'ಎನ್‌ಎಫ್‌ಟಿ' ಎನ್ನುವುದು ನಾನ್-ಫಂಜಿಬಲ್ ಟೋಕನ್ ಎಂಬ ಹೆಸರಿನ ಹ್ರಸ್ವರೂಪ.
'ಎನ್‌ಎಫ್‌ಟಿ' ಎನ್ನುವುದು ನಾನ್-ಫಂಜಿಬಲ್ ಟೋಕನ್ ಎಂಬ ಹೆಸರಿನ ಹ್ರಸ್ವರೂಪ.Image by A M Hasan Nasim from Pixabay

ಎನ್‌ಎಫ್‌ಟಿ ಎಂಬ ಹೊಸ ಸಂಚಲನ

ಇಂಟರ್‌ನೆಟ್ ಮೀಮ್‌ಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ನಾಯಿಯೊಂದರ ಚಿತ್ರಕ್ಕೆ ಈ ಪರಿಕಲ್ಪನೆ ಇಪ್ಪತ್ತೊಂಬತ್ತು ಕೋಟಿ ರೂಪಾಯಿಗಳ ಬೆಲೆ ತಂದುಕೊಟ್ಟಿದೆ!

ತಂತ್ರಜ್ಞಾನದ ಲೋಕದಲ್ಲಿ ಹೊಸ ಸುದ್ದಿಗಳಿಗೆ ಬರವೇ ಇಲ್ಲ. ಅಲ್ಲಿ ಪರಿಚಯವಾದ ಯಾವುದೋ ಒಂದು ಹೊಸ ವಿಷಯ ಕೊಂಚಮಟ್ಟಿಗೆ ಅರ್ಥವಾಯಿತು ಅಂದುಕೊಳ್ಳುವಷ್ಟರಲ್ಲಿ ಅದಕ್ಕೆ ಸಂಬಂಧಿಸಿದ ಇನ್ನೊಂದು ವಿಷಯ ಸುದ್ದಿಯಾಗುತ್ತದೆ. ಕ್ರಿಪ್ಟೋಕರೆನ್ಸಿ, ಬ್ಲಾಕ್‌ಚೈನ್ ತಂತ್ರಜ್ಞಾನಗಳ ನಂತರ ಈಗ 'ಎನ್‌ಎಫ್‌ಟಿ' ಎಂಬ ಹೊಸ ಹೆಸರು ನಮಗೆ ಕೇಳಸಿಗುತ್ತಿದೆಯಲ್ಲ, ಹಾಗೆ!

'ಎನ್‌ಎಫ್‌ಟಿ' ಎಂಬ ಈ ಹೊಸ ವಿಷಯ ವಿಪರೀತ ಎನ್ನಿಸುವ ಮಟ್ಟಕ್ಕೆ ಸುದ್ದಿಯಾಗಲು ಹಲವಾರು ಕಾರಣಗಳಿವೆ. ಚಿಕ್ಕ ಮಗುವೊಂದು ತನ್ನ ಅಣ್ಣನ ಬೆರಳನ್ನು ಕಚ್ಚಿದ್ದರ ಯೂಟ್ಯೂಬ್ ವೀಡಿಯೊಗೆ (Charlie Bit My Finger) ಈ ಪರಿಕಲ್ಪನೆಯಿಂದಾಗಿ ದೊರಕಿರುವ ಬೆಲೆ ಐದೂವರೆ ಕೋಟಿ ರೂಪಾಯಿಗಳು. ವೀಡಿಯೊ ಮಾತು ಹಾಗಿರಲಿ, ಇಂಟರ್‌ನೆಟ್ ಮೀಮ್‌ಗಳಲ್ಲಿ ಸಾಮಾನ್ಯವಾಗಿ ಕಾಣಸಿಗುವ ನಾಯಿಯೊಂದರ (Doge) ಛಾಯಾಚಿತ್ರಕ್ಕೆ ಇದೇ ಪರಿಕಲ್ಪನೆ ಇಪ್ಪತ್ತೊಂಬತ್ತು ಕೋಟಿ ರೂಪಾಯಿಗಳ ಬೆಲೆ ತಂದುಕೊಟ್ಟಿದೆ. ೨೪x೨೪ ಪಿಕ್ಸೆಲ್ ಗಾತ್ರದ, ಮಾಸ್ಕ್ ಹಾಕಿಕೊಂಡ ಅನ್ಯಗ್ರಹ ಜೀವಿಯ ಪುಟಾಣಿ ಡಿಜಿಟಲ್ ಚಿತ್ರ ಎಂಬತ್ತಾರು ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. 'Everydays - The First 5000 Days' ಎಂಬ ಡಿಜಿಟಲ್ ಕಲಾಕೃತಿಗೆ ಸುಮಾರು ಐದುನೂರು ಕೋಟಿ ರೂಪಾಯಿ ದೊರೆತಿದೆ!

ಹೆಸರಾಂತ ಚಿತ್ರಕಾರರ ಮೂಲ ಕಲಾಕೃತಿಗಳು ಕೋಟ್ಯಂತರ ರೂಪಾಯಿಗಳಿಗೆ ಮಾರಾಟವಾಗುವುದು ಹೊಸದೇನಲ್ಲ. ಆದರೆ ಸುಲಭಕ್ಕೆ ಕಾಪಿ ಮಾಡಬಹುದಾದ, ಮೂಲ ಯಾವುದು - ನಕಲು ಪ್ರತಿ ಯಾವುದು ಎಂದೇ ಗೊತ್ತಾಗದ ಯೂಟ್ಯೂಬ್ ವೀಡಿಯೊಗಳು, ಮೀಮ್‌ಗಳು, ಡಿಜಿಟಲ್ ಚಿತ್ರ, ಎಂಪಿ೩ ಕಡತಗಳೆಲ್ಲ ವಿಪರೀತ ದುಬಾರಿ ಬೆಲೆಗಳಲ್ಲಿ ಮಾರಾಟವಾಗುತ್ತಿರುವುದು ಜಗತ್ತಿನಾದ್ಯಂತ ಸಂಚಲನ ಮೂಡಿಸಿದೆ. ಉಳಿದವರ ಮಾತು ಹಾಗಿರಲಿ, ಟ್ವಿಟರ್ ಸಂಸ್ಥಾಪಕ ಜಾಕ್ ಡಾರ್ಸಿ ತನ್ನ ಮೊದಲ ಟ್ವೀಟನ್ನು ಇಪ್ಪತ್ತು ಕೋಟಿ ರೂಪಾಯಿಗೂ ಹೆಚ್ಚಿನ ಬೆಲೆಗೆ ಎನ್‌ಎಫ್‌ಟಿ ರೂಪದಲ್ಲಿ ಮಾರಾಟ ಮಾಡಿದ್ದಾನೆ. ವಿಶ್ವವ್ಯಾಪಿ ಜಾಲದ ಸೃಷ್ಟಿಕರ್ತರೆಂದೇ ಖ್ಯಾತರಾಗಿರುವ ಟಿಮ್ ಬರ್ನರ್ಸ್-ಲೀ, ಅದಕ್ಕಾಗಿ ತಾವು ೧೯೮೯ರ ಆಸುಪಾಸಿನಲ್ಲಿ ಬರೆದ ತಂತ್ರಾಂಶಗಳ ಸೋರ್ಸ್ ಕೋಡ್ ಅನ್ನು ಎನ್‌ಎಫ್‌ಟಿ ರೂಪಕ್ಕೆ ತಂದು ಸುಮಾರು ೪೦ ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಮನರಂಜನಾ ಕ್ಷೇತ್ರದ ಪ್ರಸಿದ್ಧ ಸಂಸ್ಥೆ ಮಾರ್ವೆಲ್ ಕೂಡ ತನ್ನ ಕಾಮಿಕ್ ಬುಕ್ ಮತ್ತಿತರ ಉತ್ಪನ್ನಗಳನ್ನು ಎನ್‌ಎಫ್‌ಟಿ ರೂಪಕ್ಕೆ ತರುವುದಾಗಿ ಘೋಷಿಸಿದೆ. ಇದನ್ನೆಲ್ಲ ಸಾಧ್ಯವಾಗಿಸುತ್ತಿರುವ ಎನ್‌ಎಫ್‌ಟಿ ಎಂಬ ಪರಿಕಲ್ಪನೆಯ ಬಗ್ಗೆ, ಹಾಗಾಗಿಯೇ, ವಿಪರೀತ ಕುತೂಹಲ ಮೂಡಿದೆ.

'ಎನ್‌ಎಫ್‌ಟಿ' ಎನ್ನುವುದು ನಾನ್-ಫಂಜಿಬಲ್ ಟೋಕನ್ ಎಂಬ ಹೆಸರಿನ ಹ್ರಸ್ವರೂಪ.

ಯಾವುದೇ ವಸ್ತುವಿಗೆ ತತ್ಸಮಾನವಾದ ಇನ್ನೊಂದು ಅಥವಾ ಹೆಚ್ಚಿನ ಸಂಖ್ಯೆಯ ವಸ್ತುಗಳು ಅಸ್ತಿತ್ವದಲ್ಲಿದ್ದರೆ, ಅದನ್ನು ಫಂಜಿಬಲ್ ಎಂದು ಕರೆಯುತ್ತಾರೆ. ಉದಾಹರಣೆಗೆ, ನೂರು ರೂಪಾಯಿಯ ಒಂದು ನೋಟು. ಅದನ್ನು ನೂರರದೇ ಇನ್ನೊಂದು ನೋಟು, ಐವತ್ತರ ಎರಡು ನೋಟು ಅಥವಾ ಹತ್ತರ ಹತ್ತು ನೋಟುಗಳ ಜೊತೆ - ಒಟ್ಟು ಮೌಲ್ಯದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ - ವಿನಿಮಯ ಮಾಡಿಕೊಳ್ಳಬಹುದು. ಆದರೆ ಜಗನ್ಮೋಹನ ಅರಮನೆಯಲ್ಲಿರುವ ದೀಪಧಾರಿಣಿಯ ಚಿತ್ರವನ್ನೋ ಪ್ಯಾರಿಸ್‌ನಲ್ಲಿರುವ ಮೋನಾಲಿಸಾ ಚಿತ್ರವನ್ನೋ ಅದರ ನಕಲಿನ ಜೊತೆಗೆ ಹೀಗೆ ವಿನಿಮಯ ಮಾಡಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಈ ಜಗತ್ತಿನಲ್ಲಿ ಅವುಗಳ ಮೂಲರೂಪ ಇರುವುದು ಒಂದೇ ಒಂದು. ಎಷ್ಟು ಲಕ್ಷ ಪ್ರತಿಗಳಿದ್ದರೂ ಅವೆಲ್ಲ ಅಂತಿಮವಾಗಿ ನಕಲುಗಳಷ್ಟೇ. ಹೀಗೆ, ಯಾವುದೋ ಒಂದು ವಸ್ತುವಿಗೆ ತತ್ಸಮಾನವಾದ ಬೇರೆ ಯಾವುದೂ ಅಸ್ತಿತ್ವದಲ್ಲೇ ಇಲ್ಲದಿದ್ದರೆ, ಅದು ನಾನ್-ಫಂಜಿಬಲ್ ಎಂದು ಕರೆಸಿಕೊಳ್ಳುತ್ತದೆ. ಸಾಮಾನ್ಯವಾಗಿ ಭೌತಿಕ ಜಗತ್ತಿನಲ್ಲಷ್ಟೇ ಕಂಡುಬರುವ ಇಂತಹ ಅದ್ವಿತೀಯ ಸಂಗತಿಗಳು ಡಿಜಿಟಲ್ ಜಗದಲ್ಲೂ ಇರಬಹುದು ಎಂದು ತೋರಿಸಿಕೊಡಲು ಹೊರಟಿರುವುದೇ ನಾನ್-ಫಂಜಿಬಲ್ ಟೋಕನ್.

ನಾನ್-ಫಂಜಿಬಲ್ ಟೋಕನ್, ಅಂದರೆ ಎನ್‌ಎಫ್‌ಟಿಗಳನ್ನು ಡಿಜಿಟಲ್ ಜಗತ್ತಿನಲ್ಲಿ ಮಾತ್ರವೇ ಇರುವ ಅದ್ವಿತೀಯ ಆಸ್ತಿಗಳು ಎಂದು ಕರೆಯಬಹುದು. ದೀಪಧಾರಿಣಿ, ಮೋನಾಲಿಸಾ ಮುಂತಾದ ಚಿತ್ರಗಳೆಲ್ಲ ಈ ಜಗತ್ತಿನಲ್ಲಿ ಹೇಗೆ ಒಂದೊಂದು ಮಾತ್ರವೇ ಇವೆಯೋ ಹಾಗೆ ಈ ಎನ್‌ಎಫ್‌ಟಿಗಳೂ ಒಂದೊಂದು ಮಾತ್ರವೇ ಇರುತ್ತವೆ. ಆದರೆ ಇವು ಆ ಕಲಾಕೃತಿಗಳಂತೆ ಭೌತಿಕ ವಸ್ತುಗಳಲ್ಲ, ಹಾಗೂ ಡಿಜಿಟಲ್ ರೂಪದಲ್ಲಷ್ಟೇ ಇರುವ ಇವಕ್ಕೆ ವಾಸ್ತವದಲ್ಲಿ ಯಾವ ಅಸ್ತಿತ್ವವೂ ಇಲ್ಲ. ಹಾಗಾದರೆ ಇವು ಭೌತಿಕ ವಸ್ತುಗಳ ಡಿಜಿಟಲ್ ರೂಪವೇ? ಅದೂ ಅಲ್ಲ. ನಿರ್ದಿಷ್ಟವಾದ ಒಂದು ಸಂಗತಿ ನಿರ್ದಿಷ್ಟವಾದ ಒಬ್ಬ ವ್ಯಕ್ತಿಯ ಒಡೆತನದಲ್ಲಿದೆ ಎಂದು ಪ್ರಮಾಣೀಕರಿಸುವುದು ಮಾತ್ರ ಇವುಗಳ ಕೆಲಸ.

ಹಾಗೆ ನೋಡಿದರೆ ಎನ್‌ಎಫ್‌ಟಿಯನ್ನು ಆಸ್ತಿಯೊಂದರ ಮಾಲೀಕತ್ವದ ಪ್ರಮಾಣಪತ್ರ ಎಂದು ಕರೆಯಬಹುದು. ಈ ಪ್ರಮಾಣೀಕರಣಕ್ಕಾಗಿ ಎನ್‌ಎಫ್‌ಟಿಗಳು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸುತ್ತವೆ. ಕ್ರಿಪ್ಟೋಕರೆನ್ಸಿಗಳು ಬಳಸುವುದೂ ಅದನ್ನೇ. ಅಂದಹಾಗೆ, ಎನ್‌ಎಫ್‌ಟಿ ಕೊಳ್ಳಲು ಕ್ರಿಪ್ಟೋಕರೆನ್ಸಿ ಮೂಲಕ ಮಾತ್ರವೇ ಪಾವತಿ ಮಾಡಬಹುದು (ಕ್ರಿಪ್ಟೋಕರೆನ್ಸಿ ವ್ಯವಹಾರದಲ್ಲಿ ತೊಡಗಿರುವ ಹಲವು ವೇದಿಕೆಗಳಲ್ಲಿ ಎನ್‌ಎಫ್‌ಟಿಗಳ ವಹಿವಾಟನ್ನೂ ನಡೆಸಬಹುದು). ಹಾಗೆ ಪಾವತಿಸಿ ಯಾರು ಯಾವ ವಸ್ತುವನ್ನು ಕೊಂಡುಕೊಂಡಿದ್ದಾರೆ ಎನ್ನುವ ದಾಖಲೆಯನ್ನು ಇವು ಬ್ಲಾಕ್‌ಚೈನ್‌ನಲ್ಲಿ ಉಳಿಸಿಡುತ್ತವೆ. ಪ್ರಪಂಚದಾದ್ಯಂತ ಇರುವ ಸಾವಿರಾರು ಕಂಪ್ಯೂಟರುಗಳು ಆ ಮಾಹಿತಿಯನ್ನು ನಿರ್ವಹಿಸುವುದರಿಂದ, ಒಡೆತನದ ಯಾವುದೇ ದಾಖಲೆಯನ್ನು ಯಾರೂ ನಕಲು ಮಾಡಲು ಸಾಧ್ಯವಾಗುವುದಿಲ್ಲ.

ಹೆಸರಾಂತ ಚಿತ್ರಕಾರರು ಬರೆದ ಕಲಾಕೃತಿಗಳನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವಂತೆ ಎನ್‌ಎಫ್‌ಟಿಗಳನ್ನೂ ಮಾರಾಟ ಮಾಡಬಹುದು. ಮೇಲಿನ ಉದಾಹರಣೆಗಳಲ್ಲಿ ನೋಡಿದ ಯೂಟ್ಯೂಬ್ ವೀಡಿಯೊ, ಡಿಜಿಟಲ್ ಚಿತ್ರಗಳೆಲ್ಲದರ ಉದಾಹರಣೆಯಲ್ಲಿ ಆಗಿರುವುದು ಅದೇ. ಆದರೆ, ಭೌತಿಕ ಕಲಾಕೃತಿಗಳ ಮಾರಾಟವಾದ ನಂತರ ಅವು ತನ್ನ ಹೊಸ ಮಾಲೀಕನ ನಿಯಂತ್ರಣಕ್ಕೆ ಹೋಗುವಂತೆ ಇಲ್ಲಿಯೂ ಆಗಬೇಕು ಎಂದೇನೂ ಇಲ್ಲ. ಅಣ್ಣನ ಬೆರಳು ಕಚ್ಚಿದ ಚಾರ್ಲಿಯ ವೀಡಿಯೊ ಇನ್ನೂ ಯೂಟ್ಯೂಬ್‌ನಲ್ಲೇ ಇದೆ, ಎಂಬತ್ತಾರು ಕೋಟಿ ರೂಪಾಯಿಗಳಿಗೆ ಮಾರಾಟವಾದ ಕ್ರಿಪ್ಟೋಪಂಕ್‌ ಎನ್‌ಎಫ್‌ಟಿಯ ಚಿತ್ರ ಒಂದೇ ಗೂಗಲ್ ಸರ್ಚ್‌ನಲ್ಲಿ ನಿಮಗೆ ಸಿಕ್ಕಿಬಿಡುತ್ತದೆ. ಬೇಕಾದರೆ ಐದುನೂರು ಕೋಟಿ ರೂಪಾಯಿಯ ಅತಿದುಬಾರಿ ಡಿಜಿಟಲ್ ಚಿತ್ರವನ್ನೂ ನೀವು ಅದರ ಜೊತೆಯಲ್ಲೇ ಹುಡುಕಿಕೊಳ್ಳಬಹುದು, ನಿಮ್ಮ ಕಂಪ್ಯೂಟರಿನ ವಾಲ್‌ಪೇಪರ್ ಕೂಡ ಮಾಡಿಕೊಳ್ಳಬಹುದು!

ಒಂದು ಅರ್ಥದಲ್ಲಿ, ಎನ್‌ಎಫ್‌ಟಿ ಎನ್ನುವುದು "ಇಂತಹ ವಸ್ತುವನ್ನು ನೀವು ಕೊಂಡಿದ್ದೀರಿ" ಎಂದು ಹೇಳುವ ಒಂದು ಡಿಜಿಟಲ್ ರಸೀತಿ ಮಾತ್ರ. ಹೀಗಿರುವಾಗ ಎನ್‌ಎಫ್‌ಟಿ ಕೊಳ್ಳುವವರು ಅದಕ್ಕಾಗಿ ಭಾರೀ ಮೊತ್ತದ ಹಣವನ್ನು ಏಕೆ ಪಾವತಿಸುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸುವುದು ಸ್ವಲ್ಪ ಕಷ್ಟ. ಬೇರೆ ಯಾರ ಬಳಿಯೂ ಇಲ್ಲದ ಏನೋ ಒಂದು ನನ್ನಲ್ಲಿದೆ ಎಂದು ಹೇಳಿಕೊಳ್ಳುವ ಉಮೇದು ಇದಕ್ಕೆ ಪ್ರಮುಖ ಕಾರಣ ಇರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಯಾವುದೋ ಕಾರ್ಟೂನಿನ ಟ್ರೇಡಿಂಗ್ ಕಾರ್ಡ್‌‌ನಂತಹ ವಿಲಕ್ಷಣ ವಸ್ತುಗಳಿಗೆ ಅಪಾರ ಪ್ರಮಾಣದ ಹಣ ವೆಚ್ಚಮಾಡುವ ಸಂಗ್ರಾಹಕರಂತಹವರೇ ಎನ್‌ಎಫ್‌ಟಿಗಳನ್ನೂ ಕೊಳ್ಳುತ್ತಿರಬಹುದು ಎನ್ನುವುದು ಅವರ ಅನಿಸಿಕೆ.

ಹೊಸದೊಂದು ಖಯಾಲಿಯನ್ನು ಹುಟ್ಟುಹಾಕಿ ಅದರಿಂದ ಹಣ ಸಂಪಾದನೆ ಮಾಡುವ ಉದ್ದೇಶವಿರುವವರೂ ಇದರ ಹಿಂದೆ ಇರುವ ಸಾಧ್ಯತೆ ಇಲ್ಲದಿಲ್ಲ. ವಹಿವಾಟುಗಳಲ್ಲಿ ಮಧ್ಯವರ್ತಿಗಳಾಗಿ ಕೆಲಸಮಾಡುವವರು ಕೂಡ ಈ ಹೊಸ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ. ಎನ್‌ಎಫ್‌ಟಿ ಖರೀದಿ ಅಥವಾ ಮಾರಾಟದ ಮಾಹಿತಿಯನ್ನು ಸಂಸ್ಕರಿಸಲು ಮೈನರ್‌ಗಳಿಗೆ ಪಾವತಿಸಬೇಕಾದ ನಿರ್ವಹಣಾ ಶುಲ್ಕ (ಇದಕ್ಕೆ 'ಗ್ಯಾಸ್ ಫೀಸ್' ಎಂದು ಹೆಸರು) ಬಹಳ ದುಬಾರಿಯೆನಿಸುವ ಮಟ್ಟ ತಲುಪಿರುವ ಸಂಗತಿ ಈಗಾಗಲೇ ಹಲವು ಪತ್ರಿಕೆಗಳಲ್ಲಿ ವರದಿಯಾಗಿದೆ.

ಎನ್‌ಎಫ್‌ಟಿಗಳ ಭವಿಷ್ಯ ಏನು ಎನ್ನುವುದರ ಬಗೆಗೂ ಹೆಚ್ಚಿನ ಸ್ಪಷ್ಟತೆ ಇಲ್ಲ. ಮುಂದಿನ ಕೆಲ ವರ್ಷಗಳಲ್ಲಿ ಬಹುತೇಕ ಎನ್‌ಎಫ್‌ಟಿಗಳಿಗೆ ಯಾವ ಮೌಲ್ಯವೂ ಇರುವುದಿಲ್ಲವೆಂದು ಪ್ರಮುಖ ಕ್ರಿಪ್ಟೋ ವಿನಿಮಯ ಕೇಂದ್ರ ಕಾಯಿನ್‌ಬೇಸ್ ಸಂಸ್ಥಾಪಕರಲ್ಲೊಬ್ಬನಾದ ಫ್ರೆಡ್ ಎರ್ಸಮ್ ಹೇಳಿದ್ದು ಇತ್ತೀಚೆಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಕಳೆದ ಕೆಲ ತಿಂಗಳುಗಳಲ್ಲಿ ಎನ್‌ಎಫ್‌ಟಿ ವಹಿವಾಟುಗಳ ಪ್ರಮಾಣ ಏರಿದ ರಭಸದಲ್ಲೇ ಇಳಿಕೆ ಕಂಡಿರುವುದು ಕೂಡ ಗೊಂದಲಕ್ಕೆ ಕಾರಣವಾಗಿದೆ.

ಅದೆಲ್ಲ ಏನೇ ಇದ್ದರೂ ಎನ್‌ಎಫ್‌ಟಿಗಳು ಕಲಾವಿದರಿಗೆ ಆದಾಯದ ಹೊಸ ಮಾರ್ಗವಾಗಲಿವೆ ಎಂದು ಕೆಲವರು ವಾದಿಸುತ್ತಿದ್ದಾರೆ. "ಭೌತಿಕ ಕಲಾಕೃತಿಗಳಿಂದ ಕಲಾವಿದರಿಗೆ ಆದಾಯ ದೊರಕುವುದು ಕೇವಲ ಒಮ್ಮೆ ಮಾತ್ರ; ಆದರೆ ಅವು ಎನ್‌ಎಫ್‌ಟಿ ರೂಪದಲ್ಲಿದ್ದರೆ ಕಲಾಕೃತಿಗಳ ಮರುಮಾರಾಟದ ಸಂದರ್ಭದಲ್ಲೂ ಮೂಲ ಕಲಾವಿದರಿಗೆ ಆದಾಯದ ಒಂದು ಪಾಲು ದೊರಕುವಂತೆ ಮಾಡಬಹುದು. ಹಾಗಾಗಿ ಇದು ಕಲಾವಿದರಿಗೆ ನಿಜಕ್ಕೂ ಉಪಯುಕ್ತ" ಎನ್ನುವುದು ಅವರ ಅಭಿಪ್ರಾಯ.

ಒಟ್ಟಿನಲ್ಲಿ, ತಂತ್ರಜ್ಞಾನದ ಲೋಕದಲ್ಲಿ ಆಗಿಂದಾಗ್ಗೆ ಆಗುವ ಹಾಗೆ ಎನ್‌ಎಫ್‌ಟಿ ಎಂಬ ಈ ಪರಿಕಲ್ಪನೆ ಹೊಸದೊಂದು ಸಂಚಲನವನ್ನು ಸೃಷ್ಟಿಸಿರುವುದಂತೂ ನಿಜ. ಈ ಸಂಚಲನದ ಪರಿಣಾಮ ಏನಿರಬಹುದು ಎನ್ನುವುದು ಮಾತ್ರ, ಇನ್ನೂ, ಅಸ್ಪಷ್ಟವಾಗಿಯೇ ಇದೆ.

ಜೂನ್ ೩೦, ೨೦೨೧ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com