ಇಜ್ಞಾನಕ್ಕೆ ಹದಿನೈದರ ಸಂಭ್ರಮ
ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬರಹಗಳ ಪ್ರಕಟಣೆಗೆ ಹೆಸರಾಗಿರುವ ನಿಮ್ಮ ನೆಚ್ಚಿನ 'ಇಜ್ಞಾನ' ಹದಿನೈದು ವರ್ಷಗಳನ್ನು ಪೂರೈಸಿದೆ. ಬೆಂಗಳೂರಿನ ಇಜ್ಞಾನ ಟ್ರಸ್ಟ್ ಸ್ವಯಂಸೇವಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ಜಾಲತಾಣವು ೨೦೦೭ರಿಂದ ಸಕ್ರಿಯವಾಗಿದ್ದು, ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಕನ್ನಡದ ಮಾಹಿತಿಯನ್ನು ಸತತವಾಗಿ ಪ್ರಕಟಿಸುತ್ತಾ ಬಂದಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸರಳವಾಗಿ, ಸುಲಭ ಶೈಲಿಯಲ್ಲಿ ಪ್ರಕಟಿಸುವ ಮೂಲಕ ಗಮನ ಸೆಳೆದಿರುವ ಇಜ್ಞಾನ ತಾಣವು ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿರುವ ಮಾಹಿತಿಯ ಕೊರತೆಯನ್ನು ತುಂಬಿಕೊಡುವ ಪ್ರಯತ್ನ ಮಾಡುತ್ತಿದೆ.
ಕನ್ನಡದ ವಿಜ್ಞಾನ-ತಂತ್ರಜ್ಞಾನ ಬರಹಗಳು ಒಂದೇ ಸ್ಥಳದಲ್ಲಿ ದೊರಕುವಂತೆ ಮಾಡುವ ಒಂದೇ ಉದ್ದೇಶದಿಂದ ನಮ್ಮ ತಾಣ ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಇಜ್ಞಾನ ಹಲವು ಲೇಖನಗಳನ್ನು ಪ್ರಕಟಿಸಿದೆ, ಕಾರ್ಯಕ್ರಮಗಳನ್ನು ಆಯೋಜಿಸಿದೆ, ಪುಸ್ತಕಗಳನ್ನೂ ಹೊರತಂದಿದೆ. ಹಲವಾರು ಹಿರಿಯ-ಕಿರಿಯ ವಿಜ್ಞಾನ ಸಂವಹನಕಾರರು, ಸಾವಿರಾರು ಓದುಗರು, ಹಿತೈಷಿಗಳು ನಮ್ಮ ಈ ಪ್ರಯಾಣದಲ್ಲಿ ಜೊತೆಯಾಗಿದ್ದಾರೆ. ೨೦೧೬ರಲ್ಲಿ 'ಇಜ್ಞಾನ ದಿನ' ಕಾರ್ಯಕ್ರಮದೊಂದಿಗೆ ಇಜ್ಞಾನದ ಹತ್ತನೇ ವರ್ಷದ ಸಂಭ್ರಮವನ್ನು ಆಚರಿಸಲಾಗಿತ್ತು. ಕಳೆದ ಒಂದೂವರೆ ದಶಕಗಳ ಅವಧಿಯಲ್ಲಿ ವೈವಿಧ್ಯಮಯ ಲೇಖನ, ಪುಸ್ತಕ ಪರಿಚಯ, ಸಂದರ್ಶನ, ಪ್ರಶ್ನೋತ್ತರ ಇತ್ಯಾದಿಗಳನ್ನು ಪ್ರಕಟಿಸಿರುವ ಇಜ್ಞಾನ, ಬೆಂಗಳೂರಿನ ಕ್ವಿನ್‌ಟೈಪ್ ಟೆಕ್ನಾಲಜೀಸ್ ಸಂಸ್ಥೆಯ ನೆರವಿನಿಂದ ೨೦೧೯ರಲ್ಲಿ ತನ್ನ ವಿನೂತನ ಜಾಲತಾಣವನ್ನು ಅನಾವರಣಗೊಳಿಸಿತು.
ಜಾಲತಾಣದಲ್ಲಿ ಲೇಖನಗಳನ್ನು ಪ್ರಕಟಿಸುವುದರ ಜೊತೆಗೆ ಇಜ್ಞಾನದಿಂದ ಪುಸ್ತಕಗಳನ್ನೂ ಪ್ರಕಟಿಸಲಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೆರವಿನೊಡನೆ ಪ್ರಕಟವಾದ ೩೦೦ಕ್ಕೂ ಹೆಚ್ಚು ಪುಟಗಳ 'ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ' ಇಜ್ಞಾನದ ಪ್ರಕಟಣೆಗಳ ಸಾಲಿನಲ್ಲಿ ಮುಖ್ಯವಾದದ್ದು. ಈ ಕೋಶದ ಸಿದ್ಧತೆ ಹಾಗೂ ಪ್ರಕಟಣೆಯ ಅನುಭವಗಳನ್ನು ೨೦೧೯ರಲ್ಲಿ ಕಲಕತ್ತೆಯಲ್ಲಿ ನಡೆದ 'ಇಂಡಿಯಾ ಇಂಟರ್‌ನ್ಯಾಶನಲ್ ಸೈನ್ಸ್ ಫೆಸ್ಟಿವಲ್' ವೇದಿಕೆಯಲ್ಲಿಯೂ ಪ್ರಸ್ತುತಪಡಿಸಲಾಗಿತ್ತು. 'ಟೆಕ್ ಲೋಕದ ಹತ್ತು ಹೊಸ ಮುಖಗಳು', 'ಪುಟ್ಟ ಪುಟ್ಟಿಯ ಪರಿಸರ ಪಾಠಗಳು' ಹಾಗೂ 'ಸ್ವಿಚ್ ಆಫ್' - ಇವು ಇಜ್ಞಾನದ ಇನ್ನಿತರ ಪ್ರಕಟಣೆಗಳು. ತನ್ನ ಕೆಲ ಪ್ರಕಟಣೆಗಳನ್ನು ಇ-ಬುಕ್ ಹಾಗೂ ಆಡಿಯೋಬುಕ್ ರೂಪದಲ್ಲೂ ಪ್ರಕಟಿಸಿರುವ ಇಜ್ಞಾನ, ಮುದ್ರಿತ ಪ್ರತಿಗಳನ್ನು ತನ್ನ 'ಕಲಿಕೆಗೆ ಕೊಡುಗೆ' ಕಾರ್ಯಕ್ರಮದಡಿ ರಾಜ್ಯದ ವಿವಿಧೆಡೆಗಳಲ್ಲಿನ ವಿದ್ಯಾರ್ಥಿಗಳಿಗೆ ವಿತರಿಸುತ್ತಲೂ ಇದೆ.
ವಿಜ್ಞಾನ ಶಿಕ್ಷಣ ಕುರಿತ ವಿಚಾರಸಂಕಿರಣ
ಇಜ್ಞಾನ ಹದಿನೈದರ ಸಂಭ್ರಮದ ಅಂಗವಾಗಿ 'ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಶಿಕ್ಷಣ' ಕುರಿತ ವಿಚಾರ ಸಂಕಿರಣವನ್ನು ಮೇ ೭ರ ಶನಿವಾರ ಬೆಂಗಳೂರಿನ ಸೌತ್ ಎಂಡ್ ಸಮೀಪವಿರುವ ಸುರಾನ ಕಾಲೇಜಿನಲ್ಲಿ ಆಯೋಜಿಸಲಾಗಿದೆ. ಕಾಲೇಜಿನ ಕನ್ನಡ ವಿಭಾಗ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅಕಾಡೆಮಿಯ ಸಿಇಒ ಡಾ. ಎ. ಎಂ. ರಮೇಶ್, ಕಾಲೇಜಿನ ಪ್ರಾಂಶುಪಾಲರಾದ ಡಾ. ಭವಾನಿ ಎಂ. ಆರ್., ವಿಜ್ಞಾನ ಸಂವಹನಕಾರರಾದ ಕೊಳ್ಳೇಗಾಲ ಶರ್ಮ, ಉದಯ ಶಂಕರ ಪುರಾಣಿಕ ಮತ್ತಿತರರು ಉಪಸ್ಥಿತರಿರಲಿದ್ದಾರೆ. ಲೇಖಕ ಟಿ. ಎಸ್. ಗೋಪಾಲ್ ನಡೆಸಿಕೊಡುವ ಸಂವಾದದಲ್ಲಿ ಡಾ. ಎಸ್. ಎಲ್. ಮಂಜುನಾಥ್, ಡಾ. ಎಲ್. ಜಿ. ಮೀರಾ, ಶ್ರೀಮತಿ ಎಂ. ಎಸ್. ಗಾಯತ್ರಿ ಹಾಗೂ ಶ್ರೀ ನಾರಾಯಣ ಬಾಬಾನಗರ ಪಾಲ್ಗೊಳ್ಳಲಿದ್ದಾರೆ.
ವಿಜ್ಞಾನ ಸಂವಹನಕ್ಕೆ ತಂತ್ರಜ್ಞಾನದ ನೆರವು
ನಾವು ದಿನನಿತ್ಯವೂ ಬಳಸುವ ಕೆಲ ಸರಳ ಹಾಗೂ ಉಚಿತ ತಂತ್ರಾಂಶ ಸಾಧನಗಳನ್ನು ಬಳಸಿಕೊಂಡು ಸಣ್ಣಸಣ್ಣ ವಿಜ್ಞಾನ ಬರಹಗಳನ್ನು ಸ್ವಯಂಚಾಲಿತವಾಗಿ ತಯಾರಿಸುವ ಪ್ರಯೋಗ ನಡೆಸಿದ್ದು ಇಜ್ಞಾನದ ಹಾದಿಯ ಮೈಲಿಗಲ್ಲುಗಳಲ್ಲೊಂದು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೆರವಿನೊಡನೆ ಕಳೆದ ವರ್ಷ (೨೦೨೧) ಈ ಪ್ರಯೋಗವನ್ನು ನಡೆಸಲಾಗಿತ್ತು. ಅಂತರಜಾಲದಲ್ಲಿ ಸುಲಭವಾಗಿ ದೊರಕುವ ಇಂಗ್ಲಿಷಿನಲ್ಲಿರುವ ಮಾಹಿತಿಯನ್ನು ಸಂಗ್ರಹಿಸಿ, ಒಂದೇ ಸಿದ್ಧ ಮಾದರಿಗೆ ಹೊಂದಿಕೊಳ್ಳುವಂತಹ ಸಣ್ಣ ಬರಹಗಳನ್ನು ಕನ್ನಡದಲ್ಲಿ - ಸ್ವಯಂಚಾಲಿತವಾಗಿ ಸಿದ್ಧಪಡಿಸುವುದು ಸಾಧ್ಯವೆಂದು ಈ ಪ್ರಯೋಗ ತೋರಿಸಿಕೊಟ್ಟಿದೆ. ಈ ಪ್ರಯೋಗದ ಅಂಗವಾಗಿ ಮೂಲವಸ್ತುಗಳ ಕುರಿತು ಮಾಹಿತಿ ನೀಡುವ ಒಂದು ಕಿರುಪುಸ್ತಿಕೆಯನ್ನೂ ಸಿದ್ಧಪಡಿಸಲಾಗಿದ್ದು, ಮೇ ೭ರ ಕಾರ್ಯಕ್ರಮದಲ್ಲಿ ಆ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಗುವುದು.