ಹ್ಯಾಪಿ ಬರ್ತ್‌ಡೇ ಗೂಗಲ್‌!
ಒಂದರ ಮುಂದೆ ಹೀಗೆ ನೂರು ಸೊನ್ನೆಗಳನ್ನು ಸೇರಿಸಿದರೆ ಸಿಗುವ ಸಂಖ್ಯೆ 'googol'. ಗೂಗಲ್‌‌ ಹೆಸರಿಗೆ ಸ್ಫೂರ್ತಿಯಾಗಿದ್ದು ಇದೇ ಸಂಖ್ಯೆ.Image by Photo Mix from Pixabay

ಹ್ಯಾಪಿ ಬರ್ತ್‌ಡೇ ಗೂಗಲ್‌!

ಯಾವ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ "ಗೂಗಲ್ ಮಾಡಿ" ಎನ್ನುವಂತೆ ಮಾಡಿಬಿಟ್ಟಿರುವ ಗೂಗಲ್ ಒಂದು ವಾಣಿಜ್ಯ ಸಂಸ್ಥೆಯ ರೂಪ ಪಡೆದುಕೊಂಡ ದಿನ ಸೆಪ್ಟೆಂಬರ್ ೪. ಇಂದು ಗೂಗಲ್‌ನ ಹ್ಯಾಪಿ ಬರ್ತ್‌ಡೇ!

ಹತ್ತಿಪ್ಪತ್ತು ವರ್ಷಗಳ ಹಿಂದೆ ನಮಗೆ ಏನಾದರೂ ಮಾಹಿತಿ ಬೇಕಾದಾಗ ಮನೆಯಲ್ಲಿದ್ದ ಪುಸ್ತಕಗಳಲ್ಲಿ ಹುಡುಕುವುದು, ಗ್ರಂಥಾಲಯಗಳಿಗೆ ಹೋಗುವುದು ಸಾಮಾನ್ಯವಾಗಿತ್ತು. ನೂರಾರು ಪುಟದ ಪುಸ್ತಕಗಳಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಳ್ಳುವ ಕೆಲಸ ಸಾಕಷ್ಟು ಕ್ಲಿಷ್ಟವೂ ಆಗಿತ್ತು. ಪಠ್ಯರೂಪದ ಮಾಹಿತಿಯನ್ನೇನೋ ಪುಸ್ತಕದಿಂದ ನಕಲಿಸಿಕೊಳ್ಳಬಹುದಿತ್ತು, ಸರಿ. ಚಿತ್ರಗಳು ಬೇಕಾದವೆಂದರೆ ಹಳೆಯ ಪತ್ರಿಕೆಗಳನ್ನು ಆಶ್ರಯಿಸುವುದು, ಅವನ್ನು ಕತ್ತರಿಸಲು ಪರದಾಡುವುದು - ಇದೇ ನಮಗಿದ್ದ ಆಯ್ಕೆ.

ಈ ಪರದಾಟವನ್ನು ಕಡಿಮೆ ಮಾಡಬಲ್ಲ ಹಿರಿಯರ ನೆರವು ಎಲ್ಲೋ ಕೆಲವರಿಗಷ್ಟೇ ದೊರಕುತ್ತಿತ್ತು. ಶಾಲೆಯ ಮೇಷ್ಟರು, ಅನುಭವಿ ಗ್ರಂಥಪಾಲಕರು ಬೇಕಾದ್ದನ್ನು ಥಟ್ಟನೆ ಹುಡುಕಿಕೊಟ್ಟರೆ ನಮಗೆ ಏನೋ ಮಹತ್ವದ್ದನ್ನು ಸಾಧಿಸಿದಷ್ಟು ಸಂತೋಷವಾಗುತ್ತಿತ್ತು!

ಈಗ ಪರಿಸ್ಥಿತಿ ಎಷ್ಟೆಲ್ಲ ಬದಲಾಗಿದೆಯೆಂದರೆ ಹಿಂದೊಮ್ಮೆ ಹೀಗೆಲ್ಲ ಇತ್ತು ಎನ್ನುವುದೂ ಇಂದಿನ ಕಿರಿಯರಿಗೆ ತಿಳಿದಿಲ್ಲ. ಹೊಯ್ಸಳ ವಾಸ್ತುಶಿಲ್ಪವಿರಲಿ, ಹರಪ್ಪಾ ನಾಗರೀಕತೆ ಇರಲಿ, ಆಫ್ರಿಕಾದ ವನ್ಯಜೀವನವೇ ಇರಲಿ - ಯಾವ ವಿಷಯದ ಬಗ್ಗೆ ಮಾಹಿತಿ ಬೇಕೆಂದರೂ ಅವರು ಹೇಳುವುದು ಒಂದೇ ಮಾತು: "ಗೂಗಲ್ ಮಾಡಿ!"

ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ವಾಣಿಜ್ಯ ಸಂಸ್ಥೆ ಪ್ರಪಂಚದ ಜನಸಂಖ್ಯೆಯ ಬಹುದೊಡ್ಡ ಭಾಗದ ಮೇಲೆ ಈ ಪರಿಯ ಪ್ರಭಾವ ಬೀರಿರುವ ಇನ್ನೊಂದು ಉದಾಹರಣೆ ಹುಡುಕಲು ಸಾಕಷ್ಟು ಕಷ್ಟಪಡಬೇಕಾಗುತ್ತದೋ ಏನೋ!

ಒಂದರ ಮುಂದೆ ಒಂದುನೂರು ಸೊನ್ನೆ!

ಅಂಕಿ ಒಂದನ್ನು ಬರೆದು ಅದರ ಮುಂದೆ ಸೊನ್ನೆಗಳನ್ನು ಸೇರಿಸುತ್ತಾ ಹೋದಂತೆ ಹತ್ತು, ನೂರು, ಸಾವಿರಗಳೆಲ್ಲ ರೂಪುಗೊಳ್ಳುವುದು ನಮಗೆ ಗೊತ್ತಿದೆ. ಒಂದರ ಮುಂದೆ ಹೀಗೆ ನೂರು ಸೊನ್ನೆಗಳನ್ನು ಸೇರಿಸಿದರೆ ಸಿಗುವ ಸಂಖ್ಯೆಗೆ 'googol' ಎಂಬ ಹೆಸರಿದೆ. ಅಂತರಜಾಲ ದೈತ್ಯ ಗೂಗಲ್‌‌ನ ಹೆಸರಿಗೆ ಸ್ಫೂರ್ತಿಯಾಗಿದ್ದು ಇದೇ ಸಂಖ್ಯೆ. ಹೆಸರಿಡುವಾಗ ಗೊತ್ತಿತ್ತೋ ಇಲ್ಲವೋ, ಆದರೆ ಈ ಸಂಖ್ಯೆಯನ್ನೇ ಮುಟ್ಟಿಬಿಡುವ ತವಕದಿಂದ ಗೂಗಲ್ ಬೆಳೆಯುತ್ತಿರುವುದಂತೂ ಸತ್ಯ.

ಈ ಬೆಳವಣಿಗೆ ಶುರುವಾದದ್ದು ಅಮೆರಿಕಾದ ಸ್ಟಾನ್‌ಫರ್ಡ್ ವಿವಿಯ ವಿದ್ಯಾರ್ಥಿ ನಿಲಯದಲ್ಲಿ. ಅಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಹಾಗೂ ಸೆರ್ಗಿ ಬ್ರಿನ್, ಅಂದಿನ ವಿಶ್ವವ್ಯಾಪಿ ಜಾಲದಲ್ಲಿ ನಮಗೆ ಬೇಕಾದ ಮಾಹಿತಿ ಹುಡುಕಿಕೊಳ್ಳಲು ನೆರವಾಗುವ ತಂತ್ರಾಂಶವನ್ನು ರೂಪಿಸಲು ಹೊರಟಿದ್ದರು. ಅವರು ರೂಪಿಸಿದ 'ಬ್ಯಾಕ್‌ರಬ್' ಎಂಬ ಹೆಸರಿನ ಈ ತಂತ್ರಾಂಶ ಕೊಂಡಿಗಳನ್ನು (ಲಿಂಕ್) ವಿಶ್ಲೇಷಿಸುವ ಮೂಲಕ ವಿಶ್ವವ್ಯಾಪಿ ಜಾಲದ ಪುಟಗಳನ್ನು ವರ್ಗೀಕರಿಸುತ್ತಿತ್ತು. ಮುಂದೆ ಗೂಗಲ್ ಸರ್ಚ್ ಇಂಜನ್ ಎಂದು ವಿಶ್ವಖ್ಯಾತಿ ಗಳಿಸಿದ್ದು ಇದೇ ತಂತ್ರಾಂಶ. ಕಾಲೇಜು ಹಾಸ್ಟೆಲಿನಲ್ಲಿ ಹುಟ್ಟಿ ಗೆಳೆಯರೊಬ್ಬರ ಮನೆಯ ಗ್ಯಾರೇಜಿನಲ್ಲಿ ಬೆಳೆದ ಗೂಗಲ್ ಸಂಸ್ಥೆ ಇದೀಗ ವಿಶ್ವದ ಅತಿದೊಡ್ಡ ಹಾಗೂ ಅತ್ಯಂತ ಶ್ರೀಮಂತ ಸಂಸ್ಥೆಗಳ ಪೈಕಿ ಒಂದು.

ಸರ್ಚ್ ಇಂಜನ್

ಅಂತರಜಾಲ - ವಿಶ್ವವ್ಯಾಪಿ ಜಾಲಗಳು ಬೆಳೆದಂತೆ ಎಲ್ಲೆಲ್ಲೋ ಹಂಚಿಹೋಗಿದ್ದ ಮಾಹಿತಿಯೆಲ್ಲ ಒಂದುಕಡೆ ಸುಲಭವಾಗಿ ಸಿಗುವಂತಾಯಿತಲ್ಲ, ಅದರಲ್ಲಿ ನಮಗೆ ಬೇಕಾದ್ದನ್ನು ಸುಲಭವಾಗಿ ಹುಡುಕಿಕೊಳ್ಳುವಂತಿರಬೇಕು ಎನ್ನುವ ಅಗತ್ಯವೂ ಬಹಳ ಬೇಗ ಪ್ರಾಮುಖ್ಯ ಪಡೆದುಕೊಂಡಿತು. ಆಗ ಹುಟ್ಟಿದ್ದೇ ಸರ್ಚ್ ಇಂಜನ್ ಪರಿಕಲ್ಪನೆ. ಜಾಲಲೋಕದಲ್ಲಿರುವ ಅಗಾಧ ಪ್ರಮಾಣದ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಥಟ್ಟನೆ ಹುಡುಕಿಕೊಳ್ಳಲು ನೆರವಾಗುವ ತಂತ್ರಾಂಶ ಸೇವೆ ಇದು.

ಮೊದಲ ಸರ್ಚ್ ಇಂಜನ್ನುಗಳು ಅಂತರಜಾಲದ ಬಾಲ್ಯಕಾಲದಲ್ಲೇ ಕಾಣಿಸಿಕೊಂಡವಾದರೂ ಅವುಗಳ ಮಹತ್ವ ಸ್ಪಷ್ಟವಾದದ್ದು ಜಾಲದ ವ್ಯಾಪ್ತಿ ವ್ಯಾಪಕವಾಗಿ ವಿಸ್ತರಿಸಿದ ನಂತರವೇ. ಇಂದು ಅಸ್ತಿತ್ವದಲ್ಲಿರುವ ಅಸಂಖ್ಯ ಜಾಲತಾಣಗಳ ನಡುವೆ ನಮಗೆ ಬೇಕಾದ ಮಾಹಿತಿ ಎಲ್ಲಿದೆ ಎನ್ನುವುದನ್ನು ಗೂಗಲ್‌ನಂತಹ ಸರ್ಚ್ ಇಂಜನ್‌ಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದು. ಹೀಗೆ ಹುಡುಕಲು ಹೊರಟಾಗ ನಾವು ಟೈಪ್ ಮಾಡುತ್ತೇವಲ್ಲ ಪದಗಳು, ಅವನ್ನು ಕೀವರ್ಡ್‌ಗಳೆಂದು (ಕನ್ನಡದಲ್ಲಿ 'ಹುಡುಕುಪದ') ಕರೆಯುತ್ತಾರೆ. ನಾವು ಹುಡುಕುತ್ತಿರುವ ವಿಷಯವನ್ನು ಆದಷ್ಟೂ ನಿಖರವಾಗಿ ಪ್ರತಿನಿಧಿಸುವ ಕೀವರ್ಡ್‌ಗಳನ್ನು ಆರಿಸಿಕೊಂಡರೆ ನಮಗೆ ಸರಿಯಾದ ಮಾಹಿತಿ ಸಿಗುವ ಸಾಧ್ಯತೆ ಜಾಸ್ತಿ.

ಪ್ರಪಂಚದ ಮೊದಲ ಸರ್ಚ್‌ಇಂಜನ್ ಎಂದು ಕರೆಸಿಕೊಂಡ 'ಆರ್ಚಿ'ಯಿಂದ (೧೯೯೦) ಪ್ರಾರಂಭಿಸಿ ಇಂತಹ ಅನೇಕ ತಂತ್ರಾಂಶ ಸೇವೆಗಳು ರೂಪುಗೊಂಡವಾದರೂ ಆ ಪೈಕಿ ಅಭೂತಪೂರ್ವ ಯಶಸ್ಸು ದೊರೆತದ್ದು ಗೂಗಲ್‌ ಎಂಬ ವಿಚಿತ್ರ ಹೆಸರಿಗೆ ಮಾತ್ರ.

ಹುಡುಕುವ ಕೆಲಸ

ಗೂಗಲ್ ಮೊದಲಿಗೆ ಒಂದು ವಾಣಿಜ್ಯ ಸಂಸ್ಥೆಯ ರೂಪ ಪಡೆದುಕೊಂಡದ್ದು ೧೯೯೮ರ ಸೆಪ್ಟೆಂಬರ್ ೪ರಂದು. ಸರ್ಚ್ ಇಂಜನ್ ಸೇವೆ ಒದಗಿಸುವ ಉದ್ದೇಶದಿಂದ ಪ್ರಾರಂಭವಾದ ಈ ಸಂಸ್ಥೆ ಈಗ ಸಂದೇಶ ಕಳುಹಿಸುವುದರಿಂದ ಪ್ರಾರಂಭಿಸಿ ಸ್ವಯಂಚಾಲಿತ ಕಾರುಗಳನ್ನು ತಯಾರಿಸುವವರೆಗೆ ಹಲವು ಕೆಲಸಗಳಲ್ಲಿ ತೊಡಗಿಕೊಂಡಿದೆ. ಜಿಮೇಲ್, ಯೂಟ್ಯೂಬ್, ಗೂಗಲ್ ಮ್ಯಾಪ್ಸ್, ಗೂಗಲ್ ಹೋಮ್ ಸರಣಿಯ ಸ್ಮಾರ್ಟ್ ಸಹಾಯಕರು, ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ, ಪಿಕ್ಸೆಲ್ ಮೊಬೈಲ್ ಫೋನುಗಳು ಎಲ್ಲವೂ ಗೂಗಲ್ ಸಂಸ್ಥೆಯ ಒಡೆತನದಲ್ಲೇ ಇವೆ. ತನ್ನ ಜಾಲತಾಣಗಳಲ್ಲೆಲ್ಲ ಜಾಹೀರಾತುಗಳನ್ನು ಪ್ರದರ್ಶಿಸುವ ಗೂಗಲ್ ಅದರಿಂದಲೇ ಅಗಾಧ ಪ್ರಮಾಣದ ಹಣವನ್ನು ಸಂಪಾದಿಸುತ್ತದೆ. ಆಡಳಿತಾತ್ಮಕವಾಗಿ 'ಆಲ್ಫಾಬೆಟ್' ಎಂಬ ಮಾತೃಸಂಸ್ಥೆಯ ಕೆಳಗೆ ಕೆಲಸಮಾಡುವ ಗೂಗಲ್, ವಿಶ್ವದ ಅತ್ಯಂತ ಮೌಲ್ಯಯುತ ಬ್ರಾಂಡ್‌ಗಳಲ್ಲೊಂದು.

ಗೂಗಲ್ ಒಂದು ವಾಣಿಜ್ಯ ಸಂಸ್ಥೆಯ ರೂಪ ಪಡೆದುಕೊಂಡದ್ದು ೧೯೯೮ರ ಸೆಪ್ಟೆಂಬರ್ ೪ರಂದು
ಗೂಗಲ್ ಒಂದು ವಾಣಿಜ್ಯ ಸಂಸ್ಥೆಯ ರೂಪ ಪಡೆದುಕೊಂಡದ್ದು ೧೯೯೮ರ ಸೆಪ್ಟೆಂಬರ್ ೪ರಂದುgoogle.com

ಇಂದು ಗೂಗಲ್ ಎನ್ನುವುದು ಅಂತರಜಾಲ ಬಳಕೆದಾರರಲ್ಲದವರಿಗೂ ಪರಿಚಿತವಾದ ಹೆಸರು. ಜಾಲಲೋಕದಲ್ಲಿ ಏನೇ ಮಾಹಿತಿ ಬೇಕೆಂದರೂ ಗೂಗಲ್ ಮೊರೆಹೋಗುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸ ಅದೆಷ್ಟು ವ್ಯಾಪಕವಾಗಿದೆಯೆಂದರೆ ಮಾಹಿತಿಗಾಗಿ ಹುಡುಕುವ ಕೆಲಸಕ್ಕೆ 'ಗೂಗ್ಲಿಂಗ್' (ಗೂಗಲ್ ಮಾಡು, ಗೂಗಲಿಸು) ಎಂಬ ಹೆಸರೇ ಹುಟ್ಟಿಕೊಂಡುಬಿಟ್ಟಿದೆ. ಗೂಗಲ್ ಎಂಬ ಅರ್ಥವಿಲ್ಲದ ನಾಮಪದ ಕಾಲಕ್ರಮದಲ್ಲಿ ಕ್ರಿಯಾಪದವೂ ಆಗಿಹೋಗಿರುವ ವಿಶಿಷ್ಟ ಉದಾಹರಣೆ ಇದು. ಗೂಗಲ್ ಸಂಸ್ಥೆ ಸರ್ಚ್ ಜೊತೆಯಲ್ಲಿ ಬೇರೆ ಅದೆಷ್ಟೋ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೂ ಬಳಕೆದಾರರ ಪಾಲಿಗೆ ಮಾತ್ರ ಇಂದಿಗೂ ಸರ್ಚ್ ಎಂದರೆ ಗೂಗಲ್, ಗೂಗಲ್ ಎಂದರೆ ಸರ್ಚ್!

ಗೂಗಲ್ ಮಾಡಿ ನೋಡಿ!

ನಮಗೆ ಬೇಕಾದ್ದನ್ನು ಥಟ್ಟನೆ ಹುಡುಕಿಕೊಡುವ ಕೆಲಸಕ್ಕಾಗಿ ಸರ್ಚ್ ಇಂಜನ್‌ಗಳು ಸಾಕಷ್ಟು ತಯಾರಿ ಮಾಡಿಟ್ಟುಕೊಂಡಿರುತ್ತವೆ. ಸ್ವಯಂಚಾಲಿತ ತಂತ್ರಾಂಶ, ಅಂದರೆ 'ಬಾಟ್'ಗಳ ನೆರವಿನಿಂದ ಅಪಾರ ಸಂಖ್ಯೆಯ ಜಾಲತಾಣಗಳನ್ನು ಪರಿಶೀಲಿಸುವ ಸರ್ಚ್ ಇಂಜನ್‌ಗಳು ಆ ತಾಣಗಳಲ್ಲಿ ಏನೆಲ್ಲ ಇದೆ ಎನ್ನುವ ಬಗ್ಗೆ ಒಂದಷ್ಟು ವಿವರಗಳನ್ನು ಉಳಿಸಿಟ್ಟುಕೊಳ್ಳುತ್ತವೆ. ನಾವು ಸರ್ಚ್ ಮಾಡಿದಾಗ ನಮಗೆ ಬೇಕಾದ ಮಾಹಿತಿಯಿರುವ ಜಾಲತಾಣಗಳ ಪಟ್ಟಿ ಥಟ್ಟನೆ ಕಾಣಿಸಿಕೊಳ್ಳುವುದಕ್ಕೆ ಈ ವಿವರಗಳೇ ಮೂಲ.

ಬೃಹತ್ ಜೇಡರಬಲೆಯಂತಿರುವ ಜಾಲಲೋಕದಲ್ಲಿ ಸರಾಗವಾಗಿ ಓಡಾಡುತ್ತವಲ್ಲ, ಅದಕ್ಕಾಗಿಯೇ ಈ ಬಾಟ್‌ಗಳನ್ನು 'ಸ್ಪೈಡರ್' (ಜೇಡ) ಎಂದೂ ಗುರುತಿಸಲಾಗುತ್ತದೆ. ವೆಬ್ ಕ್ರಾಲರ್ ಎನ್ನುವುದು ಇವುಗಳ ಇನ್ನೊಂದು ಹೆಸರು. ಜಾಲತಾಣಗಳನ್ನು ರೂಪಿಸುವವರು ಇಂತಹ ತಂತ್ರಾಂಶಗಳಿಗೆ ಬೇಕಾದ ಮಾಹಿತಿಯನ್ನು ತಮ್ಮ ತಾಣಗಳಲ್ಲಿ ಉಳಿಸಿಡುತ್ತಾರೆ.

ಈ ಬಾಟ್‌ಗಳ ಹುಡುಕಾಟ ಸಾಮಾನ್ಯವಾಗಿ ಅತ್ಯಂತ ಪ್ರಸಿದ್ಧ ಜಾಲತಾಣಗಳು ಹಾಗೂ ಅತಿಹೆಚ್ಚು ಬಳಕೆದಾರರಿರುವ ಸರ್ವರ್‌ಗಳಿಂದ ಪ್ರಾರಂಭವಾಗುತ್ತದೆ. ತಾಣಗಳಲ್ಲಿರುವ ಮಾಹಿತಿಯನ್ನು ಗಮನಿಸುವುದರ ಜೊತೆಗೆ ಅಲ್ಲಿರುವ ಎಲ್ಲ ಲಿಂಕ್‌ಗಳನ್ನೂ ಇವು ಹಿಂಬಾಲಿಸುವುದರಿಂದ ಬಾಟ್‌ಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ.

ತಂತ್ರಜ್ಞಾನ ಜಗತ್ತಿನ ಮಾಂತ್ರಿಕ

ಬೇಕಾದ ಮಾಹಿತಿಯನ್ನು ಥಟ್ಟನೆ ಹುಡುಕಿಕೊಡಲು ಹುಟ್ಟಿಕೊಂಡ ಗೂಗಲ್ ಸಂಸ್ಥೆ ತಂತ್ರಜ್ಞಾನ ಜಗತ್ತಿನಲ್ಲಿ ಹಲವು ಅದ್ಭುತ ಸಾಧನೆಗಳನ್ನು ಮಾಡಿದೆ. ನಮ್ಮ ಪ್ರಶ್ನೆಯನ್ನು ಇಂತಿಷ್ಟೇ ಪದ ಬಳಸಿ ಇಂಥದ್ದೇ ರೂಪದಲ್ಲಿ ಕೇಳಬೇಕು ಎನ್ನುವಂತಹ ನಿಬಂಧನೆಗಳನ್ನೆಲ್ಲ ಹೋಗಲಾಡಿಸಿದ್ದು ಇದಕ್ಕೊಂದು ಉದಾಹರಣೆ. ಯಂತ್ರಗಳು ನಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಂಡಿದ್ದರ (ನ್ಯಾಚುರಲ್ ಲ್ಯಾಂಗ್ವೆಜ್ ಪ್ರಾಸೆಸಿಂಗ್) ಹಿನ್ನೆಲೆಯಲ್ಲಿ ಗೂಗಲ್ ಕೊಡುಗೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಮೊದಲು ಟೈಪಿಸಿದ ಕೆಲ ಅಕ್ಷರಗಳ ಆಧಾರದ ಮೇಲೆ ನಾವೇನು ಹುಡುಕುತ್ತಿದ್ದೇವೆ ಎಂದು ಊಹಿಸುವ ಸೌಲಭ್ಯ, ಪಠ್ಯದ ಜೊತೆಗೆ ಚಿತ್ರ - ವೀಡಿಯೋ ಮುಂತಾದ ಬಹುಮಾಧ್ಯಮ ಮಾಹಿತಿಯನ್ನೂ ಹುಡುಕಿಕೊಡುವ ಸವಲತ್ತು, ನಮ್ಮ ಸುತ್ತಮುತ್ತಲ ಸಂಗತಿಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಗಳೂ ಗಮನಾರ್ಹ ಬೆಳವಣಿಗೆಗಳೇ.

ಜಾಲತಾಣಗಳಲ್ಲಿ ಮಾತ್ರವೇ ಹುಡುಕುವ ಬದಲು ಪುಸ್ತಕಗಳಲ್ಲಿ, ಸಂಶೋಧನಾ ಪ್ರಬಂಧಗಳಲ್ಲಿ ನಮಗೆ ಬೇಕಾದ ಮಾಹಿತಿ ಹುಡುಕಿಕೊಳ್ಳುವುದೂ ಗೂಗಲ್‌ನಿಂದಾಗಿ ಸಾಧ್ಯವಾಗಿದೆ. ವಿವಿಧ ಜಾಲತಾಣಗಳಲ್ಲಿರುವ ಮಾಹಿತಿಯನ್ನಷ್ಟೇ ಅಲ್ಲದೆ ಲಂಡನ್ನಿನಲ್ಲಿ ಈಗ ಟೈಮೆಷ್ಟು, ೨೫೬ರ ವರ್ಗಮೂಲ ಎಷ್ಟು, ೨೦ ಡಾಲರು ಎಷ್ಟು ರೂಪಾಯಿಗೆ ಸಮ ಎಂಬಂತಹ ಪ್ರಶ್ನೆಗಳಿಗೂ ಗೂಗಲ್ ಉತ್ತರ ಹುಡುಕಿಕೊಡಬಲ್ಲದು. ಪ್ರಶ್ನೆಗಳನ್ನು ಟೈಪ್ ಮಾಡುವುದಷ್ಟೇ ಅಲ್ಲ, ಧ್ವನಿ ಗುರುತಿಸುವ (ಸ್ಪೀಚ್ ರೆಕಗ್ನಿಶನ್) ತಂತ್ರಜ್ಞಾನ ಬಳಸಿಕೊಂಡು ನಮ್ಮ ಬಾಯಿಮಾತಿನ ಪ್ರಶ್ನೆಗಳಿಗೂ ಉತ್ತರ ಪಡೆದುಕೊಳ್ಳಬಹುದು - ಪಠ್ಯರೂಪದಲ್ಲೂ ಧ್ವನಿಯ ರೂಪದಲ್ಲೂ!

ಮೇಲ್ನೋಟಕ್ಕೆ ನಮ್ಮ ಗಮನಕ್ಕೆ ಬರುವ ಇಂತಹ ಉದಾಹರಣೆಗಳಲ್ಲದೆ ಮಾಹಿತಿಯ ಶೇಖರಣೆ, ಸಂಸ್ಕರಣೆ ಹಾಗೂ ವಿತರಣೆಯಂತಹ ಕೆಲಸಗಳಲ್ಲೂ ಗೂಗಲ್ ಸಾಕಷ್ಟು ಕೆಲಸ ಮಾಡಿದೆ. ಛಾಯಾವಾಸ್ತವ (ವರ್ಚುಯಲ್ ರಿಯಾಲಿಟಿ), ಅತಿರಿಕ್ತ ವಾಸ್ತವಗಳಂತಹ (ಆಗ್ಮೆಂಟೆಡ್ ರಿಯಾಲಿಟಿ) ಹೊಸ ಕ್ಷೇತ್ರಗಳಲ್ಲೂ ಗೂಗಲ್ ಸಂಸ್ಥೆ ಸಕ್ರಿಯವಾಗಿದೆ. ಅಷ್ಟೇ ಅಲ್ಲ, ಮಾಹಿತಿ ತಂತ್ರಜ್ಞಾನವೆಂದರೆ ಇಂಗ್ಲಿಷ್ ಮಾತ್ರ ಎನ್ನುವ ತಪ್ಪು ಅಭಿಪ್ರಾಯವನ್ನು ದೂರಮಾಡುವಲ್ಲೂ ಗೂಗಲ್ ಕೊಡುಗೆ ಸಾಕಷ್ಟಿದೆ. ಇಂಗ್ಲಿಷ್ ಭಾಷೆಯಲ್ಲಿ ಬಹಳ ಹಿಂದಿನಿಂದಲೇ ಲಭ್ಯವಿರುವ ಧ್ವನಿ ಗುರುತಿಸುವ (ಸ್ಪೀಚ್ ರೆಕಗ್ನಿಶನ್), ಚಿತ್ರದಲ್ಲಿರುವ ಪಠ್ಯವನ್ನು ಬೇರ್ಪಡಿಸಿ ಗುರುತಿಸುವ (ಓಸಿಆರ್), ಇತರ ಭಾಷೆಗೆ ಅನುವಾದಿಸುವ (ಟ್ರಾನ್ಸ್‌ಲೇಶನ್), ಹಸ್ತಾಕ್ಷರವನ್ನು ಅರ್ಥಮಾಡಿಕೊಳ್ಳುವಂತಹ (ಹ್ಯಾಂಡ್‌ರೈಟಿಂಗ್ ರೆಕಗ್ನಿಶನ್) ಸೌಲಭ್ಯಗಳನ್ನೆಲ್ಲ ಕನ್ನಡವೂ ಸೇರಿದಂತೆ ಜಗತ್ತಿನ ಹಲವು ಭಾಷೆಗಳಲ್ಲಿ ಗೂಗಲ್ ಸಂಸ್ಥೆ ರೂಪಿಸಿಕೊಟ್ಟಿದೆ. ಮೊಬೈಲ್ ಫೋನಿನಲ್ಲಿ ವಿವಿಧ ಭಾಷೆಗಳ ಪಠ್ಯವನ್ನು ಸುಲಭಕ್ಕೆ ದಾಖಲಿಸಲು ಸಹಾಯವಾಗುವಂತೆ ಕೀಬೋರ್ಡ್ ತಂತ್ರಾಂಶಗಳನ್ನು ರೂಪಿಸಿಕೊಟ್ಟಿದ್ದೂ ಕಡಿಮೆ ಸಾಧನೆಯೇನಲ್ಲ.

ಕಲಿಯುಗದ ಸರ್ವಾಂತರ್ಯಾಮಿ

ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯಲ್ಲಿ ನಮಗೆ ಬೇಕಾದ್ದನ್ನು ಹುಡುಕಿಕೊಡುವುದು ಎಂದರೆ ಅದು ಕೇಳಲು ಬಹಳ ಸರಳವೆಂದು ತೋರುತ್ತದೆ. ಕೇಳಲು ಸುಲಭ ಎನಿಸಿದರೂ ಇದು ಭಾರೀ ದೊಡ್ಡ ಪ್ರಮಾಣದಲ್ಲಿ ನಡೆಯುವ ಕೆಲಸ. ಇದರಿಂದಾಗಿ ಇಂದು ಗೂಗಲ್ ಬಳಿ ಕೋಟಿಗಟ್ಟಲೆ ಜಾಲತಾಣಗಳ, ವೆಬ್ ಪುಟಗಳ ಬಗೆಗಿನ ಮಾಹಿತಿ ಲಭ್ಯವಿದೆ. ಇಷ್ಟೆಲ್ಲ ಅಗಾಧ ಪ್ರಮಾಣದ ಮಾಹಿತಿ ಇರುವುದರಿಂದಲೇ ಇಂದು ಆ ಸಂಸ್ಥೆಗೆ ಎಲ್ಲಿಲ್ಲದ ಮಹತ್ವ. ಇಷ್ಟೆಲ್ಲ ಮಾಹಿತಿ ಒಂದು ಖಾಸಗಿ ಸಂಸ್ಥೆಯ ನಿಯಂತ್ರಣದಲ್ಲಿ ಇದೆ ಎನ್ನುವುದು ಖಾಸಗಿತನದ ಬಗ್ಗೆ ಕಾಳಜಿವಹಿಸುವವರ ಚಿಂತೆಗೂ ಕಾರಣವಾಗಿರುವ ಅಂಶ. ಯಾವುದೇ ವಿಷಯದ ಬಗ್ಗೆ ಹುಡುಕಲು ಹೊರಟಾಗ ನಮಗೆ ಯಾವ ಮಾಹಿತಿ ಕಾಣುತ್ತದೆ ಎನ್ನುವುದನ್ನು ಗೂಗಲ್‌ನ ಕ್ರಮವಿಧಿಗಳು ತೀರ್ಮಾನಿಸುತ್ತವೆ ಎನ್ನುವುದು ಈ ಚಿಂತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಅಷ್ಟೇ ಅಲ್ಲ, ವಿಶ್ವವ್ಯಾಪಿ ಜಾಲದ ಅಗಾಧ ಪ್ರಪಂಚದಲ್ಲಿ ಸರಾಗವಾಗಿ ಓಡಾಡಲು ಬಹಳಷ್ಟು ಬಳಕೆದಾರರು ಗೂಗಲ್‌ ಅನ್ನೇ ನಾವಿಕನೆಂದು ಪರಿಗಣಿಸುತ್ತಾರೆ. ಹೀಗಾಗಿ ಗೂಗಲ್ ಮೂಲಕ ಸಿಗುವ ಮಾಹಿತಿ, ಅದು ಸತ್ಯವೋ ಸುಳ್ಳೋ, ಜನರ ಮೇಲೆ ಬಲುಬೇಗ ಪ್ರಭಾವ ಬೀರಿಬಿಡುತ್ತದೆ. ವಿವಿಧ ಸಂಸ್ಥೆಗಳ ಗ್ರಾಹಕಸೇವಾ ವಿಭಾಗದ ದೂರವಾಣಿ ಸಂಖ್ಯೆಯೆಂದು ತಮ್ಮ ಸಂಖ್ಯೆಗಳನ್ನು ಗೂಗಲ್‌ಗೆ ಸೇರಿಸಿ ಜನರನ್ನು ವಂಚಿಸುತ್ತಿರುವ ದುಷ್ಕರ್ಮಿಗಳ ಜಾಲದ ಚಟುವಟಿಕೆ, ಈ ಸಾಧ್ಯತೆಯ ಒಂದು ಉದಾಹರಣೆ ಅಷ್ಟೇ. ಇನ್ನು ನೆಂಟರ ಫೋನ್ ನಂಬರಿನಿಂದ ಪ್ರಾರಂಭಿಸಿ ನಾಲ್ಕು + ನಾಲ್ಕು ಎಷ್ಟು ಎನ್ನುವ ಲೆಕ್ಕದವರೆಗೆ ಪ್ರತಿಯೊಂದು ಮಾಹಿತಿಯೂ ಒಂದಲ್ಲ ಒಂದು ಗೂಗಲ್ ಉತ್ಪನ್ನದ ಮೂಲಕ ಸಿಗುವಂತಾಗಿದೆಯಲ್ಲ, ಇದರಿಂದ ನಮ್ಮ ಮಾನಸಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮವಾಗಿದೆ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ.

ಬೆಳೆಯುತ್ತಲೇ ಇರುವ ವ್ಯಾಪ್ತಿ

ಸರ್ಚ್ ಫಲಿತಾಂಶಗಳ ಜೊತೆಯಲ್ಲಿ ಜಾಹೀರಾತುಗಳನ್ನೂ ಪ್ರದರ್ಶಿಸುವ ಮೂಲಕ ಗೂಗಲ್ ಹಣ ಸಂಪಾದಿಸುತ್ತದೆ. ಈ ವ್ಯವಹಾರ ವೃದ್ಧಿಯಾದಂತೆ ಗೂಗಲ್ ಕಾರ್ಯಾಚರಣೆಯ ವ್ಯಾಪ್ತಿಯೂ ಗಮನಾರ್ಹವಾಗಿ ಬೆಳೆದಿದೆ. ಸರ್ಚ್ ಜೊತೆಗೆ ಜಿಮೇಲ್, ಯುಟ್ಯೂಬ್, ಗೂಗಲ್ ಮ್ಯಾಪ್ಸ್ ಮುಂತಾದ ಹಲವು ಸೇವೆಗಳನ್ನು ಪ್ರಾರಂಭಿಸಿದ (ಅಥವಾ ಇತರರಿಂದ ಖರೀದಿಸಿದ) ಈ ಸಂಸ್ಥೆ ಅವೆಲ್ಲವನ್ನೂ ಸರ್ಚ್ ಜೊತೆಯಲ್ಲಿಯೇ ಬೆಳೆಸಿದೆ. ಅಷ್ಟೇ ಅಲ್ಲ, ಅಲ್ಲೆಲ್ಲ ಇರುವ ಮಾಹಿತಿಯನ್ನೂ ಸರಾಗವಾಗಿ ಹುಡುಕುವುದನ್ನು ಸಾಧ್ಯವಾಗಿಸಿದೆ. ಮೊಬೈಲ್ ಫೋನುಗಳಲ್ಲಿರುವ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಕೂಡ ಗೂಗಲ್‌ನದೇ ಉತ್ಪನ್ನ.

ತಂತ್ರಾಂಶ ಕ್ಷೇತ್ರದಲ್ಲಿ ಹೆಸರುಮಾಡಿರುವ ಗೂಗಲ್ ಸಂಸ್ಥೆ ಯಂತ್ರಾಂಶ ನಿರ್ಮಾಣದಲ್ಲೂ ತೊಡಗಿಕೊಂಡಿದೆ. ಈ ಹಿಂದೆ ನೆಕ್ಸಸ್ ಸರಣಿಯ ಸ್ಮಾರ್ಟ್‍ಫೋನ್ ಹಾಗೂ ಟ್ಯಾಬ್ಲೆಟ್ಟುಗಳನ್ನು ಪರಿಚಯಿಸಿದ್ದ, ಕೆಲಸಮಯ ಮೋಟರೋಲಾ ಸಂಸ್ಥೆಯ ಒಡೆತನವನ್ನೂ ಹೊಂದಿದ್ದ ಗೂಗಲ್ ಸಂಸ್ಥೆ ಸದ್ಯ 'ಪಿಕ್ಸೆಲ್' ಸರಣಿಯ ಸ್ಮಾರ್ಟ್‌ಫೋನುಗಳನ್ನು ಹೊರತರುತ್ತಿದೆ. ಗೂಗಲ್ ಹೋಮ್‌ನಂತಹ ಸ್ಮಾರ್ಟ್ ಸಹಾಯಕರಿಂದ ಪ್ರಾರಂಭಿಸಿ ಚಾಲಕರಹಿತ ಕಾರುಗಳ ನಿರ್ಮಾಣದವರೆಗೆ ಇನ್ನೂ ಅದೆಷ್ಟೋ ಬಗೆಯ ಚಟುವಟಿಕೆಗಳಲ್ಲಿ ಗೂಗಲ್ ತನ್ನನ್ನು ತೊಡಗಿಸಿಕೊಂಡಿದೆ.

ಇವೆಲ್ಲ ಚಟುವಟಿಕೆಗಳಿಂದಾಗಿ ನಮ್ಮ ಬದುಕಿನಲ್ಲಿ ಹಲವು ಮಹತ್ವದ ಬದಲಾವಣೆಗಳಾಗಿವೆ, ಆಗುತ್ತಿವೆ. ಪರೋಕ್ಷ ಪ್ರಯೋಜನಗಳು ಹಾಗಿರಲಿ, ಗೂಗಲ್ ಉತ್ಪನ್ನಗಳ ಸುತ್ತಲೇ ಅನೇಕ ನೇರ ಉದ್ಯೋಗಾವಕಾಶಗಳೂ ಸೃಷ್ಟಿಯಾಗಿವೆ (ಉದಾ: ಗೂಗಲ್ ಒದಗಿಸುವ ಜಾಹೀರಾತುಗಳನ್ನು ನಮ್ಮ ತಾಣದಲ್ಲಿ ಪ್ರದರ್ಶಿಸುವುದು). ನಮ್ಮ ಆಸಕ್ತಿಯ ವಿಷಯಗಳನ್ನು, ನಿತ್ಯದ ಬದುಕಿನಲ್ಲಿ ಬೇಕಾಗುವ ಮಾಹಿತಿಯನ್ನು ಸುಲಭವಾಗಿ ಹುಡುಕಿಕೊಳ್ಳಲು ಸಾಧ್ಯವಾಗಿಸಿದ ಗೂಗಲ್ ನಮ್ಮ ಮಾಹಿತಿಯನ್ನು ನಿರ್ವಹಿಸುತ್ತ ಇನ್ನಷ್ಟು ದೊಡ್ಡದಾಗಿ ಬೆಳೆಯುತ್ತಿದೆ. ಮಾಹಿತಿಯೇ ವ್ಯಾಪಾರದ ವಸ್ತು ಎನ್ನುವುದು ಗೊತ್ತಿದ್ದರೂ ಇಲ್ಲಿ ಉತ್ಪಾದಕ ಯಾರು, ಗ್ರಾಹಕ ಯಾರು, ಒಟ್ಟಾರೆ ಲಾಭ ಯಾರಿಗೆ ಎನ್ನುವುದು ಮಾತ್ರ ಅಸ್ಪಷ್ಟವಾಗಿಯೇ ಇದೆ.

Related Stories

No stories found.
ಇಜ್ಞಾನ Ejnana
www.ejnana.com