ಮಾನವ ನೆಮ್ಮದಿಯಿಂದ ಬದುಕುಳಿಯಬೇಕಾದರೆ ನಿಸರ್ಗ ಸುಸ್ಥಿರವಾಗಿರಬೇಕು
ಮಾನವ ನೆಮ್ಮದಿಯಿಂದ ಬದುಕುಳಿಯಬೇಕಾದರೆ ನಿಸರ್ಗ ಸುಸ್ಥಿರವಾಗಿರಬೇಕು

ಪರಿಸರ ದಿನ ವಿಶೇಷ: ಈ ಜಗವೆಲ್ಲ ನನ್ನದೇ..?

ತಾನು ಈ ನಿಸರ್ಗದ ಒಂದು ಭಾಗ, ಅಂಶ ಎಂದು ತಿಳಿಯುವುದಕ್ಕೂ ಈ ನಿಸರ್ಗವೆಲ್ಲ ತನ್ನದೇ ಎಂದು ತಿಳಿಯುವುದಕ್ಕೂ ವ್ಯತ್ಯಾಸವಿದೆಯಲ್ಲವೇ!
Published on

ಮನುಷ್ಯ ಈ ಪ್ರಪಂಚದಲ್ಲಿ ಅವತರಿಸಿ ಕೆಲವು ಸಾವಿರ ವರುಷಗಳು ಕಳೆದಿರಬಹುದೇನೋ. ಆದರೆ, ಅಮೀಬಾದಂಥ ಏಕಾಣುಜೀವಿಯಿಂದ ಹಿಡಿದು ಆನೆಯಂಥ ದೊಡ್ಡಪ್ರಾಣಿಯವರೆಗೆ ಅಸಂಖ್ಯಜೀವಿಗಳು ಅದೆಷ್ಟೋ ಸಾವಿರ, ಅಷ್ಟೇ ಏಕೆ, ಲಕ್ಷಾಂತರ ವರುಷಗಳಿಂದಲೂ ಈ ಭೂಮಿಯ ಮೇಲೆ ಜೀವಿಸಿಕೊಂಡು ಬಂದಿವೆ. ಆದರೂ ಇವೆಲ್ಲಕ್ಕಿಂತ ಈಚಿನವನಾದ ಮನುಷ್ಯನೇ ಎಲ್ಲ ಪ್ರಾಣಿಗಳಲ್ಲಿ ಅತಿ ಬುದ್ಧಿವಂತ ಎಂದು ತಾನೇ ಹೇಳಿಕೊಂಡ. ಇವನ ಈ ಅತಿಬುದ್ಧಿವಂತಿಕೆಯೇ ಉಳಿದೆಲ್ಲ ಪ್ರಾಣಿಗಳ ಅಸ್ತಿತ್ವಕ್ಕೆ ಮಾರಕವಾಗಿಬಿಟ್ಟಿದೆ ಎನ್ನುವುದೇ ವಿಪರ್ಯಾಸ.

ಯಾಕೆ ಹೀಗೆ? ಮನುಷ್ಯನಲ್ಲಿ ವಿವೇಚನಾ ಶಕ್ತಿ ಬೆಳೆದ ಹಾಗೆಲ್ಲ ತಾನು ನಾಗರಿಕನಾಗಬೇಕು, ಹೆಚ್ಚು ಹೆಚ್ಚು ಜೀವನಸೌಲಭ್ಯಗಳನ್ನು ಪಡೆಯಬೇಕು ಎನ್ನುವ ಚಪಲ ಬೆಳೆಯುತ್ತ ಹೋಯಿತು. ಉಳಿದೆಲ್ಲ ಜೀವಿಗಳು ಪ್ರಕೃತಿಯನ್ನು ಅನುಸರಿಸಿಕೊಂಡು, ಪರಸ್ಪರ ಅವಲಂಬನೆಯಿಂದ ಬದುಕಲು ಯತ್ನಿಸುತ್ತಿದ್ದರೆ, ಮನುಷ್ಯನೊಬ್ಬ ಪ್ರಕೃತಿಯನ್ನೇ ಗೆದ್ದು ಸಾರ್ವಭೌಮನಾಗಿಬಿಡುತ್ತೇನೆ ಎಂದು ಹೊರಟುಬಿಟ್ಟ. ಇದರ ಪರಿಣಾಮವೇನೆಂದರೆ, ಪ್ರಕೃತಿಯ ಜೀವಜಾಲದ ಸೂಕ್ಷ್ಮವ್ಯವಸ್ಥೆ ದಿಕ್ಕು ತಪ್ಪಿತು; ಎಲ್ಲವೂ ಹದಗೆಟ್ಟು ಹೋಗುವ ಹಾಗಾಯಿತು. ಈ ವೈಪರೀತ್ಯವನ್ನು ತಾಳಿಕೊಳ್ಳಲಾಗದ ಅದೆಷ್ಟೋ ಜೀವಿಗಳು ಶಾಶ್ವತವಾಗಿ ಈ ಲೋಕದಿಂದ ಕಣ್ಮರೆಯೇ ಆಗಿಬಿಟ್ಟವು.

ನಿಸರ್ಗದಿಂದ ಪ್ರತಿಯೊಬ್ಬರಿಗೂ ಏನೇನು ಬೇಕೋ ಎಲ್ಲವೂ ಸಿಗುತ್ತವೆ. ಆದರೆ ಪ್ರಕೃತಿ ಅಥವಾ ನಿಸರ್ಗ ಇರುವುದೇ ತನಗೋಸ್ಕರ, ಇಲ್ಲಿರೋದೆಲ್ಲ ತನ್ನ ಅನುಕೂಲಕ್ಕೇ ಎಂದು ತಿಳಿದುಕೊಂಡು ಹೊರಟರೆ ನಿಸರ್ಗ ಹಾಳಾಗಿಹೋಗುವುದು ನಿಶ್ಚಿತ. ಮನುಷ್ಯನಿಗೆ ಬುದ್ಧಿ ತಿಳಿದಾಗಿನಿಂದ ಈ ಪ್ರಪಂಚದಲ್ಲಿರೋದೆಲ್ಲ ತನ್ನದು, ದೇವರು ನನಗೋಸ್ಕರ ಸೃಷ್ಟಿಸಿದ್ದು, ಸೂರ್ಯಚಂದ್ರರಿಂದ ಮೊದಲುಗೊಂಡು ಕಾಡು, ಬೆಟ್ಟದವರೆಗೆ ಎಲ್ಲವೂ ಮನುಷ್ಯರಿಗೆ ದೇವರ ಕೊಡುಗೆ ಎನ್ನುವ ಭ್ರಮೆ ಹುಟ್ಟಿಕೊಂಡಿತು. ಮನುಷ್ಯಸಮಾಜ ದೊಡ್ಡದಾಗುತ್ತ, ಜನಸಂಖ್ಯೆ ಬೆಳೆಯುತ್ತ ಬಂದ ಹಾಗೆಲ್ಲ ಈ ಭ್ರಮೆಯೂ ಹೆಚ್ಚಾಗುತ್ತಲೇ ಹೋಯಿತು. ತಾನು ಈ ನಿಸರ್ಗದ ಒಂದು ಭಾಗ, ಅಂಶ ಎಂದು ತಿಳಿಯುವುದಕ್ಕೂ ಈ ನಿಸರ್ಗವೆಲ್ಲ ತನ್ನದೇ ಎಂದು ತಿಳಿಯುವುದಕ್ಕೂ ವ್ಯತ್ಯಾಸವಿದೆಯಲ್ಲವೇ! ಪ್ರಕೃತಿ ಪರಿಸರಗಳಿಗೆ ಸಂಬಂಧಿಸಿದ ಇವತ್ತಿನ ಎಲ್ಲ ಸಮಸ್ಯೆಗಳಿಗೆ ಮನುಷ್ಯನ ಈ ಸ್ವಾರ್ಥಬುದ್ಧಿಯೇ ಕಾರಣ.

ಬೇರೇನೇ ಸ್ವಾರ್ಥ ಇದ್ದಿರಲಿ, ನಮ್ಮ ಹಿರಿಯರಿಗೆ ಈ ಪ್ರಕೃತಿಯನ್ನು ಕಾಪಾಡಿಕೊಂಡು ಹೋಗುವುದು ಅತಿ ಮುಖ್ಯ ಎನ್ನುವ ಭಾವನೆ ಪ್ರಬಲವಾಗಿತ್ತು. ಅದಕ್ಕಾಗಿ ಅವರು ಗಿಡಮರಗಳನ್ನು ಪೂಜನೀಯವೆಂದು ಪರಿಗಣಿಸಿ ಅವಕ್ಕೆ ದೇವತೆಗಳ ಸ್ಥಾನವನ್ನು ಕಲ್ಪಿಸಿ ಪೂಜಿಸುತ್ತಾ ಬಂದರು. ದೇವತೆಗಳ ವಾಸಸ್ಥಾನವೆಂದು ಪರಿಭವಿಸಿ ದೇವರಕಾಡು, ನಾಗಾಬನ ಮೊದಲಾದ ಮೀಸಲು ಅರಣ್ಯಗಳನ್ನು ರೂಪಿಸಿದರು. ಹುಲಿ, ಆನೆ, ಸಿಂಹ, ಹಾವು, ನವಿಲು, ಹಂಸ, ಕಾಗೆ, ಕಪಿ ಆದಿಯಾಗಿ ಪ್ರಾಣಿಪಕ್ಷಿಗಳಿಗೆ ದೇವತೆಗಳ ವಾಹನವಾಗುವ ಅವಕಾಶಗಳನ್ನು ಕಲ್ಪಿಸಿಕೊಟ್ಟರು. ಇವೆಲ್ಲ ಮೂಢನಂಬಿಕೆಗಳೆಂದು ಈಗ ನಮಗೆ ತೋರಬಹುದು. ಆದರೆ ನಮ್ಮ ಪೂರ್ವಿಕರು ನಿಸರ್ಗಕ್ಕೆ ವಿಧೇಯವಾಗಿರುವುದೇ ಜೀವನದ ಹಿರಿಮೆ ಎಂದು ಅರಿತುಕೊಂಡಿದ್ದರು. ಒಂದು ವೇಳೆ ಅವರೂ ಇಂದಿನ ಮನುಷ್ಯಸಮಾಜದ ವಿನಾಶಕಾರೀ ನೀತಿಯನ್ನೇ ಅನುಸರಿಸಹೊರಟಿದ್ದರೆ ನಮ್ಮ ವರ್ತಮಾನ ಹೇಗಿರಬಹುದಿತ್ತು ಎಂಬುದು ನಿಮ್ಮ ಕಲ್ಪನೆಗೆ ಬಿಟ್ಟ ವಿಷಯ.

ಕಾಡು ಮತ್ತು ಕಾಡುಪ್ರಾಣಿಗಳ ಬಗೆಗಿನ ನಮ್ಮ ಧೋರಣೆ ನಮ್ಮ ಪೂರ್ವಿಕರ ವಿಚಾರಗಳಿಗಿಂತ ತೀರಾ ವಿರುದ್ಧದ ಹಾದಿ ಹಿಡಿದಿದ್ದೇವೆನ್ನುವುದು ಸುಸ್ಪಷ್ಟ. ಬಾಯಿಮಾತಿನಲ್ಲಿ ಮಾತ್ರ ಕಾಡು ಉಳಿಯಬೇಕು, ವನ್ಯಮೃಗಗಳನ್ನು ಸಂರಕ್ಷಿಸಬೇಕು, ಕಾಡು ಇದ್ದರೆ ನಾಡು ಎಂದೆಲ್ಲ ಹೇಳುತ್ತಲೇ ಅರಣ್ಯಸಂಪತ್ತಿನ ಬುಡಕ್ಕೆ ಕೊಡಲಿಹಾಕುತ್ತ ನಡೆದಿದ್ದೇವೆ. ಹೀಗೆಯೇ ಮುಂದುವರೆದರೆ ಪರಿಣಾಮ ಏನಾದೀತು ಎನ್ನುವುದನ್ನು ಯೋಚಿಸಲೂ ನಮಗೀಗ ಸಮಯ ಉಳಿದಿಲ್ಲ. ಮಾನವ ನೆಮ್ಮದಿಯಿಂದ ಬದುಕುಳಿಯಬೇಕಾದರೆ ನಿಸರ್ಗ ಸುಸ್ಥಿರವಾಗಿರಬೇಕು. ನಿಸರ್ಗ ಸುಸ್ಥಿರವಾಗಿರುವುದೆಂದರೆ ನೆಲಜಲ ಕಾಡುಮೇಡು ಜೀವಜಾಲ ಹಾಳಾಗದೆ ಉಳಿದಿರುವುದು . ನಮ್ಮ ಇರುವಿಕೆಗೆ ಅತ್ಯವಶ್ಯಕವಾಗಿರುವ ನೀರು, ಗಾಳಿ, ಆಹಾರ, ಔಷಧಗಳ ಮೂಲ ಆಗರವೇ ಅರಣ್ಯ. ಕಾಡು ಉಳಿಸುವುದೆಂದರೆ ಕಾಡುಪ್ರಾಣಿಗಳನ್ನು ರಕ್ಷಿಸಿ ಉಳಿಸಿಡುವುದೆಂದೇ ಅರ್ಥ. ಆದ್ದರಿಂದಲೇ ಕಾಡುಪ್ರಾಣಿಗಳ ಸಂರಕ್ಷಣೆ ನಮ್ಮ ಆದ್ಯಕರ್ತವ್ಯಗಳಲ್ಲಿ ಒಂದೆನಿಸುತ್ತದೆ.

ಕಾಡಿನ, ಕಾಡುಪ್ರಾಣಿಗಳ ಬಗೆಗೆ ನಮಗಿರುವ ತಿಳುವಳಿಕೆಯೇ ಕಡಿಮೆ. ತಪ್ಪು ಕಲ್ಪನೆಗಳೇ ಹೆಚ್ಚು. ಪಠಪುಸ್ತಕಗಳಲ್ಲೂ ಈ ಬಗೆಗೆ ದೊರಕುವ ಮಾಹಿತಿ ಅಲ್ಪವೇ. ಹೀಗಿರುವಾಗ, ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆ ಹೇಗೆ? ಕಾಡುಪ್ರಾಣಿಗಳನ್ನು ರಕ್ಷಿಸುವುದಕ್ಕೋಸ್ಕರ ನಾವೇನೂ ಕಾಡಿಗೆ ಹೋಗಿ ಕಾವಲು ಕುಳಿತುಕೊಳ್ಳಬೇಕಾಗಿಲ್ಲ. ಕಾಡುಪ್ರಾಣಿಗಳ ಬದುಕು ಹೇಗೆ, ಅವುಗಳ ನೆಲೆ ಎಂತಹುದು, ಅವುಗಳ ಆಹಾರಪದ್ಧತಿಯೇನು -ಎಂಬಿವೇ ಮೊದಲಾದ ಅಂಶಗಳನ್ನು ವಿಶ್ಲೇಷಿಸಿದಾಗ, ವನ್ಯಜೀವಿಗಳು ನೆಮ್ಮದಿಯಿಂದ ಜೀವಿಸಬೇಕಾದರೆ ಈಗ ಅಳಿದುಳಿದಿರುವ ಕಾಡುಗಳನ್ನು ನಾವು ಸುಸ್ಥಿತಿಯಲ್ಲಿ ಉಳಿಸುವುದೊಂದೇ ದಾರಿ ಎಂಬ ಸತ್ಯ ದೃಢಪಡುತ್ತದೆ. ನಮ್ಮ ಮುಂದಿನ ಪೀಳಿಗೆಯ ಉಳಿವಿಗಾಗಿ ವರ್ತಮಾನದ ಕಾಡು ಹಾಗೂ ಕಾಡುಪ್ರಾಣಿಗಳ ಉಳಿವು ಅನಿವಾರ್ಯ. ಇಲ್ಲವಾದಲ್ಲಿ, ಕ್ಷಿಪ್ರವಾಗಿ ನಾಶವಾಗುತ್ತಿರುವ ನಿಸರ್ಗದ ಅಳಿವು ಮಾನವಕುಲದ ದುರಂತದ ಸಂಕೇತವೂ ಹೌದೆನ್ನುವುದನ್ನು ಮರೆಯುವಂತಿಲ್ಲ.

'ಕೀರುತಿಯ ಬೆನ್ನು ಹತ್ತಿ...' ಸಂಕಲನದಿಂದ ಆಯ್ದ ಬರಹ

logo
ಇಜ್ಞಾನ Ejnana
www.ejnana.com