ದುರ್ಗಮ ಪ್ರದೇಶಗಳಿಗೆ ಉಪಗ್ರಹಗಳ ಮೂಲಕ ಅಂತರಜಾಲ ಸಂಪರ್ಕ ಒದಗಿಸುವುದು ಸಾಧ್ಯ
ದುರ್ಗಮ ಪ್ರದೇಶಗಳಿಗೆ ಉಪಗ್ರಹಗಳ ಮೂಲಕ ಅಂತರಜಾಲ ಸಂಪರ್ಕ ಒದಗಿಸುವುದು ಸಾಧ್ಯ

ಅಂಟಾರ್ಕ್‌ಟಿಕಾದಲ್ಲಿ ಅಂತರಜಾಲ, ಅಂತರಿಕ್ಷದಲ್ಲೂ ಅಂತರಜಾಲ!

ದೂರವಾಣಿ ಜಾಲಗಳಿಂದ ದೂರವಿರುವ ಜನರಿಗೆ ಅಂತರಜಾಲ ಸಂಪರ್ಕ ಸಿಗುವುದು ಹೇಗೆ?

ಮೊಬೈಲ್ ಫೋನನ್ನು ಸ್ವಲ್ಪಹೊತ್ತು ಬಿಟ್ಟಿರುವುದೂ ಕಷ್ಟ ಎನ್ನುವ ಮಟ್ಟಕ್ಕೆ ನಮಗೆಲ್ಲ ಅದರ ಬಳಕೆ ಅಭ್ಯಾಸವಾಗಿಹೋಗಿದೆ. ಮೊಬೈಲ್ ಬ್ಯಾಟರಿ ಮುಗಿದುಹೋಗುತ್ತಿದೆ ಎಂದರೆ ಸಾಕು, ನಮಗೆ ಚಡಪಡಿಕೆಯೇ ಶುರುವಾಗಿಬಿಡುತ್ತದೆ.

ಮೊಬೈಲಿಗೆ ಅಂತರಜಾಲ ಸಂಪರ್ಕ ಸಿಗದೇ ಹೋದಾಗಲೂ ಅಷ್ಟೇ, ನಾವು ಇಂಥದ್ದೇ ಚಡಪಡಿಕೆಯನ್ನು ಅನುಭವಿಸುತ್ತೇವೆ. ಬಸ್ಸಿನಲ್ಲೋ ಕಾರಿನಲ್ಲೋ ಪ್ರಯಾಣಿಸುವಾಗ ಮಾರ್ಗಮಧ್ಯೆ ಅಂತರಜಾಲ ಸಂಪರ್ಕದ ಗುಣಮಟ್ಟ ಸರಿಯಿಲ್ಲದಿದ್ದರೆ ನಮಗೆ ಅದೇನೋ ಕಿರಿಕಿರಿ.

ಈಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಅಂತರಜಾಲ ಸಂಪರ್ಕ ನಮಗೆ ಬಹುತೇಕ ಎಲ್ಲಕಡೆಗಳಲ್ಲೂ ಸಿಗುತ್ತಿದೆ, ಬೇರೆಬೇರೆ ಕೆಲಸಗಳಿಗಾಗಿ ಅದನ್ನು ಉಪಯೋಗಿಸಿಕೊಳ್ಳುವುದು ಚೆನ್ನಾಗಿ ಅಭ್ಯಾಸವಾಗಿದೆ. ಹಾಗಾಗಿಯೇ ನಾವು ಹೋದ ಜಾಗದಲ್ಲಿ ಅಂತರಜಾಲ ಸಂಪರ್ಕ ಇಲ್ಲದಿದ್ದರೆ ಅದು ನಮಗೆ ಇಷ್ಟವಾಗುವುದಿಲ್ಲ. ಇನ್ನು ನಮ್ಮ ಮನೆಯಲ್ಲೇ ಅಂತರಜಾಲ ಸಂಪರ್ಕ ಸರಿಯಿಲ್ಲ ಎಂದರಂತೂ ಏನಾದರೂ ಒಂದು ಉಪಾಯ ಹುಡುಕಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ತನಕ ನಮಗೆ ನೆಮ್ಮದಿಯೇ ಇರುವುದಿಲ್ಲ.

ಭೂಮಿಯ ಮೇಲೆ - ದೂರವಾಣಿ ಜಾಲದ ವ್ಯಾಪ್ತಿಯೊಳಗೆ ಇರುವ ನಮಗೇನೋ ಅಂತರಜಾಲ ಸಂಪರ್ಕ ಸುಲಭವಾಗಿ ಸಿಗುತ್ತಿದೆ. ಆದರೆ ದೂರವಾಣಿ ಜಾಲಗಳಿಂದ ದೂರವಿರುವ ಜನರೂ ವಿಶ್ವದ ವಿವಿಧೆಡೆಗಳಲ್ಲಿ ಇರುತ್ತಾರಲ್ಲ, ಅವರಿಗೆಲ್ಲ ಅಂತರಜಾಲ ಸಂಪರ್ಕ ಸಿಗುವುದು ಹೇಗೆ?

ದೂರವಾಣಿ ಜಾಲಗಳಿಂದ ದೂರವಿರುವ ಜನ ಎಂದಮಾತ್ರಕ್ಕೆ ಅವರು ನಾಗರೀಕತೆಯಿಂದ ದೂರವಾಗಿ ಯಾವುದೋ ದ್ವೀಪದಲ್ಲೋ ಕಾಡಿನಲ್ಲೋ ಇರುವವರು ಎಂದೇನೂ ಅಲ್ಲ. ವಿಮಾನದಲ್ಲಿ ಹಾರುವಾಗ, ಹಡಗಿನಲ್ಲಿ ತೇಲುವಾಗ ನಾವು ಕೂಡ ಸಾಂಪ್ರದಾಯಿಕ ದೂರವಾಣಿ ಜಾಲಗಳ ವ್ಯಾಪ್ತಿಯಿಂದ ಹೊರಗಿರುತ್ತೇವೆ. ಸಮುದ್ರದಾಳದಲ್ಲಿ ಸಂಚರಿಸುವ ಸಬ್‌ಮರೀನ್ ಸಿಬ್ಬಂದಿಯನ್ನು, ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಗಗನಯಾನಿಗಳನ್ನು ಯಾವ ಮೊಬೈಲ್ ಸಂಕೇತವೂ ತಲುಪುವುದಿಲ್ಲ.

ಮೊದಲಿಗೆ ವಿಮಾನ ಪ್ರಯಾಣದ ಉದಾಹರಣೆಯನ್ನೇ ನೋಡೋಣ. ವಿಮಾನ ಹಾರುವುದಕ್ಕೆ ಮೊದಲು ಮೊಬೈಲನ್ನು ಸ್ವಿಚ್‌ಆಫ್ ಮಾಡುವುದು ಅಥವಾ ಫ್ಲೈಟ್ ಮೋಡ್‌ಗೆ ಹಾಕುವುದು ನಿಯಮಾನುಸಾರ ಕಡ್ಡಾಯ. ಹಾಗೊಮ್ಮೆ ಮಾಡದೆ ಇಟ್ಟುಕೊಂಡಿದ್ದೀರಿ ಎಂದು, ಸುಮ್ಮನೆ ವಾದಕ್ಕಾಗಿ, ಅಂದುಕೊಂಡರೂ ನಿಮ್ಮ ಮೊಬೈಲು ಪ್ರಯಾಣ ಪ್ರಾರಂಭವಾದ ಕೊಂಚಹೊತ್ತಿನ ನಂತರ ಕೆಲಸಮಾಡುವುದು ಕಷ್ಟ.

ಇದಕ್ಕೆ ಕಾರಣ ಬಹಳ ಸರಳ - ಮೊಬೈಲ್ ಕೆಲಸಮಾಡುವುದು ಭೂಮಿಯ ಮೇಲಿನ ಟವರ್‌ಗಳನ್ನು, ಅವುಗಳಿಂದ ಹೊಮ್ಮುವ ಸಂಕೇತಗಳನ್ನು ಬಳಸಿಕೊಂಡು. ಈ ಸಂಕೇತಗಳು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ಎತ್ತರಕ್ಕೆ - ಅದರಲ್ಲೂ ವಿಮಾನ ಹಾರುವ ಮಟ್ಟಕ್ಕೆ - ತಲುಪುವುದಿಲ್ಲ. ಹಾಗೊಮ್ಮೆ ತಲುಪಿದರೂ ಭೂಪ್ರದೇಶದಿಂದ ದೂರದಲ್ಲಿ (ಉದಾ: ಸಮುದ್ರಗಳ ಮೇಲೆ) ಹಾರಾಡುವ ವಿಮಾನಗಳಿಗೆ ಅಂತರಜಾಲ ಸಂಪರ್ಕ ನೀಡಲು ಟವರ್‌ಗಳೇ ಇರುವುದಿಲ್ಲ!

ಹೀಗಿರುವಾಗ ವಿಮಾನದಲ್ಲಿ ಇಂಟರ್‌ನೆಟ್ ಬೇಕೆಂದರೆ ಏನುಮಾಡಬೇಕು?

ಈ ಪ್ರಶ್ನೆಗೆ ಉತ್ತರ ನೀಡುವ ಸಾಮರ್ಥ್ಯವಿರುವುದು ಅಂತರಿಕ್ಷದಲ್ಲಿರುವ ಉಪಗ್ರಹಗಳಿಗೆ. ಮೊಬೈಲ್ ಟವರ್ ಬದಲು ಉಪಗ್ರಹಗಳನ್ನು ಸಂಪರ್ಕಿಸುವ ಮೂಲಕ ವಿಮಾನಗಳು ಅಂತರಜಾಲ ಸಂಪರ್ಕ ಪಡೆದುಕೊಳ್ಳಬಲ್ಲವು, ತಮ್ಮ ಪ್ರಯಾಣಿಕರ ಮೊಬೈಲಿಗೂ ಅದನ್ನು ತಲುಪಿಸಬಲ್ಲವು. ಸಮುದ್ರದಲ್ಲಿ ಸಂಚರಿಸುವಾಗ ಹಡಗುಗಳಿಗೆ ಅಂತರಜಾಲ ಸಂಪರ್ಕ ನೀಡುವುದಕ್ಕೂ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ.

ನಾವು ಬಳಸುವ ಅಂತರಜಾಲ ಸಂಪರ್ಕಗಳಿಗೆ ಹೋಲಿಸಿದಾಗ ಬಹಳ ದುಬಾರಿಯಾದ ಈ ಬಗೆಯ ಸಂಪರ್ಕ ನಮ್ಮ ಸಂಪರ್ಕಗಳಿಗಿಂತ ನಿಧಾನವೂ ಹೌದು. ಮಾಹಿತಿಯನ್ನು ಬೆಳಕಿನ ವೇಗದಲ್ಲಿ ಕೊಂಡೊಯ್ಯುವ ಆಪ್ಟಿಕಲ್ ಫೈಬರ್‌ಗಳ ಬದಲು ಇಲ್ಲಿ ರೇಡಿಯೋ ಅಲೆಗಳು ಬಳಕೆಯಾಗುವುದರಿಂದ, ಆ ಅಲೆಗಳು ಭೂಮಿಯ ಮೇಲಿಂದ ಉಪಗ್ರಹದವರೆಗೂ ಹೋಗಿ ಮರಳಬೇಕಾದ್ದರಿಂದ ಇಲ್ಲಿನ ಸಂಪರ್ಕ ನಿಧಾನವಾಗುತ್ತದೆ. ಹಾಗಿದ್ದರೂ ಕೂಡ ಬೇರಾವ ಮಾದರಿಯ ಸಂಪರ್ಕವೂ ಸಿಗದ ಕಡೆಗಳಲ್ಲಿ ಇದೇ ಪಂಚಾಮೃತ!

ಬೇರೆ ಮಾದರಿಯ ಸಂಪರ್ಕ ಒದಗಿಸುವುದು ಕಷ್ಟವಾದ ಪ್ರದೇಶಗಳಿಗೆ ಅಂಟಾರ್ಕ್‌ಟಿಕಾ ಖಂಡ ಒಂದು ಉತ್ತಮ ಉದಾಹರಣೆ. ಹವಾಮಾನ ವೈಪರೀತ್ಯಗಳಿಗೆ ಹೆಸರಾದ ಅಲ್ಲಿಗೆ ಇತರೆಲ್ಲ ಖಂಡಗಳಿಗಿರುವಂತೆ ಸಮುದ್ರದಾಳದ ಕೇಬಲ್ಲುಗಳ ಮೂಲಕ ಅಂತರಜಾಲ ಸಂಪರ್ಕವನ್ನು ಇನ್ನೂ ಒದಗಿಸಲಾಗಿಲ್ಲ. ಹೀಗಾಗಿ ಅಲ್ಲಿ ಕೆಲಸಮಾಡುವ ವಿಜ್ಞಾನಿಗಳಿಗೂ ಅಂತರಜಾಲ ಸಂಪರ್ಕ ದೊರಕುವುದು ಉಪಗ್ರಹಗಳ ಮೂಲಕವೇ. ತಮ್ಮ ಅಧ್ಯಯನದ ಮಾಹಿತಿಯನ್ನು ತಮ್ಮ ದೇಶಗಳಿಗೆ ಕಳುಹಿಸಲಿಕ್ಕೇ ಸಾಕಷ್ಟು ಹೊತ್ತು ಕಾಯಬೇಕಿರುವ ಪರಿಸ್ಥಿತಿಯಲ್ಲಿ, ಬೇಕೆಂದರೂ ಅವರು ಯೂಟ್ಯೂಬ್ ವೀಡಿಯೋಗಳನ್ನು ನೋಡುತ್ತ ಕುಳಿತುಕೊಳ್ಳುವುದು ಕಷ್ಟ.

ಹೀಗಿದ್ದರೂ ಅವರ ಪರಿಸ್ಥಿತಿ ಸಮುದ್ರದಾಳದಲ್ಲಿ ಕೆಲಸಮಾಡುವ ಸಬ್‌ಮರೀನ್ ಸಿಬ್ಬಂದಿಗಿಂತ ಉತ್ತಮ ಎಂದೇ ಹೇಳಬೇಕು. ಏಕೆಂದರೆ ಅವರಿಗೆ ಅಂತರಜಾಲ ಸಂಪರ್ಕ ದೊರಕುವ ಸನ್ನಿವೇಶಗಳೇ ಅಪರೂಪ. ಹಾಗೊಮ್ಮೆ ಸಿಕ್ಕರೂ ಅದು ಅವರ ಕೆಲಸಕ್ಕೆ ಸಂಬಂಧಿಸಿದಂತೆ ಮಾತ್ರವೇ ಇರುತ್ತದೆ. ಸಂಕೇತಗಳು ಸಮುದ್ರದಾಳವನ್ನು ತಲುಪುವುದು ಕಷ್ಟ ಎನ್ನುವುದು ಇದಕ್ಕೆ ಒಂದು ಕಾರಣವಾದರೆ, ಆ ಸಂಕೇತಗಳನ್ನು ಬೇರೆ ಯಾರಾದರೂ ಗುರುತಿಸಿ ಸಬ್‌ಮರೀನ್ ಸುರಕ್ಷತೆಗೆ ಧಕ್ಕೆತರಬಹುದು ಎನ್ನುವ ಎಚ್ಚರಿಕೆ ಇನ್ನೊಂದು ಕಾರಣ.

ಅವರಿಗೆಲ್ಲ ಹೋಲಿಸಿದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಗಗನಯಾನಿಗಳ ಪರಿಸ್ಥಿತಿಯೇ ಉತ್ತಮ ಎನ್ನಬೇಕು. ಭೂಮಿಯಿಂದ ಅಷ್ಟು ದೂರದಲ್ಲಿದ್ದರೂ ಅವರು ಅಂತರಜಾಲ ಸಂಪರ್ಕವನ್ನೂ, ಇಮೇಲ್-ಟ್ವಿಟರ್ ಇತ್ಯಾದಿಗಳನ್ನೂ ಬಳಸುವುದು ಸಾಧ್ಯವಿದೆ. ಅಷ್ಟೇ ಅಲ್ಲ, ನಿಧಾನಗತಿಯ ಸಂಪರ್ಕ ನೀಡುವ ರೇಡಿಯೋ ಅಲೆಗಳ ಬದಲು ಲೇಸರ್ ಕಿರಣಗಳ ಮೂಲಕ ಅವರಿಗೆ ಹೆಚ್ಚು ವೇಗದ ಅಂತರಜಾಲ ಸಂಪರ್ಕ ಒದಗಿಸುವ ಪ್ರಯೋಗ ಕೂಡ ನಡೆದಿದೆ.

ಆಗಸ್ಟ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com