ಮುಖ್ಯ ಕೆಲಸಗಳನ್ನು ಮಾಡುವಾಗ ಮೊಬೈಲನ್ನು ನಮ್ಮಿಂದ ದೂರ ಇಟ್ಟಿರುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು
ಮುಖ್ಯ ಕೆಲಸಗಳನ್ನು ಮಾಡುವಾಗ ಮೊಬೈಲನ್ನು ನಮ್ಮಿಂದ ದೂರ ಇಟ್ಟಿರುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದುImage by Michal Jarmoluk from Pixabay

ಪರೀಕ್ಷೆ ಮತ್ತು ಮೊಬೈಲ್ ಫೋನ್

ಮೊಬೈಲ್ ಸಹಾಯಪಡೆದು ಓದುತ್ತೇನೆಂದು ಹೋಗಿ ಅದರಿಂದಲೇ ಓದಿಗೆ ಅಡಚಣೆ ಆಗಬಾರದು!

ಪರೀಕ್ಷೆ ಹತ್ತಿರ ಬಂದಾಗ ಮೊಬೈಲು, ಟೀವಿ ಎಲ್ಲ ಬಿಟ್ಟು ಓದಿನ ಬಗ್ಗೆ ಮಾತ್ರ ಗಮನ ಕೊಡಬೇಕು ಎನ್ನುವುದು ಕೇಳಿ ಹಳೆಯದಾಗಿರುವ ಸಲಹೆ. ಈ ಸಲಹೆ ನಿಜಕ್ಕೂ ಉಪಯುಕ್ತ ಎಂದು ಗೊತ್ತಿದ್ದರೂ ನಮಗೆ ಮೊಬೈಲ್ ಬಿಟ್ಟಿರುವುದು ಕಷ್ಟ. ಹೀಗಿರುವಾಗ ನಮ್ಮ ಪರೀಕ್ಷಾ ಸಿದ್ಧತೆಯಲ್ಲಿ ಮೊಬೈಲನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಏನು ಮಾಡಬಹುದು? ಕೆಲವು ಸಲಹೆಗಳು ಇಲ್ಲಿವೆ.

ಓದುವಾಗ ಮಹತ್ವದ ಅಂಶಗಳನ್ನು ಒಂದು ಕಡೆ ಗುರುತುಮಾಡಿಕೊಳ್ಳುವುದು, ಅದನ್ನು ಮತ್ತೆ ಪುನರಾವರ್ತನೆಯಲ್ಲಿ ಬಳಸುವುದು ಅನೇಕ ವಿದ್ಯಾರ್ಥಿಗಳ ಅಭ್ಯಾಸ. ಈ ಕೆಲಸದಲ್ಲಿ ಗೂಗಲ್ ಕೀಪ್ (Google Keep), ಎವರ್‌ನೋಟ್ (Evernote) ಮುಂತಾದ ಹಲವು ಮೊಬೈಲ್ ಆಪ್‌ಗಳು ನೆರವಾಗಬಲ್ಲವು. ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ಮಹತ್ವದ ಮಾಹಿತಿಯನ್ನು ಟೈಪ್ ಮಾಡಿಟ್ಟುಕೊಳ್ಳಲು, ಮೊಬೈಲಿನಲ್ಲಿ ಕ್ಲಿಕ್ ಮಾಡಿದ ಫೋಟೋ - ಜಾಲತಾಣದ ವಿಳಾಸ ಇತ್ಯಾದಿಗಳನ್ನೆಲ್ಲ ಅದರೊಡನೆ ಜೋಡಿಸಿ ವಿಷಯಾಧಾರಿತವಾಗಿ ಜೋಡಿಸಿಟ್ಟುಕೊಳ್ಳಲು, ಹೀಗೆ ಜೋಡಿಸಿಟ್ಟುಕೊಂಡಿದ್ದರಲ್ಲಿ ಬೇಕಾದಾಗ ಬೇಕಾದ್ದನ್ನು ಸುಲಭವಾಗಿ ಹುಡುಕಿಕೊಳ್ಳಲು ನೆರವಾಗುವುದು ಈ ಆಪ್‌ಗಳ ಹೆಗ್ಗಳಿಕೆ. ಇಲ್ಲಿ ಉಳಿಸಿಟ್ಟುಕೊಂಡ ಮಾಹಿತಿಯನ್ನು ನಮ್ಮ ಗೆಳೆಯರ ಜೊತೆಗೆ ಸುಲಭವಾಗಿ ಹಂಚಿಕೊಳ್ಳಬಹುದು. ಅಷ್ಟೇ ಅಲ್ಲ, ಗೂಗಲ್ ಕೀಪ್ ಬಳಸಿ ಮೊಬೈಲಿನಲ್ಲಿ ಉಳಿಸಿಟ್ಟ ಮಾಹಿತಿಯನ್ನು ನಮ್ಮ ಕಂಪ್ಯೂಟರಿನಲ್ಲೂ ನೋಡಿಕೊಳ್ಳಬಹುದು - ಬದಲಿಸಬಹುದು. ಯಾವುದನ್ನೆಲ್ಲ ಓದಿ ಮುಗಿದಿದೆ, ಇನ್ನೂ ಏನೆಲ್ಲ ಓದಲು ಬಾಕಿಯಿದೆ ಎನ್ನುವಂತಹ ಪಟ್ಟಿಗಳನ್ನೂ ರೂಪಿಸಿ ನಿಭಾಯಿಸುವುದು ಇಂತಹ ಆಪ್‌ಗಳ ಮೂಲಕ ಸಾಧ್ಯ.

ಪರೀಕ್ಷಾ ಸಿದ್ಧತೆಯಲ್ಲಿ ತೊಡಗಿದ್ದಾಗ ನಿಘಂಟು-ವಿಶ್ವಕೋಶಗಳು ಜೊತೆಯಲ್ಲಿದ್ದರೆ ಕೆಲವು ಕೊನೆಯ ಕ್ಷಣದ ಸಂಶಯಗಳನ್ನು ನಿವಾರಿಸಿಕೊಳ್ಳುವುದು ಸುಲಭವಾಗುತ್ತದೆ. ಕಠಿಣ ಪದಗಳ ಅರ್ಥ, ಅರ್ಥವಾಗದ ಪರಿಕಲ್ಪನೆಯ ವಿವರಣೆಗಳನ್ನೆಲ್ಲ ಈ ಮೂಲಕ ಪಡೆದುಕೊಳ್ಳಬಹುದು. ಇಂಗ್ಲಿಷ್ ನಿಘಂಟುಗಳ ಪೈಕಿ ಡಿಕ್ಷನರಿ.ಕಾಮ್ (Dictionary.com) ಒಂದು ಉತ್ತಮ ಮೊಬೈಲ್ ಆಪ್. ಮೊಬೈಲಿನಲ್ಲಿ ಕನ್ನಡ ನಿಘಂಟು ಬೇಕೆನ್ನುವವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಂಕ್ಷಿಪ್ತ ನಿಘಂಟು (Kasapa Sankshipta Nighantu) ಆಪ್ ರೂಪದಲ್ಲಿ ಲಭ್ಯವಿದೆ. ನಮಗೆಲ್ಲ ಪರಿಚಯವಿರುವ ವಿಕಿಪೀಡಿಯ ಕೂಡ ಮೊಬೈಲ್ ಆಪ್ ರೂಪದಲ್ಲಿ ದೊರಕುತ್ತದೆ (Wikipedia). ಅಂತರಜಾಲ ಸಂಪರ್ಕದ ಸಮಸ್ಯೆಯಿದ್ದಾಗಲೂ ವಿಕಿಪೀಡಿಯ ಜೊತೆಗಿರಬೇಕು ಎನ್ನುವವರು ಕಿವಿಕ್ಸ್ (Kiwix, Wikipedia offline) ಆಪ್ ಸಹಾಯ ಪಡೆದುಕೊಳ್ಳಬಹುದು.

ಯಾವತ್ತು ಯಾವ ಪರೀಕ್ಷೆಯಿದೆ ಮತ್ತು ಆ ಪರೀಕ್ಷೆಗೆ ತಯಾರಾಗಲು ಎಷ್ಟು ಸಮಯಾವಕಾಶವಿದೆ ಎಂದು ನೋಡಿಕೊಳ್ಳುವುದಕ್ಕೂ ನೆರವಾಗುವ ಆಪ್‌ಗಳಿವೆ. Exam Countdown Lite ಎನ್ನುವುದು ಇಂತಹ ಆಪ್‌ಗಳಿಗೊಂದು ಉದಾಹರಣೆ. ಪರೀಕ್ಷೆ ಹತ್ತಿರವಾಗುತ್ತಿರುವುದನ್ನು ಈ ಆಪ್ ಕೌಂಟ್‌ಡೌನ್ ರೂಪದಲ್ಲಿ ತೋರಿಸುವುದರಿಂದ, ಮೊಬೈಲಿನಲ್ಲಿ ಅನುಪಯುಕ್ತ ಕೆಲಸಗಳನ್ನು ಮಾಡುತ್ತ ಸಮಯ ವ್ಯರ್ಥಮಾಡದಿರುವಂತೆ ಪ್ರೇರಣೆಯಾಗಿಯೂ ಅದನ್ನು ಬಳಸುವುದು ಸಾಧ್ಯ.

ಹೌದು, ಮೊಬೈಲ್ ಸಹಾಯಪಡೆದು ಓದುತ್ತೇನೆಂದು ಹೋಗಿ ಅದರಿಂದಲೇ ಓದಿಗೆ ಅಡಚಣೆ ಆಗಬಾರದಲ್ಲ! ಅಂತಹ ಸನ್ನಿವೇಶವನ್ನು ತಪ್ಪಿಸಲು ಮೊಬೈಲನ್ನು ಇಂತಿಷ್ಟು ಹೊತ್ತು ನಮ್ಮಿಂದ ದೂರ ಇಟ್ಟಿರುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಅದರಲ್ಲಿ ಬರುವ ಕರೆಗಳು-ಮೆಸೇಜುಗಳು ಗಮನವನ್ನು ಬೇರೆಡೆಗೆ ಸೆಳೆಯುತ್ತವೆ ಎನ್ನುವುದಾದರೆ ಮೊಬೈಲನ್ನು ಅಷ್ಟು ಸಮಯ ಫ್ಲೈಟ್ ಮೋಡ್‌ನಲ್ಲಿಡುವ ಪ್ರಯೋಗವನ್ನೂ ಮಾಡಿನೋಡಬಹುದು.

ಮೊಬೈಲಿನಿಂದ ದೂರವಿರಬೇಕೆಂದರೂ ಸಾಧ್ಯವಾಗುತ್ತಿಲ್ಲ ಎನ್ನುವವರು ಅದಕ್ಕಾಗಿಯೇ ರೂಪಿಸಿರುವ ಕೆಲ ತಂತ್ರಾಂಶಗಳ ನೆರವು ಪಡೆದುಕೊಳ್ಳಬಹುದು. ನಿಮ್ಮ ಮೊಬೈಲಿನಲ್ಲಿ ಆಂಡ್ರಾಯ್ಡ್‌ನ 'ಡಿಜಿಟಲ್ ವೆಲ್‌ಬೀಯಿಂಗ್' (Digital Wellbeing) ಸೌಲಭ್ಯ ಇದ್ದರೆ ಅದು ನಿಮ್ಮ ಮೊಬೈಲ್ ಬಳಕೆಯ ಮೇಲೆ ನಿಯಂತ್ರಣ ಸಾಧಿಸಿಕೊಳ್ಳಲು ನೆರವಾಗುತ್ತದೆ. ಆ ಸೌಲಭ್ಯ ಇಲ್ಲದವರು 'ಯುವರ್‌ಅವರ್'ನಂತಹ (YourHour) ಆಪ್‌ಗಳನ್ನೂ ಬಳಸಬಹುದು. ನೀವು ದಿನದಲ್ಲಿ ಎಷ್ಟು ಹೊತ್ತು ಮೊಬೈಲ್ ಬಳಸುತ್ತಿದ್ದೀರಿ, ಯಾವ ಆಪ್‌ಗಳನ್ನು ಉಪಯೋಗಿಸುತ್ತಿದ್ದೀರಿ ಎನ್ನುವುದನ್ನೆಲ್ಲ ವಿವರವಾಗಿ ತೋರಿಸುವುದು ಇವುಗಳ ಹೆಚ್ಚುಗಾರಿಕೆ. ಸುಮ್ಮನೆ ತೋರಿಸುವುದಷ್ಟೇ ಅಲ್ಲ, ನಿರ್ದಿಷ್ಟ ಆಪ್‌ನಲ್ಲಿ ಇಂತಿಷ್ಟು ಸಮಯಕ್ಕಿಂತ ಹೆಚ್ಚು ಕಳೆಯಬಾರದು (ಉದಾ: ದಿನಕ್ಕೆ ಫೇಸ್‌ಬುಕ್ ಬಳಕೆ ಅರ್ಧಗಂಟೆ ಮಾತ್ರ) ಎಂದು ತೀರ್ಮಾನಿಸಿ ಅದನ್ನು ಅನುಷ್ಠಾನಗೊಳಿಸುವುದಕ್ಕೂ ಈ ಸೌಲಭ್ಯಗಳು ನೆರವಾಗುತ್ತವೆ.

ಜನವರಿ ೨೧, ೨೦೨೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com