ತನ್ನ ಸುತ್ತ ತಾನೇ ಸುತ್ತುವ ಭೂಮಿಯ ಚಲನೆ, ಭಿನ್ನ ಭೂಪ್ರದೇಶಗಳಲ್ಲಿ ಭಿನ್ನ ಕಾಲಮಾನಗಳನ್ನೂ ಉಂಟುಮಾಡುತ್ತದೆ.
ತನ್ನ ಸುತ್ತ ತಾನೇ ಸುತ್ತುವ ಭೂಮಿಯ ಚಲನೆ, ಭಿನ್ನ ಭೂಪ್ರದೇಶಗಳಲ್ಲಿ ಭಿನ್ನ ಕಾಲಮಾನಗಳನ್ನೂ ಉಂಟುಮಾಡುತ್ತದೆ.Photo by Andrey Grushnikov from Pexels

ಅಲ್ಲೊಂದು ಟೈಮು, ಇಲ್ಲಿ ಇನ್ನೊಂದು ಟೈಮು!

ಬೇರೆ ಬೇರೆ ದೇಶಗಳ ಗಡಿಯಾರ ಬೇರೆ ಬೇರೆ ಸಮಯ ತೋರಿಸುವುದು ಯಾಕೆ?

ವಿದೇಶದಲ್ಲಿರುವ ಬಂಧುಮಿತ್ರರ ಜೊತೆ ಮಾತನಾಡುವಾಗ, ಅಲ್ಲಿನ ಸಮಯದ ಕುರಿತು ವಿಚಾರಿಸುವ ಅಭ್ಯಾಸ ನಮ್ಮದು. ಬೇರೊಂದು ದೇಶದಲ್ಲಿ ನಡೆದ ಚಟುವಟಿಕೆಗಳ ಕುರಿತು ಬರೆಯುವಾಗ, 'ಸ್ಥಳೀಯ ಕಾಲಮಾನದ ಪ್ರಕಾರ' ಎಂಬ ಪ್ರಸ್ತಾಪವನ್ನು ಮಾಧ್ಯಮಗಳು ಮಾಡುವುದನ್ನೂ ನಾವು ಗಮನಿಸಿದ್ದೇವೆ. ತನ್ನ ಸುತ್ತ ತಾನೇ ಸುತ್ತುವ ಭೂಮಿಯ ಚಲನೆ, ಹಗಲುರಾತ್ರಿಗಳಿಗೆ ಕಾರಣವಾಗುವಂತೆಯೇ, ಭಿನ್ನ ಭೂಪ್ರದೇಶಗಳಲ್ಲಿ ಭಿನ್ನ ಕಾಲಮಾನಗಳನ್ನೂ ಉಂಟುಮಾಡುವುದರ ಅರಿವು ನಮಗಿದೆ.

ಬಹುಶಃ ಭೂಮಿಯನ್ನು ರೇಖಾಂಶಗಳ ಆಧಾರದಲ್ಲಿ ಇಪ್ಪತ್ತನಾಲ್ಕು ಭಾಗಗಳಾಗಿ ವಿಭಾಗಿಸಿ, ಒಂದೊಂದು ವಲಯಕ್ಕೂ ಒಂದೊಂದು ಗಂಟೆಯ ಕಾಲವನ್ನು ನಿಗದಿಪಡಿಸಿ ಮುಂದುವರೆಸಿಕೊಂಡು ಹೋಗಿದ್ದರೆ, ಸಮಯವನ್ನು ನಿರ್ಣಯಿಸುವುದು ಸಂಕೀರ್ಣವಾದ ಸಮಸ್ಯೆಯಾಗಿರುತ್ತಿರಲಿಲ್ಲ. ಈಗ ನೋಡಿ, ನಮ್ಮ ಪಂಜಾಬಿನಲ್ಲಿರುವ ಯಾರಾದರೂ ಪಕ್ಕದ ಪಾಕಿಸ್ತಾನಕ್ಕೆ ಹೋದರೆ, ತಮ್ಮ ಗಡಿಯಾರದ ಸಮಯವನ್ನು ಇಪ್ಪತ್ತು ನಿಮಿಷ ಹಿಂದೆ ಹೊಂದಿಸಿಕೊಳ್ಳಬೇಕು; ಪಕ್ಕದ ಬಾಂಗ್ಲಾದೇಶದಿಂದ ಪಶ್ಚಿಮ ಬಂಗಾಳಕ್ಕೆ ಬರುವವರು, ಗಡಿಯಾರವನ್ನು ಅರ್ಧ ಗಂಟೆ ಹಿಂದಕ್ಕೆ ತಳ್ಳಬೇಕು!

ಇಷ್ಟೆಲ್ಲ ಯಾಕೆ, ಅಮೆರಿಕಾದ ಲಾಸ್ ಏಂಜಲೀಸ್ ನಗರದಿಂದ, ಅದೇ ಅಮೆರಿಕಾದ ನ್ಯೂಯಾರ್ಕ್ ನಗರಕ್ಕೆ ಹೋದರೆ, ಸಮಯವನ್ನು ಮೂರು ಗಂಟೆ ಮುಂದೂಡಿ ಹೊಂದಿಸಿಕೊಳ್ಳುವುದು ಯಾತ್ರಿಕರಿಗೆ ಅನಿವಾರ್ಯ. ಆಯಾ ಪ್ರದೇಶದ 'ಟೈಂ ಝೋನ್' ಅಥವಾ ಸಮಯದ ವಲಯಗಳನ್ನು ನಿರ್ಧರಿಸುವ ಮತ್ತು ಹಂಚುವ ಅಧಿಕಾರ, ಆ ಪ್ರದೇಶ ಸೇರಿರುವ ದೇಶದ ಸರ್ಕಾರಗಳ ಕೈಯಲ್ಲಿರುವುದು ಹೀಗಾಗಲು ಒಂದು ಕಾರಣವಾದರೆ, ಆ ದೇಶದ ವೈಶಾಲ್ಯ, ವಿಸ್ತೀರ್ಣಗಳು ಮತ್ತೊಂದು ಕಾರಣ.

ಆದರೆ ಚೀನಾ ದೇಶದವರಿಗೆ ಸಮಯದ ವಲಯದ ಹಂಚಿಕೆ ಅಂತಹ ಸಮಸ್ಯೆಯಂತೆ ಕಂಡಿಲ್ಲ. ಅಮೆರಿಕಾಕ್ಕಿಂತಲೂ ಕೊಂಚ ಚಿಕ್ಕದಾಗಿರುವ ಚೀನಾ ದೇಶಕ್ಕೆ, ಮೂರು / ನಾಲ್ಕು ಸಮಯದ ವಲಯಗಳ ಅಗತ್ಯವಿದೆ. ಆದರೂ, ಇಡೀ ದೇಶದ ಜನರು ಅನುಸರಿಸುವುದು, ರಾಜಧಾನಿ ಬೀಜಿಂಗ್ ನಗರದ ಸ್ಥಳೀಯ ಕಾಲಮಾನವನ್ನು! ನೆನಪಿಡಿ, ಚೀನಾಕ್ಕಿಂತಲೂ ತುಸು ದೊಡ್ಡದಾದ ಅಮೆರಿಕಾದಲ್ಲಿ ನಾಲ್ಕು ವಲಯಗಳಿವೆ. ಚೀನಾದ ನಿಷ್ಠುರ ಧಾರ್ಮಿಕ ನೀತಿಗಳಿಂದ ಬೆದರಿದ ಶಾಂತಿದೂತ, ಅಲ್ಲೇ ಪಕ್ಕದ ಅಫ್ಘಾನಿಸ್ತಾನಕ್ಕೆ ಕಳ್ಳವಂಟಿಕೆಯಲ್ಲಿ ಗಡಿ ದಾಟಿದರೂ, ಗಡಿಯಾರದ ಸಮಯವನ್ನು ಮೂರು ಗಂಟೆ ಹಿಂದೆ ತಳ್ಳಬೇಕು.

ಹಾಗೆ ನೋಡಲು ಹೋದರೆ, ಭಾರತಕ್ಕೂ ಎರಡು ಸಮಯದ ವಲಯಗಳ ಅವಶ್ಯಕತೆಯಿದೆ; ಆದರೆ ಅನಿವಾರ್ಯತೆಯಿಲ್ಲ. ಬಹುಶಃ ಅನಿವಾರ್ಯವಲ್ಲದ ಸಂಗತಿಗಳನ್ನು ಉಪಯೋಗಿಸಿ ವ್ಯವಸ್ಥೆಯನ್ನು ಜಟಿಲವಾಗಿಸಿಕೊಳ್ಳುವುದು ಬೇಡ ಎಂದೇ, ಅಂದಿನವರು 'ಬಾಂಬೆ ಸಮಯದ ವಲಯ' ಮತ್ತು 'ಕೋಲ್ಕತ್ತಾ ಸಮಯದ ವಲಯ'ಗಳನ್ನು ಕೈಬಿಟ್ಟರು. ಪ್ರಯಾಗದ (ಅಂದಿನ ಅಲಹಾಬಾದ್) ಪಕ್ಕದಲ್ಲೇ ಹಾದು ಹೋಗಿರುವ ರೇಖಾಂಶವನ್ನು ಆಧಾರವಾಗಿರಿಸಿ, ಅದರ ಸಮಯವನ್ನೇ 'ಐ.ಎಸ್.ಟಿ' ಅಥವಾ 'ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್' ಎಂದು ನಿಗದಿಪಡಿಸಿದರು.

ಕಾಲದ ಜೊತೆಗೆ ಆಟವಾಡಿರುವ ದೇಶಗಳೂ ಇವೆ. ಇಂಗ್ಲೆಂಡಿನ ಕೆಳಗೆ, ತುಸು ಪಶ್ಚಿಮಕ್ಕಿರುವ ಸ್ಪೇನ್ ದೇಶದ ಸಮಯ, ಇಂಗ್ಲೆಂಡಿನ ಸಮಯಕ್ಕಿಂತ ಒಂದು ಗಂಟೆ ಮುಂದಿದೆ. ಇದೇಕೆ ಹೀಗೆ? ಭೂಪಟದಲ್ಲಿ ಯಾವ ದೇಶ ಪೂರ್ವ ದಿಕ್ಕಿಗೆ ಹತ್ತಿರವಿರುತ್ತದೆಯೋ, ಅಲ್ಲಿನ ಸಮಯ ಪಶ್ಚಿಮದಲ್ಲಿರುವ ದೇಶಗಳಿಗಿಂತ ಮುಂದಿರುತ್ತದೆ ಎಂಬ ಸಾಮಾನ್ಯ ನಿಯಮಕ್ಕೆ ಸ್ಪ್ಯಾನಿಷ್ಷರು ಹೇಗೆ ಅಪವಾದವಾದರು ಎಂದು ಯೋಚಿಸುತ್ತಿದ್ದೀರ? ಎರಡನೇ ಮಹಾಯುದ್ಧದ ಸಮಯದಲ್ಲಿ, ಪೂರ್ವದ ಜರ್ಮನಿಯ ಸಮಯದ ಜೊತೆ ತಮ್ಮ ಸಮಯವೂ ಹೊಂದಾಣಿಕೆಯಾಗಿದ್ದರೆ ಅನುಕೂಲ ಎಂದು ಚಿಂತಿಸಿದ ಅಂದಿನ ಸರ್ವಾಧಿಕಾರಿ ಫ್ರಾನ್ಸಿಸ್ಕೋ ಫ್ರಾಂಕೋನ ನಿರ್ಣಯವನ್ನು ಮರುಪರಿಶೀಲಿಸುವ ಗೋಜಿಗೆ ಯಾರೂ ಹೋಗಿಲ್ಲ.

ದೂರದ ಶಾಂತಮಹಾಸಾಗರದ ದಕ್ಷಿಣ ಪ್ರಾಂತ್ಯದಲ್ಲಿರುವ 'ಸಮೋವಾ' ದ್ವೀಪರಾಷ್ಟ್ರದ ಕಿತಾಪತಿ ಇನ್ನೂ ವಿಚಿತ್ರವಾಗಿದೆ. ೨೦೧೧ರಲ್ಲಿ, ಡಿಸೆಂಬರ್ ೨೯ರ ನಂತರ, ೩೦ನೇ ತಾರೀಖನ್ನು ಬಳಸುವ ಬದಲು, ಸೀದಾ ೩೧ನೇ ತಾರೀಖನ್ನು ಬಳಸಲು ಅಲ್ಲಿನ ಸರ್ಕಾರ ನಿರ್ಧರಿಸಿತು. ಹೀಗಾಗಿ, ಒಂದಷ್ಟು ಮೇಲಿರುವ ಹವಾಯಿ ದ್ವೀಪಗಳಿಗಿಂತ, ಸಮೋವಾ ದ್ವೀಪಗಳ ದಿನಾಂಕ ಒಂದು ದಿನ ಮುಂದಿರುತ್ತದೆ. ನಾನು ಈ ಬರಹವನ್ನು ಟೈಪಿಸುವಾಗ, ಸಮೋವಾದಲ್ಲಿ ಮಾರ್ಚ್ ೧೧ರ ಬೆಳಗಿನ ಜಾವ ೧ ಗಂಟೆಯಾಗಿದ್ದರೆ, ಹವಾಯಿಯಲ್ಲಿ ಮಾರ್ಚ್ ೧೦ರ ಬೆಳಗಿನ ಜಾವ ೧ ಗಂಟೆಯಾಗಿತ್ತು.

ಭೂಮಿಯ ಅತಿ ದೊಡ್ಡ ದೇಶವಾದ ರಷ್ಯಾ ಹನ್ನೊಂದು ಸಮಯದ ವಲಯಗಳನ್ನು ಉಪಯೋಗಿಸುತ್ತಿದೆ. ಹಾಗಾದರೆ, ಅತಿ ಹೆಚ್ಚು ಸಮಯದ ವಲಯಗಳನ್ನು ಹೊಂದಿರುವ ದೇಶವೂ ರಷ್ಯಾ ಎಂದು ನೀವು ಭಾವಿಸಿದ್ದರೆ, ನಿಮಗೊಂದು ಅಚ್ಚರಿ ಕಾದಿದೆ. ಫ್ರಾನ್ಸ್ ದೇಶ ಬಳಸುತ್ತಿರುವ ಸಮಯದ ವಲಯಗಳ ಸಂಖ್ಯೆ ಹನ್ನೆರಡು! ನಮ್ಮ ದಕ್ಷಿಣ ಭಾರತಕ್ಕಿಂತಲೂ ಸ್ವಲ್ಪ ಪುಟ್ಟದಾಗಿರುವ ಫ್ರಾನ್ಸ್ ಅಷ್ಟೊಂದು ವಲಯಗಳನ್ನು ಹೊಂದಿರಲು ಕಾರಣ, ಇನ್ನೂ ಫ್ರಾನ್ಸಿನ ಸುಪರ್ದಿಯಲ್ಲಿಯೇ ಇರುವ, ಶಾಂತಮಹಾಸಾಗರ, ಹಿಂದೂಮಹಾಸಾಗರ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿನ ದ್ವೀಪ ಸಮೂಹಗಳು!

Related Stories

No stories found.
logo
ಇಜ್ಞಾನ Ejnana
www.ejnana.com