ಕಾಡಿನ ಉಳಿವಿಗೆ ತಂತ್ರಜ್ಞಾನದ ನೆರವು ಸಿಗಬಹುದೇ?
ಕಾಡುಗಳಿಂದ ದೂರದಲ್ಲಿ ವಾಸಿಸುವ ಬಹುತೇಕರಿಗೆ ಕಾಡು ಎನ್ನುವುದು ಒಂದು ಪ್ರವಾಸಿ ತಾಣ ಮಾತ್ರ. ನಿತ್ಯದ ಬದುಕಿನ ಹಲವು ಅಗತ್ಯಗಳಿಗಾಗಿ ನಾವು ಪ್ರತ್ಯಕ್ಷವಾಗಿ - ಪರೋಕ್ಷವಾಗಿ ಕಾಡುಗಳನ್ನೇ ಅವಲಂಬಿಸಿದ್ದೇವೆ ಎನ್ನುವುದು ಕೂಡ ಎಷ್ಟೋ ಬಾರಿ ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಹಾಗೆಂದು ಕಾಡುಗಳ ಬಗ್ಗೆ ನಮಗೆ ಕುತೂಹಲವಿಲ್ಲ ಎಂದೇನೂ ಅರ್ಥವಲ್ಲ. ಕಾಡಿನತ್ತ ಪ್ರವಾಸ ಹೋಗುವುದು ಹಾಗಿರಲಿ, ಜೇನುತುಪ್ಪವನ್ನೋ ಅರಿಶಿಣವನ್ನೋ 'ಫಾರೆಸ್ಟ್' ಎಂಬ ವಿಶೇಷಣ ಸೇರಿಸಿ ಮಾರಾಟಕ್ಕಿಟ್ಟರೆ ನಾವು ಅದನ್ನೂ ಬಹಳ ಖುಷಿಯಾಗಿ ಕೊಳ್ಳುತ್ತೇವೆ!
ಮಳೆ ತರಿಸುವ, ಮಣ್ಣಿನ ಫಲವತ್ತತೆ ಕಾಪಾಡುವ, ಶುದ್ಧ ನೀರು-ಗಾಳಿಯನ್ನು ಒದಗಿಸುವ, ಮಾಲಿನ್ಯ ಹಾಗೂ ವಾಯುಗುಣ ಬದಲಾವಣೆಯನ್ನು ನಿಯಂತ್ರಣದಲ್ಲಿಡುವ ಕಾಡುಗಳು ನಮ್ಮ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಮಗೆ ಇಷ್ಟೆಲ್ಲ ನೆರವಾಗುವ ಕಾಡುಗಳ ಬಗ್ಗೆ, ಅವುಗಳ ನಾಶದಿಂದ ಆಗುವ ಪರಿಣಾಮಗಳ ಬಗ್ಗೆ ನಾವು ಹೆಚ್ಚು ತಿಳಿದಿರಬೇಕಾದ್ದು ಇಂದಿನ ಅಗತ್ಯ. ಈ ದಿನ (ಮಾರ್ಚ್ ೨೧) ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಅರಣ್ಯ ದಿನ, ಈ ಕಲಿಕೆಯನ್ನು ಪ್ರಾರಂಭಿಸಲು ಉತ್ತಮ ಸಂದರ್ಭ.
ವಿಶ್ವಸಂಸ್ಥೆಯ ನೇತೃತ್ವದಲ್ಲಿ ನಡೆಯುವ ಈ ದಿನಾಚರಣೆ ಪ್ರಾರಂಭವಾದದ್ದು ೨೦೧೨ರಲ್ಲಿ. ಕಾಡುಗಳ ಮಹತ್ವವನ್ನು ಗುರುತಿಸಿ ಗೌರವಿಸುವುದು, ಅವುಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ಬಹುತೇಕ ದಿನಾಚರಣೆಗಳಂತೆ ಅರಣ್ಯ ದಿನಕ್ಕೂ ಪ್ರತಿವರ್ಷ ಒಂದೊಂದು ಕೇಂದ್ರ ವಿಷಯ ಇರುತ್ತದೆ. ಅದರಂತೆ ಈ ಸಾಲಿನ ಕೇಂದ್ರ ವಿಷಯವಾಗಿ ಆಯ್ಕೆಯಾಗಿರುವುದು 'ಅರಣ್ಯ ಮತ್ತು ಆರೋಗ್ಯ.'
ನಮ್ಮ ಬೇಡಿಕೆಗಳನ್ನೆಲ್ಲ ಪೂರೈಸಿಕೊಳ್ಳಲು ಬಹಳ ಹಿಂದಿನಿಂದಲೇ ನಾವು ಕಾಡನ್ನು ಅವಲಂಬಿಸಿದ್ದೇವೆ. ಹೀಗೆ ಬೇಕಾದ್ದನ್ನು ಬೇಕಾದಾಗಲೆಲ್ಲ ತೆಗೆದುಕೊಳ್ಳುತ್ತಲೇ ಇರುವ ಮನೋಭಾವದ ಬದಲು ನಮ್ಮಲ್ಲಿ ಕಾಡಿನ ಕುರಿತ ಕಾಳಜಿಯೂ ಮೂಡಬೇಕಿದೆ. ನಮಗಾಗಿ, ನಮ್ಮ ಆರೋಗ್ಯಕ್ಕಾಗಿ ಅನೇಕ ಕೊಡುಗೆಗಳನ್ನು ನೀಡುವ ಕಾಡುಗಳ ಆರೋಗ್ಯವನ್ನೂ ನಾವು ನೋಡಿಕೊಳ್ಳಬೇಕಿದೆ. ಏಕೆಂದರೆ, ವಿಶ್ವಸಂಸ್ಥೆಯೇ ಹೇಳಿರುವಂತೆ, ಕಾಡುಗಳ ಆರೋಗ್ಯ ಚೆನ್ನಾಗಿದ್ದಾಗ ಮಾತ್ರವೇ ಮನುಷ್ಯರು ಆರೋಗ್ಯವಾಗಿರುವುದು ಸಾಧ್ಯ!
ಆದರೆ, ಸದ್ಯದ ಪರಿಸ್ಥಿತಿಯಲ್ಲಿ ವಿಶ್ವದೆಲ್ಲೆಡೆಯ ಕಾಡುಗಳ ಆರೋಗ್ಯ ಹೇಳಿಕೊಳ್ಳುವಷ್ಟೇನೂ ಚೆನ್ನಾಗಿಲ್ಲ ಎನ್ನುವುದು ಬೇಸರದ ಸಂಗತಿ. ಕೃಷಿಭೂಮಿಯ ವಿಸ್ತರಣೆ, ಮರಗಳ ಹನನ, ರಸ್ತೆಗಳ ನಿರ್ಮಾಣ ಮುಂತಾದ ಅನೇಕ ಕಾರಣಗಳೊಡನೆ ಕಾಡುಗಳಲ್ಲಿ ಮಾನವನ ಹಸ್ತಕ್ಷೇಪ ಮಿತಿಮೀರಿದೆ. ಅವ್ಯಾಹತ ಅರಣ್ಯನಾಶ ವಾಯುಗುಣ ಬದಲಾವಣೆಗೆ ತನ್ನ ಕೊಡುಗೆ ನೀಡುತ್ತಿದೆ, ವಾಯುಗುಣ ಬದಲಾವಣೆ ಅಳಿದುಳಿದ ಕಾಡುಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ.
ಇವೆಲ್ಲದರ ಜೊತೆಗೆ ಕಾಡುಗಳನ್ನು ಕಾಡುತ್ತಿರುವುದು ಬೆಂಕಿ. ಜಗತ್ತಿನ ಮೂಲೆಮೂಲೆಗಳಲ್ಲಿ, ಅಷ್ಟೇ ಏಕೆ, ನಮ್ಮ ಕರ್ನಾಟಕದಲ್ಲೂ ಈ ವರ್ಷ ಕಾಡ್ಗಿಚ್ಚಿನ ಆರ್ಭಟ ಜೋರಾಗಿದೆ.
ಕಾಡ್ಗಿಚ್ಚು ಕಾಣಿಸಿಕೊಳ್ಳುವುದು ಹೇಗೆ? ಇದಕ್ಕೆ ಹಲವರು ಹಲವು ಕಾರಣಗಳನ್ನು ಕೊಡಬಹುದು. ಆದರೆ, ಭಾರತದ ಕಾಡುಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ನೂರಕ್ಕೆ ನೂರರಷ್ಟು ಮನುಷ್ಯನ ಕೈವಾಡದಿಂದಲೇ ಎಂದು ತಜ್ಞರು ಹೇಳುತ್ತಾರೆ. ದುರುದ್ದೇಶದಿಂದಲೋ, ಅಜ್ಞಾನದಿಂದಲೋ, ಉಪೇಕ್ಷೆಯಿಂದಲೋ ಮನುಷ್ಯರು ಹೊತ್ತಿಸುವ ಬೆಂಕಿ ವಿಸ್ತಾರವಾದ ಕಾಡುಗಳನ್ನು ಆಹುತಿ ತೆಗೆದುಕೊಳ್ಳುತ್ತದೆ ಎನ್ನುವುದಷ್ಟೇ ನಿಜ.
ಕಾಡಿನ ಬೆಂಕಿಯ ವಿರುದ್ಧ ಸೆಣೆಸುವುದು ಅರಣ್ಯ ಇಲಾಖೆ ಸಿಬ್ಬಂದಿಯ ಜವಾಬ್ದಾರಿ. ಬಹುತೇಕ ಸಂದರ್ಭಗಳಲ್ಲಿ ಈ ಕೆಲಸಕ್ಕೆ ಬೇಕಾದ ಮೂಲಭೂತ ಸವಲತ್ತುಗಳೂ ಅವರಿಗೆ ದೊರಕುವುದಿಲ್ಲ. ಇದರಿಂದಾಗಿ ಬೆಂಕಿಯ ನಿಯಂತ್ರಣ ಕಷ್ಟವಾಗುವುದಷ್ಟೇ ಅಲ್ಲದೆ ಸಿಬ್ಬಂದಿಯ ಜೀವಕ್ಕೇ ಕುತ್ತುಬರುವ ಸಾಧ್ಯತೆಯೂ ಇರುತ್ತದೆ. ಬೆಂಕಿ ನಿಯಂತ್ರಣಕ್ಕೆ ಹೆಲಿಕಾಪ್ಟರ್ ಬಳಸಬೇಕೆಂಬ ಕೂಗು ಪದೇಪದೇ ಕೇಳಿಬರುತ್ತಿದೆಯಾದರೂ ಅವುಗಳ ಪರಿಣಾಮಕಾರಿ ಬಳಕೆ ಇನ್ನೂ ಪ್ರಾರಂಭವಾಗಿಲ್ಲ.
ಹೆಲಿಕಾಪ್ಟರ್ ಬಳಕೆ ಮಾತ್ರವೇ ಅಲ್ಲದೆ ಕಾಡಿನ ಬೆಂಕಿ ನಿಯಂತ್ರಣಕ್ಕೆ ಬೇರೆಯ ಮಾರ್ಗಗಳೂ ಇವೆ ಎಂದು ತಜ್ಞರು ಹೇಳುತ್ತಾರೆ. ತಂತ್ರಜ್ಞಾನದ ಸವಲತ್ತುಗಳನ್ನು ಈ ಕೆಲಸದಲ್ಲಿ ಬಳಸಿಕೊಳ್ಳುವ ಪ್ರಯತ್ನಗಳು ವಿಶ್ವದ ವಿವಿಧೆಡೆಗಳಲ್ಲಿ ಈಗಾಗಲೇ ನಡೆದಿವೆ. ಉಪಗ್ರಹ ಚಿತ್ರಗಳನ್ನು ಬಳಸಿಕೊಂಡು ಕಾಡಿನ ಬೆಂಕಿಯನ್ನು ಸಾಧ್ಯವಾದಷ್ಟೂ ಬೇಗ ಪತ್ತೆಹಚ್ಚುವುದು ಇಂತಹ ಪ್ರಯತ್ನಗಳಲ್ಲೊಂದು. ಬೆಂಕಿ ಕಾಣಿಸಿಕೊಂಡ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ದೊರೆತರೆ ಬೆಂಕಿ ವ್ಯಾಪಕವಾಗಿ ಹರಡುವ ಮುನ್ನವೇ ಅದನ್ನು ನಿಯಂತ್ರಿಸಬಹುದು ಎನ್ನುವುದು ಈ ಪ್ರಯತ್ನದ ಉದ್ದೇಶ.
ಕಾಡ್ಗಿಚ್ಚಿನ ನಿಯಂತ್ರಣದಲ್ಲಿ ಡ್ರೋನ್‌ಗಳನ್ನು ಬಳಸುವ ಪ್ರಯೋಗಗಳೂ ನಡೆದಿವೆ. ಕಾಡಿನ ಬೆಂಕಿಯನ್ನು ಪತ್ತೆಹಚ್ಚುವುದು ಮಾತ್ರವೇ ಅಲ್ಲ, ಉರಿಯುತ್ತಿರುವ ಬೆಂಕಿಯನ್ನು ನಿಯಂತ್ರಿಸುವುದಕ್ಕೂ ಡ್ರೋನ್‌ಗಳನ್ನು ಬಳಸುವುದು ಸಾಧ್ಯವಂತೆ. ತೀವ್ರವಾಗಿ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಪ್ರತಿಯಾಗಿ ಇನ್ನೊಂದು ಕಡೆಯಿಂದ ಬೆಂಕಿ ಹಾಕುವ, ಹಾಗೂ ಆ ಮೂಲಕ ಬೆಂಕಿಯನ್ನು ನಿಯಂತ್ರಿಸುವ 'ಕೌಂಟರ್ ಫೈರ್' ತಂತ್ರದಲ್ಲಿ ಹೊಸದಾದ ಬೆಂಕಿಯನ್ನು ಪ್ರಾರಂಭಿಸಲು ಡ್ರೋನ್ ಬಳಸುವುದು ಸಾಧ್ಯ ಎನ್ನಲಾಗಿದೆ. ಆ ಮೂಲಕ ಬೆಂಕಿಯನ್ನು ಬೇಗ ನಿಯಂತ್ರಣಕ್ಕೆ ತರುವುದು ಮಾತ್ರವಲ್ಲದೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಸಂಭಾವ್ಯ ಅಪಾಯದಿಂದ ಪಾರುಮಾಡುವುದೂ ಸಾಧ್ಯ ಎಂದು ತಜ್ಞರು ಹೇಳುತ್ತಾರೆ.
ಬೆಂಕಿಯ ನಿಯಂತ್ರಣಕ್ಕೆ ನೀರನ್ನು ಬಳಸುವುದು ಸಾಮಾನ್ಯ ಅಭ್ಯಾಸ. ನೀರಿನ ಜೊತೆ, ಅಥವಾ ಅದಕ್ಕೆ ಪರ್ಯಾಯವಾಗಿ ಬಳಸಬಹುದಾದ ವಸ್ತುಗಳ ಬಗೆಗೂ ಸಂಶೋಧನೆಗಳು ನಡೆದಿವೆ. ಯುರೋಪಿಯನ್ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಸಿದ್ಧವಾಗಿರುವ 'ಇನ್ಸ್‌ಟಂಟ್ ಫೋಮ್ ಫಾರ್ ಫೈಟಿಂಗ್ ಫಾರೆಸ್ಟ್ ಫೈರ್‍ಸ್' (I4F) ಎಂಬ ತಂತ್ರಜ್ಞಾನ ಕಾಡಿನ ಬೆಂಕಿಯ ನಿಯಂತ್ರಣಕ್ಕೆ ವಿಶೇಷ ಬಗೆಯ ನೊರೆಯನ್ನು ಬಳಸುತ್ತದಂತೆ. ಇದು ನೀರಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುವುದಷ್ಟೇ ಅಲ್ಲದೆ ಕಾಡಿನ ಮೇಲೆ ಹೆಚ್ಚುವರಿಯಾದ ಯಾವುದೇ ದುಷ್ಪರಿಣಾಮಗಳನ್ನು ಉಂಟುಮಾಡುವುದಿಲ್ಲವೆಂದು ಹೇಳಲಾಗಿದೆ.
ಬೆಂಕಿಯ ನಿಯಂತ್ರಣದಲ್ಲಿ ಮಾತ್ರವೇ ಅಲ್ಲ, ಬೆಂಕಿ ಹಚ್ಚುವುದನ್ನೇ ತಡೆಯುವ ನಿಟ್ಟಿನಲ್ಲೂ ತಂತ್ರಜ್ಞಾನದ ಬಳಕೆ ಸಾಧ್ಯ. ಇಂದು ಹಳ್ಳಿಹಳ್ಳಿಗಳನ್ನೂ ವ್ಯಾಪಿಸಿಕೊಂಡಿರುವ ಅಂತರಜಾಲ ಸಂಪರ್ಕವನ್ನು ಬಳಸಿಕೊಂಡು ಕಾಡ್ಗಿಚ್ಚಿನ ದುಷ್ಪರಿಣಾಮಗಳ ಬಗ್ಗೆ, ಬೆಂಕಿ ತಡೆಯಲ್ಲಿ ಸಾರ್ವಜನಿಕರ ಪಾತ್ರದ ಬಗ್ಗೆ ಅರಿವು ಮೂಡಿಸುವುದು ಸಾಧ್ಯವಿದೆ.
ಇಂತಹ ಹಲವಾರು ತಂತ್ರಗಳನ್ನು ರೂಪಿಸುವ, ಬಳಸುವ ಪ್ರಯತ್ನಗಳು ಅನೇಕ ವರ್ಷಗಳಿಂದಲೇ ನಮ್ಮ ದೇಶದಲ್ಲೂ ನಡೆದಿವೆ. ಪ್ರತಿ ವರ್ಷ ಕಾಡ್ಗಿಚ್ಚು ಕಾಣಿಸಿಕೊಂಡಾಗಲೂ ಇಂತಹ ಹೊಸ ಯೋಜನೆಗಳ ಸುದ್ದಿ ಮಾಧ್ಯಮಗಳಲ್ಲಿ ಕಾಣಸಿಗುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಅಗಾಧ ಸಾಧನೆಗಳನ್ನು ಮಾಡಿರುವ ಭಾರತದಲ್ಲಿ, ನವೋದ್ಯಮಗಳ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ತಂದಿರುವ ಕರ್ನಾಟಕದಲ್ಲಿ ಇಂತಹ ಯೋಜನೆಗಳನ್ನು ಬಹಳ ಸುಲಭವಾಗಿ ಅನುಷ್ಠಾನಗೊಳಿಸಬಹುದು ಎಂಬ ಭರವಸೆ ಮಾತ್ರ ಮೂಡಿದಷ್ಟೇ ವೇಗವಾಗಿ ಮಾಯವಾಗುತ್ತದೆ. ಕಾಡಿನ ಬೆಂಕಿ ಉರಿಯುತ್ತಲೇ ಇರುತ್ತದೆ, ಕಾಡಿನ ಕೂಗು ನಿಜವಾಗಿಯೂ ಅರಣ್ಯರೋದನವೇ ಆಗಿಬಿಡುತ್ತದೆ.
ಬೆಂಕಿಯಿಂದ ರಕ್ಷಿಸಲು ಕಾಡುಗಳೇ ಇಲ್ಲದಂತಾಗುವ ಮೊದಲು ನಾವು ಕಾಡಿನ ಬೆಂಕಿಯನ್ನು ನಿಯಂತ್ರಿಸಲು ಏನಾದರೂ ಮಾಡಬಲ್ಲೆವೇ? ಕಾಡ್ಗಿಚ್ಚಿನ ನಿಯಂತ್ರಣಕ್ಕಾಗಿ ತಮ್ಮ ಜೀವವನ್ನೇ ಪಣವಾಗಿಟ್ಟು ದುಡಿಯುವ ಅರಣ್ಯ ಇಲಾಖೆಯ ಸಿಬ್ಬಂದಿಗೆ ನೆರವಾಗಬಲ್ಲೆವೇ? ಮುಂದಿನ ಬೇಸಿಗೆಯ ಮೊದಲಾದರೂ ಈ ಪ್ರಶ್ನೆಗೆ ಉತ್ತರ ಹುಡುಕಿಕೊಳ್ಳಬೇಕಿದೆ.
ಮಾರ್ಚ್ ೨೧, ೨೦೨೩ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ