ಒಂದೆರಡು ದಿನ ಸರಿಯಾಗಿ ನಿದ್ದೆಮಾಡದಿದ್ದರೆ ನಮ್ಮ ದೇಹವೇ ನಮ್ಮೊಡನೆ ಸಹಕರಿಸುವುದಿಲ್ಲ. ಇದೇಕೆ ಹೀಗೆ? ನಿದ್ದೆ ಮಾಡದೆಯೇ ಇರುವುದು ಸಾಧ್ಯವಿಲ್ಲವೇ?
ಒಂದೆರಡು ದಿನ ಸರಿಯಾಗಿ ನಿದ್ದೆಮಾಡದಿದ್ದರೆ ನಮ್ಮ ದೇಹವೇ ನಮ್ಮೊಡನೆ ಸಹಕರಿಸುವುದಿಲ್ಲ. ಇದೇಕೆ ಹೀಗೆ? ನಿದ್ದೆ ಮಾಡದೆಯೇ ಇರುವುದು ಸಾಧ್ಯವಿಲ್ಲವೇ?Image by wixin lubhon from Pixabay

ನಿದ್ದೆ ಮಾಡದವರು ಯಾರವ್ರೆ? ನಿದ್ದೆ ಮಾಡದವರು ಎಲ್ಲವ್ರೆ?

ನಾವು ನಮ್ಮ ಜೀವಮಾನದ ಸುಮಾರು ಮೂರನೇ ಒಂದರಷ್ಟು ಅವಧಿಯನ್ನು ನಿದ್ದೆಯಲ್ಲೇ ಕಳೆಯುತ್ತೇವೆ ಎಂದು ತಜ್ಞರು ಹೇಳುತ್ತಾರೆ.

ನನ್ನ ಬಾಲ್ಯಕಾಲದ ಶ್ರೀಮಂಗಲದಲ್ಲಿ ಮಳೆಗಾಲ ಚಳಿಗಾಲಗಳೆರಡರ ಭರಾಟೆಯೂ ಬಹಳ ಜೋರಾಗಿರುತ್ತಿತ್ತು. ವರ್ಷದ ಬಹುಭಾಗ ಚಳಿಯೋ ಚಳಿ. ರಾತ್ರಿ ಊಟ ಮುಗಿಸಿ ಒಮ್ಮೆ ಹೊದಿಕೆಯೊಳಗೆ ಸೇರಿಕೊಂಡರೆ ಬೆಳಿಗ್ಗೆ ಏಳುವುದೇ ಕಷ್ಟ ಎನ್ನಿಸುವಷ್ಟು ಚೆಂದದ ನಿದ್ದೆ ಬರುತ್ತಿತ್ತು. ಕುಂಭಕರ್ಣ ಒಂದು ಸಲಕ್ಕೆ ಆರು ತಿಂಗಳು ನಿದ್ದೆ ಮಾಡುತ್ತಿದ್ದನೆಂದು ಅಮರ ಚಿತ್ರ ಕಥೆಯಲ್ಲಿ ಓದಿದಾಗ ನಾವೂ ಹಾಗೆ ನಿದ್ದೆ ಮಾಡಿದರೆ ಹೇಗಿರಬಹುದು ಎನ್ನುವ ಕಲ್ಪನೆ ತಲೆಯಲ್ಲಿ ಓಡುತ್ತಿತ್ತು, ಪುಸ್ತಕ ಬದಿಗಿಟ್ಟು ನಿದ್ದೆಗೆ ಜಾರುವ ತನಕ!

ದೀರ್ಘಕಾಲದ ನಿದ್ದೆಯ ಬಗ್ಗೆ ಕತೆಗಳನ್ನು ಬರೆದವರಿಗೆ ಬಹುಶಃ ಕುಂಭಕರ್ಣನದೇ ಪ್ರೇರಣೆ ಇರಬೇಕು. ಸುಮಾರು ಇನ್ನೂರು ವರ್ಷಗಳ ಹಿಂದೆ ಅಮೆರಿಕಾದ ಲೇಖಕ ವಾಷಿಂಗ್ಟನ್ ಇರ್ವಿಂಗ್ ಬರೆದ ಕತೆಯೊಂದರ ನಾಯಕ ರಿಪ್ ವ್ಯಾನ್ ವಿಂಕಲ್, ಇಪ್ಪತ್ತು ವರ್ಷಗಳ ಕಾಲ ನಿದ್ದೆ ಮಾಡಿಬಿಟ್ಟಿರುತ್ತಾನೆ. ೧೯೮೦ರ ದಶಕದಲ್ಲಿ ಕನ್ನಡದ ಖ್ಯಾತ ಹಾಸ್ಯಲೇಖಕ ಬಾಗೂರು ಚಂದ್ರು ಬರೆದ ಲೇಖನವೊಂದರಲ್ಲೂ ಇಪ್ಪತ್ತು ವರ್ಷ ನಿದ್ರಿಸಿ ಎದ್ದ ಬೆಂಗಳೂರು ನಿವಾಸಿಯ ಪರದಾಟ ಬಹಳ ಸೊಗಸಾಗಿ ಚಿತ್ರಿತವಾಗಿತ್ತು.

ರಿಪ್ ವ್ಯಾನ್ ವಿಂಕಲ್‌ನ ಇಪ್ಪತ್ತು ವರ್ಷ, ಕುಂಭಕರ್ಣನ ಆರು ತಿಂಗಳುಗಳೆಲ್ಲ ಹಾಗಿರಲಿ, ನಮ್ಮಲ್ಲಿ ಅನೇಕರಿಗೆ ಈಗ ಆರು ಗಂಟೆ ಆರಾಮವಾಗಿ ನಿದ್ದೆ ಮಾಡುವುದಕ್ಕೂ ಟೈಮಿಲ್ಲ. ಮನೆಯಿಂದಲೇ ಕೆಲಸಮಾಡುತ್ತಿರುವ ಅನೇಕರು ಬೆಳಗಿನಿಂದ ರಾತ್ರಿಯವರೆಗೂ ಕೆಲಸದಲ್ಲೇ ತೊಡಗಿರುತ್ತಾರೆ. ವೈಯಕ್ತಿಕ ಸಮಯ, ಕುಟುಂಬದ ಸಮಯ, ನಿದ್ದೆಯ ಸಮಯಗಳೆಲ್ಲವನ್ನೂ ಕೆಲಸದ ಸಮಯ ಆಕ್ರಮಿಸಿಕೊಳ್ಳುತ್ತಿದೆ.

ಸಾಮಾನ್ಯ ಮನುಷ್ಯರೂ ಕುಂಭಕರ್ಣನಂತೆ ಇದ್ದಿದ್ದರೆ, ಆರು ತಿಂಗಳು ಪೂರ್ತಿ ಎಚ್ಚರವಾಗಿದ್ದು ಎಲ್ಲ ಕೆಲಸಗಳನ್ನೂ ಮುಗಿಸಿ ಮುಂದಿನ ಆರು ತಿಂಗಳ ಕಾಲ ನೆಮ್ಮದಿಯಾಗಿ ನಿದ್ದೆ ಮಾಡಿಬಿಡಬಹುದಿತ್ತು. ಆದರೆ ಒಂದೆರಡು ದಿನ ಸರಿಯಾಗಿ ನಿದ್ದೆಮಾಡದಿದ್ದರೆ ನಮ್ಮ ದೇಹವೇ ನಮ್ಮೊಡನೆ ಸಹಕರಿಸುವುದಿಲ್ಲ. ಇದೇಕೆ ಹೀಗೆ? ಒಂದಷ್ಟು ದಿನ ನಿದ್ದೆ ಮಾಡದೆಯೇ ಇರುವುದು ಸಾಧ್ಯವಿಲ್ಲವೇ?

ಬಹಳ ಹಿಂದಿನಿಂದಲೇ ಈ ಪ್ರಶ್ನೆಯ ಉತ್ತರವನ್ನು ಹುಡುಕಲಾಗುತ್ತಿದೆ. ಉಗುರು, ಗಡ್ಡ-ಮೀಸೆಗಳನ್ನು ಅತ್ಯಂತ ಉದ್ದವಾಗಿ ಬೆಳೆಸಿ ವಿಶ್ವದಾಖಲೆ ಸ್ಥಾಪಿಸಿದ ಹಾಗೆ ಅತಿ ಹೆಚ್ಚು ಕಾಲ ನಿದ್ದೆಮಾಡದೆ ಎಚ್ಚರವಾಗಿರುವ ಪ್ರಯತ್ನಗಳನ್ನೂ ಸಾಹಸಿಗಳು ಮಾಡಿದ್ದಾರೆ. ೧೯೬೪ರಲ್ಲಿ ಸತತವಾಗಿ ೧೧ ದಿನ ಹಾಗೂ ೨೫ ನಿಮಿಷಗಳ ಕಾಲ ಎಚ್ಚರವಾಗಿದ್ದ ರ್‍ಯಾಂಡಿ ಗಾರ್ಡನರ್ ಎಂಬ ವ್ಯಕ್ತಿಯ ಸಾಧನೆಯನ್ನು ವಿಶ್ವದಾಖಲೆಯೆಂದು ಪರಿಗಣಿಸಲಾಗಿತ್ತಂತೆ.

ಅರೆ, ವಿಶ್ವದಾಖಲೆಗಳನ್ನೆಲ್ಲ ಥಟ್ಟನೆ ಮುರಿದುಹಾಕುವ ಈ ಕಾಲದಲ್ಲಿ ಅರ್ಧ ಶತಮಾನಕ್ಕೂ ಹಿಂದಿನ ಈ ದಾಖಲೆ ಇನ್ನೂ ಹೇಗೆ ಉಳಿದುಕೊಂಡಿದೆಯೆಂದು ಆಶ್ಚರ್ಯಪಡಬೇಡಿ. ಅದಕ್ಕೊಂದು ಕಾರಣವಿದೆ: ಜಾಗತಿಕ ಸಾಧನೆಗಳನ್ನು ದಾಖಲಿಸುವ ಗಿನಿಸ್ ವರ್ಲ್ಡ್ ರೆಕಾರ್ಡ್ಸ್, ನಿದ್ದೆ ತಪ್ಪಿಸುವ ವಿಷಯದಲ್ಲಿ ಹೊಸ ದಾಖಲೆ ಸೃಷ್ಟಿಸಲು ಅವಕಾಶವನ್ನೇ ಕೊಡುವುದಿಲ್ಲ!

ಅದಕ್ಕೊಂದು ಕಾರಣವಿದೆ. ನಾನು ಇನ್ನುಮುಂದೆ ಕಾಫಿ ಕುಡಿಯುವುದಿಲ್ಲ, ಧೂಮಪಾನ ಮಾಡುವುದಿಲ್ಲ, ಕರಿದ ತಿಂಡಿ ತಿನ್ನುವುದಿಲ್ಲ ಎಂದೆಲ್ಲ ಪ್ರತಿಜ್ಞೆ ಮಾಡಿದ ಹಾಗೆ ನಾನು ನಿದ್ದೆ ಮಾಡುವುದನ್ನು ಬಿಟ್ಟುಬಿಡುತ್ತೇನೆಂದು ಯಾರೂ ಹೇಳಲು ಸಾಧ್ಯವಿಲ್ಲ. ಏಕೆಂದರೆ ನಿದ್ದೆಯೆನ್ನುವುದು ಐಚ್ಛಿಕ ಸಂಗತಿಯಲ್ಲ. ನಾವು ನಮ್ಮ ಜೀವಮಾನದ ಸುಮಾರು ಮೂರನೇ ಒಂದರಷ್ಟು ಅವಧಿಯನ್ನು ನಿದ್ದೆಯಲ್ಲೇ ಕಳೆಯುತ್ತೇವೆ ಎಂದು ತಜ್ಞರು ಹೇಳುತ್ತಾರೆ.

ನಿದ್ದೆಯನ್ನು ಬಲವಂತವಾಗಿ ತಡೆದುಕೊಳ್ಳುವುದನ್ನು 'ಸ್ಲೀಪ್ ಡೆಪ್ರಿವೇಶನ್' ಎಂದು ಕರೆಯುತ್ತಾರೆ. ಡೆಪ್ರಿವೇಶನ್ ಅಂದರೆ ನಷ್ಟ ಎಂದು ಅರ್ಥ. ನಿದ್ದೆ ನಷ್ಟವಾದರೆ ನಮ್ಮ ಆರೋಗ್ಯಕ್ಕೂ ಸಾಕಷ್ಟು ನಷ್ಟ ಉಂಟಾಗಬಹುದು. ನಿದ್ದೆ ಸಾಲದಿದ್ದಾಗ ಕಿರಿಕಿರಿಯೆನಿಸುವುದು, 'ಮೂಡ್' ಸರಿಯಿಲ್ಲದಿರುವುದು, ನಿರುತ್ಸಾಹ ಮೂಡುವುದು ನಮಗೆ ಗೊತ್ತೇ ಇದೆ. ಅದರ ಜೊತೆಗೆ ಜ್ಞಾಪಕಶಕ್ತಿಯ ತೊಂದರೆಗಳು ಎದುರಾಗುವುದು, ನಿರ್ಧಾರಗಳನ್ನು ಕೈಗೊಳ್ಳಲು ಹೆಚ್ಚು ಸಮಯ ಬೇಕಾಗುವುದು, ಯಾವುದೇ ವಿಷಯದ ಬಗ್ಗೆ ವಿಭಿನ್ನ ರೀತಿಯಲ್ಲಿ ಯೋಚಿಸಲು ಸಾಧ್ಯವಾಗದಿರುವುದು ಕೂಡ ಸಾಧ್ಯವಂತೆ. ಇನ್ನು ದೀರ್ಘಕಾಲದವರೆಗೆ ಸರಿಯಾಗಿ ನಿದ್ದೆಮಾಡದಿರುವುದು ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೇನಿಯಾ, ಅಲ್ಜೈಮರ್ಸ್ ಕಾಯಿಲೆ ಮುಂತಾದ ಅನೇಕ ಗಂಭೀರ ಪರಿಣಾಮಗಳಿಗೂ ಕಾರಣವಾಗಬಹುದು.

ಬಂಧಿತರಿಂದ ರಹಸ್ಯ ಮಾಹಿತಿಯನ್ನು ತಿಳಿದುಕೊಳ್ಳಲು ಸ್ಲೀಪ್ ಡೆಪ್ರಿವೇಶನ್ ಅನ್ನು ಕಿರುಕುಳದ ರೂಪವಾಗಿ ಬಳಸಿದ ಉದಾಹರಣೆಗಳೂ ಇವೆ. ಆದರೆ ಇಂದಿನ ಬಹುಪಾಲು ಸ್ಲೀಪ್ ಡೆಪ್ರಿವೇಶನ್ ಪ್ರಕರಣಗಳಿಗೆ ಯಾರು ನಿದ್ದೆ ಕಳೆದುಕೊಳ್ಳುತ್ತಾರೋ ಸ್ವತಃ ಅವರೇ ಕಾರಣ! ಹೌದು, ಡೆಡ್ಲೈನ್ ಇದೆಯೆಂದೋ ಬೇರೆ ಸಮಯದಲ್ಲಿ ಬಿಡುವಿಲ್ಲವೆಂದೋ ರಾತ್ರಿಯ ನಿದ್ದೆಯನ್ನು ನಾವಾಗಿಯೇ ಕಡಿಮೆಮಾಡಿಕೊಳ್ಳುತ್ತಿರುವುದು ಇದೀಗ ಸಾಮಾನ್ಯವಾಗಿದೆ.

ಇದರ ಜೊತೆಗೆ ಇನ್ನಿತರ ಚಿಂತೆಗಳೂ ಸೇರಿಕೊಂಡಾಗ ಸರಿಯಾಗಿ ನಿದ್ದೆಯೇ ಬರುವುದಿಲ್ಲ, ಬಂದರೂ ಅದು ಸತತವಾದ ಸುಖನಿದ್ದೆ ಆಗಿರುವುದಿಲ್ಲ. ಇಂತಹ ಪರಿಸ್ಥಿತಿಗೆ ವೈದ್ಯಕೀಯ ಪರಿಭಾಷೆಯಲ್ಲಿ ನಿದ್ರಾಹೀನತೆ ಅಥವಾ ಇನ್‌ಸೋಮ್ನಿಯ ಎಂಬ ಹೆಸರಿದೆ. ಕೋವಿಡ್ ಜಾಗತಿಕ ಸೋಂಕಿನ ಸಂದರ್ಭದಲ್ಲಿ ನಿದ್ರಾಹೀನತೆಯ ಬಗ್ಗೆ ಮಾಹಿತಿಗಾಗಿ ಗೂಗಲ್‌ ಹುಡುಕಾಟಗಳ ಸಂಖ್ಯೆ ಹಿಂದೆಂದಿಗಿಂತ ಹೆಚ್ಚಾಗಿದೆಯಂತೆ! ಅಂದಹಾಗೆ ಗೂಗಲ್‌ನಲ್ಲಿ ಮಾಹಿತಿ ಹುಡುಕುವುದೂ ಸೇರಿದಂತೆ ಹಲವು ಕೆಲಸಗಳಿಗೆಂದು ನಾವು ಕಂಪ್ಯೂಟರನ್ನು - ಸ್ಮಾರ್ಟ್‌ಫೋನನ್ನು ಗಂಟೆಗಟ್ಟಲೆ ಬಳಸುತ್ತೇವಲ್ಲ, ನಿದ್ದೆಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಅದೂ ಒಂದು ಕಾರಣ.

ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನಿನ ಪರದೆಯ ಮೇಲೆ ಏನಿದೆ ಎಂದು ನಮಗೆ ಕಾಣುವುದು ಅಲ್ಲಿಂದ ಹೊರಹೊಮ್ಮುವ ಬೆಳಕಿನ ಮೂಲಕ. ನೀಲಿ ಬೆಳಕು ಅಥವಾ ಬ್ಲೂ ಲೈಟ್ ಎನ್ನುವುದು ಈ ಬೆಳಕಿನ ಒಂದು ಭಾಗ. ಇದು ನಮ್ಮ ದೇಹದಲ್ಲಿ ಉತ್ಪನ್ನವಾಗುವ ಮೆಲಟೋನಿನ್ ಎಂಬ ಹಾರ್ಮೋನಿನ ಮೇಲೆ ಪರಿಣಾಮ ಬೀರುತ್ತದೆ. ಸುತ್ತಲಿನ ಕತ್ತಲೆಗೆ ಪ್ರತಿಕ್ರಿಯೆಯಾಗಿ ನಮ್ಮ ಮಿದುಳು ಉತ್ಪಾದಿಸುವ ಹಾರ್ಮೋನ್ ಇದು. ನಿದ್ದೆ ಮಾಡಲು ನೆರವಾಗುವ ಮೂಲಕ ನಮ್ಮ ಜೈವಿಕ ಗಡಿಯಾರವನ್ನು ಸುಸ್ಥಿತಿಯಲ್ಲಿಡುವುದು ಈ ಹಾರ್ಮೋನಿನ ಕೆಲಸ. ಬೆಳಕು ಜಾಸ್ತಿಯಿರುವಾಗ ಈ ಹಾರ್ಮೋನಿನ ಉತ್ಪಾದನೆ ಕಡಿಮೆಯಾಗುತ್ತದೆ. ಸುದೀರ್ಘಕಾಲ ನೀಲಿ ಬೆಳಕನ್ನು ದಿಟ್ಟಿಸಿದಾಗ ಈ ಹಾರ್ಮೋನ್ ಉತ್ಪತ್ತಿಯಾಗುವ ಪ್ರಮಾಣ ಇನ್ನಷ್ಟು ಕ್ಷೀಣಿಸುತ್ತದೆ. ಹಾಗಾಗಿಯೇ, ತಡರಾತ್ರಿಯವರೆಗೂ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ ಆನಂತರ ಮಲಗಿದಾಗ ನಮಗೆ ಸುಲಭವಾಗಿ ನಿದ್ದೆ ಹತ್ತುವುದಿಲ್ಲ.

ನಿದ್ದೆಯ ಸಮಯದಲ್ಲಿ ವ್ಯತ್ಯಾಸದಿಂದಾಗಿ ಏರುಪೇರಾದ ನಮ್ಮ ಜೈವಿಕ ಗಡಿಯಾರವನ್ನು ಆಹಾರದ ಮೂಲಕ ಸರಿಪಡಿಸಿಕೊಳ್ಳಬಹುದೆಂದು ಹೇಳುವ ಅಧ್ಯಯನವೊಂದು ಇತ್ತೀಚೆಗೆ ಪ್ರಕಟವಾಗಿತ್ತು. ದಿನಗಟ್ಟಲೆ ನಿದ್ದೆಗೆಟ್ಟು ಕೆಲಸಮಾಡಿದ್ದರಿಂದಾಗಲಿ, ಒಂದು ಸಮಯವಲಯದಿಂದ ಇನ್ನೊಂದಕ್ಕೆ ಪ್ರಯಾಣಿಸಿದ್ದರಿಂದಲೇ ಇರಲಿ, ಹೀಗೆ ನಿದ್ದೆಯ ವೇಳಾಪಟ್ಟಿ ಬದಲಾಗುವುದರಿಂದ ಉಂಟಾಗುವ ತೊಂದರೆಗಳನ್ನು ಸರಿಪಡಿಸಿಕೊಳ್ಳಲು 'ಪ್ರೀಬಯಾಟಿಕ್'ಗಳೆಂಬ ಆಹಾರ ಪದಾರ್ಥಗಳ ಸೇವನೆ ನೆರವಾಗಬಲ್ಲದು ಎಂದು ಕೊಲರಾಡೋ ವಿಶ್ವವಿದ್ಯಾನಿಲಯದ ಅಧ್ಯಯನ ತಿಳಿಸಿದೆ. ಹಲವು ಧಾನ್ಯಗಳು, ಸೊಪ್ಪು, ಹಣ್ಣು ಮತ್ತು ತರಕಾರಿಗಳಲ್ಲಿರುವ ಈ ಪದಾರ್ಥಗಳು ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಆರೋಗ್ಯ ಕಾಪಾಡುವುದರ ಜೊತೆಗೆ ಏರುಪೇರಾದ ನಮ್ಮ ನಿದ್ದೆಯ ವೇಳಾಪಟ್ಟಿಯನ್ನು ಸರಿಪಡಿಸಿಕೊಳ್ಳುವುದಕ್ಕೂ ನೆರವಾಗುತ್ತವೆ ಎಂದು ಆ ಅಧ್ಯಯನ ಕಂಡುಕೊಂಡಿದೆ.

ಬಹುಪಾಲು ಸಮಸ್ಯೆಗಳಿಗೆ ಅಂತರಜಾಲದಲ್ಲಿ ಉತ್ತರ ಹುಡುಕುವುದು ನಮ್ಮಲ್ಲಿ ಅನೇಕರ ಅಭ್ಯಾಸ. ಹಾಗಾಗಿ ನಿದ್ದೆಯ ಸಮಸ್ಯೆಯನ್ನು ಆಹಾರ ಅಥವಾ ಬೇರಾವುದೇ ಮಾರ್ಗದಲ್ಲಿ ಪರಿಹರಿಸಿಕೊಳ್ಳುವುದಕ್ಕಿಂತ ನಾವು ಇದಕ್ಕೂ ತಂತ್ರಜ್ಞಾನದ ಮೊರೆಹೋಗುವ ಸಾಧ್ಯತೆಯೇ ಹೆಚ್ಚು. ಇದರ ಪರಿಣಾಮವಾಗಿ 'ಸ್ಲೀಪ್ ಟೆಕ್' ಎಂಬ ಕ್ಷೇತ್ರವೇ ಬೆಳೆದುನಿಂತಿದೆ. ನಿದ್ದೆಗೆ ಸಂಬಂಧಪಟ್ಟ ಸಮಸ್ಯೆಗಳ ವಿಶ್ಲೇಷಣೆ ಹಾಗೂ ಚಿಕಿತ್ಸೆಯಲ್ಲಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಳ್ಳುವುದು ಈ ಕ್ಷೇತ್ರದ ಉದ್ದೇಶ. ನಿಮಗೆ ನಿದ್ದೆ ಚೆನ್ನಾಗಿ ಬರುತ್ತಿದೆಯೋ ಬರುತ್ತಿಲ್ಲವೋ ಎಂಬುದನ್ನು ಗಮನಿಸುವ ಸಾಧನಗಳಿಂದ ಪ್ರಾರಂಭಿಸಿ, ವೈಜ್ಞಾನಿಕವಾಗಿ ರೂಪಿಸಲಾದ ಹಾಸಿಗೆ-ದಿಂಬುಗಳವರೆಗೆ ಸ್ಲೀಪ್ ಟೆಕ್ ಕ್ಷೇತ್ರದ ಸಂಸ್ಥೆಗಳು ಹಲವು ಉತ್ಪನ್ನಗಳನ್ನು ರೂಪಿಸಿ ಮಾರಾಟ ಮಾಡುತ್ತಿವೆ.

ಈ ಕ್ಷೇತ್ರದ ಸಂಸ್ಥೆಯೊಂದು ತಾನು ರೂಪಿಸಿದ ಹಾಸಿಗೆಯ ಮೇಲೆ ಮಲಗಿ ನಿದ್ದೆಮಾಡುವ ಮೂಲಕ ಅದನ್ನು ಪರೀಕ್ಷಿಸಲು 'ಸ್ಲೀಪ್ ಇಂಟರ್ನ್'ಗಳನ್ನು ನೇಮಿಸಿಕೊಂಡಿದ್ದು ಈಚೆಗೆ ಸುದ್ದಿಯಾಗಿತ್ತು. ಇಂತಹ ಕೆಲಸವೊಂದು ಇರುವುದು ಗೊತ್ತಿದ್ದರೆ ಅದನ್ನೇ ಸೇರಬಹುದಿತ್ತು ಎಂದು ನನ್ನಂತಹ ಹಲವರು ಬೇಜಾರು ಮಾಡಿಕೊಂಡಿದ್ದು ಮಾತ್ರ ಸುದ್ದಿಯಾಗಿರಲಿಲ್ಲ ಅಷ್ಟೇ!

ಅಂದಹಾಗೆ ಆಹಾರ ಬದಲಾವಣೆಯೂ ಬೇಡ, ಹೊಸ ಸಾಧನಗಳನ್ನು ಕೊಳ್ಳುವುದೂ ಬೇಡ ಎಂದುಕೊಳ್ಳುವವರೂ ತಮ್ಮ ನಿದ್ದೆಯ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳುವುದು ಸಾಧ್ಯವಿದೆ. ಅದಕ್ಕಾಗಿ ಹೆಚ್ಚೇನೂ ಮಾಡಬೇಕಿಲ್ಲ - ಗ್ಯಾಜೆಟ್‌ಗಳ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಸರಿಯಾದ ಸಮಯಕ್ಕೆ ನಿದ್ದೆಮಾಡಿದರೆ ಸಾಕು! ಬೆಳಿಗ್ಗೆ ಸಕಾಲಕ್ಕೆ ಏಳಲು ಮೊಬೈಲಿನಲ್ಲಿ ಅಲಾರಂ ಇಟ್ಟುಕೊಂಡಂತೆ ರಾತ್ರಿ ಮಲಗುವ ಸಮಯವನ್ನೂ ನೆನಪಿಸಬಲ್ಲ ಅನೇಕ ಸವಲತ್ತುಗಳು ಇಂದಿನ ಸ್ಮಾರ್ಟ್‌ಫೋನುಗಳಲ್ಲಿವೆ (ಆಂಡ್ರಾಯ್ಡ್ ಬಳಕೆದಾರರು 'ಡಿಜಿಟಲ್ ವೆಲ್‌ಬೀಯಿಂಗ್' ಎಂದು ಹುಡುಕಿನೋಡಿ). ನಾವು ಬಹುವಾಗಿ ಸಮಯ ಕಳೆಯುವ ಸಮಾಜಜಾಲಗಳಲ್ಲೂ ನಿದ್ದೆಯ ಸಮಯವನ್ನು ಹೊಂದಿಸಿಡುವುದು, ಆ ಅವಧಿಯಲ್ಲಿ ಅದು ಕೆಲಸಮಾಡದಂತೆ ನೋಡಿಕೊಳ್ಳುವುದೂ ಸಾಧ್ಯ.

ಇಷ್ಟೆಲ್ಲ ಮಾಡಿ ನಮ್ಮ ನಿದ್ದೆಯ ಸಮಸ್ಯೆಗಳನ್ನು ಸರಿಪಡಿಸಿಕೊಂಡರೆ, ಮತ್ತೆ ಕುಂಭಕರ್ಣನ ಮಾದರಿಯನ್ನು ಅನುಕರಿಸುವ ಕನಸು ಕಾಣಬಹುದೇ? ಖಂಡಿತಾ ಬೇಡ ಎನ್ನುತ್ತಾರೆ ವಿಜ್ಞಾನಿಗಳು. ಅಗತ್ಯಕ್ಕಿಂತ ಹೆಚ್ಚು ನಿದ್ದೆಯೂ ಆರೋಗ್ಯಕ್ಕೆ ಹಾನಿಕರವಂತೆ. ದಿನಕ್ಕೆ ಸರಾಸರಿ ಏಳೆಂಟು ಗಂಟೆಗಳ ನಿದ್ದೆ ಸಾಕು ಎನ್ನುವುದು ಸಾಮಾನ್ಯವಾಗಿ ಕೇಳಸಿಗುವ ಅಭಿಪ್ರಾಯ. ನಮ್ಮೆಲ್ಲರ ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕಿಂತ ಹೆಚ್ಚು ನಿದ್ದೆ ಮಾಡುವವರಾದರೂ ಯಾರವ್ರೆ? ಎಲ್ಲವ್ರೆ?

ಸೆಪ್ಟೆಂಬರ್ ೨೧, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ನಾಲ್ಕನೆಯ ಬರಹ

'ಟೆಕ್ ನೋಟ' ಅಂಕಣದ ನಾಲ್ಕನೆಯ ಬರಹ
'ಟೆಕ್ ನೋಟ' ಅಂಕಣದ ನಾಲ್ಕನೆಯ ಬರಹವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com