೧೯೩೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾದ ಬೆಳ್ಳಾವೆಯವರ ಕೃತಿ 'ಜೀವ ವಿಜ್ಞಾನ'
೧೯೩೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾದ ಬೆಳ್ಳಾವೆಯವರ ಕೃತಿ 'ಜೀವ ವಿಜ್ಞಾನ'ejnana.com

ಕನ್ನಡ ವಿಜ್ಞಾನ ಪತ್ರಿಕೋದ್ಯಮದ ಪಿತಾಮಹ - ಬೆಳ್ಳಾವೆ ವೆಂಕಟನಾರಣಪ್ಪ

ಡಿ. ವಿ. ಗುಂಡಪ್ಪನವರ ಮಾತುಗಳಲ್ಲೇ ಹೇಳುವುದಾದರೆ "ಕನ್ನಡದಲ್ಲಿ ವಿಜ್ಞಾನವಿದ್ಯಾಪ್ರಚಾರಕ್ಕೆ ಮಾರ್ಗದರ್ಶಕರಾದವರ ಅಗ್ರಶ್ರೇಣಿಯಲ್ಲಿದ್ದವರು" ಬೆಳ್ಳಾವೆ ವೆಂಕಟನಾರಣಪ್ಪನವರು.

ವಿವಿಧ ವಿಷಯಗಳಿಗೆ ಸಂಬಂಧಿಸಿದ ಮಾಹಿತಿಯೆಲ್ಲ ಕನ್ನಡದಲ್ಲೇ ಸಿಗುವಂತೆ ಮಾಡಲು ಹಲವು ಮಹನೀಯರು ಬಹುಕಾಲದಿಂದ ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲೊಬ್ಬರು ಬೆಳ್ಳಾವೆ ವೆಂಕಟನಾರಣಪ್ಪನವರು (೧೮೭೨-೧೯೪೩).

ಮೂಲತಃ ತುಮಕೂರು ಜಿಲ್ಲೆಯ ಬೆಳ್ಳಾವೆಯವರಾದ ವೆಂಕಟನಾರಣಪ್ಪನವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತವಿಜ್ಞಾನದ ಅಧ್ಯಾಪಕರಾಗಿದ್ದವರು, ತಮ್ಮ ಕಾಲದಲ್ಲಿ ನಡೆದ ಕನ್ನಡದ ಹಲವಾರು ಕೆಲಸಗಳ ಮುಂಚೂಣಿಯಲ್ಲಿದ್ದವರು. ವಿಜ್ಞಾನದ ಹಿನ್ನೆಲೆ ಹಾಗೂ ಕನ್ನಡದ ಕುರಿತಾದ ಪ್ರೀತಿ - ಎರಡನ್ನೂ ಸೇರಿಸಿ ಅವರು ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಭದ್ರವಾದ ಬುನಾದಿಯನ್ನು ಕಟ್ಟಿಕೊಟ್ಟರು. ಡಿ. ವಿ. ಗುಂಡಪ್ಪನವರ ಮಾತುಗಳಲ್ಲೇ ಹೇಳುವುದಾದರೆ "ಕನ್ನಡದಲ್ಲಿ ವಿಜ್ಞಾನವಿದ್ಯಾಪ್ರಚಾರಕ್ಕೆ ಮಾರ್ಗದರ್ಶಕರಾದವರ ಅಗ್ರಶ್ರೇಣಿಯಲ್ಲಿದ್ದವರು" ಬೆಳ್ಳಾವೆ ವೆಂಕಟನಾರಣಪ್ಪನವರು.

ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರಿಗೆ ವಿಜ್ಞಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಬಹಳ ಆಸಕ್ತಿ ಇತ್ತು. ಆ ಕುರಿತು ಬೆಳ್ಳಾವೆ ವೆಂಕಟನಾರಣಪ್ಪನವರ ಜೊತೆ ಅವರು ನಡೆಸಿದ ಮಾತುಕತೆಯ ಪರಿಣಾಮವಾಗಿ 'ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ'ಯ ಸ್ಥಾಪನೆಯಾಯಿತು (೧೯೧೭). ಬೆಳ್ಳಾವೆಯವರ ಗುರುಗಳೂ, ಅಂದಿನ ಮೈಸೂರು ಸಂಸ್ಥಾನದ ಪವನ ವಿಜ್ಞಾನ ಇಲಾಖೆಯ ಮುಖ್ಯಸ್ಥರೂ ಆಗಿದ್ದ ನಂಗಪುರಂ ವೆಂಕಟೇಶ ಅಯ್ಯಂಗಾರ್ಯರು ಕೂಡ ಈ ಸಮಿತಿಯಲ್ಲಿ ಸಕ್ರಿಯರಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ ಮೈಸೂರು ಸರಕಾರದಿಂದ ಸಮಿತಿಗೆ ಅಗತ್ಯವಾದ ಹಣಕಾಸಿನ ಪ್ರಾರಂಭಿಕ ನೆರವು ದೊರಕಿತು.

ವಿಜ್ಞಾನದ ವಿಷಯಗಳನ್ನು ಜನಸಾಮಾನ್ಯರಿಗೂ ತಲುಪಿಸುವುದು ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿಯ ಪ್ರಮುಖ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಸಮಿತಿಯು ಕೈಗೊಂಡ ಅತ್ಯಂತ ಮಹತ್ವದ ಚಟುವಟಿಕೆಯೇ 'ವಿಜ್ಞಾನ' ಮಾಸಪತ್ರಿಕೆಯ ಪ್ರಕಟಣೆ. ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶಯ್ಯಂಗಾರ್ಯರ ಸಂಪಾದಕತ್ವದಲ್ಲಿ ಎರಡು ವರ್ಷಗಳ ಕಾಲ (೧೯೧೮-೧೯) ಪ್ರಕಟವಾದ ಈ ಪತ್ರಿಕೆ ಕನ್ನಡದ ಮೊತ್ತಮೊದಲ ವಿಜ್ಞಾನ ಪತ್ರಿಕೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಳ್ಳಾವೆ ವೆಂಕಟನಾರಣಪ್ಪನವರು
ಬೆಳ್ಳಾವೆ ವೆಂಕಟನಾರಣಪ್ಪನವರು

ಈ ಅವಧಿಯಲ್ಲಿ ಪ್ರಕಟವಾದ ೨೪ ಸಂಚಿಕೆಗಳಲ್ಲಿ ಸುಮಾರು ೬೦ ಪ್ರಧಾನ ಲೇಖನಗಳಿದ್ದವು. ಅವುಗಳ ಜೊತೆಗೆ ನೂರಾರು ಸಣ್ಣ ಲೇಖನಗಳೂ ಅನೇಕ ಚಿತ್ರಗಳೂ 'ವಿಜ್ಞಾನ'ದಲ್ಲಿ ಪ್ರಕಟವಾಗಿದ್ದವು. ಸೂಕ್ತ ಆಕರಗಳನ್ನು ಹುಡುಕಿ ವಿಜ್ಞಾನ ವಿಷಯಗಳನ್ನು ಕಲೆಹಾಕುವುದೇ ಕಷ್ಟ ಎನ್ನುವ ಪರಿಸ್ಥಿತಿಯಿದ್ದ ಆ ಕಾಲದಲ್ಲೂ 'ವಿಜ್ಞಾನ' ಪತ್ರಿಕೆ ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸಿದ್ದು ವಿಶೇಷ. ವಿಜ್ಞಾನ ಜಗತ್ತಿನ ಆಗುಹೋಗು, ವಿಜ್ಞಾನಿಗಳ ಪರಿಚಯ, ಕುತೂಹಲಕರ ಪ್ರಶ್ನೆಗಳ ವಿಶ್ಲೇಷಣೆ, ಕೃಷಿ-ಆರೋಗ್ಯ ಕ್ಷೇತ್ರಗಳ ಮಾಹಿತಿ ಹೀಗೆ ಹಲವಾರು ಬಗೆಯ ಲೇಖನಗಳು ಈ ಪತ್ರಿಕೆಯಲ್ಲಿ ಬೆಳಕುಕಂಡಿದ್ದವು. 'ವಿವಿಧ ವಿಜ್ಞಾನ ವಿಷಯ ಸಂಗ್ರಹ' ಎಂಬ ಶೀರ್ಷಿಕೆಯಲ್ಲಿ ಅಂದು ನಡೆದಿದ್ದ ಸಂಶೋಧನೆಗಳ ಸಾರಾಂಶವೂ ಪ್ರಕಟವಾಗುತ್ತಿತ್ತು.

"ವೆಂಕಟನಾರಣಪ್ಪನವರು ಪ್ರತಿಪಾದನೆ ಮಾಡಹೊರಟ ವಿಷಯ ವಿಜ್ಞಾನ. ಅದು ಜನದ ಮನಸ್ಸಿಗೆ ಹಿಡಿಯಬೇಕಾದರೆ ಭಾಷೆ ಸುಲಭವಾಗಿರಬೇಕು, ಮತ್ತು ನಿಷ್ಕೃಷ್ಟವಾಗಿರಬೇಕು. ಈ ಉದ್ದೇಶಗಳಿಗಾಗಿ ವೆಂಕಟನಾರಣಪ್ಪನವರು ಪಟ್ಟ ಶ್ರಮ ನೋಡಿಯೇ ತಿಳಿಯಬೇಕಾದದ್ದು," ಎಂದು ಡಿ. ವಿ. ಗುಂಡಪ್ಪನವರು 'ಜ್ಞಾಪಕ ಚಿತ್ರಶಾಲೆ'ಯಲ್ಲಿ ನೆನಪಿಸಿಕೊಂಡಿದ್ದಾರೆ. ಬರವಣಿಗೆಯ ಭಾಷೆ, ಪಾರಿಭಾಷಿಕ ಶಬ್ದಗಳ ಭಾರ, ತಪ್ಪುಗಳಿಲ್ಲದ ಉತ್ತಮ ಗುಣಮಟ್ಟದ ಮುದ್ರಣ, ಕಾಲಕ್ಕೆ ಸರಿಯಾದ ಪ್ರಕಟಣೆ-ವಿತರಣೆಗಳ ಬಗ್ಗೆ ವೆಂಕಟನಾರಣಪ್ಪನವರು ಬಹಳವೇ ಕಾಳಜಿ ವಹಿಸುತ್ತಿದ್ದರಂತೆ.

ಅಂದಹಾಗೆ ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿಯ ಚಟುವಟಿಕೆಗಳು ಪತ್ರಿಕೆಯ ಪ್ರಕಟಣೆಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಸಮಿತಿಯ ವತಿಯಿಂದ ಸಾರ್ವಜನಿಕರಿಗಾಗಿ ಆಗಿಂದಾಗ್ಗೆ ವಿಜ್ಞಾನ ಉಪನ್ಯಾಸಗಳನ್ನೂ ಏರ್ಪಡಿಸಲಾಗುತ್ತಿತ್ತು. ಬೆಂಗಳೂರಿನಲ್ಲಿ ನಡೆದ ಮೊದಲ ಉಪನ್ಯಾಸದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರೂ ಭಾಗವಹಿಸಿದ್ದರಂತೆ. ಅಂದು ಭೌತವಿಜ್ಞಾನದ ಕುರಿತು ಮಾತನಾಡಿದ ಬೆಳ್ಳಾವೆ ವೆಂಕಟನಾರಣಪ್ಪನವರು 'ಮ್ಯಾಜಿಕ್ ಲ್ಯಾಂಟರ್ನ್' (ಪ್ರೊಜೆಕ್ಟರ್‌ನಂತಹ ಸಾಧನ) ಬಳಸಿ ಚಿತ್ರಗಳನ್ನು ತೋರಿಸಿದ್ದನ್ನು ಡಿ. ವಿ. ಗುಂಡಪ್ಪನವರು ನೆನಪಿಸಿಕೊಂಡಿದ್ದಾರೆ. ಈ ಉಪನ್ಯಾಸಗಳ ಮುದ್ರಿತ ರೂಪವನ್ನೂ ಸಮಿತಿಯ ವತಿಯಿಂದ ಪ್ರಕಟಿಸಲಾಗಿತ್ತು.

ತನ್ನ ಕಾಲಮಾನಕ್ಕಿಂತ ಮುಂದಿದ್ದ ಅನೇಕ ಸಾಧನೆಗಳನ್ನು ಮಾಡಿದರೂ 'ವಿಜ್ಞಾನ' ಪತ್ರಿಕೆಗೆ, ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿಯ ಚಟುವಟಿಕೆಗಳಿಗೆ ಸಾರ್ವಜನಿಕರಿಂದ ಸೂಕ್ತ ಬೆಂಬಲ ದೊರಕದೇ ಹೋದದ್ದು ವಿಷಾದದ ಸಂಗತಿ. 'ವಿಜ್ಞಾನ' ಪತ್ರಿಕೆ ಕೇವಲ ಎರಡೇ ವರ್ಷಗಳಲ್ಲಿ ನಿಂತುಹೋಗುವುದಕ್ಕೂ ಇದೇ ಕಾರಣ.

'ವಿಜ್ಞಾನ' ಪತ್ರಿಕೆ ನಿಂತುಹೋದರೂ ವೆಂಕಟನಾರಣಪ್ಪನವರ ವಿಜ್ಞಾನ ಸಂವಹನದ ಕೆಲಸಗಳು ನಿಲ್ಲಲಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ಅವರು ಅಲ್ಲಿಯೂ ವಿಜ್ಞಾನ ಸಂವಹನಕ್ಕೆ ಪ್ರೋತ್ಸಾಹ ನೀಡಿದರು. ಮೈಸೂರಿನ ಯುವರಾಜ ಶ್ರೀ ಕಂಠೀರವ ನರಸಿಂಹರಾಜ ಒಡೆಯರ ಬೆಂಬಲದಿಂದ 'ಶ್ರೀ ಕಂಠೀರವ ನರಸಿಂಹರಾಜ ಪರಿಪೋಷಿತ ಕರ್ಣಾಟಕ ವೈಜ್ಞಾನಿಕ ಗ್ರಂಥಮಾಲೆ'ಯನ್ನು ಪ್ರಾರಂಭಿಸಿ, ಅದರ ಮೊದಲ ಪ್ರಕಟಣೆಯಾಗಿ ನಂಗಪುರಂ ವೆಂಕಟೇಶ ಅಯ್ಯಂಗಾರ್ಯರ 'ಜ್ಯೋತಿರ್ವಿನೋದಿನಿ' ಕೃತಿಯನ್ನು ೧೯೩೧ರಲ್ಲಿ ಹೊರತಂದರು. ಬೆಳ್ಳಾವೆಯವರದೇ ಕೃತಿ 'ಜೀವ ವಿಜ್ಞಾನ' ೧೯೩೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾಯಿತು. ವಿಜ್ಞಾನ ಸಂವಹನದಲ್ಲಿ ಉತ್ತಮವಾದ ಇಂಗ್ಲಿಷ್-ಕನ್ನಡ ನಿಘಂಟಿನ ಪಾತ್ರವನ್ನು ಮನಗಂಡಿದ್ದ ಅವರು ಮೈಸೂರು ವಿವಿ ಇಂಗ್ಲಿಷ್-ಕನ್ನಡ ನಿಘಂಟು ಪ್ರಕಟವಾಗುವ ನಿಟ್ಟಿನಲ್ಲೂ ಶ್ರಮಿಸಿದ್ದರು (ಈ ನಿಘಂಟು ಬೆಳ್ಳಾವೆಯವರ ಮರಣಾನಂತರ ಪ್ರಕಟವಾಯಿತು). ಬೆಳ್ಳಾವೆಯವರು ವಿದ್ಯಾರ್ಥಿಗಳಿಗಾಗಿ ರಚಿಸಿದ 'ಕನ್ನಡ ಐದನೆಯ ಪುಸ್ತಕ'ದಲ್ಲೂ ಒಂದು ಭಾಗ ವಿಜ್ಞಾನಕ್ಕೆಂದೇ ಮೀಸಲಾಗಿತ್ತೆಂದು ಅವರ ಜೀವನ ಚಿತ್ರ ಬರೆದಿರುವ ಡಿ. ಲಿಂಗಯ್ಯನವರು ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಬೆಳ್ಳಾವೆಯವರ ಬಗ್ಗೆ ಬರೆದಿರುವ ಅನೇಕ ಲೇಖಕರು ತಾವು ಮಾಡುವ ಕೆಲಸದ ಕುರಿತು ಅವರಿಗಿದ್ದ ನಿಷ್ಠೆಯ ಕುರಿತು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ. "ಅವರಿಗೆ ಗೊತ್ತಾದ ಅಧಿಕಾರಸ್ಥಾನವಿರಲಿ ಇಲ್ಲದಿರಲಿ, ಅವರು ಒಂದೇ ರೀತಿಯ ಶ್ರದ್ಧೋತ್ಸಾಹಗಳಿಂದ ಕೆಲಸಮಾಡಿದವರು" ಎಂದು ಡಿ. ವಿ. ಗುಂಡಪ್ಪನವರು ಹೇಳಿದರೆ, ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿ ಕೋಣೆಯನ್ನು ಬೆಳ್ಳಾವೆಯವರೇ ಗುಡಿಸುತ್ತಿದ್ದದ್ದನ್ನು ತಾವು ಸ್ವತಃ ಕಂಡಿದ್ದಾಗಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದಿದ್ದಾರೆ. ಕನ್ನಡದ ಕೆಲಸಗಳ ಬಗ್ಗೆ, ವಿಜ್ಞಾನವನ್ನು ಕನ್ನಡದಲ್ಲಿ ಹೇಳುವುದರ ಬಗ್ಗೆ ಬೆಳ್ಳಾವೆ ವೆಂಕಟನಾರಣಪ್ಪನವರಿಗಿದ್ದ ನಿಷ್ಠೆ ಇಂದಿಗೂ ಅನುಕರಣೀಯ.

'ಕುತೂಹಲಿ' ಆನ್‌ಲೈನ್ ಪತ್ರಿಕೆಯ ಜುಲೈ ೨೦೨೧ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

೧೯೩೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಕಟವಾದ ಬೆಳ್ಳಾವೆಯವರ ಕೃತಿ 'ಜೀವ ವಿಜ್ಞಾನ'
'ವಿಜ್ಞಾನ'ವೆಂಬ ವಿಶಿಷ್ಟ ಪ್ರಯತ್ನ

Related Stories

No stories found.
logo
ಇಜ್ಞಾನ Ejnana
www.ejnana.com