ಇಪ್ಪತ್ತಕ್ಕೆ ಕಾಲಿಟ್ಟ ವಿಕಿಪೀಡಿಯ, ಹೇಳೋಣ ಬನ್ನಿ ಶುಭಾಶಯ!
ಅಂತರಜಾಲ ಬಳಕೆದಾರರ ಪೈಕಿ ವಿಕಿಪೀಡಿಯದ ಹೆಸರನ್ನು ಕೇಳದವರೇ ಅಪರೂಪwikipedia.org

ಇಪ್ಪತ್ತಕ್ಕೆ ಕಾಲಿಟ್ಟ ವಿಕಿಪೀಡಿಯ, ಹೇಳೋಣ ಬನ್ನಿ ಶುಭಾಶಯ!

ಕನ್ನಡ, ತುಳು ಸೇರಿದಂತೆ ಪ್ರಪಂಚದ ೩೦೦ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ವಿಕಿಪೀಡಿಯದಲ್ಲಿ ಅಪಾರ ಪ್ರಮಾಣದ ಮಾಹಿತಿ ಮುಕ್ತವಾಗಿ ದೊರಕುತ್ತದೆ.

ಅಂತರಜಾಲ ನಮ್ಮ ಬದುಕನ್ನು ಇಷ್ಟೆಲ್ಲ ವ್ಯಾಪಿಸಿಕೊಳ್ಳುವ ಮೊದಲು, ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೆ ವಿಶ್ವಕೋಶಗಳ ಮೊರೆಹೋಗುವುದು ಬಹಳ ಸಾಮಾನ್ಯವಾಗಿತ್ತು. ಅನೇಕ ಸಂಪುಟಗಳ, ದೊಡ್ಡ ಗಾತ್ರದ ಈ ಪುಸ್ತಕಗಳನ್ನು ಗ್ರಂಥಾಲಯದ ಕಪಾಟಿನಲ್ಲಿ ನೋಡುವುದೇ ಒಂದು ಚೆಂದದ ಅನುಭವವಾಗಿತ್ತು. ಇನ್ನು ವಿಶ್ವಕೋಶದ ಸಂಪುಟಗಳು ಮನೆಯಲ್ಲೇ ಇದ್ದರಂತೂ ವಿಶ್ವವೇ ನಮ್ಮ ಕೈಲಿರುವ ಭಾವನೆ!

ಅವು ಇಷ್ಟೆಲ್ಲ ಉಪಯುಕ್ತವಾಗಿದ್ದರೂ ಮುದ್ರಿತ ವಿಶ್ವಕೋಶಗಳನ್ನು ಬಳಸುವಲ್ಲಿ ಒಂದಷ್ಟು ಸಮಸ್ಯೆಗಳೂ ಇದ್ದವು. ಕೆಲವು ನೂರು ಅಥವಾ ಸಾವಿರ ಪುಟಗಳ ಮಿತಿಯಲ್ಲಿ ನಮಗೆ ಬೇಕಾಗಬಹುದಾದ ಎಲ್ಲ ವಿಷಯಗಳನ್ನೂ ಅಳವಡಿಸುವುದು ಕಷ್ಟ ಎನ್ನುವುದು ಇಂತಹ ಸಮಸ್ಯೆಗಳಲ್ಲಿ ಮೊದಲನೆಯದು. ಇನ್ನು, ಪ್ರಪಂಚದಲ್ಲಿ ಬದಲಾವಣೆಗಳು ಘಟಿಸುವ ವೇಗಕ್ಕೆ ಸಮನಾಗಿ ವಿಶ್ವಕೋಶಗಳನ್ನು ಆಧುನಿಕಗೊಳಿಸುವುದಂತೂ ಅಸಾಧ್ಯವೇ ಆಗಿತ್ತು. ಯಾವುದೋ ಒಂದೆರಡೂ ವಿಶ್ವಕೋಶಗಳ ಹೊಸ ಆವೃತ್ತಿ ವರ್ಷಕ್ಕೊಮ್ಮೆ ಪ್ರಕಟವಾದರೂ ಅದನ್ನೆಲ್ಲ ಕೊಳ್ಳುವುದು, ಸಂಗ್ರಹಿಸಿ ಇಟ್ಟುಕೊಳ್ಳುವುದು ಎಷ್ಟು ಜನರಿಗೆ ತಾನೇ ಸಾಧ್ಯವಾಗಬಹುದು?

ಹೊಸ ಸಹಸ್ರಮಾನದ ಪ್ರಾರಂಭದ ವೇಳೆಗೆ, ವಿಶ್ವವ್ಯಾಪಿ ಜಾಲದ ವ್ಯಾಪ್ತಿ ನಿಜಕ್ಕೂ ವಿಶ್ವವ್ಯಾಪಿಯಾಗಿ ಬೆಳೆದಾಗ, ಈ ಸಮಸ್ಯೆಗಳನ್ನು ಸಾಧ್ಯವಾದ ಮಟ್ಟಿಗೆ ಪರಿಹರಿಸುವ ಪ್ರಯತ್ನಗಳೂ ಶುರುವಾಗಿದ್ದವು. ಅಂಥದ್ದೊಂದು ಪ್ರಯತ್ನದ ಫಲವಾಗಿ ೨೦೦೧ರ ಜನವರಿ ೧೫ರಂದು ಪ್ರಾರಂಭವಾದ ಜಾಲತಾಣವೊಂದು ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿರುವುದಷ್ಟೇ ಅಲ್ಲ, ವಿಶ್ವದ ಟಾಪ್ ೧೦ ಜಾಲತಾಣಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದೆ.

ಹತ್ತೊಂಬತ್ತು ವರ್ಷಗಳ ಪಯಣವನ್ನು ಯಶಸ್ವಿಯಾಗಿ ಪೂರೈಸಿ ಇದೀಗ ತನ್ನ ಇಪ್ಪತ್ತನೇ ವರ್ಷಾಚರಣೆಗೆ ಸಿದ್ಧವಾಗಿರುವ ಈ ತಾಣವೇ ವಿಕಿಪೀಡಿಯ (wikipedia.org).

ಅಂತರಜಾಲ ಬಳಕೆದಾರರ ಪೈಕಿ ವಿಕಿಪೀಡಿಯದ ಹೆಸರನ್ನು ಕೇಳದವರೇ ಅಪರೂಪ ಎಂದು ಧಾರಾಳವಾಗಿ ಹೇಳಬಹುದು. ಏಕೆಂದರೆ ಆ ತಾಣದ ಜನಪ್ರಿಯತೆಯೇ ಅಂಥದ್ದು. ಯಾವುದೇ ವಿಷಯದ ಬಗ್ಗೆ ಯಾವ ಸರ್ಚ್ ಇಂಜನ್ನಿನಲ್ಲಿ ಹುಡುಕಲು ಹೊರಟರೂ ಬಹಳಷ್ಟು ಸಾರಿ ನಮಗೆ ಸಿಗುವ ಫಲಿತಾಂಶಗಳಲ್ಲಿ ವಿಕಿಪೀಡಿಯದ ಒಂದಾದರೂ ಪುಟ ಇರುತ್ತದೆ.

ವಿಕಿಮೀಡಿಯ ಫೌಂಡೇಶನ್ ಆಶ್ರಯದಲ್ಲಿ ನಡೆಯುವ ಈ ತಾಣವನ್ನು ರೂಪಿಸಿದ ಕೀರ್ತಿ ಜಿಮ್ಮಿ ವೇಲ್ಸ್ ಹಾಗೂ ಲ್ಯಾರಿ ಸ್ಯಾಂಗರ್ ಅವರದ್ದು. ಇದು ತನ್ನನ್ನು ತಾನೇ ಒಂದು ಸ್ವತಂತ್ರ ('ಫ್ರೀ') ವಿಶ್ವಕೋಶವೆಂದು ಕರೆದುಕೊಳ್ಳುತ್ತದೆ. ಹಿಂದಿನ ಕಾಲದ ಮುದ್ರಿತ ವಿಶ್ವಕೋಶಗಳಿಗೂ ವಿಕಿಪೀಡಿಯಕ್ಕೂ ಇರುವ ವ್ಯತ್ಯಾಸವೇ ಅದು. ವಿಕಿಪೀಡಿಯ ಮುದ್ರಿತ ರೂಪದಲ್ಲಿಲ್ಲ ಮತ್ತು ಇದನ್ನು ಬಳಸಲು ಹಣ ಕೊಡಬೇಕಿಲ್ಲ ಎನ್ನುವುದು ಈ ವ್ಯತ್ಯಾಸದ ಒಂದು ಮುಖವಾದರೆ ಇದಕ್ಕೆ ಯಾರು ಬೇಕಾದರೂ ಮಾಹಿತಿ ಸೇರಿಸಬಹುದು - ಇರುವ ಮಾಹಿತಿಯನ್ನು ತಿದ್ದಬಹುದು ಎನ್ನುವುದು ಇನ್ನೊಂದು ಪ್ರಮುಖ ಅಂಶ. ಇದು ವಿಕಿಪೀಡಿಯದ ಅತಿಮುಖ್ಯ ವೈಶಿಷ್ಟ್ಯವೂ ಹೌದು.

ಓದುಗರಿಗೆ ತನ್ನಲ್ಲಿರುವ ಮಾಹಿತಿಯನ್ನು ತಮಗಿಷ್ಟಬಂದಂತೆ ಮಾರ್ಪಡಿಸುವ ಹಾಗೂ ಹೊಸ ಮಾಹಿತಿಯನ್ನು ಸೇರಿಸುವ ಸ್ವಾತಂತ್ರ್ಯವನ್ನು ನೀಡುವ ಜಾಲತಾಣಗಳನ್ನು (ವೆಬ್‌ಸೈಟ್) 'ವಿಕಿ'ಗಳೆಂದು ಗುರುತಿಸಲಾಗುತ್ತದೆ. ವಿಕಿ ಎಂಬ ಶಬ್ದ ಹವಾಯಿ ಭಾಷೆಯದ್ದು. ಆ ಭಾಷೆಯಲ್ಲಿ 'ವಿಕಿ ವಿಕಿ' ಎಂದರೆ 'ಬಹಳ ಚುರುಕಾದ' ಎಂದು ಅರ್ಥವಂತೆ. ಈ ಶಬ್ದವನ್ನೂ, ಎನ್‌ಸೈಕ್ಲೋಪೀಡಿಯ (ವಿಶ್ವಕೋಶ) ಎಂಬ ಇಂಗ್ಲಿಷ್ ಪದವನ್ನೂ ಸೇರಿಸಿ ರೂಪಿಸಿದ್ದೇ ವಿಕಿಪೀಡಿಯದ ಹೆಸರು.

ಇಂತಹ ವಿಕಿಗಳಲ್ಲಿ ಅತ್ಯಂತ ಪ್ರಸಿದ್ಧವಾದ ತಾಣ ವಿಕಿಪೀಡಿಯ. ಕನ್ನಡ, ತುಳು ಸೇರಿದಂತೆ ಪ್ರಪಂಚದ ೩೦೦ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯವಿರುವ ವಿಕಿಪೀಡಿಯದಲ್ಲಿ ಅಪಾರ ಪ್ರಮಾಣದ ಮಾಹಿತಿ ಮುಕ್ತವಾಗಿ ದೊರಕುತ್ತದೆ. ೨೦೧೯ರ ಅಂಕಿಅಂಶಗಳ ಪ್ರಕಾರ, ವಿಕಿಪೀಡಿಯದಲ್ಲಿ ಒಟ್ಟು ಐದು ಕೋಟಿಗೂ ಹೆಚ್ಚು ಬರಹಗಳಿದ್ದು, ಇಂಗ್ಲಿಷ್ ಆವೃತ್ತಿಯೊಂದರಲ್ಲೇ ಸುಮಾರು ಅರವತ್ತು ಲಕ್ಷ ಬರಹಗಳು ನಮಗೆ ದೊರಕುತ್ತವೆ. ಹಿಂದೆ ಬಹಳ ಜನಪ್ರಿಯವಾಗಿದ್ದ ಎನ್‌ಸೈಕ್ಲೋಪೀಡಿಯ ಬ್ರಿಟಾನಿಕಾ ವಿಶ್ವಕೋಶದ ಸಂಪುಟಗಳನ್ನು ನೆನಪಿಸಿಕೊಳ್ಳುವುದಾದರೆ, ಇಂಗ್ಲಿಷ್ ವಿಕಿಪೀಡಿಯದಲ್ಲಿರುವ ಈ ಮಾಹಿತಿ ಸುಮಾರು ೨,೫೦೦ ಮುದ್ರಿತ ಸಂಪುಟಗಳಿಗೆ ಸಮ!

ಯಾರು ಬೇಕಾದರೂ ತಮ್ಮ ಆಸಕ್ತಿಯ ವಿಷಯಗಳ ಕುರಿತು ಮಾಹಿತಿ ಸೇರಿಸಲು ಅನುವುಮಾಡಿಕೊಡುವುದು ವಿಕಿಪೀಡಿಯದ ವೈಶಿಷ್ಟ್ಯ. ಇದಕ್ಕಾಗಿ ನೋಂದಾಯಿಸಿಕೊಂಡ ೮ ಕೋಟಿಗೂ ಹೆಚ್ಚು ಬಳಕೆದಾರರು ವಿಕಿಪೀಡಿಯದ ವಿಶ್ವವ್ಯಾಪಿ ಬಳಗದಲ್ಲಿದ್ದಾರೆ. ಇದರಲ್ಲಿ ಕಡಿಮೆಯೆಂದರೂ ಮೂರು ಲಕ್ಷ ಸಕ್ರಿಯ ಬಳಕೆದಾರರಿದ್ದಾರೆ ಎಂದು ವಿಕಿಪೀಡಿಯ ತಾಣದಲ್ಲಿ ದೊರಕುವ ಅಂಕಿ-ಅಂಶಗಳು ಹೇಳುತ್ತವೆ.

ಮಾಹಿತಿ ಸೇರಿಸುವ, ಬದಲಿಸುವ ಇಷ್ಟೆಲ್ಲ ಬಳಕೆದಾರರು ಇರುವುದರಿಂದ ವಿಕಿಪೀಡಿಯದಲ್ಲಿ ತಪ್ಪು ಮಾಹಿತಿಯೂ ಆಗಿಂದಾಗ್ಗೆ ಸೇರಿಕೊಳ್ಳುವುದುಂಟು. ಆದರೆ ಅಂತಹ ತಪ್ಪು ಮಾಹಿತಿಯನ್ನು ಗಮನಿಸಿದ ಯಾರು ಬೇಕಿದ್ದರೂ ಅದನ್ನು ತಕ್ಷಣವೇ ತಿದ್ದುವುದು ಸಾಧ್ಯ. ಸಮಸ್ಯೆಗೆ ಕಾರಣವಾಗುವ ಅಂಶವೇ ಪರಿಹಾರವೂ ಆಗಿಬಿಡುವ ವಿಶೇಷ ಸನ್ನಿವೇಶ ಇದು.

ನಮ್ಮಲ್ಲಿ ಅನೇಕರು ವಿಕಿಪೀಡಿಯ ತಾಣವನ್ನು ಆಗಿಂದಾಗ್ಗೆ ಬಳಸಿದರೂ ಅದಕ್ಕೆ ಮಾಹಿತಿ ಸೇರಿಸುತ್ತಿರುವವರ ಸಂಖ್ಯೆ ಬಹಳ ಕಡಿಮೆಯೇ. ಹೊಸ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಆನ್‌ಲೈನ್ ಜಗತ್ತಿನ ಈ ವಿಶಿಷ್ಟ ಸೌಲಭ್ಯವನ್ನು ಉಪಯೋಗಿಸುವಂತೆ ನಮಗೆ ಗೊತ್ತಿರುವ ವಿಷಯಗಳನ್ನು ಹಂಚಿಕೊಳ್ಳುವುದಕ್ಕೂ ಅದನ್ನು ವೇದಿಕೆಯಾಗಿ ಬಳಸಿದರೆ ಅದು ನಿಜಕ್ಕೂ ಒಳ್ಳೆಯ ಕೆಲಸವಾಗಬಲ್ಲದು. ಹಾಗೆ ಮಾಡುವುದು ವಿಕಿಪೀಡಿಯಕ್ಕೆ ನಾವು ನೀಡುವ ಇಪ್ಪತ್ತನೇ ವರ್ಷಾಚರಣೆಯ ಉಡುಗೊರೆಯೂ ಆದೀತು!

ನೆನಪಿಡಿ, ಇಲ್ಲಿ ವಿಶ್ವಕೋಶ ಮಾದರಿಯ ಲೇಖನಗಳನ್ನಷ್ಟೇ ಸೇರಿಸುವುದು ಅಪೇಕ್ಷಣೀಯ; ಕತೆ, ಕವನ ಹಾಗೂ ವೈಯಕ್ತಿಕ ಅಭಿಪ್ರಾಯಗಳಿಗೆ ವಿಕಿಪೀಡಿಯದಲ್ಲಿ ಜಾಗವಿಲ್ಲ. ಕನ್ನಡ ವಿಕಿಪೀಡಿಯದ ವಿಳಾಸ kn.wikipedia.org ಹಾಗೂ ತುಳು ವಿಕಿಪೀಡಿಯದ್ದು tcy.wikipedia.org

ಜನವರಿ ೨೦೨೦ರ ತುಷಾರದಲ್ಲಿ ಪ್ರಕಟವಾದ ಲೇಖನ

Related Stories

No stories found.
ಇಜ್ಞಾನ Ejnana
www.ejnana.com