ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡವೆಂದರೆ...
ಮಾಹಿತಿ ತಂತ್ರಜ್ಞಾನ ಶಿಕ್ಷಣ ಎಂದರೆ ಕಂಪ್ಯೂಟರ್ ಮತ್ತು ಅದರಲ್ಲಿನ ಸವಲತ್ತುಗಳ ಬಳಕೆ ಕುರಿತ ತರಬೇತಿ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ.Image by Mudassar Iqbal from Pixabay

ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡವೆಂದರೆ...

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಇನ್ನಷ್ಟು ಬೆಳೆಯಬೇಕೆಂದರೆ ಕನ್ನಡ ಬಲ್ಲ ಪರಿಣತರು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಇದು ಸಾಧ್ಯವಾಗಲು, ಮೊದಲಿಗೆ ಕನ್ನಡದ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣವೂ ಕನ್ನಡದಲ್ಲೇ ಸಿಗಬೇಕು!

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬಳಕೆ ಜಾಸ್ತಿಯಾಗಬೇಕು ಎನ್ನುವುದು ಬಹಳ ದಿನಗಳಿಂದ ಕೇಳಿಬರುತ್ತಿರುವ ಅಭಿಪ್ರಾಯ. ಈ ವರ್ಷ ಆಚರಿಸಲಾಗುತ್ತಿರುವ ಕನ್ನಡ ಕಾಯಕ ವರ್ಷದ ಕಾರ್ಯಸೂಚಿಗಳಲ್ಲೂ ಈ ಅಂಶವನ್ನು ಸೇರಿಸಿಕೊಳ್ಳಲಾಗಿದೆ. ಈ ಅಭಿಪ್ರಾಯವನ್ನು ಕೇಳಿದಾಗ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡವೆಂದರೆ ಏನು ಎಂಬ ಪ್ರಶ್ನೆ ನಮ್ಮಲ್ಲಿ ಮೂಡಬಹುದು. ನಾವು ಕಳಿಸುವ ಸಂದೇಶಗಳನ್ನು ಕನ್ನಡ ಅಕ್ಷರಗಳಲ್ಲೇ ಟೈಪಿಸುವುದು, ಕಂಗ್ಲಿಷ್ ಬಳಕೆ ನಿಲ್ಲಿಸುವುದು, ಜಾಲತಾಣಗಳ ಮಾಹಿತಿ ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳುವುದು ಮುಂತಾದ ಹಲವು ಉತ್ತರಗಳೂ ಸಿಗಬಹುದು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡವನ್ನೂ ಬಳಸಬಹುದು, ಬಳಸಬೇಕು ಎಂಬ ಆಲೋಚನೆ ಶುರುವಾದ ಕಾಲಕ್ಕೆ ಈ ಉತ್ತರಗಳು ಅತ್ಯಂತ ಸಮರ್ಪಕವಾಗಿದ್ದವು. ಕನ್ನಡದ ಡಿಜಿಟಲ್ ಕಡತಗಳನ್ನು ರೂಪಿಸುವುದರಿಂದ ಪ್ರಾರಂಭಿಸಿ ಅಂತರಜಾಲದಲ್ಲಿ ಕನ್ನಡ ಅಕ್ಷರಗಳನ್ನೇ ಬಳಸುವವರೆಗೆ ಆ ಕಾಲದಲ್ಲಿ ಲಭ್ಯವಾದ ಅನೇಕ ಸವಲತ್ತುಗಳು ಈ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟವು. ಆದರೆ ಈಗ, ಆ ಬೆಳವಣಿಗೆಗಳೆಲ್ಲ ಘಟಿಸಿ ಹಲವು ದಶಕಗಳೇ ಸಂದಿರುವ ಸಂದರ್ಭದಲ್ಲಿ, ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡ ಎನ್ನುವುದಕ್ಕೆ ನಾವು ಇನ್ನಷ್ಟು ವಿಸ್ತಾರವಾದ ಅರ್ಥಗಳನ್ನು ಹುಡುಕಿಕೊಳ್ಳಬೇಕಾಗುತ್ತದೆ. ತಂತ್ರಜ್ಞಾನದ ಭಾಷೆಯೆಂದೇ ಹೆಸರಾದ ಇಂಗ್ಲಿಷಿನಲ್ಲಿ (ಅಥವಾ ಜಗತ್ತಿನ ಬೇರಾವುದೇ ಭಾಷೆಯಲ್ಲಿ) ಏನೇನು ಸಾಧ್ಯವೋ, ಅವನ್ನೆಲ್ಲ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿಕೊಂಡು ಕನ್ನಡದಲ್ಲೂ ಸಾಧ್ಯವಾಗಿಸಿಕೊಳ್ಳುವತ್ತ ನಮ್ಮ ಗಮನ ಹರಿಯಬೇಕಾದ್ದು ಅತ್ಯಗತ್ಯ.

ಕನ್ನಡ ಅಕ್ಷರಗಳನ್ನು ಟೈಪಿಸುವುದನ್ನು ಮೀರಿದ ಹಲವು ಹೊಸ ಸವಲತ್ತುಗಳು ನಮ್ಮ ಭಾಷೆಗೆ ಈಗಾಗಲೇ ಲಭ್ಯವಾಗಿವೆ. ಸಮಾಜ ಜಾಲಗಳಲ್ಲಿ, ಜಾಲತಾಣಗಳಲ್ಲಿ ಇದೀಗ ಕನ್ನಡ ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುತ್ತಿದೆ. ಜಾಲತಾಣ ಹಾಗೂ ಇಮೇಲ್ ಸಂದೇಶಗಳಲ್ಲಿನ ಮಾಹಿತಿ ಮಾತ್ರವೇ ಅಲ್ಲ, ಜಾಲತಾಣಗಳ ವಿಳಾಸ (ಡೊಮೈನ್ ನೇಮ್) ಹಾಗೂ ಇಮೇಲ್ ವಿಳಾಸಗಳನ್ನೂ ಕನ್ನಡದಲ್ಲೇ ರೂಪಿಸಿಕೊಳ್ಳುವುದು ಇದೀಗ ಸಾಧ್ಯವಾಗಿದೆ. ಉದಾಹರಣೆಗೆ, ಕನ್ನಡದಲ್ಲಿ ವಿಜ್ಞಾನದ ಮಾಹಿತಿಯಿರುವ 'ಇಜ್ಞಾನ' ಜಾಲತಾಣ, ಈವರೆಗೆ ejnana.com ಎಂಬ ಇಂಗ್ಲಿಷ್ ವಿಳಾಸದ ಮೂಲಕ ಮಾತ್ರವೇ ದೊರಕುತ್ತಿದ್ದದ್ದು, ಈಗ ಕನ್ನಡ ಲಿಪಿಯಲ್ಲೇ ಇರುವ 'ಇಜ್ಞಾನ.ಭಾರತ' ಎಂಬ ವಿಳಾಸದ ಮೂಲಕವೂ ದೊರಕುತ್ತಿದೆ. ಹಾಗೆಯೇ, ಕನ್ನಡದಲ್ಲೇ ಇರುವ 'ಸಂಪಾದಕ@ಇಜ್ಞಾನ.ಭಾರತ' ಎನ್ನುವಂತಹ ಇಮೇಲ್ ವಿಳಾಸಗಳನ್ನೂ ನಾವೀಗ ರೂಪಿಸಿಕೊಳ್ಳಬಹುದು.

ಅಂದಹಾಗೆ ಈ ಬದಲಾವಣೆಗಳೆಲ್ಲ ಅಂತರಜಾಲಕ್ಕೆ ಮಾತ್ರ ಸೀಮಿತವೇನಲ್ಲ. ಕನ್ನಡದ ಪುಸ್ತಕಗಳು ಈಗ ಮುದ್ರಿತ ರೂಪದಿಂದ ವಿದ್ಯುನ್ಮಾನ ಪುಸ್ತಕ (ಇ-ಬುಕ್) ಹಾಗೂ ಕೇಳುಪುಸ್ತಕಗಳ (ಆಡಿಯೋಬುಕ್) ರೂಪಕ್ಕೂ ಬದಲಾಗುತ್ತಿವೆ. ಹೆಚ್ಚುಹೆಚ್ಚಿನ ಪ್ರಮಾಣದಲ್ಲಿ ಸೃಷ್ಟಿಯಾಗುತ್ತಿರುವ ಮಾಹಿತಿಯನ್ನು ಹೊಸ ರೀತಿಗಳಲ್ಲಿ ಬಳಸಿಕೊಳ್ಳುವ ಕೆಲಸಗಳೂ ನಡೆದಿವೆ. ಮುದ್ರಿತ ಪಠ್ಯದ ಡಿಜಿಟಲೀಕರಣ (ಓಸಿಆರ್), ಇತರ ಭಾಷೆಗಳ ಪಠ್ಯದ ಸ್ವಯಂಚಾಲಿತ ಅನುವಾದ (ಮಶೀನ್ ಟ್ರಾನ್ಸ್‌ಲೇಶನ್), ಪಠ್ಯದಿಂದ ಧ್ವನಿರೂಪಕ್ಕೆ ಮಾಹಿತಿಯ ಪರಿವರ್ತನೆ (ಟೆಕ್ಸ್ಟ್ ಟು ಸ್ಪೀಚ್), ಧ್ವನಿರೂಪದ ಮಾಹಿತಿಯನ್ನು ಗುರುತಿಸಿ ಡಿಜಿಟಲೀಕರಿಸುವ ವ್ಯವಸ್ಥೆ (ಸ್ಪೀಚ್ ರೆಕಗ್ನಿಶನ್) ಮುಂತಾದ ಅನೇಕ ಹೊಸ ಸಾಧ್ಯತೆಗಳು ಇದೀಗ ಕನ್ನಡದಲ್ಲೂ ಸಾಕಾರಗೊಂಡಿವೆ. ವಿವಿಧ ಜಾಲತಾಣಗಳು, ಕಂಪ್ಯೂಟರಿನ ತಂತ್ರಾಂಶ ಮತ್ತು ಮೊಬೈಲ್ ಆಪ್‌ಗಳು ಕನ್ನಡದ ಬಳಕೆದಾರರನ್ನೂ ಗಂಭೀರವಾಗಿ ಪರಿಗಣಿಸುತ್ತಿರುವುದು ಇನ್ನೊಂದು ಸ್ವಾಗತಾರ್ಹ ಬದಲಾವಣೆ. ಇದರಿಂದಾಗಿ ವಿವಿಧ ಬಗೆಯ ಸೇವೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ನಮ್ಮ ಭಾಷೆಯಲ್ಲೇ ಬಳಸುವ ಅವಕಾಶ ಕನ್ನಡದ ಬಳಕೆದಾರನಿಗೆ ದೊರೆತಿದೆ. ಇದೇರೀತಿ ಹಲವು ಭಾಷೆಗಳಲ್ಲಿ ರೂಪುಗೊಂಡ ಪಠ್ಯಪೂರಕ ಮಾಹಿತಿ ಹಾಗೂ ವೀಡಿಯೋಗಳು ಕನ್ನಡಕ್ಕೆ ಅನುವಾದವಾಗುತ್ತಿರುವುದೂ ಇನ್ನೊಂದು ಉತ್ತಮ ಬೆಳವಣಿಗೆ.

ಮೇಲೆ ಹೇಳಿದ ಎಲ್ಲವೂ ಒಳ್ಳೆಯ ಬೆಳವಣಿಗೆಗಳೇ. ಆದರೆ ಆಗಬೇಕಿರುವ ಕೆಲಸ ಇನ್ನೂ ಬಹಳಷ್ಟಿದೆ. ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಎಲ್ಲ ಹಂತಗಳಲ್ಲೂ ನಮಗೆ ಬೇಕಾದ ಮಾಹಿತಿ ನಮ್ಮ ಭಾಷೆಯಲ್ಲೇ ಸಿಗುವಂತೆ ಮಾಡಿಕೊಳ್ಳುವುದು ಇಂತಹ ಕೆಲಸಗಳಲ್ಲಿ ಬಹಳ ಮುಖ್ಯವಾದದ್ದು. ಮಕ್ಕಳ ಕಲಿಕೆ ಸುಲಭವೂ ಪರಿಣಾಮಕಾರಿಯೂ ಆಗಿರುವಂತೆ ನೋಡಿಕೊಳ್ಳಬೇಕಾದರೆ ಇದು ಅತ್ಯಗತ್ಯ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಇನ್ನಷ್ಟು ಬೆಳೆಯಬೇಕೆಂದರೆ ಕನ್ನಡವನ್ನು ಚೆನ್ನಾಗಿ ಬಲ್ಲ ಪರಿಣತರು ಹೆಚ್ಚುಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಇದು ಸಾಧ್ಯವಾಗಬೇಕೆಂದರೆ ಮೊದಲಿಗೆ ಕನ್ನಡದ ಮಕ್ಕಳಿಗೆ ಮಾಹಿತಿ ತಂತ್ರಜ್ಞಾನ ಕುರಿತ ಶಿಕ್ಷಣವೂ ಕನ್ನಡದಲ್ಲೇ ಸಿಗುವಂತಾಗಬೇಕು. ಮಾಹಿತಿ ತಂತ್ರಜ್ಞಾನ ಶಿಕ್ಷಣ ಎಂದರೆ ಕಂಪ್ಯೂಟರ್ ಮತ್ತು ಅದರಲ್ಲಿನ ಸವಲತ್ತುಗಳ ಬಳಕೆ ಕುರಿತ ತರಬೇತಿ ಎನ್ನುವ ತಪ್ಪು ಕಲ್ಪನೆ ಅನೇಕರಲ್ಲಿದೆ. ಮುಂದಿನ ದಿನಗಳಲ್ಲೂ ನಾವು ಇಷ್ಟಕ್ಕೇ ಸೀಮಿತವಾಗದೆ ಕಂಪ್ಯುಟೇಶನಲ್ ಥಿಂಕಿಂಗ್‌ನಂತಹ ಪರಿಕಲ್ಪನೆಗಳನ್ನೂ ಚಿಕ್ಕವಯಸ್ಸಿನಿಂದಲೇ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕಿದೆ. ಕೇವಲ ಬಳಕೆದಾರರಾಗುವುದಕ್ಕಷ್ಟೇ ಸೀಮಿತರಾಗದೆ ನಾವೂ ಹೊಸದೇನನ್ನಾದರೂ ಸೃಷ್ಟಿಸಬೇಕು ಎನ್ನುವ ಹಂಬಲ ಅವರಲ್ಲಿ ಮೂಡುವಂತೆಯೂ ನಾವು ಅವರನ್ನು ಪ್ರೇರೇಪಿಸಬೇಕಿದೆ. ಇದಕ್ಕೆ ಬೇಕಾಗಿದ್ದನ್ನೆಲ್ಲ ಇಂಗ್ಲಿಷ್ ಅಥವಾ ಬೇರಾವುದೇ ಭಾಷೆಯ ಮೂಲಕವೇ ಕಲಿಯಬೇಕು ಎನ್ನುವ ಅನಿವಾರ್ಯತೆಯನ್ನು ಹೋಗಲಾಡಿಸಿದರೆ ಆಗ ನಮ್ಮ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು ಸಾಧ್ಯವಾಗಲಿದೆ. ಇಂತಹ ಪ್ರಯತ್ನಗಳ ಫಲವಾಗಿ ಮಕ್ಕಳು ಈ ಕ್ಷೇತ್ರದ ಸಾಧ್ಯತೆಗಳ ಬಗ್ಗೆ ಕನ್ನಡದಲ್ಲೇ ಕಲಿತರೆ, ತಾವು ಕಲಿತದ್ದನ್ನು ಮುಂದೆ ಕನ್ನಡದ ಬೆಳವಣಿಗೆಗಾಗಿಯೇ ಉಪಯೋಗಿಸಲು ಅವರು ಯೋಚಿಸುವ ಸಾಧ್ಯತೆ ಹೆಚ್ಚು. ಅಷ್ಟೇ ಏಕೆ, ಮಾಹಿತಿ ತಂತ್ರಜ್ಞಾನದ ವ್ಯಾಪ್ತಿ ಗ್ರಾಮೀಣ ಪ್ರದೇಶಗಳಲ್ಲೂ ಕ್ಷಿಪ್ರವಾಗಿ ವಿಸ್ತರಿಸುತ್ತಿರುವ ಈ ಕಾಲದಲ್ಲಿ ಅಲ್ಲಿನ ಗ್ರಾಹಕರನ್ನೇ ಗಮನದಲ್ಲಿಟ್ಟುಕೊಂಡ ನವೋದ್ಯಮಗಳ ಸ್ಥಾಪನೆ ಹಾಗೂ ಬೆಳವಣಿಗೆಗೂ ಇದು ಕಾರಣವಾಗಬಲ್ಲದು.

ಇದನ್ನೆಲ್ಲ ಸಾಧ್ಯವಾಗಿಸುವ ನಿಟ್ಟಿನಲ್ಲಿ ಸರಕಾರದಿಂದಾಗಲೀ ಸಮುದಾಯದಿಂದಾಗಲೀ ಈವರೆಗೆ ನಡೆದಿರುವ ಕೆಲಸದ ಪ್ರಮಾಣ ಬಹಳ ಕಡಿಮೆ ಎಂದೇ ಹೇಳಬೇಕು. ಮಾಹಿತಿ ತಂತ್ರಜ್ಞಾನದ ಪರಿಕಲ್ಪನೆಗಳನ್ನು ಕನ್ನಡದಲ್ಲೇ ಹೇಳಿಕೊಡಲು ಪ್ರಯತ್ನಿಸಿರುವ ಒಂದಷ್ಟು ಪುಸ್ತಕಗಳು ಹಾಗೂ ಬೆರಳೆಣಿಕೆಯಷ್ಟು ಜಾಲತಾಣಗಳನ್ನು ಹೊರತುಪಡಿಸಿದರೆ ಸಂಘಟಿತ ಪ್ರಯತ್ನ ನಡೆದಿರುವ ಉದಾಹರಣೆಗಳು ನಮಗೆ ಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುವುದಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶಿಕ್ಷಣವನ್ನು ಚಿಕ್ಕವಯಸ್ಸಿನಿಂದಲೇ ಪ್ರಾರಂಭಿಸುವ ನಿಟ್ಟಿನಲ್ಲಿ ಮಹತ್ವ ನೀಡಲಾಗಿರುವ ಇಂದಿನ ಸಂದರ್ಭ ನಮಗೆ ಈ ಕುರಿತು ಒಂದಷ್ಟು ಕೆಲಸ ಮಾಡಲು ಪ್ರೇರಣೆ ನೀಡಬೇಕಿದೆ. ಮಾಹಿತಿ ತಂತ್ರಜ್ಞಾನ ಶಿಕ್ಷಣದ ಪರಿಕಲ್ಪನೆ ಕಂಪ್ಯೂಟರನ್ನೂ ಅದರಲ್ಲಿರುವ ತಂತ್ರಾಂಶಗಳನ್ನೂ ಬಳಸುವುದು ಹೇಗೆಂದು ಹೇಳಿಕೊಡುವ ಹಂತವನ್ನು ಬಹಳ ಬೇಗನೆ ಮೀರಿ ಬೆಳೆಯಬೇಕಿದೆ. ಇದಕ್ಕೆ ಬೇಕಾದ ಆರ್ಥಿಕ ಸಂಪನ್ಮೂಲವನ್ನು ಸರಕಾರಗಳು ಹಾಗೂ ಸಿಎಸ್‌ಆರ್ ಉಪಕ್ರಮಗಳು ಒದಗಿಸುವುದು ಸಾಧ್ಯವಾದರೆ ಅಗತ್ಯ ಪಠ್ಯಸಾಮಗ್ರಿ ಹಾಗೂ ಪಠ್ಯಪೂರಕ ಮಾಹಿತಿಯನ್ನು ಸಮುದಾಯದ ಸಹಾಯದಿಂದ ಅಭಿವೃದ್ಧಿಪಡಿಸಿಕೊಳ್ಳುವುದು ಹೆಚ್ಚೇನೂ ಕಷ್ಟವಾಗಲಾರದು.

ನವೆಂಬರ್ ೨೭, ೨೦೨೦ರ ಆಂದೋಲನದಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com