ಸಾಹಿತ್ಯ ಸಮ್ಮೇಳನ ವಿಶೇಷ: ಸಾಹಿತ್ಯ ಮತ್ತು ತಂತ್ರಜ್ಞಾನ
ಬಿಸಿಬೇಳೆಬಾತ್ ಜೊತೆಗೆ ಆಲೂಗೆಡ್ಡೆಯ ಉಪ್ಪೇರಿ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತದೋ ಸಾಹಿತ್ಯ-ತಂತ್ರಜ್ಞಾನಗಳೂ ಅಷ್ಟೇ ಚೆನ್ನಾಗಿ ಜೊತೆಯಾಗಬಲ್ಲವು Image by Wokandapix from Pixabay

ಸಾಹಿತ್ಯ ಸಮ್ಮೇಳನ ವಿಶೇಷ: ಸಾಹಿತ್ಯ ಮತ್ತು ತಂತ್ರಜ್ಞಾನ

೮೫ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕಲಬುರಗಿಯ 'ಕನ್ನಡ ಭಾಷೆ: ಹೊಸ ತಂತ್ರಜ್ಞಾನ' ಗೋಷ್ಠಿಯಲ್ಲಿ ಮಾಡಿದ ಭಾಷಣದ ಪೂರ್ಣರೂಪ

ಸಾಹಿತ್ಯ ಮತ್ತು ತಂತ್ರಜ್ಞಾನ ಎನ್ನುವ ಶೀರ್ಷಿಕೆ, ಕೇಳಲು ಸ್ವಲ್ಪ ವಿಚಿತ್ರ ಅನ್ನಿಸಬಹುದು. ಸೌತ್ ಇಂಡಿಯನ್ ಊಟ ಮತ್ತು ಫ್ರೆಂಚ್ ಫ್ರೈಸ್ ಅಂದಹಾಗೆ. ಆದರೆ ವಾಸ್ತವ ಅಷ್ಟು ವಿಚಿತ್ರವೇನಲ್ಲ. ಅದೇ ಆಲೂಗೆಡ್ಡೆಯ ಉಪ್ಪೇರಿ ನಮ್ಮ ಬಿಸಿಬೇಳೆಬಾತ್ ಜೊತೆಗೆ ಎಷ್ಟು ಚೆನ್ನಾಗಿ ಹೊಂದಿಕೊಳ್ಳುತ್ತದೋ ಸಾಹಿತ್ಯ-ತಂತ್ರಜ್ಞಾನಗಳೂ ಅಷ್ಟೇ ಚೆನ್ನಾಗಿ ಜೊತೆಯಾಗಬಲ್ಲವು.

ತಂತ್ರಜ್ಞಾನ ಕ್ಷೇತ್ರದಲ್ಲಿರುವವರು ಹೀಗೆ ಏನು ಬೇಕಾದರೂ ಹೇಳಬಹುದು, ಆದರೆ ತಂತ್ರಜ್ಞಾನದ ಬಗ್ಗೆ ಸಾಮಾನ್ಯ ಅಭಿಪ್ರಾಯ ಯಾವಾಗಲೂ ಅನುಕೂಲಕರವಾಗಿರಬೇಕು ಎಂದೇನೂ ಇಲ್ಲ.

ಸದ್ಯ ಪ್ರಚಲಿತದಲ್ಲಿರುವ ಎಐ, ಆಟೊಮೇಶನ್ ಮುಂತಾದ ಪರಿಕಲ್ಪನೆಗಳ ಉದಾಹರಣೆಯನ್ನೇ ನೋಡಿ. ಅದರ ಅನುಕೂಲಗಳನ್ನು ಈಗಾಗಲೇ ಪಡೆದುಕೊಳ್ಳುತ್ತಿರುವವರೂ ಸೇರಿದಂತೆ ಬಹಳಷ್ಟು ಮಂದಿ ಅವೆಲ್ಲ ಕೆಟ್ಟದು ಎಂದೇ ಸಾರಾಸಗಟಾಗಿ ತೀರ್ಪು ಕೊಡುತ್ತಾರೆ.

ಇದು ಇವತ್ತಿನ ಸಂಗತಿ ಮಾತ್ರವೇನಲ್ಲ, ಎರಡು ಶತಮಾನಗಳ ಹಿಂದೆಯೂ ಇಂಥದ್ದೇ ಸನ್ನಿವೇಶ ಇತ್ತು. ಮಗ್ಗದಲ್ಲಿ ಬಟ್ಟೆ ನೇಯುವಾಗ ಸಂಕೀರ್ಣ ವಿನ್ಯಾಸಗಳನ್ನು ಸುಲಭವಾಗಿ ರೂಪಿಸಲು ನೆರವಾಗುವ ತಂತ್ರಜ್ಞಾನ ರೂಪಿಸಿದ ಜೋಸೆಫ್ ಜಕಾರ್ಡ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲು ಹೋಗುವ ಮಟ್ಟದ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ, ಕಂಪ್ಯೂಟರ್ ಪ್ರೋಗ್ರಾಮಿಂಗ್ ಕ್ಷೇತ್ರಕ್ಕೆ ಬುನಾದಿ ಹಾಕಿದ ವ್ಯಕ್ತಿ ಎಂದು ನಾವು ಆತನನ್ನು ಗೌರವಿಸುತ್ತೇವೆ.

ವಿರೋಧಿಸುವುದೇ ತಪ್ಪು ಎಂದು ನಾನು ಹೇಳುತ್ತಿಲ್ಲ. ಉದಾಹರಣೆಗೆ, ಟೀವಿ ಬಂದಾಗ ಅದು ಓದುವ ಅಭ್ಯಾಸವನ್ನು ಹಾಳುಮಾಡುತ್ತಿದೆ ಎಂಬ ಆರೋಪ ಬಹಳ ಬೇಗನೆ ಕೇಳಿಬಂತು. ಅದಕ್ಕೆ ಸೋಮಾರಿ ಪೆಟ್ಟಿಗೆಯೆಂಬ ನಾಮಕರಣವೂ ಆಯಿತು. ಇನ್ನು ಕಂಪ್ಯೂಟರ್, ಅಂತರಜಾಲ ಹಾಗೂ ಮೊಬೈಲುಗಳ ಬಗೆಗಂತೂ ಹೇಳುವುದೇ ಬೇಡ. ಟೀವಿಯಿಂದಲೇ ಸಾಕಷ್ಟು ಕಡಿಮೆಯಾಗಿದ್ದ ಓದುವ ಅಭ್ಯಾಸ ಇದೀಗ ಇನ್ನಷ್ಟು ಹದಗೆಟ್ಟಿದೆ ಎನ್ನುವ ಆರೋಪವನ್ನು ನಾವು ಈಗ ಕೆಲ ವರ್ಷಗಳಿಂದ ಕೇಳುತ್ತಿದ್ದೇವೆ.

ಇದು ನಿಜವೂ ಹೌದು. ಓದುವ ಹವ್ಯಾಸ ಹಿಂದಿನ ಕಾಲದಷ್ಟು ವ್ಯಾಪಕವಾಗಿಲ್ಲ, ನಮ್ಮ attention span ಈಗ ವಿಪರೀತ ಕಡಿಮೆಯಾಗಿದೆ, ಬರಹಗಳನ್ನು ಓದಿ ಆಸ್ವಾದಿಸಲು ನಮಗೆ ಸಮಯವೇ ಇಲ್ಲ.

ಇದು ಎಲ್ಲರಿಗೂ ಗೊತ್ತು. ಹಾಗಾದರೆ ಈ ಪರಿಸ್ಥಿತಿ ಬದಲಾಯಿಸಲು ನಾವೇನು ಮಾಡಬಹುದು? ಆಲೂಗೆಡ್ಡೆಯಿಂದ ಫ್ರೆಂಚ್ ಫ್ರೈಸ್ ಬದಲು ಉಪ್ಪೇರಿ ಮಾಡಿ ಬಿಸಿಬೇಳೆ ಬಾತ್ ಜೊತೆ ನೆಂಚಿಕೊಳ್ಳುವ ಉದಾಹರಣೆ ಪ್ರಸ್ತುತವೆನಿಸುವುದು ಇಲ್ಲಿಯೇ.

ತಂತ್ರಜ್ಞಾನದಿಂದಾಗಿ ಸಾಹಿತ್ಯಕ್ಕೆ ತೊಂದರೆಯಾಗುತ್ತಿದೆ ಎನ್ನುವುದಾದರೆ ಆ ತೊಂದರೆಯನ್ನು ದೂರಮಾಡಲು ನಾವು ಆ ತಂತ್ರಜ್ಞಾನವನ್ನೇ ಬಳಸಿಕೊಳ್ಳಬಹುದು!

ಅದು ಹೇಗೆ? ತಂತ್ರಜ್ಞಾನಕ್ಕೆ ಹೇಳಿ ಕಾದಂಬರಿ ಬರೆಸಲು ಆಗುತ್ತದೆಯೇ ಎನ್ನಬೇಡಿ. ಏಕೆಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನ ಬಳಸಿ ರಚಿಸಿದ '1 the Road' ಎಂಬ ಇಂಗ್ಲಿಷ್ ಕಾದಂಬರಿ ೨೦೧೮ರಲ್ಲೇ ಪ್ರಕಟವಾಗಿತ್ತು. ನಮ್ಮ ಕಾದಂಬರಿಕಾರರು ಸಾಹಿತ್ಯ ಕೃಷಿಗೆ ತಮ್ಮ ಕಲ್ಪನೆ ಮತ್ತು ಅಧ್ಯಯನಗಳನ್ನು ಬಳಸಿಕೊಂಡರೆ ಈ ಕಾದಂಬರಿ ಬರೆದ ಕಂಪ್ಯೂಟರು ಅನೇಕ ಸೆನ್ಸರುಗಳ ಸಹಾಯ ಪಡೆದುಕೊಂಡಿತ್ತು. ಅಮೆರಿಕಾದ ನ್ಯೂಯಾರ್ಕ್‌ನಿಂದ ನ್ಯೂ ಆರ್ಲನ್ಸ್‌ವರೆಗಿನ ಕಾರು ಪ್ರಯಾಣದಲ್ಲಿ ಈ ಕಂಪ್ಯೂಟರ್ ಹಾಗೂ ಸೆನ್ಸರುಗಳು ಗಮನಿಸಿದ ಸಂಗತಿಗಳ ಹೂರಣವೇ ಕಾದಂಬರಿಯ ವಸ್ತು.

ಕಂಪ್ಯೂಟರೇ ಬರೆದ ಕಾದಂಬರಿ ಓದಿಸಿಕೊಳ್ಳುತ್ತದೋ ಇಲ್ಲವೋ ಎನ್ನುವುದು ಚರ್ಚಿಸಬೇಕಾದ ವಿಷಯ. ಆದರೆ ಒಂದಷ್ಟು ರೀತಿಯ ಬರಹಗಳನ್ನು ಕಂಪ್ಯೂಟರುಗಳು ಈಗಾಗಲೇ ಬರೆಯುತ್ತಿವೆ ಎನ್ನುವುದು ನಿಜ.

ಇಂತಹ ಕಂಪ್ಯೂಟರ್ ಬರಹಗಾರರ ಕೈವಾಡ ಹೆಚ್ಚಾಗಿ ಕಾಣಸಿಗುತ್ತಿರುವುದು ಇಂಗ್ಲಿಷಿನ ಸುದ್ದಿಮನೆಗಳಲ್ಲಿ. ನಿರ್ದಿಷ್ಟ ಸೂತ್ರಗಳಿಗೆ ಒಗ್ಗುವಂತಹ ವರದಿ ಅಥವಾ ಬರಹಗಳನ್ನು (ಉದಾ: ಸಂಸ್ಥೆಗಳ ಆರ್ಥಿಕ ಫಲಿತಾಂಶ) ಇಂತಹ ಕಂಪ್ಯೂಟರ್ ಬರಹಗಾರ ತಂತ್ರಾಂಶಗಳು ಈಗಾಗಲೇ ಸಿದ್ಧಪಡಿಸುತ್ತಿವೆ ಹಾಗೂ ಜಾಗತಿಕ ಸುದ್ದಿಸಂಸ್ಥೆಗಳು ಅವನ್ನು ಪ್ರಕಟಿಸುತ್ತಿವೆ. ಈ ಅಭ್ಯಾಸಕ್ಕೆ ಸ್ವಯಂಚಾಲಿತ ಪತ್ರಿಕೋದ್ಯಮ ('ಆಟೋಮೇಟೆಡ್ ಜರ್ನಲಿಸಂ') ಎಂಬ ಹೆಸರನ್ನೂ ಕೊಡಲಾಗಿದೆ.

ಹೀಗೆಲ್ಲ ಹೇಳಿದಾಗ ಇನ್ನೊಂದು ಪ್ರಶ್ನೆ ಮೂಡುವುದು ಸಾಧ್ಯ. ಈಗ ಇರುವ ಬರಹಗಳನ್ನೇ ಜನ ಓದುತ್ತಿಲ್ಲ ಎಂದಾಗ ತಂತ್ರಾಂಶ ಬಳಸಿ ಇನ್ನಷ್ಟು ಬರಹ ಸೃಷ್ಟಿಸಿದರೆ ಅದರಿಂದ ಏನು ಉಪಯೋಗ?

ಹೌದು, ಹೊಸ ಓದುಗರನ್ನು ಸಾಹಿತ್ಯದ ಕಡೆಗೆ ಸೆಳೆಯಲು ಹಾಗೂ ಸಾಹಿತ್ಯ ಸೃಷ್ಟಿಯ ಕೆಲಸವನ್ನು ಸುಲಭ ಮಾಡಿಕೊಳ್ಳಲು ಕೂಡ ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸಾಧ್ಯ.

ಮೊಬೈಲಿನಲ್ಲೇ ಮುಳುಗಿರುವ ಹೊಸ ತಲೆಮಾರಿಗೆ ಪುಸ್ತಕದ ರುಚಿ ಹತ್ತಿಸಲು ಇ-ಪುಸ್ತಕಗಳನ್ನು ನೀಡುವುದು ಈ ನಿಟ್ಟಿನಲ್ಲಿ ಒಂದು ಹೆಜ್ಜೆ. ವಿಶ್ವದ ಅತಿದೊಡ್ಡ ಇ-ಪುಸ್ತಕ ಪ್ರಕಾಶಕ ಅಮೆಜಾನ್ ತನ್ನ ಕಿಂಡಲ್ ವೇದಿಕೆಯಲ್ಲಿ ಕನ್ನಡಕ್ಕೆ ಬೆಂಬಲ ನೀಡಲು ಇನ್ನೂ ಮೀನಾಮೇಷ ಎಣಿಸುತ್ತಿದೆಯಾದರೂ ಗೂಗಲ್ ಪ್ಲೇ ಬುಕ್ಸ್ ಹಾಗೂ ನಮ್ಮದೇ ದೇಶದ ಉದ್ಯಮಿಗಳು ಪ್ರಾರಂಭಿಸಿರುವ ಹಲವು ವ್ಯವಸ್ಥೆಗಳಲ್ಲಿ ಕನ್ನಡ ಇ-ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟ ಈಗಾಗಲೇ ಸಾಧ್ಯವಾಗಿದೆ. ಹೊಸ ಬರಹಗಾರರಿಗೆ ದೊಡ್ಡ ಮಾರುಕಟ್ಟೆ ಒದಗಿಸಿಕೊಡುವ, ಹೆಸರಾಂತ ಬರಹಗಾರರ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸುವ ಸಾಧ್ಯತೆಯಿರುವ ಈ ಮಾರ್ಗವನ್ನು ಹೆಚ್ಚು ಲೇಖಕರು - ಪ್ರಕಾಶಕರು ಬಳಸುವುದು ಅಪೇಕ್ಷಣೀಯ. ತಮ್ಮ ಎಲ್ಲ ಪುಸ್ತಕಗಳನ್ನೂ ಇ-ಬುಕ್ ರೂಪದಲ್ಲಿ ಪ್ರಕಟಿಸಿರುವ ಶ್ರೀ ವಸುಧೇಂದ್ರರಂತಹ ಲೇಖಕ-ಪ್ರಕಾಶಕರ ಮೇಲ್ಪಂಕ್ತಿಯನ್ನು ನಾವೆಲ್ಲರೂ ಅನುಸರಿಸಬಹುದು.

ಬಹುಮಾಧ್ಯಮದ (ಮಲ್ಟಿಮೀಡಿಯಾ) ರುಚಿ ಹತ್ತಿಸಿಕೊಂಡವರು ಸುದೀರ್ಘ ಬರಹಗಳನ್ನು ಓದಲಾರರು ಎನ್ನುವುದಾದರೆ ಅಂತಹವರಿಗೆ ಪುಸ್ತಕಗಳನ್ನು ಕೇಳಿಸುವುದು (ಆಡಿಯೋ ಬುಕ್) ಕೂಡ ಸಾಧ್ಯವಿದೆ. ಇಂಗ್ಲಿಷಿನಲ್ಲಿ ಬಹಳ ಜನಪ್ರಿಯವಾಗಿರುವ ಆಡಿಯೋ ಬುಕ್‌ಗಳು ಕಳೆದ ಕೆಲ ವರ್ಷಗಳಿಂದ ಕನ್ನಡದಲ್ಲೂ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಹೆಚ್ಚು ಜನ ತಮ್ಮ ಮೊಬೈಲಿನಲ್ಲಿ ವೀಡಿಯೋ ವೀಕ್ಷಣೆಯನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ ಎನ್ನುವುದಾದರೆ, ಅವರನ್ನು ತಲುಪಲು ಪುಸ್ತಕ ಪರಿಚಯಗಳನ್ನು ವೀಡಿಯೋ ರೂಪದಲ್ಲೇ ನೀಡಬಹುದು. ಕತೆ-ಕವಿತೆ-ಕಾದಂಬರಿ ಮಾತ್ರವೇ ಅಲ್ಲ, ವಿಜ್ಞಾನ, ತಂತ್ರಜ್ಞಾನ, ಹಣಕಾಸು ಮುಂತಾದ ವಿಷಯಗಳ ಬಗ್ಗೆ ಓದುವಂತೆ ಪ್ರೇರೇಪಿಸುವುದಕ್ಕೂ ಇದೊಂದು ಉತ್ತಮ ಮಾರ್ಗ. ಇಂತಹ ವೀಡಿಯೋಗಳನ್ನು ಫೇಸ್‌ಬುಕ್‌ನಂತಹ ಸಮಾಜ ಜಾಲಗಳಲ್ಲೇ ಪ್ರಕಟಿಸಿ ಹೆಚ್ಚು ಜನರಿಗೆ ತಲುಪುವಂತೆಯೂ ಮಾಡಬಹುದು. ನಿರ್ದಿಷ್ಟ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸುವ ಸಮುದಾಯಗಳನ್ನೂ ಬೆಳೆಸಬಹುದು.

ಈ ಎಲ್ಲ ಬಗೆಯ ಪ್ರಯತ್ನಗಳೂ ಕನ್ನಡದಲ್ಲಿ ಪ್ರಾರಂಭವಾಗಿವೆ ಎನ್ನುವುದು ವಿಶೇಷ. ಇಂತಹ ಪ್ರಯತ್ನಗಳ ಫಲವಾಗಿ ಹೊಸ ಬರಹಗಾರರು ರೂಪುಗೊಳ್ಳುತ್ತಿರುವುದನ್ನು, ಫೇಸ್‌ಬುಕ್‌ನಂತಹ ಮಾಧ್ಯಮಗಳಲ್ಲಿ ಬರೆಯಲು ಪ್ರಾರಂಭಿಸಿದವರು ಬರವಣಿಗೆಯಲ್ಲಿ ಹೆಸರುಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಅಂತರಜಾಲದ ವ್ಯಾಪ್ತಿ ಹೆಚ್ಚಿದಂತೆ ಸ್ಥಳೀಯ ಭಾಷೆಗಳಲ್ಲಿನ ಮಾಹಿತಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯ ಸಾಕಷ್ಟು ದೊಡ್ಡ ಪಾಲು ಅನುವಾದಗಳಿಂದ ಪೂರೈಕೆಯಾಗಬೇಕು. ಅನುವಾದದ ಪ್ರಕ್ರಿಯೆಯಲ್ಲೂ ತಂತ್ರಜ್ಞಾನದ ನೆರವು ಗಣನೀಯವಾಗಬಲ್ಲದು. ಅನುವಾದವೆಂದರೆ ಗೂಗಲ್ ಟ್ರಾನ್ಸ್‌ಲೇಟ್ ಮಾತ್ರವೇ ಅಲ್ಲ, ಅನುವಾದ ಕ್ಷೇತ್ರದಲ್ಲಿ ಜಾಗತಿಕವಾಗಿ ಬಳಕೆಯಾಗುವ CAT (ಕಂಪ್ಯೂಟರ್ ಏಡೆಡ್ ಟ್ರಾನ್ಸ್‌ಲೇಶನ್) ಸಾಧನ-ಸಲಕರಣೆಗಳೂ ವೃತ್ತಿಪರರ ನೆರವಿಗೆ ಬರಬಲ್ಲವು.

ವೃತ್ತಿಪರ ಅನುವಾದಕರಷ್ಟೇ ಏಕೆ, ಹವ್ಯಾಸಿ ಅನುವಾದಕರು ಕೂಡ ತಂತ್ರಜ್ಞಾನದ ಸಹಾಯದಿಂದ ಹೊಸ ಮಾಹಿತಿಯನ್ನು ನಮ್ಮ ಭಾಷೆಗೆ ತರಬಹುದು. ಮಕ್ಕಳ ಕತೆಗಳನ್ನು ಅನುವಾದಿಸಲು ನೆರವಾಗುವ 'ಸ್ಟೋರಿವೀವರ್' ಜಾಲತಾಣವನ್ನು ಇಲ್ಲಿ ವಿಶೇಷವಾಗಿ ಉದಾಹರಿಸಬಹುದು. ವಿಶ್ವದ ಅನೇಕ ಭಾಷೆಗಳ ಕತೆಗಳನ್ನು ನಮ್ಮ ಭಾಷೆಗೆ, ನಮ್ಮ ಕತೆಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸುವುದನ್ನು ಈ ಜಾಲತಾಣ ಸುಲಭಸಾಧ್ಯವಾಗಿಸಿದೆ. ಅಷ್ಟೇ ಅಲ್ಲ, ಈ ಎಲ್ಲ ಕತೆಗಳನ್ನೂ ಉಚಿತವಾಗಿ ಓದಲು ಅನುವುಮಾಡಿಕೊಟ್ಟು ಮಕ್ಕಳಲ್ಲಿ ಓದುವ ಹವ್ಯಾಸವನ್ನೂ ಬೆಳೆಸುತ್ತಿದೆ.

ಹೊಸ ಸಾಹಿತ್ಯದ ಸೃಷ್ಟಿ ಹಾಗೂ ಅನುವಾದಗಳ ಜೊತೆಗೆ ಹಿಂದಿನ ಬರಹಗಳನ್ನು ಉಳಿಸಿಡುವುದು ಕೂಡ ಮಹತ್ವದ ಕೆಲಸ. ಮುದ್ರಿತ ಪುಸ್ತಕಗಳನ್ನು ಡಿಜಿಟಲ್ ರೂಪಕ್ಕೆ ತಂದು ಉಳಿಸಿಡುವುದು, ಮುದ್ರಿತ ಪುಟಗಳಲ್ಲಿರುವ ಅಕ್ಷರಗಳನ್ನು ಓಸಿಆರ್ ತಂತ್ರಜ್ಞಾನ ಬಳಸಿ ಮತ್ತೆ ಪಠ್ಯರೂಪಕ್ಕೆ ತರುವುದು, ಆ ಪಠ್ಯವನ್ನು ವಿಶ್ಲೇಷಿಸಿ ಹೆಚ್ಚಿನ ಅಧ್ಯಯನ ಸಾಧ್ಯವಾಗಿಸುವುದು ಸೇರಿದಂತೆ ತಂತ್ರಜ್ಞಾನದ ನೆರವಿನಿಂದ ನಾವು ಅನೇಕ ಕೆಲಸಗಳನ್ನು ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಇಂಟರ್‌ನೆಟ್ ಆರ್ಕೈವ್, ವಿಕಿಮೀಡಿಯ ಕಾಮನ್ಸ್ ಮುಂತಾದ ಜಾಗತಿಕ ಕಾರ್ಯಕ್ರಮಗಳು ನಡೆಸಿರುವ ಪ್ರಯತ್ನಗಳಲ್ಲಿ ಕನ್ನಡವೂ ಸ್ಥಾನ ಪಡೆದುಕೊಂಡಿದೆ. ಇಂತಹ ಪ್ರಯತ್ನಗಳ ಪರಿಣಾಮವಾಗಿ ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾದ ಕನ್ನಡದ ಬರಹಗಳು ಡಿಜಿಟಲ್ ಲೋಕವನ್ನು ಪ್ರವೇಶಿಸಿವೆ.

ಒಟ್ಟಾರೆಯಾಗಿ, ಸಾಹಿತ್ಯ ಸೃಷ್ಟಿಯ ಕೆಲಸವನ್ನು ತಂತ್ರಜ್ಞಾನಕ್ಕೆ ವಹಿಸಿಕೊಡುವ ತುತ್ತತುದಿಯ ಆಲೋಚನೆಗಿಂತ, ನಮ್ಮ ಕೆಲಸದ ಪರಿಣಾಮವನ್ನು ಅಧಿಕಗೊಳಿಸುವುದಕ್ಕೆ (augment) ತಂತ್ರಜ್ಞಾನವನ್ನು ಬಳಸುವ ಈ ಉದಾಹರಣೆಗಳು ಹೆಚ್ಚು ಬೇಗನೆ ಹಾಗೂ ಹೆಚ್ಚು ಸಮರ್ಥವಾಗಿ ನಮ್ಮ ನೆರವಿಗೆ ಬರಬಲ್ಲವು. ಅವುಗಳ ಬಳಕೆ ವ್ಯಾಪಕವಾದರೆ ಇನ್ನಷ್ಟು ಹೊಸ ಸಾಧ್ಯತೆಗಳೂ ತೆರೆದುಕೊಳ್ಳಬಲ್ಲವು. ಅಂತಹ ಸಾಧ್ಯತೆಗಳ ಬಗ್ಗೆ ಕುತೂಹಲ ಹಾಗೂ ಅವುಗಳ ನೆರವನ್ನು ಪಡೆದುಕೊಳ್ಳುವ ಆಸಕ್ತಿಯೊಂದನ್ನು ನಾವು ಬೆಳೆಸಿಕೊಂಡರೆ ಸಾಕು!

ಇದರ ಜೊತೆಗೆ ಆಗಬೇಕಾದ ಇನ್ನೊಂದು ಮುಖ್ಯ ಕೆಲಸ ಇದೆ. ಹೊಸ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವ ಲೇಖಕರನ್ನು-ಪ್ರಕಾಶಕರನ್ನು ಮುಕ್ತಮನಸ್ಸಿನಿಂದ ಬೆಂಬಲಿಸುವುದೇ ಆ ಕೆಲಸ. ಸಾರ್ವಜನಿಕರು, ಸಂಘಸಂಸ್ಥೆಗಳು ಹಾಗೂ ಸರಕಾರ ತಮ್ಮತಮ್ಮ ಮಟ್ಟದಲ್ಲಿ ಈ ಬೆಂಬಲ ನೀಡಿದಾಗ ಮಾತ್ರವೇ ಸಾಹಿತ್ಯದ ಬಿಸಿಬೇಳೆಬಾತ್ ಹಾಗೂ ತಂತ್ರಜ್ಞಾನದ ಉಪ್ಪೇರಿ ಇನ್ನಷ್ಟು ರುಚಿಕರವಾಗುವುದು ಸಾಧ್ಯವಾಗುತ್ತದೆ.

Related Stories

No stories found.
ಇಜ್ಞಾನ Ejnana
www.ejnana.com