ಡಾ. ಬಿ. ಜಿ. ಎಲ್. ಸ್ವಾಮಿ
ಡಾ. ಬಿ. ಜಿ. ಎಲ್. ಸ್ವಾಮಿಖಾಸಗಿ ಸಂಗ್ರಹದಿಂದ

ಪ್ರಾಣಿಪ್ರಪಂಚದಲ್ಲಿ ಬಿಜಿಎಲ್

ಅಂತಾರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ, ಲೇಖಕ ಡಾ. ಬಿಜಿಎಲ್ ಸ್ವಾಮಿ ಕೆಲವು ಸಂದರ್ಭಗಳಲ್ಲಿ ಸಸ್ಯಗಳ ಸಹವಾಸ ಬಿಟ್ಟು ಪ್ರಾಣಿಗಳೊಡನೆಯೂ ಒಡನಾಡಬೇಕಾಗಿ ಬಂದಿತ್ತು. ಅಂತಹ ಎರಡು ಹಾಸ್ಯಮಯ ಪ್ರಸಂಗಗಳ ವಿವರ ಇಲ್ಲಿದೆ.

ಡಾ. ಬಿ. ಜಿ. ಎಲ್. ಸ್ವಾಮಿಯವರು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯ. ಸಸ್ಯವಿಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಧ್ಯಯನ ಪ್ರವಾಸಕ್ಕೆಂದು ಅವರು ಪ್ರತಿವರ್ಷವೂ ಅರಣ್ಯಪ್ರದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಪ್ರವಾಸ ಹೋದಾಗಲೆಲ್ಲ ವಿವಿಧ ಬಗೆಯ ಸಸ್ಯಗಳ ಮಾದರಿ ಸಂಗ್ರಹಿಸಿಕೊಂಡು ಬರುವುದು ಸಂಪ್ರದಾಯ. ಒಣ ಸಸ್ಯ ಸಂಗ್ರಹಾಲಯಕ್ಕೆ, ತರಗತಿಗಳ ಉಪಯೋಗಕ್ಕೆ, ಸಸ್ಯವಿಜ್ಞಾನ ಹಾಗೂ ರಸಾಯನ ವಿಜ್ಞಾನ ಸಂಬಂಧಿತ ಸಂಶೋಧನೆಗಳಿಗೆಲ್ಲ ಈ ಸಂಗ್ರಹ ಬಳಕೆಯಾಗುತ್ತಿತ್ತು.

ಹೀಗೊಂದು ವರ್ಷ ಪ್ರವಾಸದ ಸಂದರ್ಭದಲ್ಲಿ ಸಾಮಾನ್ಯಕ್ಕಿಂತ ಹೆಚ್ಚೇ ಎನ್ನಿಸುವಷ್ಟು ಪ್ರಮಾಣದ ಸಸ್ಯಸಾಮಗ್ರಿ ಸಂಗ್ರಹವಾಯಿತು. ಸಂಗ್ರಹವಾದದ್ದನ್ನೆಲ್ಲ ಹೊರುವ ಕೆಲಸವಿತ್ತಲ್ಲ, ಅದಕ್ಕಾಗಿ ಇಬ್ಬರು ಕೂಲಿಗಳ ಜಾಗದಲ್ಲಿ ನಾಲ್ವರನ್ನು ಗೊತ್ತುಮಾಡಿಕೊಳ್ಳುವ ಅನಿವಾರ್ಯತೆ ಬಂತು. ಇದರಿಂದಾಗಿ ಸಸ್ಯಸಂಗ್ರಹವೇನೋ ಸಮಸ್ಯೆಯಿಲ್ಲದೆ ಕಾಲೇಜಿಗೆ ಬಂತು; ಆದರೆ ಪ್ರವಾಸದಿಂದ ಮರಳಿದ ಸ್ವಾಮಿಯವರಿಗೆ ಸಮಸ್ಯೆ ಶುರುವಾಯಿತು.

ಅವರು ಪ್ರಾಣಿಪ್ರಪಂಚದ ಗೋಜಲಿನಲ್ಲಿ ಸಿಕ್ಕಿಕೊಂಡ ಮೊದಲ ಪ್ರಸಂಗ ಶುರುವಾಗುವುದೇ ಇಲ್ಲಿ.

ಕತ್ತೆಯ ಕೊಟೇಶನ್

ಪ್ರವಾಸ ವೆಚ್ಚದ ವಿವರಗಳನ್ನು ನೋಡುತ್ತಿದ್ದ ಹಾಗೆಯೇ ಸ್ವಾಮಿಯವರ ಮೇಲಧಿಕಾರಿಗೆ ಕಣ್ಣು ಕೆಂಪಾಯಿತು, ಆತನ ಕಚೇರಿಯಿಂದ ಸ್ವಾಮಿಯವರತ್ತ ಟಿಪ್ಪಣಿಗಳು ಹಾರಿಬರುವುದು ಪ್ರಾರಂಭವಾಯಿತು. ಕೂಲಿಯಾಳುಗಳಿಗೆ ದುಡ್ಡುಕೊಟ್ಟದ್ದು ಯಾಕೆ, ಅವರ ದಿನಗೂಲಿಯನ್ನು ಯಾವ ಆಧಾರದ ಮೇಲೆ ನಿರ್ಧರಿಸಿದಿರಿ ಎಂಬಂತಹ ಪ್ರಶ್ನೆಗಳಿಗೆ ಪದೇ ಪದೇ ಉತ್ತರಿಸಿ ಬೇಸತ್ತ ಸ್ವಾಮಿಯವರು ಕಡೆಗೆ "ದಿನಗೂಲಿಯನ್ನೇ ಕೊಡದೆ ಸರ್ಕಾರಕ್ಕೆ ಆ ಹಣವನ್ನು ಉಳಿತಾಯ ಮಾಡುವ ದೃಷ್ಟಿಯಿಂದ ನಮ್ಮ ಡಿಪಾರ್ಟ್‌ಮೆಂಟಿಗೆ ಒಂದು ಜತೆ ಕತ್ತೆಗಳನ್ನು ಕೊಂಡುಕೊಳ್ಳಬಹುದೆಂದು ಸಲಹೆಮಾಡುತ್ತೇನೆ. ಈ ಪ್ರಾಣಿಗಳು ಸದ್ದಿಲ್ಲದೆ ಹೊರೆ ಹೊರುತ್ತವೆ. ದಿನಗೂಲಿಯನ್ನೂ ಕೇಳುವುದಿಲ್ಲ" ಎನ್ನುವ ಉತ್ತರ ಕಳುಹಿಸಿದರು.

ಈ ಸೂಚನೆಯ ಹಿಂದಿನ ವ್ಯಂಗ್ಯ ಸ್ವಾಮಿಯವರ ಮೇಲಧಿಕಾರಿಗೆ ಅರ್ಥವಾಗಲಿಲ್ಲ. ಆತ ಅದನ್ನು ಸರಕಾರದ ಮಂಜೂರಾತಿಗೆಂದು ಕಳುಹಿಸಿಬಿಟ್ಟ! ಇಷ್ಟರಲ್ಲಿ ಮುಂದಿನ ಪ್ರವಾಸದ ಸಮಯವೂ ಬಂದುಬಿಟ್ಟಿತ್ತು; ಕತ್ತೆಯ ವಿಷಯ ಸುಲಭದಲ್ಲಿ ಬಗೆಹರಿಯದೆನ್ನುವುದನ್ನು ಅರಿತ ಸ್ವಾಮಿಯವರು ದಿನಗೂಲಿ ಪದ್ಧತಿಯನ್ನು ತಾತ್ಕಾಲಿಕವಾಗಿ ಮುಂದುವರೆಸಲು ಅನುಮತಿ ಪಡೆದುಕೊಂಡು ನಿರಾಳರಾದರು. ಪ್ರವಾಸವನ್ನೂ ಮುಗಿಸಿಕೊಂಡು ಬಂದರು.

ಆನಂತರದ ಒಂದು ದಿನ "ಕತ್ತೆಗಳನ್ನು ಕೊಂಡುಕೊಳ್ಳಬಹುದು" ಎನ್ನುವ ಅನುಮತಿ ಇದ್ದಕ್ಕಿದ್ದಂತೆ ಸರಕಾರದಿಂದ ಬಂದುಬಿಟ್ಟಿತು. ಕತ್ತೆ ಮಾರುವವರಿಂದ ಕಾಂಪಿಟೆಟಿವ್ ಕೊಟೇಶನ್ ತರಿಸಿ ಎನ್ನುವ ಸೂಚನೆ ಅವರ ಮೇಲಧಿಕಾರಿಯ ಕಡೆಯಿಂದ ಸ್ವಾಮಿಯವರಿಗೆ ಬಂತು. ಸಾಕಷ್ಟು ಯೋಚಿಸಿದ ನಂತರ ಪಶುವೈದ್ಯ ಇಲಾಖೆಯನ್ನು ಕೇಳುವುದು ಎನ್ನುವ ತೀರ್ಮಾನವಾಯಿತು.

ಬಾಟನಿ ಪಾಠಕ್ಕೂ ಕತ್ತೆಗೂ ಏನು ಸಂಬಂಧ ಎಂದು ತಲೆಕೆಡಿಸಿಕೊಂಡ ಆ ಇಲಾಖೆಯ ಅಧಿಕಾರಿಗಳು ಸ್ವಾಮಿಯವರನ್ನೂ ಅವರ ಮೇಲಧಿಕಾರಿಯನ್ನೂ ಕರೆಸಿ ವಿಚಾರಿಸಿದರು. ಸ್ವಾಮಿ ಸಲಹೆಯ ಹಿಂದಿನ ವ್ಯಂಗ್ಯ ಅರ್ಥಮಾಡಿಕೊಂಡು ಕೇಕೆಹಾಕಿ ನಕ್ಕರು. "ಕತ್ತೆಯ ಕೊಟೇಶನ್ ಕೊಡಿಸುವುದು ಕಷ್ಟ; ನಮ್ಮಲ್ಲಿ ಸಂಶೋಧನೆಗೆಂದು ಇರಿಸಿಕೊಂಡಿರುವ ಕತ್ತೆಗಳಲ್ಲೇ ಎರಡನ್ನು ಬೇಕಿದ್ದರೆ ನಿಮಗೆ ಮಾರಬಲ್ಲೆವು" ಎನ್ನುವ ಉತ್ತರ ಅವರಿಂದ ಸ್ವಾಮಿಯವರ ಮೇಲಧಿಕಾರಿಗೆ ಸಂದಿತು.

ಆತ ಅದಕ್ಕೆ ಒಪ್ಪಿದ ಒಂದೇ ವಾರದಲ್ಲಿ ಕತ್ತೆಗಳು ರೆಡಿ ಎನ್ನುವ ಸಂದೇಶ ಕಾಲೇಜನ್ನು ಮುಟ್ಟಿತು. "ಕತ್ತೆಗಳನ್ನು ಕರೆತರಲು ವ್ಯವಸ್ಥೆಮಾಡಿ" ಎನ್ನುವ ಸೂಚನೆಯೊಡನೆ ಈ ಸಂದೇಶ ಮೇಲಧಿಕಾರಿಯಿಂದ ಸ್ವಾಮಿಯವರತ್ತ ಬಂತು. ನಾಲ್ಕೈದು ಮೈಲಿ ದೂರದಿಂದ ಕತ್ತೆಗಳನ್ನು ಕರೆತರುವುದು ಹೇಗೆ ಎನ್ನುವುದರಿಂದ ಪ್ರಾರಂಭಿಸಿ ಅವನ್ನು ಕರೆತಂದಮೇಲೆ ಎಲ್ಲಿ ಇಟ್ಟುಕೊಳ್ಳುವುದು, ಅವಕ್ಕೆ ತಿನ್ನಲು ಏನನ್ನು ಕೊಡುವುದು ಎಂಬೆಲ್ಲ ಪ್ರಶ್ನೆಗಳು ಸ್ವಾಮಿಯವರ ಎದುರಿಗೆ ಬಂದವು. ಮೇಲಧಿಕಾರಿಗೆ ಈ ತಾಪತ್ರಯವನ್ನೆಲ್ಲ ವಿವರಿಸಿ ಗಾರ್ದಭ ಪ್ರಸಂಗವನ್ನು ಇಲ್ಲಿಗೇ ಮುಗಿಸಬಹುದಲ್ಲ ಎಂದು ಕೇಳಿದರೂ ಒಪ್ಪಲು ಅವನ ಅಹಂಕಾರ ಬಿಡಬೇಕಲ್ಲ! ಕತ್ತೆಗಳಿಗೆ ಏನು ವ್ಯವಸ್ಥೆ ಬೇಕು ವಿವರವಾಗಿ ಹೇಳಿ ಎನ್ನುವ ಇನ್ನೊಂದು ಟಿಪ್ಪಣಿ ಸ್ವಾಮಿಯವರತ್ತ ಹಾರಿಬಂತು.

ಕತ್ತೆಗಳನ್ನು ಡಿಪಾರ್ಟ್‌ಮೆಂಟಿನಲ್ಲಿ ಇಟ್ಟುಕೊಳ್ಳಲು ಸ್ಥಳಾವಕಾಶವೂ ಇಲ್ಲ, ಹಾಗೊಮ್ಮೆ ಇಟ್ಟುಕೊಂಡರೆ ಅಲ್ಲಿರುವ ವಸ್ತುಗಳಿಗೆ ಉಳಿಗಾಲವೂ ಇಲ್ಲ. ಹಾಗೆಂದು ಅವನ್ನು ಸ್ವೇಚ್ಛೆಯಾಗಿ ಬಿಡುವಂತೆಯೂ ಇಲ್ಲ. ಆದ್ದರಿಂದ ಕತ್ತೆಗಳಿಗೊಂದು ವಸತಿಗೃಹ, ಮೇವು ಒದಗಿಸಲು ಹಣ ಹಾಗೂ ಅವನ್ನು ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕನನ್ನು ಒದಗಿಸುವಂತೆ ಸ್ವಾಮಿ ತಮ್ಮ ಮೇಲಧಿಕಾರಿಯನ್ನು ಕೇಳಿದರು. ಇದೆಲ್ಲ ಇತ್ಯರ್ಥವಾಗುವ ತನಕ ದಿನಗೂಲಿ ಪದ್ಧತಿಯನ್ನೇ ಮುಂದುವರೆಸುವಂತೆ ಇನ್ನೊಂದು ಅನುಮತಿ ಸಿಕ್ಕಿತು. ಹೊಸದೊಂದು ಗಿಡವನ್ನು ಗುರುತಿಸಿ ಹೊಸ ದಾಖಲೆ ರೂಪಿಸಿದ ಪ್ರವಾಸವೂ ಮುಕ್ತಾಯವಾಯಿತು.

ಇಷ್ಟರಲ್ಲಿ ಕಾಲೇಜಿಗೆಂದು ಆರಿಸಿಟ್ಟಿದ್ದ ಕತ್ತೆಜೋಡಿಯ ಹೆಣ್ಣುಕತ್ತೆಗೆ ಮರಿಹುಟ್ಟಿ ಕತ್ತೆಸಂಸಾರ ಮೂರಕ್ಕೇರಿತ್ತು. ಕತ್ತೆಗಳನ್ನು ಆದಷ್ಟು ಬೇಗ ಕರೆದೊಯ್ಯಿರಿ ಎಂಬ ಒತ್ತಾಯವೂ ಪಶುವೈದ್ಯ ಇಲಾಖೆಯ ಕಡೆಯಿಂದ ಬರುತ್ತಿತ್ತು. ಮುಂದಿನ ಪ್ರವಾಸಕ್ಕೆ ಸಿದ್ಧವಾಗುತ್ತಿದ್ದ ಸ್ವಾಮಿ ಕತ್ತೆಗಳನ್ನು ಕರೆದೊಯ್ಯಲು ರೈಲಿನಲ್ಲೊಂದು ಪ್ರತ್ಯೇಕ ಬೋಗಿ ಕಾಯ್ದಿರಿಸಲು ದುಡ್ಡುಕೇಳಿದರೋ ಇಲ್ಲವೋ ದಿನಗೂಲಿ ಪದ್ಧತಿಯನ್ನೇ ಮುಂದುವರೆಸಲು ಅನುಮತಿ ಅವರು ಕೇಳದೆಯೇ ಬಂದುಬಿಟ್ಟಿತು.

ಕತ್ತೆಗಳ ಗೊಂದಲ ಬಗೆಹರಿಯುವಷ್ಟರಲ್ಲಿ ಇನ್ನೊಂದು ಪ್ರವಾಸವೂ ಮುಗಿಯಿತು. ಮುಂದಿನ ಪ್ರವಾಸಕ್ಕೂ ಅನುಮತಿ ಬಂತು. ಆದರೆ ಸ್ವಾಮಿ ಮತ್ತವರ ವಿದ್ಯಾರ್ಥಿಗಳು ಈ ಪ್ರವಾಸದಲ್ಲಿರುವಾಗಲೇ ಪಶುವೈದ್ಯ ಇಲಾಖೆಗೆ ಬಂದ ಹೊಸ ಡೈರೆಕ್ಟರೊಬ್ಬರು ಮೂರು ಕತ್ತೆಗಳನ್ನೂ ಕಾಲೇಜಿಗೆ ಕಳುಹಿಸಿಬಿಟ್ಟರು. ಕಾಲೇಜಿನಲ್ಲಿ ಅದೇನು ವ್ಯವಸ್ಥೆಯಾಗಿತ್ತೋ ಏನೋ ಆ ದಿನ ರಾತ್ರಿಯೇ ಒಂದು ಕತ್ತೆ ಓಡಿಹೋಗಿಬಿಟ್ಟಿತು. ಮರುದಿನ ಇನ್ನೊಂದೂ ಅದೇ ಹಾದಿ ಹಿಡಿಯಿತು. ಮೂರನೆಯ ಕತ್ತೆಯನ್ನು ಯಾರೋ ಒಬ್ಬ ಕಳವು ಮಾಡಲು ಯತ್ನಿಸಿ ಆ ಕತ್ತೆಯ ಜೊತೆಗೇ ಪೋಲೀಸ್ ಠಾಣೆ ಸೇರಿದ.

ಇಷ್ಟೆಲ್ಲ ಆದಮೇಲೆ ಮೇಲಧಿಕಾರಿ ಸ್ವಾಮಿಯವರಿಗೆ ಟೆಲಿಗ್ರಾಮ್ ಕೊಟ್ಟು ಪ್ರವಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಬರುವಂತೆ ಮಾಡಿದ. ಹೇಗೋ ಈ ಗಾರ್ದಭೋಪಾಖ್ಯಾನ ಒಂದು ಹಂತಕ್ಕೆ ಬಂದದ್ದರಿಂದ ಸ್ವಾಮಿ ಹೊಟ್ಟೆಬಿರಿಯುವಂತೆ ನಕ್ಕು ಹಗುರಾದರು.

ಕೋತಿ ಹುಡುಕಲು ಹೊರಟಿದ್ದು

ಮೇಲಧಿಕಾರಿಯ ಅಹಮ್ಮಿನಿಂದಾಗಿ ಕತ್ತೆಕಾಟ ಅನುಭವಿಸಿದ ಸ್ವಾಮಿಯವರನ್ನು ಇನ್ನೊಂದು ಹಾಸ್ಯಮಯ ಸನ್ನಿವೇಶದಲ್ಲಿ ಸಿಲುಕಿಸಿದ್ದು ಕೋತಿ.

ಪ್ರವಾಸದ ಸಂದರ್ಭದಲ್ಲಿ ಸಂಗ್ರಹಿಸುವ ಸಸ್ಯಸಾಮಗ್ರಿ ಯಾವಾಗಲೂ ಸುಲಭವಾಗಿ ಸಿಗಬೇಕೆಂದೇನೂ ಇಲ್ಲ. ಎತ್ತರದಲ್ಲಿರುವ ಹೂಕಾಯಿಗಳನ್ನೋ ದೊಡ್ಡ ಮರಗಳ ಮೇಲೆ ಬೆಳೆಯುವ ಪರಾವಲಂಬಿ ಸಸ್ಯಗಳನ್ನೋ ಸಂಗ್ರಹಿಸುವುದು ನಿಜಕ್ಕೂ ಕಷ್ಟದ ಕೆಲಸ. ಮರ ಏರುವುದರಲ್ಲಿ ಪರಿಣತರಾದವರು ಸಿಗದಿದ್ದಾಗ ಇಂತಹ ಸಾಮಗ್ರಿಯನ್ನು ಸಂಗ್ರಹಿಸುವುದು ಸ್ವಾಮಿಯವರ ತಂಡಕ್ಕೆ ನಿಜಕ್ಕೂ ಕಷ್ಟದ ಕೆಲಸವಾಗುತ್ತಿತ್ತು.

ಈ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದ ಸ್ವಾಮಿಯವರಿಗೆ ಆಗ್ನೇಯ ಏಷ್ಯಾದಲ್ಲಿ ಇಂತಹ ಸಾಮಗ್ರಿ ಸಂಗ್ರಹಿಸುವುದಕ್ಕಾಗಿ ಕೋತಿಗಳನ್ನು ಪಳಗಿಸಿಟ್ಟುಕೊಂಡಿದ್ದ ಉದಾಹರಣೆಯೊಂದು ದೊರೆಯಿತು (ತೆಂಗಿನಕಾಯಿ ಕೀಳುವುದಕ್ಕೆ, ದೈಹಿಕ ಸಮಸ್ಯೆಗಳಿರುವವರಿಗೆ ನೆರವಾಗುವುದಕ್ಕೆಲ್ಲ ಕೋತಿಗಳನ್ನು ಪಳಗಿಸಿ ಬಳಸುವುದು ಇಂದಿಗೂ ಪ್ರಚಲಿತದಲ್ಲಿರುವ ಅಭ್ಯಾಸ). ಅದನ್ನು ಪ್ರಯತ್ನಿಸಿ ನೋಡುವ ಉತ್ಸಾಹವೂ ಮೂಡಿತು. ಹಿಂದಿನ ಬಾರಿ ಕತ್ತೆಗಳೊಡನೆ ಆದ ಅನುಭವದ ಹಿನ್ನೆಲೆಯಲ್ಲಿ ಸರಕಾರದ ಮೂಲಕ ಕೋತಿ ಕೊಳ್ಳುವ ಪ್ರಯತ್ನ ಬೇಡವೆಂದು ಅವರು ತೀರ್ಮಾನಿಸಿದರು.

ಸ್ವಂತವಾಗಿ ಕೋತಿ ಹುಡುಕಲು ಹೊರಟ ಸ್ವಾಮಿ ಮೊದಲಿಗೆ ಸಂಪರ್ಕಿಸಿದ್ದು ಕೋತಿ ಕುಣಿಸುವವರನ್ನು. ಸರಕಾರಿ ಕೆಲಸ ಕೊಡಿಸಿದರೆ ತನ್ನ ಕೋತಿಯನ್ನೇ ಕೊಡಲು ಒಬ್ಬ ಆಸಾಮಿ ಸಿದ್ಧನಾದರೆ, ಇನ್ನೊಬ್ಬನಿಗೆ ಇವರು ಕೋತಿ ಪಳಗಿಸಿಕೊಳ್ಳುವುದು ಹೇಗೆ ಎಂದು ಕೇಳಿದ್ದು ನೋಡಿ ತನ್ನ ವೃತ್ತಿರಹಸ್ಯವನ್ನು ತಿಳಿದುಕೊಂಡು ತನ್ನೊಡನೆ ಸ್ಪರ್ಧೆಗಿಳಿಯುತ್ತಾರೋ ಏನೋ ಎನ್ನುವ ಗುಮಾನಿ ಮೂಡಿತು. ಆದರೂ ಧೃತಿಗೆಡದೆ ಕೋತಿಯಾಡಿಸುವವರ ಜೊತೆ ಸಾಕಷ್ಟು ಸಮಯ ಕಳೆದಿದ್ದಕ್ಕೆ ಸ್ವಾಮಿ ತಮ್ಮ ಶ್ರೀಮತಿಯವರಿಂದ ಬೈಸಿಕೊಳ್ಳಬೇಕಾಗಿ ಬಂತೇ ಹೊರತು ಕೋತಿ ಪಳಗಿಸುವ ಬಗ್ಗೆ ಯಾವ ಮಾಹಿತಿಯೂ ಸಿಗಲಿಲ್ಲ!

ಸಾಕಷ್ಟು ಪುಸ್ತಕಗಳನ್ನು ತಿರುವಿಹಾಕಿದ್ದೂ ವ್ಯರ್ಥವಾಯಿತು, ಪ್ರಾಣಿವಿಜ್ಞಾನದ ಅಧ್ಯಾಪಕರಿಂದಲೂ ಸ್ವಾಮಿಯವರಿಗೆ ಸಹಾಯ ದೊರಕಲಿಲ್ಲ. ಆದರೆ ಪೋಲೀಸ್ ಇಲಾಖೆಯಲ್ಲಿ ನಾಯಿಗಳನ್ನು ತರಬೇತು ಮಾಡುವವರನ್ನು ಸಂಪರ್ಕಿಸಬಹುದೆಂಬ ಐಡಿಯಾ ಸಿಕ್ಕಿತು. ಹೋಗಿ ವಿಚಾರಿಸಿದಾಗ "ಏನು ಸಾರ್ ಮೇಷ್ಟರಾಗಿ ನೀವೇ ಹೀಗೆ ಕೇಳುತ್ತಿದ್ದೀರಲ್ಲ, ಮಾತುಕೇಳದ ವಿದ್ಯಾರ್ಥಿಗೆ ಕೊಟ್ಟಹಾಗೆ ಕೋತಿಗೂ ಚೆನ್ನಾಗಿ ಒದೆಕೊಟ್ಟು ಪಳಗಿಸಿ" ಎಂಬ ಸೂಚನೆ ಅಲ್ಲಿಂದ ಬಂತು. ಅದನ್ನು ಕೇಳಿಸಿಕೊಂಡ ಸ್ವಾಮಿಯವರು ಮಾತಿಲ್ಲದೆ ಸುಮ್ಮನಾದರು. ಕೋತಿ ಸಾಕುವ ಕತೆ ಅಲ್ಲಿಗೇ ಮುಕ್ತಾಯವಾಯಿತು!

ಮಾರ್ಚ್ ೮, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ. ಗಾರ್ದಭೋಪಾಖ್ಯಾನದ ವಿವರಗಳನ್ನು 'ಹಸುರು ಹೊನ್ನು' ಕೃತಿಯಲ್ಲಿ ಹಾಗೂ ಕೋತಿಯ ಕತೆಯನ್ನು 'ಬೃಹದಾರಣ್ಯಕ' ಕೃತಿಯಲ್ಲಿ ನೀವು ಓದಬಹುದು.

ಬಿಜಿಎಲ್ ಸ್ವಾಮಿಯವರ ಬರಹಗಳ ಪೈಕಿ ನಿಮ್ಮ ಅಚ್ಚುಮೆಚ್ಚಿನದು ಯಾವುದು? ಕಮೆಂಟ್ ಮಾಡಿ, ನಿಮ್ಮ ಅನಿಸಿಕೆ ಹಂಚಿಕೊಳ್ಳಿ!

Related Stories

No stories found.
logo
ಇಜ್ಞಾನ Ejnana
www.ejnana.com