ಕಂಪ್ಯೂಟರ್ ಹಾಗೂ ಮೊಬೈಲುಗಳೊಡನೆ ಸಂವಹನ ನಡೆಸಲು ನಾವು ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಬಳಸುತ್ತೇವೆ
ಕಂಪ್ಯೂಟರ್ ಹಾಗೂ ಮೊಬೈಲುಗಳೊಡನೆ ಸಂವಹನ ನಡೆಸಲು ನಾವು ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಬಳಸುತ್ತೇವೆ|Brochure vector created by katemangostar - www.freepik.com
ಟೆಕ್‌ ಲೋಕ

ಡಿಜಿಟಲ್ ಸಂವಹನದ ಹಲವು ಅವತಾರ

ವ್ಯಕ್ತಿಗಳ ಜೊತೆ ಮಾತಾಡಿದಂತೆ ಯಂತ್ರಗಳ ಜೊತೆಗೂ ಮಾತನಾಡುವುದು ಸಾಧ್ಯವಿಲ್ಲವೇ?

ಟಿ. ಜಿ. ಶ್ರೀನಿಧಿ

ಕಂಪ್ಯೂಟರಿನ ಜೊತೆ ವ್ಯವಹಾರ ಎಂದ ತಕ್ಷಣ ನಮಗೆ ಅದರ ಕೀಲಿಮಣೆ ಮತ್ತು ಮೌಸ್ ನೆನಪಾಗುತ್ತವೆ. ಮೊಬೈಲ್ ಫೋನ್ ಜೊತೆಗೆ ವ್ಯವಹರಿಸುವಾಗಲೂ ಅಷ್ಟೇ - ಫೀಚರ್ ಫೋನಿನ ಭೌತಿಕ ಕೀಲಿಮಣೆಯನ್ನೋ ಸ್ಮಾರ್ಟ್‌ಫೋನಿನ ವರ್ಚುಯಲ್ ಕೀಲಿಮಣೆಯನ್ನೋ ನಾವು ಬಳಸಿಯೇ ಬಳಸುತ್ತೇವೆ.

ಕ್ಯಾಲ್ಕ್ಯುಲೇಟರ್ ಕಾಲದಿಂದ ಕಂಪ್ಯೂಟರಿನವರೆಗೆ ಏನೆಲ್ಲಾ ಬದಲಾವಣೆಗಳಾಗಿದ್ದರೂ ಹೆಚ್ಚಿನ ವ್ಯತ್ಯಾಸಗಳಾಗದಿರುವುದು ಇದೊಂದು ವಿಷಯದಲ್ಲಿ ಮಾತ್ರವೇ ಇರಬೇಕು. ಕಂಪ್ಯೂಟರ್ ಹಾಗೂ ಮೊಬೈಲುಗಳನ್ನು ಬಳಸಿ ಅತ್ಯಂತ ಸಂಕೀರ್ಣವಾದ ಕೆಲಸಗಳನ್ನು ಸಾಧಿಸಿಕೊಳ್ಳುವ ಸಾಧ್ಯತೆ ಇರುವ ಇಂದಿನ ಕಾಲದಲ್ಲೂ, ನಾವು ಅವುಗಳೊಡನೆ ಸಂವಹನ ನಡೆಸಲು ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಬಳಸುತ್ತೇವೆ. ಮೇಲೆ ಹೇಳಿದ ಕೀಲಿಮಣೆ ಕುಟ್ಟುವ, ಟಚ್ ಸ್ಕ್ರೀನ್ ಮುಟ್ಟುವ ನಿದರ್ಶನಗಳೆಲ್ಲ ಈ ನಾನ್-ವರ್ಬಲ್ ಸಂವಹನದ ಉದಾಹರಣೆಗಳೇ.

ಇದೇಕೆ ಹೀಗೆ? ವ್ಯಕ್ತಿಗಳ ಜೊತೆ ಮೌಖಿಕ (ವರ್ಬಲ್) ಸಂವಹನ ನಡೆಸುವಂತೆ ಯಂತ್ರಗಳ ಜೊತೆಗೂ ಮಾತನಾಡುವುದು, ಬೈಟು ಕಾಫಿ ಬೇಕೆಂದು ಹೋಟಲಿನವರಿಗೆ ಹೇಳುವಂತೆ ಮನೆಗೆ ಫೋನ್ ಮಾಡೆಂದು ಮೊಬೈಲಿಗೂ ಹೇಳುವುದು ಸಾಧ್ಯವಿಲ್ಲವೇ?

ಖಂಡಿತಾ ಸಾಧ್ಯವಿದೆ. ಧ್ವನಿ ಗುರುತಿಸುವಿಕೆ (ಸ್ಪೀಚ್ ರೆಕಗ್ನಿಶನ್) ಎಂಬ ತಂತ್ರಜ್ಞಾನದ ಸಹಾಯದಿಂದ ನಾವು ಯಂತ್ರಗಳ ಜೊತೆಗೂ ಮಾತನಾಡಬಹುದು. ನಾವು ಏನು ಹೇಳುತ್ತಿದ್ದೇವೆ ಎಂದು ಗುರುತಿಸಿ, ಅದನ್ನು ಅರ್ಥೈಸಿಕೊಂಡು, ನಿರ್ದಿಷ್ಟ ಕೆಲಸ ಕೈಗೊಳ್ಳುವಂತೆ ಕಂಪ್ಯೂಟರಿಗೋ ಮೊಬೈಲಿಗೋ ನಿರ್ದೇಶನ ನೀಡುವುದನ್ನು ಈ ತಂತ್ರಜ್ಞಾನ ಸಾಧ್ಯವಾಗಿಸುತ್ತದೆ.

ಕಂಪ್ಯೂಟರ್ ಜೊತೆ ಮಾತು

ಸಾಧನಗಳನ್ನು, ತಂತ್ರಾಂಶಗಳನ್ನು ಹೆಚ್ಚು ಗ್ರಾಹಕ ಸ್ನೇಹಿಯಾಗಿಸುವಲ್ಲಿ, ಬಳಕೆದಾರರ ಉತ್ಪಾದಕತೆ ಹೆಚ್ಚಿಸುವಲ್ಲಿ ಈ ತಂತ್ರಜ್ಞಾನದ ಪಾತ್ರ ಮಹತ್ವದ್ದು. ದೈಹಿಕ ಸಮಸ್ಯೆಗಳಿಂದ ಕೀಬೋರ್ಡ್-ಮೌಸ್ ಇತ್ಯಾದಿಗಳನ್ನು ಬಳಸಲು ಸಾಧ್ಯವಿಲ್ಲದವರಿಗೂ ಇದು ಅನುಕೂಲಕರ.

ವಾಹನ ಚಲಾಯಿಸುವಾಗ ಒಂದು ಕೈಯಲ್ಲಿ ಮೊಬೈಲ್ ಬಳಸಿ ಅಪಘಾತಕ್ಕೆ ಈಡಾಗುವುದನ್ನು ತಪ್ಪಿಸಲೂ ಈ ತಂತ್ರಜ್ಞಾನ ಸಹಕಾರಿ. ಆಪಲ್‌ನ 'ಸಿರಿ', ಆಂಡ್ರಾಯ್ಡ್‌ನ 'ಗೂಗಲ್ ಅಸಿಸ್ಟೆಂಟ್'‌ನಂತಹ ಸವಲತ್ತುಗಳು ಈ ತಂತ್ರಜ್ಞಾನ ಬಳಸಿಕೊಂಡು ಮೊಬೈಲನ್ನು ಮುಟ್ಟದೆಯೇ ಕರೆಮಾಡುವುದನ್ನು, ಸಂದೇಶ ಕಳಿಸುವುದನ್ನು, ದಾರಿ ಕೇಳುವುದನ್ನೆಲ್ಲ ಸಾಧ್ಯವಾಗಿಸುತ್ತವೆ. ವಾಹನ ಚಲಾಯಿಸುವಾಗಷ್ಟೇ ಏಕೆ, ಅಡುಗೆ ಮಾಡುವಾಗ - ಕೈತೋಟದಲ್ಲಿ ಕೆಲಸ ಮಾಡುವಾಗ ಕೂಡ ಈ ಸವಲತ್ತುಗಳು ನಮಗೆ ಸಹಾಯ ಮಾಡಬಲ್ಲವು!

ಧ್ವನಿರೂಪದ ಮಾಹಿತಿಯನ್ನು (ದೂರವಾಣಿ ಕರೆ, ಭಾಷಣ ಇತ್ಯಾದಿ) ಪಠ್ಯರೂಪಕ್ಕೆ ಪರಿವರ್ತಿಸುವಲ್ಲೂ ಧ್ವನಿ ಗುರುತಿಸುವಿಕೆ ಉಪಯುಕ್ತ. ನಮ್ಮ ಮಾತುಗಳನ್ನು ಬೇರೆಯವರಿಂದ ಬರೆಸುವುದಕ್ಕೆ (ಉಕ್ತಲೇಖನ) ಯಾಂತ್ರಿಕ ಪರ್ಯಾಯವಾದ ಇಂತಹ ತಂತ್ರಾಂಶಗಳನ್ನು 'ಸ್ಪೀಚ್ ಟು ಟೆಕ್ಸ್ಟ್' ತಂತ್ರಾಂಶಗಳೆಂದು ಕರೆಯುತ್ತಾರೆ. ಬೇರೊಬ್ಬ ವ್ಯಕ್ತಿ ಬರೆದುಕೊಳ್ಳುವ ಬದಲಿಗೆ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್ ಇಲ್ಲಿ ಆ ಕೆಲಸ ಮಾಡುತ್ತದೆ ಎನ್ನುವುದಷ್ಟೇ ವ್ಯತ್ಯಾಸ.

ಅಂದಹಾಗೆ ಧ್ವನಿ ಗುರುತಿಸುವಿಕೆಯ ಸವಲತ್ತು ಬರಿಯ ಕಂಪ್ಯೂಟರು-ಮೊಬೈಲುಗಳಿಗೆ ಮಾತ್ರವೇ ಸೀಮಿತವೇನಲ್ಲ. ಈಚೆಗೆ ಜನಪ್ರಿಯತೆ ಗಳಿಸಿಕೊಳ್ಳುತ್ತಿರುವ ಅಮೆಜಾನ್ ಎಕೋ, ಗೂಗಲ್ ಹೋಮ್ ಮುಂತಾದ ಸ್ಮಾರ್ಟ್ ಸಹಾಯಕ ಯಂತ್ರಗಳೂ ಈ ತಂತ್ರಜ್ಞಾನವನ್ನು ಬಳಸುತ್ತವೆ. ಧ್ವನಿರೂಪದ ಆದೇಶ ಪಡೆದುಕೊಳ್ಳುವ ಈ ಯಂತ್ರಗಳು ಅದಕ್ಕೆ ಧ್ವನಿರೂಪದಲ್ಲೇ ಪ್ರತಿಕ್ರಿಯೆಯನ್ನೂ ನೀಡಬಲ್ಲವು ಎನ್ನುವುದು ವಿಶೇಷ.

ಕಣ್ಸನ್ನೆ ಗ್ರಹಿಸುವ ತಂತ್ರಜ್ಞಾನ

ಭೌತಿಕ ಜಗತ್ತಿನ ಸಂವಹನದಲ್ಲಿ ಧ್ವನಿಯ ಜೊತೆಗೆ ನಮ್ಮ ದೇಹದ ಭಾವ-ಭಂಗಿಗಳೂ (ಬಾಡಿ ಲ್ಯಾಂಗ್ವೆಜ್) ಪ್ರಮುಖ ಪಾತ್ರವಹಿಸುತ್ತದೆ. ಇದೇ ರೀತಿ ಡಿಜಿಟಲ್ ಜಗತ್ತಿನಲ್ಲೂ ನಾವು ಕೈಸನ್ನೆ - ಕಣ್ಸನ್ನೆಗಳನ್ನು ಬಳಸಲು 'ಜೆಸ್ಚರ್ ಕಂಟ್ರೋಲ್' ಎಂಬ ಪರಿಕಲ್ಪನೆ ಅನುವುಮಾಡಿಕೊಡುತ್ತದೆ. ಅಂಗಾಂಗಗಳ ಚಲನೆಯ ಮೂಲಕ ನಾವು ನೀಡುವ ಸಂಕೇತಗಳನ್ನು ಕಂಪ್ಯೂಟರ್-ಮೊಬೈಲ್ ಮುಂತಾದ ಯಂತ್ರಗಳು ಗ್ರಹಿಸಿ, ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡುವುದು ಇದರಿಂದ ಸಾಧ್ಯವಾಗುತ್ತದೆ.

ಕ್ಯಾಮೆರಾ ಮೂಲಕ ನಮ್ಮ ಕೈಗಳ ಚಲನೆಯನ್ನು ಗಮನಿಸಿಕೊಂಡು ಬೇರೆಬೇರೆ ಸನ್ನೆಗಳಿಗೆ ಪ್ರತಿಯಾಗಿ ಬೇರೆಬೇರೆ ಕೆಲಸಗಳನ್ನು ಮಾಡುವ (ಮುಂದಿನ ಚಿತ್ರ ತೋರಿಸು, ವಾಲ್ಯೂಂ ಹೆಚ್ಚಿಸು, ಮ್ಯೂಟ್ ಮಾಡು ಇತ್ಯಾದಿ) ತಂತ್ರಜ್ಞಾನವನ್ನು ಈಗಾಗಲೇ ಹಲವು ಸಾಧನಗಳಲ್ಲಿ ಬಳಸಲಾಗುತ್ತಿದೆ. ಸನ್ನೆಗಳ ಮೂಲಕ ಸ್ಮಾರ್ಟ್‌ಫೋನ್ ಚಟುವಟಿಕೆ ನಿಯಂತ್ರಿಸುವ ಹಲವು ಆಯ್ಕೆಗಳೂ ಇವೆ. ಮೌಸ್ ಬಳಸುವ ವ್ಯವಸ್ಥೆಗಳನ್ನು 'ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್' (ಜಿಯುಐ) ಎಂದು ಕರೆದಂತೆ ಜೆಸ್ಚರ್ ಕಂಟ್ರೋಲ್ ಸೌಲಭ್ಯವಿರುವ ಇಂತಹ ವ್ಯವಸ್ಥೆಗಳನ್ನು 'ನ್ಯಾಚುರಲ್ ಯೂಸರ್ ಇಂಟರ್‌ಫೇಸ್' ಎಂದು ಕರೆಯುತ್ತಾರೆ.

ಬೆರಳೊತ್ತೂ ಗೊತ್ತು!

ಧ್ವನಿಯನ್ನು, ಅಂಗಾಂಗಗಳ ಚಲನೆಯನ್ನು ಗ್ರಹಿಸಿದ ಹಾಗೆ ಪ್ರತಿ ವ್ಯಕ್ತಿಗೂ ವಿಶಿಷ್ಟವಾಗಿರುವ ಬೆರಳ ಗುರುತು, ಅಕ್ಷಿಪಟಲ ಮುಂತಾದವನ್ನೂ ಯಂತ್ರಗಳು ಗುರುತಿಸಬಲ್ಲವು. ಸುರಕ್ಷತಾ ಕ್ರಮಗಳ ಅಂಗವಾಗಿ ಈ ವೈಶಿಷ್ಟ್ಯಗಳನ್ನು ಬಳಸುವುದೇ 'ಬಯೋಮೆಟ್ರಿಕ್ಸ್'ನ ಹೂರಣ.

ಡಿಜಿಟಲ್ ಜಗತ್ತಿನಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಪಾಸ್‌ವರ್ಡ್, ಪಿನ್ ಅಥವಾ ವಿನ್ಯಾಸಗಳ (ವಿನ್ಯಾಸ) ಬದಲು ನಮ್ಮ ಬೆರೆಳೊತ್ತನ್ನು (ಫಿಂಗರ್‌ಪ್ರಿಂಟ್) ಬಳಸುವ ವ್ಯವಸ್ಥೆ ಹಲವಾರು ಕಡೆ ಇರುತ್ತದಲ್ಲ, ಅದು ಬಯೋಮೆಟ್ರಿಕ್ಸ್‌ನದೇ ಉದಾಹರಣೆ. ಸಹಿ ಹಾಕಲು ಬಾರದವರು ತಮ್ಮ ಎಡಗೈ ಹೆಬ್ಬೆರಳಿನ ಗುರುತನ್ನೇ ಸಹಿಯಂತೆ ಬಳಸುತ್ತಿದ್ದ ಹಾಗೆ, ಗುರುತಿನ ರುಜುವಾತಿಗಾಗಿ ನಮ್ಮ ಬೆರಳೊತ್ತನ್ನು ಬಳಸುವುದನ್ನು ಇದು ಸಾಧ್ಯವಾಗಿಸುತ್ತದೆ.

ಇದೇ ರೀತಿ 'ಫೇಸ್ ರೆಕಗ್ನಿಶನ್' ಬಳಸಿ ಮುಖಚರ್ಯೆಯನ್ನೂ ಗುರುತಿಸಬಹುದು. ಮೂಗಿನ ಉದ್ದ-ಅಗಲ, ಕಣ್ಣಿನ ಸ್ಥಾನ, ಕೆನ್ನೆಯೆಲುಬಿನ ಆಕಾರ - ಹೀಗೆ ಮುಖದ ಅನೇಕ ಲಕ್ಷಣಗಳನ್ನು ದಾಖಲಿಸಿಕೊಂಡು ಗುರುತು ದೃಢೀಕರಣಕ್ಕಾಗಿ ಬಳಸುವುದು ಈ ತಂತ್ರಜ್ಞಾನದ ವೈಶಿಷ್ಟ್ಯ (ಹೀಗೆ ದಾಖಲಿಸಿಕೊಳ್ಳುವ ಮಾಹಿತಿಯನ್ನು 'ಫೇಸ್‌ಪ್ರಿಂಟ್' ಎಂದೂ ಗುರುತಿಸಲಾಗುತ್ತದೆ). ಒಮ್ಮೆ ಈ ಮಾಹಿತಿಯನ್ನೆಲ್ಲ ದಾಖಲಿಸಿಕೊಂಡಮೇಲೆ ಕ್ಯಾಮೆರಾ ಎದುರಿನ ವ್ಯಕ್ತಿಯ ಮುಖವನ್ನು ಇದರೊಡನೆ ಹೋಲಿಸಿನೋಡಿ ಅವರನ್ನು ಗುರುತಿಸುವುದು ಸಾಧ್ಯವಾಗುತ್ತದೆ. ಸುರಕ್ಷತಾ ಕ್ರಮಗಳ ಅಂಗವಾಗಿ, ಹಣಕಾಸು ವ್ಯವಹಾರಗಳನ್ನು ದೃಢೀಕರಿಸಲು, ಗುಂಪಿನಲ್ಲಿರುವ ವ್ಯಕ್ತಿಗಳನ್ನು ಗುರುತಿಸಲು - ಹೀಗೆ ಈ ತಂತ್ರಜ್ಞಾನ ಹಲವಾರು ಉದ್ದೇಶಗಳಿಗಾಗಿ ಬಳಕೆಯಾಗುತ್ತದೆ. ಸಮಾಜಜಾಲದಲ್ಲಿ ಸೇರಿಸುವ ಚಿತ್ರಗಳಲ್ಲಿ ಯಾರಿದ್ದಾರೆ ಎಂದು ಊಹಿಸಿ ಹೇಳುತ್ತದಲ್ಲ, ಅದೂ ಈ ತಂತ್ರಜ್ಞಾನದ್ದೇ ಇನ್ನೊಂದು ರೂಪ.

ಜುಲೈ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

ಇಜ್ಞಾನ Ejnana
www.ejnana.com