ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಂಡ ಜಾಲಗೋಷ್ಠಿಗಳು, ವಿಜ್ಞಾನ ಸಂವಹನದಲ್ಲೂ ಮಹತ್ವದ ಪಾತ್ರ ವಹಿಸುತ್ತಿವೆ.
ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಂಡ ಜಾಲಗೋಷ್ಠಿಗಳು, ವಿಜ್ಞಾನ ಸಂವಹನದಲ್ಲೂ ಮಹತ್ವದ ಪಾತ್ರ ವಹಿಸುತ್ತಿವೆ.Image by Alexandra_Koch from Pixabay

ವಿಜ್ಞಾನ ಜಗತ್ತಿಗೆ ಕರೆದೊಯ್ಯುವ ಜಾಲಗೋಷ್ಠಿಗಳು

ಅಂತರಜಾಲದಲ್ಲಿ ಸೆಮಿನಾರ್‌ ಆಯೋಜಿಸುವುದು ಹೊಸ ವಿಷಯವೇನಲ್ಲ. ಮೊದಲ ಲಾಕ್‌ಡೌನ್ ಸಂದರ್ಭದಲ್ಲಿ ತನ್ನ ವ್ಯಾಪ್ತಿಯನ್ನು ದಿಢೀರನೆ ಹೆಚ್ಚಿಸಿಕೊಂಡ ಈ ಪರಿಕಲ್ಪನೆ, ವಿಜ್ಞಾನ ಸಂವಹನದಲ್ಲೂ ಮಹತ್ವದ ಪಾತ್ರ ವಹಿಸುತ್ತಿದೆ!

ಸೆಮಿನಾರ್ ಎಂದರೆ ವಿಚಾರಗೋಷ್ಠಿ. ನಿಘಂಟಿನ ಪ್ರಕಾರ, "ಒಂದು ವಿಷಯದ ಬಗ್ಗೆ ಚರ್ಚೆ ಯಾ ಅಧ್ಯಯನ ಮಾಡುವ ಗೋಷ್ಠಿ". ಇಂತಹ ಗೋಷ್ಠಿಗಳನ್ನು ಬಹಳ ಹಿಂದಿನಿಂದಲೂ ಆಯೋಜಿಸಲಾಗುತ್ತಿದೆ. ಬಹುಪಾಲು ಸೆಮಿನಾರುಗಳು ಭೌತಿಕವಾಗಿಯೇ ನಡೆಯುತ್ತವಾದರೂ ಅಂತರಜಾಲದ ಮೂಲಕ ಪಾಲ್ಗೊಳ್ಳಬಹುದಾದ ಡಿಜಿಟಲ್ ವಿಚಾರಗೋಷ್ಠಿಗಳ ಆಯೋಜನೆಯೂ ಅಪರೂಪವೇನಲ್ಲ. 'ವೆಬ್‌'ನಲ್ಲಿ ನಡೆಯುವ ಇಂತಹ 'ಸೆಮಿನಾರ್'ಗಳನ್ನೇ ವೆಬಿನಾರ್‌ಗಳೆಂದು ಕರೆಯಲಾಗುತ್ತದೆ. ಇವನ್ನು ಕನ್ನಡದಲ್ಲಿ ಜಾಲಗೋಷ್ಠಿ ಎಂದೂ ಕರೆಯಬಹುದು. ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಬಳಸಿ ಎಲ್ಲಿಂದಲಾದರೂ ಪಾಲ್ಗೊಳ್ಳಬಹುದಾದದ್ದು ಈ ಗೋಷ್ಠಿಗಳ ಹೆಗ್ಗಳಿಕೆ.

ವೆಬಿನಾರುಗಳ ವ್ಯಾಪ್ತಿಯಲ್ಲಿ ದಿಢೀರ್ ಹೆಚ್ಚಳವಾದದ್ದು ಕಳೆದ ವರ್ಷದ ಲಾಕ್‌ಡೌನ್ ಸಂದರ್ಭದಲ್ಲಿ. ಶಾಲೆಗಳು ಮುಚ್ಚಿದಾಗ ಮಕ್ಕಳ ಶಿಕ್ಷಣ ಆನ್‌ಲೈನ್ ಆದಹಾಗೆ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ ಎನ್ನುವ ನಿಯಮ ಸೆಮಿನಾರುಗಳನ್ನು ವೆಬಿನಾರುಗಳನ್ನಾಗಿ ಬದಲಿಸಿತು. ಹಲವು ವಿಷಯಗಳನ್ನು ಕುರಿತ ಗೋಷ್ಠಿಗಳು, ಅದೂ ಕನ್ನಡದಲ್ಲಿ, ಒಂದರ ಹಿಂದೊಂದರಂತೆ ನಡೆಯತೊಡಗಿದವು.

ಈ ಪೈಕಿ ವಿಶೇಷವಾಗಿ ನಮ್ಮ ಗಮನ ಸೆಳೆದದ್ದು ವಿಜ್ಞಾನಕ್ಕೆ ಸಂಬಂಧಪಟ್ಟ ಜಾಲಗೋಷ್ಠಿಗಳು. ಕೋವಿಡ್-೧೯ ಜಾಗತಿಕ ಸೋಂಕಿನಿಂದಾಗಿ ಹಲವು ಹೊಸ ಸವಾಲುಗಳು ಎದುರಾಗುತ್ತಿದ್ದ ಸಂದರ್ಭದಲ್ಲಿ ಪರಿಣತರಿಂದ ಮಾಹಿತಿ ಪಡೆಯುವ ಅವಕಾಶವನ್ನು ಇಂತಹ ಗೋಷ್ಠಿಗಳು ಒದಗಿಸಿಕೊಟ್ಟವು. ಭಾರತದಲ್ಲಿ ಪಿಪಿಇ ಕಿಟ್ ತಯಾರಿಕೆ ಪ್ರಾರಂಭಿಸಿದ್ದರ ಕುರಿತು ಆಯೋಜಿಸಲಾಗಿದ್ದ 'ಸ್ವದೇಶಿ ರಕ್ಷಕ ದಿರಿಸಿನ ಕಥೆ' ಎಂಬ ಕನ್ನಡ ಜಾಲಗೋಷ್ಠಿಯಲ್ಲಿ (ಜುಲೈ ೨೦೨೦) ಸ್ವತಃ ಸಿಎಸ್‌ಐಆರ್ ಮಹಾನಿರ್ದೇಶಕರೇ ಭಾಗವಹಿಸಿದ್ದದ್ದು ವಿಶೇಷ.

ಇಂತಹ ಜಾಲಗೋಷ್ಠಿಗಳ ಆಯೋಜನೆ ಆನಂತರವೂ ಸತತವಾಗಿ ಮುಂದುವರೆದಿದೆ ಎನ್ನುವುದು ಖುಷಿಯ ಸಂಗತಿ. ವಿಜ್ಞಾನ ಪ್ರಸಾರ್ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದ 'ಕುತೂಹಲಿ' ಕನ್ನಡ ವಿಜ್ಞಾನ ಸಂವಹನ, ಪ್ರಚಾರ ಹಾಗೂ ವಿಸ್ತರಣೆಯ ಚಳುವಳಿ, ಇಂತಹ ಗೋಷ್ಠಿಗಳ ಆಯೋಜಕರ ಪೈಕಿ ಮುಂಚೂಣಿಯಲ್ಲಿರುವ ಹೆಸರು.

ಕುತೂಹಲಿ ಜಾಲಗೋಷ್ಠಿಗಳ ಆಯೋಜನೆಯಲ್ಲಿ ಮೈಸೂರಿನ ಸ್ವಾಮಿ ವಿವೇಕಾನಂದ ಯೂಥ್ ಮೂವ್‌ಮೆಂಟ್‌ ಕೂಡ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. "ವಿಜ್ಞಾನ ವಿಷಯಗಳ ಬಗ್ಗೆ ಅಷ್ಟು ಸುಲಭಕ್ಕೆ ಸಿಗದ ಮಾಹಿತಿಯನ್ನು ಸರಳವಾಗಿ ಹಾಗೂ ಸ್ಫುಟವಾಗಿ ತಿಳಿದುಕೊಳ್ಳುವ ಅವಕಾಶವನ್ನು ಈ ವೆಬಿನಾರ್‌ಗಳು ಒದಗಿಸುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಾಹಿತಿಯ ಮಹಾಪೂರದಲ್ಲಿ ನಮಗೆ ಉಪಯುಕ್ತವಾದ ಮಾಹಿತಿಯನ್ನು ನಮ್ಮದೇ ಭಾಷೆಯಲ್ಲಿ ಇಲ್ಲಿ ಪಡೆದುಕೊಳ್ಳಬಹುದು. ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿಕೊಂಡಿರುವವರ ಮಾತುಗಳನ್ನು ನೇರವಾಗಿ ಕೇಳುವ, ಅವರೊಡನೆ ಮಾತನಾಡುವ ಅವಕಾಶವೂ ಸಾಮಾನ್ಯ ಜನತೆಯ ಪಾಲಿಗೆ ಮಹತ್ವದ್ದು," ಎಂದು ಎಸ್‌ವಿವೈಎಂ‌ನ ಪ್ರವೀಣ್ ಕುಮಾರ್ ಹೇಳುತ್ತಾರೆ.

ಕುತೂಹಲಿ ಈಗಾಗಲೇ ವಿವಿಧ ವಿಷಯಗಳನ್ನು ಕುರಿತ ಹಲವು ಜಾಲಗೋಷ್ಠಿಗಳನ್ನು ನಡೆಸಿಕೊಟ್ಟಿದೆ. 'ಸಂವಹನ, ಭಾಷೆ, ಮಾತು ಮತ್ತು ಮಿದುಳು', 'ನಡುಕ ತರುವ ಪಾರ್ಕಿನ್ಸನ್: ಒಂದು ಪರಿಚಯ', 'ಲಿವರ್ ಮತ್ತು ಬೊಜ್ಜು', 'ಕೋವಿಡ್ ನಂತರದ ಮಾನಸಿಕ ಸಮಸ್ಯೆಗಳು', 'ಮ್ಯೂಕರ್ ಮೈಕೋಸಿಸ್', 'ಕರ್ನಾಟಕದ ಬಾವಲಿಗಳು', 'ಭುವಿಯ ಗಡಿ ಅಂಟಾರ್ಕ್ಟಿಕಾ', 'ಅಡುಗೆ ಮನೆ ಕೆಮಿಸ್ಟ್ರಿ', 'ಪ್ರಯೋಗಾಲಯದ ರೂಪದರ್ಶಿಗಳು' - ಹೀಗೆ ಸಾಮಾನ್ಯರಿಗೂ ಪ್ರಸ್ತುತವೆನಿಸುವ, ಆಸಕ್ತಿಹುಟ್ಟಿಸುವ ವಿಷಯಗಳ ಬಗ್ಗೆ ಈ ಜಾಲಗೋಷ್ಠಿಗಳಲ್ಲಿ ವಿಚಾರವಿನಿಮಯ ನಡೆದಿದೆ. ಈ ಗೋಷ್ಠಿಗಳನ್ನು ಪ್ರತಿ ಶುಕ್ರವಾರ ಆಯೋಜಿಸಲಾಗುತ್ತಿದ್ದು, ಆ ಕುರಿತು ಹೆಚ್ಚಿನ ವಿವರಗಳನ್ನು 'ಕುತೂಹಲಿ' ಫೇಸ್‌ಬುಕ್ ಪುಟದಲ್ಲಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲ, ಈವರೆಗಿನ ವೆಬಿನಾರ್‌ಗಳ ರೆಕಾರ್ಡಿಂಗ್ ಅನ್ನು ಯೂಟ್ಯೂಬ್‌ನಲ್ಲೂ ವೀಕ್ಷಿಸಬಹುದು.

'ಕುತೂಹಲಿ' ಜಾಲಗೋಷ್ಠಿಗಳನ್ನು ಪ್ರತಿ ಶುಕ್ರವಾರ ಆಯೋಜಿಸಲಾಗುತ್ತಿದೆ
'ಕುತೂಹಲಿ' ಜಾಲಗೋಷ್ಠಿಗಳನ್ನು ಪ್ರತಿ ಶುಕ್ರವಾರ ಆಯೋಜಿಸಲಾಗುತ್ತಿದೆfacebook.com/Kutuhali

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೂಡ ವಿಜ್ಞಾನ ಜಾಲಗೋಷ್ಠಿಗಳನ್ನು ಸತತವಾಗಿ ಆಯೋಜಿಸುತ್ತಿದೆ. ಖ್ಯಾತ ಸಂಪನ್ಮೂಲ ತಜ್ಞರು ಪಾಲ್ಗೊಳ್ಳುವ ಈ ವೆಬಿನಾರ್‌‍ಗಳು ಮೂಲ ವಿಜ್ಞಾನ ಮತ್ತು ತಂತ್ರಜ್ಞಾನದ ಅಧ್ಯಯನಕ್ಕೆ ಪೂರಕವಾಗಿವೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಿಇಒ ಡಾ. ಎ. ಎಂ. ರಮೇಶ್ ಹೇಳುತ್ತಾರೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ವಿಷಯಗಳಲ್ಲಿ ಜ್ಞಾನದ ಪರಿಧಿಯನ್ನು ವಿಸ್ತರಿಸಿಕೊಳ್ಳಲು ಈ ಜಾಲಗೋಷ್ಠಿಗಳು ಅನುವುಮಾಡಿಕೊಡುತ್ತವೆ ಎನ್ನುವುದು ಅವರ ಅಭಿಪ್ರಾಯ. ಸದ್ಯ ಅಕಾಡೆಮಿ ವತಿಯಿಂದ 'ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ವಿಜ್ಞಾನ ಮತ್ತು ತಂತ್ರಜ್ಞಾನ ಉಪನ್ಯಾಸ ಮಾಲೆ'ಯನ್ನು ಆಯೋಜಿಸಲಾಗಿದ್ದು ಆ ಕುರಿತ ಹೆಚ್ಚಿನ ಮಾಹಿತಿ ಅಕಾಡೆಮಿ ಜಾಲತಾಣದಲ್ಲಿ ಲಭ್ಯವಿದೆ.

ಈ ಹಿಂದೆ ಭೌತಿಕವಾಗಿ ನಡೆಯುತ್ತಿದ್ದ ಉಪನ್ಯಾಸಗಳೂ ಇದೀಗ ಡಿಜಿಟಲ್ ಜಗತ್ತನ್ನು ಪ್ರವೇಶಿಸಿವೆ. ಕೋವಿಡ್‌ ಮುನ್ನ ಚಾಮರಾಜನಗರದಲ್ಲಿ ಪ್ರತಿ ತಿಂಗಳೂ ವಿಜ್ಞಾನ ಉಪನ್ಯಾಸಗಳನ್ನು ಆಯೋಜಿಸುತ್ತಿದ್ದ ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌ ಇದೀಗ ತನ್ನ ಕಾರ್ಯಕ್ರಮಗಳನ್ನು ವೆಬಿನಾರ್‌ ರೂಪಕ್ಕೆ ಬದಲಿಸಿದೆ. "ತಿಂಗಳ ಆನ್ಲೈನ್ ವಿಜ್ಞಾನ ಉಪನ್ಯಾಸ ಸರಣಿಯ ಈ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿವೆ. ಇಂತಹ ಕಾರ್ಯಕ್ರಮಗಳನ್ನು ಗ್ರಾಮೀಣ ಶಾಲೆಗಳಿಗೂ ತಲುಪಿಸುವ ಉದ್ದೇಶದಿಂದ ನಮ್ಮ ಸಂಸ್ಥೆ ಹಲವೆಡೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ. ಉಪನ್ಯಾಸಗಳ ಆಯೋಜನೆಗೆ ಬೇಕಾದ ತಾಂತ್ರಿಕ ಸಹಕಾರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ದೊರೆತಿದೆ. ಈವರೆಗೆ ಭಾಗವಹಿಸಿರುವ ಎಲ್ಲ ವಿಷಯ ತಜ್ಞರೂ ಯಾವುದೇ ಸಂಭಾವನೆಯ ಅಪೇಕ್ಷೆಯಿಲ್ಲದೆ ಉಪನ್ಯಾಸಗಳನ್ನು ನೀಡಿರುವುದು ಈ ಸರಣಿಯ ವೈಶಿಷ್ಟ್ಯ," ಎಂದು ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌‌ನ ಅಭಿಷೇಕ್ ಎ. ಎಸ್. ಹೇಳುತ್ತಾರೆ. ಗ್ರ್ಯಾವಿಟಿ ಸೈನ್ಸ್‌ ಫೌಂಡೇಷನ್‌‌ ಸಂಸ್ಥೆಯು ೨೦೨೦ನೇ ಸಾಲಿನಲ್ಲಿ ವಿಜ್ಞಾನ ಪ್ರಸಾರ್‌ನ ವಿಜ್ಞಾನ ಸಂಘಗಳ ಜಾಲದ (VIPNET) ಟಾಪ್ ೧೦೦ ಸಂಘಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಈ ಹಿಂದೆ ಬೆಂಗಳೂರಿನ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಆಯೋಜನೆಯಾಗುತ್ತಿದ್ದ 'ಅರಿಮೆ@ಮುನ್ನೋಟ' ವಿಜ್ಞಾನ ಮಾತುಕತೆ ಕಾರ್ಯಕ್ರಮ ಕೂಡ ಇದೀಗ ಆನ್‌ಲೈನ್ ಆಗಿದೆ. ವಿವಿಧ ವಿಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ನಡೆಯುವ ಮಾತುಕತೆಯನ್ನು ಮುನ್ನೋಟ ಫೇಸ್‌ಬುಕ್ ಪುಟದ ಮೂಲಕ ನೇರಪ್ರಸಾರದಲ್ಲಿ ವೀಕ್ಷಿಸಬಹುದು.

ಹೀಗೆ, ಅನಿವಾರ್ಯ ಪರಿಸ್ಥಿತಿಯಲ್ಲಿ ತಮ್ಮ ವ್ಯಾಪ್ತಿ ಹೆಚ್ಚಿಸಿಕೊಂಡ ಜಾಲಗೋಷ್ಠಿಗಳು ಇದೀಗ ಕನ್ನಡದಲ್ಲಿ ವಿಜ್ಞಾನ ಸಂವಹನಕ್ಕೆ ಹೊಸದೊಂದು ಆಯಾಮವನ್ನು ಕಟ್ಟಿಕೊಡುತ್ತಿವೆ. ಹೆಚ್ಚುಹೆಚ್ಚು ಜನರು ಈ ಕಾರ್ಯಕ್ರಮಗಳ ಪ್ರಯೋಜನ ಪಡೆದುಕೊಂಡರೆ ಮಾತ್ರವೇ ಇವುಗಳ ವ್ಯಾಪ್ತಿ ಇನ್ನಷ್ಟು ಹೆಚ್ಚುವುದು, ಕನ್ನಡದಲ್ಲಿ ಮಾಹಿತಿಯ ಕೊರತೆಯನ್ನು ಸಾಧ್ಯವಾದಷ್ಟೂ ಮಟ್ಟಿಗೆ ಹೋಗಲಾಡಿಸುವುದು ಸಾಧ್ಯ.

Related Stories

No stories found.
ಇಜ್ಞಾನ Ejnana
www.ejnana.com