ಮನೆಯ ಟಿವಿ-ಫ್ರಿಜ್-ವಾಶಿಂಗ್ ಮಶೀನುಗಳಿಂದ ಕಾರು-ಬಸ್ಸು-ಕಾರ್ಖಾನೆಯ ಯಂತ್ರಗಳವರೆಗೆ ಅಸಂಖ್ಯ ಸಾಧನಗಳು ಈಗ ಕಂಪ್ಯೂಟರುಗಳಾಗಿ ಬದಲಾಗಿವೆ
ಮನೆಯ ಟಿವಿ-ಫ್ರಿಜ್-ವಾಶಿಂಗ್ ಮಶೀನುಗಳಿಂದ ಕಾರು-ಬಸ್ಸು-ಕಾರ್ಖಾನೆಯ ಯಂತ್ರಗಳವರೆಗೆ ಅಸಂಖ್ಯ ಸಾಧನಗಳು ಈಗ ಕಂಪ್ಯೂಟರುಗಳಾಗಿ ಬದಲಾಗಿವೆImage by Gerd Altmann from Pixabay

ಎಲ್ಲೆಲ್ಲೂ ಐಟಿ!

ಮಾಹಿತಿ ತಂತ್ರಜ್ಞಾನದ ಪರಿಕಲ್ಪನೆ ಇಷ್ಟೆಲ್ಲ ಬದಲಾಗಿರುವುದರಿಂದ, ಅದು ನಮ್ಮೆಲ್ಲರ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವುದರಿಂದ ಆ ಕ್ಷೇತ್ರದ ಬಗ್ಗೆ ನಮ್ಮನಮ್ಮ ಅಗತ್ಯಾನುಸಾರ ತಿಳಿದುಕೊಂಡಿರುವುದೂ ಇದೀಗ ಅತ್ಯಗತ್ಯವೆನಿಸಿದೆ.

ಇನ್‌ಫರ್ಮೇಶನ್ ಟೆಕ್ನಾಲಜಿ, ಅಂದರೆ ಮಾಹಿತಿ ತಂತ್ರಜ್ಞಾನದ ಹೆಸರನ್ನು ನಾವೆಲ್ಲ ಕೇಳಿಯೇ ಇರುತ್ತೇವೆ. ಇದರ ಹ್ರಸ್ವರೂಪವಾದ 'ಐಟಿ' ಅಂತೂ ನಮಗೆಲ್ಲ ಇನ್ನೂ ಹೆಚ್ಚು ಪರಿಚಯವಿರುವ ಶಬ್ದ. ಇಂದು ನಮ್ಮ ಬದುಕಿನಲ್ಲಿ ಐಟಿಯ ಪಾತ್ರ ನಿಜಕ್ಕೂ ಮಹತ್ವದ್ದು.

ಇಷ್ಟಕ್ಕೂ ಈ ಐಟಿ - ಇನ್‌ಫರ್ಮೇಶನ್ ಟೆಕ್ನಾಲಜಿ - ಅಂದರೆ ಏನು?

'ದತ್ತಾಂಶದ ಸಂಸ್ಕರಣೆ ಹಾಗೂ ವಿತರಣೆಗಾಗಿ ಕಂಪ್ಯೂಟರ್ ವ್ಯವಸ್ಥೆಗಳು, ತಂತ್ರಾಂಶಗಳು ಮತ್ತು ಜಾಲಗಳ ಅಭಿವೃದ್ಧಿ, ನಿರ್ವಹಣೆ ಹಾಗೂ ಬಳಕೆಯನ್ನು ಒಳಗೊಂಡ ತಂತಜ್ಞಾನ'ವೇ ಮಾಹಿತಿ ತಂತ್ರಜ್ಞಾನ ಎಂದು ಮೆರಿಯಮ್-ವೆಬ್‌ಸ್ಟರ್ ನಿಘಂಟು ಹೇಳುತ್ತದೆ.

ಈ ವಿವರಣೆ ನೋಡಿದಾಗ ನಮ್ಮಲ್ಲಿ ಇನ್ನೂ ಕೆಲ ಪ್ರಶ್ನೆಗಳು ಮೂಡುವುದು ಸಹಜ. ಅಂತಹ ಪ್ರಶ್ನೆಗಳಲ್ಲಿ ಮುಖ್ಯವಾದದ್ದು - ದತ್ತಾಂಶವೆಂದರೆ ಏನು?

ದತ್ತಾಂಶವನ್ನು ಇಂಗ್ಲಿಷಿನಲ್ಲಿ ಡೇಟಾ ಎಂದು ಕರೆಯುತ್ತಾರೆ. ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ನಾವು ಪ್ರತಿದಿನವೂ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತೇವಲ್ಲ (ಉದಾ: ಮೊಬೈಲಿನಲ್ಲಿ ಮೆಸೇಜ್ ಕಳಿಸುವುದು, ವೀಡಿಯೊ ನೋಡುವುದು, ಎಟಿಎಂನಿಂದ ಹಣ ತೆಗೆಯುವುದು ಇತ್ಯಾದಿ), ಆಗೆಲ್ಲ ಒಂದಷ್ಟು ವಿವರಗಳು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾವಣೆಯಾಗುತ್ತವೆ, ಸಂಬಂಧಪಟ್ಟ ವ್ಯವಸ್ಥೆಗಳಲ್ಲಿ ಶೇಖರವೂ ಆಗುತ್ತವೆ. ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ಇಂತಹ ವಿವರಗಳಿಗೆ ಐಟಿ ಭಾಷೆಯಲ್ಲಿ ನೀಡಲಾಗಿರುವ ಹೆಸರೇ ಡೇಟಾ. ಮನುಷ್ಯನ ದೇಹದಲ್ಲಿ ರಕ್ತ ಹೇಗೋ ಐಟಿ ಕ್ಷೇತ್ರದಲ್ಲಿ ದತ್ತಾಂಶವೂ ಅಷ್ಟೇ ಮುಖ್ಯ. ಇಲ್ಲಿನ ಬಹುತೇಕ ವ್ಯವಹಾರಗಳು ಈ ದತ್ತಾಂಶವನ್ನೇ ಅವಲಂಬಿಸಿರುತ್ತವೆ.

ದತ್ತಾಂಶವನ್ನು ಅಧ್ಯಯನಮಾಡಿ, ವಿಶ್ಲೇಷಿಸಿ ಪಡೆದುಕೊಂಡ ಜ್ಞಾನವೇ ಮಾಹಿತಿ. ಅದೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತಳಹದಿ. ಇಂದು ವಿಶ್ವದೆಲ್ಲೆಡೆಯ ಹಲವು ಬೃಹತ್ ಸಂಸ್ಥೆಗಳ ವ್ಯವಹಾರ ದತ್ತಾಂಶ ಹಾಗೂ ಮಾಹಿತಿಯ ಆಧಾರದಲ್ಲೇ ನಡೆಯುತ್ತಿದೆ. ಬೇರೆಬೇರೆ ಕಡೆಗಳಿಂದ ಸಂಗ್ರಹಿಸಿದ ದತ್ತಾಂಶ ಮಹತ್ವದ ಮಾಹಿತಿಯನ್ನು ಕೊಡಬಲ್ಲದೆಂದು ಅರಿತಿರುವ ಸಂಸ್ಥೆಗಳು ಅದನ್ನು ಬಳಸಿ ಅಗಾಧ ಪ್ರಮಾಣದ ಹಣವನ್ನೂ ಸಂಪಾದಿಸುತ್ತಿವೆ. ಬೇರೆಬೇರೆ ಕಡೆ ಲಭ್ಯವಿರುವ ಮಾಹಿತಿಯ ಪೈಕಿ ನಮಗೆ ಬೇಕಾದ್ದನ್ನು ಹುಡುಕಿಕೊಡುವ ಉದ್ದೇಶದಿಂದ ಪ್ರಾರಂಭವಾದ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಮಾರುಕಟ್ಟೆಯ ಮೌಲ್ಯ ೧ ಟ್ರಿಲಿಯನ್ (ಸಾವಿರ ಶತಕೋಟಿ) ಡಾಲರುಗಳಿಗೂ ಹೆಚ್ಚು!

ದತ್ತಾಂಶದ ಸಂಸ್ಕರಣೆ ಹಾಗೂ ವಿತರಣೆಗಾಗಿ ಕಂಪ್ಯೂಟರ್ ವ್ಯವಸ್ಥೆಗಳು ಬೇಕು ಎಂದು ಮೇಲಿನ ವಿವರಣೆಯಲ್ಲಿ ನಾವು ನೋಡಿದೆವು. ಕಂಪ್ಯೂಟರ್ ಎಂದರೆ ಏನು ಎನ್ನುವುದು ಈಗ ನಮ್ಮಲ್ಲಿ ಮೂಡಬಹುದಾದ ಇನ್ನೊಂದು ಪ್ರಶ್ನೆ.

ಕಂಪ್ಯೂಟರ್ ಎಂದತಕ್ಷಣ ಲ್ಯಾಪ್‌ಟಾಪ್ ಅಥವಾ ಅದಕ್ಕಿಂತ ಕೊಂಚ ದೊಡ್ಡದಾದ ಡೆಸ್ಕ್‌ಟಾಪ್ ಕಂಪ್ಯೂಟರುಗಳ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಈಗ ನಮಗೆ ಡೆಸ್ಕ್‌ಟಾಪ್‌ಗಳ ಗಾತ್ರವೇ ಜಾಸ್ತಿ ಎನ್ನಿಸುತ್ತದೆ, ನಿಜ. ಆದರೆ ಹಿಂದಿನ ಕಾಲದಲ್ಲಿ ಕಂಪ್ಯೂಟರುಗಳು ಇನ್ನೂ ದೊಡ್ಡದಾಗಿರುತ್ತಿದ್ದವು ಮತ್ತು ಅವನ್ನು ಇಡಲು ಬರಿಯ ಮೇಜಲ್ಲ, ದೊಡ್ಡ ಕೋಣೆಗಳೇ ಬೇಕಾಗುತ್ತಿದ್ದವು.

ಅದಕ್ಕೂ ಮುನ್ನ ಎಲ್ಲ ಲೆಕ್ಕಾಚಾರಗಳನ್ನೂ ಮಾಡುತ್ತಿದ್ದದ್ದು ಮನುಷ್ಯರೇ. ಲೆಕ್ಕಾಚಾರವೆಂದರೆ ಮನೆಯ ತಿಂಗಳ ಖರ್ಚುವೆಚ್ಚದ ವಿವರ - ಶಾಲೆಯಲ್ಲಿ ಕೊಟ್ಟ ಮನೆಗೆಲಸ ಮಾತ್ರವೇ ಅಲ್ಲ; ತಂತ್ರಜ್ಞರು, ವಿಜ್ಞಾನಿಗಳು, ನಾವಿಕರು ಬಳಸುತ್ತಿದ್ದ ಅದೆಷ್ಟೋ ಕ್ಲಿಷ್ಟ ಲೆಕ್ಕಾಚಾರಗಳಿಗೂ ಆಗ ಇದ್ದದ್ದು ಇದೊಂದೇ ಮಾರ್ಗ. ಹೀಗೆ ಲೆಕ್ಕಮಾಡುತ್ತಿದ್ದ (ಕಂಪ್ಯೂಟ್) ಜನರನ್ನೇ ಆಗ 'ಕಂಪ್ಯೂಟರ್'ಗಳೆಂದು ಕರೆಯುತ್ತಿದ್ದರು. ಅಂದಿನ ಸಂದರ್ಭದಲ್ಲಿ ಕಂಪ್ಯೂಟರ್ ಎಂಬ ಪದಕ್ಕೆ ಇದ್ದ ಅರ್ಥವೇ ಅದು - ಯಾರು ಕಂಪ್ಯೂಟ್ ಮಾಡುತ್ತಾರೋ ಅವರೇ ಕಂಪ್ಯೂಟರ್!

ಲೆಕ್ಕಾಚಾರಗಳನ್ನೆಲ್ಲ, ಅವು ಎಷ್ಟು ಕ್ಲಿಷ್ಟವೇ ಆಗಿದ್ದರೂ, ಮನುಷ್ಯರೇ ಮಾಡಬೇಕಿದ್ದರಿಂದ ಕೆಲಸ ಬಹಳ ನಿಧಾನವಾಗುತ್ತಿತ್ತು. ಆಗಾಗ್ಗೆ ತಪ್ಪುಗಳಾಗುವ ಸಾಧ್ಯತೆಯೂ ಇರುತ್ತಿತ್ತು. ಮನುಷ್ಯ ಕಂಪ್ಯೂಟರುಗಳ ಸ್ಥಾನಕ್ಕೆ ಕಂಪ್ಯೂಟರ್ ಯಂತ್ರಗಳನ್ನು ತರುವ ಪ್ರಯತ್ನಗಳು ಪ್ರಾರಂಭವಾಗಿದ್ದು ಅಂತಹ ಸನ್ನಿವೇಶಗಳನ್ನು ತಪ್ಪಿಸಲೆಂದೇ. ಮನುಷ್ಯರು ಮಾಡುವ ಲೆಕ್ಕಾಚಾರಗಳನ್ನು ಯಂತ್ರವೇ ಮಾಡುವ ಹಾಗಾದರೆ ಲೆಕ್ಕಾಚಾರದ ವೇಗ ಹಾಗೂ ನಿಖರತೆಗಳೆರಡೂ ಹೆಚ್ಚುತ್ತವೆ ಎಂಬ ಉದ್ದೇಶದೊಂದಿಗೆ ಪ್ರಾರಂಭವಾದ ಇಂತಹ ಪ್ರಯತ್ನಗಳ ಫಲವಾಗಿ ಮೊದಲ ಕಂಪ್ಯೂಟರುಗಳು ರೂಪುಗೊಂಡವು. ಮಾಹಿತಿ ತಂತ್ರಜ್ಞಾನ ಬೆಳೆದಂತೆ, ಒಂದಿಡೀ ಕೋಣೆಯಷ್ಟು ದೊಡ್ಡದಾಗಿರುತ್ತಿದ್ದ ಕಂಪ್ಯೂಟರುಗಳು ಮೇಜಿನ ಮೇಲೆ, ತೊಡೆಯ ಮೇಲೆ, ಅಂಗೈ ಮೇಲೆ ಇರಿಸಿಕೊಳ್ಳುವ ಗಾತ್ರಕ್ಕೂ ಇಳಿದವು. ಇಂದಿನ ಕಂಪ್ಯೂಟರುಗಳ ಸಂಸ್ಕರಣಾ ಸಾಮರ್ಥ್ಯ ಅದೆಷ್ಟು ಉನ್ನತ ಮಟ್ಟದಲ್ಲಿದೆ ಎಂದರೆ ಮನುಷ್ಯರು ದಿನಗಟ್ಟಲೆ, ವರ್ಷಗಟ್ಟಲೆ ಮಾಡುವ ಲೆಕ್ಕಾಚಾರಗಳನ್ನು ಅವು ಕೆಲವೇ ಸೆಕೆಂಡುಗಳಲ್ಲಿ ಮಾಡಿ ಮುಗಿಸಿಬಿಡುತ್ತವೆ.

ಕಂಪ್ಯೂಟರುಗಳ ಸಂಸ್ಕರಣಾ ಸಾಮರ್ಥ್ಯದ ಜೊತೆಗೆ ಅವುಗಳ ಸ್ವರೂಪದಲ್ಲೂ ಆಮೂಲಾಗ್ರ ಬದಲಾವಣೆಗಳಾಗಿವೆ. ಹಿಂದಿನ ಕೋಣೆಗಾತ್ರದ ಕಂಪ್ಯೂಟರಿಗಿಂತ ಹೆಚ್ಚಿನ ಸಾಮರ್ಥ್ಯ ಅಂಗೈಯಗಲದ ಇಂದಿನ ಮೊಬೈಲುಗಳಲ್ಲಿರುವುದು ನಮಗೆ ಗೊತ್ತೇ ಇದೆ. ಹಾಗೆಯೇ ಮನೆಯ ಟಿವಿ-ಫ್ರಿಜ್-ವಾಶಿಂಗ್ ಮಶೀನುಗಳಿಂದ ಕಾರು-ಬಸ್ಸು-ಕಾರ್ಖಾನೆಯ ಯಂತ್ರಗಳವರೆಗೆ ಅಸಂಖ್ಯ ಇನ್ನಿತರ ಸಾಧನಗಳೂ ಈಗ ವಿಭಿನ್ನ ಕೆಲಸಗಳನ್ನು ನಿರ್ವಹಿಸುವ ಕಂಪ್ಯೂಟರುಗಳಾಗಿ ಬದಲಾಗಿವೆ. ಹಾಗಾಗಿಯೇ, ಮಾಹಿತಿ ತಂತ್ರಜ್ಞಾನದ ಇಂದಿನ ವ್ಯಾಪ್ತಿ ನಮಗೆ ಪರಿಚಯವಿರುವ ಡೆಸ್ಕ್‌ಟಾಪ್-ಲ್ಯಾಪ್‌ಟಾಪ್ ಕಂಪ್ಯೂಟರುಗಳಿಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ. ಬೇರೆಬೇರೆ ಉದ್ದೇಶಗಳಿಗಾಗಿ ಬಳಕೆಯಾಗುವ ಸಣ್ಣ-ದೊಡ್ಡ ಯಂತ್ರಗಳು, ಸೆನ್ಸರುಗಳು, ಅವನ್ನೆಲ್ಲ ಸಂಪರ್ಕಿಸುವ ಜಾಲಗಳು, ಅವೆಲ್ಲದರ ನಡುವೆ ನಡೆಯುವ ಸಂವಹನ - ಎಲ್ಲವೂ ಈಗಾಗಲೇ ಮಾಹಿತಿ ತಂತ್ರಜ್ಞಾನದ ವ್ಯಾಪ್ತಿಯೊಳಗೆ ಬಂದುಬಿಟ್ಟಿವೆ.

ಮಾಹಿತಿ ತಂತ್ರಜ್ಞಾನದ ಪರಿಕಲ್ಪನೆ ಇಷ್ಟೆಲ್ಲ ಬದಲಾಗಿರುವುದರಿಂದ, ಅದು ನಮ್ಮೆಲ್ಲರ ಬದುಕನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವುದರಿಂದ ಆ ಕ್ಷೇತ್ರದ ಬಗ್ಗೆ ನಮ್ಮನಮ್ಮ ಅಗತ್ಯಾನುಸಾರ ತಿಳಿದುಕೊಂಡಿರುವುದೂ ಇದೀಗ ಅತ್ಯಗತ್ಯವೆನಿಸಿದೆ. ತಂತ್ರಜ್ಞಾನದ ಸವಲತ್ತುಗಳನ್ನು ಬಳಸುವುದು ಹೇಗೆಂದು ತಿಳಿದುಕೊಂಡರೆ ಅದು ನಮ್ಮ ನಿತ್ಯದ ಹಲವು ಕೆಲಸಗಳನ್ನು ಸುಲಭಮಾಡಿಕೊಳ್ಳಲು ನೆರವಾಗಬಲ್ಲದು. ಮಾಹಿತಿ ತಂತ್ರಜ್ಞಾನದ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು, ಹೊಸ ಸವಲತ್ತುಗಳನ್ನು ರೂಪಿಸುವುದು ಹೇಗೆಂದು ತಿಳಿದುಕೊಂಡರೆ? ಅದು ನಮಗೆ ಹೊಸ ಅವಕಾಶಗಳನ್ನು ಸೃಷ್ಟಿಸಬಲ್ಲದು, ನಮ್ಮ ಬದುಕನ್ನು ಬದಲಿಸಿಕೊಳ್ಳುವುದರ ಜೊತೆಗೆ ಇತರರ ಬದುಕಿನ ಮೇಲೂ ಧನಾತ್ಮಕ ಪರಿಣಾಮ ಉಂಟುಮಾಡುವುದು ಸಾಧ್ಯವಾಗಬಹುದು.

ಹಾಗಾಗಿಯೇ, ಮಾಹಿತಿ ತಂತ್ರಜ್ಞಾನ ಶಿಕ್ಷಣದ ಬಗ್ಗೆ ನಾವೆಲ್ಲ ಇದೀಗ ಗಂಭೀರವಾಗಿ ಗಮನಹರಿಸಬೇಕಿದೆ. ಮಾಹಿತಿ ತಂತ್ರಜ್ಞಾನ ಶಿಕ್ಷಣ ಎಂದರೆ ಕಂಪ್ಯೂಟರ್ ಮತ್ತು ಅದರಲ್ಲಿನ ಸವಲತ್ತುಗಳ ಬಳಕೆ ಕುರಿತ ತರಬೇತಿ ಅಷ್ಟೇ ಅಲ್ಲ, ಆ ಸವಲತ್ತುಗಳ ಬಳಕೆದಾರರಾಗುವುದಕ್ಕಷ್ಟೇ ಸೀಮಿತರಾಗದೆ ನಾವೂ ಹೊಸದೇನನ್ನಾದರೂ ಸೃಷ್ಟಿಸುವುದು ಹೇಗೆ ಎನ್ನುವುದನ್ನೂ ನಾವು ಕಲಿಯಬೇಕಿದೆ. ಕಂಪ್ಯೂಟರ್ ಹೇಗೆ ಕೆಲಸಮಾಡುತ್ತದೆ, ನೀಡಿದ ಸಮಸ್ಯೆಗಳನ್ನು ಅದು ಹೇಗೆ ಬಿಡಿಸುತ್ತದೆ ಎನ್ನುವುದನ್ನು ಕಲಿತರೆ ಯಂತ್ರಗಳಾಚೆಗಿನ ಬದುಕಿನಲ್ಲೂ ಅದು ನಮಗೆ ಸಹಾಯ ಮಾಡಬಲ್ಲದು. ಕಂಪ್ಯೂಟರ್ ಶಿಕ್ಷಣಕ್ಕೆ ಹಿಂದೆಂದಿಗಿಂತ ಹೆಚ್ಚಿನ ಮಹತ್ವ ನೀಡಿರುವ ಹೊಸ ಶಿಕ್ಷಣ ನೀತಿ ಮತ್ತು ಕಂಪ್ಯೂಟರುಗಳಲ್ಲಿ ಕನ್ನಡವನ್ನೇ ಬಳಸಲು ಒತ್ತುನೀಡಿರುವ ಕನ್ನಡ ಕಾಯಕ ವರ್ಷದ ಕಾರ್ಯಸೂಚಿಗಳಿಂದ ಪ್ರೇರಣೆ ಪಡೆದು ನಾವೆಲ್ಲರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಕೇಂದ್ರಿತವಾದ ಹಲವು ಹೊಸ ಸಾಧನೆಗಳು ಖಂಡಿತವಾಗಿಯೂ ಸಾಧ್ಯವಾಗುತ್ತವೆ.

ಜನವರಿ ೨೦೨೧ರ ಬಾಲವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com