ್‌ ಪ್ರೋಬ್
ಶುಕ್ರಗ್ರಹ ಸಮೀಪಿಸಿದ ಪಾರ್ಕರ್‌ ಸೋಲಾರ್‌ ಪ್ರೋಬ್parkersolarprobe.jhuapl.edu

ಶುಕ್ರಗ್ರಹಕ್ಕೊಂದು ಸುತ್ತು

ಶುಕ್ರಗ್ರಹದ ವಾತಾವರಣವನ್ನು ಅಧ್ಯಯನ ಮಾಡುವುದರಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ?

ಡಿಸೆಂಬರ್ ಕೊನೆಯ ವಾರದಲ್ಲಿ ನಡೆದ (೨೬ ಡಿಸೆಂಬರ್‌ ೨೦೧೯) ನಡೆದ ಕಂಕಣ ಸೂರ್ಯಗ್ರಹಣ ನಮ್ಮೆಲ್ಲರ ಗಮನವನ್ನೂ ಸೆಳೆದಿತ್ತು. ಆದರೆ ಆದೇ ದಿನ, ಶುಕ್ರ ಗ್ರಹ ಅಧ್ಯಯನದಲ್ಲಿ ನಿರತ ವಿಜ್ಞಾನಿಗಳ ಗಮನ ಮಾತ್ರ 'ಪಾರ್ಕರ್‌ ಸೋಲಾರ್‌ ಪ್ರೋಬ್' ಎಂಬ ಗಗನನೌಕೆಯ ಮೇಲೆ ಕೇಂದ್ರೀಕೃತವಾಗಿತ್ತು. ಆಗಸ್ಟ್‌ ೨೦೧೮ರಲ್ಲಿ ಉಡಾವಣೆಯಾದ ಈ ಗಗನನೌಕೆಯ ಮುಖ್ಯ ಉದ್ದೇಶ ಸೂರ್ಯನ ಅಧ್ಯಯನ. ಆದರೆ ಭೂಮಿಯಿಂದ ಸೂರ್ಯನತ್ತ ಸಾಗಿರುವ ಈ ಪ್ರೋಬ್‌, ಏಳು ಬಾರಿ ಶುಕ್ರಗ್ರಹದ ಸಮೀಪ ಸಂಚರಿಸಲಿದೆ. ಹೀಗಾಗಿ ಶುಕ್ರ ಗ್ರಹ ಕುರಿತ ಅಧ್ಯಯನಕ್ಕೆ ಈ ಪ್ರೋಬ್‌ನಿಂದ ಹೆಚ್ಚು ಮಾಹಿತಿ ಸಿಗುತ್ತದೆ ಎನ್ನುವುದು ವಿಜ್ಞಾನಿಗಳ ನಿರೀಕ್ಷೆ.

ಅಕ್ಟೋಬರ್‌ ೨೦೧೮ರಲ್ಲಿ ಪಾರ್ಕರ್‌-ಸೋಲಾರ್‌ ಪ್ರೋಬ್‌ ಮೊದಲ ಸಲ ಶುಕ್ರಗ್ರಹದ ಸಮೀಪದಿಂದ ಸಂಚರಿಸಿತ್ತು. ಆದರೆ ಪ್ರಕಾಶಮಾನವಾಗಿರುವ ಶುಕ್ರಗ್ರಹವನ್ನು ಸೂರ್ಯನಿರಬಹುದು ಎಂದು ತಪ್ಪಾಗಿ ಅರ್ಥೈಸಿದ ಪ್ರೋಬ್‌, ತನ್ನಲ್ಲಿರುವ ವೈಜ್ಞಾನಿಕ ಉಪಕರಣಗಳನ್ನು ರಕ್ಷಿಸಲು, ಅವುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿಬಿಟ್ಟಿತ್ತು. ೨೬ ಡಿಸೆಂಬರ್‌ ೨೦೧೯ರಂದು ಎರಡನೆಯ ಸಲ ಪ್ರೋಬ್‌ ಶುಕ್ರಗ್ರಹಕ್ಕೆ ಮತ್ತಷ್ಟು ಸಮೀಪದಿಂದ ಸಂಚರಿಸಿದೆ, ಮತ್ತು ಈ ಬಾರಿ ಅದರಲ್ಲಿರುವ ಎಲ್ಲ ವೈಜ್ಞಾನಿಕ ಉಪಕರಣಗಳೂ ಕೆಲಸ ಮಾಡಿವೆ. ಹೀಗಾಗಿ ಈ ಬಾರಿ ಶುಕ್ರ ಗ್ರಹದ ಕುರಿತು ಹೆಚ್ಚು ಮಾಹಿತಿ ಕಲೆಹಾಕಬಹುದು ಎನ್ನುವುದೇ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದ್ದ ಅಂಶ. ೨೦೨೦ರ ಜುಲೈನಲ್ಲಿ ಮೂರನೆಯ ಸಲ ಮತ್ತು ಫೆಬ್ರುವರಿ ೨೦೨೧ರಲ್ಲಿ ನಾಲ್ಕನೆಯ ಸಲ ಈ ಪ್ರೋಬ್‌ ಶುಕ್ರ ಗ್ರಹದ ಮತ್ತಷ್ಟು ಸಮೀಪದಿಂದ ಸಂಚರಿಸಲಿದ್ದು, ಈ ಸಂದರ್ಭದಲ್ಲಿ ವಿಶೇಷವಾಗಿ ಶುಕ್ರ ಗ್ರಹದ ವಾತಾವರಣ ಕುರಿತು ಮಾಹಿತಿ ಸಿಗುವ ನಿರೀಕ್ಷೆ ವಿಜ್ಞಾನಿಗಳಿಗಿದೆ.

ಪಾರ್ಕರ್‌ ಸೋಲಾರ್‌ ಪ್ರೋಬ್ ಶುಕ್ರಗ್ರಹ ಭೇಟಿಯ ಚಿತ್ರಣ
ಪಾರ್ಕರ್‌ ಸೋಲಾರ್‌ ಪ್ರೋಬ್ ಶುಕ್ರಗ್ರಹ ಭೇಟಿಯ ಚಿತ್ರಣparkersolarprobe.jhuapl.edu

ಸೂರ್ಯನ ಅಧ್ಯಯನಕ್ಕಾಗಿ ಅಭಿವೃದ್ಧಿ ಪಡಿಸಲಾಗಿರುವ ವೈಜ್ಞಾನಿಕ ಉಪಕರಣಗಳನ್ನು ಹೊಂದಿರುವ ಪಾರ್ಕರ್‌ ಸೋಲಾರ್‌ ಪ್ರೋಬ್‌ನಿಂದ ಶುಕ್ರ ಗ್ರಹದ ಅಧ್ಯಯನಕ್ಕೆ ಹೇಗೆ ಸಹಾಯವಾಗುತ್ತದೆ?

ಶುಕ್ರ ಗ್ರಹದ ಅಧ್ಯಯನಕ್ಕೆಂದು ೧೯೭೮ರಲ್ಲಿ ನಾಸಾದ ಪೋಯಿನಿಯರ್‌ ಆರ್ಬಿಟರ್‌ ಮತ್ತು ೨೦೦೫ರಲ್ಲಿ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ವೀನಸ್‌ ಎಕ್ಸಪ್ರೆಸ್‌, ಇವರೆಡರಲ್ಲೂ ಕೂಡಾ ಪ್ಲಾಸ್ಮಾ ಡಿಟೆಕ್ಟರ್‌ ಉಪಕರಣಗಳನ್ನು ಬಳಸಲಾಗಿತ್ತು. ಆ ಉಪಕರಣಗಳಿಗೆ ಹೋಲಿಸಿದರೆ, ಪಾರ್ಕರ್ ಸೋಲಾರ್‌ ಪ್ರೋಬ್‌ನಲ್ಲಿರುವ ಪ್ಲಾಸ್ಮಾ ಅಧ್ಯಯನದ ಉಪಕರಣಗಳು ಅಧುನಿಕ ತಂತ್ರಜ್ಞಾನ ಬಳಸುತ್ತಿವೆ ಮತ್ತು ಇವುಗಳಿಂದ ಹೆಚ್ಚು ನಿಖರವಾದ ಮಾಹಿತಿಯನ್ನು ಕಡಿಮೆ ಸಮಯದಲ್ಲಿ ಪಡೆಯಲು ಸಾಧ್ಯವಿದೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.

ಸೂರ್ಯನಿಂದ ಸತತವಾಗಿ ಹೊರಹೊಮ್ಮುವ ಸೌರ ಮಾರುತಗಳಿಂದ (ಸೋಲಾರ್‌ ವಿಂಡ್‌) ಶುಕ್ರಗ್ರಹದ ಮೇಲಾಗುತ್ತಿರುವ ಪರಿಣಾಮವನ್ನು ತಿಳಿಯಲು ಕಳೆದ ಡಿಸೆಂಬರ್‌ ೨೬ರಂದು ಲಭ್ಯವಾಗಿರುವ ಮಾಹಿತಿ ಸಹಾಯಕವಾಗಬಹುದು; ಜೊತೆಗೆ, ಶುಕ್ರಗ್ರಹ ತನ್ನ ವಾತಾವರಣವನ್ನು ಹೇಗೆ ಕಳೆದುಕೊಳ್ಳುತ್ತಿದೆ ಎನ್ನುವುದರ ಬಗೆಗೂ ಮಾಹಿತಿ ಲಭ್ಯವಾಗಬಹುದು ಎಂದು ವಿಜ್ಞಾನಿಗಳು ನಿರೀಕ್ಷಿಸುತ್ತಿದ್ದಾರೆ. ಶುಕ್ರನಲ್ಲಿ ಈ ಮೊದಲು ನೀರಿತ್ತೇ ಅಥವಾ ಮುಂಬರುವ ವರ್ಷಗಳಲ್ಲಿ ನೀರು ಲಭ್ಯವಾಗಬಹುದೇ ಎನ್ನುವ ಎರಡೂ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಅಗತ್ಯ ಮಾಹಿತಿಯಿಲ್ಲ. ಹೀಗೆ ಶುಕ್ರ ಗ್ರಹ ಕುರಿತು ನಮಗೆ ಇದುವರೆಗೂ ತಿಳಿಯದೆ ಇರುವ ಅನೇಕ ಮಾಹಿತಿ, ಪಾರ್ಕರ್ ಸೋಲಾರ್‌ ಪ್ರೋಬ್‌ನಿಂದ ದೊರೆಯಬಹುದು ಎನ್ನುವುದು ಅವರ ನಿರೀಕ್ಷೆ.

ಪಾರ್ಕರ್‌ ಸೋಲಾರ್‌ ಪ್ರೋಬ್‌ ೭ ಸಲ ಶುಕ್ರ ಗ್ರಹದ ಸಮೀಪದಿಂದ ಸಂಚರಿಸಿದ ನಂತರ, ಮುಂಬರುವ ವರ್ಷಗಳಲ್ಲಿ ಜಪಾನ್‌ ಮತ್ತು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಗಳು ಬುಧಗ್ರಹ ಮತ್ತು ಸೂರ್ಯನ ಅಧ್ಯಯನಕ್ಕೆಂದು ಕಳುಹಿಸುವ ಪ್ರೋಬ್‌ಗಳಿಂದ ಮತ್ತೆ ಶುಕ್ರ ಗ್ರಹ ಕುರಿತು ಮಾಹಿತಿ ಸಿಕ್ಕರೂ ಸಿಗಬಹುದು. ಇವರೆಡೂ ಯೋಜನೆಗಳ ಹೊರತಾಗಿ ಶುಕ್ರ ಗ್ರಹ ಅಧ್ಯಯನಕ್ಕೆ ಪೂರಕವಾಗುವಂತಹ ಹೊಸ ಯೋಜನೆಗಳು ಇದುವರೆಗೂ ಘೋಷಿತವಾಗಿಲ್ಲವೆನ್ನುವ ಕಳವಳ ವಿಜ್ಞಾನಿಗಳಿಗಿದೆ.

ಅದೆಲ್ಲ ಸರಿ, ಆದರೆ ಶುಕ್ರ ಗ್ರಹ ಅಧ್ಯಯನದಿಂದ ಜನಸಾಮಾನ್ಯರಿಗೆ ಏನು ಪ್ರಯೋಜನ ಎಂದು ನೀವು ಕೇಳಬಹುದು. ಶುಕ್ರಗ್ರಹ ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು, ಭೂಮಿಯಲ್ಲಿ ಓಜೋನ್‌ ರಂಧ್ರ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಈಗ ಭೂಮಿಯ ತಾಪಮಾನ ಏರಿಕೆ ಮತ್ತು ಹವಾಗುಣ ಬದಲಾವಣೆಯನ್ನು ಸರಿಪಡಿಸಲು ನಾವು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಮುಂದೆ ಏನಾಗಬಹುದು ಎನ್ನುವುದಕ್ಕೆ ಶುಕ್ರ ಗ್ರಹದ ಅಧ್ಯಯನ ಮಾಹಿತಿ ನೀಡುತ್ತಿದೆ. ಶುಕ್ರ ಗ್ರಹದ ತಾಪಮಾನ ೪೭೧ ಡಿಗ್ರಿ ಸೆಲ್ಸಿಯಸ್‌ನಷ್ಟಾಗಲು ಕಾರಣಗಳೇನು ಎಂದು ತಿಳಿದುಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಶುಕ್ರ ಗ್ರಹವನ್ನು ನಾವು ಹೆಚ್ಚು ತಿಳಿದುಕೊಂಡಷ್ಟು, ಭೂಮಿಯಲ್ಲಾಗುತ್ತಿರುವ ಬದಲಾವಣೆಯನ್ನು ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗಬಹುದು. ಆದರೆ ಶುಕ್ರನಂತೆ, ಭೂಮಿಯ ತಾಪಮಾನವೂ ೪೭೧ ಡಿಗ್ರಿ ಸೆ. ತಲುಪದಂತೆ ತಡೆಯುವ ಹೊಣೆ ನಮ್ಮೆಲ್ಲರ ಮೇಲಿದೆ.

Related Stories

No stories found.
logo
ಇಜ್ಞಾನ Ejnana
www.ejnana.com