ಕಾರಿಗೆ ಪೆಟ್ರೋಲು ಡೀಸಲು ಹಾಕಿಸುವ ಬದಲು ನೀರನ್ನು ಹಾಕಲು ಯಾಕೆ ಆಗೋಲ್ಲ?
ಕಾರಿಗೆ ಪೆಟ್ರೋಲು ಡೀಸಲು ಹಾಕಿಸುವ ಬದಲು ನೀರನ್ನು ಹಾಕಲು ಯಾಕೆ ಆಗೋಲ್ಲ?|Raghupathi Sringeri
ವೈವಿಧ್ಯ

ಪುಟಾಣಿ ಇಜ್ಞಾನ: ನೀರು-ಕಾರು!

"ಕಾರಿಗೆ ಪೆಟ್ರೋಲನ್ನೇ ಯಾಕೆ ಹಾಕಬೇಕು? ಗಿಡಗಳೆಲ್ಲ ನೀರು ಕುಡಿದು ಬೆಳೆಯುತ್ತವಲ್ಲ, ಹಾಗೆ ಕಾರು-ಲಾರಿಗಳೂ ನೀರು ಕುಡಿದೇ ಓಡಬಹುದು ತಾನೇ?"

ಟಿ. ಜಿ. ಶ್ರೀನಿಧಿ

ಪುಟ್ಟನ ಮನೆಯಿರುವುದು ಬೆಂಗಳೂರಿನಲ್ಲಿ. ಅವನ ಮನೆಯಿರುವ ಬಡಾವಣೆಯಲ್ಲಿ ನೀರಿಗೆ ಭಾರೀ ಸಮಸ್ಯೆ. ಬೆಳಗಾದರೆ ಸಾಕು, ಅವರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟುಗಳಿಗೆಲ್ಲ ನೀರು ಪೂರೈಸಲು ನೀರಿನ ಟ್ಯಾಂಕರುಗಳ ಓಡಾಟ ಒಂದೇ ಸಮನೆ ನಡೆದಿರುತ್ತದೆ. ಅವುಗಳ ಸದ್ದು - ಹೊಗೆ ರಸ್ತೆಯವರಿಗೆಲ್ಲ ಚೆನ್ನಾಗಿಯೇ ಅಭ್ಯಾಸವಾಗಿಬಿಟ್ಟಿದೆ. ಟೆರೇಸ್ ಮೇಲೆ ಆಟವಾಡುವ ಮಕ್ಕಳು ಬೇಸರವಾದಾಗ ಟ್ಯಾಂಕರ್ ಎಣಿಸುವ ಹೊಸ ಆಟ ಶುರುಮಾಡಿಕೊಳ್ಳುವುದೂ ಉಂಟು.

ಹೀಗೆಯೇ ಒಂದು ದಿನ ಪುಟ್ಟ ಅಮ್ಮನ ಜೊತೆಯಲ್ಲಿ ಎಲ್ಲಿಗೋ ಹೊರಟಿದ್ದ. ದಾರಿಯಲ್ಲಿ ಪೆಟ್ರೋಲು ಹಾಕಿಸಲೆಂದು ಅಮ್ಮ ಕಾರನ್ನು ಪೆಟ್ರೋಲ್ ಬಂಕಿನ ಕಡೆಗೆ ತಿರುಗಿಸಿದರು. ಪೆಟ್ರೋಲ್ ಬಂಕಿಗೆ ಪೆಟ್ರೋಲ್ ತಂದಿದ್ದ ಟ್ಯಾಂಕರು, ಬಂಕಿನ ಹೊರಗೆ ನಿಂತಿದ್ದದ್ದು, ಪುಟ್ಟನಿಗೆ ಕೊಂಚ ದೂರದಿಂದಲೇ ಕಾಣಿಸಿತು.

ದಿನವಿಡೀ ನೀರಿನ ಟ್ಯಾಂಕರುಗಳನ್ನು ನೋಡುತ್ತಿದ್ದ ಪುಟ್ಟನಿಗೆ ಇದೂ ನೀರಿನ ಟ್ಯಾಂಕರೇ ಇರಬಹುದೇನೋ ಎನ್ನುವ ಸಂದೇಹ ಬಂತು. ಆದರೆ ಅದು ಸಾಮಾನ್ಯ ಟ್ಯಾಂಕರಿಗಿಂತ ದೊಡ್ಡದಾಗಿರುವಂತೆ ಕಾಣಿಸಿತಲ್ಲ, ತನ್ನ ಸಂಶಯ ನಿವಾರಿಸಿಕೊಳ್ಳಲು ಅವನು ಅಮ್ಮನನ್ನೇ ಕೇಳಿದ, "ಇದೂ ನೀರಿನದೇ ಟ್ಯಾಂಕರಾ ಅಮ್ಮಾ?"

"ಅಲ್ಲ ಪುಟ್ಟ, ಇದು ಪೆಟ್ರೋಲ್ ಟ್ಯಾಂಕರು," ಅಮ್ಮ ಹೇಳಿದರು. "ಪೆಟ್ರೋಲ್ ಬಂಕಿಗೆ ಪೆಟ್ರೋಲ್ ತುಂಬಿಸಿ ಹೋಗಲು ಇಲ್ಲಿಗೆ ಬಂದಿದೆ."

"ಎಲ್ಲರೂ ಪೆಟ್ರೋಲ್ ತುಂಬಿಸಿಕೊಳ್ಳಲು ಇಲ್ಲಿಗೆ ಬಂದರೆ ಇದು ಪೆಟ್ರೋಲ್ ಬಂಕಿಗೇ ಪೆಟ್ರೋಲ್ ತುಂಬಿಸಲು ಬಂದಿದೆ!" ಪುಟ್ಟನಿಗೆ ನಗು ಬಂತು. "ನಮ್ಮ ಕಾರಿನ ಥರಾ ಈ ಟ್ಯಾಂಕರಿಗೂ ಪೆಟ್ರೋಲ್ ಬೇಕಾದರೆ ಅದು ಈ ಟ್ಯಾಂಕಿನಿಂದಲೇ ಸ್ವಲ್ಪ ತೆಗೆದುಕೊಂಡುಬಿಡಬಹುದು ಅಲ್ವಾ?"

ಪುಟ್ಟನ ಪ್ರಶ್ನೆ ಕೇಳಿ ಅಮ್ಮನಿಗೂ ನಗು ಬಂತು. "ಟ್ಯಾಂಕರ್ ಓಡಾಡಲು ಡೀಸಲ್ ಬೇಕು ಪುಟ್ಟಾ" ಅಂದರು. "ಹಾಗಾದರೆ ಡೀಸಲ್ ತರುವ ಟ್ಯಾಂಕರು ತನಗೆ ಬೇಕಾದ ಡೀಸಲ್ ಅನ್ನು ಅದರ ಟ್ಯಾಂಕಿನಿಂದಲೇ ತೆಗೆದುಕೊಳ್ಳುತ್ತೆ ಅನ್ನಿಸುತ್ತೆ" ಪುಟ್ಟ ಘೋಷಿಸಿದ.

ಅಮ್ಮ ಏನಾದರೂ ಪ್ರತಿಕ್ರಿಯೆ ನೀಡುವುದಕ್ಕೆ ಮೊದಲೇ ಅವನು ತನ್ನ ಮಾತು ಮುಂದುವರೆಸಿದ. "ನಮ್ಮ ರೋಡಲ್ಲಿ ನೀರಿನ ಟ್ಯಾಂಕರು ಬರುತ್ತಲ್ಲ, ಅದು ನೀರಿನಿಂದಲೇ ಓಡುವ ಹಾಗಿದ್ದರೆ ಅದಕ್ಕೆ ಟ್ಯಾಂಕರಿನಲ್ಲಿರುವ ನೀರನ್ನೇ ಉಪಯೋಗಿಸಿಕೊಳ್ಳಬಹುದಾಗಿತ್ತು ಅಲ್ವಾ? ಆಗ ಅದು ಮತ್ತೆಮತ್ತೆ ಪೆಟ್ರೋಲ್ ಬಂಕ್ ಕಡೆ ಬರಬೇಕಾಗಿಯೇ ಇರಲಿಲ್ಲ. ಆಟ ಮುಗಿಸಿ ಬಂದು ನಾನು ನೀರು ಕುಡಿಯುವ ಹಾಗೆ ಅದೂ ನೀರನ್ನೇ ಕುಡಿದು ಓಡಬಹುದಾಗಿತ್ತು."

"ಅಲ್ವಾ ಅಮ್ಮಾ? ಕಾರಿಗೆ ಪೆಟ್ರೋಲು ಡೀಸಲು ಹಾಕಿಸುವ ಬದಲು ನೀರನ್ನು ಹಾಕಲು ಯಾಕೆ ಆಗೋಲ್ಲ?" ಪುಟ್ಟನ ಪ್ರಶ್ನೆ ಬರುವಷ್ಟರಲ್ಲಿ ಅವರ ಕಾರು ಪೆಟ್ರೋಲ್ ಬಂಕಿನೊಳಗೆ ಬಂದಿತ್ತು. "ಎಷ್ಟು ಮೇಡಮ್" ಎಂದಾಕೆಯ ಪ್ರಶ್ನೆಗೆ ಉತ್ತರಿಸಲು ಅಮ್ಮ ಇಳಿದು ಹೋದರು. ಪುಟ್ಟ ತನ್ನ ಪ್ರಶ್ನೆಯನ್ನೂ ಜೊತೆಗಿಟ್ಟುಕೊಂಡು ಯೋಚಿಸುತ್ತಾ ಕುಳಿತ.

"ಕಾರಿಗೆ ಪೆಟ್ರೋಲನ್ನೇ ಯಾಕೆ ಹಾಕಬೇಕು? ಗಿಡಗಳೆಲ್ಲ ನೀರು ಕುಡಿದು ಬೆಳೆಯುತ್ತವಲ್ಲ, ಹಾಗೆ ಕಾರು-ಲಾರಿಗಳೂ ನೀರು ಕುಡಿದೇ ಓಡಬಹುದು ತಾನೇ?"

ಕಾರಿಗೆ ಪೆಟ್ರೋಲು ಡೀಸಲು ಹಾಕಿಸುವ ಬದಲು ನೀರನ್ನು ಹಾಕಲು ಯಾಕೆ ಆಗೋಲ್ಲ?
ಕಾರಿಗೆ ಪೆಟ್ರೋಲು ಡೀಸಲು ಹಾಕಿಸುವ ಬದಲು ನೀರನ್ನು ಹಾಕಲು ಯಾಕೆ ಆಗೋಲ್ಲ?Raghupathi Sringeri

ಪುಟ್ಟ ತನ್ನ ಅಮ್ಮನನ್ನು ಕೇಳಿದ ಪ್ರಶ್ನೆ ಹಲವಾರು ವರ್ಷಗಳಿಂದ ವಿಜ್ಞಾನಿಗಳನ್ನೂ ಕಾಡುತ್ತಿದೆ. ಪೆಟ್ರೋಲ್ ಡೀಸಲ್ ಮುಂತಾದ ಪಳೆಯುಳಿಕೆ ಇಂಧನಗಳ ಬದಲು ನೀರನ್ನು ಇಂಧನವಾಗಿ ಬಳಸುವ ಸಾಧ್ಯಾಸಾಧ್ಯತೆಗಳ ಪರೀಕ್ಷೆಯೂ ಹಲವು ಬಾರಿ ನಡೆದಿದೆ. ನೀರು ಕುಡಿದು ಓದುವ ವಾಹನವನ್ನು ರೂಪಿಸಿರುವುದಾಗಿ ಹಲವರು ಈಗಾಗಲೇ ಹೇಳಿಕೊಂಡಿದ್ದಾರಾದರೂ ಅಂತಹ ಹೇಳಿಕೆಗಳಲ್ಲಿ ಎಷ್ಟು ಸತ್ಯವಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಹಾಗೆಂದು ಪುಟ್ಟನ ಪ್ರಶ್ನೆಯನ್ನು ಸಾರಾಸಗಟಾಗಿ ಪಕ್ಕಕ್ಕಿಡುವಂತೆಯೂ ಇಲ್ಲ. ಏಕೆಂದರೆ ನೀರಿನ ಭಾಗಗಳಲ್ಲೊಂದಾದ ಹೈಡ್ರೋಜನ್ ಅನ್ನು ಇಂಧನವಾಗಿ ಬಳಸುವ ಪ್ರಯೋಗಗಳು ಈಗಾಗಲೇ ಯಶಸ್ವಿಯಾಗಿವೆ. ಫ್ಯುಯೆಲ್ ಸೆಲ್ ತಂತ್ರಜ್ಞಾನ ಬಳಸುವ, 'ಫ್ಯುಯೆಲ್ ಸೆಲ್ ಇಲೆಕ್ಟ್ರಿಕ್ ವೆಹಿಕಲ್'ಗಳೆಂದು (FCEV) ಕರೆಸಿಕೊಳ್ಳುವ ವಾಹನಗಳು ವಿಶ್ವದ ವಿವಿಧೆಡೆ ಓಡಾಡುತ್ತಲೂ ಇವೆ. ಇಂತಹ ವಾಹನಗಳು ಹೊಗೆಯ ಬದಲು ನೀರನ್ನು ಹೊರಚೆಲ್ಲುತ್ತವೆ ಎನ್ನುವುದು ವಿಶೇಷ.

ನೀರಿನಲ್ಲಿ ಹೇಗೂ ಹೈಡ್ರೋಜನ್ ಇರುವುದರಿಂದ ಇಂತಹ ವಾಹನಗಳಿಗೆ ನೀರನ್ನೇ ಇಂಧನವಾಗಿ ಬಳಸಬಹುದೇ? ವಾಹನದಿಂದ ಹೊರಬರುವ ನೀರು ಮತ್ತೆ ಇಂಧನವಾಗಿ ಬಳಕೆಯಾಗುವಂತಿದ್ದರೆ ಒಳ್ಳೆಯದೇ ಆಯಿತಲ್ಲ! ಈ ಪ್ರಶ್ನೆಗೆ ಉತ್ತರಿಸುವುದು ಮಾತ್ರ ಸ್ವಲ್ಪ ಕಷ್ಟದ ಕೆಲಸ. ಏಕೆಂದರೆ ನೀರಿನಿಂದ ಹೈಡ್ರೋಜನ್ ಅನ್ನು ಸುಲಭವಾಗಿ, ಸಮರ್ಥವಾಗಿ ಬೇರ್ಪಡಿಸುವ ತಂತ್ರಜ್ಞಾನ ಇನ್ನೂ ಸಿದ್ಧವಾಗಿಲ್ಲ. ಅದು ಸಿದ್ಧವಾಗುವ ತನಕ ಈ ವಾಹನಗಳಿಗೆ ಹೈಡ್ರೋಜನ್ ಅನ್ನು ಪ್ರತ್ಯೇಕವಾಗಿಯೇ ಪೂರೈಸಬೇಕಾಗುತ್ತದೆ. ಅಂದರೆ, ಪೆಟ್ರೋಲ್ ಬಂಕಿನ ಬದಲು ಅವು ಹೈಡ್ರೋಜನ್ ಬಂಕ್‌ಗೆ ಹೋಗುತ್ತವೆ ಅಷ್ಟೇ.

ಹೀಗಾಗಿ, ಪುಟ್ಟನ ಮನೆ ಮುಂದೆ ಓಡಾಡುವ ನೀರಿನ ಟ್ಯಾಂಕರುಗಳು, ಸದ್ಯಕ್ಕಂತೂ, ತಮ್ಮದೇ ಟ್ಯಾಂಕಿನ ನೀರನ್ನು ಇಂಧನವಾಗಿ ಬಳಸುವಂತಿಲ್ಲ. ಅಂತಹ ಕಾಲ ಕೆಲವೇ ವರ್ಷಗಳಲ್ಲಿ ಬಂದರೂ ಬರಬಹುದು, ಆದರೆ ಅಲ್ಲಿಯ ತನಕ ಪುಟ್ಟನ ಊರಿನಲ್ಲಿ ನೀರು ಉಳಿದಿರಬೇಕಲ್ಲ!

ಅಕ್ಟೋಬರ್ ೨೦೧೯ರ ಹಸಿರುವಾಸಿಯಲ್ಲಿ ಪ್ರಕಟವಾದ ಲೇಖನ

ಇಜ್ಞಾನ Ejnana
www.ejnana.com