ಪುಸ್ತಕ ಪರಿಚಯ: ಮೈಸೂರಿನ ಚುರುಮುರಿಗೆ ಅಂತರಿಕ್ಷದ ಟೊಮೇಟೊ
ವಿಜ್ಞಾನ-ತಂತ್ರಜ್ಞಾನದ ಜಗತ್ತಿನಲ್ಲಿ ಕುತೂಹಲ ಹುಟ್ಟಿಸುವ ಘಟನೆಗಳು ಸದಾಕಾಲ ನಡೆಯುತ್ತಲೇ ಇರುತ್ತವೆ. ಅಂತಹ ಘಟನೆಗಳ, ಅವುಗಳ ಹಿಂದಿನ ವಿದ್ಯಮಾನಗಳ ಕುರಿತು ತಿಳಿದುಕೊಳ್ಳುವ ಮೂಲಕ ನಾವು ನಮ್ಮ ಅರಿವಿನ ಹರವನ್ನು ವಿಸ್ತರಿಸಿಕೊಳ್ಳಬಹುದು. ಇಂತಹ ಮಾಹಿತಿ ನೀಡುವ ಬರಹಗಳು ಹೇಗಿದ್ದರೆ ಚೆಂದ? ಅವು ಎಲ್ಲರಲ್ಲೂ ಆಸಕ್ತಿ ಮೂಡಿಸುವಂತೆ ಮಾಡುವುದು ಹೇಗೆ?
ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸವನ್ನು ಕನ್ನಡದ ವಿಜ್ಞಾನ ಸಂವಹನಕಾರರು ಬಹುಕಾಲದಿಂದಲೇ ಮಾಡಿಕೊಂಡು ಬಂದಿದ್ದಾರೆ, ಈ ಪ್ರಕಾರದ ಬರಹಗಳೂ ಕುತೂಹಲಕರವಾಗಿರುವುದು ಸಾಧ್ಯವೆಂದು ತೋರಿಸಿಕೊಟ್ಟಿದ್ದಾರೆ.
ಈ ಕ್ಷೇತ್ರದಲ್ಲಿ ಇನ್ನೇನು ಇಪ್ಪತ್ತೈದು ವರ್ಷ ಪೂರೈಸಲಿರುವ ನನ್ನ ಪ್ರಯತ್ನವೂ ಈ ನಿಟ್ಟಿನಲ್ಲೇ ಸಾಗಿದೆ. ವಿಜಯ ಕರ್ನಾಟಕ ಪತ್ರಿಕೆ ನನ್ನ ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಂತಿದೆ.
ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಹೇಳುವುದರ ಜೊತೆಗೆ ಓದುಗರಿಗೆ ಇಷ್ಟವಾಗಬಹುದಾದ ಪೂರಕ ಅಂಶಗಳನ್ನೂ ಸೇರಿಸುವ ಸ್ವಾತಂತ್ರ್ಯವನ್ನು ಅದು ನನ್ನ 'ಟೆಕ್ ನೋಟ' ಅಂಕಣಕ್ಕೆ ಕೊಟ್ಟಿದೆ. ಹೀಗಾಗಿಯೇ ನಮ್ಮೂರಿನ ನೆನಪುಗಳು, ನಾನು ಓದಿದ ಪುಸ್ತಕ - ನೋಡಿದ ಸ್ಥಳಗಳು, ಇಷ್ಟಪಟ್ಟ ತಿಂಡಿತಿನಿಸುಗಳೆಲ್ಲ ನನ್ನ ಬರಹಗಳಲ್ಲಿ ಬಂದುಹೋಗಿವೆ. ಆ ಪೈಕಿ ಕೆಲವು ಬರಹಗಳ ಸಂಕಲನ ಇದು. ಇಲ್ಲಿ ಮೈಸೂರಿನ ಚುರುಮುರಿಯೂ ಇದೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಬೆಳೆದ ಟೊಮೇಟೊ ಹಣ್ಣೂ ಇದೆ!
ಈ ಬರಹಗಳ ಮೊದಲ ಓದುಗರಾದ ನಾಗೇಶ ಹೆಗಡೆ ಹಾಗೂ ಕೊಳ್ಳೇಗಾಲ ಶರ್ಮ ನನ್ನ ಬರಹದ ಹಾದಿಯುದ್ದಕ್ಕೂ ಜೊತೆಯಾಗಿರುವ ಗುರುಗಳು. ನಾನು ಬರವಣಿಗೆ ಶುರುಮಾಡಿದ ಕಾಲದಿಂದಲೂ ನನ್ನನ್ನು ಪ್ರೋತ್ಸಾಹಿಸಿರುವ ವಿಜಯ ಕರ್ನಾಟಕ ಪತ್ರಿಕೆ, ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಹಾಗೂ ಮಿತ್ರ ಕೀರ್ತಿ ಕೋಲ್ಗಾರ್ ಅವರ ಬೆಂಬಲದಿಂದ ಈ ಬರಹಗಳ ಪ್ರಕಟಣೆ ಸಾಧ್ಯವಾಗಿದೆ. ಬುಕ್ಸ್‌ಲೋಕದ ಫಣೀಶ್ ಬಹಳ ವಿಶ್ವಾಸದಿಂದ ಈ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ. ಗೆಳೆಯ ವಿಕ್ರಮ್ ಎಂದಿನಂತೆ ಸೊಗಸಾದ ವಿನ್ಯಾಸ ಮಾಡಿಕೊಟ್ಟಿದ್ದಾರೆ.
ಅವರೆಲ್ಲರಿಗೆ, ನನ್ನ ಬರಹಗಳಿಗೆ ಬೆಂಬಲವಾಗಿರುವ ನಿಮಗೆ, ನನ್ನ ಹೃತ್ಪೂರ್ವಕ ಧನ್ಯವಾದಗಳು.
ನೂರೊಂದು ನೆನಪು ನ್ಯೂರಾನಿನಿಂದ
ಲೇಖಕರು: ಟಿ. ಜಿ. ಶ್ರೀನಿಧಿ
ಪ್ರಕಾಶಕರು: ಬುಕ್ಸ್‌ಲೋಕ, ಮೈಸೂರು
140 ಪುಟಗಳು, ಬೆಲೆ: ರೂ. 160
ಆನ್‍ಲೈನ್ ಖರೀದಿಗೆ: ಬುಕ್ಸ್‌ಲೋಕ

