ಹಲವಾರು ವಿಜ್ಞಾನಾಸಕ್ತರನ್ನೂ ವಿಜ್ಞಾನ ಸಂವಹನಕಾರರನ್ನೂ ರೂಪಿಸಿದ ಹಿರಿಮೆ ಬಾಲವಿಜ್ಞಾನ ಪತ್ರಿಕೆಯದ್ದು
ಹಲವಾರು ವಿಜ್ಞಾನಾಸಕ್ತರನ್ನೂ ವಿಜ್ಞಾನ ಸಂವಹನಕಾರರನ್ನೂ ರೂಪಿಸಿದ ಹಿರಿಮೆ ಬಾಲವಿಜ್ಞಾನ ಪತ್ರಿಕೆಯದ್ದುkrvp.org

ಬಾಲವಿಜ್ಞಾನವೆಂಬ ಬಾಲ್ಯದ ಗೆಳೆಯ

ಬಾಲವಿಜ್ಞಾನ ಪತ್ರಿಕೆ ಪ್ರಾರಂಭವಾಗಿ ನಾಲ್ಕು ದಶಕಗಳು ಪೂರೈಸಿರುವ ಸಂದರ್ಭದಲ್ಲಿ, ಅದರ ಹಲವು ಹಳೆಯ ಸಂಚಿಕೆಗಳನ್ನು ಅಂತರಜಾಲದಲ್ಲಿ ಪ್ರಕಟಿಸಲಾಗಿದೆ. ಈ ಸಮಯದಲ್ಲಿ ಬಾಲವಿಜ್ಞಾನ ನಡೆದುಬಂದ ದಾರಿಯ ಕಡೆಗೊಂದು ಹಿನ್ನೋಟ ಇಲ್ಲಿದೆ.

ಕನ್ನಡದಲ್ಲಿ ವಿಜ್ಞಾನ ಸಂವಹನದ ಕುರಿತು ಕುತೂಹಲವಿರುವ ಇಂದಿನ ತಲೆಮಾರಿನ ಅನೇಕರು ತಮ್ಮ ಶಾಲಾದಿನಗಳಲ್ಲಿ 'ಬಾಲವಿಜ್ಞಾನ' ಓದುತ್ತಿದ್ದುದನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಹಾಗೆ ಹಲವಾರು ವಿಜ್ಞಾನಾಸಕ್ತರನ್ನೂ ವಿಜ್ಞಾನ ಸಂವಹನಕಾರರನ್ನೂ ರೂಪಿಸಿದ ಹಿರಿಮೆ ಆ ಪತ್ರಿಕೆಯದ್ದು.

ಬಾಲವಿಜ್ಞಾನ ಪತ್ರಿಕೆ ಪ್ರಾರಂಭವಾಗಿದ್ದು ೧೯೭೮ರ ನವೆಂಬರ್ ತಿಂಗಳಿನಲ್ಲಿ. ಮೊದಲ ಪ್ರಾಯೋಗಿಕ ಸಂಚಿಕೆಯ ನಂತರ ಪತ್ರಿಕೆಯ ಪ್ರಕಟಣೆ ಅಧಿಕೃತವಾಗಿ ಪ್ರಾರಂಭವಾದಾಗ ಅದರ ಹೆಸರು 'ವಿಜ್ಞಾನ' ಎಂದಿತ್ತು. "ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸುವುದಕ್ಕೂ ಅವರು ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದಕ್ಕೂ ಸಹಾಯವಾಗಬಲ್ಲ ಒಂದು ನಿಯತಕಾಲಿಕ ಕನ್ನಡದಲ್ಲಿ ಅಗತ್ಯ ಎಂಬ ಭಾವನೆಯಿಂದ" ಈ ಮಾಸಪತ್ರಿಕೆಯನ್ನು ಪ್ರಾರಂಭಿಸಿದ್ದಾಗಿ ಮೊದಲ ಸಂಚಿಕೆಯ ಅರಿಕೆಯಲ್ಲಿ ಸಂಪಾದಕರು ಹೇಳಿದ್ದರು.

ತಾಂತ್ರಿಕ ಕಾರಣಗಳಿಂದಾಗಿ ಜನವರಿ ೧೯೭೯ರ ಸಂಚಿಕೆಯಿಂದ 'ವಿಜ್ಞಾನ'ದ ಹೆಸರನ್ನು 'ಬಾಲವಿಜ್ಞಾನ'ವೆಂದು ಬದಲಾಯಿಸಲಾಯಿತು. ಮೊದಲಿಗೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾಮಂಡಲಿಯ ಆಶ್ರಯದಲ್ಲಿ ಪ್ರಕಟವಾದ ಈ ಪತ್ರಿಕೆಯ ಸಾರಥ್ಯವನ್ನು ೧೯೮೦ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮುಂದೆ, ೧೯೮೧ರ ಜನವರಿ ತಿಂಗಳಿಂದ, ವಹಿಸಿಕೊಂಡಿತು.

ಬಾಲವಿಜ್ಞಾನದ ಮೊದಲ ಸಂಪಾದಕ ಮಂಡಲಿಯ ನೇತೃತ್ವ ವಹಿಸಿದ್ದವರು ಹಿರಿಯ ವಿಜ್ಞಾನ ಸಂವಹನಕಾರ ಜೆ. ಆರ್. ಲಕ್ಷ್ಮಣರಾಯರು. ಶ್ರೀಮತಿ ಹರಿಪ್ರಸಾದ್, ಡಿ. ಆರ್. ಬಳೂರಗಿ ಹಾಗೂ ಎಂ. ಎ. ಸೇತುರಾವ್ ಅವರು ಈ ತಂಡದ ಸದಸ್ಯರಾಗಿದ್ದರು. ಸೇತುರಾಯರು ಪತ್ರಿಕೆಯ ಪ್ರಕಾಶಕರಾಗಿಯೂ ಕಾರ್ಯನಿರ್ವಹಿಸಿದ್ದರು. ಮೊದಲ ವರ್ಷದಲ್ಲಿ ಪತ್ರಿಕೆಯ ವಾರ್ಷಿಕ ಚಂದಾ ಎಂಟು ರೂಪಾಯಿ ಇತ್ತು. ವಿದ್ಯಾರ್ಥಿಗಳಿಗೆ ಆರೇ ರೂಪಾಯಿ!

ಈ ಪ್ರಯತ್ನಕ್ಕೆ ಪ್ರಾರಂಭದಿಂದಲೇ ಓದುಗರ ಉತ್ತೇಜನ ದೊರಕುತ್ತಾ ಬಂದದ್ದು ವಿಶೇಷ. ಮೊದಲ ಸಂಚಿಕೆಗೇ ಬಂದ ಕೆಲವು ಕಟು ಟೀಕೆಗಳನ್ನೂ ಪತ್ರಿಕೆಯಲ್ಲೇ ಪ್ರಕಟಿಸುವ ಮೂಲಕ ಮುಕ್ತವಾಗಿ ಸ್ವೀಕರಿಸಿದ ದೊಡ್ಡ ಮನಸ್ಸು ಅಂದಿನ ಸಂಪಾದಕ ಮಂಡಲಿಯದ್ದಾಗಿತ್ತು. ಮುಂದೆ ಬಾಲವಿಜ್ಞಾನ ಸಂಪಾದಕ ಮಂಡಲಿಯಲ್ಲಿ ಸೇವೆಸಲ್ಲಿಸಿದ ಅಡ್ಯನಡ್ಕ ಕೃಷ್ಣಭಟ್, ಪ್ರೊ. ಎಂ. ಆರ್. ನಾಗರಾಜು ಮೊದಲಾದ ಹಿರಿಯರೂ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದರು. ಪತ್ರಿಕೆಯ ಮೂಲಕವಷ್ಟೇ ಅಲ್ಲ, ಪ್ರೊ. ಎಂಆರ್‌ಎನ್ ಅವರು ರಾಜ್ಯದೆಲ್ಲೆಡೆಯ ಮಕ್ಕಳು ಮತ್ತು ಶಿಕ್ಷಕರ ಸಾವಿರಾರು ಪ್ರಶ್ನೆಗಳನ್ನು ಪತ್ರಗಳ ಮೂಲಕವೂ ಉತ್ತರಿಸಿದ್ದರು.

ಬಾಲವಿಜ್ಞಾನದ ಸಂಪಾದಕರು ವಿಜ್ಞಾನ ಲೇಖಕರನ್ನು ರೂಪಿಸಿದ ರೀತಿ ಅನನ್ಯ. ಅವರ ತಾಳ್ಮೆ ಬಹಳ ದೊಡ್ಡದು. ಲೇಖನದ ವಸ್ತು ಒಳ್ಳೆಯದು ಅನಿಸಿದರೆ ಸಾಕು; ಬಾಲಿಶವಾಗಿ ಬರೆದಿದ್ದ ಲೇಖನವನ್ನೂ ಒಪ್ಪವಾಗಿ ತಿದ್ದಿ ತೀಡಿ ಆ ಲೇಖಕನ ಹೆಸರಿನಲ್ಲೇ ಪ್ರಕಟಿಸುತ್ತಿದ್ದರು! ಅಷ್ಟೆಲ್ಲಾ ತಿದ್ದಿದ್ದವರ ಹೆಸರು ಕೂಡ ಯಾರಿಗೂ ತಿಳಿಯುತ್ತಿರಲಿಲ್ಲ. ಒಂದೆರಡಲ್ಲ; ನೂರಾರು ಲೇಖನಗಳು ವರ್ಷಗಟ್ಟಲೆ ಹೀಗೆಯೇ ಪ್ರಕಟವಾಗಿವೆ. ಈ ಬಗ್ಗೆ ಒಮ್ಮೆ ಕೇಳಿದಾಗ ಅಡ್ಯನಡ್ಕ ಕೃಷ್ಣಭಟ್ಟರು "ನಡೆಯಲು ಕಲಿಯುತ್ತಿರುವ ಮಗುವಿಗೆ ಎರಡು ಹೆಜ್ಜೆಗೆ ಆಸರೆಯಾದ ಮಾತ್ರಕ್ಕೆ ಅದು ನಡೆದದ್ದು ನನ್ನಿಂದಲೇ ಎನ್ನಲಾದೀತೇ? ಹೀಗೆ ತಿದ್ದುವ ಜವಾಬ್ದಾರಿ ನಮ್ಮದು. ಅದನ್ನು ನಿರ್ವಹಿಸಿದ ಮೇಲೆ ಹೇಳಿಕೊಳ್ಳುವುದೇನಿದೆ? ಮುಂದೆ ಆ ಮಗು ಓಟದ ಸ್ಪರ್ಧೆಯಲ್ಲಿ ಗೆದ್ದಾಗ ಇದನ್ನು ನೆನಪಿಸಿಕೊಂಡು ಸಂತೋಷಿಸಬಹುದು. ಆ ಆನಂದ ಬೇರೆ ಯಾವುದರಲ್ಲೂ ಇಲ್ಲ" ಎಂದಿದ್ದರು! ಬಾಲವಿಜ್ಞಾನದ ಸಂಸ್ಕೃತಿ ಈ ಮಾತುಗಳಲ್ಲಿದೆ!

ಡಾ. ವಿ. ಎಸ್. ಕಿರಣ್

ಬಾಲವಿಜ್ಞಾನ ಪತ್ರಿಕೆ ತನ್ನ ಪ್ರಾರಂಭದಿಂದಲೇ ಹಲವು ಸ್ಥಿರಶೀರ್ಷಿಕೆಗಳನ್ನು ಕೂಡ ಪ್ರಕಟಿಸುತ್ತ ಬಂದಿದೆ. ಅಲ್ಲದೆ ಹಲವಾರು ವಿಶೇಷ ಸಂಚಿಕೆಗಳನ್ನೂ ಪ್ರಕಟಿಸಿದೆ. ಇವೆಲ್ಲದರ ಜೊತೆಗೆ ಅಂತರಜಾಲ ಸಂಪರ್ಕ ಇಲ್ಲದ ದಿನಗಳಲ್ಲೇ ಬಾಲವಿಜ್ಞಾನ ಪ್ರಕಟಿಸುತ್ತಿದ್ದ ಅಪರೂಪದ ಚಿತ್ರಗಳು ಉತ್ತಮ ಕಲಿಕಾ ಸಾಮಗ್ರಿಗಳಾಗಿಯೂ ಬಳಕೆಯಾಗುತ್ತಿದ್ದವು ಎಂದು ಶಿಕ್ಷಕ-ಲೇಖಕ ನಾರಾಯಣ ಬಾಬಾನಗರ ನೆನಪಿಸಿಕೊಳ್ಳುತ್ತಾರೆ. 'ನೀನೇ ಮಾಡಿ ನೋಡು'ವಿನಂತಹ ವಿಶಿಷ್ಟ ಆಕರ್ಷಣೆಗಳು ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನೂ ವಿಜ್ಞಾನ ಪ್ರಯೋಗಗಳೆಡೆ ಸೆಳೆದವು ಎನ್ನುವುದು ಅವರ ಅನಿಸಿಕೆ.

೧೯೭೯ರಿಂದ ಇಲ್ಲಿಯವರೆಗೆ, ಹಾದಿಯಲ್ಲಿ ಎದುರಾದ ಹಲವು ಅಡಚಣೆಗಳನ್ನೂ ಮೀರಿ, ಬಾಲವಿಜ್ಞಾನದ ಪ್ರಕಟಣೆ ಮುಂದುವರೆದಿರುವುದೂ ಒಂದು ವಿಶಿಷ್ಟ ಸಾಧನೆಯೇ. ಇದರ ಜೊತೆಯಲ್ಲಿ, ಸಹಜವಾಗಿಯೇ, ವಿಜ್ಞಾನದ ಆಸಕ್ತಿಯನ್ನು ಕಿರಿಯರಲ್ಲೂ ಹಿರಿಯರಲ್ಲೂ ಮೂಡಿಸುವ ಕೆಲಸ ಕೂಡ ನಿರಂತರವಾಗಿ ಸಾಗುತ್ತಿದೆ. ಈ ಅವಧಿಯಲ್ಲಿ ಹಲವು ಹಿರಿಯ ಲೇಖಕರು ಬಾಲವಿಜ್ಞಾನಕ್ಕೆಂದು ಬರೆದ ಬರಹಗಳು ಅತ್ಯುತ್ತಮ ಸಂಕಲನಗಳಾಗಿಯೂ ಹೊರಬಂದಿವೆ. ಪತ್ರಿಕೆಯ ಮೊದಲ ಸಂಪಾದಕಮಂಡಲಿಯಲ್ಲಿದ್ದ ಶ್ರೀಮತಿ ಹರಿಪ್ರಸಾದ್‌ರವರು ಸದ್ಯ ಬಾಲವಿಜ್ಞಾನದ ಸಂಪಾದಕರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಈಗ, ಬಾಲವಿಜ್ಞಾನ ಪ್ರಾರಂಭವಾಗಿ ನಾಲ್ಕು ದಶಕಗಳು ಪೂರೈಸಿರುವ ಸಂದರ್ಭದಲ್ಲಿ, ಬಾಲವಿಜ್ಞಾನದ ಹಲವು ಹಳೆಯ ಸಂಚಿಕೆಗಳನ್ನು ಅಂತರಜಾಲದಲ್ಲಿ ಪ್ರಕಟಿಸಲಾಗಿದೆ. ನವೆಂಬರ್ ೧೯೭೮ರ 'ವಿಜ್ಞಾನ' ಸಂಚಿಕೆಯಿಂದ ಪ್ರಾರಂಭಿಸಿ ಮುಂದಿನ ಹಲವಾರು ವರ್ಷಗಳ ಬಾಲವಿಜ್ಞಾನದ ಡಿಜಿಟಲ್ ಪ್ರತಿಗಳನ್ನು ಕರಾವಿಪ ಜಾಲತಾಣದಲ್ಲಿ ಉಚಿತವಾಗಿ ಓದಬಹುದು, ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬಾಲವಿಜ್ಞಾನದ ಪಯಣ ಇನ್ನೂ ಹಲವಾರು ವರ್ಷಗಳ ಕಾಲ ಮುಂದುವರೆಯಲಿ, ವಿಜ್ಞಾನಾಸಕ್ತರನ್ನು ಪ್ರೇರೇಪಿಸುವ ಕಾರ್ಯ ನಿರಾತಂಕವಾಗಿರಲಿ ಎನ್ನುವುದು ಇಜ್ಞಾನ ತಂಡದ ಹೃತ್ಪೂರ್ವಕ ಹಾರೈಕೆ.

Summary

ನೀವು ಬಾಲವಿಜ್ಞಾನ ಪತ್ರಿಕೆಗೆ ಚಂದಾದಾರರಾಗಲು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಚೇರಿಯನ್ನು ಸಂಪರ್ಕಿಸಬಹುದು. ಸಂಪರ್ಕ ವಿವರಗಳು ಹೀಗಿವೆ:

  • ಅಂಚೆ ವಿಳಾಸ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ೨೪/೨ ಮತ್ತು ೨೪/೩, ೨೧ನೇ ಮುಖ್ಯರಸ್ತೆ, ಬನಶಂಕರಿ ೨ನೇ ಹಂತ, ಬೆಂಗಳೂರು ೫೬೦೦೭೦

  • ದೂರವಾಣಿ: +೯೧ ೮೦ ೨೬೭೧ ೮೯೩೯

  • ಇಮೇಲ್: krvp.info@gmail.com

  • ಜಾಲತಾಣ: www.krvp.org

Related Stories

No stories found.
logo
ಇಜ್ಞಾನ Ejnana
www.ejnana.com