ಹೆಡ್‌ಸೆಟ್ ಅನ್ನು ಕಣ್ಣಿನ ಮುಂದಿರುವಂತೆ ಹಿಡಿದುಕೊಂಡರೆ ಅಥವಾ ತಲೆಗೆ ಕಟ್ಟಿಕೊಂಡರೆ ಆಯಿತು, ಹಲವು ಹೊಸ ದೃಶ್ಯಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ!
ಹೆಡ್‌ಸೆಟ್ ಅನ್ನು ಕಣ್ಣಿನ ಮುಂದಿರುವಂತೆ ಹಿಡಿದುಕೊಂಡರೆ ಅಥವಾ ತಲೆಗೆ ಕಟ್ಟಿಕೊಂಡರೆ ಆಯಿತು, ಹಲವು ಹೊಸ ದೃಶ್ಯಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ!Pexels / pixabay.com

ಮೆಟಾವರ್ಸ್: ಕನಸಿನ ಪ್ರಪಂಚವೋ? ಬರಿಯ ಕನಸೋ?

ಭೌತಿಕವಾಗಿ ಅಸ್ತಿತ್ವದಲ್ಲಿಲ್ಲದ, ಆದರೆ ವಾಸ್ತವದಂತೆಯೇ ತೋರುವ 'ಮೆಟಾವರ್ಸ್' ಒಂದು ಜಾಲತಾಣವಾಗಲೀ ಯಾವುದೋ ಸಂಸ್ಥೆಯ ಉತ್ಪನ್ನವಾಗಲೀ ಅಲ್ಲ. ಹಾಗಾದರೆ ಅದು ಏನು?

ನನ್ನ ಚಿಕ್ಕಂದಿನ ಗೆಳೆಯನ ಬಳಿ ಒಂದು ವಿಶೇಷ ಆಟಿಕೆ ಇತ್ತು. 'ವ್ಯೂ-ಮಾಸ್ಟರ್' ಎಂಬ ಆ ಆಟಿಕೆಯೊಳಕ್ಕೆ ಸಣ್ಣಸಣ್ಣ ಚಿತ್ರಗಳಿದ್ದ ಚಕ್ರವೊಂದನ್ನು ಹಾಕಿ, ಅದನ್ನು ಕಣ್ಣಮುಂದೆ ಹಿಡಿದುಕೊಂಡರೆ ಅದ್ಭುತವೆನಿಸುವ ದೃಶ್ಯವೊಂದು ನಮ್ಮ ಕಣ್ಣೆದುರಿಗೆ ಬರುತ್ತಿತ್ತು. ಆಟಿಕೆಯ ಗುಂಡಿ ಒತ್ತುತ್ತಾ ಹೋದಂತೆ ಚಿತ್ರಗಳು ಬದಲಾಗುತ್ತಿದ್ದವು. ಪ್ರೇಕ್ಷಣೀಯ ಸ್ಥಳಗಳು, ಉದ್ಯಾನಗಳು ಕಣ್ಣೆದುರು ಹಾದುಹೋಗುತ್ತಿದ್ದವು. ಶ್ರೀಮಂಗಲದ ಮೋಡಕವಿದ ವಾತಾವರಣದಲ್ಲೇ ವಿದೇಶ ಪ್ರವಾಸ ಆಗಿಹೋಗುತ್ತಿತ್ತು, ಅದೂ ಕೆಲವೇ ನಿಮಿಷಗಳಲ್ಲಿ!

ಮೂರು ದಶಕಗಳ ಹಿಂದೆ ನಮಗೆ ಅದ್ಭುತವೆನಿಸುತ್ತಿದ್ದ ಇಂತಹ ಆಟಿಕೆ ಇಂದಿನ ಮಕ್ಕಳಿಗೆ ಅಷ್ಟೇನೂ ವಿಶೇಷ ಎನ್ನಿಸದಿರಬಹುದು. ಏಕೆಂದರೆ ಅದಕ್ಕಿಂತ ಆಕರ್ಷಕವಾದ ಸಂಗತಿಗಳನ್ನು ಇನ್ನೂ ಪರಿಣಾಮಕಾರಿಯಾಗಿ ತೋರಿಸುವ ಸಾಧನಗಳು ಇಂದು ಬಹಳ ಸುಲಭವಾಗಿ ಅವರ ಕೈಗೆಟುಕುತ್ತಿವೆ. ಕೈಯಲ್ಲಿ ಸ್ಮಾರ್ಟ್‌ಫೋನ್ ಇದ್ದರೆ ಸಾಕು, ವಿದೇಶ ಪ್ರವಾಸದ ಜೊತೆಗೆ ವಿಶ್ವಪರ್ಯಟನೆಯನ್ನೂ ಕುಳಿತಲ್ಲೇ ಮಾಡಿಬಿಡುವುದು ಸಾಧ್ಯವಾಗುತ್ತದೆ. ಬೇಕಾದ್ದು - ಬೇಡವಾದ್ದು ಎಲ್ಲವನ್ನೂ ಅದು ಥಟ್ಟನೆ ಕಣ್ಣೆದುರಿಗೆ ತಂದು ನಿಲ್ಲಿಸುತ್ತದೆ.

ಕಣ್ಣೆದುರಿಗೆ ತಂದು ನಿಲ್ಲಿಸುತ್ತದೆ ಎನ್ನುವುದನ್ನು ಇಲ್ಲಿ ಪದಶಃ ನೋಡುವಂತಿಲ್ಲ. ಏಕೆಂದರೆ ಸ್ಮಾರ್ಟ್‌ಫೋನಿನಲ್ಲಿ, ಕಂಪ್ಯೂಟರಿನಲ್ಲಿ, ಕಡೆಗೆ ಟೀವಿಯಲ್ಲೂ ನಮಗೆ ಕಾಣುವ ಸಂಗತಿಗಳು ನಮ್ಮ ಕಣ್ಣೆದುರಿನ ಪರದೆಯೊಳಗೆ ಇರುತ್ತವೆಯೇ ಹೊರತು ನಮ್ಮ ಕಣ್ಣೆದುರಿಗೇನೂ ಬಂದು ನಿಂತಿರುವುದಿಲ್ಲ. ಹೀಗಿರುವಾಗಲೇ ಆ ಸಾಧನಗಳೊಡನೆ ಗಂಟೆಗಟ್ಟಲೆ ಸಮಯ ಕಳೆಯುವ ನಾವು, ಪರದೆಯೊಳಗಿನ ಆ ಜಗತ್ತೇನಾದರೂ ನಿಜಕ್ಕೂ ನಮ್ಮ ಕಣ್ಣೆದುರಿಗೆ ಬಂದುಬಿಟ್ಟರೆ ಹೇಗೆ ಪ್ರತಿಕ್ರಿಯಿಸಬಹುದು? ಅವನ್ನು ಇನ್ನೆಷ್ಟು ವ್ಯಾಪಕವಾಗಿ ಬಳಸಬಹುದು?

'ವ್ಯೂ-ಮಾಸ್ಟರ್' ಆಟಿಕೆ
'ವ್ಯೂ-ಮಾಸ್ಟರ್' ಆಟಿಕೆSteve Berry, CC BY-NC-SA 2.0, via flickr.com

ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಈಚಿನ ವರ್ಷಗಳಲ್ಲಿ ನಡೆದಿರುವ ಕೆಲ ಬೆಳವಣಿಗೆಗಳು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನದಲ್ಲಿವೆ. ಇಂತಹ ಪ್ರಯತ್ನಗಳಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವುದು ವರ್ಚುಯಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ, ಹಾಗೂ ಮಿಕ್ಸೆಡ್ ರಿಯಾಲಿಟಿ ಎಂಬ ಪರಿಕಲ್ಪನೆಗಳ ಹೆಸರು. ಒಟ್ಟಾಗಿ 'ಎಕ್ಸ್‌ಟೆಂಡೆಡ್ ರಿಯಾಲಿಟಿ' ಎಂದೂ ಕರೆಸಿಕೊಳ್ಳುವ ಈ ಪರಿಕಲ್ಪನೆಗಳು ಡಿಜಿಟಲ್ ಜಗತ್ತಿನ ಜೊತೆಗಿನ ನಮ್ಮ ಒಡನಾಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಜ್ಜಾಗುತ್ತಿವೆ.

'ರಿಯಾಲಿಟಿ' ಎಂದರೆ ವಾಸ್ತವ, ಜೀವನ ನಿಜವಾಗಿ ಇರುವ ರೀತಿ. ಇಲ್ಲಿ ಕಲ್ಲುಗಳು ನೆಲದ ಮೇಲಿರುತ್ತವೆ, ಹಕ್ಕಿಗಳು ಹಾರಾಡುತ್ತವೆ. ಕುವೆಂಪುರವರು "ಒಂದು ಸಲವಾದರೂ ಕಲ್ಲು ಹಕ್ಕಿಯ ತೆರದಿ ಹಾರಾಡಬಾರದೇ?" ಎಂದಿದ್ದನ್ನು ಓದಿದ ಕಂಪ್ಯೂಟರ್ ಪರಿಣತನೊಬ್ಬ ಕಲ್ಲುಗಳಿಗೆ ರೆಕ್ಕೆ ಮೂಡಿದಂತೆ, ಅವು ಸ್ವಚ್ಛಂದವಾಗಿ ಹಾರಾಡುತ್ತಿರುವಂತೆ ಚಿತ್ರಿಸಿ ತೋರಿಸಿದರೆ ಅದು ವಾಸ್ತವವಾಗುವುದಿಲ್ಲ, ವಾಸ್ತವದಂತೆ ಭಾಸವಾಗುತ್ತದೆ ಅಷ್ಟೇ. ಇದನ್ನು 'ವರ್ಚುಯಲ್ ರಿಯಾಲಿಟಿ' (ವಿಆರ್) ಎಂದು ಕರೆಯಬಹುದು.

ಹಾಗೆಂದು ಕಾಲ್ಪನಿಕ ಚಿತ್ರಗಳೆಲ್ಲವೂ ವರ್ಚುಯಲ್ ರಿಯಾಲಿಟಿ ಆಗುವುದಿಲ್ಲ. ತಾಂತ್ರಿಕ ಪರಿಭಾಷೆಯಲ್ಲಿ ಯಾವುದೇ ಅನುಭವ ವರ್ಚುಯಲ್ ರಿಯಾಲಿಟಿ ಎಂದು ಕರೆಸಿಕೊಳ್ಳಬೇಕಾದರೆ ಅದರಲ್ಲೇ ಮುಳುಗಿರುವ ಭಾವನೆ ನಮ್ಮಲ್ಲಿ ಮೂಡಬೇಕು. ರಾಜಾಸೀಟಿನ ಫೋಟೋ ನೋಡುವುದಕ್ಕೂ ಸ್ವತಃ ಅಲ್ಲಿ ನಿಂತು ಪ್ರಕೃತಿಸೌಂದರ್ಯವನ್ನು ಸವಿಯುವುದಕ್ಕೂ ವ್ಯತ್ಯಾಸ ಇರುತ್ತದಲ್ಲ, ಇದೂ ಹಾಗೆಯೇ. ಹಾರುತ್ತಿರುವುದು ಕಲ್ಲೇ ಆದರೂ ಅದು ವಾಸ್ತವದಂತೆ ಕಾಣಬೇಕು, ನಾವು ಆಚೀಚೆ ತಿರುಗಿದಾಗ ನಮ್ಮೆದುರು ಕಾಣುವ ದೃಶ್ಯವೂ ಬದಲಾಗಬೇಕು.

ಸ್ಮಾರ್ಟ್‌ಫೋನ್, ಕಂಪ್ಯೂಟರ್ ಅಥವಾ ಟೀವಿಯ ಪರದೆ ನಮ್ಮಲ್ಲಿ ಇಂತಹ ಭಾವನೆ ಮೂಡಿಸುವುದು ಕಷ್ಟ. ಹೀಗಾಗಿಯೇ 'ವಿಆರ್ ಹೆಡ್‌ಸೆಟ್‌'ಗಳೆಂಬ ಸಾಧನಗಳು ಬಳಕೆಗೆ ಬಂದಿವೆ. ನೋಡಲು ಹಿಂದಿನ ಕಾಲದ 'ವ್ಯೂ-ಮಾಸ್ಟರ್' ಆಟಿಕೆಗಳಂತೆಯೇ ಕಾಣುವ ಈ ಸಾಧನಗಳನ್ನು ನಮ್ಮ ಸ್ಮಾರ್ಟ್‌ಫೋನ್‌ಗಳ ಜೊತೆ ಬಳಸಬಹುದು. ಇದಕ್ಕಾಗಿ ವರ್ಚುಯಲ್ ರಿಯಾಲಿಟಿ ಅನುಭವ ಕೊಡುವ ತಂತ್ರಾಂಶವನ್ನು ಮೊಬೈಲಿನಲ್ಲಿ ಚಾಲೂ ಮಾಡಿ, ಆ ಮೊಬೈಲನ್ನು ವಿಆರ್ ಹೆಡ್‌ಸೆಟ್‌ನೊಳಕ್ಕೆ ಸೇರಿಸಬೇಕು. ಆಮೇಲೆ ಆ ಹೆಡ್‌ಸೆಟ್ ಅನ್ನು ನಮ್ಮ ಕಣ್ಣಿನ ಮುಂದಿರುವಂತೆ ಹಿಡಿದುಕೊಂಡರೆ ಅಥವಾ ಪಟ್ಟಿಯ ಸಹಾಯದಿಂದ ತಲೆಗೆ ಕಟ್ಟಿಕೊಂಡರೆ ಆಯಿತು, ಕುಳಿತ ಸ್ಥಳದಲ್ಲೇ ಹಲವು ಹೊಸ ದೃಶ್ಯಗಳು ನಮ್ಮೆದುರಿಗೆ ತೆರೆದುಕೊಳ್ಳುತ್ತವೆ. ದೃಶ್ಯಗಳೆಂದರೆ ಹಿಂದಿನ ವ್ಯೂ-ಮಾಸ್ಟರಿನಲ್ಲಿ ಕಾಣಿಸುತ್ತಿದ್ದಂತಹ ಸ್ಥಿರ ಚಿತ್ರಗಳಷ್ಟೇ ಅಲ್ಲ. ವಿಆರ್ ಹೆಡ್‌ಸೆಟ್ ಧರಿಸಿದ ನಾವು ಹೊಸಕೆರೆಹಳ್ಳಿಯಲ್ಲಿ ಕುಳಿತುಕೊಂಡೇ ಸ್ಯಾನ್ ಹೋಸೆಯ ಬೀದಿಗಳಲ್ಲಿ ಓಡಾಡಿದ ಅನುಭವ ಪಡೆಯಬಹುದು, ಅದಾಗಿ ಅರೆಕ್ಷಣದಲ್ಲೇ ಮಡಿಕೇರಿಯ ರಾಜಾ ಸೀಟಿಗೂ ಮರಳಬಹುದು.

ವಿಆರ್ ಹೆಡ್‌ಸೆಟ್‌
ವಿಆರ್ ಹೆಡ್‌ಸೆಟ್‌Image by Prashant Sharma from Pixabay

ತಂತ್ರಜ್ಞಾನದ ಈ ಕರಾಮತ್ತು ಇಲ್ಲದ ಸಂಗತಿಗಳನ್ನು ಇರುವಂತೆ ತೋರಿಸುವುದಕ್ಕೆ ಮಾತ್ರವೇ ಸೀಮಿತವೇನಲ್ಲ. ವಾಸ್ತವದಲ್ಲಿ ಇರುವ ಸಂಗತಿಗಳೊಡನೆ ಇಲ್ಲದ ಕೆಲವನ್ನು ಹೆಚ್ಚುವರಿಯಾಗಿ ಸೇರಿಸಿ ತೋರಿಸುವುದಕ್ಕೂ ಇಂದಿನ ತಂತ್ರಜ್ಞಾನ ಶಕ್ತವಾಗಿದೆ. ವಾಸ್ತವವನ್ನು ಇನ್ನಷ್ಟು ಹೆಚ್ಚಿಸಿ ತೋರಿಸುವ ಈ ಪರಿಕಲ್ಪನೆಯೇ 'ಆಗ್ಮೆಂಟೆಡ್ ರಿಯಾಲಿಟಿ' (ಎಆರ್). ಆನ್‌ಲೈನ್ ಅಂಗಡಿಯಲ್ಲಿ ಬಹಳ ಚೆನ್ನಾಗಿ ಕಂಡ ಸೋಫಾ ಸೆಟ್ಟು ನಮ್ಮ ಮನೆಯ ದಿವಾನಖಾನೆಯಲ್ಲಿ ಹೇಗೆ ಕಾಣಬಹುದು ಎಂದು ನೋಡಲು ಈ ಪರಿಕಲ್ಪನೆ ಸಹಾಯ ಮಾಡಬಲ್ಲದು. ಅದೇರೀತಿ ಮೊಬೈಲ್ ಗೇಮಿನ ವಿಚಿತ್ರ ಪ್ರಾಣಿ ನಮ್ಮ ರಸ್ತೆಯಲ್ಲೇ ಓಡಾಡುತ್ತಿರುವಂತೆಯೂ ಅದು ತೋರಿಸಬಹುದು, ವೀಡಿಯೊಗಳಲ್ಲಿ ನಮ್ಮ ಚಹರೆ ಬದಲಿಸಬಹುದು, ನಮಗೆ ದೊಡ್ಡ ಕಿವಿಗಳನ್ನೋ ಕೊಂಬನ್ನೋ ಸೇರಿಸಲೂಬಹುದು. ಮೊಬೈಲ್ ಕ್ಯಾಮೆರಾದ ಎದುರಿಗೆ ಕಾಣಿಸುವ ಬೇರೆ ಭಾಷೆಯ ಪಠ್ಯವನ್ನು ಆ ಕ್ಷಣದಲ್ಲೇ ನಮ್ಮ ಭಾಷೆಗೆ ಅನುವಾದಿಸಿ, ಅನುವಾದಿತ ಪಠ್ಯವೇ ಚಿತ್ರದಲ್ಲಿ ಕಾಣಿಸುತ್ತಿರುವಂತೆ ತೋರಿಸುವ ಸೌಲಭ್ಯವೂ ಆಗ್ಮೆಂಟೆಡ್ ರಿಯಾಲಿಟಿಯ ಕೊಡುಗೆಯೇ.

ವಾಸ್ತವ ಜಗತ್ತು ಮತ್ತು ವರ್ಚುಯಲ್ ಜಗತ್ತು ಎರಡರ ಜೊತೆಯೂ ನಾವು ಏಕಕಾಲದಲ್ಲೇ ವ್ಯವಹರಿಸುವುದನ್ನು, ಎರಡು ಜಗತ್ತುಗಳಲ್ಲಿರುವ ವಸ್ತುಗಳ ಜೊತೆಯೂ ಒಟ್ಟಿಗೆ ಒಡನಾಡುವುದನ್ನು ಮಿಕ್ಸೆಡ್ ರಿಯಾಲಿಟಿಯ (ಎಂಆರ್) ಪರಿಕಲ್ಪನೆ ಸಾಧ್ಯವಾಗಿಸುತ್ತದೆ. ಉದ್ಯಮ, ವೈದ್ಯಕೀಯ, ಶಿಕ್ಷಣ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆ ತರುವ ಸಾಮರ್ಥ್ಯವುಳ್ಳ ಈ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಮೈಕ್ರೋಸಾಫ್ಟ್‌ ಸಂಸ್ಥೆಯ 'ಹಾಲೋಲೆನ್ಸ್‌'ನಂತಹ ಉತ್ಪನ್ನಗಳು ತೊಡಗಿಕೊಂಡಿವೆ. ಒಂದು ತರಗತಿಯಲ್ಲಿರುವ ವಿದ್ಯಾರ್ಥಿಗಳು ಇಂತಹುದೊಂದು ಕನ್ನಡಕ ಧರಿಸಿಕೊಂಡಿದ್ದರೆ ಅವರು ಶಿಕ್ಷಕರು ಬೋರ್ಡಿನ ಮೇಲೆ ಬರೆದಿದ್ದನ್ನು ಓದುವುದಷ್ಟೇ ಅಲ್ಲ, ಪಾಠದಲ್ಲಿರುವ ಪರಿಕಲ್ಪನೆಗಳ ಮೂರು ಆಯಾಮದ ಮಾದರಿಯನ್ನೂ ತಮ್ಮ ಕಣ್ಣೆದುರಿಗೇ ನೋಡಬಲ್ಲರು!

ಇಷ್ಟೆಲ್ಲ ಸಾಧ್ಯತೆಗಳಿದ್ದರೂ ಕೂಡ ಮೇಲಿನ ಪರಿಕಲ್ಪನೆಗಳೆಲ್ಲ ನಮ್ಮ ಬದುಕನ್ನು ಈವರೆಗೆ ಹೆಚ್ಚೇನೂ ಪ್ರಭಾವಿಸಿಲ್ಲ. ವರ್ಚುಯಲ್ ರಿಯಾಲಿಟಿ ಇಂದಿಗೂ ಹೆಚ್ಚಾಗಿ ಗೇಮಿಂಗ್ ಆಸಕ್ತರ ಕ್ಷೇತ್ರವಾಗಿಯೇ ಉಳಿದಿದೆ, ಆಗ್ಮೆಂಟೆಡ್ ರಿಯಾಲಿಟಿಯ ಉದಾಹರಣೆಗಳು ಮತ್ತೆ ಅದೇ ಸ್ಮಾರ್ಟ್‌ಫೋನಿನ ಪರದೆಯ ಮೂಲಕ ನಮಗೆ ಕಾಣುತ್ತಿವೆ. ಮಿಕ್ಸೆಡ್ ರಿಯಾಲಿಟಿಯಂತೂ, ಈವರೆಗೆ, ಜನಸಾಮಾನ್ಯರನ್ನು ವ್ಯಾಪಕವಾಗಿ ತಲುಪಿಯೇ ಇಲ್ಲ.

ಆದರೆ ಪರಿಸ್ಥಿತಿ ಹೆಚ್ಚು ಕಾಲ ಹೀಗೆಯೇ ಇರುವುದಿಲ್ಲ ಎನ್ನುವುದು ತಂತ್ರಜ್ಞಾನ ಸಂಸ್ಥೆಗಳ ಅನಿಸಿಕೆ. ನಾವೆಲ್ಲರೂ ಪಠ್ಯದ ಜಗತ್ತಿನಿಂದ ಚಿತ್ರಗಳ ಜಗತ್ತಿಗೆ, ಕೀಲಿಮಣೆಯ ಜಗತ್ತಿನಿಂದ ಟಚ್‌ಸ್ಕ್ರೀನ್ ಜಗತ್ತಿಗೆ ಸಾಗಿಬಂದ ಹಾಗೆಯೇ ಮುಂದಿನ ದಿನಗಳಲ್ಲಿ ಎಆರ್-ವಿಆರ್‌‌ನಂತಹ ಪರಿಕಲ್ಪನೆಗಳನ್ನು ಹೆಚ್ಚುಹೆಚ್ಚಾಗಿ ಬಳಸಲಿದ್ದೇವೆ ಎಂದು ಅವು ನಂಬಿವೆ. 'ಮೆಟಾವರ್ಸ್' ಎಂಬ ಹೆಸರು ಇದ್ದಕ್ಕಿದ್ದಂತೆ ಪ್ರಚಾರ ಪಡೆದುಕೊಂಡಿರುವುದಕ್ಕೂ ಈ ನಂಬಿಕೆಯೇ ಕಾರಣ.

ಇಂದು ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು, ಅದರಲ್ಲೂ ವಿಶೇಷವಾಗಿ ಅಂತರಜಾಲವನ್ನು, ನಾವು ಹೆಚ್ಚಾಗಿ ಬಳಸುತ್ತಿರುವುದು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರಿನ ಮೂಲಕ. ನಮಗೆ ಏನು ಮಾಯಾಜಾಲ ಕಾಣಿಸುವುದಿದ್ದರೂ ಅದು ನಾವು ಬಳಸುವ ಸಾಧನದ ಪರದೆಗೆ ಮಾತ್ರ ಸೀಮಿತವಾಗಿರುತ್ತದೆ. ಈ ಪರಿಸ್ಥಿತಿ ಬದಲಾಗಿ ಅಂತರಜಾಲದ ಜಗತ್ತಿಗೆ ಜೀವ ಬಂದುಬಿಟ್ಟರೆ? ಅದು ಮೂರು ಆಯಾಮದಲ್ಲಿ ನಮ್ಮ ಸುತ್ತಲೂ ಕಾಣಿಸುವಂತಾದರೆ?

ಯಾವುದೋ ಪರದೆಯನ್ನು ದಿಟ್ಟಿಸಿ ನೋಡುವ ಬದಲು ನಾವು ಅಂತಹ ಜಗತ್ತನ್ನು ಸ್ವತಃ ಪ್ರವೇಶಿಸಿದಂತಹ ಅನುಭವ ಪಡೆದುಕೊಳ್ಳಬಹುದು. ಸಮಾಜಜಾಲ ಎನ್ನುವುದು ಒಂದು ಪಠ್ಯ-ಚಿತ್ರ ಆಧಾರಿತ ಜಾಲತಾಣವಷ್ಟೇ ಆಗಿರದೆ ನಮ್ಮ ಹೊರಗಿನ ಪ್ರಪಂಚದ ಡಿಜಿಟಲ್ ರೂಪವೇ ಆಗಿರುವಂತೆ ನೋಡಿಕೊಳ್ಳಬಹುದು. ಹುಟ್ಟುಹಬ್ಬ ಆಚರಿಸುತ್ತಿರುವ ಸ್ನೇಹಿತರಿಗೆ ವರ್ಚುಯಲ್ ಹಸ್ತಲಾಘವ ಮಾಡಬಹುದು. ಆನ್‌ಲೈನ್ ಮೀಟಿಂಗ್ ಇದ್ದಾಗ ಅದರಲ್ಲಿ ಪಾಲ್ಗೊಳ್ಳಲು ಒಂದು ವರ್ಚುಯಲ್ ಕೋಣೆಯನ್ನೇ ಪ್ರವೇಶಿಸಬಹುದು, ನಮ್ಮ ವರ್ಚುಯಲ್ ಅವತಾರ ಮಿಕ್ಕವರ ವರ್ಚುಯಲ್ ಅವತಾರಗಳ ಜೊತೆಗೆ ವಿಚಾರ ವಿನಿಮಯವನ್ನೂ ಮಾಡಿಕೊಳ್ಳಬಹುದು.

ಇದನ್ನು ಸಾಧ್ಯವಾಗಿಸಲು ವಿಆರ್ ಹೆಡ್‌ಸೆಟ್‌ನಂತಹ ಸಾಧನಗಳನ್ನು, ಹಾಲೋಲೆನ್ಸ್‌ನಂತಹ ಕನ್ನಡಕಗಳನ್ನು ನಾವು ಬಳಸಬೇಕಾಗುತ್ತದೆ. ಭೌತಿಕ ಜಗತ್ತಿನಂತಹುದೇ ಚಟುವಟಿಕೆಗಳು ಈ ವರ್ಚುಯಲ್ ಜಗತ್ತಿನಲ್ಲೂ ನಡೆಯಬೇಕಿರುವುದರಿಂದ ಅದು ಅಸಂಖ್ಯ ತಂತ್ರಜ್ಞರಿಗೆ, ವಾಣಿಜ್ಯೋದ್ಯಮಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಯಾವುದೇ ಭೌತಿಕ ಅಸ್ತಿತ್ವವಿಲ್ಲದ ಡಿಜಿಟಲ್ ಸರಕುಗಳಿಗೆ ಹಣ ಕೊಟ್ಟು ಖರೀದಿಸುವ ನಾನ್-ಫಂಜಿಬಲ್ ಟೋಕನ್ (ಎನ್‌ಎಫ್‌ಟಿ) ಪರಿಕಲ್ಪನೆಯೂ ಇಲ್ಲಿ ಕೆಲಸಕ್ಕೆ ಬರುವ ಸಾಧ್ಯತೆ ಇದೆ. ಕಂಪ್ಯೂಟರ್ ತಂತ್ರಾಂಶಗಳಿಗೆ, ಮೊಬೈಲ್ ಆಪ್‌ಗಳಿಗೆ, ಆನ್‌ಲೈನ್ ಆಟದ ಸವಲತ್ತುಗಳನ್ನು ಖರೀದಿಸುವ ಹಾಗೆ ಇಲ್ಲಿನ ವರ್ಚುಯಲ್ ಗೆಳತಿಗೆ ವರ್ಚುಯಲ್ ಗುಲಾಬಿಯನ್ನೂ ಕೊಡಬಹುದು - ನಿಜವಾದ ಹಣ ಕೊಟ್ಟು ಖರೀದಿಸಬೇಕು ಅಷ್ಟೇ!

ಭೌತಿಕವಾಗಿ ಅಸ್ತಿತ್ವದಲ್ಲಿಲ್ಲದ, ಆದರೆ ವಾಸ್ತವದಂತೆಯೇ ತೋರುವ ಈ ಜಗತ್ತನ್ನೇ 'ಮೆಟಾವರ್ಸ್' ಎಂದು ಕರೆಯಲಾಗುತ್ತಿದೆ. ಇದೊಂದು ಜಾಲತಾಣವಾಗಲೀ ಯಾವುದೋ ಸಂಸ್ಥೆಯ ಉತ್ಪನ್ನವಾಗಲೀ ಅಲ್ಲ. ಅಂತರಜಾಲದ ಹಾಗೆಯೇ ಇದೊಂದು ಸಂಕೀರ್ಣ ವ್ಯವಸ್ಥೆ. ಅಷ್ಟೇ ಅಲ್ಲ, ಇಂದಿನ ನಮ್ಮ ಅಂತರಜಾಲವೇ ಭವಿಷ್ಯದಲ್ಲಿ ಮೆಟಾವರ್ಸ್ ರೂಪಕ್ಕೆ ಬದಲಾಗುವುದು ಕೂಡ ಸಾಧ್ಯ. ವರ್ಚುಯಲ್ ರಿಯಾಲಿಟಿ, ಆಗ್ಮೆಂಟೆಡ್ ರಿಯಾಲಿಟಿ ಹಾಗೂ ಮಿಕ್ಸೆಡ್ ರಿಯಾಲಿಟಿಗಳೆಲ್ಲವೂ ಸೇರಿದ ಎಕ್ಸ್‌ಟೆಂಡೆಡ್ ರಿಯಾಲಿಟಿಯ ಪರಿಕಲ್ಪನೆ ಈ ಹೊಸ ಜಗತ್ತಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಫೇಸ್‌ಬುಕ್‌ನಂತಹ ಸಂಸ್ಥೆಗಳು ಮೆಟಾವರ್ಸ್ ಪರಿಕಲ್ಪನೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿರುವುದಕ್ಕೆ ಇದೇ ಕಾರಣ.

ಅಂತಹ ಸಂಸ್ಥೆಗಳೆಲ್ಲ ಅಂದುಕೊಳ್ಳುತ್ತಿರುವಂತೆಯೇ ಎಲ್ಲವೂ ನಡೆದರೆ ಮುಂದಿನ ದಿನಗಳಲ್ಲಿ ಮೆಟಾವರ್ಸ್ ಸೃಷ್ಟಿಯೂ ಆದೀತು. ಖಾಸಗಿತನ, ಮಾಹಿತಿ ಸುರಕ್ಷತೆ ಮುಂತಾದವುಗಳ ಬಗೆಗಿನ ನಮ್ಮ ಉಪೇಕ್ಷೆ ಅಲ್ಲಿಯೂ ಮುಂದುವರೆಯಬಹುದು. ಆದರೆ ಕೈಯಲ್ಲಿ ಮೊಬೈಲ್ ಹಿಡಿದು ಸುತ್ತಲಿನ ಪರಿವೆಯೇ ಇಲ್ಲದಂತೆ ನಡೆಯುವ ಜನರು ಮಾತ್ರ ಆನಂತರದಲ್ಲಿ ನಮಗೆ ಕಾಣಸಿಗುವುದಿಲ್ಲವೋ ಏನೋ - ಏಕೆಂದರೆ ಅವರ ಜೊತೆಗೆ ನಾವೂ ಹೆಡ್‌ಸೆಟ್ ಧರಿಸಿಕೊಂಡು ಓಡಾಡುತ್ತಿರುತ್ತೇವಲ್ಲ! ಹಾಗೆ ಓಡಾಡುವಾಗ ಒಬ್ಬರಿಗೊಬ್ಬರು ಕಾಣಿಸದೆ ಡಿಕ್ಕಿ ಹೊಡೆದುಕೊಂಡರೆ, ನಾವು ಡಿಜಿಟಲ್ ಬೈಗುಳಗಳನ್ನೇ ವಿನಿಮಯ ಮಾಡಿಕೊಳ್ಳಬಹುದೋ ಏನೋ!!

ನವೆಂಬರ್ ೨, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಏಳನೆಯ ಬರಹ

'ಟೆಕ್ ನೋಟ' ಅಂಕಣದ ಏಳನೆಯ ಬರಹ
'ಟೆಕ್ ನೋಟ' ಅಂಕಣದ ಏಳನೆಯ ಬರಹವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com