ಸರಕಾರದ ಬೆಂಬಲ, ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆ, ವಿದ್ಯಾರ್ಥಿಗಳ ಕುತೂಹಲ ಹಾಗೂ ಸಾರ್ವಜನಿಕರ ಆಸಕ್ತಿ - ಇವೆಲ್ಲವೂ ಸೇರಿದಾಗ ಮಾತ್ರವೇ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗಬಲ್ಲದು.
ಸರಕಾರದ ಬೆಂಬಲ, ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆ, ವಿದ್ಯಾರ್ಥಿಗಳ ಕುತೂಹಲ ಹಾಗೂ ಸಾರ್ವಜನಿಕರ ಆಸಕ್ತಿ - ಇವೆಲ್ಲವೂ ಸೇರಿದಾಗ ಮಾತ್ರವೇ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗಬಲ್ಲದು.Image by Harikrishnan Mangayil from Pixabay

ವಿಜ್ಞಾನ-ತಂತ್ರಜ್ಞಾನದ ಅಮೃತಕಾಲ: ಭವ್ಯ ಭಾರತಕ್ಕೆ ಭದ್ರ ಬುನಾದಿ

ಹಲವು ಮಹನೀಯರ ಪ್ರಯತ್ನಗಳಿಂದಾಗಿ ಸಾಧ್ಯವಾದ ಕ್ರಾಂತಿಕಾರಕ ಬದಲಾವಣೆಗಳು ಇಂದು ನಮ್ಮ ದೇಶವನ್ನು ಜಾಗತಿಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟವೆನ್ನಬಹುದಾದ ಸ್ಥಾನಕ್ಕೆ ತಂದು ನಿಲ್ಲಿಸಿವೆ.

ಮುಂದಿನ ನೂರು ವರ್ಷಗಳಲ್ಲಿ ಏನೆಲ್ಲ ಬದಲಾವಣೆಗಳಾಗಬಹುದು? ಹೇಳುವುದು ಬಹಳ ಕಷ್ಟ. ಹಾಗೊಮ್ಮೆ ಹೇಳಿದರೂ ಅದು ಊಹೆಯಷ್ಟೇ ಆಗಿರುತ್ತದೆ. ಆ ಊಹೆ ನಂಬಲಸಾಧ್ಯವೆನಿಸಬಹುದು, ಕೆಲವೊಮ್ಮೆ ಹಾಸ್ಯಾಸ್ಪದವಾಗಿಯೂ ಇರಬಹುದು.

೨೦೦೧ರಲ್ಲಿ, ಹೊಸ ಸಹಸ್ರಮಾನ ಶುರುವಾಗುವ ವೇಳೆಗೆ, ಜಗತ್ತಿನಲ್ಲಿ ಏನೆಲ್ಲ ಬದಲಾವಣೆಗಳಾಗಿರಬಹುದು ಎಂದು ಊಹಿಸಿದ್ದ ಲೇಖನವೊಂದು ೧೯೦೦ನೇ ಇಸವಿಯಲ್ಲಿ ಪ್ರಕಟವಾಗಿತ್ತು. ನಾವು ಸಮುದ್ರದ ಮಧ್ಯದಲ್ಲೇ ಇದ್ದರೂ ನಮ್ಮ ಮನೆಯವರಿಗೆ ದೂರವಾಣಿ ಕರೆ ಮಾಡಿ ಮಾತನಾಡುವುದು, ಯಾವುದೋ ದೇಶದಲ್ಲಿ ನಡೆದ ಘಟನೆಯ ಚಿತ್ರಗಳು ಥಟ್ಟನೆ ನಮ್ಮನ್ನು ತಲುಪುವುದು - ಇವೆಲ್ಲ ಆ ವೇಳೆಗೆ ಸಾಧ್ಯವಾಗಿರುತ್ತದೆ ಎಂದು ಆ ಲೇಖನ ಊಹಿಸಿತ್ತು.

ಇಂಥದ್ದೇ ಒಂದು ಲೇಖನ ೧೯೪೭ರಲ್ಲೇನಾದರೂ ಪ್ರಕಟವಾಗಿದ್ದರೆ ಹೇಗಿರುತ್ತಿತ್ತು? ಮುಂದಿನ ನೂರು ವರ್ಷಗಳಲ್ಲಿ ಭಾರತದ ವಿಜ್ಞಾನಿಗಳು ಚಂದ್ರನನ್ನೂ ಮಂಗಳನನ್ನೂ ತಲುಪಿರುತ್ತಾರೆ, ಹಲವಾರು ಔಷಧಗಳು ಕೈಗೆಟುಕುವ ಬೆಲೆಯಲ್ಲಿ ದೊರಕುವಂತಾಗಿರುತ್ತದೆ, ಆಧುನಿಕ ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಹಲವು ಪ್ರಮುಖ ಚಟುವಟಿಕೆಗಳು ನಮ್ಮ ದೇಶದಲ್ಲೇ ನಡೆದಿರುತ್ತವೆ ಎಂದು ಆ ಲೇಖನದಲ್ಲಿ ಹೇಳಿದ್ದರೆ ಅದನ್ನು ಓದಿದವರ ಪ್ರತಿಕ್ರಿಯೆ ಏನಿರುತ್ತಿತ್ತು?

ಭಾರತದ ಅಂದಿನ ಸ್ಥಿತಿಯಲ್ಲಿ ಇದನ್ನೆಲ್ಲ ಕಲ್ಪಿಸಿಕೊಳ್ಳುವುದೂ ಕಷ್ಟವಾಗಿರುತ್ತಿತ್ತೋ ಏನೋ. ದೀರ್ಘಾವಧಿಯ ಪರಕೀಯ ಆಳ್ವಿಕೆಯಲ್ಲಿ ವ್ಯಾಪಕ ಬಡತನ, ಅನಕ್ಷರತೆ ಮುಂತಾದ ತೊಂದರೆಗಳಿಗೆ ಈಡಾಗಿದ್ದ ದೇಶಕ್ಕೆ ತನ್ನ ಕಾಲಿನ ಮೇಲೆ ಸದೃಢವಾಗಿ ಎದ್ದು ನಿಲ್ಲುವುದೇ ಮೊದಲನೆಯ ಸವಾಲಾಗಿತ್ತು. ದೇಶ ವಿಭಜನೆಯ ಪರಿಣಾಮಗಳನ್ನೂ ಸಣ್ಣಪುಟ್ಟ ಸಂಸ್ಥಾನಗಳ ಕಿರಿಕಿರಿಯನ್ನೂ ಎದುರಿಸುತ್ತಿದ್ದ ದೇಶದಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಬಗ್ಗೆ ಚಿಂತಿಸುವವರಾದರೂ ಯಾರಿದ್ದರು ಎಂದು ನಮಗನ್ನಿಸಬಹುದು.

ಆದರೆ ಅಂಥವರೂ ಇದ್ದರು ಎನ್ನುವುದೇ ಹೆಮ್ಮೆಯ ವಿಷಯ. ಕೃಷಿ ಕ್ಷೇತ್ರದ ಸುಧಾರಣೆಗಳು, ವಿದ್ಯುತ್ ಉತ್ಪಾದನೆ, ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳ ಪ್ರಾರಂಭ, ಕೈಗಾರಿಕೆಗಳ ಸ್ಥಾಪನೆ ಮುಂತಾದ ಅನೇಕ ಚಟುವಟಿಕೆಗಳು ಅಂತಹ ಮಹನೀಯರ ನೇತೃತ್ವದಲ್ಲೇ ಪ್ರಾರಂಭವಾದವು. ಅಷ್ಟೇ ಏಕೆ, ಅಂದಿಗೆ ಬಹುತೇಕ ಅಪರಿಚಿತವೇ ಆಗಿದ್ದ ಮಾಹಿತಿ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲೂ ನಮ್ಮ ಚಟುವಟಿಕೆಗಳು ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲೇ ಪ್ರಾರಂಭವಾಗಿದ್ದವು.

ಸ್ವಾತಂತ್ರ್ಯಾನಂತರದ ವರ್ಷಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ನಮ್ಮ ಸಾಧನೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಆ ಮಹನೀಯರೆಲ್ಲರ ದೂರದರ್ಶಿತ್ವವೇ. ಅವರ ಪ್ರಯತ್ನಗಳಿಂದಾಗಿ ಸಾಧ್ಯವಾದ ಬೆಳವಣಿಗೆಗಳು - ಅದರಲ್ಲೂ ವಿಶೇಷವಾಗಿ ದೂರಸಂಪರ್ಕ ಕ್ಷೇತ್ರದಲ್ಲಿ ನಡೆದ ಕ್ರಾಂತಿಕಾರಕ ಬದಲಾವಣೆಗಳು - ಇಂದು ನಮ್ಮ ದೇಶವನ್ನು ಜಾಗತಿಕ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟವೆನ್ನಬಹುದಾದ ಸ್ಥಾನಕ್ಕೆ ತಂದು ನಿಲ್ಲಿಸಿವೆ.

ಡಿಜಿಟಲ್ ಭಾರತ

ಈ ಕ್ಷೇತ್ರದಲ್ಲಿ ಭಾರತದ ಸಾಧನೆಗಳು ಎಂದಕೂಡಲೆ ನಮಗೆ ನೆನಪಾಗುವ ಸಂಗತಿಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಪ್ರಮುಖ ಸ್ಥಾನ. ಒಂದು ಕಾಲದಲ್ಲಿ ಹೊರದೇಶದ ಸಂಸ್ಥೆಗಳಿಗೆ ಸೇವೆ ಒದಗಿಸುವುದನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡಿದ್ದ ಭಾರತೀಯ ಐಟಿ ಸಂಸ್ಥೆಗಳಿಗೆ ಇದೀಗ ನಮ್ಮ ದೇಶವೂ ಬಹುದೊಡ್ಡ ಮಾರುಕಟ್ಟೆಯಾಗಿ ಬೆಳೆದಿದೆ. ಡಿಜಿಟಲ್ ಇಂಡಿಯಾದಂತಹ ಪರಿಕಲ್ಪನೆಗಳಿಂದಾಗಿ ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಿನ ಬೆಳವಣಿಗೆ ಕಾಣಲಿದೆ ಎನ್ನುವುದು ಸದ್ಯದ ನಿರೀಕ್ಷೆ.

ಪ್ರಾರಂಭಿಕ ವರ್ಷಗಳಲ್ಲಿ ಭಾರತೀಯ ಐಟಿ ಸಂಸ್ಥೆಗಳು ಹೆಚ್ಚಾಗಿ ಹೊರಗುತ್ತಿಗೆಯ ಕೆಲಸವನ್ನೇ ಮಾಡುತ್ತಿದ್ದವು. ಅದು ಇಂದಿಗೂ ಮುಂದುವರೆದಿದೆಯಾದರೂ ನಮ್ಮ ಸಂಸ್ಥೆಗಳು ಇಂದಿಗೆ ಕೇವಲ ಕಡಿಮೆ ಖರ್ಚಿನಲ್ಲಿ ಕೆಲಸ ಸಾಗಿಸುವ ಆಯ್ಕೆಗಳಾಗಿ ಉಳಿದಿಲ್ಲ. ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳು ಭಾರತವನ್ನು ಮಾಹಿತಿ ತಂತ್ರಜ್ಞಾನದಲ್ಲಿ ತಮ್ಮ ಹೊಸ ನೆಲೆಯನ್ನಾಗಿ ನೋಡುತ್ತಿದ್ದು, ಹೊರಗುತ್ತಿಗೆ ಕೆಲಸ ನಡೆಯುವ ಕಚೇರಿಗಳ ಜಾಗದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಗ್ಲೋಬಲ್ ಕಾಂಪಿಟೆನ್ಸಿ ಸೆಂಟರ್) ಬೆಳೆದು ನಿಲ್ಲುತ್ತಿವೆ. ಯಾರೋ ಯಾವಾಗಲೋ ಸಿದ್ಧಪಡಿಸಿಟ್ಟ ತಂತ್ರಾಂಶಗಳನ್ನು ನಿರ್ವಹಿಸುವುದಕ್ಕಷ್ಟೇ ಸೀಮಿತರಾಗುವ ಬದಲು, ಭಾರತೀಯ ತಂತ್ರಜ್ಞರು ಅನೇಕ ಆಧುನಿಕ ತಂತ್ರಜ್ಞಾನಗಳಲ್ಲಿ ತಮ್ಮ ಜಾಗತಿಕ ಸಹೋದ್ಯೋಗಿಗಳಿಗೆ ಸರಿಸಮರಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವರ್ಷಗಳಲ್ಲಿ ಈ ಪ್ರವೃತ್ತಿ ಇನ್ನಷ್ಟು ಹೆಚ್ಚಲಿದ್ದು ನಮ್ಮ ದೇಶ ಸಾವಿರಾರು ಸಾಮರ್ಥ್ಯ ಕೇಂದ್ರಗಳಿಗೆ ನೆಲೆಯಾಗಲಿದೆ ಎಂದು ಸಮೀಕ್ಷೆಗಳು ಹೇಳುತ್ತವೆ.

ಅಷ್ಟೇ ಅಲ್ಲ. ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸೂಪರ್ ಕಂಪ್ಯೂಟರ್ ಗಳನ್ನು ನೆಲೆಗೊಳಿಸುವ ಕೆಲಸವೂ ಪ್ರಾರಂಭವಾಗಿದ್ದು, ಈ ಚಟುವಟಿಕೆಯು ನಮ್ಮ ಸಂಶೋಧನಾಲಯಗಳಲ್ಲಿ ಅತ್ಯಂತ ಸಂಕೀರ್ಣ ವೈಜ್ಞಾನಿಕ ಸಂಶೋಧನೆಗಳನ್ನು ಕೈಗೊಳ್ಳಲು ಪ್ರೋತ್ಸಾಹಕವಾಗಲಿದೆ.

ಅಂದಹಾಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರ ಪ್ರಾವೀಣ್ಯ ಕೇವಲ ಬಹುರಾಷ್ಟ್ರೀಯ ಸಂಸ್ಥೆಗಳ ಅಥವಾ ವಿಜ್ಞಾನಿಗಳು ಮತ್ತು ಸಂಶೋಧಕರ ಅಗತ್ಯಗಳನ್ನು ಪೂರೈಸುವುದಕ್ಕಷ್ಟೇ ಸೀಮಿತವಾಗೇನೂ ಉಳಿದಿಲ್ಲ. ಕಳೆದ ಕೆಲ ವರ್ಷಗಳಲ್ಲಿ ತಮ್ಮ ವ್ಯಾಪ್ತಿಯನ್ನು ಅಗಾಧವಾಗಿ ಹೆಚ್ಚಿಸಿಕೊಂಡಿರುವ ನವೋದ್ಯಮಗಳ ಬೆಳವಣಿಗೆಯೇ ಇದಕ್ಕೆ ಸಾಕ್ಷಿ. ೨೦೩೦ರ ವೇಳೆಗೆ ಭಾರತದ ಡಿಜಿಟಲ್ ಆರ್ಥಿಕತೆ ಹತ್ತು ಪಟ್ಟು ದೊಡ್ಡದಾಗಿ ಬೆಳೆದು ಸುಮಾರು ಅರವತ್ತೈದು ಲಕ್ಷ ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸಲಿದೆ ಎಂದು ಅಂದಾಜಿಸಲಾಗಿದೆ.

ತಂತ್ರಜ್ಞಾನದ ಮೂಲಸೌಕರ್ಯ

ಡಿಜಿಟಲ್ ಆರ್ಥಿಕತೆ ಇಷ್ಟೆಲ್ಲ ದೊಡ್ಡದಾಗಿ ಬೆಳೆಯಬೇಕೆಂದರೆ ಅದಕ್ಕೆ ಬೇಕಾದ ತಂತ್ರಾಂಶಗಳು, ಯಂತ್ರಾಂಶ ಹಾಗೂ ದೂರಸಂಪರ್ಕ ವ್ಯವಸ್ಥೆಯ ಮೂಲಸೌಕರ್ಯವೂ ಬೆಳೆಯಬೇಕು. ನಮ್ಮ ದೇಶದಲ್ಲೇ ರೂಪಿಸಲಾದ ಯುಪಿಐ ವ್ಯವಸ್ಥೆ ಇಂತಹ ಮೂಲಸೌಕರ್ಯವನ್ನು ಸೃಷ್ಟಿಸುವ ಹಾದಿಯಲ್ಲಿನ ಬಹುಮುಖ್ಯ ಮೈಲಿಗಲ್ಲು. ಆನ್ ಲೈನ್ ಪಾವತಿಗಳನ್ನು ಅತ್ಯಂತ ಸುಲಭವಾಗಿಸಿದ ಯುಪಿಐ ರೀತಿಯಲ್ಲಿಯೇ ಇನ್ನೂ ಕೆಲ ಮಹತ್ವಾಕಾಂಕ್ಷಿ ವ್ಯವಸ್ಥೆಗಳು ಮುಂಬರುವ ದಿನಗಳಲ್ಲಿ ನಮ್ಮ ಆರ್ಥಿಕತೆಗೆ ಇನ್ನಷ್ಟು ಪೋಷಣೆ ನೀಡುವ ನಿರೀಕ್ಷೆಯಿದೆ. ಹಣಕಾಸು ವಹಿವಾಟುಗಳನ್ನು ಸುಲಭಗೊಳಿಸಲಿರುವ ಅಕೌಂಟ್ ಅಗ್ರಿಗೇಟರ್ (ಎಎ) ಫ್ರೇಮ್ ವರ್ಕ್, ತಮ್ಮ ವಹಿವಾಟನ್ನು ಡಿಜಿಟಲ್ ಜಗತ್ತಿಗೆ ವಿಸ್ತರಿಸಲು ಸಣ್ಣ ಉದ್ಯಮಿಗಳಿಗೂ ನೆರವಾಗುವ ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್ ಡಿಸಿ) ಮುಂತಾದ ವ್ಯವಸ್ಥೆಗಳು ಯುಪಿಐ ಮೂಲಕ ಸಾಧ್ಯವಾದಂತಹುದೇ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ.

ಈಗಷ್ಟೇ ಪ್ರಾರಂಭವಾಗಿರುವ ೫ಜಿ ಮೊಬೈಲ್ ಸೇವೆಗಳನ್ನು ಕುರಿತಾದ ನಿರೀಕ್ಷೆಯೂ ಬಹಳ ದೊಡ್ಡದು. ಅತಿವೇಗದ ಅಂತರಜಾಲ ಸಂಪರ್ಕ ಒದಗಿಸುವ ೫ಜಿ ಜಾಲಗಳಿಂದಾಗಿ ಅಂತರಜಾಲದ ಬಳಕೆ ಇನ್ನಷ್ಟು ಕ್ಷಿಪ್ರ ಹಾಗೂ ಸರಾಗವಾಗುವುದರ ಜೊತೆಗೆ, ವಸ್ತುಗಳ ಅಂತರಜಾಲದಂತಹ (ಐಓಟಿ) ಪರಿಕಲ್ಪನೆಗಳ ಸುಲಭ ಅನುಷ್ಠಾನವೂ ಸಾಧ್ಯವಾಗಲಿದೆ. ನಮ್ಮ ದೇಶದ ಮೂಲೆಮೂಲೆಗಳಲ್ಲಿರುವ ಲಕ್ಷಾಂತರ ನಾಗರಿಕರು ಅಂತರಜಾಲದ ಸಂಪರ್ಕಕ್ಕೆ ಬರುವುದರಿಂದ ಅಸಂಖ್ಯ ಹೊಸ ಅವಕಾಶಗಳೂ ಸೃಷ್ಟಿಯಾಗಲಿವೆ. ಗ್ರಾಮೀಣ ಕೈಗಾರಿಕೆಗಳಿಗೆ ಹೊಸ ಮಾರುಕಟ್ಟೆಗಳನ್ನು ಒದಗಿಸಿಕೊಡುವುದರಿಂದ ಪ್ರಾರಂಭಿಸಿ ದುರ್ಗಮ ಪ್ರದೇಶಗಳಲ್ಲಿ ಅಂತರಜಾಲ ಆಧಾರಿತ ವೈದ್ಯಕೀಯ ಸೇವೆಗಳನ್ನು ಒದಗಿಸುವವರೆಗೆ ೫ಜಿ ಅನೇಕ ಕನಸುಗಳನ್ನು ನನಸಾಗಿಸಲಿದೆ.

"೫ಜಿ ಎನ್ನುವುದು ಕೇವಲ ಇನ್ನೊಂದು ಆವಿಷ್ಕಾರ ಮಾತ್ರವಲ್ಲ, ಅದು ಎಷ್ಟೋ ಹೊಸ ಆವಿಷ್ಕಾರಗಳನ್ನು ಸಾಧ್ಯವಾಗಿಸಲಿರುವ ವೇದಿಕೆ," ಎಂದು ವೆರೈಝನ್ ಸಂಸ್ಥೆಯ ಮುಖ್ಯಸ್ಥ ಹಾನ್ಸ್ ವೆಸ್ಟ್ ಬರ್ಗ್ ಒಮ್ಮೆ ಹೇಳಿದ್ದರು. ಆವಿಷ್ಕಾರಗಳ ಈ ವೇದಿಕೆಯನ್ನು ಸಜ್ಜುಗೊಳಿಸುವ ಕೆಲಸದಲ್ಲೂ ಭಾರತೀಯ ತಂತ್ರಜ್ಞರ ಕೊಡುಗೆ ಇದೆ. ಭಾರತದಲ್ಲಿ ಹೊಸ ತಂತ್ರಜ್ಞಾನಗಳ ಪರಿಚಯವೆಂದರೆ ಬೇರೆ ಯಾರೋ ಮಾಡಿಟ್ಟಿದ್ದನ್ನು ಅನುಷ್ಠಾನಗೊಳಿಸುವುದು ಮಾತ್ರ ಎನ್ನುವ ಅಭಿಪ್ರಾಯವನ್ನು ಬದಲಾಯಿಸುವಂತೆ, ೫ಜಿ ಸೇವೆಗಳಿಗಾಗಿ ನಮ್ಮ ದೇಶದಲ್ಲೇ ರೂಪಿಸಲಾದ ೫ಜಿಐ ಮಾನಕಕ್ಕೆ (ಸ್ಟಾಂಡರ್ಡ್) ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ ಮಾನ್ಯತೆ ದೊರೆತಿದೆ. ಮುಂದಿನ ದಿನಗಳಲ್ಲಿ ನಾವು ಇಂತಹುದೇ ಇನ್ನಷ್ಟು ಬೆಳವಣಿಗೆಗಳನ್ನು ಕಾಣಬಹುದೆಂಬ ಭರವಸೆಯೂ ಮೂಡಿದೆ.

ವಿದ್ಯುನ್ಮಾನ ಸಾಧನಗಳ ತಯಾರಿಕೆ

ಮಾಹಿತಿ ತಂತ್ರಜ್ಞಾನ ಹಾಗೂ ದೂರಸಂಪರ್ಕ ಕ್ಷೇತ್ರಗಳಲ್ಲಿ ಸರ್ವತೋಮುಖ ಬೆಳವಣಿಗೆಯಾಗಬೇಕೆಂದರೆ ನಾವು ಯಂತ್ರಾಂಶ ಅಭಿವೃದ್ಧಿ ಹಾಗೂ ತಯಾರಿಕೆಯಲ್ಲೂ ತೊಡಗಿಕೊಳ್ಳಬೇಕಾದ್ದು ಅತ್ಯಗತ್ಯ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ನಡೆದ ಇಂತಹ ಕೆಲ ಪ್ರಯತ್ನಗಳು ಅನೇಕ ಕಾರಣಗಳಿಂದ ಹೆಚ್ಚು ಯಶಸ್ಸನ್ನು ಕಂಡಿರಲಿಲ್ಲ. ಆದರೆ ಈ ನಿಟ್ಟಿನಲ್ಲಿ ಮರುಚಿಂತನೆ ನಡೆದಿರುವುದು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಿದೆ.

ಟೀವಿಯ ಸೆಟ್ ಟಾಪ್ ಬಾಕ್ಸುಗಳಿಂದ ಮೊಬೈಲ್ ಫೋನುಗಳವರೆಗೆ ಪ್ರತಿಯೊಂದಕ್ಕೂ ವಿದೇಶಿ ಉತ್ಪಾದಕರನ್ನು ನೆಚ್ಚಿಕೊಳ್ಳುವ ಬದಲು ಅವೆಲ್ಲವೂ ಭಾರತದಲ್ಲಿಯೇ ತಯಾರಾಗಬೇಕು ಎನ್ನುವ ಉದ್ದೇಶದಿಂದ ಕೆಲ ಪ್ರಯತ್ನಗಳು ಪ್ರಾರಂಭವಾಗಿವೆ. ೫ಜಿ ತಂತ್ರಜ್ಞಾನ ಹಾಗೂ ವಸ್ತುಗಳ ಅಂತರಜಾಲದಂತಹ (ಐಓಟಿ) ಪರಿಕಲ್ಪನೆಗಳ ಅನುಷ್ಠಾನದೊಂದಿಗೆ ಭಾರತದಲ್ಲಿ ಅರೆವಾಹಕ ಚಿಪ್ ಗಳ ಬೇಡಿಕೆ ೨೦೨೫ರ ವೇಳೆಗೆ ಇಂದಿಗಿಂತ ನಾಲ್ಕು ಪಟ್ಟು ಹೆಚ್ಚಾಗಲಿದ್ದು, ಈ ಭಾರೀ ಬೇಡಿಕೆಯನ್ನು ಭಾರತದಲ್ಲೇ ಪೂರೈಸುವಂತಾಗಬೇಕು ಎನ್ನುವುದು ಇದರ ಉದ್ದೇಶಗಳಲ್ಲೊಂದು. ಕೋವಿಡ್ ಸಂದರ್ಭದಲ್ಲಿ ಕಂಡುಬಂದಿದ್ದ ಚಿಪ್ ಕೊರತೆಯಂತಹ ಸನ್ನಿವೇಶಗಳು ಮರುಕಳಿಸಿದರೂ ಸ್ಥಳೀಯ ತಯಾರಿಕೆಯು ಅದರ ಪರಿಣಾಮವನ್ನು ಕಡಿಮೆಮಾಡುವುದು ಸಾಧ್ಯ.

ಇಂತಹ ಪ್ರಯತ್ನಗಳು ಮುಂದಿನ ದಿನಗಳಲ್ಲಿ ನಾವು ಯಂತ್ರಾಂಶಗಳ ಆಮದನ್ನು ಕಡಿಮೆ ಮಾಡುವುದಕ್ಕೆ ಹಾಗೂ ತಂತ್ರಾಂಶದ ಜೊತೆಗೆ ಯಂತ್ರಾಂಶ ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸುವುದಕ್ಕೆ ಸಹಕಾರಿಯಾಗಲಿವೆ ಎನ್ನುವುದು ಸದ್ಯದ ನಿರೀಕ್ಷೆ. ನಮ್ಮ ಬದುಕಿನ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ವಿದ್ಯುನ್ಮಾನ ಸಾಧನಗಳ ಬಳಕೆ ವ್ಯಾಪಕವಾಗಿರುವ ಇಂದಿನ ಸನ್ನಿವೇಶದಲ್ಲಿ ಹಾಗೆ ಆಗಬೇಕಿರುವುದು ಅನಿವಾರ್ಯವೂ ಹೌದು.

ಶಿಕ್ಷಣದಲ್ಲಿ ತಂತ್ರಜ್ಞಾನ

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಳವಣಿಗೆ ಕಾಣಬೇಕೆಂದರೆ ಅದಕ್ಕಾಗಿ ಪರಿಣತ ಸಂಶೋಧಕರು ಹಾಗೂ ತಂತ್ರಜ್ಞರ ದೊಡ್ಡ ಪಡೆಯೇ ಸಿದ್ಧವಾಗಬೇಕು. ಅದು ಸಾಧ್ಯವಾಗಬೇಕೆಂದರೆ ನಮ್ಮ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಮಾಹಿತಿ ತಂತ್ರಜ್ಞಾನದ ಸವಲತ್ತುಗಳು ಇಂತಹ ಬದಲಾವಣೆಗಳನ್ನು ತರಬಲ್ಲವು, ಹಾಗೂ ನಮ್ಮ ದೇಶದಲ್ಲಿ ಅಂತಹ ಬದಲಾವಣೆಗಳನ್ನು ತರುವ ಪ್ರಯತ್ನಗಳು ನಡೆದಿವೆ.

ಅಂತರಜಾಲದ ವ್ಯಾಪ್ತಿ ದೇಶದಾದ್ಯಂತ ವಿಸ್ತರಿಸಿಕೊಳ್ಳುತ್ತಿರುವಂತೆ ಅದನ್ನು ಶಿಕ್ಷಣ ಹಾಗೂ ತರಬೇತಿ ಒದಗಿಸುವ ಸಾಧನವಾಗಿ ಬಳಸುವ ಪ್ರಯತ್ನಗಳು ಪ್ರಾರಂಭವಾಗಿವೆ. ಕೋವಿಡ್ ಸಮಯದಲ್ಲಿ ನಮಗೆ ಪರಿಚಯವಾದ ಆನ್ ಲೈನ್ ಪಾಠಗಳಷ್ಟೇ ಅಲ್ಲ, ಬಹುಮಾಧ್ಯಮ ಪಠ್ಯಪುಸ್ತಕಗಳನ್ನು ಒದಗಿಸುವುದರಿಂದ ಹಿಡಿದು ಪ್ರಯೋಗಶಾಲೆಯ ಚಟುವಟಿಕೆಗಳನ್ನು ಮೊಬೈಲಿನಲ್ಲೇ ನಡೆಸುವುದರವರೆಗೆ ಅನೇಕ ಪರಿಕಲ್ಪನೆಗಳನ್ನು ಇದು ಸಾಧ್ಯವಾಗಿಸಲಿದೆ.

ಉದ್ಯೋಗಕ್ಕೆ ಬೇಕಾದ ಕೌಶಲಗಳನ್ನು ಹೇಳಿಕೊಡುವುದಿರಲಿ, ಮೂಲ ವಿಜ್ಞಾನದ ಕ್ಷೇತ್ರಗಳಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಯನ್ನು ಪ್ರೋತ್ಸಾಹಿಸುವುದೇ ಇರಲಿ, ಅಂತರಜಾಲದ ಮಾಧ್ಯಮವು ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.

ಭವಿಷ್ಯಕ್ಕೆ ಸಿದ್ಧತೆ

ಭವಿಷ್ಯದ ಸಿದ್ಧತೆ ಕೇವಲ ಅಂತರಜಾಲದ ಡಿಜಿಟಲ್ ಲೋಕದಲ್ಲಿ ಮಾತ್ರವೇ ನಡೆಯಬೇಕಿರುವ ಕೆಲಸವಲ್ಲ. ಉತ್ತಮ ಭವಿಷ್ಯ ಬೇಕೆನ್ನುವವರು ಭೌತಿಕ ಜಗತ್ತಿನ ವರ್ತಮಾನದ ಸಮಸ್ಯೆಗಳನ್ನೂ ಬಗೆಹರಿಸಿಕೊಳ್ಳಬೇಕಾಗುತ್ತದೆ. ಮಾಲಿನ್ಯ, ವಾಯುಗುಣ ಬದಲಾವಣೆ, ಕಸ ಮುಂತಾದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳದಿದ್ದರೆ ಅವು ಭವಿಷ್ಯದ ಕಡೆಗಿನ ನಮ್ಮ ನಡಿಗೆಗೇ ಅಡ್ಡಗಾಲು ಹಾಕಬಲ್ಲವು.

ವಾಯುಗುಣ ಬದಲಾವಣೆಯ ಬಗ್ಗೆ ನಾವು ಅನೇಕ ವಿಷಯಗಳನ್ನು ಕೇಳಿದ್ದೇವೆ, ಈಚಿನ ವರ್ಷಗಳ ಹವಾಮಾನದ ವೈಚಿತ್ರ್ಯಗಳನ್ನು ನೋಡಿಯೂ ಇದ್ದೇವೆ. ಮಳೆ-ಪ್ರವಾಹಗಳಿರಲಿ, ಬಿಸಿಲು-ಬರಗಾಲಗಳೇ ಇರಲಿ, ಅವು ನಮ್ಮ ಬದುಕಿನ ಮೇಲೆ ಅಗಾಧ ಪರಿಣಾಮಗಳನ್ನು ಉಂಟುಮಾಡಬಲ್ಲವು. ಅಂತಿಂಥ ಪರಿಣಾಮಗಳ ಮಾತು ಹಾಗಿರಲಿ, ಜಾಗತಿಕ ತಾಪಮಾನದ ಏರಿಕೆ ನಮ್ಮ ಆಹಾರ ಉತ್ಪಾದನೆಯನ್ನೇ ಕುಂಠಿತಗೊಳಿಸಬಲ್ಲದು ಎಂದು ಸಂಶೋಧನೆಗಳು ಕಂಡುಕೊಂಡಿವೆ.

ವಾಯುಗುಣ ಬದಲಾವಣೆಯನ್ನು ತಡೆಯುವ ಹಾಗೂ ಅದರ ಪರಿಣಾಮಗಳಿಗೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಭಾರತ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಹೆಚ್ಚಿನ ತಾಪಮಾನದಲ್ಲೂ ಇಂದಿನಂತೆಯೇ ಫಸಲು ನೀಡಬಲ್ಲ ಸಸ್ಯಗಳನ್ನು ಗುರುತಿಸಿ ಬೆಳೆಸುವ ಕೆಲಸ, ಈ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ನಡೆದಿರುವ ಪ್ರಯತ್ನಗಳಲ್ಲೊಂದು.

ಮಾಲಿನ್ಯದ ಸವಾಲು

ಇಂದಿನ ಬದುಕಿಗೆ ಅತ್ಯಗತ್ಯವಾಗಿರುವ ವಾಹನಗಳು ವಾಯುಮಾಲಿನ್ಯದ ಬಹುದೊಡ್ಡ ಮೂಲಗಳೂ ಹೌದು. ಪೆಟ್ರೋಲ್ ಡೀಸೆಲ್ ಮುಂತಾದ ಪಳೆಯುಳಿಕೆ ಇಂಧನಗಳನ್ನು ಭಾರೀ ಪ್ರಮಾಣದಲ್ಲಿ ಕಬಳಿಸುವ ವಾಹನಗಳಿಂದ ನಮ್ಮ ಪರಿಸರದ ಮೇಲೆ ಉಂಟಾಗುವ ಪರಿಣಾಮ ಅಗಾಧವಾದದ್ದು.

ಮಾಲಿನ್ಯವನ್ನು ಕಡಿಮೆಮಾಡುವ ಹಾಗೂ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆಮಾಡುವ ಉದ್ದೇಶದಿಂದ ಸ್ವಚ್ಛ ಇಂಧನ ಬಳಸುವ, ಪರಿಸರ ಸ್ನೇಹಿ ವಾಹನಗಳ ಅಭಿವೃದ್ಧಿಯ ಕೆಲಸ ನಡೆದಿದೆ. ಈಗಾಗಲೇ ಮಾರುಕಟ್ಟೆಗೆ ಬಂದಿರುವ ಬ್ಯಾಟರಿ ಚಾಲಿತ ವಾಹನಗಳು ಮಾತ್ರವೇ ಅಲ್ಲದೆ ಹೈಡ್ರೋಜನ್ ಚಾಲಿತ ವಾಹನಗಳ ಅಭಿವೃದ್ಧಿಯಲ್ಲೂ ಭಾರತ ಪ್ರಯತ್ನಗಳನ್ನು ನಡೆಸಿದೆ. ಬ್ಯಾಟರಿ ಚಾಲಿತ ವಾಹನಗಳಿಗಾಗಿ ನಮ್ಮ ದೇಶದ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ಬ್ಯಾಟರಿಗಳನ್ನು ರೂಪಿಸುವ ಪ್ರಯತ್ನಗಳೂ ನಡೆದಿವೆ.

ನವೀಕರಿಸಬಹುದಾದ ಶಕ್ತಿಯ ಮೂಲಗಳ (ಸೌರಶಕ್ತಿ, ಪವನಶಕ್ತಿ ಇತ್ಯಾದಿ) ಜೊತೆಗೆ, ನಮ್ಮ ದೇಶದಲ್ಲಿ ಅಗಾಧವಾಗಿ ಉತ್ಪಾದನೆಯಾಗುವ ಕಸವನ್ನೂ ಶಕ್ತಿಯ ಮೂಲವನ್ನಾಗಿ ಬಳಸಿಕೊಳ್ಳುವ ಪ್ರಯತ್ನಗಳು ಪ್ರಾರಂಭವಾಗಿವೆ. ಕಸ ನಿರ್ವಹಣೆಯ ಸಮಸ್ಯೆ ಕೈಮೀರುವ ಮೊದಲು ಅದನ್ನೂ ನಿಯಂತ್ರಣಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ.

ವಿಜ್ಞಾನದ ಮುನ್ನಡೆ

ವಿಜ್ಞಾನ-ತಂತ್ರಜ್ಞಾನಗಳು ನಮ್ಮ ದೈನಂದಿನ ಕೆಲಸಗಳನ್ನು ಸುಲಭಗೊಳಿಸುವುದಕ್ಕೆ ಮಾತ್ರವೇ ಸೀಮಿತವಾಗಿಬಿಟ್ಟರೆ ಹೊಸ ವಿಷಯಗಳನ್ನು ಅರಿತುಕೊಳ್ಳುವ, ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸುವ ಅವಕಾಶದಿಂದ ನಾವು ವಂಚಿತರಾಗಬೇಕಾಗುತ್ತದೆ. ಹಾಗೆ ಆಗಬಾರದು ಎಂದರೆ ವೈಜ್ಞಾನಿಕ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಲೇ ಇರಬೇಕಾಗುತ್ತದೆ, ಔಷಧ ತಯಾರಿಕೆಯಿಂದ ಬಾಹ್ಯಾಕಾಶ ಸಂಶೋಧನೆಯವರೆಗೆ ಪ್ರತಿಯೊಂದು ವಿಷಯವೂ ನಮ್ಮ ಗಮನವನ್ನು ಸೆಳೆಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ಹಲವು ಬಗೆಗಳಲ್ಲಿ ಸಕ್ರಿಯರಾಗಿದ್ದಾರೆ, ಜಗತ್ತಿನ ಹಲವು ದೇಶಗಳ ತಮ್ಮ ಸಹೋದ್ಯೋಗಿಗಳೊಡನೆ ಕಾರ್ಯನಿರತರಾಗಿದ್ದಾರೆ ಎನ್ನುವುದು ವಿಶೇಷ.

ಸ್ವಿಟ್ಸರ್ಲೆಂಡಿನ ಜಿನೀವಾ ಬಳಿಯಿರುವ ಸರ್ನ್ ನಲ್ಲಿರುವ ಲಾರ್ಜ್ ಹ್ಯಾಡ್ರನ್ ಕೊಲೈಡರ್, ಫ್ರಾನ್ಸಿನಲ್ಲಿ ನಡೆದಿರುವ 'ಇಂಟರ್ ನ್ಯಾಶನಲ್ ಥರ್ಮೋನ್ಯೂಕ್ಲಿಯರ್ ಎಕ್ಸ್ ಪೆರಿಮೆಂಟಲ್ ರಿಯಾಕ್ಟರ್' ಯೋಜನೆ, ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕದಲ್ಲಿ ನಿರ್ಮಾಣವಾಗಲಿರುವ 'ಸ್ಕ್ವೇರ್ ಕಿಲೋಮೀಟರ್ ಅರೇ' ರೇಡಿಯೋ ಟೆಲಿಸ್ಕೋಪ್ ಯೋಜನೆ ಮುಂತಾದ ಕಾರ್ಯಕ್ರಮಗಳಿಂದ ಪ್ರಾರಂಭಿಸಿ ಭಾರತದಲ್ಲಿಯೇ ನೆಲೆಗೊಳ್ಳಲಿರುವ ಇಂಡಿಯಾ-ಬೇಸ್ಡ್ ನ್ಯೂಟ್ರಿನೋ ಅಬ್ಸರ್ವೇಟರಿ (ಐಎನ್ಓ) ಹಾಗೂ ಲೇಸರ್ ಇಂಟರ್ ಫೆರೋಮೀಟರ್ ಗ್ರಾವಿಟೇಶನಲ್-ವೇವ್ ಅಬ್ಸರ್ವೇಟರಿ (ಲಿಗೋ-ಇಂಡಿಯಾ)ಗಳವರೆಗೆ ಭಾರತೀಯ ವಿಜ್ಞಾನಿಗಳು ಹಲವು ಮಹತ್ವದ ಯೋಜನೆಗಳಲ್ಲಿ ಕೆಲಸಮಾಡುತ್ತಿದ್ದಾರೆ.

ಹೊಸ ಜಗತ್ತುಗಳ ಅನ್ವೇಷಣೆ

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ನಮ್ಮ ಚಟುವಟಿಕೆಗಳೆಲ್ಲ ಕೇವಲ ನೆಲದ ಮೇಲಷ್ಟೇ ನಡೆದರೆ ಸಾಕೇ? ಖಂಡಿತಾ ಸಾಲದು. ನಾವು ಆಕಾಶದ ಎತ್ತರವನ್ನೂ ನೋಡಬೇಕು, ಸಾಗರದ ಆಳದಲ್ಲೂ ಇಣುಕಬೇಕು. ಭಾರತೀಯ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಪ್ರಯತ್ನಗಳು ಈ ನಿಟ್ಟಿನಲ್ಲೂ ಸಾಗಿವೆ.

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಈವರೆಗಿನ ಸಾಧನೆಗಳ ಬಗ್ಗೆ ಹೆಚ್ಚು ಹೇಳುವುದೇ ಬೇಕಿಲ್ಲ. ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ನಮ್ಮ ವಿಜ್ಞಾನಿಗಳು ಅನೇಕ ಅದ್ಭುತಗಳನ್ನು ಸಾಧಿಸಿ ತೋರಿಸಿದ್ದಾರೆ. ದೂರಸಂಪರ್ಕ ಕ್ಷೇತ್ರದಲ್ಲಂತೂ ಕ್ರಾಂತಿಯನ್ನೇ ಮಾಡಿದ್ದಾರೆ. ಇನ್ನಿತರ ಆಕಾಶಕಾಯಗಳ ಬಗ್ಗೆ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ಕೃತಕ ಉಪಗ್ರಹಗಳ ಮೂಲಕ ನಮ್ಮ ಭೂಮಿಯ ಮೇಲೆ ಸದಾ ಒಂದು ಕಣ್ಣಿಟ್ಟಿರುವುದೂ ಸಾಧ್ಯವಾಗಿದೆ. ಭೂಮಿಯ ಮೇಲಿನ ಸಣ್ಣಪುಟ್ಟ ವಸ್ತುಗಳನ್ನೂ ಬಾಹ್ಯಾಕಾಶದಿಂದಲೇ ಗುರುತಿಸಿ ವಿಶ್ಲೇಷಿಸಲು ಬೇಕಾದ ಸವಲತ್ತುಗಳು ಈಗಾಗಲೇ ಲಭ್ಯವಿವೆ. ಹವಾಮಾನ ಮುನ್ಸೂಚನೆ, ಅರಣ್ಯ ಪ್ರದೇಶಗಳ ಸಮೀಕ್ಷೆ, ಪ್ರಕೃತಿ ವಿಕೋಪಗಳ ನಿರ್ವಹಣೆ ಮುಂತಾದವುಗಳ ಜೊತೆಗೆ ಸಂಚಾರ ನಿಯಂತ್ರಣದಂತಹ ಉದ್ದೇಶಗಳಿಗಾಗಿಯೂ ಉಪಗ್ರಹಗಳಿಂದ ಪಡೆದ ಮಾಹಿತಿಯನ್ನು ಬಳಸಬಹುದಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆಗಳ ಮುಂದುವರೆದ ಭಾಗವಾಗಿ ಮಾನವರನ್ನು ಅಂತರಿಕ್ಷಕ್ಕೆ ಕಳುಹಿಸುವ 'ಗಗನಯಾನ' ಯೋಜನೆ ಪ್ರಾರಂಭವಾಗಿದೆ. ಮಾನವರನ್ನು ಬಾಹ್ಯಾಕಾಶಕ್ಕೆ ಕರೆದೊಯ್ದು ಸುರಕ್ಷಿತವಾಗಿ ಮರಳಿಸುವ ಈ ಯೋಜನೆ ಯಶಸ್ವಿಯಾದರೆ ಅದು ಮುಂದೊಂದು ದಿನ ಬಾಹ್ಯಾಕಾಶ ಪ್ರವಾಸೋದ್ಯಮದಂತಹ ಕನಸುಗಳನ್ನೂ ನನಸಾಗಿಸಬಹುದು ಎನ್ನುವುದು ಸದ್ಯದ ನಿರೀಕ್ಷೆ. ಹಾಗಾದಾಗ ನಾವು ಯಶವಂತಪುರದಿಂದ ರೈಲು ಹಿಡಿದು ದೆಹಲಿಗೋ ಕಲಕತ್ತೆಗೋ ಹೋದ ಹಾಗೆ ಶ್ರೀಹರಿಕೋಟದಲ್ಲಿ ರಾಕೆಟ್ ಹತ್ತಿ ಚಂದ್ರನ ಕಡೆಗೋ ಮಂಗಳಗ್ರಹಕ್ಕೋ ಹೊರಡುವುದು ಸಾಧ್ಯವಾಗಬಹುದು!

ಬಾಹ್ಯಾಕಾಶಕ್ಕೆ ಹಾಗೆ ಹೋಗಿ ಹೀಗೆ ಬಂದರೆ ಏನು ಚೆನ್ನ? ಹೊರ ಊರುಗಳಿಗೆ ಹೋದಾಗ ಹೋಟಲಿನಲ್ಲಿ ಉಳಿದುಕೊಳ್ಳುವ ಹಾಗೆ ಬಾಹ್ಯಾಕಾಶದಲ್ಲೂ ಉಳಿದುಕೊಳ್ಳುವುದು ಸಾಧ್ಯವಿಲ್ಲವೇ? ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಅದಕ್ಕೆ ಬೇಕಾದ ವ್ಯವಸ್ಥೆಗಳೂ ಆಗಿರಬಹುದೋ ಏನೋ!

ಸಾಗರದೊಳಗೊಂದು ಇಣುಕುನೋಟ

ನೆಲದ ಮೇಲಿರುವ ವಸ್ತು ವಿಶೇಷಗಳ ಬಗ್ಗೆ, ನೆಲದಾಳದಲ್ಲಿ ಅಡಗಿರುವ ಸಂಪನ್ಮೂಲಗಳ ಬಗ್ಗೆ ಏನೆಲ್ಲ ತಿಳಿದುಕೊಂಡಿರುವ ನಾವು ಬಾಹ್ಯಾಕಾಶದಲ್ಲಿ ಏನು ನಡೆದಿದೆ ಎನ್ನುವುದನ್ನೂ ಅರಿಯುತ್ತಿದ್ದೇವೆ. ಇಷ್ಟೆಲ್ಲ ನಮಗೆ ಗೊತ್ತು ಎಂದುಕೊಂಡರೂ ಸಮುದ್ರದಾಳದ ಜಗತ್ತಿನ ಬಹುಪಾಲು ನಮ್ಮ ಪಾಲಿಗೆ ಇನ್ನೂ ಅಪರಿಚಿತವಾಗಿಯೇ ಉಳಿದಿದೆ.

ಆದ್ದರಿಂದಲೇ, ಆಳ ಸಮುದ್ರದ ಅಧ್ಯಯನವನ್ನು ಗುರಿಯಾಗಿಟ್ಟುಕೊಂಡಿರುವ 'ಡೀಪ್ ಓಶನ್ ಮಿಶನ್' ಕಾರ್ಯಕ್ರಮ ನಮ್ಮ ದೇಶದಲ್ಲಿ ಪ್ರಾರಂಭವಾಗಿದೆ. ಈ ಕಾರ್ಯಕ್ರಮದಡಿ ಭಾರತೀಯ ವಿಜ್ಞಾನಿಗಳು ಸಮುದ್ರದ ಮೇಲ್ಮೈಯಿಂದ ಸಾವಿರಾರು ಅಡಿಗಳ ಆಳದಲ್ಲಿ ಹಲವು ಸಂಶೋಧನೆಗಳನ್ನು ಕೈಗೊಳ್ಳಲಿದ್ದಾರೆ. ನೀರಿನಡಿಯ ಅಧ್ಯಯನವನ್ನು ಸಾಧ್ಯವಾಗಿಸುವ 'ಮತ್ಸ್ಯ' ಸರಣಿಯ ವಾಹನಗಳೂ ಭಾರತದಲ್ಲೇ ಸಿದ್ಧವಾಗುತ್ತಿವೆ.

ಸಮುದ್ರದಾಳದ ಜೀವವೈವಿಧ್ಯ, ವಾಯುಗುಣ ಬದಲಾವಣೆಯಿಂದ ಅದರ ಮೇಲಾಗುತ್ತಿರುವ ಪರಿಣಾಮಗಳು ಸೇರಿದಂತೆ ಹಲವು ಹೊಸ ವಿಷಯಗಳನ್ನು ಈ ಅನ್ವೇಷಣೆಯಿಂದ ತಿಳಿದುಕೊಳ್ಳುವುದು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೆ ವಿಜ್ಞಾನ-ತಂತ್ರಜ್ಞಾನಗಳ ಮುನ್ನಡೆ ಹಾಗೂ ಸಮಾಜದ ಒಳಿತಿಗಾಗಿ ಅಲ್ಲಿನ ಸಂಪನ್ಮೂಲಗಳನ್ನು ಬಳಸುವ ಸಾಧ್ಯತೆಯೂ ನಮ್ಮ ಮುಂದೆ ಅನಾವರಣಗೊಳ್ಳಲಿದೆ.

ಮುಂದಿನ ದಾರಿ

ಸ್ವಾತಂತ್ರ್ಯಾನಂತರದ ಎಪ್ಪತ್ತೈದು ವರ್ಷಗಳಲ್ಲಿ ಭಾರತದ ಸಾಧನೆಗಳು ನಿಜಕ್ಕೂ ಮೆಚ್ಚುವಂತಹವೇ. ೧೯೪೭ರಲ್ಲಿ ನಮ್ಮ ದೇಶ ಇದ್ದ ಸ್ಥಿತಿಗೂ, ನಮ್ಮ ಇಂದಿನ ಪರಿಸ್ಥಿತಿಗೂ ಬಹುದೊಡ್ಡ ವ್ಯತ್ಯಾಸ ಇದೆ. ಹಾಗೆಂದಮಾತ್ರಕ್ಕೆ ನಾವು ಅಭಿವೃದ್ಧಿಯ ಉತ್ತುಂಗವನ್ನು ತಲುಪಿಬಿಟ್ಟಿದ್ದೇವೆ ಎಂದೇನೂ ಇಲ್ಲ. ಸಾಗಬೇಕಿರುವ ದಾರಿ ಇನ್ನೂ ದೀರ್ಘವಾಗಿದೆ.

ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿರುವುದು, ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಿರುವುದು, ಶಿಕ್ಷಣ ವ್ಯವಸ್ಥೆಯನ್ನು ಇವೆಲ್ಲದಕ್ಕೂ ಪೂರಕವಾಗಿ ಸುಧಾರಿಸಬೇಕಿರುವುದು ಇಂದಿನ ಅಗತ್ಯ. ಹೆಚ್ಚುಹೆಚ್ಚು ಜನರು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಕ್ರಿಯರಾದಾಗ ಮಾತ್ರವೇ ನಮ್ಮನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು, ಹೊಸ ಸಾಧ್ಯತೆಗಳನ್ನು ಹುಡುಕುವುದು ಸಾಧ್ಯವಾಗುತ್ತದೆ. ಸರಕಾರದ ಬೆಂಬಲ, ಖಾಸಗಿ ಕ್ಷೇತ್ರದ ಪಾಲ್ಗೊಳ್ಳುವಿಕೆ, ವಿದ್ಯಾರ್ಥಿಗಳ ಕುತೂಹಲ ಹಾಗೂ ಸಾರ್ವಜನಿಕರ ಆಸಕ್ತಿ - ಇವೆಲ್ಲವೂ ಸೇರಿದಾಗ ಮಾತ್ರವೇ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗಬಲ್ಲದು.

(೨೦೨೨ರ ವಿಜಯ ಕರ್ನಾಟಕ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ)

Related Stories

No stories found.
logo
ಇಜ್ಞಾನ Ejnana
www.ejnana.com