ಬಯಲಲ್ಲಾದರೂ ಇರಿ, ಬಾಹ್ಯಾಕಾಶದಲ್ಲಾದರೂ ಇರಿ, ಶೌಚಾಲಯವೇ ಸರಿ!
ಶೌಚಾಲಯಗಳ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುವುದು ವಿಶ್ವ ಶೌಚಾಲಯ ದಿನಾಚರಣೆಯ ಉದ್ದೇಶಗಳಲ್ಲೊಂದುPhoto by Markus Spiske from Pexels

ಬಯಲಲ್ಲಾದರೂ ಇರಿ, ಬಾಹ್ಯಾಕಾಶದಲ್ಲಾದರೂ ಇರಿ, ಶೌಚಾಲಯವೇ ಸರಿ!

ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ ೪೫ರಷ್ಟು ಜನರಿಗೆ ಶೌಚಾಲಯದ ಸೌಲಭ್ಯವೇ ಇಲ್ಲ. ಅಂದರೆ, ನಮ್ಮ ಜಗತ್ತಿನಲ್ಲಿ ಶೌಚಾಲಯ ಬಳಸುವವರ ಸಂಖ್ಯೆಗಿಂತ ಮೊಬೈಲ್ ಬಳಸುವವರ ಸಂಖ್ಯೆಯೇ ದೊಡ್ಡದು!

'ದ ಬಿಗ್ ಬ್ಯಾಂಗ್ ಥಿಯರಿ' ಎನ್ನುವುದು ಇಂಗ್ಲಿಷಿನ ಜನಪ್ರಿಯ ಹಾಸ್ಯ ಧಾರಾವಾಹಿಗಳಲ್ಲೊಂದು. ಈ ಧಾರಾವಾಹಿಯಲ್ಲಿ ಹಾವರ್ಡ್ ವಾಲೋವಿಟ್ಸ್ ಎಂಬಾತ ಒಬ್ಬ ಎಂಜಿನಿಯರ್. ವಿಜ್ಞಾನಿಗಳ ಗುಂಪಿನಲ್ಲಿ ಏಕೈಕ ಎಂಜಿನಿಯರ್ ಆಗಿರುವ ಕಾರಣ ಆತ ಸದಾ ತನ್ನ ಗೆಳೆಯರ ಲೇವಡಿಗೆ ಗುರಿಯಾಗುತ್ತಲೇ ಇರುತ್ತಾನೆ. ಹೀಗಿರುವಾಗಲೇ ನಾಸಾ ಯೋಜನೆಯೊಂದರಲ್ಲಿ ಕೆಲಸಮಾಡುವ ಅವಕಾಶ ಪಡೆದುಕೊಳ್ಳುವ ಹಾವರ್ಡ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಬಳಸಲೆಂದು ಹೈಟೆಕ್ ಶೌಚಾಲಯವೊಂದನ್ನು ರೂಪಿಸುತ್ತಾನೆ. ಭೂಮಿಯಿಂದ ಹೊರಟು ಬಾಹ್ಯಾಕಾಶ ಕೇಂದ್ರ ತಲುಪುವ ಆ ಶೌಚಾಲಯ ಅಲ್ಲಿ ಹತ್ತು ಬಾರಿ ಬಳಸುವುದರೊಳಗಾಗಿಯೇ ಕೆಟ್ಟುಹೋಗುತ್ತದೆ. ಪರಿಣಾಮ, ಅಲ್ಲಿರುವ ಎಲ್ಲ ಗಗನಯಾನಿಗಳೂ ಬಾಹ್ಯಾಕಾಶ ನಡಿಗೆಗೆಂದು ತುರ್ತಾಗಿ ಹೊರಗೆ ಹೋಗುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ.

ಲಭ್ಯವಿರುವ ಏಕೈಕ ಶೌಚಾಲಯ ಹೀಗೆ ಕೆಟ್ಟುಹೋಗುವ ಸನ್ನಿವೇಶ ಕೇಳಲು ತಮಾಷೆಯಾಗಿರುತ್ತದೆ, ನಿಜ. ಆದರೆ ಇಂತಹುದೊಂದು ಘಟನೆ ನಿಜಕ್ಕೂ ಸಂಭವಿಸಿದರೆ ಹೇಗಿರಬಹುದು? ಒಂದೆರಡು ವಾರಗಳ ಹಿಂದೆ ಅದರ ಅನುಭವ ಕೆಲವು ಗಗನಯಾನಿಗಳಿಗೆ ದೊರಕಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಅವರನ್ನೆಲ್ಲ ಮನೆಗೆ ಕರೆತರಬೇಕಿದ್ದ ಕ್ಯಾಪ್ಸೂಲಿನ ಶೌಚಾಲಯ ಕೆಟ್ಟಿದ್ದರಿಂದ ಭೂಮಿಗೆ ಮರಳುವ ಪ್ರಯಾಣದುದ್ದಕ್ಕೂ ಅವರು ಡಯಪರ್‌ಗಳನ್ನೇ ಅವಲಂಬಿಸುವ ಪರಿಸ್ಥಿತಿ ಸೃಷ್ಟಿಯಾಗಿತ್ತು!

ಅಂತರಿಕ್ಷದ ಮಾತು ಹಾಗಿರಲಿ, ಹೀಗೆ ಶೌಚಾಲಯ ಬಳಸಲಾಗದ ಪರಿಸ್ಥಿತಿ ವಿಮಾನ ಪ್ರಯಾಣದ ಸಂದರ್ಭದಲ್ಲೂ ಆಗಿಂದಾಗ್ಗೆ ಉದ್ಭವಿಸುತ್ತಿರುತ್ತದೆ. ಶೌಚಾಲಯ ಕೆಟ್ಟಿದ್ದರಿಂದ - ಅಥವಾ ಕಟ್ಟಿಕೊಂಡಿದ್ದರಿಂದ - ವಿಮಾನ ಅರ್ಧದಾರಿಯಿಂದ ತನ್ನ ಆರಂಭಿಕ ಸ್ಥಳಕ್ಕೆ ಮರಳಿತು ಎನ್ನುವಂತಹ ಸುದ್ದಿಯೂ ಕೇಳಿಬರುತ್ತಿರುತ್ತದೆ. ಸೀಟ್ ಬೆಲ್ಟ್ ಹಾಕಿಕೊಳ್ಳಬೇಕು ಎಂಬ ನಿರ್ದೇಶನ ಇದ್ದಾಗ ವಿಮಾನದ ಶೌಚಾಲಯಗಳನ್ನು ಬಳಸಬಾರದೆಂಬ ನಿಯಮವಿದೆಯಲ್ಲ, ಶೌಚಾಲಯದ ಸಮಸ್ಯೆ ಮುಚ್ಚಿಡಲು ವಿಮಾನದ ಸಿಬ್ಬಂದಿ ಪ್ರಯಾಣದುದ್ದಕ್ಕೂ ಈ ಚಿಹ್ನೆಯನ್ನು ಆನ್ ಮಾಡಿಟ್ಟಿದ್ದರು ಎಂದು ಪ್ರಯಾಣಿಕರು ಆರೋಪಿಸಿರುವುದೂ ಉಂಟು. ಆ ಲೆಕ್ಕದಲ್ಲಿ ರೈಲುಗಳೇ ವಾಸಿ ಎನ್ನಬೇಕು. ಶೌಚಾಲಯದ ಸಮಸ್ಯೆಯನ್ನು ರೈಲ್ವೇ ಸಿಬ್ಬಂದಿ ಥಟ್ಟನೆ ಸರಿಪಡಿಸಿದರು ಎನ್ನುವಂತಹ ಸುದ್ದಿಗಳೇ ಈಚೆಗೆ ಹೆಚ್ಚಾಗಿ ಕೇಳಿಬರುತ್ತಿವೆ.

ಸ್ಪೇಸ್ ಕ್ಯಾಪ್ಸೂಲು, ವಿಮಾನ ಹಾಗೂ ರೈಲಿನಲ್ಲಿ ಶೌಚಾಲಯ ಕೈಕೊಟ್ಟರೆ ಅದು ಸುದ್ದಿಯಾಗುತ್ತದೆ. ಆದರೆ ಶೌಚಾಲಯಗಳಿಗೆ ಸಂಬಂಧಪಟ್ಟಂತೆ ಇವೆಲ್ಲದಕ್ಕಿಂತ ದೊಡ್ಡ ವಿಷಯವೊಂದಿದೆ ಎಂದು ವಿಶ್ವಸಂಸ್ಥೆ ಹೇಳುತ್ತದೆ. ಜಗತ್ತಿನ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ ೪೫ರಷ್ಟು ಜನರಿಗೆ ಶೌಚಾಲಯದ ಸೌಲಭ್ಯವೇ ಇಲ್ಲ ಎನ್ನುವುದು ಆ ವಿಷಯ. ಅಂದರೆ, ನಮ್ಮ ಜಗತ್ತಿನಲ್ಲಿ ಶೌಚಾಲಯ ಬಳಸುವವರ ಸಂಖ್ಯೆಗಿಂತ ಮೊಬೈಲ್ ಬಳಸುವವರ ಸಂಖ್ಯೆಯೇ ದೊಡ್ಡದು!

ಈ ಸಮಸ್ಯೆಯ ಬಗ್ಗೆ ಗಮನ ಸೆಳೆಯುವುದಕ್ಕಾಗಿಯೇ ಅದು ಪ್ರತಿವರ್ಷ ೧೯ನೇ ನವೆಂಬರ್ ಅನ್ನು ವಿಶ್ವ ಶೌಚಾಲಯ ದಿನವಾಗಿ ಆಚರಿಸುತ್ತದೆ. ಶೌಚಾಲಯಗಳ ಮಹತ್ವವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುವುದು ಹಾಗೂ ನೈರ್ಮಲ್ಯವನ್ನು ಜಾಗತಿಕ ಅಭಿವೃದ್ಧಿಯ ಆದ್ಯತೆಗಳಲ್ಲೊಂದಾಗಿ ಮಾಡುವುದು ಈ ದಿನಾಚರಣೆಯ ಉದ್ದೇಶ. ಮೂಲಭೂತ ನೈರ್ಮಲ್ಯಕ್ಕಾಗಿ ಮಾಡಿದ ಪ್ರತಿಯೊಂದು ಹೂಡಿಕೆಯೂ ತನ್ನ ಮೌಲ್ಯದ ಐದು ಪಟ್ಟಿನವರೆಗೆ ಪ್ರಯೋಜನಗಳನ್ನು ತಂದುಕೊಡುತ್ತದೆಂದು ವಿಶ್ವಸಂಸ್ಥೆ ಹೇಳಿದೆ. ಆದ್ದರಿಂದಲೇ ಅದು ಜಾಗತಿಕ ನೈರ್ಮಲ್ಯ ಸಮಸ್ಯೆಯ ಪರಿಹಾರ ಹಾಗೂ ೨೦೩೦ರ ವೇಳೆಗೆ ನೀರು ಹಾಗೂ ನೈರ್ಮಲ್ಯವನ್ನು ಜಗತ್ತಿನ ಎಲ್ಲರಿಗೂ ಒದಗಿಸುವ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಈ ಗುರಿಯನ್ನು ತಲುಪಬೇಕಾದರೆ ಮೊದಲಿಗೆ ಬೇಕಾದದ್ದು ಭಾರೀ ಪ್ರಮಾಣದ ಹೂಡಿಕೆ. ಅದನ್ನು ಸರಕಾರಗಳು, ವಿವಿಧ ಸಂಘಸಂಸ್ಥೆಗಳು ಮಾಡುತ್ತವೆ ಎಂದಿಟ್ಟುಕೊಂಡರೂ ಹೊಸ ಕಲ್ಪನೆಗಳ ನೆರವಿಲ್ಲದೆ ವೇಗವಾಗಿ ಅಭಿವೃದ್ಧಿ ಸಾಧಿಸುವುದು ಕಷ್ಟ. ಹೀಗಾಗಿಯೇ ಶೌಚಾಲಯಗಳಿಗೆ ಸಂಬಂಧಪಟ್ಟ ಇಂತಹ ಅನೇಕ ಹೊಸ ಕಲ್ಪನೆಗಳನ್ನು ತಂತ್ರಜ್ಞಾನದ ನೆರವಿನಿಂದ ಸಾಕಾರಗೊಳಿಸುವ ಕೆಲಸ ವಿಶ್ವದ ವಿವಿಧೆಡೆಗಳಲ್ಲಿ ನಡೆಯುತ್ತಿದೆ. ಹಲವಾರು ಸರ್ಕಾರೇತರ ಸಂಸ್ಥೆಗಳು ಇಂತಹ ಕೆಲಸಗಳ ಮುಂಚೂಣಿಯಲ್ಲಿವೆ. ಇನ್ನಿತರ ಕ್ಷೇತ್ರಗಳ ಹಾಗೆಯೇ ಶೌಚಾಲಯಗಳತ್ತ ಗಮನ ಕೇಂದ್ರೀಕರಿಸಿರುವ ನವೋದ್ಯಮಗಳೂ ತಲೆಯೆತ್ತಿವೆ.

ಈ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳ ಸಾಲಿನಲ್ಲಿ ಭಾರತದ್ದೇ ಆದ ಸುಲಭ್ ಇಂಟರ್‌ನ್ಯಾಶನಲ್‌ನದು ಪ್ರಮುಖ ಹೆಸರು. ಶೌಚಾಲಯಗಳ ನಿರ್ಮಾಣ ಹಾಗೂ ತ್ಯಾಜ್ಯ ನಿರ್ವಹಣೆಯ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಈ ಸಂಸ್ಥೆ ಐವತ್ತು ವರ್ಷಗಳಿಗೂ ಹೆಚ್ಚಿನ ಸಮಯದಿಂದ ಸಕ್ರಿಯವಾಗಿರುವುದು ವಿಶೇಷ. ಅಷ್ಟೇ ಅಲ್ಲ, ನವದೆಹಲಿಯಲ್ಲಿ ಈ ಸಂಸ್ಥೆ ನಿರ್ಮಿಸಿರುವ 'ಸುಲಭ್ ಇಂಟರ್‌ನ್ಯಾಶನಲ್ ಮ್ಯೂಸಿಯಂ ಆಫ್ ಟಾಯ್ಲೆಟ್ಸ್' ಶತಮಾನಗಳ ಅವಧಿಯಲ್ಲಿ ಶೌಚಾಲಯಗಳು ವಿಕಾಸಗೊಂಡ ಬಗ್ಗೆ ಆಸಕ್ತಿಕರ ಮಾಹಿತಿ ಒದಗಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗಮನಸೆಳೆದಿರುವ ಈ ಸಂಗ್ರಹಾಲಯಕ್ಕೆ ಟೈಮ್ ಪತ್ರಿಕೆ ಪ್ರಕಟಿಸಿದ ಪ್ರಪಂಚದ ಅತ್ಯಂತ ವಿಚಿತ್ರ ಸಂಗ್ರಹಾಲಯಗಳ ಸಾಲಿನಲ್ಲೂ ಸ್ಥಾನ ದೊರಕಿತ್ತು.

ವರ್ಲ್ಡ್ ಟಾಯ್ಲೆಟ್ ಆರ್ಗನೈಸೇಶನ್ ಎಂಬ ಇನ್ನೊಂದು ಸ್ವಯಂಸೇವಾ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಶೌಚಾಲಯಗಳ ವಿನ್ಯಾಸ, ನಿರ್ವಹಣೆ ಹಾಗೂ ನೈರ್ಮಲ್ಯ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಲು ವರ್ಲ್ಡ್ ಟಾಯ್ಲೆಟ್ ಕಾಲೇಜ್ ಎಂಬ ಕಾರ್ಯಕ್ರಮ ರೂಪಿಸಿರುವ ಈ ಸಂಸ್ಥೆ ವಿಶ್ವ ಶೌಚಾಲಯ ಶೃಂಗಸಭೆಗಳನ್ನೂ ಆಯೋಜಿಸಿದೆ. ಇದೇ ರೀತಿ ಬಿಲ್ ಆಂಡ್ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು ೨೦೧೧ರಿಂದ 'ರೀಇನ್‌ವೆಂಟ್ ದ ಟಾಯ್ಲೆಟ್ ಚಾಲೆಂಜ್' ಎಂಬ ಕಾರ್ಯಕ್ರಮವನ್ನು ನಡೆಸುತ್ತಿದೆ. ಮೂಲಸೌಕರ್ಯಗಳ ಕೊರತೆಯಿರುವ ಪ್ರದೇಶಗಳಲ್ಲೂ ಸುಲಭವಾಗಿ ಬಳಸಬಹುದಾದ ಶೌಚಾಲಯಗಳ ವಿನ್ಯಾಸವನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮದ ಉದ್ದೇಶ.

ಶೌಚಾಲಯಗಳ ವಿನ್ಯಾಸವನ್ನು ಸುಧಾರಿಸುವ ಜೊತೆಯಲ್ಲೇ ಮಾನವ ತ್ಯಾಜ್ಯದ ಸಮರ್ಪಕ ನಿರ್ವಹಣೆಯ ನಿಟ್ಟಿನಲ್ಲೂ ಪ್ರಯತ್ನಗಳು ನಡೆದಿವೆ. ಮಾನವ ತ್ಯಾಜ್ಯದಿಂದ ಬಯೋಗ್ಯಾಸ್ ತಯಾರಿಸುವುದಷ್ಟೇ ಅಲ್ಲ, ಅದನ್ನು ಬಳಸಿ ವಾಹನಗಳನ್ನು ಚಲಾಯಿಸುವ ಪ್ರಯೋಗಗಳೂ ಈಗಾಗಲೇ ನಡೆದಿವೆ.

ಶೌಚಾಲಯದಲ್ಲಿ ನಿರ್ಮಾಣದಲ್ಲಿ ನವೋದ್ಯಮಗಳೂ ಹೊಸ ಕಲ್ಪನೆಗಳನ್ನು ಪರಿಚಯಿಸುತ್ತಿವೆ. ನಿರ್ಮಾಣದಲ್ಲಿ ಮಾತ್ರವೇ ಅಲ್ಲ, ಅವುಗಳ ನಿರ್ವಹಣೆಯಲ್ಲೂ ಆಧುನಿಕ ತಂತ್ರಜ್ಞಾನದ ಸವಲತ್ತುಗಳು ಬಳಕೆಯಾಗುತ್ತಿರುವುದು ವಿಶೇಷ. ಇಂಟರ್‌ನೆಟ್ ಆಫ್ ಥಿಂಗ್ಸ್‌ನಂತಹ ಪರಿಕಲ್ಪನೆಗಳ ಸಹಾಯದಿಂದ ಈ ಶೌಚಾಲಯಗಳ ಸ್ಥಿತಿಗತಿಗಳನ್ನು ದೂರದಿಂದಲೇ ಗಮನಿಸಿಕೊಳ್ಳುವುದು ಹಾಗೂ ನಿರ್ವಹಿಸುವುದು ಸಾಧ್ಯವಾಗುತ್ತದೆ. ಸ್ವಚ್ಛಗೊಳಿಸುವ ಕೆಲಸವನ್ನೂ ಅಷ್ಟೇ, ಬಹುಪಾಲು ಸ್ವಯಂಚಾಲಿತವಾಗಿಯೇ ನಡೆಯುವಂತೆ ಮಾಡಬಹುದು. ಬಾಡಿಗೆ ಸ್ಕೂಟರ್ ಅಥವಾ ಸೈಕಲ್ ಬೇಕಾದಾಗ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅದನ್ನು ಬಳಸುವಂತೆ, ಶೌಚಾಲಯಗಳ ಪ್ರವೇಶ ಹಾಗೂ ಬಳಕೆಯ ಶುಲ್ಕ ಪಾವತಿಗೂ ನಮ್ಮ ಮೊಬೈಲ್ ಫೋನನ್ನೇ ಬಳಸಬಹುದು!

ಹೊರಗೆ ಹೋದಾಗ ಸ್ವಚ್ಛ-ಸುರಕ್ಷಿತ ಶೌಚಾಲಯಗಳ ಕೊರತೆ ಎದುರಿಸುವ ಹೆಣ್ಣುಮಕ್ಕಳಿಗೆ ಇಂತಹ ವ್ಯವಸ್ಥೆಗಳು ಉಪಯುಕ್ತವಾಗಲಿವೆ ಎನ್ನುವುದು ಸದ್ಯದ ಆಶಯ. ಆದರೆ ಎಲ್ಲ ಕಡೆಗಳಲ್ಲೂ ಇಂತಹ ವ್ಯವಸ್ಥೆಗಳು ಸಿದ್ಧವಾಗುವವರೆಗೆ ಈಗ ಇರುವ ಶೌಚಾಲಯಗಳನ್ನೇ ಬಳಸಬೇಕಲ್ಲ! ಸಾರ್ವಜನಿಕ ಶೌಚಾಲಯಗಳನ್ನು ಬಳಸುವ ಮುನ್ನ ಅಲ್ಲಿ ಉಪಯೋಗಿಸಬಹುದಾದ ಸ್ಯಾನಿಟೈಸರ್ ಸ್ಪ್ರೇ ಸೇರಿದಂತೆ ಅನೇಕ ವಿನೂತನ ಉತ್ಪನ್ನಗಳನ್ನು ಹಲವು ನವೋದ್ಯಮಗಳು ಮಾರುಕಟ್ಟೆಗೆ ಪರಿಚಯಿಸಿವೆ.

ಸಾರ್ವಜನಿಕ ಶೌಚಾಲಯಗಳಲ್ಲಿ ಇಷ್ಟೆಲ್ಲ ಬದಲಾವಣೆಗಳಾಗುತ್ತಿವೆ ಎಂದಮಾತ್ರಕ್ಕೆ ಶೌಚಾಲಯ ಸಂಬಂಧಿತ ತಂತ್ರಜ್ಞಾನಗಳು ಮನೆಯೊಳಗೆ ಬಂದಿಲ್ಲ ಎಂದೇನೂ ಅರ್ಥವಲ್ಲ. ತಂತ್ರಜ್ಞಾನ ಕ್ಷೇತ್ರದ ಬದಲಾವಣೆಗಳು ಮನೆಯೊಳಗಿನ ಶೌಚಾಲಯಗಳನ್ನೂ ಬದಲಿಸಲು ಹೊರಟಿವೆ. ಶೌಚಾಲಯಗಳನ್ನು ಶುಚಿಗೊಳಿಸುವುದರಿಂದ ಪ್ರಾರಂಭಿಸಿ ಪ್ಲಂಬಿಂಗ್‌ನಲ್ಲಿರಬಹುದಾದ ಸಮಸ್ಯೆಗಳನ್ನು ತಾವಾಗಿಯೇ ಗುರುತಿಸುವವರೆಗೆ ಅನೇಕ ಕೆಲಸಗಳನ್ನು ಮಾಡಬಲ್ಲ ವ್ಯವಸ್ಥೆಗಳು ಇದೀಗ ಲಭ್ಯವಿವೆ. ಕಡಿಮೆ ನೀರು ಬಳಸುವ, ಸೋಂಕಿನ ಸಾಧ್ಯತೆ ಕಡಿಮೆಮಾಡುವಂತಹ ತಂತ್ರಜ್ಞಾನಗಳು ರೂಪುಗೊಂಡಿವೆ. ಮನೆಯ ವಸ್ತುಗಳೆಲ್ಲ ಸ್ಮಾರ್ಟ್ ಆದಹಾಗೆ ಶೌಚಾಲಯಗಳೂ ಇದೀಗ ಸ್ಮಾರ್ಟ್ ಆಗುತ್ತಿವೆ, ಕೈಯಿಂದ ಮುಟ್ಟದೆಯೇ ಬಳಸಲು ಸಾಧ್ಯವಾಗುವಂತೆ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಳ್ಳುತ್ತಿವೆ. ಅಷ್ಟೇ ಏಕೆ, ಅಮೆಜಾನ್ ಅಲೆಕ್ಸಾ ವ್ಯವಸ್ಥೆಯ ಮೂಲಕ ನಿಮ್ಮ ಸೂಚನೆಗಳನ್ನು ಪಡೆಯಬಲ್ಲ, ಅದಕ್ಕೆ ಪ್ರತಿಕ್ರಿಯೆ ನೀಡಬಲ್ಲ ಶೌಚಾಲಯಗಳೂ ಸಿದ್ಧವಾಗಿವೆ!

ಸ್ಮಾರ್ಟ್ ಕೈಗಡಿಯಾರದಂತಹ ಸಾಧನಗಳು ನಮ್ಮ ಆರೋಗ್ಯದ ಸ್ಥಿತಿಗತಿಗಳನ್ನು ಗಮನಿಸಿಕೊಳ್ಳುವುದು ನಮಗೆ ತಿಳಿದೇ ಇದೆ. ಇಂತಹುದೇ ಸಾಮರ್ಥ್ಯವನ್ನು ಶೌಚಾಲಯಗಳಿಗೂ ಒದಗಿಸುವ ಪ್ರಯತ್ನಗಳು ನಡೆದಿವೆ. ಟಾಯ್ಲೆಟ್ ಸೀಟಿನ ಮೇಲೆ ಕುಳಿತ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳನ್ನು ಗಮನಿಸಿಕೊಳ್ಳುವುದು ಸಾಧ್ಯವಾಗುವಂತೆ ಅದಕ್ಕೆ ವಿವಿಧ ಸೆನ್ಸರುಗಳನ್ನು ಅಳವಡಿಸಿರುವುದು ಇಂತಹ ಪ್ರಯತ್ನಗಳಿಗೆ ಒಂದು ಉದಾಹರಣೆ. ವಯಸ್ಸಾದವರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಅವರಿಗೆ ಹೆಚ್ಚುವರಿ ಶ್ರಮವಾಗದಂತೆ ಸಂಗ್ರಹಿಸುವುದು ಈ ಮೂಲಕ ಸಾಧ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಂಸ್ಥೆಗಳಂತೂ ಮನೆಯ ಶೌಚಾಲಯದಲ್ಲೇ ಮಲ-ಮೂತ್ರ ಪರೀಕ್ಷೆಯನ್ನು ಸಾಧ್ಯವಾಗಿಸುವ ತಂತ್ರಜ್ಞಾನವನ್ನು ರೂಪಿಸಿವೆ.

ಒಂದುಕಡೆ ಜಗತ್ತಿನ ಎಲ್ಲರಿಗೂ ಸ್ವಚ್ಛ-ಸುರಕ್ಷಿತ ಶೌಚಾಲಯಗಳನ್ನು ಒದಗಿಸಲು ಪ್ರಯತ್ನಿಸುತ್ತಿರುವ ತಂತ್ರಜ್ಞಾನ ಇನ್ನೊಂದು ಕಡೆ ಸ್ಮಾರ್ಟ್ ಶೌಚಾಲಯಗಳ ನಿರ್ಮಾಣದಲ್ಲೂ ತೊಡಗಿಕೊಂಡಿದೆ. ಸ್ಮಾರ್ಟ್ ಆಗುವ ನೆಪದಲ್ಲಿ ಶೌಚಾಲಯಕ್ಕೂ ಅಂತರಜಾಲ ಸಂಪರ್ಕ ಬಂದುಬಿಟ್ಟರೆ ನಮ್ಮ ಖಾಸಗಿತನಕ್ಕೆ ಏನು ಅರ್ಥ ಉಳಿಯಬಹುದೆಂಬ ಪ್ರಶ್ನೆ ಆತಂಕವನ್ನೂ ಉಂಟುಮಾಡುತ್ತಿದೆ. ಅದರ ಜೊತೆಯಲ್ಲೇ ಇಂತಹ ತಂತ್ರಜ್ಞಾನಗಳು ಮುಂದಿನ ದಿನಗಳಲ್ಲಿ ನಮ್ಮ ಬದುಕನ್ನು ಹೇಗೆ ಬದಲಿಸಬಹುದು ಎಂಬ ಅಂಶ ಕುತೂಹಲಕ್ಕೂ ಕಾರಣವಾಗಿದೆ. ಒಟ್ಟಿನಲ್ಲಿ, ಆಧುನಿಕ ತಂತ್ರಜ್ಞಾನದ ವ್ಯಾಪ್ತಿ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ ಎನ್ನುವ ಮಾತಿನ ಅರ್ಥವನ್ನು ಶೌಚಾಲಯಗಳ ಸುತ್ತ ನಡೆದಿರುವ ಈ ಕ್ರಾಂತಿ ಅಕ್ಷರಶಃ ನಿಜವಾಗಿಸಿ ತೋರಿಸುತ್ತಿದೆ!

ನವೆಂಬರ್ ೧೬, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಎಂಟನೆಯ ಬರಹ

'ಟೆಕ್ ನೋಟ' ಅಂಕಣದ ಎಂಟನೆಯ ಬರಹ
'ಟೆಕ್ ನೋಟ' ಅಂಕಣದ ಎಂಟನೆಯ ಬರಹವಿಜಯ ಕರ್ನಾಟಕ

Related Stories

No stories found.