ಆಕಾಶವಾಣಿ ಬೆಂಗಳೂರು ಕೇಂದ್ರವು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಸಹಯೋಗದೊಂದಿಗೆ 'ನಿತ್ಯ ವಿಜ್ಞಾನ' ಎಂಬ ದೈನಂದಿನ ಕಾರ್ಯಕ್ರಮವನ್ನು ರೂಪಿಸಿದೆ.
ಆಕಾಶವಾಣಿ ಬೆಂಗಳೂರು ಕೇಂದ್ರವು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಸಹಯೋಗದೊಂದಿಗೆ 'ನಿತ್ಯ ವಿಜ್ಞಾನ' ಎಂಬ ದೈನಂದಿನ ಕಾರ್ಯಕ್ರಮವನ್ನು ರೂಪಿಸಿದೆ.|Image by Samuel Morazan from Pixabay
ವೈವಿಧ್ಯ

ಸ್ವಾತಂತ್ರ್ಯ ದಿನದಿಂದ ಆಕಾಶವಾಣಿಯಲ್ಲಿ 'ನಿತ್ಯ ವಿಜ್ಞಾನ'

ಇದೇ ಸ್ವಾತಂತ್ರ್ಯ ದಿನದಂದು (ಆಗಸ್ಟ್ 15, 2021) ಪ್ರಾರಂಭವಾಗಲಿರುವ ಈ ಕಾರ್ಯಕ್ರಮ ಮುಂದಿನ ಎರಡು ವರ್ಷಗಳವರೆಗೆ ಪ್ರತಿದಿನವೂ ಪ್ರಸಾರವಾಗಲಿದೆ.

ಇಜ್ಞಾನ ತಂಡ

ವಿಜ್ಞಾನ-ತಂತ್ರಜ್ಞಾನ ವಿಷಯಗಳಲ್ಲಿ ಆಸಕ್ತಿಯಿರುವ ಆಕಾಶವಾಣಿ ಕೇಳುಗರಿಗೆ ಇಲ್ಲೊಂದು ಒಳ್ಳೆಯ ಸುದ್ದಿಯಿದೆ. ಆಕಾಶವಾಣಿಯ ಬೆಂಗಳೂರು ಕೇಂದ್ರವು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ (ಕೆಸ್ಟೆಪ್ಸ್) ಸಹಯೋಗದೊಂದಿಗೆ 'ನಿತ್ಯ ವಿಜ್ಞಾನ' ಎಂಬ ವಿನೂತನ ದೈನಂದಿನ ಕಾರ್ಯಕ್ರಮವನ್ನು ರೂಪಿಸಿದೆ. ವಿವಿಧ ಮಾಧ್ಯಮಗಳಲ್ಲಿ ಧ್ವನಿರೂಪದ ಮಾಹಿತಿಗೆ ಹೆಚ್ಚು ಮಹತ್ವ ನೀಡಲಾಗುತ್ತಿರುವ ಈ ದಿನಗಳಲ್ಲಿ ಆಕಾಶವಾಣಿಯ ಈ ಯೋಜನೆ ನಿಜಕ್ಕೂ ಅಭಿನಂದನಾರ್ಹವೆಂದು ಇಜ್ಞಾನ ತಂಡ ಭಾವಿಸುತ್ತದೆ.

ಇದೇ ಸ್ವಾತಂತ್ರ್ಯ ದಿನದಂದು (ಆಗಸ್ಟ್ 15, 2021) ಪ್ರಾರಂಭವಾಗಲಿರುವ ಈ ಕಾರ್ಯಕ್ರಮ ಮುಂದಿನ ಎರಡು ವರ್ಷಗಳವರೆಗೆ ಪ್ರತಿದಿನವೂ ಪ್ರಸಾರವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹೊಸ ಸಂಶೋಧನೆಗಳು, ನಿತ್ಯಜೀವನದಲ್ಲಿ ನಾವು ಬಳಸುವ ಸವಲತ್ತುಗಳ ಹಿಂದಿರುವ ವೈಜ್ಞಾನಿಕ ಅಂಶಗಳು, ನಮ್ಮ ದೇಶದ ವೈಜ್ಞಾನಿಕ ಸಾಧನೆಗಳು ಮುಂತಾದ ವಿಷಯಗಳ ಬಗ್ಗೆ ಜನಸಾಮಾನ್ಯರಲ್ಲೂ ಅರಿವು ಮೂಡಿಸುವ ಹಾಗೂ ಎಲ್ಲರಲ್ಲೂ ವೈಜ್ಞಾನಿಕ ಮನೋಭಾವ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ.

ಕಾರ್ಯಕ್ರಮದ ಕಂತುಗಳು ರಾಜ್ಯದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರತಿ ದಿನ ಬೆಳಿಗ್ಗೆ 7.45ಕ್ಕೆ, ಎಫ್ ಎಮ್ ರೈನ್‌ಬೋ ವಾಹಿನಿಯಲ್ಲಿ (101.3 MHz) ಬೆಳಿಗ್ಗೆ 8.55ಕ್ಕೆ ಹಾಗೂ ಬೆಂಗಳೂರು ವಿವಿಧಭಾರತಿ‌ಯಲ್ಲಿ (102.6 MHz) ರಾತ್ರಿ 8ಕ್ಕೆ ಪ್ರಸಾರವಾಗಲಿವೆ. ಅವು ಪ್ರಸಾರಭಾರತಿಯ 'ನ್ಯೂಸ್ ಆನ್ ಏರ್' ಆಪ್ ಹಾಗೂ ಕೆಸ್ಟೆಪ್ಸ್ ಮತ್ತು ಆಕಾಶವಾಣಿ ಬೆಂಗಳೂರಿನ ಯೂಟ್ಯೂಬ್ ಚಾನೆಲ್‌ಗಳಲ್ಲಿಯೂ ಲಭ್ಯವಿರಲಿವೆ.

ಈ ಕಾರ್ಯಕ್ರಮ ಸರಣಿಯಲ್ಲಿ ನಾಡಿನ ಹಿರಿಯ ವಿಜ್ಞಾನ ಸಂವಹನಕಾರರು ಭಾಗವಹಿಸಲಿದ್ದು ಪ್ರತಿದಿನವೂ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ನಿರ್ಮಾಣವನ್ನು ಆಕಾಶವಾಣಿ ಬೆಂಗಳೂರಿನ ಕಾರ್ಯಕ್ರಮ ನಿರ್ವಾಹಕರೂ ಖ್ಯಾತ ವಿಜ್ಞಾನ ಸಂವಹನಕಾರರೂ ಆದ ಶ್ರೀಮತಿ ಸುಮಂಗಲಾ ಎಸ್. ಮುಮ್ಮಿಗಟ್ಟಿಯವರು ಮಾಡಲಿದ್ದಾರೆ ಎಂದು ಆಕಾಶವಾಣಿ ಪ್ರಕಟಣೆ ತಿಳಿಸಿದೆ.

ಇಜ್ಞಾನ Ejnana
www.ejnana.com