ನೆನಪುಗಳಿಗೆಲ್ಲ ಮೂಲ, ಪ್ರಪಂಚದ ಅತ್ಯಂತ ಸಂಕೀರ್ಣ ಕಂಪ್ಯೂಟರ್ ಎಂದು ಕರೆಯಬಹುದಾದ ನಮ್ಮ ಮಿದುಳು.
ನೆನಪುಗಳಿಗೆಲ್ಲ ಮೂಲ, ಪ್ರಪಂಚದ ಅತ್ಯಂತ ಸಂಕೀರ್ಣ ಕಂಪ್ಯೂಟರ್ ಎಂದು ಕರೆಯಬಹುದಾದ ನಮ್ಮ ಮಿದುಳು.Image by Gerd Altmann from Pixabay

ನೂರೊಂದು ನೆನಪು ನ್ಯೂರಾನಿನಿಂದ

ನೆನಪುಗಳು ನಮ್ಮದೇ ಖಾಸಗಿ ಗ್ರಂಥಾಲಯ ಇದ್ದಹಾಗೆ. ಗ್ರಂಥಾಲಯದ ಪುಸ್ತಕಗಳ ಹಾಗೆಯೇ ಇಲ್ಲಿ ಸಾವಿರಾರು ಸಂಗತಿಗಳನ್ನು ಜೋಡಿಸಿಡಲಾಗಿರುತ್ತದೆ.

ಮೊನ್ನೆ ರಾತ್ರಿ ಬೆಂಗಳೂರಿನಲ್ಲಿ ಜೋರು ಮಳೆ. ಆರಾಮವಾಗಿ ಕುಳಿತು ಹಳೆಯ ಚಿತ್ರಗೀತೆಗಳನ್ನು ಕೇಳುತ್ತಿದ್ದೆ, ಅಷ್ಟರಲ್ಲಿ ಕರೆಂಟು ಹೋಯಿತು. ಅಷ್ಟೇ - ತೊಂಬತ್ತರ ದಶಕದ ಕೊಡಗಿನ ನಮ್ಮ ಮನೆಯತ್ತ ನನ್ನ ಮನಸ್ಸು ಹಾರಿಹೋಯಿತು. ಆಗ ಸುರಿಯುತ್ತಿದ್ದ ಧಾರಾಕಾರ ಮಳೆ, ವಾರಗಟ್ಟಲೆ ನಾಪತ್ತೆಯಾಗುತ್ತಿದ್ದ ಕರೆಂಟು, ಅಪ್ಪ ಸಂಗ್ರಹಿಸಿಟ್ಟಿದ್ದ ಕ್ಯಾಸೆಟ್‌ಗಳು, ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಓದುತ್ತಿದ್ದ ಕತೆಪುಸ್ತಕಗಳು - ಎಲ್ಲವೂ ನೆನಪಾದವು.

ಈ ನೆನಪುಗಳೇ ಹೀಗೆ. ಇಂದಿನ ಯಾವುದೋ ಸಂಗತಿ ನಮ್ಮನ್ನು ದಿಢೀರನೆ ಹಿಂದಿನ ಬೇರಾವುದೋ ವಿಷಯ ಅಥವಾ ಘಟನೆಯತ್ತ ಕರೆದೊಯ್ದುಬಿಡುತ್ತದೆ. ನಮ್ಮ ಅಚ್ಚುಮೆಚ್ಚಿನ ಲೇಖಕರ ಪುಸ್ತಕ ನೋಡಿದಾಗ ಶಾಲೆಯಲ್ಲಿ ಅವರ ಬರಹವನ್ನು ಪಠ್ಯವಾಗಿ ಓದಿದ್ದು ನೆನಪಾಗುತ್ತದೆ. ಅಗಲಿದ ಹಿರಿಯರ ಫೋಟೋ ನೋಡಿದಾಗ ಅವರೊಂದಿಗೆ ಕಳೆದ ಕ್ಷಣಗಳು ನೆನಪಾಗುತ್ತವೆ. ಮಳೆ ಕೆಲವರಿಗೆ ಬೆಚ್ಚನೆಯ ನೆನಪನ್ನು ಮರಳಿಸುತ್ತದೆ; ಪ್ರವಾಹದ ಭೀಕರತೆ ಅನುಭವಿಸಿದವರಿಗೆ ಬೆಚ್ಚಿಬೀಳಿಸುವ ಭಯವನ್ನೂ ಉಂಟುಮಾಡುತ್ತದೆ!

ಈ ನೆನಪುಗಳಿಗೆಲ್ಲ ಮೂಲ, ಪ್ರಪಂಚದ ಅತ್ಯಂತ ಸಂಕೀರ್ಣ ಕಂಪ್ಯೂಟರ್ ಎಂದು ಕರೆಯಬಹುದಾದ ನಮ್ಮ ಮಿದುಳು. ನೆನಪುಗಳ ಶೇಖರಣೆಗಾಗಿ ಈ ಕಂಪ್ಯೂಟರಿನಲ್ಲಿ ಅಪರಿಮಿತ ಸಾಮರ್ಥ್ಯವಿದೆ. ನೆನಪುಗಳು ನಮ್ಮ ಮಿದುಳಿನಲ್ಲಿ ಉಳಿದುಕೊಳ್ಳುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಿವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ನಮ್ಮ ಅನುಭವಕ್ಕೆ ಬಂದ ಸಂಗತಿಗಳು ಸಂಕೇತಗಳಾಗಿ ಪರಿವರ್ತನೆಗೊಳ್ಳುವುದು ಇದರಲ್ಲಿ ಮೊದಲನೆಯ ಹಂತ. ಈ ಸಂಕೇತಗಳು ಮಿದುಳಿನಲ್ಲಿ ಶೇಖರವಾಗುವುದು ಎರಡನೆಯ ಹಂತ, ಹಾಗೂ ಯಾವುದೋ ಪ್ರಚೋದನೆಗೆ ಪ್ರತಿಯಾಗಿ ಆ ನೆನಪುಗಳು ಮರುಕಳಿಸುವುದು ಮೂರನೆಯ ಹಂತ.

ಒಂದು ರೀತಿಯಲ್ಲಿ ನೆನಪುಗಳು ನಮ್ಮದೇ ಖಾಸಗಿ ಗ್ರಂಥಾಲಯ ಇದ್ದಹಾಗೆ. ಗ್ರಂಥಾಲಯದ ಪುಸ್ತಕಗಳ ಹಾಗೆಯೇ ಇಲ್ಲಿ ಸಾವಿರಾರು ಸಂಗತಿಗಳನ್ನು ಜೋಡಿಸಿಡಲಾಗಿರುತ್ತದೆ. ಸರಿಯಾಗಿ ವರ್ಗೀಕರಿಸಿದ, ಪದೇಪದೇ ತೆಗೆದು ಬಳಸಿದ ಪುಸ್ತಕ ಬೇಕೆಂದ ಕೂಡಲೇ ನಮ್ಮ ಕೈಗೆ ಸಿಗುತ್ತದೆ. ಹಾಗಿಲ್ಲದಿದ್ದರೆ ಯಾವುದೋ ಮೂಲೆಯಲ್ಲಿ ಸೇರಿಸಿಟ್ಟ ಪುಸ್ತಕವನ್ನು ಹುಡುಕುವುದೇ ಕಷ್ಟವಾಗುತ್ತದೆ!

ನ್ಯೂರಾನುಗಳೆಂಬ ನರಕೋಶಗಳು ನೆನಪನ್ನು ಉಳಿಸಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಮಿದುಳಿನಲ್ಲಿ ಇಂತಹ ಹಲವು ಶತಕೋಟಿ ನ್ಯೂರಾನುಗಳಿವೆ. ಅಂತಹ ಪ್ರತಿಯೊಂದು ನ್ಯೂರಾನಿಗೂ ಹತ್ತಾರು ಸಾವಿರ ಇನ್ನಿತರ ನ್ಯೂರಾನುಗಳ ಜೊತೆ ಸಂಪರ್ಕ ಕಲ್ಪಿಸಿಕೊಂಡು ತನ್ನದೇ ಜಾಲವನ್ನು ರೂಪಿಸಿಕೊಳ್ಳುವ ಶಕ್ತಿ ಇರುತ್ತದೆ. ನಮ್ಮ ನೆನಪುಗಳು ಉಳಿದುಕೊಳ್ಳುವುದು ಇಂತಹವೇ ಜಾಲಗಳಲ್ಲಿ. ಕಚೇರಿಯ ದಾರಿ ನೆನಪಿಟ್ಟುಕೊಳ್ಳುವುದು, ಎದುರಿಗೆ ಬಂದವರನ್ನು ಗುರುತುಹಿಡಿಯುವುದು, ಹಳೆಯ ಚಿತ್ರಗೀತೆಗಳನ್ನು ತಪ್ಪಿಲ್ಲದೆ ಹಾಡುವುದು - ಇವೆಲ್ಲದಕ್ಕೂ ನ್ಯೂರಾನುಗಳ ಈ ಜಾಲಗಳೇ ಕಾರಣ.

ಎರಡು ನ್ಯೂರಾನುಗಳ ನಡುವಿನ ಸಂಧಿಗೆ ಸೈನಾಪ್ಸ್ ಎಂದು ಹೆಸರು. ತಾಜಾ ನೆನಪೊಂದು ನಮ್ಮ ಮಿದುಳನ್ನು ಪ್ರವೇಶಿಸಿದಾಗ ನ್ಯೂರಾನುಗಳ ಜಾಲವೊಂದು ರೂಪುಗೊಳ್ಳುತ್ತದೆ, ಹಾಗೂ ಅವುಗಳ ಭಾಗವಾದ ಸೈನಾಪ್ಸ್‌ಗಳ ತಾತ್ಕಾಲಿಕ ಪ್ರಚೋದನೆಯ ರೂಪದಲ್ಲಿ ಆ ನೆನಪು ಶೇಖರಗೊಳ್ಳುತ್ತದೆ. ನಮಗೆ ಆ ನೆನಪು ಮರುಕಳಿಸಬೇಕೆಂದರೆ ನ್ಯೂರಾನುಗಳ ಅದೇ ಜಾಲ ಮತ್ತೆ ಕ್ರಿಯಾಶೀಲವಾಗಬೇಕು. ಅದೇ ಸನ್ನಿವೇಶ ನಮಗೆ ಪದೇಪದೇ ನೆನಪಾಗುತ್ತಿದ್ದರೆ ಈ ಜಾಲ ಖಾಯಂ ಆಗಿ ಉಳಿದುಕೊಳ್ಳುತ್ತದೆ, ಹಾಗೂ ಆ ನೆನಪು ಹಸಿರಾಗಿರುತ್ತದೆ.

ನಮ್ಮ ಮಿದುಳಿನಲ್ಲಿ ಇಂತಹ ಅಸಂಖ್ಯ ಜಾಲಗಳು ರೂಪುಗೊಳ್ಳಬಲ್ಲವು, ಅಂದರೆ ಎಷ್ಟು ವಿಷಯಗಳು ಬೇಕಾದರೂ ನಮ್ಮ ನೆನಪಿನಲ್ಲಿ ಉಳಿಯಬಲ್ಲವು. ಆದರೆ ವಾಸ್ತವದಲ್ಲಿ ಎಲ್ಲ ಸಂಗತಿಗಳೂ ನಮಗೆ ನೆನಪಿರುವುದಿಲ್ಲ. ಹೊಸದಾಗಿ ಭೇಟಿಯಾದವರು ತಮ್ಮ ಫೋನ್ ನಂಬರ್ ಹೇಳಿದರೆ ಮೊಬೈಲಿನಲ್ಲಿ ಉಳಿಸಿಟ್ಟುಕೊಳ್ಳುವವರೆಗೆ ಮಾತ್ರ ಅದು ನಮ್ಮ ತಲೆಯಲ್ಲಿರುತ್ತದೆ. ಯಾವುದೋ ಕಾರಣಕ್ಕಾಗಿ ಮುಖ್ಯವೆನಿಸುವ, ಪದೇ ಪದೇ ನಮ್ಮ ಗಮನಕ್ಕೆ ಬರುವ ಅಥವಾ ನಾವು ನೆನಪಿಟ್ಟುಕೊಳ್ಳಲು ಪ್ರಯತ್ನಿಸುವ ಸಂಗತಿಗಳು - ಉದಾಹರಣೆಗೆ, ಹೆಂಡತಿಯ ಹುಟ್ಟುಹಬ್ಬ - ಮಾತ್ರ ಹೆಚ್ಚು ಕಾಲ ನಮ್ಮ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಹಾಗಿಲ್ಲದ ಸಂಗತಿಗಳು - ಒಮ್ಮೆಯಷ್ಟೇ ಭೇಟಿಯಾದ ವ್ಯಕ್ತಿಯ ಹೆಸರಿನಂತಹವು - ನಮ್ಮ ನೆನಪಿನಲ್ಲಿ ಉಳಿದುಕೊಳ್ಳುವುದು ಕಷ್ಟ.

ಕಾಲಕ್ರಮೇಣ ಅಭ್ಯಾಸಗಳು ಬದಲಾದಂತೆ ನಮ್ಮ ನೆನಪಿನ ಸ್ವರೂಪವೂ ಬದಲಾಗುತ್ತಿದೆ. ಹಿಂದೆ ನೆನಪಿರುತ್ತಿದ್ದ ಹತ್ತಾರು ಫೋನ್ ನಂಬರುಗಳು ಇಂದು ಮೊಬೈಲ್ ಇಲ್ಲದೆ ನಮಗೆ ನೆನಪಾಗುವುದೇ ಇಲ್ಲ. ದೂರದವರ ಮಾತು ಹಾಗಿರಲಿ, ಹತ್ತಿರದ ಗೆಳೆಯರ ಹುಟ್ಟುಹಬ್ಬವನ್ನೂ ನಮಗೆ ಸಮಾಜಜಾಲಗಳೇ ನೆನಪಿಸಬೇಕು. ಇನ್ನು ಸಾಮಾನ್ಯ ಜ್ಞಾನದ ಹೆಸರಿನಲ್ಲಿ ನಮಗೆ ತಿಳಿದಿರುತ್ತಿದ್ದ ಅನೇಕ ಸಂಗತಿಗಳ ಜವಾಬ್ದಾರಿಯೆಲ್ಲ ಇದೀಗ ಸಾರಾಸಗಟಾಗಿ ಗೂಗಲ್ಲಿಗೆ ವರ್ಗಾವಣೆಯಾಗಿದೆ. ಇದಕ್ಕೆ 'ಗೂಗಲ್ ಇಫೆಕ್ಟ್' ಎಂದು ಹೆಸರಿಡಲಾಗಿದೆ. ಸರ್ಚ್ ಎಂಜಿನ್ನುಗಳ ಮೂಲಕ ಸಿಗಬಹುದು ಎನ್ನಿಸುವ ವಿವರಗಳನ್ನು ಸರಾಗವಾಗಿ ಮರೆತುಬಿಡುವ, ಆ ಮಾಹಿತಿ ಬೇಕಾದಾಗೆಲ್ಲ ಸರ್ಚ್ ಎಂಜಿನ್ ಮೊರೆಹೋಗುವ ಪ್ರವೃತ್ತಿ ಇದು. ಈ ಪ್ರವೃತ್ತಿಯಿಂದಾಗಿ ನಮ್ಮ ಆಲೋಚನೆಯ ವಿಧಾನವೇ ಬದಲಾಗುತ್ತಿದೆಯೆಂದು ತಜ್ಞರು ಹೇಳುತ್ತಾರೆ.

ಕೆಲ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಬಾಹ್ಯ ಸಾಧನಗಳ ನೆರವು ಪಡೆದುಕೊಳ್ಳುವುದು ಹೊಸ ವಿಷಯವೇನಲ್ಲ, ನಿಜ. ಹಿಂದೆ ಫೋನ್ ನಂಬರುಗಳನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆವು, ಈಗ ಅವನ್ನು ಮೊಬೈಲ್ ಫೋನಿನಲ್ಲಿ ಉಳಿಸಿಟ್ಟುಕೊಳ್ಳುತ್ತೇವೆ. ಆದರೆ ನಮ್ಮ ಮಿದುಳಿನ ಸಾಮರ್ಥ್ಯವನ್ನು ಬೆಂಬಲಿಸಲು ಮತ್ತು ವಿಸ್ತರಿಸಲು ಅಂತರಜಾಲವನ್ನು ಹೆಚ್ಚುಹೆಚ್ಚಾಗಿ ಬಳಸಿದಂತೆ ಅದರ ಮೇಲಿನ ನಮ್ಮ ಅವಲಂಬನೆ ಜಾಸ್ತಿಯಾಗುತ್ತಿದೆ. ಬೇಕಾದ ಮಾಹಿತಿಯೆಲ್ಲ ಅಂತರಜಾಲದಲ್ಲಿ ಸಿಗುತ್ತದೆ ಎನ್ನುವ ಧೋರಣೆಯಿಂದಾಗಿ ಹಿಂದೆ ನಾವೇ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದ ಸಂಗತಿಗಳ ಬಗೆಗೂ ನಾವೀಗ ತಲೆಕೆಡಿಸಿಕೊಳ್ಳುತ್ತಿಲ್ಲ. ಸ್ಮಾರ್ಟ್‌ಫೋನ್‌ ಮತ್ತಿತರ ಸಾಧನಗಳ ಮೂಲಕ ಹೆಚ್ಚಿನ ಮಾಹಿತಿ ಲಭ್ಯವಾಗುತ್ತಿದ್ದಂತೆ, ಅವುಗಳ ಮೇಲಿನ ನಮ್ಮ ಅವಲಂಬನೆಯೂ ಹೆಚ್ಚುತ್ತಿದೆ ಎಂದು ಅಧ್ಯಯನಗಳು ತಿಳಿಸಿವೆ.

ಸರ್ಚ್ ಎಂಜಿನ್ ಮೂಲಕ ಸಿಗುವ ಮಾಹಿತಿ ಅಷ್ಟೇ ಅಲ್ಲ, ನಮ್ಮ ಹಲವಾರು ವೈಯಕ್ತಿಕ ವಿಷಯಗಳಿಗೂ ನಾವು ಅಂತರಜಾಲವನ್ನು ಅವಲಂಬಿಸಿದ್ದೇವೆ - ಸಮಾಜಜಾಲಗಳು ನಮ್ಮ ಚಟುವಟಿಕೆಗಳ ದಾಖಲೆಗಳಾಗುತ್ತಿವೆ, ನಮ್ಮ ಅನಿಸಿಕೆ-ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವೇದಿಕೆಗಳಂತೆಯೂ ಕೆಲಸಮಾಡುತ್ತಿವೆ. ವೈಯಕ್ತಿಕ ಛಾಯಾಚಿತ್ರಗಳು, ವೀಡಿಯೊಗಳನ್ನೂ ನಾವು ಬೇರೆಬೇರೆ ತಾಣಗಳಲ್ಲಿ ಉಳಿಸಿಡುತ್ತಿದ್ದೇವೆ. ಅಂತಹುದೊಂದು ತಾಣ ತನ್ನ ಸೇವೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿಬಿಟ್ಟರೆ ಅದು ನಮ್ಮ ನೆನಪುಗಳ ಮೇಲೆ ಯಾವ ಪರಿಣಾಮ ಬೀರಬಹುದು ಎನ್ನುವ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕು. ಯಾಹೂ ಫೋಟೋಸ್, ಆರ್ಕುಟ್, ಗೂಗಲ್ ಬಜ಼್ ಮುಂತಾದವು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿರುವ ಉದಾಹರಣೆಗಳನ್ನು ನಮ್ಮಲ್ಲೇ ಅನೇಕರು ನೋಡಿದ್ದೇವಲ್ಲ!

ಎಲ್ಲ ನೆನಪುಗಳೂ ಸದಾಕಾಲ ಉಳಿದಿರಬೇಕಿಲ್ಲ, ನಿಜ. ಒಂದಷ್ಟು ನೆನಪುಗಳು ಮಸುಕಾಗುವುದು, ಅಳಿಸಿಹೋಗುವುದು ಕೂಡ ಒಳ್ಳೆಯದೇ. ಖ್ಯಾತ ಕಾದಂಬರಿಕಾರ ಪೌಲೋ ಕೊಯೆಲೋ ಹಿಂದೊಮ್ಮೆ ಹೇಳಿದಂತೆ, "ನೆನಪುಗಳು ಉಪ್ಪಿನ ಹಾಗೆ: ಉಪ್ಪು ಸರಿಯಾದ ಪ್ರಮಾಣದಲ್ಲಿದ್ದರೆ ಮಾತ್ರ ಆಹಾರ ರುಚಿಯಾಗಿರುತ್ತದೆ, ಉಪ್ಪು ತೀರಾ ಜಾಸ್ತಿಯಾದರೆ ಆಹಾರದ ರುಚಿಯೇ ಕೆಟ್ಟುಹೋಗುತ್ತದೆ." ಯಾವಾಗಲೂ ಹಳೆಯ ನೆನಪುಗಳಲ್ಲೇ ಕಳೆದುಹೋಗಿದ್ದರೆ ನಾವು ಹೊಸ ನೆನಪುಗಳನ್ನು ಸಂಪಾದಿಸುವುದಾದರೂ ಹೇಗೆ?

ಬದುಕಿನ ರುಚಿ ಕೆಡಿಸುವಷ್ಟು ನೆನಪುಗಳು ಇರಬಾರದೆನ್ನುವುದು ನಿಜವಾದರೂ ನೆನಪುಗಳೇ ಇಲ್ಲದಂತಾಗುವ ಪರಿಸ್ಥಿತಿಯೂ ಕಷ್ಟಕರ. ನಮಗೆ ವಯಸ್ಸಾದಂತೆ ದೇಹದ ಉಳಿದೆಲ್ಲ ಭಾಗಗಳ ಹಾಗೆ ಮಿದುಳಿನಲ್ಲಿಯೂ ಹಲವು ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳಿಂದಾಗಿ ನಮ್ಮ ನೆನಪಿನ ಶಕ್ತಿ ಕ್ಷೀಣಿಸುವುದು ಸಾಧ್ಯ. ಕನ್ನಡಕ ಎಲ್ಲಿಟ್ಟಿದ್ದೇನೆಂದು ಮರೆಯುವುದರಿಂದ ಪ್ರಾರಂಭಿಸಿ ಕೆಲ ಗಂಭೀರ ಸಮಸ್ಯೆಗಳವರೆಗೆ ಇದರ ಪರಿಣಾಮ ಹಲವು ಬಗೆಯದಾಗಿರುವುದು ಸಾಧ್ಯ. ಈ ಪ್ರಕ್ರಿಯೆಯನ್ನು ತಡೆಗಟ್ಟುವ ವಿಧಾನಗಳ ಅನ್ವೇಷಣೆಯಲ್ಲಿ ವಿಜ್ಞಾನಿಗಳು ತೊಡಗಿದ್ದಾರೆ. ವಯಸ್ಸಾದವರಲ್ಲಿ ಕುಂದಿದ ನೆನಪಿನ ಶಕ್ತಿಯನ್ನು ಜೀನ್‌ ಚಿಕಿತ್ಸೆಯ ಮೂಲಕ ಸರಿಪಡಿಸುವ ಪ್ರಯತ್ನದಲ್ಲಿ ಕೇಂಬ್ರಿಜ್‌ ವಿವಿಯ ವಿಜ್ಞಾನಿಗಳು ತೊಡಗಿಕೊಂಡಿದ್ದಾರೆ ಎನ್ನುವ ವಿಷಯ ಇತ್ತೀಚೆಗಷ್ಟೇ ಪ್ರಕಟವಾಗಿತ್ತು.

ಕಲಿಯುವ, ಹೊಂದಿಕೊಳ್ಳುವ ಹಾಗೂ ನೆನಪುಗಳನ್ನು ರೂಪಿಸುವ ನಮ್ಮ ಮಿದುಳಿನ ಸಾಮರ್ಥ್ಯ ನಮಗೆ ವಯಸ್ಸಾದಂತೆಲ್ಲ ಕಡಿಮೆಯಾಗುತ್ತ ಹೋಗುತ್ತದೆ. ಹೊಸ ಸಂಗತಿಗಳನ್ನು ಚಿಕ್ಕ ವಯಸ್ಸಿನಲ್ಲಿ ಕಲಿಯುವಷ್ಟು ವೇಗವಾಗಿ ವಯಸ್ಸಾದ ಮೇಲೆ ಕಲಿಯುವುದು ಕಷ್ಟವಾಗುತ್ತದೆ. ವಯಸ್ಸಾದಂತೆ ಮರೆವೂ ಶುರುವಾಗುತ್ತದೆ. ಇದಕ್ಕೆ ಕಾರಣವಾಗುವ ಪ್ರಕ್ರಿಯೆಯನ್ನು ನಿಯಂತ್ರಿಸುವ ಮೂಲಕ ವಯಸ್ಸಿಗೆ ಸಂಬಂಧಿಸಿದ ನೆನಪಿನ ಸಮಸ್ಯೆಗಳನ್ನು ಪರಿಹರಿಸಬಹುದೇ ಎಂದು ತಿಳಿಯಲು ಕೇಂಬ್ರಿಜ್‌ ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ನಡೆಸಿದ್ದರು. ಚಿಕಿತ್ಸೆ ಪಡೆದ ಹಾಗೂ ಪಡೆಯದ ಇಲಿಗಳು ನಿರ್ದಿಷ್ಟ ವಸ್ತುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ಗಮನಿಸಿದ ಅವರು, ಚಿಕಿತ್ಸೆ ಪಡೆದ ವಯಸ್ಸಾದ ಇಲಿಗಳಲ್ಲಿ ನೆನಪಿನ ಶಕ್ತಿ ಉತ್ತಮಗೊಂಡಿರುವುದನ್ನು ಕಂಡುಕೊಂಡಿದ್ದಾರೆ. ಅವರ ಈ ಪ್ರಯೋಗಗಳ ಫಲಿತಾಂಶ ಮುಂದೆ ಮನುಷ್ಯರಲ್ಲಿ ಅಲ್ಜೈಮರ್‌ ಕಾಯಿಲೆಯಂತಹ ಗಂಭೀರ ಸಮಸ್ಯೆಗಳ ಚಿಕಿತ್ಸೆಯಲ್ಲೂ ಬಳಕೆಯಾಗಬಹುದೆಂದು ನಿರೀಕ್ಷಿಸಲಾಗಿದೆ.

ನೆನಪಿನ ಶಕ್ತಿ ಕ್ಷೀಣಿಸುವುದಕ್ಕೆ ಮುನ್ನವೇ ಏನಾದರೂ ಮಾಡೋಣ ಎನ್ನುವವರಿಗೂ ವಿಜ್ಞಾನಿಗಳದೊಂದು ಸಲಹೆಯಿದೆ. ಶರೀರವು ಹೆಚ್ಚಿನ ಆಕ್ಸಿಜನ್ ಬಳಸುವಂತೆ ಮಾಡುವ (ಏರೋಬಿಕ್) ಚಟುವಟಿಕೆಗಳು - ಅದರಲ್ಲೂ ಮುಖ್ಯವಾಗಿ ಈಜು - ನಮ್ಮ ಮಿದುಳಿನ ಆರೋಗ್ಯಕ್ಕೆ ಪೂರಕ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಅಲ್ಲಿಗೆ ವ್ಯಾಯಾಮ ಮಾಡಲು ಇನ್ನೂ ಒಂದು ಕಾರಣ ಸಿಕ್ಕಂತಾಯಿತು - ವ್ಯಾಯಾಮ ಮಾಡುವಾಗ ಒಂದಷ್ಟು ಹೊಸ ನೆನಪುಗಳನ್ನು ನಮ್ಮ ಮಿದುಳಿಗೆ ಸೇರಿಸಿಕೊಳ್ಳಬಹುದು, ಅಲ್ಲಿರುವ ಹಳೆಯ ನೆನಪುಗಳನ್ನೂ ಜೋಪಾನ ಮಾಡಿಕೊಳ್ಳಬಹುದು!

ಆಗಸ್ಟ್ ೧೦, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಮೊದಲ ಬರಹ

'ಟೆಕ್ ನೋಟ' ಅಂಕಣದ ಮೊದಲ ಬರಹ
'ಟೆಕ್ ನೋಟ' ಅಂಕಣದ ಮೊದಲ ಬರಹವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com