ಅಂಗಡಿಗಳು, ಹೋಟಲ್ ಉದ್ಯಮ ಹಾಗೂ ಗ್ರಾಹಕರ ಮಟ್ಟದಲ್ಲಿ ವ್ಯರ್ಥವಾಗುವ ಆಹಾರಕ್ಕೆ ಆಹಾರ ತ್ಯಾಜ್ಯ ಅಥವಾ ಫುಡ್ ವೇಸ್ಟ್ ಎಂದು ಹೆಸರು.
ಅಂಗಡಿಗಳು, ಹೋಟಲ್ ಉದ್ಯಮ ಹಾಗೂ ಗ್ರಾಹಕರ ಮಟ್ಟದಲ್ಲಿ ವ್ಯರ್ಥವಾಗುವ ಆಹಾರಕ್ಕೆ ಆಹಾರ ತ್ಯಾಜ್ಯ ಅಥವಾ ಫುಡ್ ವೇಸ್ಟ್ ಎಂದು ಹೆಸರು.Image by Couleur from Pixabay

ಆಹಾರ ತ್ಯಾಜ್ಯ ತಪ್ಪಿಸಲು ತಂತ್ರಜ್ಞಾನದ ಕಣ್ಗಾವಲು

ವಿಶ್ವದ ಒಟ್ಟು ಆಹಾರ ಉತ್ಪಾದನೆಯ ಶೇ. ೧೪ರಷ್ಟು ಭಾಗ ನಿರ್ವಹಣೆ ಹಾಗೂ ಸಾಗಾಣಿಕೆಯ ಸಂದರ್ಭದಲ್ಲಿ, ಹಾಗೂ ಶೇ. ೧೭ರಷ್ಟು ಭಾಗ ಗ್ರಾಹಕರ ಮಟ್ಟದಲ್ಲಿ ವ್ಯರ್ಥವಾಗುತ್ತದಂತೆ!

ನಾವು ಚಿಕ್ಕವರಾಗಿದ್ದಾಗ ನಮ್ಮಲ್ಲಿ ಒಂದು ನಾಯಿ ಇತ್ತು. ನಮ್ಮಲ್ಲಿ ಎಂದರೆ ನಮ್ಮ ಮನೆಯಲ್ಲಿ ಮಾತ್ರ ಅಲ್ಲ, ಸುತ್ತಮುತ್ತಲ ನಾಲ್ಕಾರು ಮನೆಗಳು ಸೇರಿದಂತೆ ಅದು ನಮ್ಮೆಲ್ಲರ ಮೆಚ್ಚಿನ ನಾಯಿ ಆಗಿತ್ತು. ಅದನ್ನು ನಾವು 'ಕುರ್ಕ' ಎಂದು ಕರೆಯುತ್ತಿದ್ದೆವು. ಅದಕ್ಕೆ ನರಿಯ ಮೈಬಣ್ಣ ಇದ್ದದ್ದು ಈ ಹೆಸರಿಗೆ ಕಾರಣವಾಗಿದ್ದಿರಬೇಕು (ಕೊಡವ ಭಾಷೆಯಲ್ಲಿ ಕುರ್ಕ ಎಂದರೆ ಗುಳ್ಳೆನರಿ). ರಾತ್ರಿಯೂಟದ ವೇಳೆಯಲ್ಲಿ ಕುರ್ಕನಿಗೆ ಊಟಹಾಕುವುದು ನಮ್ಮ ಊಟದಷ್ಟೇ ಮುಖ್ಯವಾದ ಕಾರ್ಯಕ್ರಮ ಆಗಿರುತ್ತಿತ್ತು. ಹಾಗಾಗಿ, ಅಮ್ಮ ಮಾಡಿದ ಅಡುಗೆ ಮಾರನೆಯ ದಿನಕ್ಕೆ ಉಳಿಯುತ್ತಿರಲಿಲ್ಲ. ಇನ್ನು ತರಕಾರಿಯ ಸಿಪ್ಪೆ ಮುಂತಾದವೆಲ್ಲ ಹಿತ್ತಲಿನ ಗಿಡಗಳ ಬುಡಕ್ಕೆ ಸೇರುತ್ತಿದ್ದರಿಂದ ನಮಗೆ 'ಹಸಿ ಕಸ'ದ ಪರಿಚಯವೇ ಆಗಿರಲಿಲ್ಲ.

ಆದರೆ ಈಗ? ನಗರಗಳಲ್ಲಿ ಕಸದ ವಿಲೇವಾರಿ ವಿಪರೀತ ದೊಡ್ಡ ಸಮಸ್ಯೆಯಾಗಿ ಬೆಳೆದಿದೆ. ಎಷ್ಟು ವರ್ಷಕ್ಕೂ ಕರಗದ ಪ್ಲಾಸ್ಟಿಕ್ಕಿನಂತಹ ಒಣ ಕಸ ಮಾತ್ರವಲ್ಲ, ಜೈವಿಕ ತ್ಯಾಜ್ಯಗಳನ್ನು ಒಳಗೊಂಡ ಹಸಿ ಕಸವೂ ತಲೆನೋವಾಗಿ ಪರಿಣಮಿಸಿದೆ. ಹಸಿ ಕಸವನ್ನೂ ಒಣ ಕಸವನ್ನೂ ಮಿಶ್ರಮಾಡಬೇಡಿ, ಅವೆರಡನ್ನೂ ವಿಲೇವಾರಿಯವರಿಗೆ ಬೇರೆಬೇರೆ ದಿನಗಳಂದು ಪ್ರತ್ಯೇಕವಾಗಿಯೇ ಕೊಡಿ ಎಂದು ಪಾಠ ಹೇಳುವುದೇ ಸ್ಥಳೀಯ ಸಂಸ್ಥೆಗಳಿಗೆ ದೊಡ್ಡ ಕೆಲಸವಾಗಿದೆ. ಹಸಿ ಕಸವನ್ನು ಮನೆಯಲ್ಲೇ ಗೊಬ್ಬರವಾಗಿ ಪರಿವರ್ತಿಸಿಕೊಳ್ಳಲು ನೆರವಾಗುವ ಕೆಲಸ ಹಲವು ಸಂಸ್ಥೆಗಳ ಹುಟ್ಟು - ಬೆಳವಣಿಗೆಗೂ ಕಾರಣವಾಗಿದೆ.

ಅಡುಗೆಯಲ್ಲಿ ಉಪಯೋಗಕ್ಕೆ ಬಾರದ ಸಿಪ್ಪೆಯಂತಹ ಭಾಗಗಳು, ಗಿಡಗಳಿಂದ ಉದುರಿದ ಎಲೆ-ಹೂವು ಮುಂತಾದ ಎಲ್ಲವೂ ಹಸಿ ಕಸದ ವ್ಯಾಪ್ತಿಗೆ ಸೇರುತ್ತವಾದರೂ, ಬಳಕೆಯಾಗದೆ ಉಳಿದ ಆಹಾರ ಪದಾರ್ಥಗಳು ಅದರಲ್ಲಿ ಭಾರೀ ಪ್ರಮಾಣದಲ್ಲಿ ಸೇರಿರುತ್ತವೆ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ. ಹಸಿವಿನ ಸಮಸ್ಯೆ ವಿಶ್ವದೆಲ್ಲೆಡೆ ಅಸಂಖ್ಯಾತ ಜನರನ್ನು ಬಾಧಿಸುತ್ತಿರುವ ಸನ್ನಿವೇಶದಲ್ಲಿ ಆಹಾರವನ್ನು ಕಸವೆಂದು ಕರೆಯುವುದು ಅಮಾನುಷವಾಗಿ ತೋರುತ್ತದೆ, ನಿಜ. ಆದರೆ ವಿಶ್ವದಾದ್ಯಂತ ಅಗಾಧ ಪ್ರಮಾಣದ ಆಹಾರ ಪ್ರತಿದಿನವೂ ವ್ಯರ್ಥವಾಗುತ್ತಿರುವುದು ಇಂದಿನ ವಾಸ್ತವ.

ಮೊನ್ನೆ ಅಕ್ಟೋಬರ್ ೧೬ರ ಶನಿವಾರವನ್ನು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಯಿತು. ವಿಶ್ವಸಂಸ್ಥೆಯ ಅಂಗವಾದ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸ್ಥಾಪನೆಯಾದ ದಿನದ ನೆನಪಿನಲ್ಲಿ ಪ್ರತಿವರ್ಷವೂ ಈ ಆಚರಣೆ ನಡೆಯುತ್ತದೆ. ಎಂದಿನಂತೆ ಈ ಬಾರಿಯ ಆಹಾರ ದಿನದ ಸಂದರ್ಭದಲ್ಲೂ ಎಫ್‌ಎಒ ಕೆಲವು ಅಂಕಿ ಅಂಶಗಳನ್ನು ಪ್ರಕಟಿಸಿತ್ತು. ಅದರ ಪ್ರಕಾರ, ವಿಶ್ವದ ಒಟ್ಟು ಆಹಾರ ಉತ್ಪಾದನೆಯ ಶೇ. ೧೪ರಷ್ಟು ಭಾಗ ನಿರ್ವಹಣೆ ಹಾಗೂ ಸಾಗಾಣಿಕೆಯ ಸಂದರ್ಭದಲ್ಲಿ, ಹಾಗೂ ಶೇ. ೧೭ರಷ್ಟು ಭಾಗ ಗ್ರಾಹಕರ ಮಟ್ಟದಲ್ಲಿ ವ್ಯರ್ಥವಾಗುತ್ತದಂತೆ!

ನಿರ್ವಹಣೆ ಹಾಗೂ ಸಾಗಾಣಿಕೆಯ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಹಾಳಾಗುವುದನ್ನು ಆಹಾರ ನಷ್ಟ ಅಥವಾ ಫುಡ್ ಲಾಸ್ ಎಂದು ಕರೆಯುತ್ತಾರೆ. ಅಂಗಡಿಗಳು, ಹೋಟಲ್ ಉದ್ಯಮ ಹಾಗೂ ನಮ್ಮಂತಹ ಬಳಕೆದಾರರು ಸೇರಿದಂತೆ ಗ್ರಾಹಕರ ಮಟ್ಟದಲ್ಲಿ ವ್ಯರ್ಥವಾಗುವ ಆಹಾರಕ್ಕೆ ಆಹಾರ ತ್ಯಾಜ್ಯ ಅಥವಾ ಫುಡ್ ವೇಸ್ಟ್ ಎಂದು ಹೆಸರು. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್‌ಇಪಿ) ಪ್ರಕಟಿಸಿರುವ 'ಫುಡ್ ವೇಸ್ಟ್ ಇಂಡೆಕ್ಸ್ ರಿಪೋರ್ಟ್ ೨೦೨೧'ರ ಪ್ರಕಾರ, ೨೦೧೯ನೇ ಇಸವಿಯಲ್ಲಿ ಉತ್ಪಾದನೆಯಾದ ಆಹಾರ ತ್ಯಾಜ್ಯದ ಒಟ್ಟು ಪ್ರಮಾಣ ಸುಮಾರು ೯೩೧ ದಶಲಕ್ಷ ಟನ್ನುಗಳಷ್ಟು. ಇಷ್ಟೆಲ್ಲ ಭಾರೀ ಪ್ರಮಾಣದ ತ್ಯಾಜ್ಯವನ್ನು ದೊಡ್ಡ ಟ್ರಕ್ಕುಗಳಲ್ಲಿ ತುಂಬಿಸಿ ಅವನ್ನೆಲ್ಲ ಒಂದರ ಹಿಂದೆ ಒಂದರಂತೆ ಸಾಲಾಗಿ ನಿಲ್ಲಿಸಿದರೆ ಆ ಸಾಲು ನಮ್ಮ ಭೂಮಿಯನ್ನು ಏಳು ಬಾರಿ ಸುತ್ತಿ ಬರುವಷ್ಟು ಉದ್ದ ಇರುತ್ತದಂತೆ. ಈ ಪೈಕಿ ಭಾರತದಲ್ಲಿ ವಾರ್ಷಿಕ ಸುಮಾರು ೬೮ ದಶಲಕ್ಷ ಟನ್ನುಗಳಷ್ಟು ಆಹಾರ ತ್ಯಾಜ್ಯ ಉತ್ಪಾದನೆಯಾಗುತ್ತಿದೆ ಎಂದು ಈ ವರದಿ ಹೇಳಿದೆ. ಅಂದರೆ, ನಾವೆಲ್ಲರೂ ವರ್ಷಕ್ಕೆ ತಲಾ ಐವತ್ತು ಕೆಜಿಯಷ್ಟು ಆಹಾರವನ್ನು ವ್ಯರ್ಥಗೊಳಿಸುತ್ತಿದ್ದೇವೆ.

ಜನರ ಹಾಗೂ ಪ್ರಾಣಿಪಕ್ಷಿಗಳ ಹೊಟ್ಟೆತುಂಬಿಸಬೇಕಾದ ಆಹಾರ ಹೀಗೆ ತಿಪ್ಪೆಸೇರುವುದರ ಪರಿಣಾಮಗಳು ಹಲವು. ಆ ಆಹಾರ ಪದಾರ್ಥಗಳನ್ನು ಬೆಳೆಯಲು ಬಳಕೆಯಾದ ಸಂಪನ್ಮೂಲಗಳು ವ್ಯರ್ಥವಾಗುವುದು ಅಂತಹ ಪರಿಣಾಮಗಳಲ್ಲಿ ಒಂದು. ತಿಪ್ಪೆ ಸೇರುವ ಆಹಾರ ತ್ಯಾಜ್ಯದಿಂದ ಉತ್ಪಾದನೆಯಾಗುವ ಮೀಥೇನ್‌ನಂತಹ ಅನಿಲಗಳಿಂದ ದೊಡ್ಡ ಪ್ರಮಾಣದ ಪರಿಸರ ಮಾಲಿನ್ಯವೂ ಉಂಟಾಗುತ್ತದೆ. ಜಗತ್ತಿನಲ್ಲಿ ಉತ್ಪಾದನೆಯಾಗುವ ಹಸಿರುಮನೆ ಅನಿಲಗಳ ಒಟ್ಟು ಪ್ರಮಾಣದಲ್ಲಿ ಶೇ. ೮ರಿಂದ ೧೦ರಷ್ಟು ಭಾಗವು ನಷ್ಟವಾಗುವ ಹಾಗೂ ತ್ಯಾಜ್ಯವಾಗಿ ಪರಿಣಮಿಸುವ ಆಹಾರ ಪದಾರ್ಥಗಳಿಂದಲೇ ಬರುತ್ತದೆ ಎನ್ನುವುದು ಸದ್ಯದ ಅಂದಾಜು. ಫುಡ್ ಲಾಸ್ ಹಾಗೂ ಫುಡ್ ವೇಸ್ಟ್‌ಗಳನ್ನು ಒಟ್ಟಾಗಿ ಒಂದು ದೇಶವೆಂದು ಪರಿಗಣಿಸಿದರೆ, ಹಸಿರುಮನೆ ಅನಿಲಗಳನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಹೊರಸೂಸುವ ದೇಶಗಳ ಸಾಲಿನಲ್ಲಿ ಅದು ಮೂರನೆಯ ಸ್ಥಾನದಲ್ಲಿರಲಿದೆ.

ಜಗತ್ತಿನ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನದ ಸಹಾಯ ಪಡೆದುಕೊಳ್ಳಲಾಗುತ್ತಿರುವ ಈ ಸಂದರ್ಭದಲ್ಲಿ, ಆಹಾರ ಪೋಲಾಗುವುದನ್ನು ತಪ್ಪಿಸಲು ತಂತ್ರಜ್ಞಾನ ಹೇಗೆ ನೆರವಾಗಬಹುದು?

ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನದಲ್ಲಿರುವ ಸಿಂಗಾಪುರದ ಲೂಮಿಟಿಕ್ಸ್ ಎಂಬ ಸಂಸ್ಥೆ, ಹೋಟಲ್ ಹಾಗೂ ವಿಮಾನಯಾನ ಸಂಸ್ಥೆಗಳಂತಹ ದೊಡ್ಡ ಉದ್ದಿಮೆಗಳಲ್ಲಿ ಉತ್ಪಾದನೆಯಾಗುವ ಆಹಾರ ತ್ಯಾಜ್ಯದ ಮೇಲೆ ನಿಗಾವಹಿಸುವ ವ್ಯವಸ್ಥೆಯೊಂದನ್ನು ರೂಪಿಸಿದೆ. ಅಂತಹ ಉದ್ದಿಮೆಗಳಲ್ಲಿ ಬಳಸಲಾಗುವ ಕಸದ ಬುಟ್ಟಿಗಳಿಗೆ ಹೈಟೆಕ್ ರೂಪ ಕೊಡುವ ಈ ಸಂಸ್ಥೆ, ಕ್ಯಾಮೆರಾ - ಸೆನ್ಸರ್ ಮುಂತಾದ ಸಾಧನಗಳ ಜೊತೆಗೆ ಆರ್ಟಿಫಿಶಿಯನ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನೂ ಬಳಸಿಕೊಂಡು ಅಲ್ಲಿ ಉತ್ಪಾದನೆಯಾಗುತ್ತಿರುವ ಆಹಾರ ತ್ಯಾಜ್ಯದ ಪ್ರಮಾಣವನ್ನು ವಿಶ್ಲೇಷಿಸುತ್ತದೆ. ಈ ವಿಶ್ಲೇಷಣೆಯಿಂದ ದೊರೆತ ಮಾಹಿತಿಯನ್ನು ಬಳಸಿಕೊಳ್ಳುವ ಉದ್ದಿಮೆಗಳು ತ್ಯಾಜ್ಯದ ಪ್ರಮಾಣ ಕಡಿಮೆಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಸಾಧ್ಯವಾಗುತ್ತದೆ. ಹೀಗೆ ತಂತ್ರಜ್ಞಾನದ ನೆರವು ಪಡೆದುಕೊಳ್ಳುವ ಸಂಸ್ಥೆಗಳು ಆಹಾರ ತ್ಯಾಜ್ಯ ಹಾಗೂ ಅದರಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆಮಾಡುವುದಷ್ಟೇ ಅಲ್ಲದೆ, ಅನಗತ್ಯ ಆಹಾರ ಪದಾರ್ಥಗಳನ್ನು ಉತ್ಪಾದಿಸಲು ವ್ಯರ್ಥವಾಗುತ್ತಿದ್ದ ಹಣವನ್ನೂ ಉಳಿಸುತ್ತಿವೆ!

ದೊಡ್ಡ ಉದ್ದಿಮೆಗಳಿಗೆ ಮಾತ್ರವೇ ಅಲ್ಲ, ಆಹಾರ ತ್ಯಾಜ್ಯ ಕಡಿಮೆಮಾಡಲು ಸಾಮಾನ್ಯ ಗ್ರಾಹಕರಿಗೂ ನೆರವಾಗುವ ತಂತ್ರಜ್ಞಾನಗಳು ಇದೀಗ ರೂಪುಗೊಳ್ಳುತ್ತಿವೆ. ನಾವು ಖರೀದಿಸುವ ಆಹಾರ ಪದಾರ್ಥಗಳ ಮಾಹಿತಿ ಸಂಗ್ರಹಿಸಿಟ್ಟುಕೊಂಡು ಅವುಗಳ ಎಕ್ಸ್‌ಪೈರಿ ಡೇಟ್ ಬಗ್ಗೆ ನೆನಪಿಸುವ, ಮನೆಯಲ್ಲಿ ಏನೆಲ್ಲ ಆಹಾರ ಪದಾರ್ಥಗಳಿವೆ ಎಂದು ಪಟ್ಟಿಮಾಡಿ ಬೇಕಾದ್ದನ್ನು ಮಾತ್ರ ಹೊಸದಾಗಿ ಕೊಳ್ಳಲು ನೆರವಾಗುವ ವ್ಯವಸ್ಥೆಯೊಂದನ್ನು ನೋಶ್ ಟೆಕ್ನಾಲಜೀಸ್ ಎಂಬ ಯುನೈಟೆಡ್ ಕಿಂಗ್‌‍ಡಮ್ ಮೂಲದ ಸಂಸ್ಥೆ ರೂಪಿಸಿದೆ. ಮನೆಯಲ್ಲಿ ಇರುವ ಪದಾರ್ಥಗಳನ್ನೇ ಬಳಸಿಕೊಂಡು ಯಾವೆಲ್ಲ ಅಡುಗೆ ಸಿದ್ಧಪಡಿಸಬಹುದು ಎಂದು ಸಲಹೆನೀಡುವ ಉದ್ದೇಶವೂ ಈ ಆಪ್‌ಗೆ ಇದೆಯಂತೆ.

ವಿವಿಧ ಪ್ರಯತ್ನಗಳ ನಂತರವೂ ಆಹಾರ ಉಳಿದುಹೋಗುವ ಸಾಧ್ಯತೆ ಇರುತ್ತದಲ್ಲ, ಅಂತಹ ಆಹಾರವನ್ನು - ಅದಿನ್ನೂ ಚೆನ್ನಾಗಿರುವ ಹಂತದಲ್ಲೇ - ಅವಶ್ಯಕತೆಯಿರುವವರಿಗೆ ನೀಡುವ ವ್ಯವಸ್ಥೆಗಳನ್ನು ಕೂಡ ರೂಪಿಸಲಾಗುತ್ತಿದೆ. ಹೀಗೆ ಉಳಿದ ಆಹಾರವನ್ನು ಸಂಗ್ರಹಿಸಿ ಅದರ ಅಗತ್ಯವಿರುವವರಿಗೆ ಹಂಚಲು ಇಟಲಿಯ ಮಿಲಾನ್ ನಗರ ರೂಪಿಸಿಕೊಂಡಿರುವ 'ಫುಡ್ ವೇಸ್ಟ್ ಹಬ್' ಪರಿಕಲ್ಪನೆ ಈಗಾಗಲೇ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ಇಂತಹವೇ ಪ್ರಯತ್ನಗಳು ನಮ್ಮ ದೇಶದಲ್ಲೂ ನಡೆದಿವೆ.

ಹಣ್ಣುಗಳು ಹೆಚ್ಚು ಕಾಲ ತಾಜಾ ಆಗಿರುವಂತೆ ನೋಡಿಕೊಳ್ಳಲು ಅದಕ್ಕೆ ಮೇಣವನ್ನು ಲೇಪಿಸುವ ಬಗ್ಗೆ ನಾವು ಕೇಳಿದ್ದೇವೆ. ಆರೋಗ್ಯಕ್ಕೆ ಹಾನಿಕರವಾದ ಇಂತಹ ವಸ್ತುಗಳ ಬದಲು ಸಸ್ಯಮೂಲದ ಖಾದ್ಯ ಪದಾರ್ಥಗಳಿಂದ ತಯಾರಿಸಿದ ಲೇಪನವನ್ನೇ ಬಳಸಿ ಹಣ್ಣು-ತರಕಾರಿಗಳು ಹೆಚ್ಚು ಕಾಲ ಉಳಿಯಲು ನೆರವಾಗುವ ಪ್ರಯತ್ನದಲ್ಲಿ ಅಮೆರಿಕಾ ಮೂಲದ ಅಪೀಲ್ ಸೈನ್ಸಸ್ ಎಂಬ ಸಂಸ್ಥೆ ತೊಡಗಿಕೊಂಡಿದೆ. ಅಷ್ಟೇ ಅಲ್ಲ, ಅತ್ಯಾಧುನಿಕ ಇಮೇಜಿಂಗ್ ತಂತ್ರಜ್ಞಾನ ಬಳಸಿ ಹಣ್ಣುಗಳ ಗುಣಮಟ್ಟವನ್ನು ವಿಶ್ಲೇಷಿಸುವ, ಅವು ಯಾವಾಗ ಹಣ್ಣಾಗುತ್ತವೆ ಎಂದು ಅಂದಾಜಿಸುವ ಪ್ರಯತ್ನವನ್ನೂ ಆ ಸಂಸ್ಥೆ ನಡೆಸಿದೆ. ಈ ಮಾಹಿತಿಯ ಆಧಾರದ ಮೇಲೆ ಹಣ್ಣುಗಳನ್ನು ಸರಿಯಾದ ಸಮಯಕ್ಕೆ ಮಾರುಕಟ್ಟೆಗೆ ತಲುಪಿಸುವುದು, ಅವು ಹಾಳಾಗದಂತೆ ನೋಡಿಕೊಳ್ಳುವುದು ಸಾಧ್ಯವಾಗಲಿದೆ ಎನ್ನುವುದು ಆ ಸಂಸ್ಥೆಯ ನಿರೀಕ್ಷೆ.

ಆಹಾರ ತ್ಯಾಜ್ಯ ಉತ್ಪಾದನೆಯನ್ನು ತಡೆಯುವ ನಿಟ್ಟಿನಲ್ಲಿ ಹಲವು ತಂತ್ರಜ್ಞಾನಗಳು ವಿಕಾಸಗೊಳ್ಳುತ್ತಿರುವುದೇನೋ ಸರಿ. ಹಾಗೆಂದು ನಾವು ಸುಮ್ಮನಿರಬೇಕು ಎಂದೇನೂ ಇಲ್ಲ. ಮನೆಗಳಲ್ಲಿ ಕೈಗೊಳ್ಳುವ ಸಣ್ಣ ಕ್ರಮಗಳ ಮೂಲಕವೂ ನಾವು ಆಹಾರ ತ್ಯಾಜ್ಯದ ಪ್ರಮಾಣವನ್ನು ಕಡಿಮೆಮಾಡಬಹುದು. ಅನಗತ್ಯವಾದ ಆಹಾರ ಪದಾರ್ಥಗಳನ್ನು ಖರೀದಿಸದಿರುವುದು, ಮನೆಯಲ್ಲಿ ಏನೆಲ್ಲ ಇದೆ ಎಂದು ಸರಿಯಾಗಿ ನೋಡದೆ ಖರೀದಿಗೆ ಹೊರಡದಿರುವುದು, ಖರೀದಿಸಿದ ಆಹಾರ ಪದಾರ್ಥಗಳನ್ನು ಸರಿಯಾಗಿ ಶೇಖರಿಸಿಟ್ಟುಕೊಳ್ಳುವುದು - ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಸರಳ ಕೆಲಸಗಳು. ಸರಿಯಾದ ಮಾರುಕಟ್ಟೆಯಿಲ್ಲದೆ ಉಳಿದುಹೋಗುವ ಆಹಾರ ಪದಾರ್ಥಗಳನ್ನು ಬಳಸಿ ವಿನೂತನ ಉತ್ಪನ್ನಗಳನ್ನು ತಯಾರಿಸುವ ಮೌಲ್ಯವರ್ಧನೆಯ ಪ್ರಯತ್ನಗಳನ್ನು ಬೆಂಬಲಿಸುವ ಮೂಲಕವೂ ನಾವು ಆಹಾರ ತ್ಯಾಜ್ಯ ಕಡಿಮೆಮಾಡಲು ನೆರವಾಗಬಹುದು. ಮನೆಯಲ್ಲೇ ತಯಾರಿಸುವ ಉಪ್ಪಿನಕಾಯಿಯಿಂದ ಪ್ರಾರಂಭಿಸಿ ಇದೀಗ ಸುದ್ದಿಯಲ್ಲಿರುವ 'ಬಾಕಾಹು'ವರೆಗೆ ಪ್ರತಿಯೊಂದು ಪ್ರಯತ್ನವೂ ಆಹಾರ ತ್ಯಾಜ್ಯವನ್ನು ತನ್ನದೇ ಆದ ರೀತಿಯಲ್ಲಿ ಕಡಿಮೆಮಾಡಬಲ್ಲದು, ನಮಗೆ ಹೊಸ ರುಚಿಗಳನ್ನು ಪರಿಚಯಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯಲ್ಲೂ ಸಹಾಯ ಮಾಡಬಲ್ಲದು.

ಇಷ್ಟೆಲ್ಲ ಮಾಡುವುದರ ಜೊತೆಗೆ, ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಲ್ಲೂ ಆಹಾರದ ಮೌಲ್ಯ ಕುರಿತು ಅರಿವು ಮೂಡಿಸುವುದು ಮುಖ್ಯ ಎಂದು ಅದಮ್ಯ ಚೇತನ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥರಾದ ತೇಜಸ್ವಿನಿ ಅನಂತಕುಮಾರ್ ಹೇಳುತ್ತಾರೆ. ಒಂದು ಕಿಲೋ ಅಕ್ಕಿ ಬೆಳೆಯಲು ಸುಮಾರು ೨೫೦೦ ಲೀಟರುಗಳಷ್ಟು ನೀರು ಬೇಕಾಗುತ್ತದೆ, ಒಂದು ಹಿಡಿ ಅನ್ನವನ್ನು ಚೆಲ್ಲುವುದು ಒಂದು ಬಕೆಟ್ ನೀರು ಚೆಲ್ಲುವುದಕ್ಕೆ ಸಮಾನ ಎಂದು ತಿಳಿದವರು ಅನ್ನ ಚೆಲ್ಲುವ ಮುನ್ನ ಇನ್ನೊಮ್ಮೆ ಯೋಚಿಸುತ್ತಾರೆ. ಆಹಾರ ಬೆಳೆಯುವ ಸ್ಥಳದಿಂದ ನಮ್ಮನ್ನು ತಲುಪುವವರೆಗೆ ಎಷ್ಟು ದೂರ ಸಾಗಿ ಬಂದಿರುತ್ತದೆ, ಅದನ್ನು ಬೆಳೆಯಲು ಮತ್ತು ನಮಗೆ ತಲುಪಿಸಲು ಎಷ್ಟೆಲ್ಲ ಸಂಪನ್ಮೂಲ ಬಳಕೆಯಾಗುತ್ತದೆ ಎಂದು ಅರ್ಥಮಾಡಿಸುವುದು ಆಹಾರ ತ್ಯಾಜ್ಯ ತಡೆಯುವ ನಿಟ್ಟಿನಲ್ಲಿ ನಿಜಕ್ಕೂ ಒಳ್ಳೆಯ ಕ್ರಮ ಎನ್ನುವುದು ಅವರ ಅನಿಸಿಕೆ. ಕೋವಿಡ್ ಮುನ್ನ ಪ್ರತಿದಿನವೂ ಸಾವಿರಾರು ವಿದ್ಯಾರ್ಥಿಗಳಿಗೆ ಆಹಾರ ತಯಾರಿಸುತ್ತಿದ್ದ ಅದಮ್ಯ ಚೇತನದ ಅಡುಗೆಮನೆಗಳಿಂದ ಯಾವುದೇ ಆಹಾರ ತ್ಯಾಜ್ಯವೂ ಹೊರಗೆ ಹೋಗುವುದಿಲ್ಲ ಎನ್ನುವುದು ವಿಶೇಷ: ಆಹಾರ ತಯಾರಿಕೆಯ ನಂತರ ಉಳಿಯುವ ತ್ಯಾಜ್ಯ ಅಲ್ಲಿಯೇ ಇರುವ ಬಯೋಗ್ಯಾಸ್ ಘಟಕಕ್ಕೆ ಆಹಾರವಾಗಿ ಮುಂದಿನ ದಿನದ ಅಡುಗೆಗೆ ನೆರವಾಗುತ್ತದೆ!

ಅಕ್ಟೋಬರ್ ೧೯, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಆರನೆಯ ಬರಹ

'ಟೆಕ್ ನೋಟ' ಅಂಕಣದ ಆರನೆಯ ಬರಹ
'ಟೆಕ್ ನೋಟ' ಅಂಕಣದ ಆರನೆಯ ಬರಹವಿಜಯ ಕರ್ನಾಟಕ
logo
ಇಜ್ಞಾನ Ejnana
www.ejnana.com