ತಮ್ಮ ಖಾಸಗಿ ವಿಷಯಗಳನ್ನು ಬೇರೆಯವರೊಡನೆ ಹಂಚಿಕೊಳ್ಳದಿರುವುದು ಮನುಷ್ಯರ ಸಾಮಾನ್ಯ ಅಭ್ಯಾಸ. ಆದರೆ ಡಿಜಿಟಲ್ ಜಗತ್ತಿನಲ್ಲಿ ಪರಿಸ್ಥಿತಿ ಹೀಗಿಲ್ಲ. ಇಲ್ಲಿ ನಮ್ಮ ಖಾಸಗಿ ವಿಷಯಗಳನ್ನು ತಿಳಿದುಕೊಳ್ಳಲು ಬಯಸುವವರ ಸಂಖ್ಯೆಯೂ ಹೆಚ್ಚು, ಹಿಂದೆಮುಂದೆ ನೋಡದೆ ಅವನ್ನು ಹಂಚಿಕೊಳ್ಳುವವರ ಸಂಖ್ಯೆಯೂ ಹೆಚ್ಚು!
ನಮ್ಮ ಅನೇಕ ವಿವರಗಳು ಡಿಜಿಟಲ್ ಜಗತ್ತಿನಲ್ಲಿರುತ್ತವೆ. ಈ ಪೈಕಿ ಕೆಲವನ್ನು (ಉದಾ: ಫೇಸ್‌ಬುಕ್ ಪೋಸ್ಟು) ನಾವೇ ಸೇರಿಸಿರುತ್ತೇವೆ. ಇನ್ನು ಕೆಲ ವಿವರಗಳನ್ನು ಬೇರೆಯವರು (ಉದಾ: ನಾವು ಬಳಸುವ ಆಪ್‌ಗಳು) ಸಂಗ್ರಹಿಸಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇದು ನಮ್ಮ ಸಹಾಯಕ್ಕೇ ಬರುತ್ತದೆ. ಉದಾಹರಣೆಗೆ, ನಾವು ಎಲ್ಲಿಗೆ ಹೊರಟಿದ್ದೇವೆಂದು ತಿಳಿದುಕೊಂಡ ಗೂಗಲ್ ಮ್ಯಾಪ್ಸ್, ಕಡಿಮೆ ಟ್ರಾಫಿಕ್ಕಿನಲ್ಲಿ ಅಲ್ಲಿಗೆ ತಲುಪುವ ದಾರಿ ತೋರಿಸಿಕೊಡುತ್ತದೆ.
ಆದರೆ, ನಮ್ಮ ಖಾಸಗಿ ದತ್ತಾಂಶ ಖದೀಮರ ಕೈಸೇರಿದರೆ ಅಪಾಯಕಾರಿಯೂ ಆಗಬಲ್ಲದು. ಆದ್ದರಿಂದಲೇ ಇಂದು ದತ್ತಾಂಶದ ಗೋಪ್ಯತೆಗೆ (ಡೇಟಾ ಪ್ರೈವೆಸಿ) ಎಲ್ಲಿಲ್ಲದ ಮಹತ್ವ. ಡಿಜಿಟಲ್ ಜಗತ್ತಿನಲ್ಲಿ ಸರಾಗವಾಗಿ ವ್ಯವಹರಿಸುವುದು ಎಷ್ಟು ಮುಖ್ಯವೋ ನಮ್ಮ ದತ್ತಾಂಶವನ್ನು ಜೋಪಾನವಾಗಿಟ್ಟುಕೊಳ್ಳುವುದೂ ಇದೀಗ ಅಷ್ಟೇ ಮುಖ್ಯವಾಗಿದೆ. ಇದು ಎಲ್ಲರಿಗೂ ತಿಳಿಯಬೇಕು ಎನ್ನುವ ಉದ್ದೇಶದ ಹಲವು ಪ್ರಯತ್ನಗಳೂ ಅಲ್ಲಲ್ಲಿ ನಡೆಯುತ್ತಿವೆ. ಜನವರಿ ೨೮ನೇ ತಾರೀಕಿನಂದು ಆಚರಿಸಲಾಗುವ ಡೇಟಾ ಪ್ರೈವೆಸಿ ದಿನ ಕೂಡ ಅಂತಹುದೇ ಒಂದು ಪ್ರಯತ್ನ.
ದತ್ತಾಂಶವನ್ನು ಸುರಕ್ಷಿತವಾಗಿಟ್ಟುಕೊಳ್ಳುವ (ಡೇಟಾ ಪ್ರೊಟೆಕ್ಷನ್) ದೃಷ್ಟಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ಬಂದ ಮೊದಲ ಒಪ್ಪಂದ ಎಂಬ ಹೆಗ್ಗಳಿಕೆ ೧೯೮೧ರಲ್ಲಿ ಐರೋಪ್ಯ ಪರಿಷತ್ತು ಪರಿಚಯಿಸಿದ 'Convention 108'ಕ್ಕೆ ಸಲ್ಲುತ್ತದೆ. ಈ ಒಪ್ಪಂದವನ್ನು ಆ ವರ್ಷದ ಜನವರಿ ೨೮ರಂದು ಪರಿಚಯಿಸಲಾಗಿತ್ತು ಎನ್ನುವ ಕಾರಣದಿಂದ ಈ ದಿನವನ್ನು ಯುರೋಪಿನಲ್ಲಿ ಡೇಟಾ ಪ್ರೊಟೆಕ್ಷನ್ ದಿನವನ್ನಾಗಿ, ಇತರೆಡೆಗಳಲ್ಲಿ ಡೇಟಾ ಪ್ರೈವೆಸಿ ದಿನವನ್ನಾಗಿ ಆಚರಿಸಲಾಗುತ್ತದೆ.
ನಮ್ಮ ದತ್ತಾಂಶವನ್ನು ನಾವು ಜೋಪಾನ ಮಾಡಿಕೊಳ್ಳಬೇಕು ಎನ್ನುವುದನ್ನು ನಾವು ಕೇಳುತ್ತಲೇ ಇರುತ್ತೇವೆ. ಅದಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳೂ (ಸಂಶಯಾಸ್ಪದ ಸಂದೇಶಗಳಿಗೆ ಉತ್ತರಿಸದಿರುವುದು, ಕುತಂತ್ರಾಂಶಗಳು ಬಾರದಂತೆ ನೋಡಿಕೊಳ್ಳುವುದು, ಖಾಸಗಿ ವಿವರಗಳನ್ನು ಸಿಕ್ಕಸಿಕ್ಕಲ್ಲೆಲ್ಲ ಹಂಚಿಕೊಳ್ಳದಿರುವುದು ಇತ್ಯಾದಿ) ನಮಗೆ ಗೊತ್ತಿವೆ.
ಇಷ್ಟನ್ನು ಮಾಡಿಬಿಟ್ಟರೆ ನಮ್ಮ ದತ್ತಾಂಶ ಜೋಪಾನವಾಗಿರುತ್ತದೆಯೇ? ಹಾಗೇನಿಲ್ಲ. ಏಕೆಂದರೆ, ದತ್ತಾಂಶ ಗೋಪ್ಯತೆ ಕೇವಲ ನಮ್ಮ ಜವಾಬ್ದಾರಿಯಷ್ಟೇ ಅಲ್ಲ. ನಮ್ಮ ದತ್ತಾಂಶವನ್ನು ಅಧಿಕೃತವಾಗಿ ಪಡೆದು ಬಳಸುವ ಸಂಸ್ಥೆಗಳೂ ಅದನ್ನು ಜೋಪಾನವಾಗಿ ನೋಡಿಕೊಳ್ಳಬೇಕಾಗುತ್ತದೆ. ಎಂಬತ್ತರ ದಶಕದಲ್ಲೇ ಬಂದ Convention 108ನಿಂದ ಪ್ರಾರಂಭಿಸಿ ಇಂದಿನವರೆಗೆ ವಿಶ್ವದೆಲ್ಲೆಡೆ ಹಲವು ಸರಕಾರಗಳು ಈ ಕುರಿತ ನಿಯಮ ನಿಬಂಧನೆಗಳನ್ನು ರೂಪಿಸಿವೆ. ಐರೋಪ್ಯ ಒಕ್ಕೂಟದಲ್ಲಿ ಜಾರಿಯಾಗಿರುವ General Data Protection Regulation (GDPR), ನಮ್ಮ ದೇಶದ Digital Personal Data Protection (DPDP) Act ಮುಂತಾದವೆಲ್ಲ ಇದಕ್ಕೆ ಉದಾಹರಣೆಗಳು.

