ಕನ್ನಡ ಓದಿ, ಕನ್ನಡ ಅಂಕೆ ಬಳಸಿ ಎನ್ನುವ ಜೊತೆಗೇ, ಕನ್ನಡ ಓದಿಸುವ - ಬರೆಯುವ ಸಾಧನಗಳನ್ನು ಕೊಡಿ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳನ್ನೂ ಒತ್ತಾಯಿಸೋಣ!
ಕನ್ನಡ ಓದಿ, ಕನ್ನಡ ಅಂಕೆ ಬಳಸಿ ಎನ್ನುವ ಜೊತೆಗೇ, ಕನ್ನಡ ಓದಿಸುವ - ಬರೆಯುವ ಸಾಧನಗಳನ್ನು ಕೊಡಿ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳನ್ನೂ ಒತ್ತಾಯಿಸೋಣ!Image by Gerd Altmann from Pixabay

ಕನ್ನಡಕ್ಕೆ ಬೇಕಿದೆ ಇ-ಸ್ಪರ್ಶ!

ಕನ್ನಡ ಅಂಕೆಗಳನ್ನು ಬಳಸುವ, ಕನ್ನಡ ಪುಸ್ತಕಗಳನ್ನು ಹೆಚ್ಚೆಚ್ಚು ಓದುವ ಜೊತೆಗೆ ಇನ್ನೂ ಹಲವು ಕೆಲಸಗಳನ್ನು ನಾವು ಮಾಡಬೇಕಿದೆ; ಕನ್ನಡಕ್ಕೆ ಇ-ಸ್ಪರ್ಶ ನೀಡಬೇಕಿದೆ!

ಕನ್ನಡ ರಾಜ್ಯೋತ್ಸವ ಬರುತ್ತಿದ್ದ ಹಾಗೆಯೇ ಹಲವು ಕನ್ನಡ ಚಳುವಳಿಗಳು ಜಾಗೃತವಾಗುತ್ತವೆ. ಈ ವರ್ಷವೂ ಇದೇ ಸ್ಥಿತಿ. ಕನ್ನಡ ಅಂಕೆ ಬಳಸಿ, ಕನ್ನಡ ಅಕ್ಷರ ಬಳಸಿ, ಕನ್ನಡ ಓದಿ ಎಂಬ ಹೊಸ ಅಭಿಯಾನ ಆರಂಭವಾಗಿದೆ. ಎಲ್ಲರೂ ಕನ್ನಡವನ್ನು, ಕನ್ನಡ ಪುಸ್ತಕಗಳನ್ನು ಓದಲು ಆರಂಭಿಸಿ ಎನ್ನುವುದು ಈ ಚಳುವಳಿಯ ಉದ್ದೇಶ. ಇದರಿಂದಲಾದರೂ ಕನ್ನಡ ಬೆಳೆದೀತು. ಕನ್ನಡ ಉಳಿದೀತು ಎನ್ನುವ ಹಂಬಲ. ಹೌದೇ? ಕೇವಲ ಕನ್ನಡ ಅಂಕೆಗಳನ್ನು ಬಳಸಿ, ಕನ್ನಡ ಪುಸ್ತಕಗಳನ್ನು ಹೆಚ್ಚೆಚ್ಚು ಓದಿದರೆ ಸಾಕೆ?

ಈ ಪ್ರಶ್ನೆಗೆ ಉತ್ತರ ಕೊಡುವ ಮುನ್ನ ಇನ್ನೊಂದು ಚಳುವಳಿಯನ್ನೂ ಗಮನಿಸಬೇಕು. ಇತ್ತೀಚೆಗೆ ಬ್ಯಾಂಕು ಮತ್ತು ರೇಲ್ವೇ ಇಲಾಖೆಗಳಲ್ಲಿ ನೇಮಕಾತಿಗಾಗಿ ನಡೆದ ಪರೀಕ್ಷೆಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆಗೆ ಉತ್ತರಿಸಬೇಕು ಎನ್ನುವ ಇನ್ನೊಂದು ಬೇಡಿಕೆ. ಇದು ಕೇವಲ ಕನ್ನಡಿಗರದ್ದಷ್ಟೆ ಅಲ್ಲ. ತಮಿಳರದ್ದೂ ಇದೇ ಬೇಡಿಕೆ. ಇನ್ನೂ ಒಂದಿಷ್ಟು ಮುಂದೆ ಸಾಗಿದರೆ, ಕೇವಲ ಈ ಎರಡು ಉದ್ಯಮಗಳಷ್ಟೆ ಅಲ್ಲ, ವಿಜ್ಞಾನ ತಂತ್ರಜ್ಞಾನ, ಸಂಶೋಧನೆ, ಕೈಗಾರಿಕೆಗಳಲ್ಲಿಯೂ ಕನ್ನಡಿಗರಿಗೆ ಅವಕಾಶ ಕಡಿಮೆ ಎನ್ನುವ ಮಾತಿದೆ. ಬೆಂಗಳೂರು ದೇಶದ ಐಟಿ ರಾಜಧಾನಿ, ವಿಜ್ಞಾನ ಸಂಶೋಧನೆಯ ರಾಜಧಾನಿ ಎಂದು ಹೆಸರು ಪಡೆದಿದೆಯಷ್ಟೆ. ಹೀಗಾಗಿ ಇಲ್ಲಿ ಇರುವ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್, ನ್ಯಾಶನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್, ಇಸ್ರೋ, ಡಿಆರ್‌ಡಿಒ, ಜವಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸಡ್ ಸೈನ್ಸಸ್ ಅಂಡ್ ರೀಸರ್ಚ್ (ಜೆಎನ್ಸಿಎಎಸ್ಆರ್) ಮೊದಲಾದ ಸಂಸ್ಥೆಗಳಲ್ಲಿ ಖಾಯಂ ಉದ್ಯೋಗಿಯಾಗಿರುವ ಕನ್ನಡಿಗ ಸಂಶೋಧಕರ ಸಂಖ್ಯೆ ಹೇಳಿಕೊಳ್ಳುವಂತಿಲ್ಲ. “ಕನ್ನಡ ವಿದ್ಯಾರ್ಥಿಗಳಿಗೆ ವಿಜ್ಞಾನ, ಸಂಶೋಧನೆಯಲ್ಲಿ ಆಸಕ್ತಿ ಇಲ್ಲ. ಕೇವಲ ಐಟಿಯಲ್ಲಿ ಅಷ್ಟೆ,” ಎಂದು ಜೆ ಎನ್ ಸಿ ಎ ಎಸ್ ಆರ್ ಸಂಸ್ಥಾಪಕರೂ, ಭಾರತ ರತ್ನರೂ, ಹೆಮ್ಮೆಯ ಕನ್ನಡಿಗರೂ ಆದ ಪ್ರೊಫೆಸರ್ ಸಿ.ಎನ್.ಆರ್ ರಾವ್ ಐದಾರು ವರ್ಷಗಳ ಹಿಂದೆ ಹೇಳಿದ್ದು ಸುದ್ದಿಯಾಗಿತ್ತು.

ಇದಕ್ಕೆ ಕಾರಣ ಇಂಗ್ಲೀಷು ಮಾಧ್ಯಮದ ಪ್ರಭಾವ ಎಂದು ಸರಳವಾಗಿ ದೂರಬಹುದಾದರೂ, ಈ ಸಮಸ್ಯೆಗೆ ಇನ್ನೊಂದು ಆಯಾಮವೂ ಇದೆ. ಇಂತಹ ಸಂಶೋಧನೆಗಳು ಹಾಗೂ ಉದ್ಯೋಗಗಳಿಗೆ ನೇಮಕಾತಿಗಾಗಿ ನಡೆಸುವ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸ್ಥಾನವಿಲ್ಲ. ಇಂಗ್ಲೀಷು ಹಾಗೂ ಹಿಂದಿಯಷ್ಟೆ. ಇದಷ್ಟೆ ಆಗಿದ್ದರೆ ಇಂಗ್ಲೀಷು ಕಲಿತ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕಿತ್ತಷ್ಟೆ. ಅದುವೂ ಇಲ್ಲ. ಸಂಶೋಧನಾ ವಿದ್ಯಾರ್ಥಿಗಳ ಆಯ್ಕೆಗಾಗಿ ನಡೆಯುವ ಗೇಟ್ ಹಾಗೂ ಸಿಎಸ್ಐಆರ್ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಎನ್ ಇ ಟಿ ಯಲ್ಲಿ ನಮ್ಮ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು ತೇರ್ಗಡೆಯಾಗುವ ಸಂಖ್ಯೆ ಕಡಿಮೆ. ಇದಕ್ಕೆ ಒಂದು ಕಾರಣ. ಕನ್ನಡ ಮಾಧ್ಯಮದಲ್ಲಿಯೇ ಹನ್ನೆರಡು ವರ್ಷಗಳ ಕಾಲ ವಿಜ್ಞಾನವನ್ನು ಕಲಿತು ಅನಂತರ ಇದ್ದಕ್ಕಿದ್ದ ಹಾಗೆಯೇ ಇಂಗ್ಲೀಷು ಮಾಧ್ಯಮದಲ್ಲಿ ಅದನ್ನು ಓದುವ ಪರಿಪಾಟಲು. ಇದರಿಂದಾಗಿ ಎಷ್ಟೋ ವಿದ್ಯಾರ್ಥಿಗಳು ಉನ್ನತ ವಿಜ್ಞಾನ ಶಿಕ್ಷಣವನ್ನೂ ಉರುಹೊಡೆದೇ ಪೂರೈಸುವಂತಾಗಿದೆ. ಇರುವ ಅಲ್ಪ ಸ್ವಲ್ಪ ಆಸಕ್ತರೂ ಕೂಡ ತಮ್ಮ ವಿಜ್ಞಾನ ಕಲಿಕೆಗೆ ಇಂಗ್ಲೀಷನ್ನೇ ಅವಲಂಬಿಸಬೇಕಾಗುತ್ತದೆ.

ಹಾಗಂತ ಎಲ್ಲರಿಗೂ ಇಂಗ್ಲೀಷು ಕಲಿಸಬೇಕೇ? ಅದು ಕನ್ನಡವನ್ನು ಇನ್ನಷ್ಟು ಹಿಂದೂಡಿದಂತಲ್ಲವೇ? ನಿಜ. ಇದಕ್ಕೆ ಇನ್ನೊಂದು ಪರಿಹಾರವೂ ಇದೆ. ಕನ್ನಡದಲ್ಲಿಯೇ ಪರೀಕ್ಷೆ ನಡೆಸುವಂತೆ ಸರ್ಕಾರಿ ಸಂಸ್ಥೆಗಳನ್ನು ಒತ್ತಾಯಿಸುವುದು. ಇದನ್ನು ಸಾಧಿಸಿದರೂ ಕನ್ನಡಿಗರ ಅವಸ್ಥೆ ಸುಧಾರಿಸಬೇಕಾದರೆ ಇನ್ನೂ ಒಂದು ಕೆಲಸ ಆಗಲೇಬೇಕು. ಅದು ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಮಾಹಿತಿ, ಪಾಠ ಹಾಗೂ ವಿಷಯಗಳನ್ನು ಕನ್ನಡದಲ್ಲಿಯೇ ಒದಗಿಸುವ ಕೆಲಸ. ಇದೇನೂ ಹೊಸ ಚಿಂತನೆಯಲ್ಲ. ಭಾರತ ಸ್ವತಂತ್ರವಾಗುವ ಹೊತ್ತಿನಲ್ಲಿಯೇ ನಮ್ಮ ಹಲವು ಶಿಕ್ಷಣ ತಜ್ಞರು ಈ ಬಗ್ಗೆ ಆಲೋಚಿಸಿದ್ದುಂಟು. ಕನ್ನಡ, ತಮಿಳು ಮೊದಲಾದ ಭಾಷೆಗಳಲ್ಲಿ ಅತ್ಯಂತ ಉನ್ನತ ಮಟ್ಟದ ವಿಷಯಗಳಿರುವ ಪಠ್ಯಪುಸ್ತಕಗಳನ್ನು ರಚಿಸಿದ ಉದಾಹರಣೆಗಳೂ ಇವೆ. ೧೯೬೦ರ ದಶಕದಲ್ಲಿ, ಇಂಗ್ಲೀಷಿನಲ್ಲಿ ಅದು ಪ್ರಕಟವಾದ ಕೆಲವೇ ವರ್ಷಗಳಲ್ಲಿ ಸುಪ್ರಸಿದ್ಧ ಪರಮಾಣು ಭೌತವಿಜ್ಞಾನಿ ವರ್ನರ್ ಹೈಸನ್ ಬರ್ಗರ ಪಠ್ಯ ಪುಸ್ತಕವೊಂದು ಕನ್ನಡದಲ್ಲಿ ಪ್ರಕಟವಾಗಿತ್ತು. ಅದಕ್ಕೂ ಹಿಂದೆಯೇ ಇಂಗ್ಲೀಷು, ಜರ್ಮನ್ ಭಾಷೆಗಳಲ್ಲಿ ಲಭ್ಯವಿದ್ದ ಹಲವು ಪಠ್ಯ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ ಉದಾಹರಣೆಗಳೂ ಇವೆ. ಅದೇ ದಶಕದಲ್ಲಿ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ ಆಹಾರ ವಿಜ್ಞಾನ ಎನ್ನುವ ವಿಶಿಷ್ಟ ವಿಷಯದ ಪತ್ರಿಕೆಯನ್ನೂ ಪ್ರಕಟಿಸಲು ಆರಂಭಿಸಿತ್ತು. ಅನಂತರ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡದಲ್ಲಿ ವಿಜ್ಞಾನ ಪುಸ್ತಕಗಳನ್ನು ಪ್ರಕಟಿಸಲು ಕೈಗೊಂಡ ಯೋಜನೆಗಳು ಈಗ ಇತಿಹಾಸದ ಪುಟಗಳನ್ನು ಸೇರಿವೆ.

ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ನೆರವಾಗಬಹುದಾಗಿದ್ದ ಈ ಪ್ರಯತ್ನಗಳು ನೆಲ ಕಚ್ಚಿದುವೇಕೆ? ಅನಂತರ ಇಂತಹವು ಆಗಲಿಲ್ಲವೇಕೆ? ಕನ್ನಡಿಗರು ಕನ್ನಡ ಓದುವುದು ಕಡಿಮೆ ಆಗಿದ್ದರಿಂದಲೋ? ಖಂಡಿತ ಇಲ್ಲ. ಕನ್ನಡಿಗರು ಓದುವುದು ಕಡಿಮೆ ಆಗಿಲ್ಲ. ಯಾವುದೇ ಅಕ್ಷರಸ್ತ ಸಮಾಜದಲ್ಲಿ ಓದುವ ಆಸಕ್ತಿ ಎಲ್ಲರಿಗೂ ಇರುವುದಿಲ್ಲ ಎನ್ನುವುದು ಒಂದು ಕಡೆ. ಹಾಗೆಯೇ ಓದುವಿಕೆಗೆ ಬೇಕಾದ ವಸ್ತು, ಸಾಮಗ್ರಿಯನ್ನು ಆ ಭಾಷೆ ಎಷ್ಟರ ಮಟ್ಟಿಗೆ ಒದಗಿಸುತ್ತಿದೆ ಎನ್ನುವುದು ಇನ್ನೊಂದು ಕಡೆ ಇದನ್ನು ಪ್ರಭಾವಿಸುತ್ತವೆ. ಕನ್ನಡದಲ್ಲಿ ಮೊದಲನೆಯದರ ಬಗ್ಗೆ ಮಾಹಿತಿ ಕಡಿಮೆ. ಎರಡನೆಯದು ಬಹುಶಃ ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಅತ್ಯಲ್ಪ. ವಿಜ್ಞಾನ ಸಾಹಿತ್ಯ ನಮ್ಮಲ್ಲಿ ಬೆಳೆಯಲೇ ಇಲ್ಲ!

ಇದು ಬಹುಶಃ ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕನ್ನಡಿಗರ ಸ್ಥಾನ ಹೀನಾಯವಾಗಿರುವುದಕ್ಕೆ ಒಂದು ಮುಖ್ಯ ಕಾರಣ. ಉನ್ನತ ಶಿಕ್ಷಣದಲ್ಲಿ ಅಧ್ಯಯನ ಮಾಡುವ ವಿಷಯಗಳ ಬಗ್ಗೆ ಅರಿವನ್ನು ಮೂಡಿಸುವ, ಕಲಿಸುವ ಪುಸ್ತಕಗಳು, ಆಕರಗಳು ಬೇಕು. ಇದನ್ನು ಒಂದು ಅಭಿಯಾನವಾಗಿಯೇ ಮುಂದುವರೆಸಿದಲ್ಲಿ ಪ್ರೊ. ಸಿ ಎನ್ ಆರ್ ರಾವ್ ಅವರ ದೂರಿಗೆ ಉತ್ತರ ಹೇಳಲಾದೀತೇ? ಅದಕ್ಕೆ ಇನ್ನೂ ಒಂದು ವಿಷಯದಲ್ಲಿ ನಾವು ಜಾಗೃತರಾಗಬೇಕಾಗುತ್ತದೆ.

ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒದಗಿದ ಸಂಕಟ ನಮಗೆಲ್ಲರಿಗೂ ಮನದಟ್ಟಾಗಿದೆಯಷ್ಟೆ. ಒಂದೆಡೆ ಶಾಲಾ, ಕಾಲೇಜುಗಳು ಮುಚ್ಚಿದ ಸ್ಥಿತಿ. ಇನ್ನೊಂದೆಡೆ ಆನ್ ಲೈನ್ ಶಿಕ್ಷಣ ನೀಡಬೇಕೆಂದರೂ ಅದಕ್ಕೆ ಬೇಕಾದ ಸವಲತ್ತು ಸಾಕಷ್ಟು ಇಲ್ಲದ ದುರ್ಗತಿ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿಯಂತೂ ಇದು ಇನ್ನೂ ಹೆಚ್ಚು. ಕನ್ನಡದಲ್ಲಿಯೆ ವಿಜ್ಞಾನ ಕಲಿಯಬೇಕೆನ್ನುವ ಉತ್ಸಾಹ, ಪ್ರೇಮ ಇರುವ ಯಾವನಿಗಾದರೂ ನಿರಾಸೆಯುಂಟು ಮಾಡುವಷ್ಟು ನಮ್ಮ ಆನ್ ಲೈನ್ ಕನ್ನಡ ಆಕರಗಳ ಸಂಪತ್ತು ಇದೆ. ನಮ್ಮ ಕನ್ನಡಮ್ಮನಿಗೆ ಇ-ಸಂಸ್ಕಾರ ಜರೂರಾಗಿ ಆಗಬೇಕಾಗಿದೆ.

ಈ ನಿಟ್ಟಿನಲ್ಲಿ ಇತ್ತೀಚೆಗೆ ಕನ್ನಡದಲ್ಲಿ ನಡೆಯುತ್ತಿರುವ ಒಂದೆರಡು ಇ-ಸಂಸ್ಕಾರಗಳ ಬಗ್ಗೆ ಕಣ್ಣಾಡಿಸಬಹುದು. ಮೊದಲನೆಯದಾಗಿ ಸಂಚಯ ಸಂಸ್ಥೆ ಕೈಗೊಂಡಿರುವ ಕನ್ನಡ ಕೃತಿಗಳ ಡಿಜಿಟಲೀಕರಣ. ಇಂಟರ್ನೆಟ್ ಆರ್ಕೈವ್ ಎನ್ನುವ ಸಾರ್ವಜನಿಕ ಸವಲತ್ತಿನಲ್ಲಿ ಹಳೆಯ, ಕಾಪಿರೈಟ್ ಇಲ್ಲದ ಪುಸ್ತಕಗಳನ್ನು ಡಿಜಿಟಲೀಕರಿಸಿ ಸಂಗ್ರಹಿಸಲಾಗುತ್ತಿದೆ. ಇದು ಈಗಿರುವ ಮಾಹಿತಿಯನ್ನು ಪ್ರಪಂಚದಲ್ಲಿರುವ ಯಾರಿಗೆ ಬೇಕಾದರೂ ದೊರಕುವಂತೆ ಒಟ್ಟು ಮಾಡುವ ಕೆಲಸ. ಇದಲ್ಲದೆ ಹೊಸ ಅರಿವಿನ ಸೆಲೆಯನ್ನು ಸೃಷ್ಟಿಸುವುದೂ ನಾಳಿನ ಈ ಇ-ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಕನ್ನಡಿಗರು ಹೆಚ್ಚೆಚ್ಚು ಬಳಸಲು ಅನುಕೂಲವಾಗುವಂತಹ ಸ್ವರೂಪದಲ್ಲಿ ಈ ಆಕರಗಳನ್ನು ರೂಪಿಸಬೇಕಾಗುತ್ತದೆ.

ಇತ್ತೀಚೆಗೆ ಇಂಟರ್ನೆಟ್ಟಿನಲ್ಲಿ ಪ್ರಕಟವಾದ ಎರಡು ಪುಸ್ತಕಗಳು ಹಾಗೂ ಮೈಲ್ಯಾಂಗ್ ನಂತಹ ಸಂಸ್ಥೆಗಳು ನಡೆಸುತ್ತಿರುವ ಪ್ರಯತ್ನಗಳನ್ನು ಇಲ್ಲಿ ಉದಹರಿಸಬಹುದು. ಬೆಂಗಳೂರಿನ ಡಾ. ಕಿರಣ್ ಸೂರ್ಯ ಅವರು ಪ್ರಕಟಿಸಿದ ಸೆರೆಂಡಿಪಿಟಿ ಎನ್ನುವ ವೈದ್ಯಕೀಯ ಚರಿತ್ರೆಯ ಪುಸ್ತಕ. ಇದರ ಗಾತ್ರವೇ ಇದರ ಪ್ರಕಟಣೆಗೆ ಅಡ್ಡಿಯಾಗಿತ್ತು. ಧಾರಾವಾಹಿಯಾಗಿ ಪ್ರಕಟಿಸಲೂ ಆಗದಷ್ಟು ಮಾಹಿತಿ ಇತ್ತು. ಹೀಗಾಗಿ ಇದನ್ನು ಮೊದಲು ಧ್ವನಿಪತ್ರಿಕೆಯಾಗಿ ಪಾಡ್ ಕಾಸ್ಟ್ ಮಾಡಿ, ಅನಂತರ ಅಕ್ಷರರೂಪದಲ್ಲಿ ಪ್ರಕಟಿಸಲಾಯಿತು. ಅಕ್ಷರರೂಪದ ಎಂದರೆ ಸಾಮಾನ್ಯವಾಗಿ ನಮಗೆಲ್ಲ ಪರಿಚಿತವಿರುವ ಪಿಡಿಎಫ್ ರೂಪದಲ್ಲಿಯಷ್ಟೆ ಅಲ್ಲ. ಫೋನು, ಕಂಪ್ಯೂಟರು ಹಾಗೂ ಓದಲೆಂದೇ ಬಳಸುವ ಕಿಂಡಲ್ ನಂತಹ ಸಾಧನಗಳಲ್ಲಿಯೂ ಬಳಸುವಂತೆ ಇದನ್ನು ರೂಪಿಸಲಾಗಿದೆ. ಹೀಗೆ ಸ್ವಯಂ ಪ್ರಕಾಶನ ಮಾಡಲಿಚ್ಛಿಸುವ ಲೇಖಕರಿಗೆ ಅನುಕೂಲವಾಗುವಂತಹ ಪ್ರಕಾಶನ ವ್ಯವಸ್ಥೆಯೂ ಇದೆ. ಟೆಕ್ ಫಿಜ್ ಎನ್ನುವ ವ್ಯಾಪಾರೀ ಸಂಸ್ಥೆ, ಇಜ್ಞಾನ ಜಾಲಪತ್ರಿಕೆ ಹಾಗೂ ಜಾಣಸುದ್ದಿ ಎನ್ನುವ ಪಾಡ್ ಕಾಸ್ಟ್ ಒಟ್ಟಾಗಿ ಸೇರಿ ಅಕ್ಷರ, ಧ್ವನಿ ಹಾಗೂ ಜಾಲತಾಣದಲ್ಲಿ ಈ ನಾಲ್ಕುನೂರು, ಐದು ನೂರು ಪುಟಗಳಷ್ಟು ಮಾಹಿತಿಯನ್ನು ಉಚಿತವಾಗಿ ಕನ್ನಡಿಗರಿಗೆ ನೀಡಿವೆ. ಇನ್ನೊಂದೆಡೆ ಮೈಲ್ಯಾಂಗ್ ಬುಕ್ಸ್ ಸಂಸ್ಥೆ ನವಕರ್ನಾಟಕ ಸಂಸ್ಥೆಯ ಜೊತೆ ಸೇರಿ ಪುಸ್ತಕಗಳನ್ನು ಇ-ರೂಪದಲ್ಲಿ ಒದಗಿಸಲು ಸಿದ್ಧವಾಗಿದೆ. ಆಡಿಯೋ ಪುಸ್ತಕಗಳನ್ನೂ ಕೂಡ ಈ ಸಂಸ್ಥೆ ಒದಗಿಸುತ್ತಿದೆ.

ಕನ್ನಡಮ್ಮನಿಗೆ ಈ ಇ-ಪೂಜೆ ಆಗಬೇಕಾದ ಜರೂರಿದೆ. ಹೀಗೆ ಹಲವು ಸಂಸ್ಥೆಗಳು ಒಟ್ಟಾದರೆ, ಕಡಿಮೆ ವೆಚ್ಚದಲ್ಲಿ ಬಹಳಷ್ಟು ಅಮೂಲ್ಯ ಮಾಹಿತಿಯ ಭಂಡಾರವನ್ನು ಸೃಷ್ಟಿಸಬಹುದು. ಇದಷ್ಟೇ ಅಲ್ಲ. ಈ ಮಾಹಿತಿಯನ್ನು ಸಂಶೋಧನೆಗೆ ಅನುಕೂಲವಾಗುವ ರೀತಿಯಲ್ಲಿ ಒದಗಿಸುವ ವ್ಯವಸ್ಥೆಯ ಬಗ್ಗೆಯೂ ಚಿಂತನೆ ನಡೆದಿದೆ. ಪುಸ್ತಕ ಓದುವಾಗಲೇ ಯಾವುದೋ ಕಠಿಣ ಪದ ಎದುರಾದಾಗ, ಅದರ ಅರ್ಥವನ್ನು ಅಲ್ಲಿಯೇ ಒದಗಿಸುವಂತಹ ಹೈಪರ್ ಲಿಂಕುಗಳು, ವಿಕಿಪೀಡಿಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ದಂತಹ ಜಾಲತಾಣಗಳತ್ತ ಕೊಂಡೊಯ್ಯುವ ವ್ಯವಸ್ಥೆ ಆಗಬೇಕಿದೆ. ಇದು ಈ ವ್ಯವಸ್ಥೆಗಳಿಗೆ ಗ್ರಾಹಕರನ್ನೂ ಒದಗಿಸುತ್ತದೆ.

ಕೊನೆಯದಾಗಿ ಅನುವಾದದ ಪ್ರಯತ್ನಗಳು. ಅಂತಾರ್ರಾಷ್ಟ್ರೀಯ ವಿಜ್ಞಾನಿ ಪ್ರೊಫೆಸರ್ ರಾಘವೇಂದ್ರ ಗದಗಕರ್ ಅವರು ದಿ ವೈರ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವ ಇಂಗ್ಲೀಷ್ ವಿಜ್ಞಾನ ಅಂಕಣವನ್ನು ಅದೇ ಸಮಯದಲ್ಲಿಯೇ ಕನ್ನಡದಲ್ಲಿ ಅನುವಾದಿಸಿ, ಮೂಲ ಲೇಖನದ ಜೊತೆಗೆ ಹಾಗೂ ಅದರ ಧ್ವನಿಮುದ್ರಣದ ಜೊತೆಗೆ ದಿ ವೈರ್ ಸೈನ್ಸ್ ಪ್ರಕಟಿಸುತ್ತಿದೆ. ವಿಜ್ಞಾನದಲ್ಲಿ ಕ್ಲಾಸಿಕ್ ಎನ್ನುವಂತಹ ಪುಸ್ತಕಗಳನ್ನು ಅನುವಾದಿಸಿ ಹೀಗೆ ಪ್ರಕಟಿಸಬಹುದು.

ಹೀಗೆ ಕನ್ನಡಮ್ಮನಿಗೆ ಇ-ಪೂಜೆ ಮಾಡಲು ಬೇಕಾದ ಎಲ್ಲ ಪರಿಕರಗಳೂ ಇದ್ದರೂ, ನಮ್ಮ ಮನಸ್ಸು ಇನ್ನೂ ಮುದ್ರಿತ ಪುಸ್ತಕದತ್ತಲೇ ಇರುವುದು ಒಂದು ದೊಡ್ಡ ಕೊರತೆ. ಇದನ್ನು ನೀಗಿಸಲು ಸರ್ಕಾರದ ಸಂಸ್ಥೆಗಳಾದ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ, ಕೆ-ಸ್ಟೆಪ್ಸ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಮನಸ್ಸು ಪರಿವರ್ತನೆ ಆಗಬೇಕು, ಅಷ್ಟೆ. ಆಗಷ್ಟೆ ನಮ್ಮ ಭಾರತರತ್ನದ ಕೊರಗು ಕಳೆಯಬಹುದು. ಹಾಗೆಯೇ ಇ-ಸೇವೆಗಳನ್ನು ಒದಗಿಸುತ್ತಿರುವ ಅಮೆಜಾನ್, ಆಪಲ್ ನಂತಹ ಸಂಸ್ಥೆಗಳು ಕನ್ನಡವನ್ನು ಬಳಸಲು ಅನುವಾಗುವಂತೆ ತಮ್ಮ ತಂತ್ರಜ್ಞಾನವನ್ನು ಅನುಗೊಳಿಸುವ ಅಭಿಯಾನ ಆಗಬೇಕು. ಕನ್ನಡ ಓದಿ, ಕನ್ನಡ ಅಂಕೆ ಬಳಸಿ ಎನ್ನೋಣ. ಖಂಡಿತ. ಅದರ ಜೊತೆಗೇ, ಕನ್ನಡ ಓದಿಸುವ, ಬರೆಯುವ ಸಾಧನಗಳನ್ನು ಕೊಡಿ ಎಂದು ಈ ಅಂತಾರಾಷ್ಟ್ರೀಯ ಸಂಸ್ಥೆಗಳನ್ನೂ ಒತ್ತಾಯಿಸೋಣ. ಕನ್ನಡಮ್ಮನ ಇ-ಪೂಜೆಗೆ ಮಂಡಲ ಕಟ್ಟೋಣ.

ನವೆಂಬರ್ ೭, ೨೦೨೦ರ ಆಂದೋಲನದಲ್ಲಿ ಪ್ರಕಟವಾದ ಲೇಖನದ ವಿಸ್ತೃತ ರೂಪ

Related Stories

No stories found.
logo
ಇಜ್ಞಾನ Ejnana
www.ejnana.com