ಪುಸ್ತಕ ಪರಿಚಯ: ಬೆರಳ ತುದಿಯ ಬೆರಗು
ಬೆರಳ ತುದಿಯ ಬೆರಗುejnana.com (ಮುಖಪುಟ ವಿನ್ಯಾಸ: ಡಿ. ಕೆ. ರಮೇಶ್)

ಪುಸ್ತಕ ಪರಿಚಯ: ಬೆರಳ ತುದಿಯ ಬೆರಗು

ಟಿ. ಜಿ. ಶ್ರೀನಿಧಿ ಬರೆದ 'ಬೆರಳ ತುದಿಯ ಬೆರಗು' ಕೃತಿ ಇದೀಗ ಲೋಕಾರ್ಪಣೆಯಾಗಿದೆ. ಈ ಪುಸ್ತಕದಲ್ಲಿ ಏನಿದೆ? ಪ್ರಕಾಶಕಿ ಡಾ. ಆರ್. ಪೂರ್ಣಿಮಾ ಅವರ ಮಾತುಗಳು ಇಲ್ಲಿವೆ.

ಅದೆಷ್ಟೋ ಯುಗಗಳು ಉರುಳಿದ ನಂತರ ಕಲಿಯುಗ ಬಂದಿದೆಯಂತೆ; ಇದರ ನಂತರ ಇನ್ನೊಂದು ಯುಗ ಬರಲಾರದು ಅನ್ನಿಸುತ್ತದೆ. ಏಕೆಂದರೆ ತಂತ್ರಜ್ಞಾನದಲ್ಲಿ ಏನು ಹೊಸತು ಬಂದರೂ ಅದನ್ನು ಕಲಿಯದಿದ್ದರೆ ಉಳಿಗಾಲವಿಲ್ಲ ಅನ್ನುವುದನ್ನು ಒತ್ತಿ ಹೇಳುವ ಈ ನಿರಂತರ `ಕಲಿ'ಯುಗ ಶಾಶ್ವತವಾಗಿ ಇದ್ದೇ ಇರುತ್ತದೆ. ಅತಳವಿತಳಪಾತಾಳ ಲೋಕಗಳನ್ನು ಒಂದುಗೂಡಿಸಲು ತಂತ್ರಜ್ಞಾನದ ಹರಿವು ಅರಿವುಗಳೇ ದಿವ್ಯಮಂತ್ರ. ಹಿಂದಿನ ದಿನಗಳಲ್ಲಿ, ಅಷ್ಟಿಷ್ಟು ತಿಳಿದರೂ 'ಕರತಲಾಮಲಕ', ಅಂದರೆ ಎಲ್ಲವೂ ಅಂಗೈಯಲ್ಲಿನ ನೆಲ್ಲಿಕಾಯಿ ಎಂದು ಹೊಗಳುತ್ತಿದ್ದರು. ಇಂದಿನ ದಿನಗಳಲ್ಲಿ ತಂತ್ರಜ್ಞಾನದ ನೆರವಿನಿಂದ, ಗುಂಡಗಿರುವ ಭೂಲೋಕವನ್ನೇ ನಮ್ಮ ಅಂಗೈ ಮೇಲಿನ ಒಂದು ನೆಲ್ಲಿಕಾಯಿ ಮಾಡಿಟ್ಟುಕೊಳ್ಳಬಹುದು. ಆದರೆ ಭೂಲೋಕವನ್ನು ನಮ್ಮ ಅಂಗೈಗೆ ತಂದುಕೊಳ್ಳಲು ಅದನ್ನು ಯಾರಾದರೂ ಎತ್ತಿಕೊಡಬೇಕು, ನಮ್ಮ ಭಾಷೆಯಲ್ಲಿ ನಮಗೆ ತಿಳಿಯುವ ಹಾಗೆ ಹೇಳಿಕೊಡಬೇಕು. ಕನ್ನಡದಲ್ಲಿ 'ತಂತ್ರಜ್ಞಾನದ ಶ್ರೀನಿಧಿ' ಇರುವಾಗ ಕಲಿಯಲೇನೂ ಕಷ್ಟವಿಲ್ಲ! ಅವರಂಥ ಪಕ್ಕಾ ವೈ-ಫೈ ಇರುವಾಗ ಟೆಕ್ ಲೋಕಕ್ಕೆ ನಮ್ಮನ್ನು ಕನೆಕ್ಟ್ ಮಾಡಿಕೊಳ್ಳಲು ನಮ್ಮ ಆಸಕ್ತಿಯನ್ನು ಕ್ಲಿಕ್ ಮಾಡಿಕೊಂಡರೆ ಸಾಕು.

ವಿಜ್ಞಾನ - ತಂತ್ರಜ್ಞಾನಗಳನ್ನು ದೇಸೀ ಭಾಷೆಯಲ್ಲಿ ಸರಳವಾಗಿ ಹೇಳಲು ಸಾಧ್ಯವಿಲ್ಲ, ಅದು ಕಬ್ಬಿಣದ ಕಡಲೆ ಎಂಬ ಭಾವನೆ ಈಗಲೂ ಅನೇಕರಲ್ಲಿದೆ. ಆದರೆ ಅದನ್ನು ಸುಳ್ಳು ಮಾಡುವಂತೆ ಅಂದಂದಿನ ವಿಜ್ಞಾನವನ್ನು 'ಸುಲಿದ ಬಾಳೆಯ ಹಣ್ಣಿನಂದದಿ' ನಮ್ಮ ಕೈಗಿತ್ತ ವಿಜ್ಞಾನ ಲೇಖಕರ ಪರಂಪರೆಯೇ ಕನ್ನಡದಲ್ಲಿ ಇದೆ. ಈಗಿನ ವಿಜ್ಞಾನ- ತಂತ್ರಜ್ಞಾನವನ್ನು ಕನ್ನಡದಲ್ಲೇ ಚೆನ್ನಾಗಿ ಬರೆದು ತಿಳಿಸುತ್ತಿರುವ ಹೊಸ ಲೇಖಕರ ಹುರುಪಿನ ಪಡೆಯೂ ಬೆಳೆಯುತ್ತಿದೆ. ಈ ಪೈಕಿ ಟಿ.ಜಿ. ಶ್ರೀನಿಧಿ ಅವರಂಥ ಮೋಸ್ಟ್ ಅಪ್‌ಡೇಟೆಡ್ ವರ್ಷನ್‌ಗಳೂ ಇದ್ದಾರೆ! ತಂತ್ರಜ್ಞಾನದಲ್ಲಿ 'ಬದಲಾವಣೆಯೊಂದೇ ಶಾಶ್ವತ' ಎನ್ನುವುದನ್ನು ಅವರು ಚೆನ್ನಾಗಿ ಬಲ್ಲರು; ಆದ್ದರಿಂದಲೇ ಅವರ ಲೇಖನಗಳು ಹಳೆಯದನ್ನು ನೆನಪಿಸುತ್ತ, ಇಂದಿನದನ್ನು ವಿವರಿಸುತ್ತ, ನಾಳೆಯ ಬದಲಾವಣೆಯನ್ನೂ ಸೂಚಿಸುತ್ತವೆ.

ವಿಜ್ಞಾನ ಸೇರಿ ಎಲ್ಲ ಬರವಣಿಗೆಯಲ್ಲೂ 'ತಿಳಿಸುವ ವಿಷಯ ಮತ್ತು ಹೇಳುವ ವಿಧಾನ' ಎರಡೂ ಮುಖ್ಯ ಎಂಬ ಅಂಶವನ್ನು ಶ್ರೀನಿಧಿ ಎಂದೂ ಮರೆಯುವುದಿಲ್ಲ. 'ಬೆರಳ ತುದಿಯ ಬೆರಗು' ಕೃತಿಯ ಐದು ವಿಭಾಗಗಳಲ್ಲಿ ಹರಡಿಕೊಂಡಿರುವ ಲೇಖನಗಳನ್ನು ಓದಿದರೆ ಈ ಮಾತಿಗೆ ಒಳ್ಳೆಯ ಮಾದರಿಗಳು ಕಾಣುತ್ತವೆ. ಅತಿ ಕ್ಲಿಷ್ಟ ಸಂಗತಿಗಳನ್ನು ಅತ್ಯಂತ ಸರಳವಾಗಿ ಹೇಳುವುದು ಹೇಗೆ ಎನ್ನುವುದಕ್ಕೂ ಹಲವು ಉದಾಹರಣೆಗಳು ಸಿಗುತ್ತವೆ. ತಂತ್ರಜ್ಞಾನ, ತಾಂತ್ರಿಕತೆಯಂಥ ಗಂಭೀರ ವಿಚಾರಗಳನ್ನು ತಿಳಿಹಾಸ್ಯದ ಲೇಪದೊಡನೆ ಮುಂದಿಡುವ ಅವರ ಶೈಲಿ, ಕನ್ನಡದ ಎಲ್ಲ ಪತ್ರಿಕೆಗಳಿಗೆ ಅಚ್ಚುಮೆಚ್ಚು. ಏಕೆಂದರೆ ಇಂಥ ಸರಳ, ಜೀವಂತ ವಿಧಾನ, ಅಷ್ಟೊಂದು ವಿಜ್ಞಾನ ಕಲಿಯದ ಓದುಗರಿಗೂ ಎಷ್ಟೊಂದು ಕಲಿಸುತ್ತದೆ ಅನ್ನುವುದು ಬಹಳ ಮುಖ್ಯ.

ಇವೆಲ್ಲದರ ಜೊತೆಗೆ ತಂತ್ರಜ್ಞಾನ ಅನ್ನುವುದರಲ್ಲಿ ಸಾಮಾಜಿಕ ಪ್ರಜ್ಞೆಯ ಒಳತಂತು ಇದ್ದೇ ಇರುತ್ತದೆ ಅಥವಾ ಅದು ನಿಸ್ತಂತುವಾಗಿಯೇ ಅದರೊಳಗೆ ಇರಲೇಬೇಕು ಎಂಬ ಜವಾಬ್ದಾರಿಯ ಅರಿವು ಇಲ್ಲಿರುವ ಎಲ್ಲ ಲೇಖನಗಳಿಂದ ಸ್ಪಷ್ಟವಾಗುತ್ತದೆ. ತಂತ್ರಜ್ಞಾನದಲ್ಲಿ ಹೊಸದೇನು ಬಂದರೂ ಅದನ್ನು ಬೇಡವಾದ ವಿಚಾರಗಳಿಗೆ, ಬೇರೆಯವರಿಗೆ ತೊಂದರೆ ಕೊಡುವುದಕ್ಕೆ ಬಳಸಿಕೊಳ್ಳುವ ಸಮಸ್ಯೆಯೂ ಅದರೊಳಗೆ ಇನ್‌ಬಿಲ್ಟ್ ಆಗಿ ಇರುತ್ತದಲ್ಲ, ಅದರ ಬಗ್ಗೆ ಓದುಗರಿಗೆ ಎಚ್ಚರಿಕೆ ಮೂಡಿಸುವ ಅಗತ್ಯದ ಕೆಲಸವನ್ನು ಇವು ಮಾಡುತ್ತವೆ.

ಕನ್ನಡದ ಮಕ್ಕಳಿಗೆ ಪುಸ್ತಕಗಳ ಮೂಲಕ ವ್ಯಾಕರಣ ಕಲಿಸುವ, ನಾಡಿನ ಶಿಲ್ಪವೈಭವವನ್ನು ಕ್ಯಾಮರಾದಲ್ಲಿ ಸುಂದರವಾಗಿ ದಾಖಲಿಸುವ ಕನ್ನಡ ಕಾಯಕದ ಅಪ್ಪ ಟಿ.ಎಸ್. ಗೋಪಾಲ್, ದೇಶವಿದೇಶಗಳ ಸಾವಿರಾರು ಸಾಧಕರನ್ನು ಕನ್ನಡ ಸಂಪದವಾಗಿ ಪರಿಚಯಿಸುವ ಕನ್ನಡ ಕೈಂಕರ್ಯದ ದುಬೈ ನಿವಾಸಿ ಚಿಕ್ಕಪ್ಪ ತಿರು ಶ್ರೀಧರ - ಇವರಿಬ್ಬರ ಕನ್ನಡ ಬದ್ಧತೆ ಶ್ರೀನಿಧಿಯಲ್ಲೂ ಅದ್ಭುತವಾಗಿ ಮುಂದುವರೆಯುತ್ತಿರುವುದು ನನಗಂತೂ ಬಹಳ ಮೆಚ್ಚುಗೆಯ ವಿಚಾರ. ನಮ್ಮೆಲ್ಲರ ತಂತ್ರಜ್ಞಾನದ ಅರಿವನ್ನು ಹೆಚ್ಚಿಸುವ ಉತ್ಸಾಹದಿಂದ ಬರೆಯುತ್ತಿರುವ ಶ್ರೀನಿಧಿಯ ಹಲವು ಆಯಾಮಗಳ ಇಜ್ಞಾನಕ್ಕೆ ಅಭಿನಂದನೆ.

ಬೆರಳ ತುದಿಯ ಬೆರಗು

ಲೇಖಕರು: ಟಿ. ಜಿ. ಶ್ರೀನಿಧಿ

ಪ್ರಕಾಶಕರು: ವಿಕಾಸ ಪ್ರಕಾಶನ, ಬೆಂಗಳೂರು

128 ಪುಟಗಳು, ಬೆಲೆ: ರೂ. 120

ಆನ್‍ಲೈನ್ ಖರೀದಿಗೆ: ಬುಕ್ಸ್‌ಲೋಕ.ಕಾಂ

Related Stories

No stories found.