ಕಲಿಕೆಯ ಹೊಸ ದಾರಿಗಳು
Alexandra_Koch / pixabay.com

ಕಲಿಕೆಯ ಹೊಸ ದಾರಿಗಳು

ಜಗತ್ತಿನೆಲ್ಲೆಡೆ ಬೇರೆಬೇರೆ ಕ್ಷೇತ್ರಗಳಲ್ಲಿ ಪ್ರತಿದಿನವೂ ಹೊಸ ವಿದ್ಯಮಾನಗಳು ನಡೆಯುತ್ತಿರುವ ಕಾಲ ಇದು. ಎಲ್ಲಿ ಏನು ನಡೆದರೆ ನನಗೇನಂತೆ, ನನ್ನ ಪಾಡಿಗೆ ನಾನು ಆರಾಮಾಗಿರುತ್ತೇನೆ ಎಂದು ಹೇಳುವ ಕಾಲವಂತೂ ಖಂಡಿತಾ ಅಲ್ಲ!

ಅಂತರಜಾಲ ಸಂಪರ್ಕವನ್ನು ಅನೇಕರು ಅನೇಕ ಉದ್ದೇಶಗಳಿಗೆ ಬಳಸುತ್ತಾರೆ. ಕೆಲವರಿಗೆ ಅದು ಹೊತ್ತು ಕಳೆಯುವ ದಾರಿಯಾದರೆ ಇನ್ನು ಕೆಲವರಿಗೆ ಅದೇ ಸಂಪಾದನೆಯ ಮಾರ್ಗ. ಹೀಗೆ ಎಲ್ಲರೂ ಅಂತರಜಾಲದ ಉಪಯೋಗವನ್ನು ಒಂದಲ್ಲ ಒಂದು ರೀತಿಯಲ್ಲಿ ಪಡೆದುಕೊಳ್ಳುತ್ತಿರುವಾಗ ವಿದ್ಯಾರ್ಥಿಗಳು ಅದನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು? ಈ ಪ್ರಶ್ನೆಗೆ ಅನೇಕ ಉತ್ತರಗಳಿರುವುದು ಸಾಧ್ಯ. ಅಂತರಜಾಲವನ್ನು ನಾವು ನಮ್ಮ ಕಲಿಕೆಗಾಗಿ ಬಳಸಿಕೊಳ್ಳಬಹುದು ಎನ್ನುವುದು ಇಂತಹ ಉತ್ತರಗಳಲ್ಲೊಂದು.

ಅಂತರಜಾಲದಲ್ಲಿ ಕಲಿಕೆ ಎಂದರೆ ಅದು ಕೇವಲ ಆನ್ಲೈನ್ ಕ್ಲಾಸ್‌ಗಳಲ್ಲಿ ಭಾಗವಹಿಸುವುದು ಮಾತ್ರವೇ ಆಗಬೇಕಿಲ್ಲ. ಪಠ್ಯಕ್ಕೆ ಪೂರಕವಾದ ಮಾಹಿತಿ ಪಡೆಯುವುದು, ನಮ್ಮ ಸಾಮಾನ್ಯಜ್ಞಾನವನ್ನು ಉತ್ತಮಪಡಿಸಿಕೊಳ್ಳುವುದು, ಹೊಸ ಕೌಶಲಗಳನ್ನು ಕಲಿಯುವುದು ಸೇರಿದಂತೆ ಅನೇಕ ಕೆಲಸಗಳಲ್ಲಿ ಅಂತರಜಾಲ ನಮಗೆ ನೆರವಾಗಬಲ್ಲದು.

ವಿಶ್ವವ್ಯಾಪಿ ಜಾಲದಲ್ಲಿ (ವರ್ಲ್ಡ್‌ವೈಡ್ ವೆಬ್) ಅಗಾಧ ಪ್ರಮಾಣದ ಮಾಹಿತಿ ನಮ್ಮ ಬೆರಳ ತುದಿಯಲ್ಲೇ ಇರುತ್ತದೆ, ನಿಜ. ಆದರೆ ಎಲ್ಲ ವಿಷಯಗಳ ಬಗ್ಗೆ ನಮಗೆ ಬೇಕಾದ ಎಲ್ಲ ಮಾಹಿತಿಯೂ ಎಲ್ಲ ಕಡೆಯೂ ಸಿಗುತ್ತದೆ ಎನ್ನುವಂತಿಲ್ಲ. ಯಾವುದೇ ವಿಷಯದ ಬಗ್ಗೆ ಸಾಮಾನ್ಯ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಬೇಕಾದ ಮಾಹಿತಿ ಸಿಗುತ್ತದೆ ಎಂದುಕೊಂಡರೂ ಅದೇ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕೆಂದರೆ ಪೂರಕ ಮಾಹಿತಿ ಸುಲಭಕ್ಕೆ ಸಿಗುವುದಿಲ್ಲ.

ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದು ಹೇಗೆ? ಬೇಕಾದ ವಿಷಯದ ಕುರಿತು ಬೇಕಾದ ಮಟ್ಟದ ಮಾಹಿತಿ, ನಮಗೆ ಬೇಕಾದ ಸಂದರ್ಭದಲ್ಲಿ ಸಿಗುವಂತೆ ಮಾಡಿಕೊಳ್ಳುವುದು ಹೇಗೆ? ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೆಲ ಪರಿಕಲ್ಪನೆಗಳು ಈ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡುತ್ತಿವೆ. ಅಂತಹ ಪರಿಕಲ್ಪನೆಗಳಿಗೆ 'ಓಪನ್ ನಾಲೆಜ್', ಅಂದರೆ ಮುಕ್ತಜ್ಞಾನ ಒಂದು ಉದಾಹರಣೆ.

ವಿವಿಧ ವಿಷಯಗಳನ್ನು ಕುರಿತ ವಿವಿಧ ಬಗೆಯ ಮಾಹಿತಿ ಅದರ ಅಗತ್ಯವಿರುವವರಿಗೆ ಮುಕ್ತವಾಗಿ ಸಿಗಬೇಕು, ಮತ್ತು ಆ ಮಾಹಿತಿಯನ್ನು ಸಾಮಾಜಿಕ - ಕಾನೂನಾತ್ಮಕ - ತಾಂತ್ರಿಕ ನಿರ್ಬಂಧಗಳಾವುದರ ಗೊಡವೆಯೂ ಇಲ್ಲದೆ ಮುಕ್ತವಾಗಿ ಬಳಸುವುದು - ಹಂಚುವುದು ಸಾಧ್ಯವಾಗಬೇಕು ಎಂದು 'ಓಪನ್ ನಾಲೆಜ್' ಪರಿಕಲ್ಪನೆ ಹೇಳುತ್ತದೆ. ಹೀಗೆ ಬಳಸುವುದು ಮತ್ತು ಪಸರಿಸುವುದು ಮಾತ್ರವೇ ಅಲ್ಲ, ಮುಕ್ತಜ್ಞಾನದ ಭಂಡಾರವನ್ನು ಬೆಳೆಸುವಲ್ಲಿ ಕೂಡ ಯಾರು ಬೇಕಾದರೂ ನೆರವಾಗಬಹುದು. ತಂತ್ರಾಂಶಗಳು ಹಾಗೂ ಅದರ ಸೋರ್ಸ್ ಕೋಡ್ (ಆಕರ ಸಂಕೇತ) ಎಲ್ಲರಿಗೂ ಮುಕ್ತವಾಗಿ ದೊರಕುವಂತಾಗಬೇಕು ಎಂಬ ಉದ್ದೇಶದೊಡನೆ ಸಾಫ್ಟ್‌ವೇರ್ ರಂಗದಲ್ಲಿ ಚಾಲ್ತಿಯಲ್ಲಿರುವ ಓಪನ್‌ಸೋರ್ಸ್ ಪರಿಕಲ್ಪನೆಯನ್ನು ಜ್ಞಾನಪ್ರಸರಣಕ್ಕೂ ಅನ್ವಯಿಸಿರುವುದು ಓಪನ್ ನಾಲೆಜ್‌ನ ವೈಶಿಷ್ಟ್ಯ.

ಮುಕ್ತಜ್ಞಾನದ ಪ್ರಸರಣದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳಿಗೆ ವಿಕಿಮೀಡಿಯ ಫೌಂಡೇಶನ್ ಒಂದು ಜನಪ್ರಿಯ ಉದಾಹರಣೆ. ಕನ್ನಡ, ತುಳು ಸೇರಿದಂತೆ ವಿಶ್ವದ ಹಲವು ಭಾಷೆಗಳಲ್ಲಿ ವಿಕಿಪೀಡಿಯ ಮುಕ್ತ ವಿಶ್ವಕೋಶವನ್ನು ನಡೆಸುತ್ತಿರುವುದು ಇದೇ ಸಂಸ್ಥೆ. ಯಾವುದೇ ವಿಷಯದ ಬಗ್ಗೆ ತಿಳಿದುಕೊಂಡಿರುವ, ಮಾಹಿತಿ ಹಂಚಿಕೊಳ್ಳುವ ಆಸಕ್ತಿಯಿರುವ ಯಾರು ಬೇಕಾದರೂ ವಿಕಿಪೀಡಿಯದಲ್ಲಿ ನೋಂದಾಯಿಸಿಕೊಂಡು ಲೇಖನಗಳನ್ನು ಬರೆಯಬಹುದು. ಅಷ್ಟೇ ಅಲ್ಲ, ಬೇರೆ ಲೇಖನಗಳಲ್ಲಿರುವ ಮಾಹಿತಿ ತಪ್ಪು ಅಥವಾ ಅಪೂರ್ಣ ಎನಿಸಿದರೆ ಅದನ್ನೂ ಸರಿಪಡಿಸಬಹುದು. ಜಾಗತಿಕ ಸಂಸ್ಥೆಯಾದ ವಿಶ್ವಬ್ಯಾಂಕ್ ಕೂಡ 'ಓಪನ್ ನಾಲೆಜ್ ರಿಪಾಸಿಟರಿ' ಎಂಬ ಸಂಗ್ರಹದಲ್ಲಿ ತನ್ನ ಪ್ರಕಟಣೆಗಳನ್ನು ಮುಕ್ತವಾಗಿ ತೆರೆದಿಟ್ಟಿದೆ.

ಯಾವುದೇ ವಿಷಯದ ಬಗ್ಗೆ ಪ್ರಾಥಮಿಕ ವಿವರಗಳನ್ನು ತಿಳಿದುಕೊಳ್ಳಲು ಇಂತಹ ಸೌಲಭ್ಯಗಳು ನೆರವಾಗುತ್ತವೆ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ಈ ಪೈಕಿ ಯಾವುದಾದರೂ ವಿಷಯ ಕುರಿತು ಉನ್ನತ ಅಧ್ಯಯನ ಕೈಗೊಳ್ಳಬೇಕು ಎಂದರೆ ಅದಕ್ಕೆ ಬೇಕಾದ ಮಾಹಿತಿ ಎಲ್ಲಿ ಸಿಗಬಹುದು? ಈ ಪ್ರಶ್ನೆಗೆ ಉತ್ತರ ಹೇಳುವ ಪರಿಕಲ್ಪನೆಯೇ 'ಓಪನ್ ಎಜುಕೇಶನಲ್ ರಿಸೋರ್ಸಸ್'.

ಯಾವುದೇ ಹಂತದ ಕಲಿಕೆಗಾಗಿ ಮುಕ್ತವಾಗಿ ಬಳಸಬಹುದಾದ ಸಂಪನ್ಮೂಲಗಳನ್ನು ಒಟ್ಟಾಗಿ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಅಥವಾ ಓಪನ್ ಎಜುಕೇಶನಲ್ ರಿಸೋರ್ಸಸ್ ಎಂದು ಕರೆಯುತ್ತಾರೆ. ಇಂತಹ ಎಲ್ಲ ಸಂಪನ್ಮೂಲಗಳನ್ನೂ ಯಾವುದೇ ಶುಲ್ಕ ಅಥವಾ ನಿರ್ಬಂಧವಿಲ್ಲದೆ ಬಳಸುವುದು ಹಾಗೂ ಇತರರೊಡನೆ ಹಂಚಿಕೊಳ್ಳುವುದು ಸಾಧ್ಯ.

ಕಲಿಕೆಯ ಹೊಸ ದಾರಿಗಳು
ಓದಿ+ನೋಡಿ: MOOC ಅಂದರೆ ಏನು?

'ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್'ಗಳ ಪರಿಕಲ್ಪನೆ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಉತ್ತಮ ಉದಾಹರಣೆಗಳಲ್ಲೊಂದು. ವಿವಿಧ ವಿಷಯಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಒದಗಿಸುವುದು ಈ ಪರಿಕಲ್ಪನೆಯ ಉದ್ದೇಶ. ವಿಶ್ವವ್ಯಾಪಿ ಜಾಲದ ಮೂಲಕ ಮುಕ್ತವಾಗಿ ಲಭ್ಯವಿರುವುದು, ಮತ್ತು ಯಾರು ಎಲ್ಲಿಂದ ಬೇಕಾದರೂ ಸೇರಲು ಸಾಧ್ಯವಿರುವುದು ಈ ಕೋರ್ಸ್‌ಗಳ ವೈಶಿಷ್ಟ್ಯ. ಪಾಠದ ವೀಡಿಯೊಗಳು, ಬಹುಮಾಧ್ಯಮ ಪ್ರಸ್ತುತಿಗಳು, ಓದಿಕೊಳ್ಳಲು ಪೂರಕ ಸಾಮಗ್ರಿ, ಪಾಠ ಹಾಗೂ ಕೋರ್ಸಿನ ಕೊನೆಗೆ ಪರೀಕ್ಷೆ - ಹೀಗೆ ವಿವಿಧ ಅಂಶಗಳು ಇಂತಹ ಕೋರ್ಸ್‌ಗಳಲ್ಲಿ ಇರುವುದು ಸಾಧ್ಯ. ಸಾಮಾನ್ಯವಾಗಿ ಇವುಗಳನ್ನು ವಿಶ್ವವಿದ್ಯಾನಿಲಯಗಳು, ಸರಕಾರಗಳು, ಹಾಗೂ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತವೆ. ಸ್ಥಳ ಹಾಗೂ ಸಮಯ ಮಾತ್ರವೇ ಅಲ್ಲ, ಈ ಕೋರ್ಸ್‌ಗಳಿಗೆ ಭಾಷೆ ಹಾಗೂ ವಿಷಯದ ಮಿತಿಯೂ ಇಲ್ಲ - ಕಂಪ್ಯೂಟರ್ ವಿಜ್ಞಾನ, ಇಂಜಿನಿಯರಿಂಗ್, ವಾಣಿಜ್ಯ ಅಧ್ಯಯನ, ನಿರ್ವಹಣೆ, ಸಂವಹನ, ಜೀವವಿಜ್ಞಾನ ಹೀಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಮ್ಯಾಸಿವ್ ಓಪನ್ ಆನ್‌ಲೈನ್ ಕೋರ್ಸ್‌ಗಳು ಪ್ರಪಂಚದ ಹಲವು ಭಾಷೆಗಳಲ್ಲಿ ಲಭ್ಯವಿವೆ. ಇಂತಹ ಕೋರ್ಸ್‌ಗಳನ್ನು ಒದಗಿಸಲು ಭಾರತ ಸರಕಾರದ ಶಿಕ್ಷಣ ಇಲಾಖೆ ರೂಪಿಸಿರುವ 'ಸ್ವಯಂ' ವೇದಿಕೆಯಲ್ಲಿ ಒಂದಷ್ಟು ಕನ್ನಡದ ಮಾಹಿತಿಯೂ ಇದೆ.

ಇಂತಹ ಕೋರ್ಸ್‌ಗಳು ಉಚಿತವಾಗಿರಬೇಕು ಎಂದು ಅದರ ಮೂಲ ಪರಿಕಲ್ಪನೆ ಹೇಳುತ್ತದೆಯಾದರೂ, ಕೊಂಚ ಬದಲಾವಣೆಯ ಜೊತೆ ಅದನ್ನು ಅಳವಡಿಸಿಕೊಂಡಿರುವ ವಾಣಿಜ್ಯ ಸಂಸ್ಥೆಗಳೂ ಇವೆ. ಅಂತಹ ಸಂಸ್ಥೆಗಳು ಕೋರ್ಸ್‌ಗಾಗಿ ಇಂತಿಷ್ಟು ಶುಲ್ಕ ನಿಗದಿಪಡಿಸಿರುತ್ತವೆ ಅಥವಾ ಪರೀಕ್ಷೆ ಪಾಸುಮಾಡಿದ ಪ್ರಮಾಣಪತ್ರ ಬೇಕು ಎಂದರೆ ಮಾತ್ರ ಶುಲ್ಕವನ್ನು ಅಪೇಕ್ಷಿಸುತ್ತವೆ. ಇಲ್ಲಿನ ಕೋರ್ಸ್‌ಗಳಲ್ಲಿ ಭಾಗವಹಿಸುವುದು ಮಾತ್ರವಲ್ಲದೆ ನಮ್ಮ ಪರಿಣತಿಯ ವಿಷಯವನ್ನು ಇತರರಿಗೆ ಬೋಧಿಸುವ, ಅವರಿಂದ ಶುಲ್ಕ ಪಡೆಯುವ ಅವಕಾಶ ಕೂಡ ನಮಗೆ ಸಿಗುತ್ತದೆ. ಇಂತಹ ವೇದಿಕೆಗಳಲ್ಲಿ ಪರೀಕ್ಷಾ ಸಿದ್ಧತೆ, ಭಾಷಾ ಕಲಿಕೆ, ಪ್ರೋಗ್ರಾಮಿಂಗ್ ಅಭ್ಯಾಸ, ಹವ್ಯಾಸಗಳ ಅಭಿವೃದ್ಧಿ ಮುಂತಾದ ಹಲವು ವಿಷಯಗಳನ್ನು ಬೋಧಿಸುತ್ತಿರುವ ಅನೇಕರು ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದಾರೆ.

ಸಂಪೂರ್ಣ ಕೋರ್ಸ್‌ಗಳಷ್ಟೇ ಅಲ್ಲದೆ ವಿವಿಧ ವಿಶ್ವವಿದ್ಯಾನಿಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸಲು ಬಳಸುವ ಪಠ್ಯಸಾಮಗ್ರಿಯನ್ನೂ ನಾವು ವಿಶ್ವವ್ಯಾಪಿ ಜಾಲದಲ್ಲಿ ಮುಕ್ತವಾಗಿ ಪಡೆದುಕೊಳ್ಳಬಹುದು. ಇದಕ್ಕೆ ಓಪನ್ ಕೋರ್ಸ್‌ವೇರ್ ಎಂಬ ಹೆಸರಿದೆ. ಜಗತ್ತಿನ ಹಲವು ಪ್ರಮುಖ ಶಿಕ್ಷಣಸಂಸ್ಥೆಗಳು ವಿವಿಧ ಜಾಲತಾಣಗಳ ಮೂಲಕ ತಮ್ಮ ಪಠ್ಯಸಾಮಗ್ರಿಯನ್ನು ಹೀಗೆ ಹಂಚಿಕೊಳ್ಳುತ್ತಿವೆ. ಈ ಪಠ್ಯಸಾಮಗ್ರಿಯ ಓದು, ವಿಶ್ವದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ನಮ್ಮ ಅಧ್ಯಯನದ ವಿಷಯವನ್ನು ಹೇಗೆ ಬೋಧಿಸಲಾಗುತ್ತಿದೆ ಎನ್ನುವುದನ್ನು ತಿಳಿಯಲು ಇತರೆಡೆಯ ವಿದ್ಯಾರ್ಥಿಗಳಿಗೆ ನೆರವಾಗಬಲ್ಲದು.

ಪಠ್ಯಸಾಮಗ್ರಿ ಮಾತ್ರವೇ ಏಕೆ, ಬೇರೆಡೆಯ ವಿಶ್ವವಿದ್ಯಾನಿಲಯಗಳು ಬೋಧಿಸುವ ಕೋರ್ಸಿಗೇ ಸೇರಿಕೊಳ್ಳಬಹುದಲ್ಲ ಎಂದಿರಾ? ಅದೂ ಸಾಧ್ಯವಿದೆ. ದೂರಶಿಕ್ಷಣದ (ಡಿಸ್ಟೆನ್ಸ್ ಲರ್ನಿಂಗ್) ಪರಿಕಲ್ಪನೆ ಇದೀಗ ಅಂತರಜಾಲದ ಸಹಾಯ ಪಡೆದು 'ಓಪನ್ ಆಂಡ್ ಡಿಸ್ಟೆನ್ಸ್ ಲರ್ನಿಂಗ್' ಎಂಬ ಹೆಸರಿನ, ದೂರಶಿಕ್ಷಣದ ಈ ಆನ್‌ಲೈನ್ ಅವತಾರವು ಕಲಿಕೆಯ ಭೌಗೋಳಿಕ ಮಿತಿಗಳನ್ನು ತಕ್ಕಮಟ್ಟಿಗೆ ನಿವಾರಿಸುತ್ತದೆ. ದೂರದಲ್ಲೆಲ್ಲೋ ಇರಬಹುದಾದ ವಿದ್ಯಾಸಂಸ್ಥೆಯ ಶಿಕ್ಷಕರು ನಡೆಸುವ ತರಗತಿಗಳಲ್ಲಿ ನಮ್ಮ ಮನೆಯಲ್ಲಿ ಕುಳಿತೇ ಭಾಗವಹಿಸುವುದನ್ನು, ಬೇರೆಬೇರೆ ಊರುಗಳಿಂದ ಸೇರಿರುವ ವಿದ್ಯಾರ್ಥಿಗಳೊಡನೆ ವಿಚಾರ ವಿನಿಮಯ ಮಾಡಿಕೊಳ್ಳುವುದನ್ನು ಈ ಪರಿಕಲ್ಪನೆ ಸಾಧ್ಯವಾಗಿಸುತ್ತದೆ. ಇಂತಹ ಕೋರ್ಸುಗಳನ್ನು ಮುಗಿಸಿ ಮನೆಯಲ್ಲೇ ಪರೀಕ್ಷೆ ಬರೆಯಬಹುದು, ಪ್ರಮಾಣಪತ್ರವನ್ನೂ ಪಡೆದುಕೊಳ್ಳಬಹುದು. ದೇಶವಿದೇಶಗಳ ಹಲವು ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಇಂತಹ ಕೋರ್ಸುಗಳನ್ನು ಈಗಾಗಲೇ ನಡೆಸುತ್ತಿದ್ದು ಅವುಗಳ ಶುಲ್ಕ ಹಲವು ಸಾವಿರಗಳಿಂದ ಕೆಲ ಲಕ್ಷಗಳವರೆಗೂ ಇರುವುದು ಸಾಧ್ಯ. ಇಂತಹ ಕೋರ್ಸುಗಳನ್ನು ನಮಗೆ ದೊರಕಿಸುವ ಹಲವು ಆನ್‌ಲೈನ್ ವೇದಿಕೆಗಳನ್ನು ನಮ್ಮದೇ ದೇಶದ ಶೈಕ್ಷಣಿಕ ತಂತ್ರಜ್ಞಾನ (ಎಡ್-ಟೆಕ್) ಸಂಸ್ಥೆಗಳು ರೂಪಿಸಿವೆ.

'ಬಾಲವಿಜ್ಞಾನ'ದಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com