ರಾಷ್ಟ್ರೀಯ ತಂತ್ರಜ್ಞಾನ ದಿನ, ಈ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಬಗ್ಗೆ ತಿಳಿದುಕೊಂಡು ಹೆಮ್ಮೆಪಡುವ ಸದವಕಾಶ
ರಾಷ್ಟ್ರೀಯ ತಂತ್ರಜ್ಞಾನ ದಿನ, ಈ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಬಗ್ಗೆ ತಿಳಿದುಕೊಂಡು ಹೆಮ್ಮೆಪಡುವ ಸದವಕಾಶImage by Harikrishnan Mangayil from Pixabay

ರಾಷ್ಟ್ರೀಯ ತಂತ್ರಜ್ಞಾನ ದಿನ ವಿಶೇಷ: ತಂತ್ರಜ್ಞಾನ ಜಗದಲ್ಲಿ ಭಾರತದ ಹೆಜ್ಜೆಗಳು

ಚರಿತ್ರಾರ್ಹ ಘಟನೆಯೊಂದು ನಮ್ಮ ಜೀವಿತಾವಧಿಯಲ್ಲೇ ನಡೆಯಿತೆಂದು ಹೆಮ್ಮೆಪಟ್ಟುಕೊಳ್ಳುವ ಜೊತೆಗೆ ಆ ದಿನವನ್ನು ರಾಷ್ಟ್ರೀಯ ದಿನವನ್ನಾಗಿಯೂ ಆಚರಿಸುವ ಅವಕಾಶ ದೊರಕುವುದು ಅಪರೂಪ ಎಂದೇ ಹೇಳಬೇಕು

ನೂರೆಂಟು ದಿನಾಚರಣೆಗಳ ನಡುವೆ ಬಿಜ಼ಿಯಾಗಿರುವ ನಮ್ಮ ಕ್ಯಾಲೆಂಡರುಗಳಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಮೀಸಲಾದ ದಿನಗಳ ಸಂಖ್ಯೆ ಕಡಿಮೆಯೇ ಎಂದು ಹೇಳಬಹುದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಸಂಸ್ಥೆ ಇಂತಹ ಕೆಲ ದಿನಗಳನ್ನು ಗುರುತಿಸಿದೆ. ನಮ್ಮ ದೇಶದ ಮಟ್ಟಿಗೆ ನೋಡುವುದಾದರೆ ವಿಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಸಂಭ್ರಮಿಸಲು ನಮಗೆ ಸಿಗುವ ಎರಡು ಪ್ರಮುಖ ಅವಕಾಶಗಳು - ಫೆಬ್ರುವರಿ ೨೮ರ ರಾಷ್ಟ್ರೀಯ ವಿಜ್ಞಾನ ದಿನ, ಹಾಗೂ ಮೇ ೧೧ರ ರಾಷ್ಟ್ರೀಯ ತಂತ್ರಜ್ಞಾನ ದಿನ.

ಸರ್ ಸಿ. ವಿ. ರಾಮನರು 'ರಾಮನ್ ಪರಿಣಾಮ'ವೆಂದೇ ಪ್ರಸಿದ್ಧವಾದ ತಮ್ಮ ಸಂಶೋಧನೆಯ ವಿವರಗಳನ್ನು ೧೯೨೮ರಲ್ಲಿ ಜಗತ್ತಿಗೆ ತಿಳಿಸಿದ ದಿನದ ನೆನಪಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ತಂತ್ರಜ್ಞಾನ ದಿನವಾದ ಇಂದು ನೆನಪಿಸಿಕೊಳ್ಳಲಾಗುತ್ತಿರುವ ಸಾಧನೆ ಕೊಂಚ ಈಚಿನದು - ಡಾ. ಎಪಿಜೆ ಅಬ್ದುಲ್ ಕಲಾಮ್‌ರವರ ನೇತೃತ್ವದಲ್ಲಿ 'ಆಪರೇಶನ್ ಶಕ್ತಿ' ಹೆಸರಿನ ಅಣ್ವಸ್ತ್ರ ಪರೀಕ್ಷೆ ರಾಜಾಸ್ಥಾನದ ಪೋಖ್ರನ್‌ನಲ್ಲಿ ನಡೆದದ್ದು ೧೯೯೮ರ ಇದೇ ದಿನದಂದು. ಅಣ್ವಸ್ತ್ರ ಸನ್ನದ್ಧ ರಾಷ್ಟ್ರಗಳ ಸಾಲಿಗೆ ನಾವೂ ಸೇರಿದೆವೆಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಘೋಷಿಸಿದ್ದುಈ ಪರೀಕ್ಷೆಯ ಯಶಸ್ಸಿನ ನಂತರವೇ.

ಚರಿತ್ರಾರ್ಹ ಘಟನೆಯೊಂದು ನಮ್ಮ ಜೀವಿತಾವಧಿಯಲ್ಲೇ ನಡೆಯಿತೆಂದು ಹೆಮ್ಮೆಪಟ್ಟುಕೊಳ್ಳುವ ಜೊತೆಗೆ ಆ ದಿನವನ್ನು ರಾಷ್ಟ್ರೀಯ ದಿನವನ್ನಾಗಿಯೂ ಆಚರಿಸುವ ಅವಕಾಶ ದೊರಕುವುದು ಅಪರೂಪ ಎಂದೇ ಹೇಳಬೇಕು. ಇಂತಹ ಅಪರೂಪದ ಅವಕಾಶ ಒದಗಿಸಿರುವ ರಾಷ್ಟ್ರೀಯ ತಂತ್ರಜ್ಞಾನ ದಿನ, ಈ ಕ್ಷೇತ್ರದಲ್ಲಿ ಭಾರತದ ಕೆಲವು ಸಾಧನೆಗಳ ಬಗ್ಗೆ ತಿಳಿದುಕೊಂಡು ಹೆಮ್ಮೆಪಡುವ, ಇನ್ನಷ್ಟು ಸಾಧನೆಗಳು ನಡೆಯಲೆಂದು ಹಾರೈಸುವ ಸದವಕಾಶವೂ ಹೌದು.

ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಗಳ ಬಗ್ಗೆ ಮಾತನಾಡುವಾಗ ನಮಗೆ ನೆನಪಾಗುವ ಮೊದಲ ಹೆಸರೇ ಇಸ್ರೋ. ೧೯೬೨ರಲ್ಲಿ 'ಇಂಡಿಯನ್ ನ್ಯಾಶನಲ್ ಕಮಿಟಿ ಫಾರ್ ಸ್ಪೇಸ್ ರೀಸರ್ಚ್' (INCOSPAR) ಅಡಿಯಲ್ಲಿ ಪ್ರಾರಂಭವಾದ ಬಾಹ್ಯಾಕಾಶ ಸಂಶೋಧನಾ ಚಟುವಟಿಕೆಗಳು, ೧೯೬೯ರಲ್ಲಿ ಸ್ಥಾಪನೆಯಾದ 'ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಸೇಶನ್' (ISRO) ನಾಯಕತ್ವದಲ್ಲಿ ಭಾರತವನ್ನು ಈ ಕ್ಷೇತ್ರದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಸೇರಿಸಿದೆ. ಸಂವಹನ ಹಾಗೂ ದೂರಸಂವೇದಿ ಉಪಗ್ರಹಗಳ ಅತ್ಯಂತ ದೊಡ್ಡ ಜಾಲಗಳಲ್ಲಿ ಒಂದನ್ನು ಇಸ್ರೋ ಇದೀಗ ನಿರ್ವಹಿಸುತ್ತಿದೆ, ಹಾಗೂ ಜಗತ್ತಿನ ಆರು ಅತಿದೊಡ್ಡ ಬಾಹ್ಯಾಕಾಶ ಸಂಸ್ಥೆಗಳಲ್ಲೊಂದಾಗಿ ಗುರುತಿಸಿಕೊಂಡಿದೆ.

ಭಾರತ ಮತ್ತು ತಂತ್ರಜ್ಞಾನ ಎಂದಾಗ ನೆನಪಾಗುವ ಇನ್ನೊಂದು ಕ್ಷೇತ್ರ ಮಾಹಿತಿ ತಂತ್ರಜ್ಞಾನ. ಮಾಹಿತಿ ತಂತ್ರಜ್ಞಾನ ಸೇವೆಗಳಲ್ಲಿ (ಸರ್ವಿಸಸ್) ನಮ್ಮ ದೇಶ ಜಗತ್ತಿನೆಲ್ಲೆಡೆ ಹೆಸರುಮಾಡಿರುವುದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ಅದಕ್ಕೂ ಮುನ್ನ, ೧೯೫೦-೬೦ರ ದಶಕಗಳಲ್ಲೇ ಕಂಪ್ಯೂಟರ್ ನಿರ್ಮಾಣದ ಕೆಲಸ ನಮ್ಮ ದೇಶದಲ್ಲಿ ನಡೆದಿತ್ತು. ಭಾರತೀಯ ಅಣ್ವಸ್ತ್ರ ಕಾರ್ಯಕ್ರಮದ ಪಿತಾಮಹ ಹೋಮಿ ಜಹಾಂಗೀರ್ ಭಾಭಾ ಹಾಗೂ ಭಾರತೀಯ ಸಂಖ್ಯಾವಿಜ್ಞಾನದ ಪಿತಾಮಹ ಪ್ರೊ. ಪ್ರಶಾಂತ ಚಂದ್ರ ಮಹಲನೋಬಿಸ್‌ರಂತಹ ಮಹನೀಯರೇ ಈ ಯೋಜನೆಯನ್ನೂ ಮುನ್ನಡೆಸಿದ್ದು ವಿಶೇಷ. ಇದರ ಫಲವಾಗಿ ಮುಂಬಯಿಯ 'ಟಾಟಾ ಇನ್ಸ್‌ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್'ನಲ್ಲಿ (TIFR) ಭಾರತದ ಮೊತ್ತಮೊದಲ ಸ್ವದೇಶಿ ನಿರ್ಮಿತ ಡಿಜಿಟಲ್ ಕಂಪ್ಯೂಟರ್ 'ಟಿಫ್ರಾಕ್' ತಯಾರಾಗಿ ಈಗಾಗಲೇ ಅರವತ್ತು ವರ್ಷಗಳು ಪೂರ್ಣಗೊಂಡಿವೆ.

ಮೊತ್ತಮೊದಲ ಸ್ವದೇಶಿ ನಿರ್ಮಿತ ಡಿಜಿಟಲ್ ಕಂಪ್ಯೂಟರ್ 'ಟಿಫ್ರಾಕ್'
ಮೊತ್ತಮೊದಲ ಸ್ವದೇಶಿ ನಿರ್ಮಿತ ಡಿಜಿಟಲ್ ಕಂಪ್ಯೂಟರ್ 'ಟಿಫ್ರಾಕ್'TIFR Archives / Tata Institute of Fundamental Research

'ಟಿಫ್ರಾಕ್' ಎಂಬ ಹೆಸರು 'ಟಿಐಎಫ್‌ಆರ್ ಆಟೊಮ್ಯಾಟಿಕ್ ಕ್ಯಾಲ್ಕ್ಯುಲೇಟರ್' ಎನ್ನುವುದರ ಹ್ರಸ್ವರೂಪ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಕಂಪ್ಯೂಟರನ್ನು ನಿರ್ಮಿಸಿದ ವಿಜ್ಞಾನಿಗಳ ತಂಡದಲ್ಲಿ ಕಂಪ್ಯೂಟರ್ ನಿರ್ಮಾಣದ ಅನುಭವವಿದ್ದವರು ಹಾಗಿರಲಿ, ಈ ಹಿಂದೆ ಕಂಪ್ಯೂಟರನ್ನು ಬಳಸಿದ್ದವರೂ ಇರಲಿಲ್ಲ. ಆದರೂ ಅವರು ನಿರ್ಮಿಸಿದ ಈ ಕಂಪ್ಯೂಟರು, ತನ್ನ ಸಾಮರ್ಥ್ಯದ ದೃಷ್ಟಿಯಿಂದ, ಆ ಕಾಲದ ಬೇರಾವ ಕಂಪ್ಯೂಟರಿಗೂ ಕಡಿಮೆಯಿರಲಿಲ್ಲ. ಭಾರತದಲ್ಲಿ ಕಂಪ್ಯೂಟರ್ ವಿಜ್ಞಾನ ಸಂಶೋಧನೆಯ ಪಿತಾಮಹ ಡಾ. ಆರ್. ನರಸಿಂಹನ್‌ರವರ ಮಾರ್ಗದರ್ಶನದಲ್ಲಿ ಕೆಲಸಮಾಡಿದ ಈ ತಂಡ, ನಿಜಕ್ಕೂ, ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ ಭಾರತವು ಪ್ರಮುಖ ಸ್ಥಾನ ಪಡೆದುಕೊಳ್ಳಲು ಆ ಕಾಲದಲ್ಲೇ ವೇದಿಕೆ ರೂಪಿಸಿಕೊಟ್ಟಿತ್ತು!

ಚುನಾವಣೆಗಳಿಂದ ಪ್ರಾರಂಭಿಸಿ ಕೋವಿಡ್-೧೯ ಸಂದರ್ಭದಲ್ಲಿ ಸಂಪರ್ಕತಡೆ (ಕ್ವಾರಂಟೈನ್) ಅಗತ್ಯವಾದವರನ್ನು ಗುರುತಿಸುವವರೆಗೆ ಹಲವು ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಅಳಿಸಲಾಗದ ಶಾಯಿ (ಇಂಡೆಲಿಬಲ್ ಇಂಕ್) ಕೂಡ ಭಾರತೀಯ ತಂತ್ರಜ್ಞಾನ ಕ್ಷೇತ್ರದ್ದೇ ಕೊಡುಗೆ. ಖ್ಯಾತ ವಿಜ್ಞಾನಿ ಡಾ. ಶಾಂತಿಸ್ವರೂಪ್ ಭಟ್ನಾಗರ್‌ರವರ ನೇತೃತ್ವದಲ್ಲಿ ಇದನ್ನು ತಯಾರಿಸಿದವರು ಡಾ. ಸಲೀಮ್ ಉಜ಼್ಜ಼ಮನ್ ಸಿದ್ದಿಕಿ. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಸ್ಥಾಪಿಸಿದ ಅರಗು ಕಾರ್ಖಾನೆಯಲ್ಲಿ (ಇಂದಿನ ಮೈಸೂರು ಪೈಂಟ್ಸ್) ತಯಾರಾಗುವ ಈ ಶಾಯಿಯನ್ನು ನಮ್ಮ ಮೈಸೂರಿನಿಂದ ವಿಶ್ವದ ಹಲವಾರು ರಾಷ್ಟ್ರಗಳಿಗೂ ರಫ್ತುಮಾಡಲಾಗುತ್ತದೆ.

ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಭಾರತದ ಔಷಧ ತಯಾರಿಕೆಯ ಉದ್ದಿಮೆ ಜಗತ್ತಿನ ಗಮನವನ್ನೇ ತನ್ನತ್ತ ಸೆಳೆದಿತ್ತು. ಆಚಾರ್ಯ ಪ್ರಫುಲ್ಲಚಂದ್ರ ರೇ‌ ಅವರ ನೇತೃತ್ವದಲ್ಲಿ ಪ್ರಾರಂಭವಾದ ಈ ಉದ್ದಿಮೆ, ಔಷಧ ತಯಾರಿಕೆ ಹಾಗೂ ರಫ್ತಿನ ಪ್ರಮಾಣದಲ್ಲಿ ಭಾರತವನ್ನು ಜಗತ್ತಿನ ಮುಂಚೂಣಿ ರಾಷ್ಟ್ರಗಳ ಸಾಲಿಗೆ ಕೊಂಡೊಯ್ದಿದೆ. ದೇಶದೆಲ್ಲೆಡೆ ಜನರಿಕ್ ಔಷಧಗಳನ್ನು ಲಭ್ಯವಾಗಿಸುವ ಮೂಲಕ ಆರೋಗ್ಯರಕ್ಷಣೆಯ ವೆಚ್ಚವನ್ನು ಗಮನಾರ್ಹವಾಗಿ ತಗ್ಗಿಸಿರುವುದಷ್ಟೇ ಅಲ್ಲದೆ, ಭಾರತವು ಈ ಔಷಧಗಳನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೂ ರಫ್ತುಮಾಡುತ್ತಿದೆ.

ಕೋವಿಡ್-೧೯ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ನಡೆದಿರುವ ಇನ್ನೂ ಹಲವು ಚಟುವಟಿಕೆಗಳ ಹಿನ್ನೆಲೆಯಲ್ಲೂ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ರೋಗಪತ್ತೆ ಪರೀಕ್ಷೆಯನ್ನು ಕ್ಷಿಪ್ರವಾಗಿ ನಡೆಸುವ ವಿಧಾನಗಳನ್ನು ರೂಪಿಸುವುದು, ಸೋಂಕಿನಿಂದ ರಕ್ಷಣೆ ಒದಗಿಸುವ ಸರಳ ಸಾಧನಗಳನ್ನು ತಯಾರಿಸುವುದು, ರೋಗ ಹರಡುವಿಕೆಯ ಬಗ್ಗೆ ಮೊಬೈಲ್ ಆಪ್ ಮೂಲಕ ಮಾಹಿತಿ ನೀಡುವುದು - ಹೀಗೆ ತಂತ್ರಜ್ಞಾನದ ಅನುಕೂಲಗಳನ್ನು ಹಲವು ಉದ್ದೇಶಗಳಿಗೆ ಬಳಸಿಕೊಂಡಿರುವುದು ಭಾರತೀಯ ತಂತ್ರಜ್ಞರ ಸಾಧನೆ. ಬಿಡುಗಡೆಯಾದ ಮೂರು ದಿನಗಳಲ್ಲಿ ಗೂಗಲ್ ಪ್ಲೇ ಸ್ಟೋರ್‍ ಒಂದರಲ್ಲೇ ಐವತ್ತು ಲಕ್ಷ ಡೌನ್‌ಲೋಡ್‌ಗಳನ್ನು ಕಂಡ, ಈವರೆಗೆ ಐದು ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿರುವ 'ಆರೋಗ್ಯ ಸೇತು' ಮೊಬೈಲ್ ಆಪ್ ಇಂತಹ ಪ್ರಯತ್ನಗಳ ಸಫಲತೆಗೊಂದು ವಿಶೇಷ ಉದಾಹರಣೆಯಾಗಿದೆ.

ಕೋವಿಡ್-೧೯ ವ್ಯಾಪಕವಾಗಿ ಹರಡುತ್ತಿರುವ ಮುಂಬಯಿಯಲ್ಲಿ ರೋಗಪತ್ತೆ ಪರೀಕ್ಷೆಗಳನ್ನು ಕ್ಷಿಪ್ರವಾಗಿ ನಡೆಸಲು ಐಐಟಿ ಅಲಮ್ನೈ ಕೌನ್ಸಿಲ್ ಪರಿಚಯಿಸಿರುವ 'ಟೆಸ್ಟ್ ಬಸ್', ತಂತ್ರಜ್ಞಾನವನ್ನು ಜನತೆಯ ಉಪಯೋಗಕ್ಕಾಗಿ ಬಳಸುವ ನಿಟ್ಟಿನಲ್ಲಿ ಇನ್ನೊಂದು ಹೊಸ ಕಲ್ಪನೆ. ಕೋವಿಡ್ ಶಂಕಿತರಿಂದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸುವ ಬದಲಿಗೆ, ಆ ಪರೀಕ್ಷೆಗೆ ಬೇಕಾದ ವ್ಯವಸ್ಥೆಯನ್ನೆಲ್ಲ ಒಂದು ಬಸ್ಸಿನಲ್ಲಿ ಅಳವಡಿಸಿ ಆ ಬಸ್ಸು ನಗರದಾದ್ಯಂತ ಸಂಚರಿಸುವಂತೆ ಮಾಡುವ ಈ ವ್ಯವಸ್ಥೆಯ ನೆರವಿನಿಂದ ತಿಂಗಳಿಗೆ ಐವತ್ತು ಲಕ್ಷ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವೆಂದು ಹೇಳಲಾಗಿದೆ.

ಕೇಂದ್ರ ಸರಕಾರದ 'ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರೀಸರ್ಚ್' (CSIR) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಸಂಸ್ಥೆಗಳು ಕೂಡ ಕೋವಿಡ್-೧೯ ವಿರುದ್ಧದ ಹೋರಾಟದಲ್ಲಿ ಭಾಗಿಗಳಾಗಿವೆ. ಸ್ಯಾನಿಟೈಸರ್, ಮುಖದ ರಕ್ಷಾಕವಚ (ಫೇಸ್ ಶೀಲ್ಡ್), ಪಿಪಿಇ, ಟೆಸ್ಟಿಂಗ್ ಕಿಟ್, ವೆಂಟಿಲೇಟರ್ ಮುಂತಾದವುಗಳ ತಯಾರಿಕೆಯಿಂದ ಪ್ರಾರಂಭಿಸಿ ಔಷಧಗಳ ಅನ್ವೇಷಣೆಯವರೆಗೆ ಈ ಸಂಸ್ಥೆಗಳು ಹಲವು ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (CSIR-CFTRI) ಕೋವಿಡ್-೧೯ ರೋಗಿಗಳಿಗೆ ಅಗತ್ಯವಾದ ಪೌಷ್ಟಿಕ ಆಹಾರ ಪದಾರ್ಥಗಳನ್ನೂ ಒದಗಿಸುತ್ತಿದೆ.

ಮೇ ೧೧, ೨೦೨೦ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com