ನಮ್ಮ ವಿಳಾಸ ಇಜ್ಞಾನ.ಭಾರತ ಎಂದು ಕನ್ನಡದಲ್ಲೂ ಹೇಳಿಕೊಳ್ಳುವುದು ಈಗ ಸಾಧ್ಯವಾಗಿದೆ!
ನಮ್ಮ ವಿಳಾಸ ಇಜ್ಞಾನ.ಭಾರತ ಎಂದು ಕನ್ನಡದಲ್ಲೂ ಹೇಳಿಕೊಳ್ಳುವುದು ಈಗ ಸಾಧ್ಯವಾಗಿದೆ!Image by Diego Velázquez from Pixabay

ಜಾಲತಾಣ ಮತ್ತು ಇಮೇಲ್ ವಿಳಾಸ ಇದೀಗ ಕನ್ನಡದಲ್ಲೂ!

ವಿಜ್ಞಾನ-ತಂತ್ರಜ್ಞಾನ ಮಾಹಿತಿಯನ್ನು ಕನ್ನಡದಲ್ಲಿ ನೀಡುವ ಇಜ್ಞಾನ ಜಾಲತಾಣದ ವಿಳಾಸ ejnana.com ಎಂದು ಇಂಗ್ಲಿಷಿನಲ್ಲಿ ಬರೆಯುವುದರ ಜೊತೆಗೆ, ನಮ್ಮ ವಿಳಾಸ ಇಜ್ಞಾನ.ಭಾರತ ಎಂದು ಕನ್ನಡದಲ್ಲೂ ಹೇಳಿಕೊಳ್ಳುವುದು ಈಗ ಸಾಧ್ಯವಾಗಿದೆ!

ಜಾಲತಾಣ, ಅಂದರೆ ವೆಬ್‌ಸೈಟುಗಳ ಪರಿಕಲ್ಪನೆ ಮೊದಲು ಪರಿಚಯವಾದಾಗ ಅವುಗಳಲ್ಲಿನ ಮಾಹಿತಿಯ ಬಹುಪಾಲು ಇಂಗ್ಲಿಷ್ ಅಕ್ಷರಗಳಲ್ಲೇ ಇರುತ್ತಿತ್ತು. ಕನ್ನಡದ ಮಾಹಿತಿ ಮೊದಮೊದಲು ಜಾಲತಾಣಗಳಲ್ಲಿ ಕಾಣಿಸಿಕೊಂಡಾಗ ಅದೂ ಇಂಗ್ಲಿಷ್ ಅಕ್ಷರಗಳಲ್ಲೇ ('ಕಂಗ್ಲಿಷ್') ಇರುತ್ತಿತ್ತು. ಆಮೇಲೆ ಬಂದ ಕೆಲ ತಾಣಗಳು ಕನ್ನಡ ಪಠ್ಯವನ್ನು ಚಿತ್ರರೂಪಕ್ಕೆ ಪರಿವರ್ತಿಸಿ ಪ್ರಕಟಿಸಿದವು. ನಮ್ಮಲ್ಲಿರುವ ಮಾಹಿತಿಯನ್ನು ನಿರ್ದಿಷ್ಟ ಫಾಂಟ್ ಬಳಸಿ ಮಾತ್ರವೇ ಓದಬಹುದು ಎಂದ ತಾಣಗಳೂ ಇದ್ದವು. ಮಾಹಿತಿಯ ಜೊತೆ ಫಾಂಟನ್ನೂ ನಿಮ್ಮ ಕಂಪ್ಯೂಟರಿಗೆ ತಂದು ಆ ಮಾಹಿತಿಯನ್ನೆಲ್ಲ ಪ್ರದರ್ಶಿಸುವ 'ಡೈನಮಿಕ್ ಫಾಂಟ್' ತಂತ್ರಜ್ಞಾನ ಆಮೇಲೆ ಪರಿಚಯವಾಗಿ ಕೆಲಸಮಯ ಬಳಕೆಯಲ್ಲಿತ್ತು. ಆನಂತರ, ಯುನಿಕೋಡ್ ಮಾನಕ ಬಳಕೆಗೆ ಬಂದು ಬಹುತೇಕ ಎಲ್ಲ ಸಾಧನಗಳೂ ಅದನ್ನು ಬೆಂಬಲಿಸಲು ಶುರುಮಾಡಿದ ಮೇಲೆ, ಕನ್ನಡ ಲಿಪಿಯಲ್ಲಿರುವ ಮಾಹಿತಿಯನ್ನು ಜಾಲತಾಣಗಳಲ್ಲಿ ಪ್ರಕಟಿಸುವುದು ಸುಲಭವಾಯಿತು.

ಇಷ್ಟೆಲ್ಲ ಆದಮೇಲೆ, ಈಗ, ಜಾಲತಾಣಗಳಲ್ಲಿನ ಮಾಹಿತಿ ನಮ್ಮ ಭಾಷೆಯಲ್ಲೇ ದೊರಕುವುದು ಕುತೂಹಲಹುಟ್ಟಿಸುವ ಸಂಗತಿಯಾಗೇನೂ ಉಳಿದಿಲ್ಲ. ಇಮೇಲ್ ಸಂದೇಶಗಳನ್ನು ನಮ್ಮ ಭಾಷೆಯಲ್ಲೇ ಟೈಪ್ ಮಾಡುವುದೂ ಈಗ ಬಹಳ ಸಾಮಾನ್ಯವಾದ ವಿಷಯ. ಆದರೆ, ಜಾಲತಾಣದಲ್ಲಿನ ಮಾಹಿತಿ ಕನ್ನಡದಲ್ಲೇ ಇದ್ದರೂ ಅದರ ವಿಳಾಸ ಮಾತ್ರ ಇಂಗ್ಲಿಷಿನಲ್ಲೇ ಇರಬೇಕಾದ್ದು ಈವರೆಗೆ ಅನಿವಾರ್ಯವಾಗಿತ್ತು. ಇಮೇಲ್ ವಿಷಯದಲ್ಲೂ ಅಷ್ಟೇ, ಕಳಿಸುವುದು ಕನ್ನಡದ ಸಂದೇಶವೇ ಆದರೂ ನಮ್ಮ ವಿಳಾಸ ಇಂಗ್ಲಿಷಿನಲ್ಲೇ ಇರುತ್ತಿತ್ತು.

ಕನ್ನಡದಲ್ಲೇ ವೆಬ್-ವಿಳಾಸ!

'ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್' (ಐಡಿಎನ್) ಎಂಬ ಪರಿಕಲ್ಪನೆಯ ನೆರವಿನಿಂದ ಈ ಪರಿಸ್ಥಿತಿ ಇದೀಗ ಬದಲಾಗಿದ್ದು, ಜಾಲತಾಣಗಳ ವಿಳಾಸಗಳನ್ನೂ ನಮ್ಮ ಇಮೇಲ್ ವಿಳಾಸಗಳನ್ನೂ ನಾವೀಗ ಕನ್ನಡ ಅಕ್ಷರಗಳಲ್ಲೇ ರೂಪಿಸಿಕೊಳ್ಳಬಹುದು. ಇದರ ಪರಿಣಾಮವಾಗಿ, ವಿಜ್ಞಾನ-ತಂತ್ರಜ್ಞಾನ ಮಾಹಿತಿಯನ್ನು ಕನ್ನಡದಲ್ಲಿ ನೀಡುವ ಇಜ್ಞಾನ ಜಾಲತಾಣದ ವಿಳಾಸ ejnana.com ಎಂದು ಇಂಗ್ಲಿಷಿನಲ್ಲಿ ಬರೆಯುವುದರ ಜೊತೆಗೆ, ನಮ್ಮ ವಿಳಾಸ ಇಜ್ಞಾನ.ಭಾರತ ಎಂದು ಕನ್ನಡದಲ್ಲೂ ಹೇಳಿಕೊಳ್ಳುವುದು ನಮಗೆ ಈಗ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಸಂಪಾದಕ@ಇಜ್ಞಾನ.ಭಾರತ ಎಂಬ ಕನ್ನಡದ ವಿಳಾಸದ ಮೂಲಕವೇ ನೀವು ನಮ್ಮನ್ನು ಇಮೇಲ್‌ನಲ್ಲೂ ಸಂಪರ್ಕಿಸಬಹುದು!

ಇಜ್ಞಾನ.ಭಾರತ ಎಂಬ ವಿಳಾಸದ ಮೂಲಕವೂ ನೀವೀಗ ನಮ್ಮ ಜಾಲತಾಣವನ್ನು ತೆರೆಯಬಹುದು
ಇಜ್ಞಾನ.ಭಾರತ ಎಂಬ ವಿಳಾಸದ ಮೂಲಕವೂ ನೀವೀಗ ನಮ್ಮ ಜಾಲತಾಣವನ್ನು ತೆರೆಯಬಹುದುejnana.com

೧೬ ಮಾರ್ಚ್ ೨೦೨೦ರಂದು ಪ್ರಾರಂಭವಾದ ಈ ವ್ಯವಸ್ಥೆಯನ್ನು ಬಳಸಿ ಕನ್ನಡದ ವಿಳಾಸಗಳನ್ನು ನೋಂದಾಯಿಸಿಕೊಳ್ಳುವ ಸೌಲಭ್ಯ ಈವರೆಗೆ ಕೆಲ ನಿರ್ದಿಷ್ಟ ಗುಂಪುಗಳಿಗೆ ಮಾತ್ರ (ಉದಾ: ಟ್ರೇಡ್ ಮಾರ್ಕ್ ಮಾಲೀಕರು, ಅದೇ ಹೆಸರಿನ .in ಜಾಲತಾಣ ಹೊಂದಿರುವವರು) ಲಭ್ಯವಿತ್ತು. ಆದರೆ ಕಳೆದ ಜುಲೈ ೧೫ರಿಂದ ಈ ಸೌಲಭ್ಯವು 'ಜನರಲ್ ಅವೈಲಬಿಲಿಟಿ' ಹಂತ ಪ್ರವೇಶಿಸಿದ್ದು, ಈಗ ಯಾರು ಬೇಕಾದರೂ ತಮ್ಮ ಆಯ್ಕೆಯ ಜಾಲತಾಣ ವಿಳಾಸಗಳನ್ನು - ಅದು ಲಭ್ಯವಿದ್ದರೆ - ನೋಂದಾಯಿಸಿಕೊಂಡು ಬಳಸುವುದು ಸಾಧ್ಯವಾಗಿದೆ. ಜಾಲತಾಣಗಳಿಗೆ ಭಾರತೀಯ ವಿಳಾಸಗಳನ್ನು ನೀಡುವ ಪ್ರಕ್ರಿಯೆಯನ್ನು ನಿಯಂತ್ರಿಸುವ .IN Registry ಕನ್ನಡ ವಿಳಾಸಗಳ ವಿತರಣೆಯ ಜವಾಬ್ದಾರಿಯನ್ನೂ ಹೊತ್ತಿದ್ದು, ಈ ಕುರಿತ ಹೆಚ್ಚಿನ ವಿವರಗಳನ್ನು ನಾವು ಅದರ ಜಾಲತಾಣದಲ್ಲಿ ಪಡೆದುಕೊಳ್ಳಬಹುದು.

ಈ ಸೇವೆ ಒದಗಿಸುವ ಸಂಸ್ಥೆಗಳ ದೊಡ್ಡ ಪಟ್ಟಿಯೇ ಅಲ್ಲಿದೆಯಾದರೂ ಸದ್ಯ ಡೇಟಾ ಇನ್‌ಜೀನಿಯಸ್ ಗ್ಲೋಬಲ್ ಲಿಮಿಟೆಡ್ ಮಾತ್ರ ಸದ್ಯದಲ್ಲಿ (ಜುಲೈ ೧೯ರಂದು ಇದ್ದಂತೆ) ಕನ್ನಡದ ವಿಳಾಸಗಳನ್ನು ನೀಡುತ್ತಿರುವಂತೆ ತೋರುತ್ತದೆ. ಕನ್ನಡದ ಜಾಲತಾಣ ವಿಳಾಸಗಳಿಗೆ ಈ ಸಂಸ್ಥೆ ವಾರ್ಷಿಕ ರೂ. ೫೦೦ರ ಶುಲ್ಕ ನಿಗದಿಪಡಿಸಿದ್ದು, ಸದ್ಯ ಶೇ. ೨೦ರ ರಿಯಾಯಿತಿ ನೀಡುತ್ತಿದೆ (ಜಿಎಸ್‌ಟಿ ಪ್ರತ್ಯೇಕ). ಇದಲ್ಲದೆ ಪ್ರತಿ ವೆಬ್ ವಿಳಾಸದ ಜೊತೆಗೂ ೧ ಜಿಬಿ ಶೇಖರಣಾ ಸಾಮರ್ಥ್ಯವಿರುವ ಕನ್ನಡದ ಒಂದು ಇಮೇಲ್ ವಿಳಾಸವನ್ನು ಉಚಿತವಾಗಿ ನೀಡಲಾಗುತ್ತಿದೆ.

ಏನಿದು ಐಡಿಎನ್?

ಅಂತರಜಾಲ ಬಳಸುವವರಿಗೆಲ್ಲ ಜಾಲತಾಣಗಳ (ವೆಬ್​ಸೈಟ್) ಪರಿಚಯ ಇರುತ್ತದೆ. ಹಲವು ಜಾಲತಾಣಗಳನ್ನು ನಾವೆಲ್ಲ ನಿಯಮಿತವಾಗಿ ಬಳಸುತ್ತಲೂ ಇರುತ್ತೇವೆ. ಇಂತಹ ಜಾಲತಾಣಗಳನ್ನು ಗುರುತಿಸಲು ಬಳಸುವ ವಿಳಾಸವನ್ನು – ejnana.com, epada.in, google.com ಇತ್ಯಾದಿ – ಡೊಮೈನ್ ನೇಮ್ ಎಂದು ಕರೆಯುತ್ತಾರೆ. ಬ್ರೌಸರ್ ತಂತ್ರಾಂಶದಲ್ಲಿ ಜಾಲತಾಣಗಳನ್ನು ನೋಡುತ್ತಿರುವಾಗ ಅಲ್ಲಿ ಆಯಾ ಪುಟದ ವಿಳಾಸ ಕಾಣುತ್ತದಲ್ಲ (ಉದಾ: https://www.ejnana.com/collection/all-stories), ಅದೇ ಯೂನಿಫಾರ್ಮ್ ರಿಸೋರ್ಸ್ ಲೊಕೇಟರ್ ಅಥವಾ ಯುಆರ್‍ಎಲ್. ಡೊಮೈನ್ ನೇಮ್ ಎನ್ನುವುದು ಇದೇ ಯುಆರ್​ಎಲ್​ನ ಒಂದು ಭಾಗ. ಡೊಮೈನ್ ನೇಮ್‌ನ ಕೊನೆಯಲ್ಲಿರುವ ವಿಶೇಷಣಗಳನ್ನು (.com, .net, .in ಇತ್ಯಾದಿ) 'ಟಾಪ್ ​ಲೆವೆಲ್ ಡೊಮೈನ್' ಅಥವಾ ಟಿಎಲ್‌ಡಿ ಎಂದು ಕರೆಯುತ್ತಾರೆ.

ಇಂಗ್ಲಿಷ್ ಮಾತ್ರವಲ್ಲದೆ ಬೇರೆ ಲಿಪಿಗಳಲ್ಲೂ ಡೊಮೈನ್ ನೇಮ್ (ಟಿಎಲ್‌ಡಿಯೂ ಸೇರಿದಂತೆ) ರೂಪಿಸಿಕೊಳ್ಳುವುದನ್ನು ಸಾಧ್ಯವಾಗಿಸಿದ್ದು 'ಇಂಟರ್‌ನ್ಯಾಶನಲೈಸ್ಡ್ ಡೊಮೈನ್ ನೇಮ್'ಗಳ (ಐಡಿಎನ್) ಹೆಚ್ಚುಗಾರಿಕೆ. ಹಿಂದಿ, ಮರಾಠಿ, ಬಂಗಾಳಿ, ಪಂಜಾಬಿ, ತಮಿಳು, ತೆಲುಗು ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಈ ಸೌಲಭ್ಯ ಕಳೆದ ಕೆಲ ವರ್ಷಗಳಿಂದಲೇ ಲಭ್ಯವಿತ್ತು. ಈ ಭಾಷೆಗಳಲ್ಲಿರುವ ವಿಳಾಸ ರೂಪಿಸಿಕೊಂಡ ಜಾಲತಾಣಗಳಿಗೆಂದೇ '.ಭಾರತ' ಎಂಬ ಟಿಎಲ್‌ಡಿಯನ್ನೂ (ಆಯಾ ಭಾಷೆಯಲ್ಲಿ) ರೂಪಿಸಲಾಗಿತ್ತು. ಈಗ ಇದೇ ಸೌಲಭ್ಯ ಕನ್ನಡ, ಸಂಸ್ಕೃತ, ಮಲಯಾಳಂ, ಸಿಂಧಿ ಮುಂತಾದ ಇನ್ನಷ್ಟು ಭಾಷೆಗಳಲ್ಲಿ ದೊರೆತಿದೆ. ಮುಂದೆ ಇನ್ನಷ್ಟು ಟಿಎಲ್‌ಡಿಗಳನ್ನು (.ಕನ್ನಡ, .ಪತ್ರಿಕೆ ಇತ್ಯಾದಿ) ನಮ್ಮ ಭಾಷೆಯಲ್ಲಿ ರೂಪಿಸಿಕೊಳ್ಳಬಹುದಾದ ಸಾಧ್ಯತೆಯನ್ನೂ ಇದು ನಮಗೆ ತೋರಿಸಿಕೊಟ್ಟಿದೆ.

ಐಡಿಎನ್ ಜಗದಲ್ಲಿ ಕನ್ನಡದ ಕಂಪು

ಐಡಿಎನ್ ಸೌಲಭ್ಯ ಯಾವ ಭಾಷೆಗಳಲ್ಲಿ ಲಭ್ಯವಿರಬೇಕು, ಆಯಾ ಭಾಷೆಯಲ್ಲಿ ವಿಳಾಸಗಳನ್ನು ರೂಪಿಸಿಕೊಳ್ಳಲು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕು ಎನ್ನುವುದನ್ನು International Corporation for Assigned Names and Numbers (ICANN) ಸಂಸ್ಥೆ ನಿರ್ಧರಿಸುತ್ತದೆ. ಕನ್ನಡ ಭಾಷೆಯ ವಿಳಾಸಗಳಿಗಾಗಿ ನಿಯಮಗಳನ್ನು ರೂಪಿಸಲು ಈ ಸಂಸ್ಥೆಯ ಪರವಾಗಿ ಕೆಲಸಮಾಡಿದ ತಂಡದಲ್ಲಿ ಟೆಕ್ ಪರಿಣತ, ಲೇಖಕ ಡಾ. ಯು. ಬಿ. ಪವನಜ ಕೂಡ ಒಬ್ಬರು. ಅವರು ತಮ್ಮ ಜಾಲತಾಣಕ್ಕೆ 'ವಿಶ್ವಕನ್ನಡ.ಭಾರತ' ಎಂಬ ಕನ್ನಡದ ವಿಳಾಸವನ್ನು ಈಗಾಗಲೇ ರೂಪಿಸಿಕೊಂಡಿದ್ದಾರೆ. ಕನ್ನಡದ ವಿಳಾಸಗಳನ್ನು ರೂಪಿಸಿಕೊಳ್ಳಲು ಸದ್ಯದಲ್ಲಿರುವ ಕೆಲ ಅಡೆತಡೆಗಳನ್ನು ನಿವಾರಿಸುವ ಕೆಲಸದಲ್ಲೂ ಅವರು ತೊಡಗಿಕೊಂಡಿದ್ದಾರೆ (ಉದಾ: ವಿಳಾಸಗಳಲ್ಲಿ ಅರ್ಧಾಕ್ಷರದ ಬಳಕೆ - 'ಸೂಪರ್‌ಸ್ಟಾರ್.ಭಾರತ'ವನ್ನು ಸದ್ಯ ಯಾರೂ ನೋಂದಾಯಿಸಿಕೊಳ್ಳುವಂತಿಲ್ಲ!).

ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರ ಬೇಳೂರು ಸುದರ್ಶನ (ಬೇಳೂರುಸುದರ್ಶನ.ಭಾರತ), ಪತ್ರಕರ್ತ ಅವಿನಾಶ್ (ಅವಿನಾಶ.ಭಾರತ), ಪ್ರಜಾವಾಣಿ ದಿನಪತ್ರಿಕೆ (ಪ್ರಜಾವಾಣಿ.ಭಾರತ) ಈಗಾಗಲೇ ಕನ್ನಡ ವಿಳಾಸಗಳನ್ನು ರೂಪಿಸಿಕೊಂಡವರ ಸಾಲಿನಲ್ಲಿರುವ ಇನ್ನಷ್ಟು ಗಮನಾರ್ಹ ಹೆಸರುಗಳು. ಇಜ್ಞಾನ.ಭಾರತ ಎಂಬ ವಿಳಾಸದೊಂದಿಗೆ ನಿಮ್ಮ ಮೆಚ್ಚಿನ ಇಜ್ಞಾನ ಕೂಡ ಈಗ ಈ ಸಾಲಿಗೆ ಸೇರುತ್ತಿದೆ ಎನ್ನುವುದು ನಮಗೆ ಖುಷಿ.

ಐಡಿಎನ್ ಸೌಲಭ್ಯ ಯಾವೆಲ್ಲ ಭಾಷೆಗಳಲ್ಲಿ ಲಭ್ಯವಿವೆಯೋ ಆ ಎಲ್ಲ ಭಾಷೆಗಳಲ್ಲೂ ಇಮೇಲ್ ವಿಳಾಸಗಳನ್ನು ರೂಪಿಸಿಕೊಳ್ಳಬಹುದು. ಅದರಂತೆಯೇ ನಾವು ಸಂಪಾದಕ@ಇಜ್ಞಾನ.ಭಾರತ ಅನ್ನು ನಮ್ಮ ಕನ್ನಡದ ವಿಳಾಸವಾಗಿ ರೂಪಿಸಿಕೊಂಡಿದ್ದೇವೆ. ಇದಲ್ಲದೆ ಫೇಸ್‌ಬುಕ್, ಟ್ವಿಟರ್, ಇನ್ಸ್‌ಟಾಗ್ರಾಮ್, ವಾಟ್ಸ್‌ಆಪ್, ಟೆಲಿಗ್ರಾಮ್ ಮುಂತಾದ ಇನ್ನಿತರ ಮಾಧ್ಯಮಗಳ ಮೂಲಕವೂ ನೀವು ನಮ್ಮೊಡನೆ ಎಂದಿನಂತೆ ಸಂಪರ್ಕದಲ್ಲಿರಬಹುದು.

Related Stories

No stories found.
logo
ಇಜ್ಞಾನ Ejnana
www.ejnana.com