ಇಡೀ ಭೂಮಿಗೆ ಅಂತರಜಾಲ ಸಂಪರ್ಕ ಕಲ್ಪಿಸಿಕೊಡಲು ಸಾವಿರಾರು ಉಪಗ್ರಹಗಳು ಬೇಕಾಗುತ್ತವೆ.
ಇಡೀ ಭೂಮಿಗೆ ಅಂತರಜಾಲ ಸಂಪರ್ಕ ಕಲ್ಪಿಸಿಕೊಡಲು ಸಾವಿರಾರು ಉಪಗ್ರಹಗಳು ಬೇಕಾಗುತ್ತವೆ.Image by Pixaline from Pixabay

ಆಕಾಶದಿಂದ ಹಾರಿ ಬರುತಿದೆ ಅಂತರಜಾಲದ ರಹದಾರಿ!

ಮೊಬೈಲ್ ಟವರ್ ಅಥವಾ ಯಾವುದೇ ರೀತಿಯ ತಂತಿಯನ್ನು ಅವಲಂಬಿಸುವ ಬದಲು, ನೇರವಾಗಿ ಉಪಗ್ರಹಗಳ ಮೂಲಕವೇ ಅಂತರಜಾಲ ಸಂಪರ್ಕವನ್ನು ಕಲ್ಪಿಸಿಕೊಡುವುದು ಸ್ಯಾಟಲೈಟ್ ಇಂಟರ್‌ನೆಟ್ ಪರಿಕಲ್ಪನೆಯ ಉದ್ದೇಶ.

ನಾವು ಚಿಕ್ಕವರಾಗಿದ್ದಾಗ ನಮ್ಮೂರು ಶ್ರೀಮಂಗಲದಲ್ಲಿ ಕರೆಂಟು ಇರುತ್ತಿದ್ದದ್ದೇ ಅಪರೂಪ. ಕರೆಂಟು ಇದ್ದಾಗ ಟೀವಿ ನೋಡೋಣವೆಂದರೆ ಅದರಲ್ಲಿ ಬರುತ್ತಿದ್ದದ್ದು ಒಂದೇ ಒಂದು ಚಾನಲ್ಲು. ಅದರಲ್ಲಿ ಕೆಲವೇ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದರಿಂದ ಸ್ಕ್ರೀನ್ ಟೈಮ್ ಜಾಸ್ತಿಯಾಯಿತೆಂದು ಯಾರೂ ನಮಗೆ ಬೈಯುವಂತೆಯೇ ಇರಲಿಲ್ಲ. ಆದರೆ, ಬೆಂಗಳೂರಿನ ನೆಂಟರ ಮನೆಗೆ ಬಂದಾಗ ಮಾತ್ರ, ಅವರ ಮನೆಯ ಕೇಬಲ್ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ಚಾನಲ್ಲುಗಳ ಹೆಸರು - ಅವುಗಳಲ್ಲಿ ಬರುತ್ತಿದ್ದ ಕಾರ್ಯಕ್ರಮಗಳು ಯಾವುದೂ ನಮಗೆ ಗೊತ್ತೇ ಇರುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾಗಿದ್ದು ಡಿಶ್ ಆಂಟೆನಾಗಳ ಪರಿಚಯವಾದಾಗ. ದೊಡ್ಡ ಬಾಣಲೆಯಂತಹ ಈ ಸಾಧನವನ್ನು ಅಂಗಳದಲ್ಲಿ ಅಳವಡಿಸಿ, ನಿರ್ದಿಷ್ಟ ದಿಕ್ಕಿಗೆ ತಿರುಗಿಸಿ, ಟೀವಿಗೆ ಸಂಪರ್ಕಿಸಿದ ಕೂಡಲೆ ಬೆಂಗಳೂರಿಗೂ ನಮ್ಮೂರಿಗೂ ಇದ್ದ ವ್ಯತ್ಯಾಸಗಳಲ್ಲಿ ಒಂದು ಥಟ್ಟನೆ ಮಾಯವಾಗಿಹೋಯಿತು. ಬೇರೆಬೇರೆ ಚಾನಲ್ಲುಗಳನ್ನು ವೀಕ್ಷಿಸುವ ಮೂಲಕ ನಮಗೂ ನಮ್ಮ ಟೀವಿ ಜ್ಞಾನವನ್ನು ಹೆಚ್ಚಿಸಿಕೊಳ್ಳುವ, ಸ್ಕ್ರೀನ್ ಟೈಮ್ ಜಾಸ್ತಿಯಾಯಿತೆಂದು ಬೈಸಿಕೊಳ್ಳುವ ಅವಕಾಶ ದೊರಕಿತು.

ಈಗ, ಹಳ್ಳಿ-ನಗರಗಳ ವ್ಯತ್ಯಾಸವೇ ಇಲ್ಲದಂತೆ ಎಲ್ಲರೂ ಡಿಟಿಎಚ್ ಸೌಲಭ್ಯವನ್ನು ಬಳಸುತ್ತಿರುವ ಸಂದರ್ಭದಲ್ಲಿ, ಇದೊಂದು ಹಳೆಯ ಕತೆಯಂತೆ ಮಾತ್ರ ಕೇಳಿಸಬಹುದು. ಕೆಲವು ಟೀವಿ ಚಾನಲ್ಲುಗಳನ್ನು ನೋಡುವ ಅವಕಾಶವಿಲ್ಲದಿದ್ದರೆ ಒಳ್ಳೆಯದೇ ಆಯಿತು ಎಂದೂ ಕೆಲವರಿಗೆ ಅನ್ನಿಸಬಹುದು. ಆದರೆ ಮೇಲಿನ ಕತೆಯಲ್ಲಿ ಟೀವಿಯ ಜಾಗದಲ್ಲಿ ಅಂತರಜಾಲ ಸಂಪರ್ಕವನ್ನು ಕಲ್ಪಿಸಿಕೊಳ್ಳಿ. ಟೀವಿ ಚಾನಲ್ ಬೇಡ ಎನ್ನುವವರೂ ಬಹುಶಃ ಅಂತರಜಾಲ ಬೇಡವೆಂದು ಹೇಳಲಾರರು.

ಹೌದು. ಮಾಹಿತಿ ತಂತ್ರಜ್ಞಾನದ ವ್ಯಾಪ್ತಿ ಇಷ್ಟೊಂದು ಬೆಳೆದಿರುವ ಇಂದಿನ ಕಾಲದಲ್ಲಿ ಅಂತರಜಾಲ ಸಂಪರ್ಕ ನಮ್ಮೆಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತವೆನಿಸಿದೆ. ಅಂತರಜಾಲ ಸಂಪರ್ಕವನ್ನು ನಮ್ಮ ಮೂಲಭೂತ ಹಕ್ಕೆಂದು ಪರಿಗಣಿಸಬೇಕು ಎನ್ನುವ ನಿಟ್ಟಿನಲ್ಲೂ ಸಾಕಷ್ಟು ಚರ್ಚೆ ನಡೆದಿದೆ. ವಿಶ್ವಸಂಸ್ಥೆಯಲ್ಲಿ, ಭಾರತದ ನ್ಯಾಯಾಲಯಗಳಲ್ಲೂ ಈ ವಿಷಯ ಪ್ರಸ್ತಾಪವಾಗಿದೆ.

ಆದರೆ ವಿಶ್ವದೆಲ್ಲೆಡೆಯ ಹಲವಾರು ಪ್ರದೇಶಗಳು ಇಂದಿಗೂ ಸಾಂಪ್ರದಾಯಿಕ ದೂರಸಂಪರ್ಕ ಜಾಲಗಳ ವ್ಯಾಪ್ತಿಯಿಂದ ಹೊರಗೇ ಉಳಿದಿದ್ದು, ಅಲ್ಲಿನ ಜನರು ಅಂತರಜಾಲದ ಅನುಕೂಲತೆಗಳಿಂದ ವಂಚಿತರಾಗಿದ್ದಾರೆ. ಆನ್‌ಲೈನ್ ಶಿಕ್ಷಣ ಪಡೆದುಕೊಳ್ಳುವಲ್ಲಿ ನಮ್ಮ ಗ್ರಾಮೀಣ ವಿದ್ಯಾರ್ಥಿಗಳು ಎದುರಿಸಿದ ಸವಾಲುಗಳು ಈ ಸಮಸ್ಯೆಯ ಸ್ವರೂಪವನ್ನು ಬಹಳ ಸ್ಪಷ್ಟವಾಗಿ ನಮ್ಮ ಮುಂದೆ ತೆರೆದಿಟ್ಟಿವೆ.

ಅಂತರಜಾಲ ಸಂಪರ್ಕ ಏಕೆ ಎಲ್ಲೆಡೆಯೂ ಸಿಗುತ್ತಿಲ್ಲ ಎಂದು ವಿಶ್ಲೇಷಿಸುವ ಮುನ್ನ ಅದು ಕೆಲಸಮಾಡುವ ರೀತಿಯನ್ನು ಕೊಂಚ ಗಮನಿಸಬೇಕಾಗುತ್ತದೆ. ಈಗ ನೀವು ಮೊಬೈಲಿನ ಮೂಲಕ ಅಂತರಜಾಲ ಸಂಪರ್ಕ ಬಳಸುತ್ತಿದ್ದೀರಿ ಎಂದುಕೊಳ್ಳೋಣ. ನೀವು ಕಳುಹಿಸುವ ಅಥವಾ ಪಡೆದುಕೊಳ್ಳುವ ಮಾಹಿತಿ ನಿಮ್ಮ ಸಮೀಪದ ಮೊಬೈಲ್ ಟವರ್ ಮೂಲಕ ವರ್ಗಾವಣೆಯಾಗುತ್ತದೆ. ಅಂತರಜಾಲದ ವಿವಿಧ ಹಂತಗಳಲ್ಲಿರುವ ವ್ಯವಸ್ಥೆಗಳನ್ನು ಸಂಪರ್ಕಿಸುವ ಮೂಲಕ, ನೀವು ಕಳುಹಿಸುವ ಮಾಹಿತಿಯನ್ನು ಅದರ ಗಮ್ಯಸ್ಥಾನಕ್ಕೆ ಕಳುಹಿಸುವ ಅಥವಾ ನಿಮಗೆ ಬೇಕಾದ ಮಾಹಿತಿಯನ್ನು ಅದರ ಮೂಲದಿಂದ ತಂದುಕೊಡುವ ಕೆಲಸವನ್ನು ಆ ಟವರ್ ಮಾಡುತ್ತದೆ. ವೈ-ಫೈ ಸಂಪರ್ಕ ಬಳಸುವಾಗಲೂ ಅಷ್ಟೇ, ನಿಮ್ಮ ಮಾಹಿತಿಯೆಲ್ಲ ಮನೆಯ ಮೋಡೆಮ್‌ಗೆ ಜೋಡಿಸಿರುವ ತಂತಿಯ (ದೂರವಾಣಿ ಸಂಪರ್ಕ, ಕೇಬಲ್ ಅಥವಾ ಆಪ್ಟಿಕಲ್ ಫೈಬರ್) ಮೂಲಕ ಇನ್ನಿತರ ವ್ಯವಸ್ಥೆಗಳಿಗೆ ವರ್ಗಾವಣೆಯಾಗುತ್ತದೆ. ಇಂತಹ ಯಾವುದೇ ಜಾಲದ ಸಂಪರ್ಕ ಇಲ್ಲದಿದ್ದರೆ ನಾವು ಅಂತರಜಾಲ ಸಂಪರ್ಕ ಪಡೆದುಕೊಳ್ಳಲು ಆಗುವುದಿಲ್ಲ. ಕೇಬಲ್ ಟೀವಿ ಸಂಪರ್ಕವಿಲ್ಲದ ನಮ್ಮ ಊರಿನಲ್ಲಿ ಹೊಸ ಚಾನಲ್ಲುಗಳು ಸಿಗುತ್ತಿರಲಿಲ್ಲವಲ್ಲ, ಹಾಗೆ!

ಬಾಣಲೆಯಂತಹ ಡಿಶ್ ಆಂಟೆನಾ ತಂದಿಟ್ಟ ನಾವು ಕೇಬಲ್ ಗೊಡವೆ ಇಲ್ಲದೆಯೇ ಹೊಸ ಚಾನಲ್ಲುಗಳನ್ನು ನೋಡಿದ ಹಾಗೆ, ದೂರಸಂಪರ್ಕ ಜಾಲಗಳಿಂದ ದೂರವಿದ್ದವರೂ ಅಂತರಜಾಲ ಸಂಪರ್ಕ ಪಡೆಯುವುದಕ್ಕೆ ಯಾವುದಾದರೂ ಮಾರ್ಗ ಇದೆಯೇ? "ಖಂಡಿತಾ ಇದೆ" ಎಂದು ಹೇಳುತ್ತಿರುವುದು ಉಪಗ್ರಹ ಅಂತರಜಾಲದ (ಸ್ಯಾಟಲೈಟ್ ಇಂಟರ್‌ನೆಟ್) ಪರಿಕಲ್ಪನೆ. ಮೊಬೈಲ್ ಟವರ್ ಅಥವಾ ಯಾವುದೇ ರೀತಿಯ ತಂತಿಯನ್ನು ಅವಲಂಬಿಸುವ ಬದಲು, ನೇರವಾಗಿ ಉಪಗ್ರಹಗಳ ಮೂಲಕವೇ ಅಂತರಜಾಲ ಸಂಪರ್ಕವನ್ನು ಕಲ್ಪಿಸಿಕೊಡುವುದು ಈ ಪರಿಕಲ್ಪನೆಯ ಉದ್ದೇಶ. ಡಿಟಿಎಚ್ ವ್ಯವಸ್ಥೆಯಲ್ಲಿ ಬಳಕೆಯಾಗುವಂತಹವೇ ಡಿಶ್ ಆಂಟೆನಾಗಳು ಇಲ್ಲಿ ಅಂತರಜಾಲ ಸಂಪರ್ಕವನ್ನು ಮನೆಮನೆಗಳಿಗೆ ತಲುಪಿಸುತ್ತವೆ. ಡಿಟಿಎಚ್ ವ್ಯವಸ್ಥೆಯಲ್ಲಿ ಏಕಮುಖವಾಗಿರುವ (ಉಪಗ್ರಹದಿಂದ ಮನೆಗೆ) ಸಂವಹನ ಇಲ್ಲಿ ಎರಡೂ ಮಾರ್ಗಗಳಲ್ಲಿ (ಮನೆಯಿಂದ ಉಪಗ್ರಹಕ್ಕೆ ಹಾಗೂ ಉಪಗ್ರಹದಿಂದ ಮನೆಗೆ) ನಡೆಯುತ್ತದೆ ಎನ್ನುವುದು ವಿಶೇಷ. ಈ ಬಗೆಯ ಸಂಪರ್ಕಗಳು ಸಾಂಪ್ರದಾಯಿಕ ದೂರಸಂಪರ್ಕ ಜಾಲಗಳನ್ನು ಬಳಸದೆ ಇರುವುದರಿಂದ ಎಷ್ಟೇ ದುರ್ಗಮವಾದ ಪ್ರದೇಶದಲ್ಲೂ ಇವುಗಳನ್ನು ಬಳಸುವುದು ತಾಂತ್ರಿಕವಾಗಿ ಸಾಧ್ಯವಾಗುತ್ತದೆ.

ಉಪಗ್ರಹ ಅಂತರಜಾಲದ ಪರಿಕಲ್ಪನೆ ಹೊಸತೇನೂ ಅಲ್ಲ. ಒಂದಷ್ಟು ಸಂಸ್ಥೆಗಳು ಹಲವು ವರ್ಷಗಳಿಂದಲೇ ಈ ರೀತಿಯ ಸಂಪರ್ಕಗಳನ್ನು ಒದಗಿಸುತ್ತಿವೆ, ಹಾಗೂ ಅಗತ್ಯವಿರುವವರು ಅದನ್ನು ಬಳಸುತ್ತಲೂ ಇದ್ದಾರೆ. ಆದರೆ ಈಗ, ಇಂತಹ ಸಂಪರ್ಕಗಳನ್ನು ಹೆಚ್ಚು ವ್ಯಾಪಕವಾಗಿ ಹಾಗೂ ಸುಧಾರಿತ ತಂತ್ರಜ್ಞಾನದೊಂದಿಗೆ ಪರಿಚಯಿಸುವ ಕೆಲಸ ನಡೆದಿದೆ. ಟೆಸ್ಲಾ ಸಂಸ್ಥೆಯ ಇಲಾನ್ ಮಸ್ಕ್, ಅಮೆಜಾನ್‌ನ ಜೆಫ್ ಬೆಜ಼ೋಸ್ ಮುಂತಾದ ಘಟಾನುಘಟಿಗಳು ಈ ಕೆಲಸದಲ್ಲಿ ತೊಡಗಿಕೊಂಡಿರುವುದು ಈ ಬಗ್ಗೆ ಕುತೂಹಲ ಹೆಚ್ಚುವುದಕ್ಕೆ ಕಾರಣವಾಗಿದೆ. ನಮ್ಮ ದೇಶದ ಏರ್‌ಟೆಲ್ ಸಂಸ್ಥೆ ಕೂಡ 'ಒನ್‌ವೆಬ್' ಎಂಬ ಉಪಗ್ರಹ ಅಂತರಜಾಲ ಸಂಸ್ಥೆಯಲ್ಲಿ ಪಾಲುದಾರಿಕೆ ಪಡೆದುಕೊಂಡಿದೆ.

ಅಂತರಜಾಲ ಸಂಪರ್ಕವನ್ನು ಬಳಸುವಾಗ ಬ್ರೌಸರಿನಲ್ಲಿ ಜಾಲತಾಣದ ವಿಳಾಸ ಹಾಕಿದ ಮೇಲೆ ಆ ತಾಣದಲ್ಲಿರುವ ಮಾಹಿತಿ ನಮಗೆ ಕಾಣಲು ಕೊಂಚ ಸಮಯ ಬೇಕಾಗುತ್ತದಲ್ಲ, ಆ ವಿಳಂಬಕ್ಕೆ ಲೇಟೆನ್ಸಿ ಎಂದು ಹೆಸರು. ಯಾವುದೇ ಜಾಲದಲ್ಲಿ ನಿರ್ದಿಷ್ಟ ಪ್ರಮಾಣದ ದತ್ತಾಂಶ ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಲು ತೆಗೆದುಕೊಳ್ಳುವ ಸಮಯ ಇದು. ಸಾಮಾನ್ಯವಾಗಿ ಉಪಗ್ರಹ ಅಂತರಜಾಲ ಸಂಪರ್ಕಗಳಲ್ಲಿ ಈ ಸಮಯ ಕೊಂಚ ಹೆಚ್ಚಿರುತ್ತದೆ. ಹಾಗಾಗಿ ಮನೆಯ ವೈ-ಫೈ ಅಥವಾ ಮೊಬೈಲಿನ ಅಂತರಜಾಲ ಸಂಪರ್ಕಗಳಿಗೆ ಹೋಲಿಸಿದಾಗ ಉಪಗ್ರಹ ಅಂತರಜಾಲ ಸಂಪರ್ಕ ನಿಧಾನ ಅನ್ನಿಸಬಹುದು.

ಒಂದೇ ಉಪಗ್ರಹದಿಂದ ಹೆಚ್ಚು ಪ್ರದೇಶಕ್ಕೆ ಸೇವೆ ಒದಗಿಸುವ ಉದ್ದೇಶದಿಂದ ಅವನ್ನು ಸಾಮಾನ್ಯವಾಗಿ ಹತ್ತಾರು ಸಾವಿರ ಕಿಲೋಮೀಟರುಗಳಷ್ಟು ಎತ್ತರದ, ಜಿಯೋಸ್ಟೇಶನರಿ ಆರ್ಬಿಟ್ ಎಂಬ ಹೆಸರಿನ ಕಕ್ಷೆಯಲ್ಲಿ ಇರಿಸಲಾಗಿರುತ್ತದೆ. ಈ ಉಪಗ್ರಹಗಳನ್ನೇ ಅಂತರಜಾಲ ಸಂಪರ್ಕ ಕಲ್ಪಿಸಲು ಬಳಸಿಕೊಂಡರೆ, ಉಪಗ್ರಹದಿಂದ ಭೂಮಿಗೆ ಹಾಗೂ ಭೂಮಿಯಿಂದ ಉಪಗ್ರಹಕ್ಕೆ ತಲುಪಲು ಸಂಕೇತಗಳು ಹೆಚ್ಚು ದೂರ ಕ್ರಮಿಸಬೇಕಾಗುವುದರಿಂದ ಲೇಟೆನ್ಸಿ ಜಾಸ್ತಿಯಾಗುತ್ತದೆ. ಹೆಚ್ಚು ಲೇಟೆನ್ಸಿ ಇರುವ ಸಂಪರ್ಕಗಳ ಮೂಲಕ ಆನ್‌ಲೈನ್ ಮೀಟಿಂಗ್, ವೀಡಿಯೊ ವೀಕ್ಷಣೆ ಮುಂತಾದ ಚಟುವಟಿಕೆಗಳು ಅಷ್ಟೇನೂ ಉತ್ತಮ ಅನುಭವ ನೀಡುವುದಿಲ್ಲ. ಹೀಗಾಗಿಯೇ ಉಪಗ್ರಹ ಅಂತರಜಾಲ ಸಂಪರ್ಕವನ್ನು ಹೆಚ್ಚು ವ್ಯಾಪಕವಾಗಿ ಒದಗಿಸಲು ಹೊರಟಿರುವ ಸಂಸ್ಥೆಗಳು ತಮ್ಮ ಕಾರ್ಯತಂತ್ರದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿವೆ. ಹೆಚ್ಚು ಎತ್ತರದ ಕಕ್ಷೆಗಳಲ್ಲಿ ಕಡಿಮೆ ಸಂಖ್ಯೆಯ ಉಪಗ್ರಹಗಳನ್ನು ಇರಿಸುವ ಬದಲು ಅವು ಲೋ ಅರ್ಥ್ ಆರ್ಬಿಟ್ ಎಂಬ ಕಡಿಮೆ ಎತ್ತರದ ಕಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯ ಉಪಗ್ರಹಗಳನ್ನು ಇರಿಸುತ್ತಿವೆ. ಇಷ್ಟು ಎತ್ತರದಿಂದ ಭೂಮಿಯ ಮೇಲಿನ ಸ್ವಲ್ಪ ಪ್ರದೇಶಕ್ಕಷ್ಟೇ ಅಂತರಜಾಲ ಸಂಪರ್ಕ ಒದಗಿಸಲು ಸಾಧ್ಯವಾಗುವುದರಿಂದ, ಇಡೀ ಭೂಮಿಗೆ ಅಂತರಜಾಲ ಸಂಪರ್ಕ ಕಲ್ಪಿಸಿಕೊಡಲು ಸಾವಿರಾರು ಉಪಗ್ರಹಗಳು ಬೇಕಾಗುತ್ತವೆ. ಹೀಗಾಗಿಯೇ ಸ್ಟಾರ್‌ಲಿಂಕ್‌‌ನಂತಹ ಸಂಸ್ಥೆಗಳ ಉಪಗ್ರಹಗಳ ಜಾಲವನ್ನು ಕಾನ್ಸ್‌ಟಲೇಶನ್ ಅಥವಾ ಉಪಗ್ರಹ-ಪುಂಜಗಳೆಂದು ಗುರುತಿಸಲಾಗುತ್ತದೆ.

ಇಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್ ಸಂಸ್ಥೆಯಂತೂ ಈ ಉದ್ದೇಶಕ್ಕಾಗಿ ಸುಮಾರು ೪೨,೦೦೦ ಸಣ್ಣ ಉಪಗ್ರಹಗಳನ್ನು ಬಳಸುವುದಾಗಿ ಹೇಳಿಕೊಂಡಿದೆ, ಆ ಪೈಕಿ ಒಂದೂವರೆ ಸಾವಿರಕ್ಕೂ ಹೆಚ್ಚು ಉಪಗ್ರಹಗಳನ್ನು ಈಗಾಗಲೇ ಉಡಾಯಿಸಿಯೂಬಿಟ್ಟಿದೆ. ಒನ್‌ವೆಬ್ ಸಂಸ್ಥೆ ಕೂಡ ೪೮,೦೦೦ ಉಪಗ್ರಹಗಳನ್ನು ಉಡಾಯಿಸುವ ಯೋಜನೆ ಹಾಕಿಕೊಂಡಿದೆ. ಅಮೆಜಾನ್‌ ಸಂಸ್ಥೆ ತನ್ನ 'ಪ್ರಾಜೆಕ್ಟ್ ಕ್ಯೂಪರ್'ನಲ್ಲಿ ಹತ್ತು ಶತಕೋಟಿ ಡಾಲರುಗಳ ಹೂಡಿಕೆಯನ್ನು ಘೋಷಿಸಿದೆ. ಈ ಸಂಸ್ಥೆಗಳು ಭಾರತದಲ್ಲೂ ತಮ್ಮ ಸೇವೆ ಒದಗಿಸಲು ಉತ್ಸುಕರಾಗಿದ್ದು ಭಾರತ ಸರಕಾರದ ದೂರಸಂಪರ್ಕ ಹಾಗೂ ಬಾಹ್ಯಾಕಾಶ ಇಲಾಖೆಗಳೊಂದಿಗೆ ಮಾತುಕತೆ ನಡೆಸಿವೆ ಎಂದು ವರದಿಯಾಗಿದೆ.

ಇಷ್ಟೆಲ್ಲ ಸಂಖ್ಯೆಯ ಉಪಗ್ರಹಗಳನ್ನು ಉಡಾಯಿಸುವುದರಿಂದ ದೂರದೂರದ ಪ್ರದೇಶಗಳಿಗೂ ಅಂತರಜಾಲ ಸಂಪರ್ಕ ದೊರಕುತ್ತದೆ, ನಿಜ. ಆದರೆ ಇಷ್ಟೊಂದು ಸಂಕೀರ್ಣವಾದ ವ್ಯವಸ್ಥೆಯನ್ನು ನಿಭಾಯಿಸಲು ಭಾರೀ ಪ್ರಮಾಣದ ಹಣವೂ ವೆಚ್ಚವಾಗುತ್ತದೆ. ಅಲ್ಲದೆ ಭೂಮಿಯ ಸುತ್ತ ಸುತ್ತುವ ಉಪಗ್ರಹಗಳ ಸಂಖ್ಯೆಯಲ್ಲಿನ ಹೆಚ್ಚಳ ಅಂತರಿಕ್ಷದಲ್ಲಿ ಹೊಸ ಆತಂಕಗಳನ್ನೂ ತಂದೊಡ್ಡಬಲ್ಲದು. ಬಾಹ್ಯಾಕಾಶ ತ್ಯಾಜ್ಯದಿಂದಾಗಿ ಉಪಗ್ರಹಗಳಿಗೆ ಹಾನಿಯಾಗುವುದು, ಒಂದು ಸಂಸ್ಥೆಯ ಉಪಗ್ರಹ ಇನ್ನೊಂದು ಸಂಸ್ಥೆಯ ಉಪಗ್ರಹಕ್ಕೆ ಡಿಕ್ಕಿಹೊಡೆಯುವುದು, ಕಡೆಗೆ ಬೆಂಗಳೂರಿನ ರಸ್ತೆಗಳಂತೆ ಅಲ್ಲಿಯೂ ಟ್ರಾಫಿಕ್ ಜಾಮ್ ಆಗುವುದು ಮುಂದಿನ ದಿನಗಳಲ್ಲಿ ಸುದ್ದಿಯಾಗಬಹುದು. ಅಷ್ಟೇ ಅಲ್ಲ, ದೊಡ್ಡ ಸಂಖ್ಯೆಯ ಸ್ಟಾರ್‌ಲಿಂಕ್ ಉಪಗ್ರಹಗಳು ತಮ್ಮ ಮೇಲೆ ಬೀಳುವ ಬೆಳಕನ್ನು ಪ್ರತಿಫಲಿಸುತ್ತಿರುವುದರಿಂದ ಆಕಾಶವೀಕ್ಷಣೆಯ ಅನುಭವಕ್ಕೆ ಧಕ್ಕೆಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಆಕಾಶದ ಮಾತು ಹಾಗಿರಲಿ, ಉಪಗ್ರಹ ಅಂತರಜಾಲ ಸಂಪರ್ಕಗಳನ್ನು ನೆಲಮಟ್ಟದಲ್ಲಿ ಹೇಗೆ ಅನುಷ್ಠಾನಗೊಳಿಸಲಾಗುತ್ತದೆ ಎನ್ನುವುದರ ಬಗೆಗೂ ಸಾಕಷ್ಟು ಕುತೂಹಲವಿದೆ. ದುಬಾರಿ ಮೂಲಸೌಕರ್ಯದ ಕಾರಣದಿಂದ ಇಂತಹ ಸಂಪರ್ಕಗಳ ವೆಚ್ಚ ಯಾವ ಮಟ್ಟದಲ್ಲಿರಬಹುದು, ಉಪಗ್ರಹಗಳೊಡನೆ ನೇರ ಸಂಪರ್ಕ ಕಲ್ಪಿಸಿಕೊಳ್ಳುವ ಇಂತಹ ಸಂಪರ್ಕಗಳ ಮೇಲೆ ಸರಕಾರ ಹಾಗೂ ಭದ್ರತಾ ಸಂಸ್ಥೆಗಳು ಹೇಗೆ ನಿಗಾವಹಿಸಬಹುದು ಮುಂತಾದ ಪ್ರಶ್ನೆಗಳು ಈಗಾಗಲೇ ವ್ಯಾಪಕವಾಗಿ ಕೇಳಿಬಂದಿವೆ. ಮಳೆ ಬಂದಾಗ ಡಿಟಿಎಚ್ ಸೇವೆಯಲ್ಲಿ ಅಡಚಣೆಯಾಗುವಂತೆ ಇಲ್ಲಿಯೂ ಆಗಬಹುದೇ ಎಂಬ ಪ್ರಶ್ನೆಯೂ ಇದೆ. ಇಂತಹ ಎಲ್ಲ ಪ್ರಶ್ನೆಗಳಿಗೂ ಬೇಗನೆ ಉತ್ತರ ದೊರೆತು ಉಪಗ್ರಹ ಅಂತರಜಾಲ ಸಂಪರ್ಕಗಳು ಎಲ್ಲರ ಕೈಗೂ ಎಟುಕುವಂತಾದರೆ ನಮ್ಮ ಹಳ್ಳಿಗಾಡಿನ ವಿದ್ಯಾರ್ಥಿಗಳೂ ಉಳಿದವರೆಲ್ಲರ ಜೊತೆ ಸಮಾನವಾಗಿ ಸ್ಪರ್ಧಿಸುವುದು ಸಾಧ್ಯವಾಗುತ್ತದೆ. ಅದು ಹಾಗೆಯೇ ಆಗಲಿ ಎಂದು ಆಶಿಸೋಣ.

ಅಕ್ಟೋಬರ್ ೫, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಐದನೆಯ ಬರಹ

'ಟೆಕ್ ನೋಟ' ಅಂಕಣದ ಐದನೆಯ ಬರಹ
'ಟೆಕ್ ನೋಟ' ಅಂಕಣದ ಐದನೆಯ ಬರಹವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com