ನಾವು ಅಂತರಜಾಲವನ್ನು ಬಳಸುವಾಗ, ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿ ಉಳಿಸುವ ಮಾಹಿತಿಯ ಜಾಡನ್ನು 'ಡಿಜಿಟಲ್ ಫುಟ್‌ಪ್ರಿಂಟ್' ಎಂದು ಕರೆಯುತ್ತಾರೆ.

ನಾವು ಅಂತರಜಾಲವನ್ನು ಬಳಸುವಾಗ, ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿ ಉಳಿಸುವ ಮಾಹಿತಿಯ ಜಾಡನ್ನು 'ಡಿಜಿಟಲ್ ಫುಟ್‌ಪ್ರಿಂಟ್' ಎಂದು ಕರೆಯುತ್ತಾರೆ.

chezbeate / pixabay.com

ಡಿಜಿಟಲ್ ಜಗತ್ತಿನಲ್ಲಿ ನಮ್ಮ ಹೆಜ್ಜೆಗುರುತು

ನಾವು ಭೇಟಿಕೊಟ್ಟ ಜಾಲತಾಣಗಳು, ಕಳಿಸಿದ ಇಮೇಲ್ ಸಂದೇಶಗಳು, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟುಗಳು - ಇವೆಲ್ಲ ನಮ್ಮ ಡಿಜಿಟಲ್ ಫುಟ್‌ಪ್ರಿಂಟನ್ನು ಬೆಳೆಸುತ್ತಾ ಹೋಗುತ್ತವೆ. ಈ ಜಾಡು ಸುಲಭಕ್ಕೆ ಅಳಿಸಿಹೋಗುವುದಿಲ್ಲ ಎನ್ನುವುದೇ ಸಮಸ್ಯೆ.

ನಾನು - ನನ್ನ ಅಕ್ಕ ಚಿಕ್ಕವರಾಗಿದ್ದಾಗ ನಮ್ಮಪ್ಪ ನಮಗೆ ಹಲವು ಕತೆಗಳನ್ನು ಹೇಳುತ್ತಿದ್ದರು. ಕತೆ ಹೇಳುವುದಷ್ಟೇ ಅಲ್ಲ, ಅವರೇ ಕತೆಯನ್ನೂ ಚಿತ್ರಗಳನ್ನೂ ಬರೆದು ನಮಗೆ ಓದುವುದಕ್ಕೂ ಕೊಡುತ್ತಿದ್ದರು. ನಮಗಾಗಿ ಅವರು ಬರೆದುಕೊಟ್ಟ ಅಂತಹುದೊಂದು ಕತೆಪುಸ್ತಕವೇ 'ಶಾಮ-ಶಾಲಿನಿಯರ ಕಥೆ'. ಗ್ರಿಮ್ ಸಹೋದರರ ಕಿನ್ನರ ಕತೆ 'ಹ್ಯಾನ್ಸಲ್ ಆಂಡ್ ಗ್ರೆಟೆಲ್'ನ ಕನ್ನಡ ರೂಪ ಇದು.

ಈ ಕತೆಯ ಶಾಮ, ತನ್ನ ತಂಗಿಯೊಡನೆ ಕಾಡಿನೊಳಕ್ಕೆ ಹೋಗುವಾಗ ದಾರಿ ತಪ್ಪಿದರೆ ಸಹಾಯಕ್ಕೆ ಬರಲಿ ಎಂದು ದಾರಿಯುದ್ದಕ್ಕೂ ಹೊಳೆಯುವ ಬಿಳಿ ಕಲ್ಲಿನ ಚೂರುಗಳನ್ನು ಹಾಕುತ್ತಾ ಹೋಗುತ್ತಾನೆ. ರಾತ್ರಿ ಆ ಕಲ್ಲುಗಳ ಸಹಾಯದಿಂದ ಸುರಕ್ಷಿತವಾಗಿ ಮನೆಗೂ ಮರಳುತ್ತಾನೆ. ಇನ್ನೊಮ್ಮೆ ಅದೇ ರೀತಿ ಕಾಡಿಗೆ ಹೋಗುವಾಗ ಕಲ್ಲುಗಳು ಸಿಗದೆ ರೊಟ್ಟಿಯ ಚೂರುಗಳನ್ನೇ ಹಾಕುತ್ತಾನೆ, ಆ ಚೂರುಗಳನ್ನು ಪ್ರಾಣಿಪಕ್ಷಿಗಳು ತಿಂದುಬಿಡುವುದರಿಂದ ಮನೆಗೆ ಮರಳಲು ಸಾಧ್ಯವಾಗದೆ ತೊಂದರೆಗೆ ಸಿಲುಕುತ್ತಾನೆ.

ನಮ್ಮ ದೈನಂದಿನ ವೇಳಾಪಟ್ಟಿ ಸರಿಸುಮಾರು ಒಂದೇ ರೀತಿಯಲ್ಲಿರುವ ಭೌತಿಕ ಜಗತ್ತಿನಲ್ಲಿ ನಾವು ಎತ್ತ ಹೋಗುತ್ತಿದ್ದೇವೆ, ಏನು ಮಾಡುತ್ತಿದ್ದೇವೆ ಎನ್ನುವುದನ್ನು ಕುರಿತ ನಿಖರ ಮಾಹಿತಿ ಬಹಳ ಮುಖ್ಯ. ನಾವಿಲ್ಲಿ ಹೆಜ್ಜೆಗುರುತುಗಳನ್ನು ಮೂಡಿಸುವುದು ವಾಸ್ತವವಾಗಿಯೂ, ಸಾಂಕೇತಿಕವಾಗಿಯೂ ಒಳ್ಳೆಯದು.

ಆದರೆ ಡಿಜಿಟಲ್ ಜಗತ್ತು ಹಾಗಲ್ಲ. ಅಲ್ಲಿ ನಾವು ಒಂದು ವಿಷಯದಿಂದ ಇನ್ನೊಂದರ ಕಡೆಗೆ ದೌಡಾಯಿಸುತ್ತಿರುತ್ತೇವೆ. ಇವತ್ತು ಒಂದು ವಿಷಯ ಟ್ರೆಂಡಿಂಗ್, ನಾಳೆ ಇನ್ನೊಂದು, ನಾಡಿದ್ದು ಬೇರೆಯದೇ ಒಂದು. ಇಲ್ಲಿ ಎಲ್ಲರೂ ಎಲ್ಲ ವಿಷಯಗಳ ಬಗೆಗೂ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರರು. ಆ ಬಗ್ಗೆ ಮಾಹಿತಿ ಇದ್ದರೂ - ಇಲ್ಲದಿದ್ದರೂ!

ಇಷ್ಟೆಲ್ಲ ಚಟುವಟಿಕೆಗಳ ಮೂಲಕ ನಾವಿಲ್ಲಿ ವಿಪರೀತವೆನಿಸುವಷ್ಟು ಹೆಜ್ಜೆಗುರುತುಗಳನ್ನು ಮೂಡಿಸುತ್ತೇವೆ. ನಮ್ಮ ನೋಟ ಮುಂದಿನ ಹೊಸ ವಿಷಯದ ಬಗ್ಗೆ ಮಾತ್ರವೇ ಇರುವುದರಿಂದ ಹಿಂತಿರುಗಿ ನೋಡಲು ಸಮಯವೇ ಇರುವುದಿಲ್ಲ. ಆದರೆ, ನಾವು ಮೂಡಿಸುವ ಬಹುತೇಕ ಗುರುತುಗಳು ಮಾತ್ರ - ಶಾಮ ಹಾಕಿದ ಬಿಳಿ ಕಲ್ಲಿನ ಚೂರುಗಳ ಹಾಗೆ - ಅಲ್ಲಿಯೇ ಉಳಿದುಕೊಂಡಿರುತ್ತವೆ.

ಇಂತಹ ಡಿಜಿಟಲ್ ಹೆಜ್ಜೆಗುರುತುಗಳ ಪರಿಣಾಮದ ಬಗ್ಗೆ ವಿಶ್ವದ ಗಮನ ಸೆಳೆದ ಘಟನೆಯೊಂದು ಈಚೆಗೆ ನಡೆಯಿತು. ಟ್ವಿಟರ್ ಸಂಸ್ಥೆಯ ಹೊಸ ಮುಖ್ಯಸ್ಥ ಪರಾಗ್ ಅಗರ್ವಾಲ್ ಈ ಹಿಂದೆ ಯಾವಾಗಲೋ ಮಾಡಿದ್ದ ಟ್ವೀಟುಗಳು ಈಗ ಮೇಲೆದ್ದು ಬಂದು ಗೊಂದಲಕ್ಕೆ ಕಾರಣವಾದದ್ದೇ ಆ ಘಟನೆ. ಆತ ಯಾವುದೋ ಸಂದರ್ಭದಲ್ಲಿ ಬರೆದಿದ್ದ ಈ ಸಂದೇಶಗಳ ಅರ್ಥವೇನು, ಅದರ ಹಿಂದಿನ ಉದ್ದೇಶ ಏನಿತ್ತು ಎನ್ನುವುದೆಲ್ಲ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಇಂತಹ ಘಟನೆ ನಡೆದಿರುವುದು ಇದೇ ಮೊದಲೇನಲ್ಲ. ಖಂಡಿತವಾಗಿಯೂ ಇದು ಕೊನೆಯೂ ಅಲ್ಲ. ಡಿಜಿಟಲ್ ಜಗತ್ತಿನಲ್ಲಿ ನಮ್ಮ ಹೆಜ್ಜೆಗುರುತುಗಳು, ಅರ್ಥಾತ್ ನಮ್ಮ 'ಡಿಜಿಟಲ್ ಫುಟ್‌ಪ್ರಿಂಟ್' ಎಲ್ಲಿಯವರೆಗೆ ಉಳಿದಿರುತ್ತದೋ ಅಲ್ಲಿಯವರೆಗೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವು ಹೈ-ಪ್ರೊಫೈಲ್ ಘಟನೆಗಳು ಮಾತ್ರ ಸುದ್ದಿಯಾಗುತ್ತವೆ, ಇನ್ನಷ್ಟು ಘಟನೆಗಳು ಸುದ್ದಿಯಾಗದಿದ್ದರೂ ಮಾಡಬೇಕಾದ ಹಾನಿಯನ್ನು ಮಾಡಿಯೇ ತೀರುತ್ತವೆ.

ನಾವು ಅಂತರಜಾಲವನ್ನು ಬಳಸುವಾಗ, ಗೊತ್ತಿದ್ದೋ ಗೊತ್ತಿಲ್ಲದೆಯೋ ಅಲ್ಲಿ ಉಳಿಸುವ ಮಾಹಿತಿಯ ಜಾಡನ್ನು 'ಡಿಜಿಟಲ್ ಫುಟ್‌ಪ್ರಿಂಟ್' ಎಂದು ಕರೆಯುತ್ತಾರೆ. ನಾವು ಭೇಟಿಕೊಟ್ಟ ಜಾಲತಾಣಗಳು, ಅಲ್ಲಿ ಸೇರಿಸಿದ ವಿವರಗಳು, ಕಳಿಸಿದ ಇಮೇಲ್ ಸಂದೇಶಗಳು, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟುಗಳು, ಶಾಪಿಂಗ್ ತಾಣದಲ್ಲಿ ನಡೆಸಿದ ಹುಡುಕಾಟಗಳು - ಹೀಗೆ ಅನೇಕ ಸಂಗತಿಗಳು ನಮ್ಮ ಡಿಜಿಟಲ್ ಫುಟ್‌ಪ್ರಿಂಟ್ ಅನ್ನು ಬೆಳೆಸುತ್ತಾ ಹೋಗುತ್ತವೆ. ಡಿಜಿಟಲ್ ಜಗತ್ತಿನ ಈ ಜಾಡು, ಶಾಮ-ಶಾಲಿನಿ ಬಳಸಿದ ರೊಟ್ಟಿಯ ಚೂರುಗಳ ಗುರುತಿನಂತೆ, ಸುಲಭಕ್ಕೆ ಅಳಿಸಿಹೋಗುವುದಿಲ್ಲ ಎನ್ನುವುದೇ ಸಮಸ್ಯೆ.

ಡಿಜಿಟಲ್ ಫುಟ್‌ಪ್ರಿಂಟ್‌ ಅನ್ನು ಸಕ್ರಿಯ - ಅಂದರೆ 'ಆಕ್ಟಿವ್', ಮತ್ತು ನಿಷ್ಕ್ರಿಯ - ಅಂದರೆ 'ಪ್ಯಾಸಿವ್' ಹೆಜ್ಜೆಗುರುತುಗಳೆಂಬ ಎರಡು ವಿಧಗಳಾಗಿ ವಿಂಗಡಿಸಬಹುದು. ಬಳಕೆದಾರರು ತಮ್ಮ ಬಗ್ಗೆ ತಾವಾಗಿಯೇ ಹಂಚಿಕೊಂಡ ಮಾಹಿತಿ - ಉದಾಹರಣೆಗೆ, ಸೋಶಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟು - ಆಕ್ಟಿವ್ ಡಿಜಿಟಲ್ ಫುಟ್‌ಪ್ರಿಂಟಿ‌ನ ವ್ಯಾಪ್ತಿಗೆ ಬರುತ್ತದೆ. ಬಳಕೆದಾರರ ಗಮನಕ್ಕೆ ಬಾರದಂತೆ ಅವರ ಬಗ್ಗೆ ಸಂಗ್ರಹಿಸಲಾದ ಮಾಹಿತಿ ಅವರ ಪ್ಯಾಸಿವ್ ಡಿಜಿಟಲ್ ಫುಟ್‌ಪ್ರಿಂಟನ್ನು ಬೆಳೆಸುತ್ತದೆ. ಖಾಸಗಿಯಾಗಿರುತ್ತದೆ ಎಂದು ಭಾವಿಸಿ ಯಾವುದೋ ಜಾಲತಾಣದಲ್ಲಿ ಉಳಿಸಿಟ್ಟಿದ್ದ ಮಾಹಿತಿ ಸೈಬರ್ ಅಪರಾಧದಿಂದಾಗಿ ಕಳ್ಳರ ಪಾಲಾದರೆ ಅದೂ ನಮ್ಮ ಡಿಜಿಟಲ್ ಹೆಜ್ಜೆಗುರುತಿಗೆ ಸೇರಿಹೋಗುವುದು ಸಾಧ್ಯ.

ಡಿಜಿಟಲ್ ಫುಟ್‌ಪ್ರಿಂಟ್ ಮೂಲತಃ ಕೆಟ್ಟದ್ದೇನಲ್ಲ. ನಾವು ಸಾಗಿಬಂದ ದಾರಿಯ ಕಡೆಗೆ ಹಿನ್ನೋಟ ಹರಿಸುವುದಕ್ಕೆ, ಹಿಂದೆ ಯಾವಾಗಲೋ ಮಾಡಿದ್ದ ಸಾಧನೆಯನ್ನು ನೆನಪಿಸಿಕೊಳ್ಳುವುದಕ್ಕೆ ಅದು ನೆರವಾಗಬಲ್ಲದು. ಹೊಸ ಪರಿಚಯಗಳನ್ನು, ಅವಕಾಶಗಳನ್ನು ಕೂಡ ಅದು ನಮಗೆ ಒದಗಿಸಿಕೊಡಬಲ್ಲದು. ಹೊಸ ಉದ್ಯೋಗಗಳಿಗೆ ಸೇರುವ, ಹೊಸಬರನ್ನು ಭೇಟಿಮಾಡುವ ಸಂದರ್ಭಗಳಲ್ಲಿ ನಮ್ಮ ಬಗ್ಗೆ ಪೂರ್ವಭಾವಿ ಮಾಹಿತಿಯನ್ನು ಅವರು ಕೇವಲ ಒಂದು ಗೂಗಲ್ ಸರ್ಚ್ ಮೂಲಕ ತಿಳಿದುಕೊಳ್ಳುವುದನ್ನೂ ಅದು ಸಾಧ್ಯವಾಗಿಸುತ್ತದೆ. ಇಷ್ಟರ ಮೇಲೆ, ಇಂದಿನ ಕಾಲದಲ್ಲಿ ನಮ್ಮ ಡಿಜಿಟಲ್ ಹೆಜ್ಜೆಗುರುತುಗಳು ಇಲ್ಲದಂತೆ ನೋಡಿಕೊಳ್ಳುವುದು ಹೆಚ್ಚೂಕಡಿಮೆ ಅಸಾಧ್ಯ ಎನ್ನುವುದೂ ಸತ್ಯವೇ. ಆದರೂ, ನಾವು ನಮ್ಮ ಡಿಜಿಟಲ್ ಫುಟ್‌ಪ್ರಿಂಟನ್ನು ಸರಿಯಾಗಿ ನಿಭಾಯಿಸದಿದ್ದರೆ ಅದರಿಂದ ಕೆಲ ಅನಪೇಕ್ಷಿತ ಪರಿಣಾಮಗಳು ಆಗುವುದು ಸಾಧ್ಯ. ಸೋಶಿಯಲ್ ಮೀಡಿಯಾದಲ್ಲಿ ಹಿಂದೆ ಯಾವಾಗಲೋ ಹಾಕಿದ ಪೋಸ್ಟುಗಳು, ಟ್ವಿಟರ್‌ನ ಹೊಸ ಮುಖ್ಯಸ್ಥರ ಉದಾಹರಣೆಯಲ್ಲಿ ಆದಂತೆ, ಈಗ ತೊಂದರೆಗೆ ಕಾರಣವಾಗುವುದು ಇಂತಹ ಪರಿಣಾಮಗಳಿಗೆ ಕೇವಲ ಒಂದು ಉದಾಹರಣೆಯಷ್ಟೇ.

ಒಮ್ಮೆ ಅಂತರಜಾಲ ಸೇರಿದ ನಮ್ಮ ಮಾಹಿತಿ ಅಲ್ಲಿ ಉಳಿದುಕೊಂಡುಬಿಡುವುದು ಸಾಮಾನ್ಯ. ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟು, ನಾವು ಅದನ್ನು ಅಳಿಸಿದರೂ, ಬೇರೊಬ್ಬರ ಸ್ಕ್ರೀನ್‌ಶಾಟಿನಲ್ಲಿ ಉಳಿದಿರುವ ಸಾಧ್ಯತೆಯಿರುತ್ತದಲ್ಲ, ಹಾಗೆ. ನಾವು ಒಮ್ಮೆ ಸೇರಿಸಿದ ಮಾಹಿತಿಯನ್ನು ಮುಂದೆ ಯಾರು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ನಾವು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ತಮಾಷೆಗೆಂದು ಹಂಚಿಕೊಂಡ ಸಂದೇಶ ಬೇರೆಯವರಿಗೆ ತಲುಪಿದಾಗ ಅಪಾರ್ಥಕ್ಕೆ ಎಡೆಮಾಡಿಕೊಡುವುದು, ಅವರ ಭಾವನೆಗಳಿಗೆ ಧಕ್ಕೆತರುವುದು ಅಸಾಧ್ಯವೇನಲ್ಲ. ಅದೇ ರೀತಿ ವಿವಿಧ ವೇದಿಕೆಗಳಲ್ಲಿ ನಾವು ಹಂಚಿಕೊಂಡ ಮಾಹಿತಿಯನ್ನು ಸೈಬರ್ ಅಪರಾಧಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನೂ ನಾವು ಉಪೇಕ್ಷಿಸುವಂತಿಲ್ಲ.

ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ನಾವು ಸೇರಿಸಿದ ಯಾವುದೋ ಮಾಹಿತಿ ಒಳ್ಳೆಯ ಅಭಿರುಚಿಯದ್ದಾಗಿರದಿದ್ದರೆ, ಅಥವಾ ನಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುವಂತೆ ಇಲ್ಲದಿದ್ದರೆ, ಅದು ಮುಂದೊಮ್ಮೆ ನಮಗೆ ತೊಂದರೆಯನ್ನೂ ಉಂಟುಮಾಡಬಹುದು. ಈಗಂತೂ ಈ ಡಿಜಿಟಲ್ ವ್ಯಕ್ತಿತ್ವಕ್ಕೆ ಭೌತಿಕ ವ್ಯಕ್ತಿತ್ವಕ್ಕಿರುವಷ್ಟೇ ಮಹತ್ವವಿದೆ. ಉನ್ನತ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆಮಾಡುವ ಸಂದರ್ಭದಲ್ಲಿ, ಉದ್ಯೋಗಕ್ಕೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಅವರ ಡಿಜಿಟಲ್ ಹೆಜ್ಜೆಗುರುತುಗಳನ್ನೂ ಪರಿಗಣಿಸುವುದು ಇದೀಗ ಸಾಮಾನ್ಯವಾಗಿದೆ.

ಹೀಗಾಗಿಯೇ, ನಮ್ಮ ಡಿಜಿಟಲ್ ಹೆಜ್ಜೆಗುರುತುಗಳು ನಮ್ಮ ಮೇಲೆ ಯಾವ ರೀತಿ ಪ್ರಭಾವ ಬೀರಬಲ್ಲವು ಎಂದು ಅರಿತುಕೊಳ್ಳುವುದು ಹಾಗೂ ಅಂತರಜಾಲದಲ್ಲಿ ನಾವು ಉಳಿಸುತ್ತಿರುವ ಮಾಹಿತಿಯ ಬಗ್ಗೆ ಎಚ್ಚರವಹಿಸುವುದು ಬಹಳ ಮುಖ್ಯ ಎಂದು ಪರಿಣತರು ಹೇಳುತ್ತಾರೆ. ನಮ್ಮ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರುವುದರ ಮೂಲಕ ನಮ್ಮ ಕುರಿತು ಸಂಗ್ರಹವಾಗಬಹುದಾದ ಮಾಹಿತಿಯ ಪ್ರಮಾಣವನ್ನು ನಿಯಂತ್ರಿಸುವುದು, ನಮ್ಮ ಡಿಜಿಟಲ್ ಹೆಜ್ಜೆಗುರುತುಗಳನ್ನು ಸಾಧ್ಯವಾದಷ್ಟೂ ಕಡಿಮೆಮಾಡಿಕೊಳ್ಳುವುದು ಒಳ್ಳೆಯದು ಎನ್ನುವುದು ಅವರ ಅನಿಸಿಕೆ. ವಿವಿಧ ಜಾಲತಾಣಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಅನಗತ್ಯವಾಗಿ ಹಂಚಿಕೊಳ್ಳದಿರುವುದು ಈ ನಿಟ್ಟಿನಲ್ಲಿ ನಾವು ಮಾಡಬಹುದಾದ ಮೊದಲ ಕೆಲಸ.

ತಮ್ಮ ವಿವರಗಳಷ್ಟೇ ಅಲ್ಲದೆ ಚಿಕ್ಕಮಕ್ಕಳ ವಿವರ - ಚಿತ್ರಗಳನ್ನೂ ಅತ್ಯುತ್ಸಾಹದಿಂದ ಅಂತರಜಾಲಕ್ಕೆ ಸೇರಿಸುವ ಅಭ್ಯಾಸ ಹಲವು ಪೋಷಕರಿಗಿರುತ್ತದೆ. 'ಶೇರ್' ಮತ್ತು 'ಪೇರೆಂಟಿಂಗ್' ಶಬ್ದಗಳನ್ನು ಸೇರಿಸಿ ಇದನ್ನು 'ಶೇರೆಂಟಿಂಗ್' ಎಂದು ಗುರುತಿಸಲಾಗುತ್ತದೆ. ಇದು ಮಕ್ಕಳ ಡಿಜಿಟಲ್ ಹೆಜ್ಜೆಗುರುತುಗಳನ್ನು ಅವರ ಎಳೆವಯಸ್ಸಿನಿಂದಲೇ ಅಂತರಜಾಲಕ್ಕೆ ಸೇರಿಸುವುದರಿಂದ ಈ ಅಭ್ಯಾಸದ ಬಗೆಗೂ ಪೋಷಕರು ಚಿಂತಿಸಬೇಕಾದ್ದು ಅಗತ್ಯ.

ಸೋಶಿಯಲ್ ಮೀಡಿಯಾ ತಾಣಗಳಲ್ಲಿ ನಮ್ಮ ವಿವರಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿ ಹಂಚಿಕೊಳ್ಳದಿರುವುದೂ ಒಳ್ಳೆಯದೇ. ಪೋಸ್ಟ್ ಮಾಡುವ ಮುನ್ನ ಕೆಲವೇ ಸೆಕೆಂಡುಗಳ ಕಾಲ ಯೋಚಿಸಿ ಇದನ್ನು ನಿಜಕ್ಕೂ ಪೋಸ್ಟ್ ಮಾಡಬಹುದೇ ಎಂದು ನಮ್ಮನ್ನೇ ಪ್ರಶ್ನಿಸಿಕೊಂಡರೂ ಸಾಕು, ಹಲವು ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು!

ಹೆಚ್ಚಿನ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳದೆ ಬಳಸಬಹುದಾದ ತಂತ್ರಾಂಶಗಳು ಹಾಗೂ ಜಾಲತಾಣಗಳನ್ನು ಉಪಯೋಗಿಸುವುದು ಕೂಡ ಉತ್ತಮ ಆಲೋಚನೆಯೇ. ಬಳಕೆದಾರರನ್ನು ವೈಯಕ್ತಿಕವಾಗಿ ಗುರುತಿಸಬಲ್ಲ ಮಾಹಿತಿಯ ಸಂಗ್ರಹಣೆ ಹಾಗೂ ನಿರ್ವಹಣೆಯನ್ನು ಕುರಿತ ನಿಯಮಗಳು ವಿಶ್ವದ ವಿವಿಧೆಡೆಗಳಲ್ಲಿ ನಿಧಾನಕ್ಕೆ ಜಾರಿಗೆ ಬರುತ್ತಿದ್ದು, ಭವಿಷ್ಯದಲ್ಲಿ ಅವೂ ನಮ್ಮ ನೆರವಿಗೆ ಬರುವ ಸಾಧ್ಯತೆ ಇಲ್ಲದಿಲ್ಲ.

ಆದರೆ ಅಲ್ಲಿಯವರೆಗೂ ನಮ್ಮ ಖಾಸಗಿತನದ ಜವಾಬ್ದಾರಿ ನಮ್ಮದೇ. ಸಿಕ್ಕಸಿಕ್ಕ ತಾಣಗಳಲ್ಲೆಲ್ಲ ನಮ್ಮ ಮಾಹಿತಿಯನ್ನು ಹಂಚಿಕೊಳ್ಳುವ, ಸುರಕ್ಷತಾ ಕ್ರಮಗಳನ್ನು ಅನುಸರಿಸದ ಜಾಲತಾಣಗಳನ್ನು ಬಳಸುವ ಬಗೆಗೆ ನಾವು ಎಚ್ಚರದಿಂದಿರಬೇಕು. ಹಾಗೊಮ್ಮೆ ನಮ್ಮ ಮಾಹಿತಿಯನ್ನು ಹಂಚಿಕೊಳ್ಳುವುದೇ ಆದರೂ ಆ ಮಾಹಿತಿಯನ್ನು ಯಾರು ನೋಡಬಹುದು ಎನ್ನುವುದನ್ನು ಆಯಾ ತಾಣದ ಸುರಕ್ಷತಾ ಆಯ್ಕೆಗಳಲ್ಲಿ ನಿಗದಿಪಡಿಸುವುದು ಅತ್ಯಗತ್ಯ. ಈ ಹೆಜ್ಜೆ ಬಹುತೇಕ ಸಂದರ್ಭಗಳಲ್ಲಿ ನಮ್ಮ ಮಾಹಿತಿಯನ್ನು ಜೋಪಾನವಾಗಿಡುತ್ತದೆಯಾದರೂ ಜಾಲತಾಣವೇ ಸೈಬರ್ ದಾಳಿಗೆ ಗುರಿಯಾದ ಸಂದರ್ಭದಲ್ಲಿ ನಮ್ಮ ಮಾಹಿತಿಯ ಸುರಕ್ಷತೆ ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ ಎನ್ನುವುದು ಕೂಡ ನಮಗೆ ತಿಳಿದಿರಬೇಕು.

ಆ ದೃಷ್ಟಿಯಿಂದ, ನಮ್ಮ ದೇಶದಲ್ಲಿ ರಿಸರ್ವ್ ಬ್ಯಾಂಕ್ ಪರಿಚಯಿಸುತ್ತಿರುವ ಟೋಕನೈಸೇಶನ್‌‌ನಂತಹ ಪರಿಕಲ್ಪನೆಗಳು ಮಹತ್ವಪೂರ್ಣವೆನಿಸುತ್ತವೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮಾಹಿತಿಯನ್ನು ಜಾಲತಾಣಗಳಲ್ಲಿ ಉಳಿಸಿಡಬೇಕಾದಾಗ 'ಟೋಕನ್'‌ಗಳೆಂಬ ಸಂಕೇತದ ರೂಪಕ್ಕೆ ಬದಲಿಸುವುದರಿಂದ ಆ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನುವುದು ಈ ಪರಿಕಲ್ಪನೆಯ ಹೂರಣ. ಟೋಕನೈಸೇಶನ್‌ ಅನುಷ್ಠಾನಕ್ಕೆ ಹೆಚ್ಚಿನ ಸಮಯ ಬೇಕಿದೆ ಎಂದು ಎಲ್ಲರೂ ಹೇಳುತ್ತಿರುವ ಹಾಗೆಯೇ, ಇಂತಹ ವ್ಯವಸ್ಥೆಗಳು ನಮ್ಮ ಎಲ್ಲ ಖಾಸಗಿ ಮಾಹಿತಿಯನ್ನು ಒಳಗೊಳ್ಳುವುದಕ್ಕೂ ಸಾಕಷ್ಟು ಸಮಯ ಬೇಕಿದೆ. ಅಲ್ಲಿಯವರೆಗೆ, ನಮ್ಮ ಆನ್‌ಲೈನ್ ಸುರಕ್ಷತೆಯನ್ನು ನಾವೇ ನೋಡಿಕೊಳ್ಳಬೇಕಿದೆ!

ಡಿಸೆಂಬರ್ ೨೮, ೨೦೨೧ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ, 'ಟೆಕ್ ನೋಟ' ಅಂಕಣದ ಹತ್ತನೆಯ ಬರಹ

<div class="paragraphs"><p>'ಟೆಕ್ ನೋಟ' ಅಂಕಣದ ಹತ್ತನೆಯ ಬರಹ</p></div>

'ಟೆಕ್ ನೋಟ' ಅಂಕಣದ ಹತ್ತನೆಯ ಬರಹ

ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com