ಬ್ರೈಲ್ - ದೃಷ್ಟಿಯ ಸವಾಲಿಗೇ ಸವಾಲೊಡ್ಡುವ ಸ್ಪರ್ಶಲಿಪಿ
Image by Alicja from Pixabay

ಬ್ರೈಲ್ - ದೃಷ್ಟಿಯ ಸವಾಲಿಗೇ ಸವಾಲೊಡ್ಡುವ ಸ್ಪರ್ಶಲಿಪಿ

ಜನವರಿ ೪ ವಿಶ್ವ ಬ್ರೈಲ್ ದಿನ
Published on

"ಜಗತ್ತು ಸುಂದರವಾಗಿದೆ, ಅದನ್ನು ನಾವು ನಮ್ಮದೇ ರೀತಿಯಲ್ಲಿ ನೋಡುತ್ತೇವೆ," ಎನ್ನುವುದು ದೃಷ್ಟಿ ಸವಾಲು ಎದುರಿಸುವ ವಿಶೇಷ ಚೇತನರ ಮನೋಭಾವ. ದೃಷ್ಟಿ ಇಲ್ಲದಿರುವುದು ಸಾಧನೆಗೆ ಅಡ್ಡಿಯಲ್ಲ ಎಂಬುದನ್ನು ಅವರು ಸಾಬೀತುಪಡಿಸುತ್ತಲೇ ಇರುತ್ತಾರೆ. ಎದುರಾಗುವ ಅಡೆತಡೆಗಳನ್ನು ಮೆಟ್ಟಿ ನಿಂತು, ಸಮಾಜದ ಮುಖ್ಯವಾಹಿನಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅವರ ಸಾಧನೆ ಅನನ್ಯವಾದದ್ದು.

ಅವರಿಗೆ ನೆರವಾಗುವ ಹಲವು ಸಾಧನಗಳನ್ನು ತಂತ್ರಜ್ಞಾನ ಒದಗಿಸಿದೆ. ಅಂತಹ ಸಾಧನಗಳಲ್ಲಿ ಬ್ರೈಲ್ ಲಿಪಿಗೆ ಮಹತ್ವದ ಸ್ಥಾನ. ಕೇವಲ ಕೆಲವೇ ಚುಕ್ಕಿಗಳ ಸಹಾಯದಿಂದ ಜಗತ್ತಿನ ಜ್ಞಾನವನ್ನೆಲ್ಲ ಬೆರಳ ತುದಿಯಲ್ಲೇ ತೆರೆದಿಡುವುದನ್ನು ಈ ಸ್ಪರ್ಶಲಿಪಿ ಸಾಧ್ಯವಾಗಿಸಿದೆ. ಪ್ರತಿಯೊಂದು ಅಕ್ಷರ ಅಥವಾ ಚಿಹ್ನೆಯನ್ನು ಆರು ಚುಕ್ಕೆಗಳ ಒಂದು ಚೌಕಟ್ಟಿನಲ್ಲಿ ಜೋಡಿಸಿರುವುದು ಈ ಲಿಪಿಯ ವೈಶಿಷ್ಟ್ಯ. ಈ ಆರು ಚುಕ್ಕೆಗಳ ವಿಭಿನ್ನ ಸಂಯೋಜನೆಗಳ ಮೂಲಕ ವರ್ಣಮಾಲೆಯ ಅಕ್ಷರ, ಅಂಕಿ, ಗಣಿತದ ಸಂಕೇತ ಮುಂತಾದವುಗಳನ್ನು ಸೂಚಿಸಲಾಗುತ್ತದೆ.

ಕಾಗದದಂತಹ ಯಾವುದೇ ಮೇಲ್ಮೈಯ ಮೇಲೆ ಉಬ್ಬುಗಳ ರೂಪದಲ್ಲಿರುವ ಈ ಚಿಹ್ನೆಗಳನ್ನು ಮುಟ್ಟುವ ಮೂಲಕವೇ ಪ್ರತ್ಯೇಕವಾಗಿ ಗುರುತಿಸಬಹುದು. ದೃಷ್ಟಿ ಸವಾಲು ಎದುರಿಸುವವರು ತಮ್ಮ ಬೆರಳುಗಳ ತುದಿಯಿಂದ ಇವನ್ನು ಸ್ಪರ್ಶಿಸಿ ಅವುಗಳಲ್ಲಿರುವ ಮಾಹಿತಿಯನ್ನು ಗ್ರಹಿಸುತ್ತಾರೆ. ತಮಗೆ ಬೇಕಾದ ವಿಷಯಗಳನ್ನು ಅರಿತುಕೊಳ್ಳಲು ಇತರರನ್ನು ಅವಲಂಬಿಸುವ ಬದಲು, ತಾವೇ ಓದಿಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.

ಸ್ವತಃ ದೃಷ್ಟಿ ಸವಾಲು ಎದುರಿಸುತ್ತಿದ್ದ ಲೂಯಿ ಬ್ರೈಲ್ ಎಂಬ ಫ್ರಾನ್ಸಿನ ಯುವಕ ಈ ಲಿಪಿಯನ್ನು ರೂಪಿಸಿ ಎರಡು ಶತಮಾನಗಳಿಗೂ ಹೆಚ್ಚಿನ ಸಮಯವಾಗಿದೆ. ಸೈನಿಕರು ಕತ್ತಲೆಯಲ್ಲೂ ಸಂದೇಶಗಳನ್ನು ಓದಲು ನೆರವಾಗುವ ಉದ್ದೇಶದಿಂದ ಸಿದ್ಧವಾಗುತ್ತಿದ್ದ ರಾತ್ರಿ ಬರಹ ಅಥವಾ 'ನೈಟ್ ರೈಟಿಂಗ್' ಎಂಬ ವ್ಯವಸ್ಥೆ ಬ್ರೈಲ್ ಲಿಪಿಗೆ ಪ್ರೇರಣೆ ನೀಡಿತು ಎನ್ನಲಾಗಿದೆ. ಲೂಯಿ ಬ್ರೈಲ್‌ನ ಜನ್ಮದಿನವಾದ ಜನವರಿ ೪ನೇ ತಾರೀಕನ್ನು ವಿಶ್ವಸಂಸ್ಥೆ ವಿಶ್ವ ಬ್ರೈಲ್ ದಿನವೆಂದು ಗುರುತಿಸಿ ಗೌರವಿಸಿದೆ.

ಮೊದಲಿಗೆ ಫ್ರೆಂಚ್ ಭಾಷೆಗೆ ಅಳವಡಿಸಲಾದ ಬ್ರೈಲ್ ಲಿಪಿ ಇದೀಗ ಕನ್ನಡವೂ ಸೇರಿದಂತೆ ಜಗತ್ತಿನ ಅನೇಕ ಭಾಷೆಗಳನ್ನು ಪ್ರತಿನಿಧಿಸುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿನ ಮಾಹಿತಿ ಫಲಕಗಳಲ್ಲಿ ಬ್ರೈಲ್ ಲಿಪಿಗೂ ಸ್ಥಾನ ದೊರೆತಿದೆ.

ಮಾಹಿತಿ ತಂತ್ರಜ್ಞಾನದತ್ತಲೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿರುವ ಈ ಲಿಪಿಯ ಫಾಂಟುಗಳು, ಅವನ್ನು ಮುದ್ರಿಸಬಲ್ಲ ಪ್ರಿಂಟರುಗಳೂ ಇವೆ. ಅಷ್ಟೇ ಅಲ್ಲ, ಬರಹವನ್ನು ಬದಲಾಯಿಸಬಹುದಾದ ಬ್ರೈಲ್ ಫಲಕಗಳು (Refreshable Braille Displays), ಬ್ರೈಲ್ ಲಿಪಿಯಲ್ಲಿ ಬರೆದುಕೊಳ್ಳಲು ನೆರವಾಗುವ ಸಾಧನಗಳು (Braille Note Takers), ಬ್ರೈಲ್ ಹಾಗೂ ಇತರ ಲಿಪಿಗಳ ನಡುವೆ ಕೊಂಡಿಯಂತೆ ಕೆಲಸಮಾಡುವ ಪರಿವರ್ತಕಗಳೂ (Converters) ರೂಪುಗೊಂಡಿವೆ.

logo
ಇಜ್ಞಾನ Ejnana
www.ejnana.com