ಸೂರ್ಯಗ್ರಹಣದ ಬಗ್ಗೆ ಎಲ್ಲರಿಗೂ ಕುತೂಹಲ. ಆದರೆ ಅದನ್ನು ನೇರವಾಗಿ ನೋಡಿದರೆ ಕಣ್ಣಿಗೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಇನ್ನು ಸೂರ್ಯಗ್ರಹಣ ನೋಡಲೆಂದೇ ವಿಶೇಷ ಕನ್ನಡಕಗಳು ಇವೆಯಾದರೂ ಅವು ಎಲ್ಲೆಡೆಯೂ ಎಲ್ಲರಿಗೂ ಸಿಗುವುದು ಕಷ್ಟ.
ಹೀಗಿರುವಾಗ ಗ್ರಹಣ ವೀಕ್ಷಣೆಗೆ ನಾವು ಬಳಸಿದ ಎರಡು ವಿಧಾನಗಳು ಇಲ್ಲಿವೆ:
ಮೊದಲನೆಯದು, ಕನ್ನಡಿಯೊಂದನ್ನು ತೆಗೆದುಕೊಂಡು ಮಧ್ಯದಲ್ಲೊಂದು ಕಿಂಡಿ ಮಾತ್ರವೇ ಉಳಿಯುವಂತೆ ಅದನ್ನು ಕಾಗದದಿಂದ ಮುಚ್ಚಿಬಿಡುವುದು. ನಡುವಿನ ಸಣ್ಣ ಭಾಗದ ಮೇಲೆ ಸೂರ್ಯನ ಬೆಳಕು ನೇರವಾಗಿ ಬೀಳುವಂತೆ ಮಾಡುವುದು ಎರಡನೇ ಹೆಜ್ಜೆ. ತಕ್ಕಮಟ್ಟಿಗೆ ಕತ್ತಲಾಗಿರುವ ಕೋಣೆಯ ಗೋಡೆಯ ಮೇಲೆ ಈ ಬೆಳಕು ಪ್ರತಿಫಲಿಸುವಂತೆ ಮಾಡಿದರೆ ಗೋಡೆಯ ಮೇಲೆ ಗ್ರಹಣದ ದೃಶ್ಯ ಕಾಣುತ್ತದೆ!
ಬೇಕಾದ ಕಡೆಗೆ ತಿರುಗಿಸಿಕೊಳ್ಳುವಂತಹ ಪರದೆಯಿರುವ (swivel screen) ಡಿಜಿಟಲ್ ಕ್ಯಾಮೆರಾ ನಿಮ್ಮಲ್ಲಿದ್ದರೆ ಗ್ರಹಣದ ಚಿತ್ರಗಳನ್ನು ಸೆರೆಹಿಡಿಯಲು ಅದು ಹೇಳಿ ಮಾಡಿಸಿದ ಆಯ್ಕೆ. ಸೂರ್ಯನನ್ನು ಅದರಲ್ಲಿ ನೋಡಿಕೊಂಡು (ನೇರವಾಗಿ ಅಲ್ಲ), ಕ್ಯಾಮೆರಾಗೆ ಅಡ್ಡಲಾಗಿ ಒಂದು ಎಕ್ಸ್-ರೇ ಹಾಳೆ ಇಟ್ಟರೆ ಆಯಿತು, ಗ್ರಹಣದ ಚೆಂದದ ಚಿತ್ರಗಳನ್ನು ಸೆರೆಹಿಡಿಯಬಹುದು. ಇವತ್ತಿನ ಹಾಗೆ ಮೋಡ ಇದ್ದರೆ ಇನ್ನೂ ಸುಲಭ, ಎಕ್ಸ್-ರೇ ಹಾಳೆಯ ಕೆಲಸವನ್ನು ಮೋಡಗಳೇ ಮಾಡಿ ನಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸುತ್ತವೆ!
(ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ)
ವೆಲ್ಡಿಂಗ್ ಮಾಡುವವರು ಬಳಸುವ ಕನ್ನಡಕ ಅಥವಾ ಅದರ ಗಾಜು ನಿಮಗೆ ದೊರಕುವಂತಿದ್ದರೆ ಅದನ್ನೂ ಗ್ರಹಣದ ಛಾಯಾಚಿತ್ರ ಸೆರೆಹಿಡಿಯಲು (ಮೇಲಿನ ವಿಧಾನ ಅನುಸರಿಸಿ) ಬಳಸಬಹುದು. ನೆನಪಿಡಿ, ಸೂರ್ಯಗ್ರಹಣವನ್ನು ನೇರವಾಗಿ ನೋಡಲು ಎಲ್ಲ ವೆಲ್ಡಿಂಗ್ ಗಾಜುಗಳೂ ಸುರಕ್ಷಿತವಲ್ಲ!
(ದೊಡ್ಡದಾಗಿ ವೀಕ್ಷಿಸಲು ಚಿತ್ರದ ಮೇಲೆ ಕ್ಲಿಕ್ ಮಾಡಿ)