ವಿಜ್ಞಾನ ಲೋಕದ ಜ್ಞಾನಕುಸುಮಗಳು
ವಿಜ್ಞಾನ ಲೋಕದ ಜ್ಞಾನಕುಸುಮಗಳುಕ್ಷಮಾ ವಿ. ಭಾನುಪ್ರಕಾಶ್

ಪುಸ್ತಕ ಪರಿಚಯ: ವಿಜ್ಞಾನ ಲೋಕದ ಜ್ಞಾನಕುಸುಮಗಳು

ವಿಜ್ಞಾನ ಲೇಖಕಿ ಕ್ಷಮಾ ವಿ. ಭಾನುಪ್ರಕಾಶ್ ಅವರ ಹೊಸ ಪುಸ್ತಕ 'ವಿಜ್ಞಾನ ಲೋಕದ ಜ್ಞಾನಕುಸುಮಗಳು' ನಾಳೆ (ಫೆ.೧೪, ೨೦೨೧) ಲೋಕಾರ್ಪಣೆಯಾಗುತ್ತಿದೆ. ಈ ಪುಸ್ತಕದಲ್ಲಿ ಏನಿದೆ? ಲೇಖಕಿಯ ಮಾತುಗಳಲ್ಲೇ ಓದಿ!

ಎರಡು ವಿಶಿಷ್ಟ ಜಗತ್ತುಗಳು - ಒಂದು ವಿಜ್ಞಾನದ್ದು, ಮತ್ತೊಂದು ಮಹಿಳೆಯರದ್ದು; ವಿಜ್ಞಾನವು ಎಲ್ಲೆಲ್ಲೂ ಅಡಕವಾಗಿದ್ದು, ಅದನ್ನು ಹುಡುಕಿ ತೆಗೆದು ಒಗಟು ಬಿಡಿಸಿ ಅರ್ಥೈಸಿಕೊಂಡು, ಜಗತ್ತಿಗೆ ಸಮೀಕರಿಸಿ ಹೊಸ ಹೊಳಹುಗಳನ್ನು ವಿನೂತನ ಅನ್ವೇಷಣೆಗಳ ಮೂಲಕ ಹೊರಹಾಕುವ ಅಚ್ಚರಿಯ ಕೆಲಸ ಮಾಡುವ ಮಾಂತ್ರಿಕರಿಗೆ ವಿಜ್ಞಾನಿಗಳೆಂದು ಹೆಸರು. ಮತ್ತೊಂದು ಜಗತ್ತು ಮಹಿಳೆಯರದ್ದು.

ಶತಮಾನಗಳ ಹಿಂದಿನ ಗಾರ್ಗಿ, ಮೈತ್ರೇಯಿಯಂತಹ ಮಹಾನ್‌ ಜಿಜ್ಞಾಸುಗಳಿಂದ ಮೊದಲ್ಗೊಂಡು ಇಂದಿನವರೆಗೂ ಸಾವಿರಾರು ಮಹಿಳಾ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಜ್ಞಾನ ಕ್ಷೇತ್ರ ಮತ್ತು ಮಹಿಳಾ ಲೋಕದ ಅಚ್ಚರಿ, ವೈಶಿಷ್ಟ್ಯ ಮತ್ತು ಶಕ್ತಿ ಒಟ್ಟಾದಾಗ ಅದ್ಭುತ ವಿದ್ಯಮಾನಗಳಿಗೆ ನಾವು ಸಾಕ್ಷಿಯಾಗಬೇಕಿರುವುದು ಸಹಜ ಅಲ್ಲವೇ? ಕಬ್ಬಿಣದ ಕಡಲೆ ಎಂದು ಕರೆಸಿಕೊಳ್ಳುವ ವಿಜ್ಞಾನದ ಸಾರವನ್ನು ಅರಿತು, ಎಲ್ಲರಿಗೂ ಹಂಚುವ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಅನೇಕ ಮಹಿಳಾ ವಿಜ್ಞಾನಿಗಳ ಸರಿಪಾಲೂ ಇದೆ.

ಮಹಿಳೆಯರು ಪುರುಷರಿಗಿಂತಾ ಕಡಿಮೆಯಲ್ಲ ಎಂದಾಗ ಅವರಿಗೆ ವಿಶೇಷ ಸ್ಥಾನಮಾನ ಏಕೆ ಬೇಕು? ಮೀಸಲಾತಿ ಏಕೆ ಬೇಕು? ಮಹಿಳಾ ವಿಜ್ಞಾನಿಗಳಿಗೇಕೆ ವಿಶಿಷ್ಟ ಮಾನ್ಯತೆ, ಹಾರ ತುರಾಯಿ ಪುಸ್ತಕ ಸಮರ್ಪಣೆ? ಇದಕ್ಕೆ ಕಾರಣ ಇಲ್ಲದಿಲ್ಲ. ವ್ಯವಸ್ಥೆಯ ಲೋಪದೋಷಗಳಿಂದ ಶತಮಾನಗಳಷ್ಟು ಕಾಲ ಅವಕಾಶ ವಂಚಿತರಾಗಿದ್ದು, ನಂತರ ತಮ್ಮ ಜೈವಿಕ ಹಾಗೂ ಸಾಮಾಜಿಕ ಇತಿಮಿತಿಗಳನ್ನು ಮೀರಿ, ವಿಜ್ಞಾನದೆಡೆಗೆ ಆಸಕ್ತಿಯ ಕೈಚಾಚಿ, ಅದನ್ನು ತಮ್ಮ ಕ್ಷೇತ್ರವನ್ನಾಗಿಸಿಕೊಂಡು, ತಮ್ಮದೆಲ್ಲವನ್ನೂ ಅನ್ವೇಷಣೆಗೆ, ವಿಜ್ಞಾನಕ್ಕೆ ಧಾರೆಯೆರೆದವರಿಗೆ ಇದು ಸೂಕ್ತ ಧನ್ಯವಾದ ಅರ್ಪಣೆ ಅಷ್ಟೇ. ಅವರು ಮಹಿಳಾ ವಿಜ್ಞಾನಿಗಳು ಎಂದು ಗುರುತಿಸಿಕೊಂಡರೂ, ಅವರು ಮಹಿಳೆ ಎಂಬುದಕ್ಕಲ್ಲ ಈ ಮಾನ್ಯತೆ, ಅದು ಅವರೊಳಗಿನ ಶುದ್ಧವಿಜ್ಞಾನಿಗೆ ಮಾತ್ರ.

ಜಾಗತಿಕವಾಗಿ ನೊಬೆಲ್‌ನಂತಹ ಅತ್ಯುನ್ನತ ವಿಜ್ಞಾನ ಪ್ರಶಸ್ತಿಗಳನ್ನು ಪಡೆದವರು ಕೆಲವರು, ಎಲೆಮರೆಕಾಯಿಯಂತೆ ತಮ್ಮ ಪ್ರಯೋಗಾಲಯದೊಳಗೆ ಸಂಶೋಧನೆಗಳಲ್ಲಿ ಮುಳುಗಿರುವವರು ಹಲವರು; ಆದರೆ ಇವರೆಲ್ಲರ ಮನೋಧರ್ಮ ಒಂದೇ, ವಿಜ್ಞಾನ. ಜಾಗತಿಕವಾಗಿ ಅಪಾರ ಸಾಧನೆಗೈದ ೫೦ ಮಹಿಳಾ ವಿಜ್ಞಾನಿಗಳ ಪುಟ್ಟ ಪರಿಚಯ ಇಲ್ಲಿದೆ. ಇದು ನಮ್ಮ ಮತ್ತು ಮುಂದಿನ ಪೀಳಿಗೆಯ ಯುವತಿ-ಯುವಕರನ್ನು, ವಿಜ್ಞಾನ ಕ್ಷೇತ್ರದ ಬೆರಗಿನೆಡೆಗೆ, ಅದನ್ನು ದಕ್ಕಿಸಿಕೊಳ್ಳುವಲ್ಲಿ ತಮ್ಮ ಕಾಲಿಗಡರಿದ ಬಳ್ಳಿಗಳನ್ನು ಕಿತ್ತು ಹೋರಾಡಿದ ಮಹಿಳಾ ವಿಜ್ಞಾನಿಗಳೆಡೆಗೆ ಅಚ್ಚರಿಯ ಕಣ್ಣರಳಿಸುವ ಹಾಗೆ ಮಾಡುವ ಪ್ರಯತ್ನ.

ಈ ಪುಸ್ತಕ ಸಿದ್ಧಪಡಿಸುವ ಹಾದಿಯಲ್ಲಿ ಅನೇಕ ದೇಶಗಳ ಅನೇಕ ಕಾಲಘಟ್ಟಗಳ ಸಾಧಕಿಯರ ಜೀವನದಲ್ಲೊಂದು ಪುಟ್ಟ ಇಣುಕು ಹಾಕುತ್ತಾ ಮುಂದಿನ ಸಾಧಕಿಯ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಾ ಸಾಗಿ ಬಂದಿದ್ದೇವೆ. ಕಾಲಘಟ್ಟದ ಆಧಾರದ ಮೇಲೆಯೋ, ಅವರು ಸೇವೆ ಸಲ್ಲಿಸಿದ ಶಾಖೆಯ ಆಧಾರದ ಮೇಲೆಯೋ ಈ ಯಾದಿಯಲ್ಲಿ ನಿರ್ದಿಷ್ಟ ಕ್ರಮವನ್ನೇನೂ ಅನುಸರಿಸಿಲ್ಲ.ಇದು ಜಗತ್ತಿನ ಟಾಪ್‌ ೫೦ ವಿಜ್ಞಾನಿಗಳ ಪಟ್ಟಿ ಎಂಬ ಆಯ್ಕೆಯ ಮಾನದಂಡವನ್ನೂ ಇಲ್ಲಿ ಬಳಸಲಾಗಿಲ್ಲ. ಒಬ್ಬರ ಸಾಧನೆಯನ್ನು ಮತ್ತೊಬ್ಬರಿಗೆ ಹೋಲಿಸಿ ಇವರದ್ದಕ್ಕಿಂತಾ ಇವರದ್ದು ಶ್ರೇಷ್ಠ ಎನ್ನುವುದು ತರವಲ್ಲ. ಇದೇನಿದ್ದರೂ ಈ ಸಾಧಕಿಯರ ಅನುಭವಗಳನ್ನು, ಬದುಕನ್ನು, ಸಾಧನೆಯನ್ನು ಅರಿಯಲು, ಅದರಿಂದ ಸ್ಫೂರ್ತಿ ಪಡೆಯಲು ಕೈಗೊಂಡ ಒಂದು ಪಯಣ. ಇಲ್ಲಿ ಪ್ರತಿಯೊಬ್ಬರ ಸಾಧನೆಯನ್ನೂ, ಅನುಭವವನ್ನೂ ವ್ಯಕ್ತಿನಿಷ್ಠವಾಗಿ, ವಸ್ತುನಿಷ್ಠವಾಗಿ ಗಮನಿಸಿ ಮುಂದೆ ಸಾಗಬೇಕಷ್ಟೇ. ಹಾಗೆಯೇ ಇಲ್ಲಿಯವರೆಗೂ ಸಾಗಿಬಂದ ನಮಗೆ ಈ ಪಯಣದ ಒಟ್ಟಂದವಾಗಿ ಸ್ಫೂರ್ತಿಯೆಂಬ ಬತ್ತದ ಬುತ್ತಿ ದೊರೆತಿದೆಯಷ್ಟೇ. ಇವರ ಅನುಭವಗಳಿಂದ ನಾವು ಪಾಠ ಕಲಿತು, ಮಹಿಳೆಯರಿಗೆ ದೊರೆಯುತ್ತಿರುವ ಅವಕಾಶಗಳ ವಿಷಯದಲ್ಲಿ ಅವರಿಗಿಂತಾ ಒಳ್ಳೆಯ ಕಾಲಘಟ್ಟದಲ್ಲಿದ್ದೇವೆಂಬ ನಿಟ್ಟುಸಿರು ಬಿಟ್ಟು, ನೆಪಗಳನ್ನು ಪಕ್ಕಕ್ಕೆ ಸರಿಸಿ, ನಮ್ಮ ಗುರಿಗಳ ಮೇಲೊಮ್ಮೆ ನೇರದೃಷ್ಟಿ ಹರಿಸಿ, ಮುಂದೆ ಸಾಗುವುದೊಂದೇ ಇನ್ನುಳಿದ ಕೆಲಸ.

ಎಲ್ಲರೂ ಮೇರಿಕ್ಯೂರಿಯೋ, ಆನ್ನಾ ಮಣಿಯೋ, ರಾಜೇಶ್ವರಿ ಚಟರ್ಜಿಯೋ, ಲೆವಿ-ಮೊಂಟಾಲ್ಸಿನಿಯೋ ಆಗುವುದು ಬೇಕಿಲ್ಲ, ಸಾಧ್ಯವೂ ಇಲ್ಲ. ಎಲ್ಲರೂ ತಮ್ಮತಮ್ಮಲ್ಲಿನ ಅನನ್ಯ ಶಕ್ತಿಯನ್ನು ಅರ್ಥೈಸಿಕೊಂಡು, ಅದನ್ನೇ ಅಸ್ತ್ರವಾಗಿಸಿಕೊಂಡು ವಿಜ್ಞಾನ ಕ್ಷೇತ್ರದಲ್ಲೇ ಆಗಲಿ, ಅಥವಾ ಮತ್ಯಾವುದೇ ಕ್ಷೇತ್ರದಲ್ಲಾಗಲೀ ಅಂದುಕೊಂಡದ್ದನ್ನು ಸಾಧಿಸುವವರೆಗೂ ತಿರುಗಿ ನೋಡದಿದ್ದರೆ ನಾವು ನಾವಾಗಿಯೇ ಇಂತಹವರ ಸಾಲಿನಲ್ಲಿ ಸೇರ್ಪಡೆಯಾಗಬಹುದು. ಆದರೆ, ನಾವೆಲ್ಲರೂ ಮರೆಯದೇ ಮಾಡಬೇಕಿರುವ ಎರಡು ಕೆಲಸಗಳೆಂದರೆ, ಒಂದು, ನಮ್ಮ ಇರುವಲ್ಲಿ, ನಾವು ಬಳಸುವ ವಸ್ತುಗಳಲ್ಲಿ, ಕಾಣುವ ವಿದ್ಯಮಾನಗಳಲ್ಲಿ ಇರುವ ಈ ವಿಜ್ಞಾನಿಗಳ ಕೊಡುಗೆಯನ್ನು ಸ್ಮರಿಸಿ ಅವರಿಗೆ ಧನ್ಯವಾದ ಅರ್ಪಿಸುವುದು, ಮತ್ತು ಎರಡನೆಯದಾಗಿ ನಾವ್ಯಾರೇ ಆದರೂ ಹೆಣ್ಣುಮಕ್ಕಳಿಗೆ ಸಿಗಬೇಕಾದ ಶೈಕ್ಷಣಿಕ, ಸಾಮಾಜಿಕ ಅವಕಾಶಗಳು ಸಿಗುವಂತೆ ನಮಗೆ ಸಾಧ್ಯವಾದದ್ದನ್ನು ಮಾಡುವುದು. ಇದೇ ಈ ಕೃತಿಯ ಸಾರ್ಥಕ್ಯ.

ವಿಜ್ಞಾನ ಲೋಕದ ಜ್ಞಾನಕುಸುಮಗಳು

ಲೇಖಕರು: ಕ್ಷಮಾ ವಿ. ಭಾನುಪ್ರಕಾಶ್

ಪ್ರಕಾಶಕರು: ಸಮನ್ವಿತ, ಬೆಂಗಳೂರು

ಬೆಲೆ: ರೂ. 120

ಹೆಚ್ಚಿನ ವಿವರಗಳಿಗೆ: 9844192952

Related Stories

No stories found.
logo
ಇಜ್ಞಾನ Ejnana
www.ejnana.com