ಸಂವಹನ ನಮ್ಮ ಭಾಷೆಯಲ್ಲಿಯೇ ನಡೆದಾಗ ಅದು ಹೆಚ್ಚು ಪರಿಣಾಮಕಾರಿಯಾಗುವುದು ಸಾಧ್ಯ
ಸಂವಹನ ನಮ್ಮ ಭಾಷೆಯಲ್ಲಿಯೇ ನಡೆದಾಗ ಅದು ಹೆಚ್ಚು ಪರಿಣಾಮಕಾರಿಯಾಗುವುದು ಸಾಧ್ಯFreepik.com

ಇಂಗ್ಲಿಷಿನ ವಿಜ್ಞಾನ ಕನ್ನಡದ ಕೈಗೆಟುಕಲಿ

ಇದು ನಿಜಕ್ಕೂ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂಥದ್ದೇ ಸಮಸ್ಯೆ. ಈ ಸಮಸ್ಯೆಯಿಂದ ಪಾರಾಗುವ ಪ್ರಯತ್ನಗಳಲ್ಲಿ ಕೈಜೋಡಿಸುವ ಬದಲು ಬೇಡಿಕೆಗಳನ್ನಷ್ಟೇ ಮುಂದಿಟ್ಟುಕೊಂಡು ಕುಳಿತರೆ ಹೆಚ್ಚಿನ ಪ್ರಯೋಜನವೇನೂ ಆಗಲಾರದು.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸತನದ ಹುಡುಕಾಟದಷ್ಟೇ ಮಹತ್ವಪೂರ್ಣವಾದದ್ದು ಸಂಶೋಧನೆ ಹಾಗೂ ಕಲಿಕೆಯ ಸಂವಹನ. ಜನಸಾಮಾನ್ಯರಿಗಾಗಿರಲಿ, ವಿದ್ಯಾರ್ಥಿಗಳಿಗಾಗಿಯೇ ಇರಲಿ, ಸಂವಹನ ಪರಿಣಾಮಕಾರಿಯಾಗಿದ್ದಾಗ ಮಾತ್ರವೇ ವಿಜ್ಞಾನದ ಮುನ್ನಡೆಗೆ ಹೆಚ್ಚಿನ ವೇಗ ದೊರಕುತ್ತದೆ.

ಸಂವಹನ ನಮ್ಮ ಭಾಷೆಯಲ್ಲಿಯೇ ನಡೆದಾಗ ಅದು ಹೆಚ್ಚು ಪರಿಣಾಮಕಾರಿಯಾಗುವುದು ಸಾಧ್ಯ. ತಜ್ಞರು ಹೇಳುವುದೂ ಅದನ್ನೇ. "ನಾವು ವಿಜ್ಞಾನವನ್ನು ಮಾತೃಭಾಷೆಯಲ್ಲೇ ಬೋಧಿಸಬೇಕು. ಇಲ್ಲದಿದ್ದರೆ ಅದು ಕೆಲವರಿಗಷ್ಟೇ ಆಸಕ್ತಿಯಿರುವ ಗಂಭೀರ ಚಟುವಟಿಕೆಯಾಗಿ ಉಳಿದುಬಿಡುತ್ತದೆ. ಹಾಗೆ ಆದಾಗ ವಿಜ್ಞಾನ ಎಲ್ಲರನ್ನೂ ಒಳಗೊಳ್ಳಲು ಸಾಧ್ಯವಾಗುವುದಿಲ್ಲ," ಎಂದು ಖ್ಯಾತ ವಿಜ್ಞಾನಿ ಸಿ. ವಿ. ರಾಮನ್ ಒಮ್ಮೆ ಹೇಳಿದ್ದರಂತೆ.

ವಿಜ್ಞಾನ-ತಂತ್ರಜ್ಞಾನಗಳನ್ನು ಕನ್ನಡದಲ್ಲಿ ಜನಪ್ರಿಯಗೊಳಿಸುವ ಪ್ರಯತ್ನಗಳಿಗೆ ಒಂದು ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಶಾಲೆ ಕಾಲೇಜುಗಳಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುವುದು ಮಾತ್ರವಲ್ಲದೆ ಜನಸಾಮಾನ್ಯರಿಗೆ ವಿಜ್ಞಾನ-ತಂತ್ರಜ್ಞಾನಗಳನ್ನು ಪರಿಚಯಿಸುವ ಪ್ರಯತ್ನಗಳೂ ನಮ್ಮ ಭಾಷೆಯಲ್ಲಿ ನಡೆದಿವೆ. ಕನ್ನಡದ ಮೊದಲ ಜನಪ್ರಿಯ ವಿಜ್ಞಾನ ಪತ್ರಿಕೆ 'ವಿಜ್ಞಾನ' ೧೯೧೮ರಷ್ಟು ಹಿಂದೆಯೇ ಪ್ರಾರಂಭವಾಗಿ ಎರಡು ವರ್ಷಗಳ ಕಾಲ ಪ್ರಕಟವಾಗಿತ್ತು. ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಭೂವಿಜ್ಞಾನಗಳಂತಹ ವಿಷಯಗಳನ್ನು ಕುರಿತ ಕನ್ನಡ ಪಠ್ಯಪುಸ್ತಕಗಳೂ ಆ ಸಮಯದಲ್ಲಿ ಪ್ರಕಟವಾಗಿದ್ದವು. ೧೯೩೦-೪೦ರ ದಶಕಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಕೂಡ ತನ್ನ ಕನ್ನಡ ಗ್ರಂಥಮಾಲೆಯಡಿಯಲ್ಲಿ ವಿಜ್ಞಾನದ ಹಲವು ವಿಷಯಗಳನ್ನು ಕುರಿತ ವಿಸ್ತೃತ ಗ್ರಂಥಗಳನ್ನು ಪ್ರಕಟಿಸಿತ್ತು.

ಜನಪ್ರಿಯ ವಿಜ್ಞಾನವಿರಲಿ, ವಿಜ್ಞಾನ ಬೋಧನೆಯೇ ಇರಲಿ, ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಸಂವಹನವನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ನಮ್ಮ ನಾಡಿನಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಲೇ ಬಂದಿವೆ. ಆದರೆ ಕಾಲಕ್ರಮೇಣ ಇಂತಹ ಚಟುವಟಿಕೆಗಳ ವೇಗ ಹೆಚ್ಚುವ ಬದಲು ಕಡಿಮೆಯಾಗುತ್ತಾ ಬಂದಿದೆ ಎನ್ನುವುದೂ ನಿಜವೇ. ಹಾಗೆ ಆದುದರಿಂದಲೋ ಏನೋ, ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ದೊರಕುವಂತಾಗಬೇಕು ಎನ್ನುವುದು ಇಂದಿಗೂ ಬೇಡಿಕೆಯ ಹಂತದಲ್ಲಿಯೇ ಉಳಿದುಕೊಂಡಿದೆ.

ಹಾಗೆಂದ ಮಾತ್ರಕ್ಕೆ ಕೆಲಸವೇ ಆಗಿಲ್ಲ ಎಂದೇನೂ ಹೇಳುವಂತಿಲ್ಲ. ಕಳೆದ ಹಲವು ದಶಕಗಳಲ್ಲಿ ವಿಜ್ಞಾನ ತಂತ್ರಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ಅನೇಕ ಪುಸ್ತಕಗಳು, ವಿಶ್ವಕೋಶ-ಶಬ್ದಕೋಶಗಳು, ಪತ್ರಿಕೆಗಳು ಕನ್ನಡದಲ್ಲಿ ಪ್ರಕಟವಾಗಿವೆ. ಆಕಾಶವಾಣಿ ಹಾಗೂ ದೂರದರ್ಶನದ ಕನ್ನಡ ವಾಹಿನಿಗಳಲ್ಲಿ ಹಲವಾರು ವಿಜ್ಞಾನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇವೆಲ್ಲದರ ಜೊತೆಯಲ್ಲಿ ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಬೋಧನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಪ್ರಯತ್ನಗಳೂ ಅಲ್ಲಲ್ಲಿ ನಡೆದಿವೆ.

ಜನಪ್ರಿಯ ವಿಜ್ಞಾನದ ಉದಾಹರಣೆ ತೆಗೆದುಕೊಳ್ಳುವುದಾದರೆ ಜಾಲತಾಣಗಳು, ಸೋಶಿಯಲ್ ಮೀಡಿಯ, ವೀಡಿಯೊ, ಪಾಡ್ ಕಾಸ್ಟ್ ಸೇರಿದಂತೆ ವಿಜ್ಞಾನ ಸಂವಹನದ ಹೊಸ ಮಾರ್ಗಗಳನ್ನು ಕನ್ನಡದಲ್ಲೂ ಬಳಸುವುದು ಸಾಧ್ಯ ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಡಲಾಗಿದೆ. ವಿಜ್ಞಾನ-ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ 'ಇಜ್ಞಾನ' ಜಾಲತಾಣ ಹದಿನೈದು ವರ್ಷಗಳಿಂದ ಸಕ್ರಿಯವಾಗಿದೆ. ವಾಟ್ಸಾಪಿನ ಸಂದೇಶಗಳಲ್ಲೂ ವಿಜ್ಞಾನ ವಿಷಯಗಳನ್ನು ಕೇಳುವುದು, ಇತರರೊಡನೆ ಹಂಚಿಕೊಳ್ಳುವುದು ಸಾಧ್ಯವೆಂದು 'ಜಾಣಸುದ್ದಿ' ಪಾಡ್‌ಕಾಸ್ಟ್ ಸರಣಿ ತೋರಿಸಿಕೊಟ್ಟಿದೆ. ಮಕ್ಕಳಿಗೆ ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಪರಿಚಯಿಸುವ ಅನೇಕ ಕನ್ನಡ ಕತೆಗಳನ್ನು 'ಸ್ಟೋರಿವೀವರ್' ಆನ್‌ಲೈನ್ ವೇದಿಕೆ ಪ್ರಕಟಿಸಿದೆ. ವಿಜ್ಞಾನದ ವೀಡಿಯೊಗಳು ಕನ್ನಡದಲ್ಲಿ ಏಕಿಲ್ಲ ಎಂದು ಕೇಳುವವರಿಗೆ ಯೂಟ್ಯೂಬಿನ 'ತಿಳಿ' ಚಾನೆಲ್ ಗಟ್ಟಿಯಾದ ಉತ್ತರ ಕೊಟ್ಟಿದೆ. ಭಾರತ ಸರ್ಕಾರದ ವಿಜ್ಞಾನ್ ಪ್ರಸಾರ್ ನೇತೃತ್ವದಲ್ಲಿ ಪ್ರಕಟವಾಗುತ್ತಿರುವ ವಿಜ್ಞಾನದ ಕನ್ನಡ ಇ-ಪತ್ರಿಕೆ 'ಕುತೂಹಲಿ' ಇನ್ನೇನು ಎರಡು ವರ್ಷಗಳನ್ನು ಪೂರೈಸಲಿದೆ. ನಾಲ್ಕು ದಶಕಗಳಿಂದ ಪ್ರಕಟವಾಗುತ್ತಿರುವ 'ಬಾಲವಿಜ್ಞಾನ' ಕೂಡ ಜಾಲಜಗತ್ತಿಗೆ ತನ್ನನ್ನು ತೆರೆದುಕೊಂಡಿದೆ.

ವಿಜ್ಞಾನ ಬೋಧನೆಯ ಕ್ಷೇತ್ರದಲ್ಲೂ ಸಾಕಷ್ಟು ಚಟುವಟಿಕೆಗಳು ಸಾಗಿವೆ. ಕನ್ನಡ ಮಾಧ್ಯಮದ ವಿಜ್ಞಾನ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಉಪಯುಕ್ತವಾದ ಹಲವು ಸಂಪನ್ಮೂಲಗಳು ಇಂದು ಆನ್‌ಲೈನ್ ಮಾಧ್ಯಮದಲ್ಲಿ ದೊರಕುತ್ತಿವೆ. ಇಂತಹ ಸಂಪನ್ಮೂಲಗಳ ಸೃಷ್ಟಿ, ಕನ್ನಡ ಅನುವಾದ ಹಾಗೂ ಪ್ರಕಟಣೆಯಲ್ಲಿ ಅನೇಕ ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ತೊಡಗಿಕೊಂಡಿದ್ದಾರೆ. ಈ ಬಗೆಯ ಅನೇಕ ಪ್ರಯತ್ನಗಳ ಮುಂಚೂಣಿಯಲ್ಲಿ ಸ್ವತಃ ಶಿಕ್ಷಕರೇ ಇದ್ದಾರೆ ಎನ್ನುವುದು ವಿಶೇಷ. ಎಂಜಿನಿಯರಿಂಗ್ ಶಿಕ್ಷಣವನ್ನೂ ಕನ್ನಡದಲ್ಲೇ ನೀಡುತ್ತೇವೆ ಎನ್ನುವಂತಹ ಘೋಷಣೆಗಳೂ ಸರಕಾರದ ವತಿಯಿಂದ ಕೇಳಸಿಗುತ್ತಿವೆ.

ವಿಜ್ಞಾನ ಸಂವಹನದ ವಿವಿಧ ಕ್ಷೇತ್ರಗಳಲ್ಲಿ ಇಷ್ಟೆಲ್ಲ ನಡೆದಿದ್ದರೂ ಒಟ್ಟಾರೆ ಸಾಧನೆ ಮಾತ್ರ ತೃಪ್ತಿಕರವಾಗಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವ ಪಾರಿಭಾಷಿಕ ಪದಗಳ ಬಳಕೆ ಆಗಬೇಕು ಎನ್ನುವ ಕೂಗು ಇಂದಿಗೂ ಕೇಳಸಿಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಅನುಕೂಲ ಮುಖ್ಯವಾಗಬೇಕೇ ಹೊರತು ಪದ ಕನ್ನಡದ್ದೋ ಇಂಗ್ಲಿಷಿನದೋ ಸಂಸ್ಕೃತ ಮೂಲದ್ದೋ ಅಥವಾ ಬೇರೆ ಭಾಷೆಯದೋ ಎನ್ನುವುದಕ್ಕೆ ಮಹತ್ವ ಸಿಗಬಾರದು ಎನ್ನುವುದು ಇನ್ನೊಂದು ಬೇಡಿಕೆ. ಹಾಗೆಯೇ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಉನ್ನತ ತರಗತಿಗಳಿಗೆ ಹೋದಂತೆ ಅವರಿಗೆ ಬೇಕಾಗುವ ಮಾಹಿತಿಯೆಲ್ಲ ಕನ್ನಡದಲ್ಲೇ ದೊರಕಬೇಕು, ಹೆಚ್ಚಿನ ಶಿಕ್ಷಣಕ್ಕಾಗಿ ಅವರು ಇಂಗ್ಲಿಷ್ ಮಾಧ್ಯಮವನ್ನು ಆಶ್ರಯಿಸಿದರೂ ಅದಕ್ಕೆ ಬೇಕಾದ ಸಿದ್ಧತೆ ಮುಂಚಿತವಾಗಿಯೇ ದೊರೆತಿರಬೇಕು ಎನ್ನುವುದು ಕೂಡ ಬಹುಮಟ್ಟಿಗೆ ಅಪೇಕ್ಷೆಯಾಗಿಯೇ ಉಳಿದಿದೆ.

ಮುದ್ರಣ ವೆಚ್ಚ ದುಬಾರಿ ಎನ್ನುವ ಕಾರಣದಿಂದ ಹಲವು ಅಮೋಘ ಯೋಜನೆಗಳು ಹಿಂದಡಿಯಿಟ್ಟಿವೆ. ಈ ನಿಟ್ಟಿನಲ್ಲಿ ವಿತರಣೆಯ ಹೊರೆಯನ್ನು ಕುಗ್ಗಿಸುವ ಹಾಗೂ ತಯಾರಿಕೆಯ ವೆಚ್ಚ ಕಡಿಮೆ ಇರುವ ಡಿಜಿಟಲ್‌ ಸಾಧ್ಯತೆಗಳತ್ತ ಸಂಪನ್ಮೂಲಗಳನ್ನು ಸೃಷ್ಟಿಸುವ ಸಂಸ್ಥೆಗಳು ಹೊರಳಬೇಕಾಗಿರುವುದು ಅಗತ್ಯವಷ್ಟೆ ಅಲ್ಲ ಅನಿವಾರ್ಯ. ಆ ನಿಟ್ಟಿನಲ್ಲಿ ಯೋಚನೆಗಳು ಪ್ರಬಲವಾಗಬೇಕಿದೆ.

ಕೊಳ್ಳೇಗಾಲ ಶರ್ಮ, ವಿಜ್ಞಾನ ಸಂವಹನಕಾರರು

ಯಾವುದೇ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುವವರೆಗೂ ಪೂರೈಕೆಯ ಪರಿಸ್ಥಿತಿ ಉತ್ತಮಗೊಳ್ಳುವುದಿಲ್ಲ. ಕನ್ನಡ ಜಾಲತಾಣಗಳು, ತಂತ್ರಾಂಶ, ಫಾಂಟ್ ಮುಂತಾದ ಉದಾಹರಣೆಗಳಲ್ಲಿ ನಾವು ಇದನ್ನು ಸ್ಪಷ್ಟವಾಗಿ ಗಮನಿಸಬಹುದು. ಹೆಚ್ಚು ಹೆಚ್ಚು ಕನ್ನಡಿಗರು ತಮ್ಮ ಕಂಪ್ಯೂಟರ್ ಹಾಗೂ ಮೊಬೈಲ್ ಫೋನುಗಳಲ್ಲಿ ಕನ್ನಡ ಬಳಕೆ ಪ್ರಾರಂಭಿಸಿದ ನಂತರವೇ ಬಹುರಾಷ್ಟ್ರೀಯ ಸಂಸ್ಥೆಗಳೂ ಕನ್ನಡವನ್ನು ತಮ್ಮ ಮಾರುಕಟ್ಟೆಯನ್ನಾಗಿ ಪರಿಗಣಿಸಲು ಪ್ರಾರಂಭಿಸಿವೆ. ಗ್ರಾಹಕ ಸೇವೆ ಕನ್ನಡದಲ್ಲೇ ದೊರಕಬೇಕು ಎನ್ನುವ ದನಿ ಗಟ್ಟಿಯಾದಂತೆ ಸಂಸ್ಥೆಗಳು ಆ ಬೇಡಿಕೆಗೆ ಸ್ಪಂದಿಸುತ್ತಿವೆ.

ಕನ್ನಡದಲ್ಲಿ ವಿಜ್ಞಾನ ಸಂವಹನದ ನಿಟ್ಟಿನಲ್ಲಿಯೂ ಆಗಬೇಕಿರುವುದು ಇಂಥದ್ದೇ ಬದಲಾವಣೆ. ವಿಜ್ಞಾನ ಬೋಧನೆಗೆ ಅಗತ್ಯವಾದ ಪಠ್ಯಕ್ರಮ, ಪಠ್ಯಪುಸ್ತಕ ಇತ್ಯಾದಿಗಳೆಲ್ಲ ಬಹುಮಟ್ಟಿಗೆ ಸರ್ಕಾರದ ನಿಯಂತ್ರಣದಲ್ಲೇ ಇರುವ ಸಂಗತಿಗಳಾದ್ದರಿಂದ ಅಲ್ಲಿ ಸರ್ಕಾರದ ಕಡೆಯಿಂದ ಆಗಬೇಕಿರುವ ಕೆಲಸ ಸಾಕಷ್ಟಿದೆ. ಹಾಗೆಂದು ಈ ಕೆಲಸವನ್ನೆಲ್ಲ ಸಮುದಾಯದಿಂದ ದೂರವಾಗಿ ನಿರ್ವಾತದಲ್ಲಿ ನಡೆಸುವ ಬದಲು, ಈ ಕ್ಷೇತ್ರದ ಅಗತ್ಯಗಳನ್ನು ಅರಿತುಕೊಂಡು ವಿಷಯಪರಿಣತರ ಜೊತೆಯಲ್ಲೇ ಮುನ್ನಡೆಯಬೇಕಾದ್ದು ಇಂದಿನ ಅಗತ್ಯ. ಕನ್ನಡದಲ್ಲಿ ವಿಜ್ಞಾನ ಸಂವಹನದ ಮೊದಲ ಹೆಜ್ಜೆಗಳನ್ನು ಬಹಳ ಸಮರ್ಥವಾಗಿ ಬೆಂಬಲಿಸಿದ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳ ನೆರವೂ ಇಲ್ಲಿ ಅಗತ್ಯವಾಗಿ ಬೇಕಿದೆ.

ಶಾಲಾಮಟ್ಟದಲ್ಲಿರಲಿ, ವಿಶ್ವವಿದ್ಯಾನಿಲಯದ ಹಂತದಲ್ಲೇ ಇರಲಿ, ಕನ್ನಡದ ಕೆಲಸ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಇರಬೇಕೇ ಹೊರತು ಪ್ರಚಾರದ ಸಾಮಗ್ರಿಯಾಗಬಾರದು ಎನ್ನುವುದನ್ನು ಎಲ್ಲರೂ ಅರಿತು ಮುನ್ನಡೆದಾಗಲಷ್ಟೇ ನಾವು ಇನ್ನೂ ಹೆಚ್ಚಿನದನ್ನು ಸಾಧಿಸಬಹುದು. ಎಂಜಿನಿಯರಿಂಗ್ ಬೋಧನೆಯನ್ನು ಕನ್ನಡ ಮಾಧ್ಯಮದಲ್ಲೇ ಮಾಡುತ್ತೇವೆ ಎನ್ನುವ ಮೊದಲು ಎಂಜಿನಿಯರಿಂಗ್‌ನತ್ತ ಬರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಬಲ್ಲ ಮಾಹಿತಿಯನ್ನು ಕನ್ನಡದಲ್ಲಿ ಒದಗಿಸುವುದು ಮುಖ್ಯ, ಅದಕ್ಕೂ ಮುನ್ನ ಪದವಿಪೂರ್ವ ಹಂತದ ವಿಜ್ಞಾನ ಪಠ್ಯಪುಸ್ತಕಗಳು ಕನ್ನಡದಲ್ಲಿ ಬರಬೇಕು, ಅದಕ್ಕೆ ಬೇಕಾದ ಅಡಿಪಾಯ ಪ್ರಾಥಮಿಕ ಶಾಲೆಯ ಮಟ್ಟದಲ್ಲಿಯೇ ಸಿದ್ಧವಾಗಬೇಕು ಎನ್ನುವಂಥದ್ದನ್ನೆಲ್ಲ ಕಂಡುಕೊಳ್ಳಲು ಈ ಅರಿವೇ ಆಧಾರವಾಗಬೇಕು.

ವಿಜ್ಞಾನ ಸಂವಹನದ ಹೊಸ ಹಾದಿಗಳನ್ನೂ ನಾವು ಮರೆಯುವಂತಿಲ್ಲ. ಇಂಗ್ಲಿಷಿನಂತಹ ಭಾಷೆಗಳಲ್ಲಿ ಅಗಾಧವಾಗಿ ಲಭ್ಯವಿರುವ ಪಠ್ಯಪೂರಕ ಸಾಮಗ್ರಿಯಲ್ಲಿ ಸ್ವಲ್ಪ ಪ್ರಮಾಣದಷ್ಟಾದರೂ ನಮ್ಮ ಭಾಷೆಯಲ್ಲಿ ದೊರಕುವಂತಾಗಬೇಕು. ಬೇಡಿಕೆ ಹೆಚ್ಚಾದಂತೆ ಹೆಚ್ಚಿನ ಜನರು - ಸಂಸ್ಥೆಗಳು ಈ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಯಿದೆ, ನಿಜ. ಆದರೆ ಅಲ್ಲಿಯವರೆಗೆ ಸರಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳ ನೆರವು ಬೇಕು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾಗಬಲ್ಲದಾಗಿದ್ದ 'ಕಣಜ' ಜ್ಞಾನಕೋಶ ಬಹುಸಮಯದಿಂದ ಸಕ್ರಿಯವಾಗಿಲ್ಲದಿರುವುದು, ಸಮುದಾಯದ ಹೆಚ್ಚಿನ ಪಾಲ್ಗೊಳ್ಳುವಿಕೆ ಇಲ್ಲದೆ ಕನ್ನಡ ವಿಕಿಪೀಡಿಯ ಸೊರಗಿರುವುದು ಈ ದೃಷ್ಟಿಯಿಂದ ನಿರಾಶೆ ಹುಟ್ಟಿಸುವ ಅಂಶಗಳು. ಈ ಪರಿಸ್ಥಿತಿ ಬದಲಿಸಲು ನಾವೆಲ್ಲ ಒಟ್ಟಾಗಿ ಕೆಲಸಮಾಡಬೇಕಿದೆ. ಈ ಕೆಲಸವನ್ನು ಬೇಗನೆ ಮಾಡದಿದ್ದರೆ ಹೊರಜಗತ್ತಿನ ಸ್ಪರ್ಧಾತ್ಮಕತೆಗೆ ಹೊಂದಿಕೊಳ್ಳಲು ವಿದ್ಯಾರ್ಥಿಗಳೆಲ್ಲ ಅನಿವಾರ್ಯವಾಗಿ ಇಂಗ್ಲಿಷಿನತ್ತ ಹೊರಳುವ ಅಪಾಯವೂ ಇದೆ.

ಈ ಅಪಾಯದಿಂದ ಪಾರಾಗಲು ಇರಬಹುದಾದ ಮಾರ್ಗಗಳಲ್ಲಿ ಮುಖ್ಯವಾದದ್ದು - ವಿಜ್ಞಾನ ಸಂವಹನದಲ್ಲಿ ತೊಡಗಿಸಿಕೊಂಡಿರುವ ಎಲ್ಲರೂ ಒಟ್ಟಾಗಿ ಮುನ್ನಡೆಯುವುದು. ಶಿಕ್ಷಕರು, ಲೇಖಕರು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸರಕಾರ ಈ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡಬೇಕು; ತಮ್ಮಲ್ಲಿರಬಹುದಾದ ಅಹಮಿಕೆಯನ್ನು ಪಕ್ಕಕ್ಕಿಟ್ಟು ಉಳಿದವರೊಡನೆ ಸಹವರ್ತಿಸಬೇಕು.

ಇದು ನಿಜಕ್ಕೂ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವಂಥದ್ದೇ ಸಮಸ್ಯೆ. ಈ ಸಮಸ್ಯೆಯಿಂದ ಪಾರಾಗುವ ಪ್ರಯತ್ನಗಳಲ್ಲಿ ಕೈಜೋಡಿಸುವ ಬದಲು ಬೇಡಿಕೆಗಳನ್ನಷ್ಟೇ ಮುಂದಿಟ್ಟುಕೊಂಡು ಕುಳಿತರೆ, ನವೆಂಬರ್ ತಿಂಗಳಿನಲ್ಲೊಂದು ಅಂಕಣ ಬರೆದು ಸುಮ್ಮನಾದರೆ ಹೆಚ್ಚಿನ ಪ್ರಯೋಜನವೇನೂ ಆಗಲಾರದು.

ನವೆಂಬರ್ ೧, ೨೦೨೨ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ

Related Stories

No stories found.
logo
ಇಜ್ಞಾನ Ejnana
www.ejnana.com