ಪರಿಸರ ದಿನ ವಿಶೇಷ: ಪರಿಸರ ಸಂರಕ್ಷಣೆಯಷ್ಟೇ ಅಲ್ಲ, ಪುನಃಸ್ಥಾಪನೆಯೂ ಅಗತ್ಯ!
ಈ ವರ್ಷದ ಜೂನ್ ೫ ವಿಶಿಷ್ಟವಾದದ್ದು. ಏಕೆಂದರೆ ಈ ದಿನ ಕೇವಲ ಒಂದು ದಿನದ ವಿಶ್ವ ಪರಿಸರ ದಿನಾಚರಣೆಗೆ ಮಾತ್ರವೇ ಅಲ್ಲದೆ ವಿಶ್ವಸಂಸ್ಥೆ ಘೋಷಿಸಿರುವ 'ಪರಿಸರ ವ್ಯವಸ್ಥೆಯ ಪುನಃಸ್ಥಾಪನಾ ದಶಕ'ದ (UN Decade on Ecosystem Restoration, ೨೦೨೧-೨೦೩೦) ಪ್ರಾರಂಭಕ್ಕೂ ಸಾಕ್ಷಿಯಾಗುತ್ತಿದೆ.
ಒಂದು ಭೌಗೋಳಿಕ ಪ್ರದೇಶದಲ್ಲಿರುವ ಜೀವಿಗಳು ಮತ್ತು ಸುತ್ತಲಿನ ಪರಿಸರದ ಜೊತೆಗಿನ ಅವುಗಳ ಸಂಕೀರ್ಣ ಸಂಬಂಧವನ್ನು ಒಟ್ಟಾರೆಯಾಗಿ ಪರಿಸರವ್ಯವಸ್ಥೆ ಎಂದು ಗುರುತಿಸಲಾಗುತ್ತದೆ. ಮನುಷ್ಯ ಕೂಡ ಈ ವ್ಯವಸ್ಥೆಯ ಒಂದು ಅಂಗ. ಆದರೆ, ಮನುಷ್ಯನ ಬಹುತೇಕ ಚಟುವಟಿಕೆಗಳು ಆತನ ಪರಿಸರ ವ್ಯವಸ್ಥೆಯ ಮೇಲೆ ಸತತವಾಗಿ ದುಷ್ಪರಿಣಾಮಗಳನ್ನೇ ಉಂಟುಮಾಡುತ್ತ ಬಂದಿವೆ.
ಜಲ ಹಾಗೂ ವಾಯುಮಾಲಿನ್ಯ, ಅರಣ್ಯನಾಶ, ವನ್ಯಜೀವಿಗಳ ಹತ್ಯೆ - ಹೀಗೆ ಇಂತಹ ದುಷ್ಪರಿಣಾಮಗಳ ಪಟ್ಟಿ ಬಹಳ ದೊಡ್ಡದು. ಈ ಪೈಕಿ ಅರಣ್ಯನಾಶವಂತೂ ಯಾವ ಪ್ರಮಾಣದಲ್ಲಿ ನಡೆದಿದೆಯೆಂದರೆ ಪ್ರತಿ ಮೂರು ಸೆಕೆಂಡಿಗೊಮ್ಮೆ ಒಂದು ಫುಟ್‌ಬಾಲ್ ಮೈದಾನದಷ್ಟು ದೊಡ್ಡ ಅರಣ್ಯ ಪ್ರದೇಶ ನಾಶವಾಗುತ್ತಿದೆಯಂತೆ!
ಜೌಗುಭೂಮಿ (ವೆಟ್‌ಲ್ಯಾಂಡ್ಸ್), ಹವಳದ ದಿಬ್ಬಗಳಂತಹ (ಕೋರಲ್ ರೀಫ್ಸ್) ವಿಶಿಷ್ಟ ಪರಿಸರ ವ್ಯವಸ್ಥೆಗಳ ಬಹುಪಾಲು ಮನುಷ್ಯನ ಚಟುವಟಿಕೆಗಳಿಂದಾಗಿ ಈಗಾಗಲೇ ನಾಶವಾಗಿದೆಯೆಂದು ವಿಶ್ವಸಂಸ್ಥೆಯ ವರದಿಗಳು ಹೇಳುತ್ತವೆ. ವಿಶ್ವದಲ್ಲಿ ಒಟ್ಟಾರೆ ಉತ್ಪಾದನೆಯಾಗುವ ತ್ಯಾಜ್ಯ ನೀರಿನ ಶೇಕಡಾ ೮೦ರಷ್ಟನ್ನು ಯಾವ ಸಂಸ್ಕರಣೆಯೂ ಇಲ್ಲದೆ ನದಿಗಳು ಮತ್ತು ಸಮುದ್ರಗಳಿಗೆ ಸೇರಿಸಲಾಗುತ್ತಿದೆಯಂತೆ!
ಪರಿಸರ ವ್ಯವಸ್ಥೆಯ ವಿನಾಶದ ಪರಿಣಾಮಗಳು ಅನೇಕ. ಕಾಡುಗಳು ನಾಶವಾದರೆ ವಾತಾವರಣದಲ್ಲಿರುವ ಹೆಚ್ಚಿನ ಕಾರ್ಬನ್ ಅನ್ನು ಹಿಡಿದಿಟ್ಟುಕೊಳ್ಳುವ 'ಕಾರ್ಬನ್ ಸಿಂಕ್'ಗಳು ನಾಶವಾದಂತೆ. ವಿಶ್ವದೆಲ್ಲೆಡೆ ಪಳೆಯುಳಿಕೆ ಇಂಧನಗಳನ್ನು ಸುಡುವುದರಿಂದ ಬಿಡುಗಡೆಯಾಗುವ ಕಾರ್ಬನ್ ಡೈಆಕ್ಸೈಡ್‌ನ ವಾರ್ಷಿಕ ಪ್ರಮಾಣದ ಮೂರನೇ ಒಂದು ಭಾಗದಷ್ಟು, ಅಂದರೆ ಸರಿಸುಮಾರು 2.6 ಶತಕೋಟಿ ಟನ್ ಕಾರ್ಬನ್ ಡೈಆಕ್ಸೈಡ್ ಅನ್ನು ಕಾಡುಗಳು ಹಿಡಿದಿಟ್ಟುಕೊಂಡು ನಮ್ಮ ವಾತಾವರಣವನ್ನು ಸಹನೀಯವಾಗಿಸುತ್ತವೆ. ಇಂತಹ ಮಹತ್ವದ ಕೆಲಸ ಮಾಡುವ ಕಾಡುಗಳ ನಾಶದ ನೇರ ಪರಿಣಾಮವೇ ವಾಯುಗುಣ ಬದಲಾವಣೆ.
ಪರಿಸ್ಥಿತಿ ಗಂಭೀರವಾಗುತ್ತಿರುವ ಈ ಹೊತ್ತಿನಲ್ಲಿ, ಅದರ ಬಗ್ಗೆ ಜಾಗೃತಿ ಮೂಡಿಸಲೆಂದೇ, ವಿಶ್ವಸಂಸ್ಥೆಯು "ಮರುಚಿತ್ರಿಸಿ. ಮರುಸೃಷ್ಟಿಸಿ. ಮರುಸ್ಥಾಪಿಸಿ." (Reimagine. Recreate.Restore.) ಎನ್ನುವುದನ್ನು ಈ ವರ್ಷದ ಪರಿಸರ ದಿನದ ಕೇಂದ್ರ ವಿಷಯವಾಗಿ ಆರಿಸಿಕೊಂಡಿದೆ. ಅದರ ಜೊತೆಯಲ್ಲೇ 'ಪರಿಸರ ವ್ಯವಸ್ಥೆಯ ಪುನಃಸ್ಥಾಪನಾ ದಶಕ'ವನ್ನೂ ಪ್ರಾರಂಭಿಸುತ್ತಿದೆ.
ಪರಿಸರ ವ್ಯವಸ್ಥೆಯ ಪುನಃಸ್ಥಾಪನೆಯ ನಿಟ್ಟಿನಲ್ಲಿ ನಮ್ಮ ಕೊಡುಗೆ ಏನಿರಬೇಕು ಎನ್ನುವ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕು. ಇದು ವರ್ಷಕ್ಕೊಮ್ಮೆ ಭಾಷಣ ಮಾಡುವುದರಿಂದ, ಸೋಶಿಯಲ್ ಮೀಡಿಯಾದಲ್ಲಿ ಸಂದೇಶಗಳನ್ನು ಹಾಕುವುದರಿಂದ ಮಾತ್ರವೇ ಆಗುವ ಕೆಲಸವಲ್ಲ ಎನ್ನುವುದನ್ನು ಮೊದಲಿಗೆ, ಸ್ಪಷ್ಟವಾಗಿ, ತಿಳಿದುಕೊಳ್ಳಬೇಕು.
ಪರಿಸರ ಸಂರಕ್ಷಣೆ ಅಥವಾ ಪರಿಸರ ವ್ಯವಸ್ಥೆಯ ಪುನಃಸ್ಥಾಪನೆ ಎನ್ನುವುದು ಕಾಡಿನ ಪಕ್ಕದಲ್ಲಿರುವ, ನದಿಯ ದಂಡೆಯಲ್ಲಿರುವ ಜನರು ಮಾತ್ರವೇ ಮಾಡಬೇಕಿರುವ ಕೆಲಸವಲ್ಲ. ನೂರಾರು ಕಿಲೋಮೀಟರ್ ದೂರದಿಂದ ತಂದ ಕುಡಿಯುವ ನೀರನ್ನು ವ್ಯರ್ಥಮಾಡದಿರುವುದು, ಮನೆಯ ಕಸವನ್ನೆಲ್ಲ ಬೇಕಾಬಿಟ್ಟಿ ಬಿಸಾಡದಿರುವುದು, ಯಾವ ಸಂಪನ್ಮೂಲವನ್ನೂ ಅತಿಯಾಗಿ ಬಳಕೆ ಮಾಡದಿರುವುದು - ನಗರವಾಸಿಗಳು ಮಾಡಬಹುದಾದ ಇಂತಹ ಕೆಲಸಗಳು ಕೂಡ ಪರಿಸರ ಸಂರಕ್ಷಣೆಗೆ ನೆರವಾಗುವ ಅಂಶಗಳೇ ಎಂದು ತಿಳಿದುಕೊಂಡರೆ, ಪರಿಸರ ವ್ಯವಸ್ಥೆಯ ಪುನಃಸ್ಥಾಪನಾ ದಶಕಕ್ಕೆ ಉತ್ತಮ ಪ್ರಾರಂಭ ದೊರಕಿದಂತೆ!