ರೋಗಲಕ್ಷಣಗಳ ಬಗ್ಗೆ ಗೂಗಲ್ ಮಾಡುತ್ತ, ಅದು ಹೇಳುವ ರೋಗಗಳೆಲ್ಲ ನಮಗೂ ಇರಬಹುದೆಂದು ಭ್ರಮಿಸಿಕೊಂಡು ಒದ್ದಾಡುವ ಪರಿಸ್ಥಿತಿಯೇ 'ಸೈಬರ್‌ಕಾಂಡ್ರಿಯಾ'
ರೋಗಲಕ್ಷಣಗಳ ಬಗ್ಗೆ ಗೂಗಲ್ ಮಾಡುತ್ತ, ಅದು ಹೇಳುವ ರೋಗಗಳೆಲ್ಲ ನಮಗೂ ಇರಬಹುದೆಂದು ಭ್ರಮಿಸಿಕೊಂಡು ಒದ್ದಾಡುವ ಪರಿಸ್ಥಿತಿಯೇ 'ಸೈಬರ್‌ಕಾಂಡ್ರಿಯಾ'|Negative Space / pexels.com
ಟೆಕ್‌ ಲೋಕ

ಗೂಗಲ್ ನಿಮ್ಮ ಫ್ಯಾಮಿಲಿ ಡಾಕ್ಟರಾ?

ಗೂಗಲ್ ಎಂಬ ಭೂತಗನ್ನಡಿ ಇಟ್ಟುಕೊಂಡಿರುವ ನಾವು ಅದ್ಭುತ ದೀಪ ಸಿಕ್ಕ ಅಲ್ಲಾದ್ದೀನನಂತೆಯೇ ಆಗಿಬಿಟ್ಟಿದ್ದೇವೆ

ಟಿ. ಜಿ. ಶ್ರೀನಿಧಿ

ಅಪರೂಪಕ್ಕೆ ಹೋಟಲಿಗೆ ಹೋಗಬೇಕು ಎನಿಸಿದರೆ ಯಾವ ಹೋಟಲ್ ಚೆನ್ನಾಗಿದೆ ಎಂದು ಸ್ನೇಹಿತರ ಬಳಿ ಕೇಳುತ್ತಿದ್ದ ಕಾಲ ಒಂದಿತ್ತು. ಹೊಸ ಸಿನಿಮಾಕ್ಕೆ ಹೋಗುವ ಮುನ್ನ ಅದನ್ನು ಈಗಾಗಲೇ ನೋಡಿದ್ದ ನೆರೆಮನೆಯವರನ್ನು ಕೇಳಿ ಅದು ಹೇಗಿದೆಯೆಂದು ತಿಳಿದುಕೊಳ್ಳುವ ಅಭ್ಯಾಸವೂ ನಮಗಿತ್ತು. ಯಾವುದೋ ಪುಸ್ತಕ ಬೇಕಾಗಿದ್ದರೆ ಪರಿಚಯದ ಮೇಷ್ಟರ ಮಕ್ಕಳಿಂದ ಶಿಫಾರಸು ಮಾಡಿಸಿ ಅವರ ಶಾಲೆಯ ಗ್ರಂಥಾಲಯದಿಂದ ಅದನ್ನು ತರಿಸಿಕೊಳ್ಳುತ್ತಿದ್ದದ್ದೂ ಉಂಟು.

ಅಷ್ಟೆಲ್ಲ ತಲೆಬಿಸಿ ಮಾಡಿಕೊಳ್ಳಬೇಕಾದ ಅಗತ್ಯವೇ ಈಗಿಲ್ಲ. ಯಾವ ಹೋಟಲ್ ಚೆನ್ನಾಗಿದೆ, ನಿನ್ನೆ ಬಂದ ಸಿನಿಮಾ ಹೇಗಿದೆ, ಬೇಕಾದ ಪುಸ್ತಕ ಯಾವ ಡಿಜಿಟಲ್ ಲೈಬ್ರರಿಯಲ್ಲಿದೆ ಎನ್ನುವುದನ್ನೆಲ್ಲ ನಾವು ಈಗ ಮನೆಯಲ್ಲೇ ಕುಳಿತು ಕಂಡುಕೊಳ್ಳುತ್ತಿದ್ದೇವೆ. ಇಷ್ಟೆಲ್ಲ ಮಾಹಿತಿಯನ್ನು ತನ್ನೊಳಗೆ ಇಟ್ಟುಕೊಂಡ ಅಂತರಜಾಲದಿಂದ ನಮಗೆ ಬೇಕಾದ್ದನ್ನಷ್ಟೇ ತೆಗೆದು ತೋರಿಸಲು ಗೂಗಲ್ ಎಂಬ ಭೂತಗನ್ನಡಿ ಇಟ್ಟುಕೊಂಡಿರುವ ನಾವು ಅದ್ಭುತ ದೀಪ ಸಿಕ್ಕ ಅಲ್ಲಾದ್ದೀನನಂತೆಯೇ ಆಗಿಬಿಟ್ಟಿದ್ದೇವೆ.

ಅಲ್ಲಾದ್ದೀನ ತನ್ನ ಅದ್ಭುತ ದೀಪವನ್ನು ಯಾವೆಲ್ಲ ಕೆಲಸಗಳಿಗೆ ಬಳಸುತ್ತಿದ್ದನೋ ಗೊತ್ತಿಲ್ಲ, ಆದರೆ ನಾವು ಮಾತ್ರ ಕೂತದ್ದು-ನಿಂತದ್ದಕ್ಕೆಲ್ಲ ಗೂಗಲ್ ಬಳಸುವ ಅಭ್ಯಾಸ ಮಾಡಿಕೊಂಡಿದ್ದೇವೆ. ಹೋಟಲ್, ಸಿನಿಮಾ, ಪುಸ್ತಕಗಳ ಜೊತೆಗೆ ಆರೋಗ್ಯದಂತಹ ಗಂಭೀರ ವಿಷಯಗಳ ಬಗ್ಗೆ ತಿಳಿದುಕೊಳ್ಳುವುದಕ್ಕೂ ಗೂಗಲ್ ಇದೀಗ ನಮ್ಮ ಆಕರವಾಗಿಬಿಟ್ಟಿದೆ. ತಲೆಯೋ ಕಿವಿಯೋ ಗಂಟಲೋ ನೋಯುತ್ತಿದೆ ಎನ್ನಿಸಿದರೆ ಸಾಕು, ವೈದ್ಯರ ಬದಲು ಗೂಗಲ್ ಕಡೆಗೆ ಓಡುವವರ ಸಂಖ್ಯೆ ಇದೀಗ ಜಾಸ್ತಿಯಾಗುತ್ತಿದೆ.

ತಲೆ ನೋಯುತ್ತಿದೆಯೆಂದು ಗೂಗಲ್ ಮಾಡಿದರೆ "ಸರಿಯಾಗಿ ನಿದ್ದೆ ಮಾಡಿಲ್ಲ" ಎನ್ನುವುದರಿಂದ "ಬ್ರೈನ್ ಟ್ಯೂಮರ್ ಇರಬಹುದು" ಎನ್ನುವವರೆಗೆ ಸಂಭಾವ್ಯ ಕಾರಣಗಳ ದೊಡ್ಡ ಪಟ್ಟಿಯೇ ನಮ್ಮೆದುರು ಕಾಣಿಸಿಕೊಳ್ಳುತ್ತದೆ. ತಲೆನೋವಿನ ಜೊತೆ ಜ್ವರವೂ ಇದೆಯಾ, ಕಣ್ಣು ಕಿವಿಗಳೂ ನೋಯುತ್ತಿವೆಯಾ, ಹಾಗಾದರೆ ನಿಮಗೆ ಯಾವುದೋ ಗಂಭೀರ ಖಾಯಿಲೆ ಇರಬಹುದು ಎಂದು ಗೂಗಲ್ ಹೇಳಿದರೆ ನಮಗೆ ಅದೇ ಖಾಯಿಲೆ ಬಂದಿರಬಹುದು ಎಂಬ ಸಂಶಯ ಕಾಡಲು ಶುರುವಾಗುತ್ತದೆ.

ತಮ್ಮ ಆರೋಗ್ಯದ ಬಗ್ಗೆ ಇಲ್ಲಸಲ್ಲದ್ದನ್ನು ಕಲ್ಪಿಸಿಕೊಂಡು ಹೀಗೆಲ್ಲ ಆತಂಕಪಡುವವರು ಗೂಗಲ್ ಬರುವುದಕ್ಕೆ ಮುಂಚೆಯೂ ಇದ್ದರು. ಅಂತಹ ಪರಿಸ್ಥಿತಿಗೆ 'ಹೈಪೋಕಾಂಡ್ರಿಯಾ' ಎಂಬ ಹೆಸರೂ ಇತ್ತು. ಆದರೆ ಅಂತರಜಾಲದ ಮೂಲಕ ಅಗಾಧ ಪ್ರಮಾಣದ ಮಾಹಿತಿ ದೊರಕಲು ಶುರುವಾದ ಮೇಲೆ, ಆ ಮಾಹಿತಿಯನ್ನು ಜಾಲಾಡಲು ಗೂಗಲ್‌ನಂತಹ ಭೂತಗನ್ನಡಿಯೂ ಸಿಕ್ಕಮೇಲೆ, ಈ ಸಮಸ್ಯೆ ಬಹಳ ದೊಡ್ಡದಾಗಿ ಬೆಳೆದಿದೆ. ತಮಗೆ ಇರಬಹುದಾದ ರೋಗಲಕ್ಷಣಗಳ ಬಗ್ಗೆ ಪದೇಪದೇ ಗೂಗಲ್ ಮಾಡುತ್ತ, ಅದು ಹೇಳುವ ಸಂಭಾವ್ಯ ರೋಗಗಳೆಲ್ಲ ನಮಗೂ ಇರಬಹುದೆಂದು ಭ್ರಮಿಸಿಕೊಂಡು ಒದ್ದಾಡುವ ಈ ಪರಿಸ್ಥಿತಿಗೆ 'ಸೈಬರ್‌ಕಾಂಡ್ರಿಯಾ' ಎಂದು ಹೆಸರಿಡಲಾಗಿದೆ.

ಸರ್ಚ್ ಇಂಜನ್‌ಗಳ ಮೂಲಕ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಬಹುತೇಕ ಎಲ್ಲರೂ ಹುಡುಕುತ್ತಾರೆ ಎಂದುಕೊಂಡರೆ, ಅವರಲ್ಲಿ ಕೆಲವರು ಮಾತ್ರ ಹಾಗೆ ದೊರೆತ ವಿವರಗಳ ಬಗ್ಗೆ ವಿಪರೀತವಾಗಿ ತಲೆಕೆಡಿಸಿಕೊಂಡು ಇನ್ನಷ್ಟು ಮಾಹಿತಿಗಾಗಿ ಸರ್ಚ್ ಮಾಡುತ್ತಲೇ ಹೋಗುತ್ತಾರೆ. ತಮ್ಮ ರೋಗಲಕ್ಷಣ ಹಾಗೂ ಅದು ಸೂಚಿಸಬಹುದಾದ ರೋಗಗಳ ಬಗ್ಗೆ ಓದುತ್ತಾ ಹೋದ ಹಾಗೆ ಅವರ ಆತಂಕ ಹೆಚ್ಚುತ್ತಲೇ ಹೋಗುತ್ತದೆ. ಇದರ ಪರಿಣಾಮವಾಗಿ ಅವರು ಪದೇಪದೇ ವೈದ್ಯರ ಬಳಿ ಹೋಗುತ್ತಾರೆ, ಇಲ್ಲವೇ ಅವರು ಏನು ಹೇಳಬಹುದೋ ಎನ್ನುವ ಭಯದಿಂದ ವೈದ್ಯರನ್ನು ಭೇಟಿ ಮಾಡುವುದೇ ಇಲ್ಲ.

ಇವೆರಡೂ ತಪ್ಪು ಎನ್ನುವುದು ತಜ್ಞರ ಅಭಿಪ್ರಾಯ. "ಏನು ವ್ಯತ್ಯಾಸವಾಗಿದೆ ಎನ್ನುವುದು ಒಟ್ಟಾರೆಯಾಗಿ ಗೊತ್ತಾದರೂ ಅದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೇಳುವ ಪರಿಣತಿ ಎಲ್ಲರಿಗೂ ಇರುವುದಿಲ್ಲ. ಹೀಗಾಗಿ ನಮಗೆ ಅನ್ನಿಸುತ್ತಿರುವುದು, ಗೂಗಲ್‌ನಲ್ಲಿ ನಾವು ಟೈಪ್ ಮಾಡಿರುವುದು ಹಾಗೂ ನಮಗೆ ನಿಜಕ್ಕೂ ಆಗಿರುವುದು ಮೂರೂ ಬೇರೆಬೇರೆಯಾಗಿರುವ ಸಾಧ್ಯತೆಯೇ ಹೆಚ್ಚು. ಗೂಗಲ್‌ನಲ್ಲಿ ಸಿಗುವುದೇನಿದ್ದರೂ ನಾವು ಹುಡುಕುವ ಪದಗಳ ಬಗೆಗಿನ ಮಾಹಿತಿ ಮಾತ್ರ. ನಾವು ಹುಡುಕಿದ್ದೇ ತಪ್ಪಾಗಿದ್ದರೆ ಅಲ್ಲಿ ಸಿಗುವ ಮಾಹಿತಿಯೂ ನಮ್ಮ ಮಟ್ಟಿಗೆ ತಪ್ಪಾಗಿಯೇ ಇರುತ್ತದೆ" ಎಂದು ಪರಿಣತ ವೈದ್ಯ, ಲೇಖಕ ಡಾ. ಕಿರಣ್ ವಿ. ಎಸ್. ಹೇಳುತ್ತಾರೆ.

ಗೂಗಲ್‌ನಲ್ಲಿ ಸಿಕ್ಕಿತೆಂದ ಮಾತ್ರಕ್ಕೆ ಆ ಮಾಹಿತಿ ಸರಿಯಾಗಿರಬೇಕು ಎಂದೂ ಹೇಳುವಂತಿಲ್ಲ. ನಾವು ನೋಡುತ್ತಿರುವ ಜಾಲತಾಣ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ಎನ್ನುವುದೇ ಗೊತ್ತಿಲ್ಲದಿದ್ದರೆ ಅದರಲ್ಲಿರುವ ಮಾಹಿತಿಯನ್ನು ನಂಬುವುದು ಹೇಗೆ? ಒಂದು ವೇಳೆ ಮಾಹಿತಿ ಸರಿಯಾಗಿಯೇ ಇದೆ ಎಂದುಕೊಂಡರೂ, ವೈದ್ಯರು ಒಬ್ಬನೇ ರೋಗಿಯ ತಲೆನೋವಿನ ಕಾರಣ ಹುಡುಕುವಂತೆ ಜಾಲತಾಣದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ. ತಲೆನೋವು ಹಸಿವಿನಿಂದಲೂ ಬರಬಹುದು, ಬ್ರೈನ್ ಟ್ಯೂಮರಿನಿಂದಲೂ ಬರಬಹುದು ಎಂದು ಅವರು ಸರಿಯಾಗಿಯೇ ಹೇಳಿದರೂ ಸೈಬರ್‌ಕಾಂಡ್ರಿಯಾ ಪೀಡಿತರಿಗೆ ಅದು ಬೇರೆಯದೇ ಸಂದೇಶ ಕೊಡುವುದು ಸಾಧ್ಯ. ಸರ್ಚ್ ಇಂಜನ್ನಿನ ಆಲ್ಗಾರಿದಮ್ ತನ್ನ ಯಾವುದೋ ಲೆಕ್ಕಾಚಾರದ ಮೇಲೆ ತೋರಿಸುವ ಮೊದಲ ಫಲಿತಾಂಶ ತನಗಿರುವ ರೋಗವನ್ನೇ ಕುರಿತದ್ದು ಎಂದು ಅವರು ಭಾವಿಸಿಬಿಟ್ಟರೆ? ಇನ್ನು ತಪ್ಪಾಗಿ ಅರ್ಥೈಸಿಕೊಂಡ ಮಾಹಿತಿಯ ಆಧಾರದ ಮೇಲೆ ಸ್ವಯಂವೈದ್ಯ ಮಾಡಿಕೊಳ್ಳಲು ಹೊರಟರಂತೂ ಅದು ಇನ್ನಷ್ಟು ಹೊಸ ಸಮಸ್ಯೆಗಳನ್ನೇ ತಂದೊಡ್ಡಬಹುದು.

ನಾವು ಆರೋಗ್ಯ ಸಮಸ್ಯೆಗಳ ಬಗ್ಗೆ ಸರ್ಚ್ ಮಾಡುವುದೇ ತಪ್ಪೇ? ಹಾಗೇನೂ ಇಲ್ಲ. ಆದರೆ ಅದಕ್ಕೆ ಮುನ್ನ ವೈದ್ಯರ ಜೊತೆ ಒಮ್ಮೆಯಾದರೂ ಸಮಾಲೋಚಿಸುವುದು ಉತ್ತಮ. ಇಂದಿನ ವೈದ್ಯರೂ ಅಂತರಜಾಲದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ನಿರ್ದಿಷ್ಟ ಖಾಯಿಲೆಯ ಬಗ್ಗೆ ಯಾವ ಯಾವ ಜಾಲತಾಣ ನಿಖರ, ನಂಬಲರ್ಹ ಮಾಹಿತಿ ನೀಡಬಲ್ಲದು ಎಂಬುದನ್ನು ಅವರು ಸೂಚಿಸಬಲ್ಲರು. ಗೊತ್ತುಗುರಿಯಿಲ್ಲದೆ ಗೂಗಲ್ ಮಾಡುವ ಬದಲು ವೈದ್ಯರು ಹೇಳುವ ಅಧಿಕೃತ ಜಾಲತಾಣಗಳನ್ನು ನೋಡುವುದು ಶರೀರದ ಖಾಯಿಲೆಗಷ್ಟೇ ಅಲ್ಲ, ಸೈಬರ್‌ಕಾಂಡ್ರಿಯಾಗೂ ಪರಿಹಾರ.
ಡಾ. ಕಿರಣ್ ವಿ. ಎಸ್.

ಅಂತರಜಾಲದಲ್ಲಿ ಹುಡುಕುವ ಮೂಲಕ ರೋಗಪತ್ತೆ ಮಾಡಲು ಹೊರಟವರಿಗೆ ಸಿಗುವ ಫಲಿತಾಂಶ ಬಹಳಷ್ಟು ಸಂದರ್ಭಗಳಲ್ಲಿ ತಪ್ಪೇ ಆಗಿರುತ್ತದೆ ಎಂಬ ವಿಷಯ ಅನೇಕ ಅಧ್ಯಯನಗಳಲ್ಲೂ ಸಾಬೀತಾಗಿದೆ. ಈಚೆಗೆ ಫ್ರಾನ್ಸಿನ ಸಂಸ್ಥೆಯೊಂದು ನಡೆಸಿದ ಅಧ್ಯಯನದ ಪ್ರಕಾರ, ನಮಗೆ ಇಂಥದ್ದೇ ರೋಗ ಬಂದಿದೆ ಎಂದು ತೀರ್ಮಾನಿಸಿಕೊಂಡೇ ಬರುವ ರೋಗಿಗಳನ್ನು ಆ ಅಧ್ಯಯನದಲ್ಲಿ ಪಾಲ್ಗೊಂಡ ಶೇ. ೮೦ಕ್ಕೂ ಹೆಚ್ಚು ವೈದ್ಯರು ನೋಡಿದ್ದರಂತೆ. ಆ ಪೈಕಿ ತಮ್ಮ ರೋಗದ ಬಗ್ಗೆ ಸರಿಯಾಗಿ ತಿಳಿದಿದ್ದ ರೋಗಿಗಳು ಹತ್ತರಲ್ಲಿ ಒಬ್ಬರೂ ಇರಲಿಲ್ಲವಂತೆ! ಇದೇ ರೀತಿ, ರೋಗಲಕ್ಷಣ ಪರೀಕ್ಷೆಯ ಆನ್‌ಲೈನ್ ಸವಲತ್ತುಗಳು ಬಹುಪಾಲು ತಪ್ಪು ಫಲಿತಾಂಶವನ್ನೇ ನೀಡುತ್ತವೆ ಎಂದು ಹೇಳುವ ಅಧ್ಯಯನವೊಂದು ಪ್ರತಿಷ್ಠಿತ 'ಬಿಎಂಜೆ' ನಿಯತಕಾಲಿಕದಲ್ಲಿ ೨೦೧೫ರಷ್ಟು ಹಿಂದೆಯೇ ಪ್ರಕಟವಾಗಿತ್ತು.

ಸೈಬರ್‌ಕಾಂಡ್ರಿಯಾ ಸಮಸ್ಯೆ ವಿಪರೀತವಾಗಿದ್ದರೆ ಅದರ ಪರಿಹಾರಕ್ಕೆ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಅತ್ಯಗತ್ಯ. ಇದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಯಾದ್ದರಿಂದ ಆಪ್ತಸಲಹೆಯಂತಹ ಕ್ರಮಗಳೂ ಉಪಯುಕ್ತವಾಗಬಲ್ಲವು. ಆದರೆ ಈ ಆತಂಕ ಇನ್ನೂ ಪ್ರಾರಂಭಿಕ ಹಂತದಲ್ಲೇ ಇದ್ದರೆ, ಅನಗತ್ಯ ಆನ್‌ಲೈನ್ ಹುಡುಕಾಟಕ್ಕೆ ಕಡಿವಾಣ ಹಾಕಿಕೊಳ್ಳುವ ಮೂಲಕ ನಾವೇ ಅದನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು. ನನಗೆ ಇರುವುದು ಬೇರೆ ಯಾವ ಕಾಯಿಲೆಯೂ ಅಲ್ಲ, ಅದು ಕೇವಲ ಸೈಬರ್‌ಕಾಂಡ್ರಿಯಾ ಅಷ್ಟೇ ಎನ್ನುವುದು ಸರ್ಚ್‌ ಮೂಲಕವೇ ಗೊತ್ತಾದರೆ ಅದೂ ಒಳ್ಳೆಯದೇ!

ನವೆಂಬರ್ ೬, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಇಜ್ಞಾನ Ejnana
www.ejnana.com