ಇಂದು ನಮ್ಮ ಭೂಮಿಯ ಜನಸಂಖ್ಯೆ ೮೦೦ ಕೋಟಿಗೆ ತಲುಪಿದೆ!
ಇಂದು ನಮ್ಮ ಭೂಮಿಯ ಜನಸಂಖ್ಯೆ ೮೦೦ ಕೋಟಿಗೆ ತಲುಪಿದೆ!unfpa.org/8billion

8000000000!

ಇವತ್ತು 'ಡೇ ಆಫ್ ೮ ಬಿಲಿಯನ್'. ಇದು ಯಾವುದೋ ಆನ್‌ಲೈನ್ ಅಂಗಡಿಯ ವಿಶೇಷ ಮಾರಾಟದ ಹೆಸರಿನಂತೆ ಇದೆಯಲ್ಲ ಎಂದುಕೊಳ್ಳಬೇಡಿ, ಇಂದು ನಮ್ಮ ಭೂಮಿಯ ಜನಸಂಖ್ಯೆ ೮೦೦ ಕೋಟಿಗೆ ತಲುಪಿದೆ!

ಇವತ್ತು, 2022ರ ನವೆಂಬರ್ 15, 'ಡೇ ಆಫ್ 8 ಬಿಲಿಯನ್', ಅಂದರೆ, 800 ಕೋಟಿಯ ದಿನ. ಇದು ಯಾವುದೋ ಆನ್‌ಲೈನ್ ಅಂಗಡಿಯ ವಿಶೇಷ ಮಾರಾಟದ ಹೆಸರಿನಂತೆ ಇದೆಯಲ್ಲ ಎಂದುಕೊಳ್ಳಬೇಡಿ, ಈ ದಿನಾಚರಣೆಯನ್ನು ಘೋಷಿಸಿರುವುದು ಸ್ವತಃ ವಿಶ್ವಸಂಸ್ಥೆಯೇ. ನಮ್ಮ ಭೂಮಿಯ ಜನಸಂಖ್ಯೆ 800 ಕೋಟಿ ತಲುಪುತ್ತಿರುವುದೇ ಈ ದಿನದ ವಿಶೇಷ.

ರಾತ್ರಿಯ ಹೊತ್ತು ನಿದ್ದೆ ಬಾರದಿದ್ದರೆ 'ಕುರಿ ಎಣಿಸು' (count the sheep) ಎಂದು ಹೇಳುತ್ತಾರೆ. ಅಸಂಖ್ಯಾತ ಕುರಿಗಳು ಬೇಲಿಯೊಂದನ್ನು ದಾಟಿಕೊಂಡು ಬರುತ್ತಿವೆ ಎಂದು ಕಲ್ಪಿಸಿಕೊಂಡು ಅವನ್ನು ಎಣಿಸುತ್ತಾ ಹೋಗುವುದೇ ಈ ತಂತ್ರ. ಒಂದಷ್ಟು ಕುರಿಗಳನ್ನು ಎಣಿಸುವ ವೇಳೆಗೆ ಆ ಕೆಲಸದ ಏಕತಾನತೆ ನಿದ್ದೆ ಬರುವಂತೆ ಮಾಡುತ್ತದೆ ಎನ್ನುವುದು ಇದರ ಉದ್ದೇಶ.

ನೂರು-ಸಾವಿರಗಳನ್ನಾದರೆ ಹೀಗೆ ಎಣಿಸಿಬಿಡಬಹುದು. ಆದರೆ ವಿಶ್ವಸಂಸ್ಥೆಯ ಪ್ರಕಾರ ಇಂದು ನಮ್ಮ ಭೂಮಿಯ ಜನಸಂಖ್ಯೆ 800 ಕೋಟಿಗೆ ತಲುಪಿದೆ. ಅದು 8ರ ಮುಂದೆ 9 ಸೊನ್ನೆಗಳನ್ನು ಬರೆದಷ್ಟು ದೊಡ್ಡ ಸಂಖ್ಯೆ. ಕುರಿ ಎಣಿಸುವ ಅಭ್ಯಾಸವಿರುವವರು ದಿನಕ್ಕೆ ನೂರಲ್ಲ, ಸಾವಿರವನ್ನೇ ಎಣಿಸಿದರೂ ಇಷ್ಟನ್ನು ಎಣಿಸಿ ಮುಗಿಸಲು ಇಪ್ಪತ್ತು ಸಾವಿರ ವರ್ಷಗಳಿಗಿಂತ ಹೆಚ್ಚಿನ ಸಮಯ ಬೇಕು!

ಕುರಿ ಎಣಿಸಿದಂತೆ ಜನರನ್ನು ಎಣಿಸುವುದು ಅಸಾಧ್ಯ, ಸರಿ. ಹೀಗಿರುವಾಗ ನಮ್ಮ ಜನಸಂಖ್ಯೆ ಇವತ್ತೇ 800 ಕೋಟಿ ಮುಟ್ಟುತ್ತಿದೆ ಎಂದು ವಿಶ್ವಸಂಸ್ಥೆಗೆ ಗೊತ್ತಾಗಿದ್ದು ಹೇಗೆ?

ಯಾವುದೇ ಪ್ರದೇಶದಲ್ಲಿ ಎಷ್ಟು ಜನರಿದ್ದಾರೆ ಎಂದು ತಿಳಿದುಕೊಳ್ಳುವ ಪ್ರಮುಖ ವಿಧಾನ ಜನಗಣತಿ. ಆದರೆ ಅದು ಸುಲಭದ ಕೆಲಸವೇನಲ್ಲ. ಬಹುತೇಕ ದೇಶಗಳಲ್ಲಿ ಜನಗಣತಿ ನಡೆಯುವುದು ಹತ್ತು ವರ್ಷಗಳಿಗೆ ಒಂದು ಸಾರಿಯಷ್ಟೇ. ಯುದ್ಧ, ರಾಜಕೀಯ ಅಸ್ಥಿರತೆ ಅಥವಾ ಜಾಗತಿಕ ಸೋಂಕಿನಂತಹ ಸಂದರ್ಭಗಳಲ್ಲಿ ಜನಗಣತಿಯನ್ನು ಸಮಯಕ್ಕೆ ಸರಿಯಾಗಿ ನಡೆಸಲು ಸಾಧ್ಯವಾಗದೆಯೂ ಇರಬಹುದು (2021ರಲ್ಲಿ ನಡೆಯಬೇಕಿದ್ದ ಭಾರತದ ಜನಗಣತಿಯನ್ನು ಕೋವಿಡ್-19 ಕಾರಣದಿಂದ 2023ಕ್ಕೆ ಮುಂದೂಡಲಾಗಿದೆ). ಇಷ್ಟರ ಮೇಲೆ ಜನಗಣತಿ ನಡೆದರೂ ಅದು ನೂರಕ್ಕೆ ನೂರು ಖಚಿತವಾದ ಜನಸಂಖ್ಯೆಯನ್ನೇನೂ ತಿಳಿಸುವುದಿಲ್ಲ.

ಆದ್ದರಿಂದಲೇ ಜಗತ್ತಿನೆಲ್ಲೆಡೆ ಜನರ ಸಂಖ್ಯೆಯನ್ನು ವಿವಿಧ ಅಂಕಿ-ಅಂಶಗಳ ಆಧಾರದ ಮೇಲೆ ಅಂದಾಜಿಸಲಾಗುತ್ತದೆ. ಇತ್ತೀಚಿನ ಜನಗಣತಿಯ ಫಲಿತಾಂಶಗಳ ಜೊತೆಗೆ ಹುಟ್ಟು-ಸಾವುಗಳ ದಾಖಲೆಗಳು, ವಲಸಿಗರನ್ನು ಕುರಿತ ಮಾಹಿತಿ, ವಿವಿಧ ಸಂಸ್ಥೆಗಳ ಸಂಶೋಧನೆ ಹಾಗೂ ಸಮೀಕ್ಷೆಗಳಿಂದ ತಿಳಿದುಬಂದ ವಿಷಯಗಳನ್ನೂ ವಿಶ್ಲೇಷಿಸಿ ಒಂದು ದೇಶದ ಹಾಗೂ ಒಟ್ಟಾರೆಯಾಗಿ ವಿಶ್ವದ ಜನಸಂಖ್ಯೆ ಇಷ್ಟಿರಬಹುದು ಎಂದು ತಜ್ಞರು ಅಂದಾಜಿಸುತ್ತಾರೆ. ಈಗ ವಿಶ್ವಸಂಸ್ಥೆ ಮಾಡಿರುವುದೂ ಅದನ್ನೇ.

ಈ ಅಂದಾಜಿನ ಬೆನ್ನಲ್ಲಿ ಸಾಮಾನ್ಯವಾಗಿ ಅಗಾಧ ಪ್ರಮಾಣದ ದತ್ತಾಂಶ ಇರುವುದರಿಂದ ಅದು ಸಾಕಷ್ಟು ನಿಖರವಾಗಿಯೇ ಇರುತ್ತದೆ. ಇದೇ ಅಂದಾಜಿನ ಮೇಲೆ ಇವತ್ತಿನಂತಹ ವಿಶೇಷ ದಿನಗಳನ್ನು ಗುರುತಿಸುವುದು ಕೂಡ ಪ್ರಪಂಚದ ಆಗುಹೋಗುಗಳ ಬಗ್ಗೆ ಎಲ್ಲರ ಗಮನವನ್ನೂ ಸೆಳೆಯಲು ನೆರವಾಗುತ್ತವೆ. 800 ಕೋಟಿಯ ದಿನವನ್ನು ಆಚರಿಸಲಾಗುತ್ತಿರುವ ಉದ್ದೇಶವೂ ಅದೇ.

ನಾವೆಲ್ಲ ಶಾಲೆಯಲ್ಲಿದ್ದಾಗ 'ಜನಸಂಖ್ಯಾ ಸ್ಫೋಟ' ಎನ್ನುವುದು ಭಾಷಣ ಹಾಗೂ ಪ್ರಬಂಧ ಸ್ಪರ್ಧೆಗಳ ಖಾಯಂ ವಿಷಯಗಳ ಪಟ್ಟಿಯಲ್ಲಿ ಇರುತ್ತಿತ್ತು. ಆ ವಿಷಯದ ಬಗ್ಗೆ ಹೆಚ್ಚು ಮಾಹಿತಿಯಿಲ್ಲದ ಕಾಲದಲ್ಲೂ ನಮ್ಮ ದೇಶದ - ನಮ್ಮ ಪ್ರಪಂಚದ ಜನಸಂಖ್ಯೆ ಹೆಚ್ಚುತ್ತಲೇ ಹೋದರೆ ಏನೆಲ್ಲ ಆಗಬಹುದು ಎನ್ನುವುದರ ಬಗ್ಗೆ ಅನೇಕರು ಭಾಷಣ ಕುಟ್ಟುತ್ತಿದ್ದೆವು.

ಸಾರ್ವಜನಿಕ ಆರೋಗ್ಯ, ಪೋಷಣೆ, ನೈರ್ಮಲ್ಯ ಮತ್ತು ಔಷಧಿಗಳ ಲಭ್ಯತೆಯಲ್ಲಿನ ಗಮನಾರ್ಹ ಸುಧಾರಣೆಯಿಂದಾಗಿ ಪ್ರಪಂಚದ ಜನಸಂಖ್ಯೆ ಇಂದು 800 ಕೋಟಿಯ ಮೈಲಿಗಲ್ಲನ್ನು ಮುಟ್ಟಿದೆ. ಆದರೆ, 'ಜನಸಂಖ್ಯಾ ಸ್ಫೋಟ' ಕುರಿತ ಭಾಷಣಗಳಲ್ಲಿ ಅಂದಾಜಿಸುತ್ತಿದ್ದಂತೆ ಜನಸಂಖ್ಯೆ ಒಂದೇ ಸಮನಾಗಿ ಏರುತ್ತಲೇ ಇದೆಯೇ?

ಈ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ. 1987ರಿಂದ ಇಂದಿನವರೆಗೆ ಪ್ರತಿ 11-12 ವರ್ಷಗಳಿಗೊಮ್ಮೆ ಪ್ರಪಂಚದ ಜನಸಂಖ್ಯೆ ನೂರು ಕೋಟಿಯಷ್ಟು ಹೆಚ್ಚುತ್ತಲೇ ಬಂದಿದೆ. ಭಾರತದ ಜನಸಂಖ್ಯೆಯೂ ಹೆಚ್ಚುತ್ತಲೇ ಇದ್ದು ಮುಂದಿನ ವರ್ಷ (2023) ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವೆಂಬ ಅಗ್ಗಳಿಕೆಯೂ ನಮ್ಮ ದೇಶಕ್ಕೆ ದೊರಕಲಿದೆ. 2050ರವರೆಗೆ ಜಾಗತಿಕ ಜನಸಂಖ್ಯೆಯ ಹೆಚ್ಚಳಕ್ಕೆ ದೊಡ್ಡ ಕೊಡುಗೆ ನೀಡಲಿವೆಯೆಂದು ಅಂದಾಜಿಸಲಾಗಿರುವ ದೇಶಗಳ ಪಟ್ಟಿಯಲ್ಲೂ ನಮ್ಮ ದೇಶ ಇದೆ. 'ಜನಸಂಖ್ಯಾ ಸ್ಫೋಟದಿಂದ ಪರಿಸರದ ಮೇಲೆ ಅಗಾಧ ಪರಿಣಾಮಗಳಾಗುತ್ತವೆ' ಎಂದು ನಾವು ಶಾಲೆಯಲ್ಲಿ ಓದಿದ್ದ ಅಂಶ, ನಮ್ಮ ದೇಶದ ಮಟ್ಟಿಗೆ, ಇನ್ನೂ ಪ್ರಸ್ತುತವಾಗಿಯೇ ಇದೆ.

ಆದರೆ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ. ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ನಮ್ಮ ಜನಸಂಖ್ಯೆ 800ರಿಂದ 900 ಕೋಟಿ ಮುಟ್ಟುವುದಕ್ಕೆ ಹದಿನೈದು ವರ್ಷ, ಅಲ್ಲಿಂದ 1000 ಕೋಟಿ ಆಗುವುದಕ್ಕೆ ಇಪ್ಪತ್ತೊಂದು ವರ್ಷ ಬೇಕಾಗಲಿದೆಯಂತೆ. ಇದು ಜನಸಂಖ್ಯೆಯ ಏರುಗತಿ ನಿಧಾನವಾಗುತ್ತಿರುವುದರ ಸಂಕೇತ ಎಂದು ವಿಶ್ವಸಂಸ್ಥೆ ಹೇಳಿದೆ.

ಇದರ ಪರಿಣಾಮ ಏನಾಗಬಹುದು? 2022ರಿಂದ 2050ರವರೆಗಿನ ಅವಧಿಯಲ್ಲಿ ಒಟ್ಟು 61 ದೇಶಗಳ ಜನಸಂಖ್ಯೆ ಕನಿಷ್ಠ ಶೇ. 1ರಷ್ಟಾದರೂ ಕಡಿಮೆಯಾಗಲಿದೆ ಎನ್ನುವುದು ಒಂದು ನಿರೀಕ್ಷೆ. ಜನಸಂಖ್ಯೆ ಕಡಿಮೆಯಾಗುತ್ತಿರುವ ದೇಶ ಅಥವಾ ಪ್ರದೇಶಗಳತ್ತ ಹೊರಗಿನವರ ವಲಸೆ ಹೆಚ್ಚಲಿದೆ ಎಂದೂ ಅಂದಾಜಿಸಲಾಗಿದೆ.

ಇದೆಲ್ಲದರ ಜೊತೆಗೆ ಇನ್ನೂ ಒಂದು ವಿಷಯ ಇದೆ: ಜನರ ಸರಾಸರಿ ವಯಸ್ಸು ಕೂಡ ಹೆಚ್ಚುತ್ತಿದೆ. 2050ರ ವೇಳೆಗೆ 65ಕ್ಕೂ ಹೆಚ್ಚು ವಯಸ್ಸಿನವರ ಸಂಖ್ಯೆ ಪ್ರಪಂಚದ ಒಟ್ಟು ಜನಸಂಖ್ಯೆಯ ಶೇ. 16ರಷ್ಟು ಇರಲಿದೆಯಂತೆ. ವಯಸ್ಸಾದವರ ಸಂಖ್ಯೆ ಹೆಚ್ಚಿದಂತೆ ಅವರ ಆರೋಗ್ಯ ಹಾಗೂ ಸಾಮಾಜಿಕ ಸುರಕ್ಷತೆಗಳತ್ತ ಹೆಚ್ಚಿನ ಗಮನಹರಿಸುವ ಜವಾಬ್ದಾರಿಯೂ ಸರಕಾರಗಳ ಹೆಗಲೇರಲಿದೆ.

ಈ ಬದಲಾವಣೆ ಪ್ರಪಂಚದ ಅನೇಕ ದೇಶಗಳಲ್ಲಿ ಈಗಾಗಲೇ ಆಗಿದೆ, ಆಗುತ್ತಿದೆ. ಮುಂದಿನ ಕೆಲವೇ ದಶಕಗಳಲ್ಲಿ ಭಾರತವೂ ಇದಕ್ಕೆ ಸಾಕ್ಷಿಯಾಗಲಿದೆ ಎನ್ನುವುದು ಸದ್ಯದ ಅಂದಾಜು. ಆದರೆ ಸದ್ಯದಲ್ಲಿ ನಮ್ಮ ದೇಶವಿನ್ನೂ ಯುವ ಭಾರತವೇ. ಸೀಮಿತ ಅವಧಿಯವರೆಗಾದರೂ ದುಡಿಯುವ ವಯಸ್ಸಿನ ಜನರ ಸಂಖ್ಯೆ ಹೆಚ್ಚಿರುವುದು ನಮ್ಮ ದೇಶಕ್ಕೆ ದೊರೆತಿರುವ ವಿಶೇಷ ಲಾಭ (ಇದನ್ನು ಇಂಗ್ಲಿಷಿನಲ್ಲಿ demographic dividend ಎಂದು ಕರೆಯುತ್ತಾರೆ).

8 ಎಂಬ ಅಂಕಿಯನ್ನು ಅಡ್ಡ ತಿರುಗಿಸಿದರೆ ∞ ಆಗುತ್ತದೆ. ಅದು ಅಪರಿಮಿತತೆಯ (infinity) ಸಂಕೇತ. ಪ್ರಪಂಚದ ಜನಸಂಖ್ಯೆ 800 ಕೋಟಿ ತಲುಪುತ್ತಿರುವ ಇಂದಿನ ಸನ್ನಿವೇಶ ಅನೇಕ ಸಮಸ್ಯೆಗಳನ್ನು ತಂದಿಡುತ್ತಿರುವಂತೆಯೇ ಆ ಸಮಸ್ಯೆಗಳನ್ನು ಬಗೆಹರಿಸುವ, ಈ ಪ್ರಪಂಚವನ್ನು ಇನ್ನಷ್ಟು ಉತ್ತಮವಾಗಿಸುವ ಅಪರಿಮಿತ ಅವಕಾಶಗಳನ್ನೂ ನಮ್ಮೆದುರು ತೆರೆದಿಟ್ಟಿದೆ. ಸಮಸ್ಯೆಗಳ ರಾಶಿಯಲ್ಲಿರುವ ಆ ಅವಕಾಶಗಳನ್ನು ನಾವು ಕಂಡುಕೊಳ್ಳಬೇಕು, ಅಷ್ಟೇ!

(ನವೆಂಬರ್ 15, 2022ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ)

Related Stories

No stories found.
logo
ಇಜ್ಞಾನ Ejnana
www.ejnana.com