ಸರ್ಚ್ ಇಂಜನ್ ತಂತ್ರಜ್ಞಾನ ಇಂದು ನಮ್ಮ ನೆನಪಿನ ಶಕ್ತಿಗೆ ಪರ್ಯಾಯವೇ ಆಗಿಬಿಟ್ಟಿದೆ!
ಸರ್ಚ್ ಇಂಜನ್ ತಂತ್ರಜ್ಞಾನ ಇಂದು ನಮ್ಮ ನೆನಪಿನ ಶಕ್ತಿಗೆ ಪರ್ಯಾಯವೇ ಆಗಿಬಿಟ್ಟಿದೆ!Image by Free-Photos from Pixabay

ಸರ್ಚ್ ಇಂಜನ್ನಿನ ಸೆಪ್ಟೆಂಬರ್ ನಂಟು

ಸರ್ಚ್ ಇಂಜನ್ ಇತಿಹಾಸದ ಹಲವು ಮಹತ್ವದ ಘಟನೆಗಳು ನಡೆದಿರುವುದು ಸೆಪ್ಟೆಂಬರ್ ತಿಂಗಳಿನಲ್ಲಿ!

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮಹತ್ವದ ಸೃಷ್ಟಿಗಳನ್ನೇನಾದರೂ ಪಟ್ಟಿಮಾಡಲು ಹೊರಟರೆ ಆ ಪಟ್ಟಿಯಲ್ಲಿ ಅಂತರಜಾಲ (ಇಂಟರ್‌ನೆಟ್) ಹಾಗೂ ವಿಶ್ವವ್ಯಾಪಿ ಜಾಲಗಳೆರಡೂ (ವರ್ಲ್ಡ್‌ವೈಡ್ ವೆಬ್) ಸ್ಥಾನ ಪಡೆದುಕೊಳ್ಳುವುದು ಖಂಡಿತ. ವಿಶ್ವದ ಮೂಲೆಮೂಲೆಗಳ ನಡುವೆ ಮಾಹಿತಿಯ ವಿನಿಮಯವನ್ನು ಅತ್ಯಂತ ಸುಲಭಸಾಧ್ಯವಾಗಿಸಿರುವುದು ಈ ಆವಿಷ್ಕಾರಗಳ ಹೆಚ್ಚುಗಾರಿಕೆ.

ಇವುಗಳ ನೆರವಿನಿಂದ ಮಾಹಿತಿಯ ಮಹಾಪೂರವೇ ಸೃಷ್ಟಿಯಾಗಿದೆಯಲ್ಲ, ನಮಗೆ ಉಪಯುಕ್ತವಾದ ವಿಷಯಗಳು ಅದರಲ್ಲಿ ಕೊಚ್ಚಿಹೋಗದಂತೆ ತಡೆದಿರುವುದು ಇದೇ ಮಾಹಿತಿ ತಂತ್ರಜ್ಞಾನದ ಇನ್ನೊಂದು ಆವಿಷ್ಕಾರ. ನಮಗೆ ಬೇಕಾದ ಮಾಹಿತಿ ಜಾಲಲೋಕದ ಯಾವ ಮೂಲೆಯಲ್ಲಿದೆ ಎಂದು ಥಟ್ಟನೆ ಹುಡುಕಿಕೊಳ್ಳಲು ನೆರವಾಗುವ ಈ ಆವಿಷ್ಕಾರದ ಹೆಸರೇ 'ಸರ್ಚ್ ಇಂಜನ್'.

ವಿಶ್ವವ್ಯಾಪಿ ಜಾಲದಲ್ಲಿ ಅಸಂಖ್ಯ ಜಾಲತಾಣಗಳು (ವೆಬ್ ಸೈಟ್), ಪುಟಗಳು (ವೆಬ್ ಪೇಜ್), ಚಿತ್ರಗಳು, ವೀಡಿಯೋಗಳು ಹಾಗೂ ಕಡತಗಳಿರುತ್ತವೆ ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಇವೆಲ್ಲದರ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಇಟ್ಟುಕೊಂಡು, ನಮಗೆ ಬೇಕಾದಾಗ ಬೇಕಾದ್ದನ್ನು ಹುಡುಕಿಕೊಳ್ಳಲು ಸಹಾಯಮಾಡುವುದು ಸರ್ಚ್ ಇಂಜನ್‌ನ ಕೆಲಸ. ಪಠ್ಯ, ಧ್ವನಿ, ಚಿತ್ರ ಮುಂತಾದ ಯಾವುದೇ ರೂಪದ ಮಾಹಿತಿಯನ್ನಾದರೂ ಇವು ಹುಡುಕಿಕೊಡಬಲ್ಲವು.

ಸ್ವಯಂಚಾಲಿತ ತಂತ್ರಾಂಶ, ಅಂದರೆ 'ಬಾಟ್'ಗಳ ನೆರವಿನಿಂದ ಅಪಾರ ಸಂಖ್ಯೆಯ ಜಾಲತಾಣಗಳನ್ನು ಪರಿಶೀಲಿಸುವ ಸರ್ಚ್ ಇಂಜನ್‌ಗಳು ಆ ತಾಣಗಳಲ್ಲಿ ಏನೆಲ್ಲ ಇದೆ ಎನ್ನುವ ಬಗ್ಗೆ ಒಂದಷ್ಟು ವಿವರಗಳನ್ನು ಉಳಿಸಿಟ್ಟುಕೊಳ್ಳುತ್ತವೆ. ನಾವು ಸರ್ಚ್ ಮಾಡಿದಾಗ ನಮಗೆ ಬೇಕಾದ ಮಾಹಿತಿಯಿರುವ ಜಾಲತಾಣಗಳ ಪಟ್ಟಿ ಥಟ್ಟನೆ ಕಾಣಿಸಿಕೊಳ್ಳುವುದಕ್ಕೆ ಈ ವಿವರಗಳೇ ಮೂಲ. ಈ ಬಾಟ್‌ಗಳು ಬೃಹತ್ ಜೇಡರಬಲೆಯಂತಿರುವ ಜಾಲಲೋಕದಲ್ಲಿ ಸರಾಗವಾಗಿ ಓಡಾಡುವುದರಿಂದ ಅವನ್ನು 'ಸ್ಪೈಡರ್' (ಜೇಡ) ಎಂದೂ ಕರೆಯುತ್ತಾರೆ. ವೆಬ್ ಕ್ರಾಲರ್ ಎನ್ನುವುದು ಇವುಗಳ ಇನ್ನೊಂದು ಹೆಸರು. ಅತ್ಯಂತ ಪ್ರಸಿದ್ಧ ಜಾಲತಾಣಗಳು ಹಾಗೂ ಅತಿಹೆಚ್ಚು ಬಳಕೆದಾರರಿರುವ ಸರ್ವರ್‌ಗಳಿಂದ ಪ್ರಾರಂಭವಾಗುವ ಇವುಗಳ ಸಂಚಾರ, ಪ್ರತಿ ತಾಣದಲ್ಲೂ ಸಿಗುವ ಕೊಂಡಿಗಳನ್ನು (ಲಿಂಕ್) ಹಿಂಬಾಲಿಸುವ ಮೂಲಕ ಮುಂದುವರೆಯುತ್ತದೆ. ಆ ಮೂಲಕ ಜಾಲಲೋಕದ ಮಾಹಿತಿ ನಾವು ಬೇಕೆಂದಾಗ ಸಿಗುವುದೂ ಸಾಧ್ಯವಾಗುತ್ತದೆ.

ಸರ್ಚ್ ಇಂಜನ್ ಎಂದಾಕ್ಷಣ ನಮ್ಮ ನೆನಪಿಗೆ ಬರುವುದು ಗೂಗಲ್. ಅದು ಎಷ್ಟು ಜನಪ್ರಿಯವೆಂದರೆ ನಮಗೆ ಬೇಕಾದ ಮಾಹಿತಿಯನ್ನು ಹುಡುಕಿಕೊಳ್ಳುವ ಪ್ರಕ್ರಿಯೆಗೆ googling ಅಥವಾ 'ಗೂಗಲ್ ಮಾಡುವುದು' ಎಂಬ ಅಡ್ಡಹೆಸರೇ ಬಂದುಬಿಟ್ಟಿದೆ. ಸರ್ಚ್ ಇಂಜನ್ ಜೊತೆಯಲ್ಲಿ ಜಿಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಗೂಗಲ್ ಹೋಮ್, ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ (ಓಎಸ್), ಪಿಕ್ಸೆಲ್ ಮೊಬೈಲ್ ಫೋನ್ ಮುಂತಾದ ಹಲವಾರು ಸವಲತ್ತುಗಳಿಗೆ ಹೆಸರಾಗಿರುವ ಗೂಗಲ್ ಒಂದು ಸಂಸ್ಥೆಯ ರೂಪ ಪಡೆದುಕೊಂಡಿದ್ದು ೧೯೯೮ರ ಸೆಪ್ಟೆಂಬರ್ ತಿಂಗಳಲ್ಲಿ.

ಸರ್ಚ್ ಇಂಜನ್ ಇತಿಹಾಸದಲ್ಲಿ ಗೂಗಲ್‌ಗಿಂತ ಮೊದಲಿನ ಕೆಲ ಘಟನೆಗಳೂ ಸೆಪ್ಟೆಂಬರ್ ತಿಂಗಳಿನಲ್ಲೇ ನಡೆದಿರುವುದು ವಿಶೇಷ. ೧೯೯೦ರ ಸೆಪ್ಟೆಂಬರ್ ೧೦ರಂದು ನಡೆದ 'ಆರ್ಚಿ'ಯ ಲೋಕಾರ್ಪಣೆಗೆ ಈ ಸಾಲಿನಲ್ಲಿ ಮಹತ್ವದ ಸ್ಥಾನವಿದೆ. ಅಂತರಜಾಲದಲ್ಲಿ ಉಳಿಸಿಟ್ಟು, ಫೈಲ್ ಟ್ರಾನ್ಸ್‌ಫರ್ ಪ್ರೋಟೋಕಾಲ್ (ಎಫ್‌ಟಿಪಿ) ಮೂಲಕ ಹಂಚಿಕೊಳ್ಳಲಾಗುತ್ತಿದ್ದ ಕಡತಗಳ ಪೈಕಿ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳುವ ಸವಲತ್ತು ನೀಡಿದ್ದು ಈ ವ್ಯವಸ್ಥೆಯ ಹೆಚ್ಚುಗಾರಿಕೆ. ವಿಶ್ವವ್ಯಾಪಿ ಜಾಲ ಇನ್ನೂ ತೀರಾ ಹೊಸದಾಗಿದ್ದ ಕಾಲದಲ್ಲಿ (ಅದು ಪರಿಚಯವಾಗಿದ್ದು ೧೯೮೯ರಲ್ಲಿ) ರೂಪುಗೊಂಡು ಸಾಕಷ್ಟು ಸಮಯ ಬಳಕೆಯಲ್ಲಿ ಉಳಿದುಕೊಂಡ ಆರ್ಚಿಯನ್ನು 'ಮೊದಲ ಅಂತರಜಾಲ ಸರ್ಚ್ ಇಂಜನ್' ಎಂದು ಗುರುತಿಸಲಾಗುತ್ತದೆ.

ಆರ್ಚಿ ಪರಿಚಯವಾದ ಮೂರು ವರ್ಷಗಳ ನಂತರ, ಸೆಪ್ಟೆಂಬರ್ ತಿಂಗಳಿನಲ್ಲೇ ನಡೆದ ಇನ್ನೊಂದು ಘಟನೆ, 'W3Catalog' ಎಂಬ ವ್ಯವಸ್ಥೆಯ ಸೃಷ್ಟಿ. ಜಿನೇವಾ ವಿಶ್ವವಿದ್ಯಾನಿಲಯದಲ್ಲಿ ೧೯೯೩ರ ಸೆಪ್ಟೆಂಬರ್ ೨ರಂದು ಪರಿಚಯಿಸಲಾದ ಈ ವ್ಯವಸ್ಥೆ ಅಂದಿನ ವಿಶ್ವವ್ಯಾಪಿ ಜಾಲದಲ್ಲಿದ್ದ ಮಾಹಿತಿಯ ವಿವರಗಳನ್ನು ಪಟ್ಟಿಗಳ (ಲಿಸ್ಟ್) ರೂಪದಲ್ಲಿ ಉಳಿಸಿಟ್ಟು, ಅದರಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳುವ ಸೌಲಭ್ಯ ಒದಗಿಸಿತ್ತು. ಇಂದಿನ ತಂತ್ರಜ್ಞಾನದ ಹೋಲಿಕೆಯಲ್ಲಿ ಬಹಳ ಸರಳ ಎನ್ನಿಸಿದರೂ ಸರ್ಚ್ ಇಂಜನ್‌ಗಳ ವಿಕಾಸದ ಹಾದಿಯಲ್ಲಿ ಈ ಸಾಧನೆ ಒಂದು ವಿಶಿಷ್ಟ ಮೈಲಿಗಲ್ಲು ಎಂದೇ ಹೇಳಬೇಕು.

ಇದಾದ ನಂತರ ಇನ್ನೂ ಹಲವಾರು ಮೈಲಿಗಲ್ಲುಗಳನ್ನು ಹಾದುಬಂದಿರುವ ಸರ್ಚ್ ಇಂಜನ್ ತಂತ್ರಜ್ಞಾನ, ಇಂದು ನಮ್ಮ ನೆನಪಿನ ಶಕ್ತಿಗೆ ಪರ್ಯಾಯವೇ ಆಗಿಬಿಟ್ಟಿದೆಯೇನೋ ಎನ್ನಿಸುವ ಮಟ್ಟಕ್ಕೆ ಬೆಳೆದುನಿಂತಿದೆ. ಇನ್ನಷ್ಟು ಸೆಪ್ಟೆಂಬರುಗಳು ಬಂದು ಹೋದಂತೆ ಈ ಕ್ಷೇತ್ರದಲ್ಲಿ ಇನ್ನೂ ಏನೆಲ್ಲ ಬದಲಾವಣೆಗಳು ಆಗಲಿಕ್ಕಿವೆಯೋ, ಅದನ್ನೂ ಯಾವುದಾದರೂ ಸರ್ಚ್ ಇಂಜನ್ನಿನಲ್ಲಿ ಹುಡುಕುವಂತಿದ್ದರೆ ಚೆನ್ನಾಗಿತ್ತು!

ಸೆಪ್ಟೆಂಬರ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

logo
ಇಜ್ಞಾನ Ejnana
www.ejnana.com