ಇಂಗ್ಲಿಷನ್ನು ಚೆನ್ನಾಗಿ ಕಲಿತರೆ ಜಾಗತಿಕ ಮಟ್ಟದಲ್ಲೂ ಹಲವು ಅವಕಾಶಗಳನ್ನು ಪಡೆದುಕೊಳ್ಳಬಹುದು
ಇಂಗ್ಲಿಷನ್ನು ಚೆನ್ನಾಗಿ ಕಲಿತರೆ ಜಾಗತಿಕ ಮಟ್ಟದಲ್ಲೂ ಹಲವು ಅವಕಾಶಗಳನ್ನು ಪಡೆದುಕೊಳ್ಳಬಹುದುImage by Biljana Jovanovic from Pixabay

ಇಂಗ್ಲಿಷ್ ದಿನ ವಿಶೇಷ: ಆಂಗ್ಲ ಭಾಷಾ ಕಲಿಕೆಗಿದೆ ಆನ್‌ಲೈನ್ ಅವಕಾಶ!

ಏಪ್ರಿಲ್ ೨೩ನೇ ದಿನಾಂಕವನ್ನು ವಿಶ್ವಸಂಸ್ಥೆ 'ಇಂಗ್ಲಿಷ್ ಭಾಷೆಯ ದಿನ' ಎಂದು ಘೋಷಿಸಿದೆ. ಈ ಭಾಷೆಯನ್ನು ನಾವೂ ಸುಲಭವಾಗಿ ಕಲಿಯುವುದು ಹೇಗೆ? ಸ್ವತಃ ಇಂಗ್ಲಿಷ್ ಭಾಷೆಯ ಶಿಕ್ಷಕರಾದ ಸಂದೇಶ್. ಎಚ್. ನಾಯ್ಕ್, ಹಕ್ಲಾಡಿಯವರು ಬರೆದ ಈ ಲೇಖನ ಓದಿ!

ಸಮರ್ಪಕ ಆಂಗ್ಲಭಾಷಾ ಜ್ಞಾನ ಇಂದಿನ ಅಗತ್ಯಗಳಲ್ಲೊಂದು. ಒಂದು ಭಾಷೆಯಾಗಿ ಇಂಗ್ಲಿಷನ್ನು ಚೆನ್ನಾಗಿ ಕಲಿತರೆ ಜಾಗತಿಕ ಮಟ್ಟದಲ್ಲೂ ಹಲವು ಅವಕಾಶಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ವಿಶ್ವದ ವಿವಿಧೆಡೆಗಳಲ್ಲಿ ಸೃಷ್ಟಿಯಾಗುವ ಜ್ಞಾನವನ್ನು ನಾವೂ ಪಡೆದುಕೊಳ್ಳಲು, ಅದರ ಪ್ರಯೋಜನ ಪಡೆದುಕೊಳ್ಳಲು ಇಂಗ್ಲಿಷ್ ಭಾಷೆ ನಮಗೆ ಸಹಾಯ ಮಾಡುತ್ತದೆ.

ಈ ಭಾಷೆಯನ್ನು ಕಲಿಯಲು ಶಾಲಾಕಾಲೇಜುಗಳಂತಹ ಔಪಚಾರಿಕ ವ್ಯವಸ್ಥೆಗಳಿರುವಂತೆ, ಕೆಲವು ಅನೌಪಚಾರಿಕ ವ್ಯವಸ್ಥೆಗಳೂ ಚಾಲ್ತಿಯಲ್ಲಿವೆ. ಅಂತಹ ಬಹುತೇಕ ವ್ಯವಸ್ಥೆಗಳು ಆನ್‌ಲೈನ್ ಆಧರಿತವಾಗಿವೆ. ಇಂಗ್ಲೀಷ್ ಕಲಿಕೆಯ ಸೂಕ್ತ ಆಸಕ್ತಿ ಹಾಗೂ ಅಭಿರುಚಿಯುಳ್ಳ ಯಾರೇ ಆದರೂ ಈ ಸೌಲಭ್ಯಗಳ ಮೂಲಕ ಹಂತ ಹಂತವಾಗಿ ಇಂಗ್ಲೀಷ್ ಜ್ಞಾನವನ್ನು ಪಡೆದುಕೊಳ್ಳಬಹುದಾಗಿದೆ.

ಅಂತರಜಾಲ ವ್ಯವಸ್ಥೆಯು ಇಂದು ಪ್ರತಿಯೊಬ್ಬ ವ್ಯಕ್ತಿಯ ಅಂಗೈಯಲ್ಲಿಯೇ ನಲಿದಾಡುತ್ತಿದೆ. ಅದನ್ನು ಬಳಸುವ ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಕಂಪ್ಯೂಟರ್‌ಗಳನ್ನಂತೂ ಬಹಳ ಮಾಮೂಲಿ ಎನ್ನುವಂತೆ ನಾವು ಉಪಯೋಗಿಸುತ್ತೇವೆ. ಈ ಸಾಧನಗಳ ಮೂಲಕ ಕೆಲವು ಜಾಲತಾಣಗಳು, ಯೂಟ್ಯೂಬ್‌ ಚಾನೆಲ್‌ಗಳು ಹಾಗೂ ಆ್ಯಪ್‌ಗಳನ್ನು ಪೂರಕವಾಗಿ ಬಳಸಿಕೊಂಡರೆ ಇಂಗ್ಲಿಷ್ ಕಲಿಕೆ ಅತ್ಯಂತ ಸುಲಭವಾಗಿ ನಮ್ಮ ಕೈಗೆಟುಕುತ್ತದೆ. ಅವುಗಳಲ್ಲಿ ಕೆಲವು ಜಾಲತಾಣಗಳು ಅತ್ಯಂತ ವ್ಯವಸ್ಥಿತವಾಗಿ ಇವುಗಳನ್ನು ಕಲಿಸಿದರೆ, ಇನ್ನು ಕೆಲವು ತಾಣಗಳು ಭಾಷೆಗೆ ಸಂಬಂಧಿಸಿದ ಬಿಡಿ ಬಿಡಿ ವಿಚಾರಗಳನ್ನು ಪ್ರತ್ಯೇಕವಾಗಿ ನೀಡುತ್ತವೆ.

ಸಾಮಾನ್ಯವಾಗಿ ಆಂಗ್ಲಭಾಷೆಯ ಆರಂಭಿಕ ಜ್ಞಾನವುಳ್ಳವರು ಹೀಗೆ ಬಿಡಿ ಪರಿಕಲ್ಪನೆಗಳನ್ನು ಒಂದೊಂದಾಗಿ, ಪ್ರತ್ಯೇಕವಾಗಿ ಜಾಲಾಡುವ ಮೂಲಕ ತಿಳಿದುಕೊಳ್ಳಬಹುದಾಗಿದೆ. ಉದಾಹರಣೆಗೆ ವ್ಯಾಕರಣಾಂಶಗಳು, ಪದಜ್ಞಾನ, ವಾಕ್ಯ ರಚನೆ, ಉಚ್ಚಾರಣ ಶಾಸ್ತ್ರ, ಬರವಣಿಗೆಯ ಅಂಶಗಳು, ಮಾತುಗಾರಿಕೆಯ ಕೌಶಲ್ಯ, ಅರ್ಥೈಸಿಕೊಳ್ಳುವಿಕೆಯ ತಂತ್ರಗಳ ಬಗ್ಗೆ ವಿವರಣೆ, ಹೇರಳ ಉದಾಹರಣೆಗಳು, ವಿವಿಧ ಆಯಾಮಗಳ ಆಡಿಯೋ, ವೀಡಿಯೋ ಹಾಗೂ ಚಿತ್ರ ಮಾಲಿಕೆ ಪ್ರಸ್ತುತಿಗಳು ಇಲ್ಲಿ ದೊರೆಯುತ್ತವೆ. ಪ್ರತಿಕ್ರಿಯಾತ್ಮಕ ಆನ್‌ಲೈನ್ ಸಾಮಾಗ್ರಿಗಳೂ ಸಾಕಷ್ಟು ಪ್ರಮಾಣದಲ್ಲಿ ಇರುವುದರಿಂದ ಇವುಗಳ ನೆರವಿನಿಂದ ಅಲ್ಲಿ ಒದಗಿಸುವ ವಿವಿಧ ಬಗೆಯ ಪ್ರಶ್ನೆಗಳಿಗೆ ಪ್ರತಿಕ್ರಿಯೆಗಳನ್ನು ನೀಡಿ ಕಲಿಕೆಯನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಿಕೊಳ್ಳಬಹುದು.

ಕನ್ನಡದ‌ ಮೂಲಕ ಇಂಗ್ಲಿಷ್ ಕಲಿಯಲು 'Speak Today' ಜಾಲತಾಣವು ನೆರವಾಗುತ್ತದೆ. ಇದರಲ್ಲಿ ಚಿಕ್ಕ ಚಿಕ್ಕ ಸನ್ನಿವೇಶಗಳಿಗೆ ಸಂಬಂಧಿಸಿದಂತೆ ಸಂಭಾಷಣೆ ಆಧಾರಿತ ವೀಡಿಯೋಗಳಿದ್ದು ಅದು ಇಂಗ್ಲಿಷಿನ ಮೂಲಭೂತ ಅಂಶಗಳ ಕಲಿಕೆಗೆ ಸಹಾಯಕವಾಗಿದೆ. ಕನ್ನಡವನ್ನೂ ಬಳಸಿರುವುದರಿಂದ ಆರಂಭಿಕ ಕಲಿಕಾರ್ಥಿಗಳಿಗೆ ಅನುಕೂಲಕರವಾಗಿದೆ.

ಇದೇರೀತಿ 'Learn English Online - LEO Network' ಜಾಲತಾಣವು ಇಂಗ್ಲಿಷಿನ ಕ್ರಮವತ್ತಾದ ಕಲಿಕೆಯನ್ನು ಸಾಧ್ಯವಾಗಿಸುತ್ತದೆ. ಮೂಲಭೂತ ಪರಿಕಲ್ಪನೆಗಳಾದ ವರ್ಣಮಾಲೆಯಿಂದ ಆರಂಭಿಸಿ ಉತ್ಕೃಷ್ಟ ಮಟ್ಟದ ಪರಿಕಲ್ಪನೆಗಳವರೆಗೆ ಪ್ರತಿಯೊಂದನ್ನೂ ಇಲ್ಲಿ ವಿವಿಧ ಅಧ್ಯಾಯಗಳ ರೂಪದಲ್ಲಿ ಒದಗಿಸಲಾಗಿದೆ.

ಇಂಗ್ಲಿಷ್ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಬ್ರಿಟಿಷ್ ಕೌನ್ಸಿಲ್ ಜಾಲತಾಣವೂ‌ ಉತ್ತಮ ಆಯ್ಕೆಯಾಗಿದೆ. ಆದರೆ ಇದರಲ್ಲಿ ಚಂದಾದಾರಿಕೆ ಪಡೆಯಬೇಕು.

ಇಂಗ್ಲಿಷ್ ಓದುವ ಹಾಗೂ ಬರೆಯುವ ಸಾಮರ್ಥ್ಯ ಒಂದಷ್ಟರ ಮಟ್ಟಿಗೆ ಇದ್ದರೂ ಕೆಲವರು ಅದನ್ನು ಬಳಸಲು ಹಿಂಜರಿಯುತ್ತಾರೆ. ಎಲ್ಲಿ ತಪ್ಪುಗಳಾಗುತ್ತವೆಯೋ ಎಂಬ ಭಯವೇ ಅದಕ್ಕೆ ಕಾರಣ. ಇನ್ನು ಕೆಲವರಿಗೆ ಮಾತನಾಡಿದಷ್ಟು ಸುಲಭವಾಗಿ ಬರೆಯಲು ಸಾಧ್ಯವಾಗದು. ಇಂಗ್ಲಿಷಿಲ್ಲಿ ಬರೆದ ಪಠ್ಯದ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಲು Readable.io ಜಾಲತಾಣ ನೆರವಾಗುತ್ತದೆ. ಬರೆದ ಪಠ್ಯವನ್ನು ಇಲ್ಲಿ ಲಗತ್ತಿಸಿದರೆ, ವ್ಯಾಕರಣ, ಪದ ಬಳಕೆ, ಅರ್ಥ, ಓದಲು ಯೋಗ್ಯವಾದ ಅಂಶಗಳಿಗೆ ಸಂಬಂಧಿಸಿದಂತೆ ಅದರಲ್ಲಿರುವ ವಿವಿಧ ಬಗೆಯ ದೋಷಗಳ ಬಗ್ಗೆ ಹಾಗೂ ಅದಕ್ಕೆ ಸಂಕ್ಷಿಪ್ತ ವಿವರಣೆ ನೀಡುತ್ತದೆ.

ವ್ಯಾಕರಣಾಂಶಗಳ ಕಲಿಕೆ ಸಂಬಂಧಿಸಿದಂತೆ grammarly.com ಜಾಲತಾಣವೂ ಬಲು ಉಪಯುಕ್ತವಾಗಿದೆ. ಗೂಗಲ್ ಅಥವಾ ಫೇಸ್‌ಬುಕ್ ಖಾತೆಯ ಮೂಲಕ ನೋಂದಣಿ ಮಾಡಿಕೊಂಡು ಇದನ್ನು ಬಳಸಬಹುದು. ಇದರ ಆ್ಯಪ್ ಕೂಡಾ ಲಭ್ಯವಿದೆ. ಇದು ವ್ಯಾಕರಣ ದೋಷವಿಲ್ಲದೆ ಬರೆಯುವಲ್ಲಿ ಸಹಕರಿಸುವ ಉತ್ತಮ ಮಾರ್ಗದರ್ಶಿಯಾಗಿದ್ದು, ನಮ್ಮ ಬರವಣಿಗೆಯಲ್ಲಿರುವ ದೋಷಗಳನ್ನು ಪತ್ತೆಹಚ್ಚಿ ಅದರ ಬಗ್ಗೆ ಸರಳ ವಿವರಣೆ ನೀಡುವುದು ಇದರ ವೈಶಿಷ್ಟ್ಯ. ಇದು ಒಂದು ಬಗೆಯ ಕ್ರಿಯಾತ್ಮಕ ಕಲಿಕೆಯಾಗಿದೆ.

ವಿವಿಧ ವ್ಯಾಕರಣಾಂಶಗಳ‌ ಪ್ರತ್ಯೇಕ ಕಲಿಕೆಗೆ ಅನುಕೂಲವಾಗುವ ಹಲವಾರು ಜಾಲತಾಣಗಳೂ ಇದ್ದು ಅವುಗಳಲ್ಲಿ Learn Grammar ಕೂಡಾ ಒಂದು.

ಇಂಗ್ಲೀಷ್ ಕಲಿಕೆಗೆಂದೇ ರೂಪಿತವಾದ ಹಲವಾರು ಯೂಟ್ಯೂಬ್ ಚಾನೆಲ್‌ಗಳೂ ಲಭ್ಯವಿವೆ. British Council: Learn English Kids, VOA Learning English, JenniferESL, Real English ಮುಂತಾದವು ಇದಕ್ಕೆ ಕೆಲ ಉದಾಹರಣೆಗಳು.

ಹಾಗೆಯೇ ಸ್ಮಾರ್ಟ್‌ಫೋನ್ ಬಳಕೆದಾರರು ಉಪಯೋಗಿಸಬಹುದಾದ ಹಲವಾರು ಆ್ಯಪ್‌ಗಳೂ ಗೂಗಲ್ ಪ್ಲೇ ಸ್ಟೋರ್‌‌ನಲ್ಲಿ ಲಭ್ಯವಿವೆ. ಹಲವು ಚಟುವಟಿಕೆಗಳ ಮೂಲಕ ಇಂಗ್ಲಿಷ್ ಕಲಿಯುವುದನ್ನು Hello Talk, Anki, Grammarly, English Times, Hello English, Duolingo, Awabe, Memrise ಮುಂತಾದ ಈ ಆಪ್‌ಗಳು ಸಾಧ್ಯವಾಗಿಸುತ್ತವೆ. ಹಾಗೆಯೇ Say it: English Pronunciation, Sound Pronunciation App, Learn English Sounds Right ಮುಂತಾದ ಆಪ್‌ಗಳನ್ನು ಇಂಗ್ಲಿಷ್ ಉಚ್ಚಾರಣೆ ಕಲಿಯುವುದಕ್ಕೂ ಬಳಸಬಹುದು.

ಈ ಎಲ್ಲಾ ಆನ್‌ಲೈನ್ ಅವಕಾಶಗಳೊಂದಿಗೆ ಇನ್ನೊಂದು ಮುಖ್ಯವಾದ ಆಯ್ಕೆಯೆಂದರೆ ಇಂಗ್ಲಿಷ್ ಚಲನಚಿತ್ರಗಳ‌ ವೀಕ್ಷಣೆ ಹಾಗೂ ಇಂಗ್ಲಿಷ್ ಪತ್ರಿಕೆ-ಪುಸ್ತಕಗಳ ಓದು. ಇಂಗ್ಲಿಷ್ ಭಾಷೆಯ ಮಕ್ಕಳ ಚಲನಚಿತ್ರಗಳಲ್ಲಿ ಬಳಸುವ ಭಾಷೆ ಸರಳವಾಗಿದ್ದು, ಸುಲಭವಾಗಿ ಅರ್ಥವಾಗುವಂತಿರುತ್ತದೆ. ಪತ್ರಿಕೆ-ಪುಸ್ತಕಗಳ ಓದು ಕೂಡ ನಮ್ಮ ಭಾಷಾಜ್ಞಾನವನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಈ ಸೌಲಭ್ಯಗಳನ್ನು ಬಳಸುವ ಜೊತೆಗೆ ಹಿಂಜರಿಕೆ, ಮುಜುಗರ ಹಾಗೂ ತಪ್ಪು ಮಾಡುವ ಆತಂಕಗಳನ್ನು ಬದಿಗಿಟ್ಟು ಪ್ರಯತ್ನಿಸಿದಾಗ ಮಾತ್ರವೇ ಇಂಗ್ಲಿಷ್ ಕಲಿಕೆ ಹಾಗೂ ಬಳಕೆ ಸುಲಭಸಾಧ್ಯವಾಗುತ್ತದೆ.

- ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ

Related Stories

No stories found.
logo
ಇಜ್ಞಾನ Ejnana
www.ejnana.com