ಡಿಜಿಟಲ್ ಕನ್ನಡದ ಸಾಧ್ಯತೆಗಳನ್ನು ತಿಳಿದುಕೊಳ್ಳೋಣ!
ಒಂದೊಂದು ಹಬ್ಬಕ್ಕೂ ಒಂದೊಂದು ಸಂಪ್ರದಾಯ ಇರುವಂತೆ, ತಂತ್ರಜ್ಞಾನದಲ್ಲಿ ಕನ್ನಡ ಹೇಗೆ ಬೆಳೆಯಬೇಕೆನ್ನುವ ಬಗ್ಗೆ ನಿರೀಕ್ಷೆಗಳನ್ನು ಹಂಚಿಕೊಳ್ಳುವುದು ಕನ್ನಡ ಹಬ್ಬದ ಸಂದರ್ಭದಲ್ಲಿ ಪಾಲಿಸಿಕೊಂಡು ಬರಲಾಗುತ್ತಿರುವ ಅಲಿಖಿತ ಸಂಪ್ರದಾಯವೇ ಸರಿ. ಕಳೆದ ಕೆಲ ವರ್ಷಗಳಲ್ಲಿ ಹೀಗೆ ಪ್ರಕಟವಾದ ಅಭಿಪ್ರಾಯಗಳನ್ನು ಗಮನಿಸಿದರೆ, ಆ ಪೈಕಿ ಹಲವು ನಿರೀಕ್ಷೆಗಳು ಈಗಾಗಲೇ ಸಾಕಾರವಾಗಿವೆ. ಮುಂದೆಯೂ ಇನ್ನಷ್ಟು ನಿರೀಕ್ಷೆಗಳು ಸಾಕಾರವಾಗಲಿವೆಯೆಂಬ ಆಶಾಭಾವನೆ ಕೂಡ ಮೂಡಿದೆ.
ಕನ್ನಡವನ್ನು ಸುಲಭವಾಗಿ ಟೈಪ್ ಮಾಡುವುದು, ಮೊಬೈಲ್ ಫೋನಿನಲ್ಲಿ ಕನ್ನಡ ಬಳಸುವುದೆಲ್ಲ ಈಗ ಸಾಮಾನ್ಯವಾಗಿದೆ. ಓಸಿಆರ್, ಟಿಟಿಎಸ್ ಮುಂತಾದ ಭಾಷಾ ತಂತ್ರಜ್ಞಾನಗಳು ಇದೀಗ ಕನ್ನಡಕ್ಕೂ ವಿಸ್ತರಿಸಿಕೊಂಡಿವೆ. ಅಷ್ಟೇ ಅಲ್ಲ, ಅವುಗಳ ಪರಿಣಾಮಕಾರಿ ಬಳಕೆಯ ಉದಾಹರಣೆಗಳೂ ನಮ್ಮ ಮುಂದಿವೆ. ಚಾಟ್ಜಿಪಿಟಿ, ಜೆಮಿನಿ ಎಐ ಮುಂತಾದ ಜನರೇಟಿವ್ ಎಐ ಸಾಧನಗಳು ಕನ್ನಡ ಕಲಿಯಬೇಕೆನ್ನುವ ನಿರೀಕ್ಷೆಯಂತೂ ನಮ್ಮ ಪಟ್ಟಿ ಸೇರುವ ಮುನ್ನವೇ ಸಾಕಾರವಾಗುವ ಹಾದಿಯಲ್ಲಿದೆ. ಅಲೆಕ್ಸಾ-ಸಿರಿ ಮುಂತಾದ ಸಾಧನಗಳೂ ಬಹುಶಃ ಮುಂದಿನ ದಿನಗಳಲ್ಲಿ ಕನ್ನಡ ಕಲಿಯಲಿವೆ.
ತಂತ್ರಜ್ಞಾನದ ಜಗತ್ತು ಇಷ್ಟೆಲ್ಲ ವೇಗವಾಗಿ ಬದಲಾಗುತ್ತಿರುವಾಗ, ಕನ್ನಡಿಗರಾದ ನಾವು ಆ ಬದಲಾವಣೆಗಳ ಜೊತೆಯಲ್ಲೇ ಹೆಜ್ಜೆಹಾಕಬೇಕಿದೆ. ಇಂತಿಂಥ ಕೆಲಸಗಳನ್ನು ಮಾಡಿದರೆ ಇದು ಸಾಧ್ಯವಾಗುತ್ತದೆ ಎನ್ನಬಹುದೇ? ಅದೇನೋ ಕಷ್ಟ. ಆದರೆ, ತಂತ್ರಜ್ಞಾನದ ಜೊತೆಯಲ್ಲೇ ಮುನ್ನಡೆಯುವ ಪ್ರಯತ್ನವನ್ನಂತೂ ನಾವು ಮಾಡಬಹುದು. ಡಿಜಿಟಲ್ ಜಗತ್ತಿನಲ್ಲಿ ಏನು ನಡೆದಿದೆಯೆಂದು ತಿಳಿದುಕೊಳ್ಳುವುದು ಈ ನಿಟ್ಟಿನ ಮೊದಲ ಹೆಜ್ಜೆ. ಹೊಸ ಸವಲತ್ತುಗಳ ಬಗ್ಗೆ ತಿಳಿದುಕೊಂಡಾದ ಮೇಲೆ ಆ ಸವಲತ್ತುಗಳನ್ನು ಬಳಸುವುದು, ಇತರರಿಗೂ ಪರಿಚಯಿಸುವುದು ಇನ್ನೊಂದು ಹೆಜ್ಜೆ.
ಹೇಳುವುದಕ್ಕೆ, ಕೇಳುವುದಕ್ಕೆ ಇದು ಸುಲಭ. ಆದರೆ ಸಂಘಟಿತ ಪ್ರಯತ್ನವಿಲ್ಲದೆ ಕನ್ನಡಿಗರೆಲ್ಲರೂ ಡಿಜಿಟಲ್ ಕನ್ನಡದ ಸಾಧ್ಯತೆಗಳನ್ನು ತಿಳಿದುಕೊಳ್ಳುವಂತಾಗುವುದು ಸುಲಭವೇನಲ್ಲ. ಇದಕ್ಕೆ ವಿದ್ಯಾರ್ಥಿಗಳು, ತಂತ್ರಜ್ಞರು, ಸಂವಹನಕಾರರು, ಸಂಘಸಂಸ್ಥೆಗಳು ಹಾಗೂ ಸರ್ಕಾರ ಸೇರಿದಂತೆ ಎಲ್ಲರ ನೆರವೂ ಬೇಕಾಗುತ್ತದೆ. ಡಿಜಿಟಲ್ ಜಗತ್ತಿನಲ್ಲಿ ಕನ್ನಡಕ್ಕಾಗಿ ಲಭ್ಯವಿರುವ ಸವಲತ್ತುಗಳನ್ನು ಎಲ್ಲರಿಗೂ ಪರಿಚಯಿಸುವುದು, ಸದ್ಯ ಲಭ್ಯವಿರುವ ಸವಲತ್ತುಗಳನ್ನು ಉತ್ತಮಪಡಿಸುವುದು, ಹೊಸ ಸವಲತ್ತುಗಳನ್ನು ರೂಪಿಸುವುದು - ಇವು ವ್ಯಕ್ತಿಗಳು, ತಂಡಗಳು ಮಾಡಬಹುದಾದ ಕೆಲಸಗಳು. ಹಾಗೆಯೇ ಸಂಘಸಂಸ್ಥೆಗಳು ಹ್ಯಾಕಥಾನ್ನಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಭಾಷೆಯ ಬಳಕೆ ಹಾಗೂ ಬೆಳವಣಿಗೆಗೆ ನೆರವಾಗುವ ತಂತ್ರಾಂಶಗಳನ್ನು ರೂಪಿಸಲು ಪ್ರೋತ್ಸಾಹ ನೀಡಬಹುದು.
ಮಾಹಿತಿ ತಂತ್ರಜ್ಞಾನದ ಬಗ್ಗೆ ಕನ್ನಡದ ಪಠ್ಯಕ್ರಮ ರೂಪಿಸುವುದು, ತಮ್ಮ ಪ್ರಾಜೆಕ್ಟುಗಳಲ್ಲಿ ಕನ್ನಡಕ್ಕೆ ಬೇಕಾದ ತಂತ್ರಾಂಶಗಳನ್ನು ರೂಪಿಸುವಂತೆ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು, ಅಂತರಜಾಲದಲ್ಲಿ ಕನ್ನಡದ ಮಾಹಿತಿ ಹೆಚ್ಚುಹೆಚ್ಚು ಪ್ರಮಾಣದಲ್ಲಿ ದೊರಕುವಂತೆ ಮಾಡುವುದೇ ಮುಂತಾದ ಕೆಲಸಗಳಲ್ಲಿ ಸರ್ಕಾರದ ಪಾತ್ರವೂ ಇರಬೇಕು. ಇವೆಲ್ಲ ಹೊಸ ಹೆಜ್ಜೆಗಳೂ ಏನಲ್ಲ. ಈ ಹಿಂದೆ ಪ್ರಾರಂಭವಾಗಿ ವಿವಿಧ ಹಂತಗಳಲ್ಲಿ ನಿಂತುಹೋಗಿರುವ ಕೆಲಸಗಳನ್ನು ಮತ್ತೆ ಪ್ರಾರಂಭಿಸಿದರೂ ಸಾಕು, ತಂತ್ರಜ್ಞಾನದಲ್ಲಿ ಕನ್ನಡ ಕುರಿತ ನಿರೀಕ್ಷೆಗಳ ಪಟ್ಟಿ ಮುಂಬರುವ ವರ್ಷಗಳಲ್ಲಿ ಇನ್ನೂ ಕಿರಿದಾಗುವುದು ಖಂಡಿತಾ!