ತಮಾಷೆಗೆಂದು ಅಥವಾ ತಪ್ಪು ಕಲ್ಪನೆಯಿಂದ ರೂಪಿಸಲಾದ ಸಂದೇಶಗಳು ನಿಯಂತ್ರಣ ತಪ್ಪಿ ಹರಡುವುದು ಅಪರೂಪವೇನಲ್ಲ
ತಮಾಷೆಗೆಂದು ಅಥವಾ ತಪ್ಪು ಕಲ್ಪನೆಯಿಂದ ರೂಪಿಸಲಾದ ಸಂದೇಶಗಳು ನಿಯಂತ್ರಣ ತಪ್ಪಿ ಹರಡುವುದು ಅಪರೂಪವೇನಲ್ಲNandhinikandhasamy / Wikimedia Commons / CC-BY-SA-4.0

ಸುಳ್ಳು ಸುದ್ದಿಯ ಸಹವಾಸ

ಹಿಂದೊಮ್ಮೆ ಸುದ್ದಿಯೇ ಅಲ್ಲ ಎನಿಸಿಕೊಳ್ಳುತ್ತಿದ್ದ ಸಂಗತಿಗಳೂ ಈಗ ಎಲ್ಲರನ್ನೂ ತಲುಪುತ್ತಿವೆ

ಒಂದೆರಡು ದಶಕಗಳ ಹಿಂದೆ ಸುದ್ದಿಯ ಜೊತೆಗಿನ ನಮ್ಮ ಒಡನಾಟ ಹೆಚ್ಚೇನೂ ವಿಸ್ತೃತವಾಗಿರುತ್ತಿರಲಿಲ್ಲ. ದಿನಪತ್ರಿಕೆಯ ಪುಟಗಳನ್ನು ಬಿಟ್ಟಂತೆ ನಮಗೆ ಸುದ್ದಿ ದೊರಕುತ್ತಿದ್ದದ್ದು ದೂರದರ್ಶನ ಹಾಗೂ ಆಕಾಶವಾಣಿಯ ಮೂಲಕ - ಅದೂ ದಿನಕ್ಕೆ ಒಂದೆರಡು ಬಾರಿ, ಕೆಲವೇ ನಿಮಿಷಗಳ ಅವಧಿಯಲ್ಲಿ.

ಚಾನೆಲ್ಲುಗಳ ಸಂಖ್ಯೆ ಹೆಚ್ಚಿದಂತೆ ಈ ಪರಿಸ್ಥಿತಿ ಬದಲಾಯಿತು, ಸುದ್ದಿ ಪ್ರಸಾರಕ್ಕೆಂದೇ ಪ್ರತ್ಯೇಕ ವಾಹಿನಿಗಳು ಬಂದವು. ಸೆಲೆಬ್ರಿಟಿಗಳ ಸಂಸಾರ ತಾಪತ್ರಯದಿಂದ ಯಾರದೋ ಮನೆಯೊಳಗೆ ನುಗ್ಗಿದ ಚಿರತೆಯವರೆಗೆ ಪ್ರತಿಯೊಂದೂ ಬ್ರೆಕಿಂಗ್ ನ್ಯೂಸ್ ಆಗುವುದು ಶುರುವಾಯಿತು.

ಅಂತರಜಾಲದ ವ್ಯಾಪ್ತಿ ಹೆಚ್ಚಿದಮೇಲಂತೂ ಈ ಸುದ್ದಿಯ ಭರಾಟೆ ಹೇಳತೀರದು. ಹಿಂದೊಮ್ಮೆ ಸುದ್ದಿಯೇ ಅಲ್ಲ ಎನಿಸಿಕೊಳ್ಳುತ್ತಿದ್ದ ಸಂಗತಿಗಳೂ ಈಗ ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿ ಸುದ್ದಿವಾಹಿನಿಗಳ ಮೂಲಕ ಎಲ್ಲರನ್ನೂ ತಲುಪುತ್ತಿವೆ. ಒಳ್ಳೆಯವು - ಕೆಟ್ಟವು ಎಲ್ಲ ಬಗೆಯ ಸುದ್ದಿಗಳೂ ಸಮಾಜ ಜಾಲಗಳ ಮೂಲಕ ಕಾಡ್ಗಿಚ್ಚಿಗಿಂತ ವೇಗವಾಗಿ ಪ್ರಸಾರವಾಗುತ್ತಿವೆ.

ಒಳ್ಳೆಯ ಸುದ್ದಿಗಳು - ಜನರಿಗೆ ಉಪಯುಕ್ತವಾದ ವಿಷಯಗಳು ಹೀಗೆ ಪ್ರಸಾರವಾಗುವುದು ಒಳ್ಳೆಯದೇ ಬಿಡಿ. ಆದರೆ ಹೀಗೆ ಪ್ರಸಾರವಾಗುವ ಸುದ್ದಿಗಳಲ್ಲಿ ಸತ್ಯವಲ್ಲದ ಹಾಗೂ ದುರುದ್ದೇಶಪೂರಿತ ಮಾಹಿತಿಯೂ ಸಾಕಷ್ಟು ಪ್ರಮಾಣದಲ್ಲಿರುವುದು ಆತಂಕಕಾರಿ ವಿಷಯವೇ ಸರಿ.

ನಿಜ, ಫೇಸ್‌ಬುಕ್ - ವಾಟ್ಸ್‌ಆಪ್‌ಗಳಲ್ಲಿ ನಮಗೆ ಅದೆಷ್ಟೋ ಸುಳ್ಳುಗಳು ಕಾಣಸಿಗುತ್ತವೆ: ಕಂಪ್ಯೂಟರ್ ವೈರಸ್ಸುಗಳ ಬಗ್ಗೆ ಕಪೋಲಕಲ್ಪಿತ ಮಾಹಿತಿ, ಯಾವಯಾವುದಕ್ಕೋ ಯುನೆಸ್ಕೋ ಮಾನ್ಯತೆ ಸಿಕ್ಕಿತೆಂಬ ಹೆಮ್ಮೆ, ಪ್ರತಿಷ್ಠಿತ ಸಂಸ್ಥೆಗಳು ಹೀಗೆಲ್ಲ ಹೇಳಿವೆಯೆಂಬ ನೆಪದೊಡನೆ ಸುಳ್ಳನ್ನು ಸತ್ಯವಾಗಿಸುವ ಪ್ರಯತ್ನ, ಅದೇನೇನೋ ಮಾಡಿದರೆ ಐಪ್ಯಾಡು ಉಚಿತವಾಗಿ ಸಿಗುತ್ತದೆ ಎನ್ನುವಂತಹ ಬೊಗಳೆ - ಇನ್ನೂ ಏನೇನೋ. ಆರೋಗ್ಯ ಮತ್ತು ಔಷಧಗಳಿಗೆ ಸಂಬಂಧಪಟ್ಟ ಸುಳ್ಳು ಇಲ್ಲವೇ ತಪ್ಪು ಮಾಹಿತಿಗಳೂ ದಂಡಿಯಾಗಿ ಸಿಗುತ್ತವೆ.

ಎಲ್ಲೋ ಕೆಲವು ಸನ್ನಿವೇಶಗಳಲ್ಲಿ ಮಾತ್ರ ಇಂತಹ ಸುಳ್ಳುಗಳ ಸೃಷ್ಟಿಯ ಹಿಂದೆ ದುರುದ್ದೇಶ ಇರುವುದಿಲ್ಲ: ತಮಾಷೆ ಮಾಡಲೆಂದು ರೂಪಿಸಿದ ಅಥವಾ ತಪ್ಪು ಕಲ್ಪನೆಯಿಂದ ರೂಪುಗೊಂಡ ಸಂದೇಶಗಳು ನಿಯಂತ್ರಣ ತಪ್ಪಿ ಹರಡಿಬಿಡುತ್ತವೆ ಅಷ್ಟೇ. ಇವತ್ತು ಮೈಸೂರು ಪಾಕ್ ವಿಷಯದಲ್ಲಿ ತಮಾಷೆ ಮಾಡಲು ಹೊರಟಿದ್ದು ಹಲವು ವಾಹಿನಿಗಳಲ್ಲಿ ಸುದ್ದಿಯಾಗಿ ಹರಿದಾಡಿತಲ್ಲ, ಹಾಗೆ!

ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಅಮಾಯಕರನ್ನು ವಂಚಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವವರೂ, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದರೂ ಇಳಿಯುವ ಜನರೂ ಇಂತಹ ಸನ್ನಿವೇಶಗಳನ್ನು ಬಳಸಿಕೊಳ್ಳುತ್ತಾರೆ. ಸಮಾಜದಲ್ಲಿ ಸಂಶಯವನ್ನೂ ಪರಸ್ಪರ ದ್ವೇಷವನ್ನೂ ಹುಟ್ಟುಹಾಕುತ್ತಾರೆ.

ಸಮಸ್ಯೆಯಾಗಿರುವುದು ಅದೇ. ನಮ್ಮ ಗಮನಕ್ಕೆ ಬಂದ ಮಾಹಿತಿಯನ್ನೆಲ್ಲ ಎಲ್ಲರಿಗೂ ಹಂಚಿಬಿಡುವ ಹವ್ಯಾಸ ಅನೇಕರಿಗೆ ಇರುತ್ತದಲ್ಲ, ಅಂಥವರ ಮೂಲಕ ಈ ಸುಳ್ಳು ಸುದ್ದಿಗಳೆಲ್ಲ ಹರಡುತ್ತಲೇ ಹೋಗುತ್ತದೆ. ಫೇಸ್‌ಬುಕ್‌ನಲ್ಲಿ ಶೇರ್ ಆಗುತ್ತವೆ, ವಾಟ್ಸ್‌ಆಪ್‌ನಲ್ಲಿ ಮುನ್ನುಗ್ಗುತ್ತವೆ. ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಅನಿರೀಕ್ಷಿತ ಹಾಗೂ ಅನಗತ್ಯ ಪರಿಣಾಮಗಳನ್ನೂ ಉಂಟುಮಾಡುತ್ತವೆ. ವಾಟ್ಸ್‌ಆಪ್ ಸಂದೇಶಗಳ ಮೂಲಕ ಸೃಷ್ಟಿಯಾದ ಮಕ್ಕಳ ಕಳ್ಳರ ಭೀತಿ ಈ ಹಿಂದೆ ಎಷ್ಟೆಲ್ಲ ಹಿಂಸೆಗೆ, ಜೀವಹಾನಿಗೆ ಕಾರಣವಾಗಿದೆಯಲ್ಲ!

ಒಂದು ರೀತಿಯಲ್ಲಿ ನೋಡಿದರೆ ಇದಕ್ಕೆಲ್ಲ ಕಾರಣವಾಗಿರುವುದು ತಂತ್ರಜ್ಞಾನವೇ ತಾನೇ, ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲೂ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಪ್ರಯತ್ನ ನಡೆದಿದೆ. ಈ ಪ್ರಯತ್ನವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿರುವ ಫೇಸ್‌ಬುಕ್ ಅಂತೂ ತನ್ನಲ್ಲಿ ಕಾಣಿಸಿಕೊಳ್ಳುವ ಸುದ್ದಿಗಳ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳುವ ಕುರಿತಾಗಿ ಹಲವಾರು ಕಾರ್ಯತಂತ್ರಗಳನ್ನು ರೂಪಿಸಿದೆ. ಸುದ್ದಿಗಳ ಸತ್ಯಾಸತ್ಯತೆ ಕುರಿತು ಬಳಕೆದಾರರಿಂದಲೇ ನೇರವಾಗಿ ಹಿಮ್ಮಾಹಿತಿ ಪಡೆದುಕೊಳ್ಳುವ ಯೋಜನೆ ಕೂಡ ಈ ಪಟ್ಟಿಯಲ್ಲಿದೆ ಎನ್ನಲಾಗಿದೆ. ಇನ್ನು ಬಾಟ್‌ಗಳ ನೆರವಿನಿಂದ ತಪ್ಪು ಮಾಹಿತಿ ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಟ್ವಿಟರ್ ಕೂಡ ಕೆಲಸಮಾಡುತ್ತಿದೆಯಂತೆ. ಇಂತಹ ಹಲವು ಪ್ರಯತ್ನಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ (ಎಐ) ತಂತ್ರಜ್ಞಾನಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಯಾವ ಸುದ್ದಿ ಸುಳ್ಳು, ಯಾವುದು ನಿಜ ಎನ್ನುವ ಮಾಹಿತಿಯನ್ನು ವಿವರವಾದ ವಿಶ್ಲೇಷಣೆಯೊಡನೆ ನೀಡುವ ಸ್ನೋಪ್ಸ್, ಹೋಕ್ಸ್‌ಸ್ಲೇಯರ್‌ನಂತಹ ತಾಣಗಳ ಕೊಡುಗೆಯೂ ಕಡಿಮೆಯೇನಲ್ಲ.

ಸುಳ್ಳು ಸುದ್ದಿಗಳು ಹರಡುವುದು ತಂತ್ರಜ್ಞಾನದ ನೆರವಿನಿಂದ ಎನ್ನುವುದು ನಿಜವೇ ಆದರೂ ಆ ಸುದ್ದಿಗಳನ್ನು ಇನ್ನಷ್ಟು ಹರಡಿಸುವಲ್ಲಿ ನಮ್ಮಂತಹ ಬಳಕೆದಾರರ ಪಾತ್ರವೂ ಇಲ್ಲದಿಲ್ಲ. ಹಾಗಾಗಿಯೇ ಸುಳ್ಳು ಸುದ್ದಿಯ ಸಮಸ್ಯೆಯನ್ನು ಪರಿಹರಿಸಲು ನಾವು ಮಾಡಬೇಕಾದ ಕೆಲಸವೂ ಇವೆ.

ಆ ಕೆಲಸ ಬಹಳ ಸುಲಭವಾದದ್ದು: ಯಾವಾಗ ನಾವು ಸಿಕ್ಕಸಿಕ್ಕ ಮಾಹಿತಿಯನ್ನೆಲ್ಲ ಹಿಂದೆಮುಂದೆ ಯೋಚಿಸದೆ ಫಾರ್‌ವರ್ಡ್ ಮಾಡುವುದನ್ನು, ಶೇರ್ ಮಾಡುವುದನ್ನು ನಿಲ್ಲಿಸುತ್ತೇವೆಯೋ ಆಗ ಈ ಸುಳ್ಳುಗಳ ಹರಡುವಿಕೆಯೂ ನಿಂತುಹೋಗುತ್ತದೆ; ಸಮಯ - ಹಣ - ಸಂಪನ್ಮೂಲಗಳ ಅಪವ್ಯಯವೂ ತಪ್ಪುತ್ತದೆ!

ಸುಳ್ಳು ಸುದ್ದಿಗಳನ್ನು ತಡೆಯಲು ಹೀಗೆ ಮಾಡಿ!

  • ಯಾವುದೇ ಮಾಹಿತಿ ನಂಬಲಸಾಧ್ಯ ಎನಿಸುವಂತಿದ್ದರೆ (ಉದಾ: ಉಚಿತ ಐಫೋನ್) ಅದನ್ನು ನಂಬಬೇಡಿ.

  • ಮಾಹಿತಿಯ ನಿಖರತೆ ಪತ್ತೆಮಾಡಲು ಗೂಗಲ್ ಸರ್ಚ್‌ನಂತಹ ಸೌಲಭ್ಯಗಳನ್ನು ಬಳಸಿ.

  • ಸಂದೇಹಕ್ಕೆ ಎಡೆಕೊಡುವ ಚಿತ್ರಗಳ ಬಗ್ಗೆ ತಿಳಿಯಲು ಗೂಗಲ್ ಇಮೇಜಸ್ ನೆರವು ಪಡೆದುಕೊಳ್ಳಿ.

  • ಸಂಶಯಾಸ್ಪದ ಸುದ್ದಿಗಳ ಬಗ್ಗೆ ವಿವರ ತಿಳಿಯಲು ಸ್ನೋಪ್ಸ್, ಹೋಕ್ಸ್‌ಸ್ಲೇಯರ್‌ನಂತಹ ತಾಣಗಳಿಗೆ ಹೋಗಿ; ಸಾಧ್ಯವಾದ ಕಡೆ ಆಯಾ ಕ್ಷೇತ್ರದ ಪರಿಣತರನ್ನು ಸಂಪರ್ಕಿಸಿ.

  • ಸಮಾಜದ ಶಾಂತಿ ಕದಡುವ, ದ್ವೇಷ ಬಿತ್ತುವಂತಹ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.

  • ನೆನಪಿರಲಿ: ಅನಗತ್ಯ ಸಂದೇಶಗಳನ್ನು ಫಾರ್‌ವರ್ಡ್ ಮಾಡಿದಾಗೆಲ್ಲ ಸಮಯ ಹಾಗೂ ಸಂಪನ್ಮೂಲಗಳ ಅಪವ್ಯಯಕ್ಕೆ ನೀವು ನೇರವಾಗಿ ಕಾರಣರಾಗುತ್ತೀರಿ!

ಜನವರಿ ೨೪, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನದ ಸಂಪಾದಿತ ರೂಪ

Related Stories

No stories found.
logo
ಇಜ್ಞಾನ Ejnana
www.ejnana.com