ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿ
ವಿಜ್ಞಾನ-ತಂತ್ರಜ್ಞಾನಗಳ ಸದ್ಬಳಕೆ ನಮ್ಮ ಮುನ್ನಡೆಗೆ ಸಹಕಾರಿkai Stachowiak / publicdomainpictures.net

ಮಹಿಳಾದಿನ ವಿಶೇಷ: ಯಾವುದೇ ವಿಷಯ ಕಲಿಯುವುದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ!

ಎಲ್ಲ ಕ್ಷೇತ್ರದ ವಿಷಯಗಳೂ ಅರ್ಥವಾಗದಿದ್ದರೆ ಬೇಡ, ನಮ್ಮ ಆಸಕ್ತಿಯ ವಿಷಯಗಳನ್ನಾದರೂ ತಿಳಿದುಕೊಳ್ಳಬೇಕು ಎನ್ನುತ್ತಾರೆ ನಿವೃತ್ತ ಶಿಕ್ಷಕಿ ಸುಬ್ಬಲಕ್ಷ್ಮಿ ಹೆಚ್. ಕೆ.

ನಾನು ವೃತ್ತಿಯಲ್ಲಿದ್ದ ದಿನಗಳಲ್ಲಿನ್ನೂ ವಿಜ್ಞಾನ-ತಂತ್ರಜ್ಞಾನಗಳು ಇಷ್ಟು ಬೆಳೆದಿರಲಿಲ್ಲ. ಆದರೂ ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಆಸೆ. ಆಗ ನೆರವಾಗಿದ್ದು ನಾಗೇಶ್ ಹೆಗಡೆಯವರು ಬರೆಯುತ್ತಿದ್ದ ವಿಜ್ಞಾನ ವಿಶೇಷ ಬರಹಗಳು. ಪ್ರತಿ ಸಂಚಿಕೆಯನ್ನೂ ಆಸಕ್ತಿಯಿಂದ ನೋಡಿ ಮಕ್ಕಳಿಗೆ ಹೇಳುವಾಗ ಅವರ ಕುತೂಹಲ ಬೆಳೆಯುತ್ತಿತ್ತು. ಹಾಗೇ ಶಾಲೆಗೆ ಬರುತ್ತಿದ್ದ ಬಾಲವಿಜ್ಞಾನ ಪತ್ರಿಕೆ, ರೇಡಿಯೋ ಪಾಠಗಳ ಆಲಿಸುವಿಕೆ, ಗ್ರಂಥಾಲಯದಲ್ಲಿದ್ದ ವಿಶ್ವಕೋಶಗಳ ಓದು ಕೂಡ ನಮಗೆ ನೆರವಾಗುತ್ತಿದ್ದವು.

ಕ್ರಮೇಣ ಮೊಬೈಲ್ ಬಳಕೆ ಬಂತು. ಟಿವಿ, ಕಂಪ್ಯೂಟರ್, ಸಿ.ಡಿ.ಗಳು, ಕ್ಯಾಮೆರಾ ಇವೆಲ್ಲ ಒಂದೊಂದಾಗಿ ಬೆಳಕಿಗೆ ಬಂದವು. ಆಗ ಇವುಗಳ ಬಗ್ಗೆ ಭಯ - ಕುತೂಹಲ - ಆಸೆ ಎಲ್ಲವೂ ಇದ್ದವು. ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಇವುಗಳನ್ನು ಬಳಸುತ್ತಾ ಹೋದಂತೆ ಅವರಿಂದಲೇ ಸಾಕಷ್ಟು ಕಲಿತೆ. ಕ್ರಮೇಣ ಹಿಂಜರಿಕೆ ದೂರವಾಗುತ್ತ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತ ಬದುಕು ಸಾಗಿತು. ಹಳ್ಳಿಗಳಲ್ಲಿ ಈ ತಂತ್ರಜ್ಞಾನದ ಬಳಕೆಗೂ ನೂರೆಂಟು ವಿಘ್ನಗಳು. ವಿದ್ಯುತ್ ಇರುತ್ತಿರಲಿಲ್ಲ. ಯುಪಿಎಸ್ ಹಾಕಿಕೊಳ್ಳುವಷ್ಟು ಸೌಲಭ್ಯ ಇರುತ್ತಿರಲಿಲ್ಲ. ಇಂಟರ್‌ನೆಟ್ ಸುಲಭವಾಗಿ ಸಿಗುತ್ತಿರಲಿಲ್ಲ. ಇಂದಿಗೂ ಈ ಸಮಸ್ಯೆಗಳು ಪೂರ್ಣವಾಗಿ ಪರಿಹಾರ ಕಂಡಿಲ್ಲವಾದರೂ ಅಂದಿಗಿಂತ ಪರಿಸ್ಥಿತಿ ಸುಧಾರಿಸಿದೆ.

ಮೊಬೈಲ್ ಮೊದಲಬಾರಿಗೆ ಉಪಯೋಗಿಸುವಾಗ ನಿಜಕ್ಕೂ ಭಯವಾಗುತ್ತಿತ್ತು, ಏನು ಒತ್ತಿದರೆ ಏನಾಗಿಬಿಡುತ್ತದೋ ಅಂತ. ಸಾಮಾನ್ಯವಾದ ಚಿಕ್ಕ ಮೊಬೈಲಿನಿಂದ ಆರಂಭವಾಗಿ ಈಗ ಈ ಲೇಖನವನ್ನು ಡೈರೆಕ್ಟ್ ಆಗಿ ಟೈಪ್ ಮಾಡಿ ಕಳಿಸುವಷ್ಟು ಸುಧಾರಣೆ ಆಗಿದೆ! ಇಂಟರ್‌ನೆಟ್ ಹಾಕಿಸಿಕೊಂಡಾಗಲೂ ಅಷ್ಟೇ. ಏನಂದರೆ ಏನೂ ಗೊತ್ತಿರಲಿಲ್ಲ. ಕ್ರಮೇಣ ಒಂದೊಂದು ಹೆಜ್ಜೆಯನ್ನೇ ಮುಂದಕ್ಕೆ ಇಡುತ್ತ ಬಂದೆ. ಇದಕ್ಕೆ ಪ್ರೇರಣೆ ನೀಡಿರುವ ಅಂಶಗಳಲ್ಲಿ ತುಷಾರದ 'ಚಿತ್ರ ಇ ಚಿತ್ರ' ಅಂಕಣದ ಲೇಖನಗಳೂ ಇವೆ!

ತಂತ್ರಜ್ಞಾನದ ಸಹಾಯದಿಂದ ಸಾಕಷ್ಟು ಜನರೊಂದಿಗೆ ಸಂಪರ್ಕ ಸಾಧ್ಯವಾಗಿದೆ
ತಂತ್ರಜ್ಞಾನದ ಸಹಾಯದಿಂದ ಸಾಕಷ್ಟು ಜನರೊಂದಿಗೆ ಸಂಪರ್ಕ ಸಾಧ್ಯವಾಗಿದೆಲೇಖಕರ ಸಂಗ್ರಹದಿಂದ

ಯಾವುದೇ ವಿಷಯವನ್ನಾಗಲೀ ಕಲಿಯುವುದಕ್ಕೆ, ಅದರ ಬಗ್ಗೆ ತಿಳಿಯುವುದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ. ಸರಳವಾಗಿ ತಿಳಿಸುವವರು ಬೇಕು ಮತ್ತು ತಿಳಿಯುವ ಮನಸ್ಸಿರಬೇಕು. ಪ್ರಪಂಚದಲ್ಲಿ ಪ್ರತಿಕ್ಷಣಕ್ಕೂ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಎಲ್ಲ ಕ್ಷೇತ್ರದ ವಿಷಯಗಳೂ ಅರ್ಥವಾಗದಿದ್ದರೆ ಬೇಡ, ನಮ್ಮ ಆಸಕ್ತಿಯ ವಿಷಯಗಳನ್ನು, ವೃತ್ತಿಗೆ ಸಂಬಂಧಪಟ್ಟ ವಿಷಯಗಳನ್ನಾದರೂ ತಿಳಿದರೆ, ಅಳವಡಿಸಿಕೊಂಡರೆ, ಸ್ವಲ್ಪವಾದರೂ ಉಪಯೋಗಿಸಿಕೊಂಡರೆ ಸಾರ್ಥಕ.

ಈಗ ನಾನು ಸ್ವಯಂನಿವೃತ್ತಿ ಹೊಂದಿ ವೃತ್ತಿಯಿಂದ ಹೊರಬಂದಿದ್ದೇನೆ. ಇಷ್ಟವಾದ ಸಂಗೀತ ಕೇಳುತ್ತಾ, ಇಷ್ಟವಾದ ಮಾಹಿತಿಗಳನ್ನು ಹುಡುಕುತ್ತಾ, ನಿತ್ಯ ಜೀವನದಲ್ಲಿ ಬಳಕೆಗೆ ಬೇಕಾದ ಸಂಗತಿಗಳನ್ನು ಕಲಿಯುತ್ತಾ ಪ್ರತಿಯೊಂದನ್ನೂ ಕುತೂಹಲದ ಕಣ್ಣುಗಳಿಂದ ನೋಡುತ್ತಾ ನನ್ನ ಬದುಕು ಸಾಗಿದೆ. ಸಾಕಷ್ಟು ಜನರೊಂದಿಗೆ ಸಂಪರ್ಕ ಸಾಧ್ಯವಾಗಿದೆ. ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನಲ್ಲಿದ್ದ ಭಯ, ಕೀಳರಿಮೆಗಳು ಇಲ್ಲವಾಗಿವೆ. ಸಹಕರಿಸಿದ - ಸಹಕರಿಸುತ್ತಿರುವ ಆತ್ಮೀಯ ಜೀವಗಳಿಗೆ, ವಿಜ್ಞಾನ ಮತ್ತು ತಂತ್ರಜ್ಞಾನದ ಲೋಕಕ್ಕೆ ನಮನಗಳು.

- ಸುಬ್ಬಲಕ್ಷ್ಮಿ ಹೆಚ್. ಕೆ. ನಿವೃತ್ತ ಶಿಕ್ಷಕಿ

ಸರ್ವವ್ಯಾಪಿಯಾಗುತ್ತಿರುವ ವಿಜ್ಞಾನ-ತಂತ್ರಜ್ಞಾನದ ಸವಲತ್ತುಗಳನ್ನು ವಿವಿಧ ಕ್ಷೇತ್ರಗಳ ಮಹಿಳೆಯರು ಹೇಗೆ ಬಳಸಿಕೊಳ್ಳುತ್ತಿದ್ದಾರೆ? ಈ ನಿಟ್ಟಿನಲ್ಲಿ ವಿಚಾರವಿನಿಮಯ ಸಾಧ್ಯವಾಗಿಸುವುದು ಮಹಿಳಾದಿನದ ಅಂಗವಾಗಿ ಪ್ರಕಟವಾಗುತ್ತಿರುವ ಈ ಸರಣಿಯ ಉದ್ದೇಶ. ಇದೇ ವಿಷಯದ ಬಗ್ಗೆ ನಿಮ್ಮ ಅನುಭವವನ್ನೂ ಹಂಚಿಕೊಳ್ಳುವ ಆಸಕ್ತಿಯಿದ್ದರೆ ದಯಮಾಡಿ ನಮ್ಮ ಫೇಸ್‌ಬುಕ್ ಪುಟಕ್ಕೆ ಬನ್ನಿ!

Related Stories

No stories found.
logo
ಇಜ್ಞಾನ Ejnana
www.ejnana.com