ಬೆಂಗಳೂರು ಟೆಕ್ ಶೃಂಗ: ಗಮನಸೆಳೆದ ಸಂವಾದಗಳು
ಇದೇ ಮೊದಲ ಬಾರಿಗೆ ವರ್ಚುಯಲ್ ರೂಪದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಟೆಕ್ ಸಮ್ಮಿಟ್ ೨೦೨೦, ನವೆಂಬರ್ ೧೯ರಿಂದ ೨೧ರವರೆಗೆ ನಡೆಯಿತುBTS2020

ಬೆಂಗಳೂರು ಟೆಕ್ ಶೃಂಗ: ಗಮನಸೆಳೆದ ಸಂವಾದಗಳು

ಬೆಂಗಳೂರು ಟೆಕ್ ಸಮ್ಮಿಟ್ ೨೦೨೦ ಇಂದು ಮುಕ್ತಾಯವಾಗಿದೆ. ಮೂರು ದಿನಗಳ ಈ ಕಾರ್ಯಕ್ರಮ ಹಲವು ಕುತೂಹಲಕರ ಸಂವಾದಗಳಿಗೆ ಸಾಕ್ಷಿಯಾಗಿತ್ತು. ಅಲ್ಲಿ ಯಾವೆಲ್ಲ ವಿಷಯಗಳು ಚರ್ಚೆಯಾದವು? ಇಜ್ಞಾನ ತಂಡ ಹೆಕ್ಕಿ ತಂದ ಮುಖ್ಯಾಂಶಗಳು ಇಲ್ಲಿವೆ!

ಮೂರು ದಿನಗಳಿಂದ ನಡೆಯುತ್ತಿದ್ದ, ಇದೇ ಮೊದಲ ಬಾರಿಗೆ ವರ್ಚುಯಲ್ ರೂಪದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಟೆಕ್ ಸಮ್ಮಿಟ್ ೨೦೨೦ ಇಂದು (ನ.೨೧) ಮುಕ್ತಾಯವಾಗಿದೆ. ಮೂರು ದಿನಗಳ ಈ ಕಾರ್ಯಕ್ರಮ ಹಲವು ಕುತೂಹಲಕರ ಚರ್ಚೆಗಳಿಗೆ, ಸಂವಾದಗಳಿಗೆ ಸಾಕ್ಷಿಯಾಗಿತ್ತು. ಆ ಪೈಕಿ ಹಲವು ಸಂವಾದಗಳ ಸಾರಾಂಶ ಇಲ್ಲಿದೆ:

೧. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತ ಸಂವಾದ

ಬೆಂಗಳೂರು ಟೆಕ್ ಸಮ್ಮಿಟ್‌ನ ಮೊದಲ ದಿನ ನಡೆದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಕುರಿತ ಸಂವಾದದಲ್ಲಿ 'ಬಿಸಿನೆಸ್ ಫಿನ್‌ಲ್ಯಾಂಡ್' ಹಾಗೂ ಭಾರತದ 'ಸೆಂಟರ್ ಫಾರ್ ಎಕ್ಸೆಲೆನ್ಸ್ ಫಾರ್ ಡೇಟಾ ಸೈನ್ಸ್ ಆಂಡ್ ಎಐ' ನಡುವೆ ಸಹಯೋಗಕ್ಕಾಗಿ ಒಪ್ಪಂದವನ್ನು ಘೋಷಿಸಲಾಯಿತು. ಕರ್ನಾಟಕ ಸರಕಾರ ಹಾಗೂ ನ್ಯಾಸ್‌ಕಾಮ್ ಸಹಭಾಗಿತ್ವದಲ್ಲಿ ರೂಪಿಸಲಾಗಿರುವ ಸೆಂಟರ್ ಫಾರ್ ಎಕ್ಸೆಲೆನ್ಸ್ ಸಂಸ್ಥೆಯು ಡೇಟಾ ಸೈನ್ಸ್ ಹಾಗೂ ಎಐ ಕ್ಷೇತ್ರಗಳಲ್ಲಿ ಕೌಶಲಾಭಿವೃದ್ಧಿ, ಸಂಶೋಧನೆ ಮತ್ತು ಬೆಳವಣಿಗೆಗಾಗಿ ಫಿನ್‌ಲ್ಯಾಂಡ್‌ನ ತಜ್ಞರು ಹಾಗೂ ಸಂಸ್ಥೆಗಳೊಡನೆ ಕೆಲಸಮಾಡಲಿದೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕುರಿತ ಸಂವಾದದಲ್ಲಿ ಉದ್ಯಮ ಹಾಗೂ ಸಂಶೋಧನಾ ಕ್ಷೇತ್ರಗಳ ತಜ್ಞರು ಭಾಗವಹಿಸಿದ್ದರು. ಆರೋಗ್ಯ ರಕ್ಷಣೆ ಮತ್ತು ರೀಟೇಲ್ ಉದ್ದಿಮೆಗಳಲ್ಲಿ ಎಐ ವಹಿಸುತ್ತಿರುವ ಪಾತ್ರದ ಬಗ್ಗೆ ಚರ್ಚಿಸಿದ ತಜ್ಞರು ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ ಈ ಕ್ಷೇತ್ರಗಳಲ್ಲಿ ಎಐನ ಮಹತ್ವ ಇನ್ನಷ್ಟು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು. ಮನುಷ್ಯರ ಸಾಮರ್ಥ್ಯವನ್ನು ತಂತ್ರಜ್ಞಾನದ ಸಾಧ್ಯತೆಗಳಿಗೆ ಪೂರಕವಾಗಿ ಬಳಸಿಕೊಳ್ಳುವ 'ಆಗ್‌ಮೆಂಟೆಡ್ ಇಂಟೆಲಿಜೆನ್ಸ್' ಪರಿಕಲ್ಪನೆ ಮುಂದಿನ ದಿನಗಳಲ್ಲಿ ಇನ್ನಷ್ಟು ವ್ಯಾಪಕವಾಗಿ ಬೆಳೆಯಲಿದೆ ಎಂಬ ಅಭಿಪ್ರಾಯ ಈ ಸಂದರ್ಭದಲ್ಲಿ ವ್ಯಕ್ತವಾಯಿತು. ಫಿನ್‌ಲ್ಯಾಂಡ್‌ನಲ್ಲಿರುವ ಸದೃಢ ಹಾಗೂ ಉಚಿತ ಶಿಕ್ಷಣ ವ್ಯವಸ್ಥೆ ತಂತ್ರಜ್ಞಾನ ಕ್ಷೇತ್ರದಲ್ಲಿ ಆ ದೇಶದ ಬೆಳವಣಿಗೆಗೆ ಪೂರಕವಾಗಿದ್ದು, ಅದರಿಂದಾಗಿಯೇ ಅಲ್ಲಿನ ಎಐ ಕ್ಷೇತ್ರವು ಜಾಗತಿಕವಾಗಿ ಮುಂಚೂಣಿ ಸ್ಥಾನದಲ್ಲಿದೆ ಎಂದು ಫಿನ್ನಿಷ್ ಸೆಂಟರ್ ಫಾರ್ ಎಐ‌ನ ಪ್ರತಿನಿಧಿ ಹೇಳಿದರು.

೨. ಗ್ರೀನ್ ರಿಕವರಿ ಮತ್ತು ಸುಸ್ಥಿರ ಭವಿಷ್ಯದಲ್ಲಿ ತಂತ್ರಜ್ಞಾನದ ಪಾತ್ರ

ಬೆಂಗಳೂರು ಟೆಕ್ ಸಮ್ಮಿಟ್‌ನ ಮೊದಲ ದಿನ ಯುನೈಟೆಡ್ ಕಿಂಗ್‍ಡಮ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಗ್ರೀನ್ ರಿಕವರಿ ಮತ್ತು ಸುಸ್ಥಿರ ಭವಿಷ್ಯದಲ್ಲಿ ತಂತ್ರಜ್ಞಾನದ ಪಾತ್ರವನ್ನು ಚರ್ಚಿಸಲಾಯಿತು.

ಮುಂದಿನ ವರ್ಷ ನಡೆಯಲಿರುವ ಯುಎನ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್‌ಗೆ (ಕಾಪ್೨೬) ಪೂರ್ವಸಿದ್ಧತೆಯಾಗಿ, ಪರಿಸರದ ಪುನಶ್ಚೇತನದಲ್ಲಿ ತಂತ್ರಜ್ಞಾನದ ಪಾತ್ರದತ್ತ ನಮ್ಮ ಗಮನ ಕೇಂದ್ರೀಕೃತವಾಗಿರಬೇಕು ಎಂದು ಯುಕೆ ಸರಕಾರದ ಸಚಿವ ಲಾರ್ಡ್ ತಾರಿಕ್ ಅಹಮದ್ ಹೇಳಿದರು. ಕೋವಿಡ್-೧೯ ಜಾಗತಿಕ ಸೋಂಕಿನಿಂದ ವಿಶ್ವದೆಲ್ಲೆಡೆಯ ಅರ್ಥವ್ಯವಸ್ಥೆಗಳು ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಸಿರಾದ, ಸ್ವಚ್ಛ ಹಾಗೂ ಸುಸ್ಥಿರ ಭವಿಷ್ಯವನ್ನು ರೂಪಿಸುವುದು ಹಿಂದೆಂದಿಗಿಂತಲೂ ಅಗತ್ಯವಾಗಿದೆ, ಹವಾಮಾನ ಬದಲಾವಣೆಯನ್ನು ತಡೆಯಲು ತಂತ್ರಜ್ಞಾನದ ಪರಿಣಾಮಕಾರಿ ಬಳಕೆ ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಾ. ಸಿ. ಎನ್. ಅಶ್ವತ್ಥನಾರಾಯಣ, "ಹಸಿರು ತಂತ್ರಜ್ಞಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕೂಡ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಸೌರ ವಿದ್ಯುತ್ ಉತ್ಪಾದನೆ ಹಾಗೂ ಎಲೆಕ್ಟ್ರಿಕ್ ಮೊಬಿಲಿಟಿಯಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ. ಪ್ರಪಂಚದಲ್ಲಿ ಹೊಸತನ ತರುತ್ತಿರುವ ಹಲವು ಚಟುವಟಿಕೆಗಳ ಕೇಂದ್ರಗಳೊಂದಿಗೆ ಕರ್ನಾಟಕ ಸರಕಾರವು 'ಗ್ಲೋಬಲ್ ಇನೊವೇಶನ್ ಅಲಯನ್ಸ್ (ಜಿಐಎ)' ಅನ್ನು ಅಭಿವೃದ್ಧಿಪಡಿಸಿದ್ದು, ಯುಕೆ ಕರ್ನಾಟಕದ ಪ್ರಮುಖ ಪಾಲುದಾರ ರಾಷ್ಟ್ರಗಳಲ್ಲೊಂದಾಗಿದೆ." ಎಂದು ಹೇಳಿದರು.

ಆನಂತರ ನಡೆದ ಚರ್ಚೆಯ ಅಂಗವಾಗಿ ಹಲವು ಸಂಸ್ಥೆಗಳ ಪ್ರಸ್ತುತಿಯನ್ನು ಆಯೋಜಿಸಲಾಗಿತ್ತು. ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಹಸಿ ಕಸದಿಂದ ಸ್ವಚ್ಛ ಇಂಧನ ಹಾಗೂ ಗೊಬ್ಬರ ತಯಾರಿಸುತ್ತಿರುವ 'ಕಾರ್ಬನ್ ಮಾಸ್ಟರ್ಸ್' ಸಂಸ್ಥೆಯ ಪ್ರತಿನಿಧಿಗಳು ಪರಿಸರ ರಕ್ಷಣೆ ಉದ್ದೇಶದ ತಮ್ಮ ಚಟುವಟಿಕೆಗಳಲ್ಲಿ ತಂತ್ರಜ್ಞಾನದ ಮಹತ್ವವನ್ನು ವಿವರಿಸುವ ಮೂಲಕ ಗಮನ ಸೆಳೆದರು. ಹಸಿರು ತಂತ್ರಜ್ಞಾನದ ಅಭಿವೃದ್ಧಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಹಲವು ಕಾರ್ಯಕ್ರಮಗಳನ್ನೂ ಈ ಸಂದರ್ಭದಲ್ಲಿ ಪರಿಚಯಿಸಲಾಯಿತು.

೨೦೨೦ರ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ವರ್ಚುಯಲ್ ರೂಪದಲ್ಲಿ ಆಯೋಜಿಸಲಾಗಿತ್ತು
೨೦೨೦ರ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ವರ್ಚುಯಲ್ ರೂಪದಲ್ಲಿ ಆಯೋಜಿಸಲಾಗಿತ್ತುBTS2020

೩. ಸಾರ್ವಜನಿಕ ಒಳಿತಿಗಾಗಿ ತಂತ್ರಜ್ಞಾನ

ಕೌಶಲ ಹಾಗೂ ದತ್ತಾಂಶದ ದೃಷ್ಟಿಯಿಂದ ಭಾರತ ಜಗತ್ತಿನಲ್ಲೇ ಸಮೃದ್ಧ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುತ್ತದೆ ಎಂದು ಮೆಕಿನ್ಸೆ ಸಂಸ್ಥೆಯ ಹಿರಿಯ ಪಾಲುದಾರ ನೋಶಿರ್ ಕಾಕಾ ಹೇಳಿದರು. ತಂತ್ರಜ್ಞಾನದ ಬಳಕೆ ಹೆಚ್ಚಿದಂತೆ ಅಗತ್ಯ ಕೌಶಲಗಳಿರುವ ಪರಿಣತರ ಕೊರತೆ ಜಗತ್ತಿನಾದ್ಯಂತ ಕಾಣಿಸಿಕೊಳ್ಳಲಿದ್ದು, ಈ ಕೊರತೆಯನ್ನು ತುಂಬಿಕೊಡುವಲ್ಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಬೆಂಗಳೂರು ತಂತ್ರಜ್ಞಾನ ಮೇಳ-೨೦೨೦ರ 'ಸಾರ್ವಜನಿಕ ಒಳಿತಿಗಾಗಿ ತಂತ್ರಜ್ಞಾನ' ಕಾರ್ಯಕ್ರಮದಲ್ಲಿ ಅವರು ಯುವರ್‌ಸ್ಟೋರಿ ಸಂಸ್ಥೆಯ ಸಿಇಓ ಶ್ರದ್ಧಾ ಶರ್ಮಾ ಜೊತೆ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಇಡೀ ವಿಶ್ವದ ಕೌಶಲ ಕಾರ್ಖಾನೆಯಾಗುವ ಸಾಮರ್ಥ್ಯ ಭಾರತಕ್ಕಿದ್ದು, ಸದ್ಯದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರೆ ಡೇಟಾ ಮತ್ತು ಎಐ ಸೇವೆಗಳಲ್ಲಿ ಭಾರತ ಪ್ರಮುಖ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ. ೨೦೨೫ರ ವೇಳೆಗೆ ಭಾರತದ ಅರ್ಥವ್ಯವಸ್ಥೆಯ ಒಟ್ಟು ಮೌಲ್ಯ ೫ ಟ್ರಿಲಿಯನ್ ಡಾಲರ್ ತಲುಪುವಂತೆ ಮಾಡುವಲ್ಲಿ ಈ ತಂತ್ರಜ್ಞಾನಗಳು ಮಹತ್ವದ ಪಾತ್ರ ವಹಿಸಲಿವೆ. ಆ ವೇಳೆಗೆ ಭಾರತದ ನಿರೀಕ್ಷಿತ ಜಿಡಿಪಿ ಹೆಚ್ಚಳದಲ್ಲಿ ತಂತ್ರಜ್ಞಾನದ ಕೊಡುಗೆ ಶೇ.೧೦ಕ್ಕಿಂತ (ಸುಮಾರು ೫೦೦ ಬಿಲಿಯನ್ ಡಾಲರ್) ಹೆಚ್ಚಿರಲಿದೆ. ರೀಟೇಲ್, ಕೃಷಿ, ಬ್ಯಾಂಕಿಂಗ್, ಆರೋಗ್ಯ ರಕ್ಷಣೆ, ಟೆಲಿಕಾಮ್ ಸೇರಿದಂತೆ ಎಲ್ಲ ಕ್ಷೇತ್ರಗಳ ಬೆಳವಣಿಗೆಯಲ್ಲೂ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸಲಿದ್ದು, ಕೃಷಿ ಕ್ಷೇತ್ರ ಒಂದರಿಂದಲೇ ನಾವು ಭಾರತದ ಜಿಡಿಪಿಗೆ ೬೦-೬೫ ಬಿಲಿಯನ್ ಡಾಲರುಗಳ ಹೆಚ್ಚುವರಿ ಕೊಡುಗೆಯನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ಹೇಳಿದರು.

ಸಮಾಜದ ಒಳಿತಿಗಾಗಿ ತಂತ್ರಜ್ಞಾನ ಏನೆಲ್ಲ ಕೊಡುಗೆ ನೀಡಬಹುದು ಎನ್ನುವುದು ಪ್ರಸ್ತುತ ಕೋವಿಡ್-೧೯ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಗಮನಕ್ಕೆ ಬಂದಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳ ಬೆಳವಣಿಗೆಯನ್ನು ನಾವು ಯೋಜಿಸಬೇಕಿದೆ. ವಿಕೋಪ ಪರಿಹಾರ, ಮಾಲಿನ್ಯ ನಿಯಂತ್ರಣ, ನೀರಿನ ನಿರ್ವಹಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಆಧುನಿಕ ತಂತ್ರಜ್ಞಾನವು ಎಲ್ಲರ ಒಳಿತಿಗಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕಾದದ್ದು ನಮ್ಮ ಜವಾಬ್ದಾರಿಯಾಗಿದೆ. ಅರ್ಥವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ಯಮಗಳಿಗೂ ತಂತ್ರಜ್ಞಾನದ ಅನುಕೂಲಗಳು ದೊರಕಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡ ಹಲವು ಉತ್ತಮ ಯೋಜನೆಗಳನ್ನು ರೂಪಿಸುತ್ತಿದ್ದು ಅದಕ್ಕಾಗಿ ಅವರನ್ನು ಅಭಿನಂದಿಸುವುದಾಗಿ ನೋಶೀರ್ ಹೇಳಿದರು.

ಈ ಕಾರ್ಯಕ್ರಮದಲ್ಲಿ ಸೋಶಿಯಲ್ ಆಲ್ಫಾ ಸಂಸ್ಥೆಯ ಮನೋಜ್ ಕುಮಾರ್ ಕೂಡ ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಬೆಳೆಯುತ್ತಿರುವ ಸ್ಟಾರ್ಟಪ್ ವ್ಯವಸ್ಥೆಯು ಸಾಮಾಜಿಕ ಒಳಿತಿಗಾಗಿಯೂ ಕೆಲಸಮಾಡುತ್ತಿದೆ. ಸರಕಾರ ಹಾಗೂ ಸಮಾಜ ಸೇವಾ ಸಂಸ್ಥೆಗಳೊಂದಿಗೆ ನವೋದ್ಯಮಗಳ ಸಹಭಾಗಿತ್ವವು ನಮ್ಮ ದೇಶಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಹಲವು ಪರಿಹಾರಗಳನ್ನು ಒದಗಿಸಬಹುದು, ಇದನ್ನು ಸಾಧ್ಯವಾಗಿಸಲು ಕರ್ನಾಟಕದಲ್ಲಿ ಹಲವು ಪ್ರಯತ್ನಗಳು ನಡೆದಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

೪. ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ ಬಾಹ್ಯಾಕಾಶ ತಂತ್ರಜ್ಞಾನ ಸಹಯೋಗ

ಬಾಹ್ಯಾಕಾಶ ಕ್ಷೇತ್ರವು ಜಗತ್ತಿನಾದ್ಯಂತ ಹಲವು ದೇಶಗಳ ಅರ್ಥವ್ಯವಸ್ಥೆಗೆ ಕೊಡುಗೆ ನೀಡುತ್ತಿದೆ. ಇದು ಭಾರತದಲ್ಲೂ ಸಾಧ್ಯವಾಗುವಂತೆ ಮಾಡಲು ಕೇಂದ್ರ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಖಾಸಗಿ ಸಂಸ್ಥೆಗಳು ಪೂರೈಕೆದಾರರಷ್ಟೇ ಆಗಿ ಉಳಿಯದೆ ಮುಂದಿನ ದಿನಗಳಲ್ಲಿ ಇಸ್ರೋದ ಸಹಪ್ರಯಾಣಿಕರಾಗಿಯೂ ಬೆಳೆಯಲು ಈ ಕ್ರಮಗಳು ನೆರವಾಗಲಿವೆ ಎಂದು ಇಸ್ರೋದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಮುಖ್ಯಸ್ಥ ಜಿ. ನಾರಾಯಣನ್ ಹೇಳಿದರು. ಭಾರತ ಹಾಗೂ ಸ್ವೀಡನ್‌ಗಳೆರಡರಲ್ಲೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಚಟುವಟಿಕೆಗಳು ನಡೆದಿದ್ದು, ಎರಡು ರಾಷ್ಟ್ರಗಳ ನಡುವಿನ ಸಹಯೋಗದಿಂದ ಇನ್ನಷ್ಟು ಸಾಧನೆಗಳನ್ನು ನಿರೀಕ್ಷಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸ್ವೀಡನ್ ರಾಯಭಾರಿ ಕ್ಲಾಸ್ ಮೊಲೀನ್, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸಮಾಡುತ್ತಿರುವ ಭಾರತ ಹಾಗೂ ಸ್ವೀಡನ್ ದೇಶಗಳ ಸಹಯೋಗ ಇನ್ನಷ್ಟು ಬೆಳೆಯಲಿದ್ದು, ಶುಕ್ರಗ್ರಹ ಅನ್ವೇಷಣೆಗಾಗಿ ಇಸ್ರೋ ಕೈಗೊಳ್ಳುತ್ತಿರುವ ಯೋಜನೆಯಲ್ಲಿ ಸ್ವೀಡನ್ ಕೂಡ ಕೈಜೋಡಿಸಲಿದೆ ಎಂದು ಘೋಷಿಸಿದರು.

ಬೆಂಗಳೂರು ತಂತ್ರಜ್ಞಾನ ಮೇಳ-೨೦೨೦ರ 'ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ ಬಾಹ್ಯಾಕಾಶ ತಂತ್ರಜ್ಞಾನ ಸಹಯೋಗ' ಕಾರ್ಯಕ್ರಮ ಈ ಘೋಷಣೆಗೆ ಸಾಕ್ಷಿಯಾಯಿತು. ಮನುಕುಲದ ಸುಸ್ಥಿರ ಭವಿಷ್ಯಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎನ್ನುವುದರ ಕುರಿತು ವಿಸ್ತೃತ ಸಂವಾದ ನಡೆದ ಈ ಕಾರ್ಯಕ್ರಮದಲ್ಲಿ ಎರಡೂ ದೇಶಗಳ ಹಲವು ಪರಿಣತರು ಭಾಗವಹಿಸಿದ್ದರು.

ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಅಂಬ್ಲಿಕಲ್ ಡಿಸೈನ್ ಸಿಇಓ ಸಿಸಿಲಿಯಾ ಹರ್ಟ್ಸ್ ಈ ಸಂದರ್ಭದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಸುಸ್ಥಿರತೆಯ ನಡುವಿನ ಸಂಬಂಧದ ಬಗ್ಗೆ ಮಾತನಾಡಿದರು. ಅನಗತ್ಯವಾಗಿ ಕಸ ಉತ್ಪಾದನೆಯಾಗದಂತೆ ತಡೆಯುವ 'ಸರ್ಕ್ಯುಲರ್ ಇಕಾನಮಿ' ಪರಿಕಲ್ಪನೆಗೆ ಗಗನಯಾನಿಗಳ ಜೀವನಶೈಲಿ ಅತ್ಯುತ್ತಮ ಉದಾಹರಣೆಯಾಗಿದ್ದು, ಅವರು ಇರುವ ಪರಿಸ್ಥಿತಿಯಲ್ಲಿ ಯಾವ ವಸ್ತುವೂ ವ್ಯರ್ಥವಾಗುವಂತೆಯೇ ಇಲ್ಲ. ಭೂಮಿಯ ಮೇಲೆ ವಾಸಿಸುವ ನಾವು ಇದರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಆಧುನಿಕ ನಗರಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವುದರಿಂದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು.

ಇಸ್ರೋ ಯೋಜಿಸುತ್ತಿರುವ 'ಗಗನಯಾನ' ಇಡೀ ದೇಶಕ್ಕೇ ಹೊಸ ಪ್ರೇರಣೆ ನೀಡಬಲ್ಲದು ಎಂದು ಸ್ವೀಡನ್ನಿನ ಗಗನಯಾನಿ ಪ್ರೊ. ಕ್ರಿಸ್ಟರ್ ಫ್ಯೂಗಲ್‌ಸಾಂಗ್ ಹೇಳಿದರು. ಭಾರತ ಹಾಗೂ ಸ್ವೀಡನ್ನಿನ ಹಲವು ಸಂಸ್ಥೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಸಂವಾದದಲ್ಲಿ ಪಾಲ್ಗೊಂಡರು. ನಿತ್ಯದ ಜೀವನದ ಹಲವು ಕ್ಷೇತ್ರಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಮುನ್ನಡೆಯಲ್ಲಿ ಶಿಕ್ಷಣ ಸಂಸ್ಥೆಗಳೊಡನೆ ಸಹಭಾಗಿತ್ವದ ಮಹತ್ವ ಮುಂತಾದ ವಿಷಯಗಳು ಸಂವಾದದಲ್ಲಿ ಪ್ರಸ್ತಾಪಗೊಂಡವು.

೫. ಕೃಷಿ ಉದ್ಯಮಶೀಲತೆ: ತಂತ್ರಜ್ಞಾನದೊಂದಿಗೆ ಕೃಷಿಯ ಸಶಕ್ತೀಕರಣ

ಕೃಷಿ ಕ್ಷೇತ್ರವು ಮುಂದಿನ ದಿನಗಳಲ್ಲಿ ತಂತ್ರಜ್ಞಾನದ ಪ್ರಯೋಜನವನ್ನು ದೊಡ್ಡ ಪ್ರಮಾಣದಲ್ಲಿ ಪಡೆಯಲಿದೆ. ಈ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗಬೇಕಿರುವುದರಿಂದ ನಾವು ತಾಳ್ಮೆಯಿಂದ ಮುನ್ನಡೆಯಬೇಕಿದೆ ಎಂದು ಆಕ್ಸೆಲ್ ಸಂಸ್ಥೆಯ ಪಾಲುದಾರ ಪ್ರಶಾಂತ್ ಪ್ರಕಾಶ್ ಹೇಳಿದರು. ಭಾರತದ ವಿಶ್ವವಿದ್ಯಾನಿಲಯಗಳು ಮತ್ತು ಸಂಶೋಧನಾಲಯಗಳು ತಮ್ಮ ಜ್ಞಾನವನ್ನು ನವೋದ್ಯಮಿಗಳೊಡನೆ ಹಂಚಿಕೊಳ್ಳುವ ಮೂಲಕ ಈ ಪ್ರಕ್ರಿಯೆಗೆ ನೆರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ತಂತ್ರಜ್ಞಾನ ಮೇಳ-೨೦೨೦ರ 'ಕೃಷಿ ಉದ್ಯಮಶೀಲತೆ: ತಂತ್ರಜ್ಞಾನದೊಂದಿಗೆ ಕೃಷಿಯ ಸಶಕ್ತೀಕರಣ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೃಷಿ ತಂತ್ರಜ್ಞಾನ ಕ್ಷೇತ್ರದ ಹಲವು ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ವರ್ಷಗಳಲ್ಲಿ ಉದ್ಯಮಶೀಲತೆಯ ಒಟ್ಟಾರೆ ಗುಣಮಟ್ಟ ಗಮನಾರ್ಹವಾಗಿ ಹೆಚ್ಚಿದೆ. ಇತರ ಕ್ಷೇತ್ರಗಳ ಜ್ಞಾನ ಮತ್ತು ಅನುಭವದೊಂದಿಗೆ ಬರುವ ನವೋದ್ಯಮಿಗಳು ಮೌಲ್ಯ ಸೃಷ್ಟಿಸುವತ್ತ ಗಮನಹರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಆವಿಷ್ಕಾರ್‌ ಸಂಸ್ಥೆಯ ಪಾಲುದಾರ ಅಜಯ್ ಮನಿಯರ್ ಹೇಳಿದರು. ತಂತ್ರಜ್ಞಾನವು ಎಲ್ಲ ವರ್ಗಗಳನ್ನೂ ಪ್ರಭಾವಿಸುತ್ತಿರುವ ಈ ಸಂದರ್ಭದಲ್ಲಿ ಸಮಾಜದ ಅಗತ್ಯಗಳಿಗೂ ಅದು ಪೂರೈಕೆಯಾಗುತ್ತಿರುವ ಪ್ರಮಾಣಕ್ಕೂ ನಡುವೆ ಬಹುದೊಡ್ಡ ವ್ಯತ್ಯಾಸವಿದ್ದು ಈ ನಿಟ್ಟಿನಲ್ಲಿ ಕೃಷಿ ಉದ್ಯಮಶೀಲತೆಯು ಕೊಡುಗೆ ನೀಡಬೇಕಿದೆಯೆಂದು ಅವರು ಅಭಿಪ್ರಾಯಪಟ್ಟರು.

ಆಮ್ನಿವೋರ್ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಕಾನ್ ಮಾತನಾಡಿ, "ಜನಸಂಖ್ಯೆಯ ದೊಡ್ಡ ಭಾಗಕ್ಕೆ ಜೀವನಾಧಾರವಾಗಿರುವ ಕೃಷಿ ಭಾರತೀಯ ಅರ್ಥವ್ಯವಸ್ಥೆಯ ಮೇಲೆ ಗಣನೀಯ ಪ್ರಭಾವ ಬೀರುತ್ತದೆ. ಈ ಕ್ಷೇತ್ರದ ಉದ್ಯಮಗಳು ಹಿಂದಿನ ದಶಕಗಳಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿವೆ. ಸದ್ಯದ ಸನ್ನಿವೇಶದಲ್ಲಿ ಈ ಕ್ಷೇತ್ರದಲ್ಲಿ ಉದ್ಯಮಶೀಲತೆಯ ಬಗ್ಗೆ ಸಾಕಷ್ಟು ಉತ್ಸಾಹ ಕಂಡುಬರುತ್ತಿದ್ದು, ನಾವು ಈ ದಶಕದಲ್ಲೇ ಅತ್ಯಂತ ಚೈತನ್ಯದಾಯಕ ಸಮಯದಲ್ಲಿದ್ದೇವೆ. ಡಿಜಿಟಲ್ ಕ್ರಾಂತಿ ಕೇವಲ ನಗರ ಕೇಂದ್ರಿತ ಕ್ರಾಂತಿಯಲ್ಲ ಎನ್ನುವುದನ್ನು ನಾವೆಲ್ಲ ಅರಿತುಕೊಳ್ಳಬೇಕಿದೆ" ಎಂದು ಹೇಳಿದರು.

ಈಚಿನ ಕೆಲ ವರ್ಷಗಳಲ್ಲಿ ದೇಶದಾದ್ಯಂತ ಹಲವು ಮಹತ್ವದ ಬದಲಾವಣೆಗಳಾಗಿದ್ದು ಮೊಬೈಲ್ ಸಂಪರ್ಕ ಹಾಗೂ ಅಂತರಜಾಲದ ಅನುಕೂಲಗಳು ಗ್ರಾಮೀಣ ಪ್ರದೇಶದಲ್ಲೂ ದೊರಕುತ್ತಿವೆ. ಇದು ಅನೇಕ ಹೊಸ ಅವಕಾಶಗಳನ್ನು ಸೃಷ್ಟಿಸಿದ್ದು, ರೈತ ಕೇಂದ್ರಿತ ಮಾರ್ಗವನ್ನು ಅನುಸರಿಸುವ ಮೂಲಕ ನಾವು ಈ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂದು ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ನ ಸಿಇಓ ಸಿ. ಎಂ. ಪಾಟೀಲ್ ಅಭಿಪ್ರಾಯಪಟ್ಟರು.

ಐದು ವರ್ಷಗಳ ಹಿಂದೆ ಕಲ್ಪಿಸಿಕೊಳ್ಳಲೂ ಆಗದಿದ್ದ ಸಂಗತಿಗಳು ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಈಗ ಸಾಧ್ಯವಾಗಿವೆ. ಅಂತರಜಾಲ ಮತ್ತು ಮೊಬೈಲ್ ಫೋನ್‌ಗಳ ಲಭ್ಯತೆ ಹಾಗೂ ಐಓಟಿಯಂತಹ ತಂತ್ರಜ್ಞಾನಗಳ ಅಭಿವೃದ್ಧಿ ಕೃಷಿ ಉದ್ಯಮಶೀಲತೆಗೆ ಹೊಸ ರೂಪ ನೀಡುತ್ತಿದೆ. ಆದರೂ ಈ ಕ್ಷೇತ್ರದಲ್ಲಿ ಆಗಬೇಕಿದ್ದು ಬಹಳಷ್ಟಿದ್ದು, ತಂತ್ರಜ್ಞಾನದ ಸವಲತ್ತುಗಳ ಪ್ರಯೋಜನ ಎಲ್ಲರಿಗೂ ದೊರಕಬೇಕಿದೆ ಎನ್ನುವ ಅಭಿಪ್ರಾಯ ತಜ್ಞರ ನಡುವಿನ ಸಂವಾದದಲ್ಲಿ ವ್ಯಕ್ತವಾಯಿತು. ಕೃಷಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಈ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಬಹುದೆಂದು ಅವರು ಅಭಿಪ್ರಾಯಪಟ್ಟರು.

೬. ಉದ್ಯೋಗಗಳ ಭವಿಷ್ಯದ ನೋಟ: ಹೊಸ ಸಾಧ್ಯತೆಗಳ ಅನಾವರಣ

ವರ್ಕ್ ಫ್ರಮ್ ಹೋಮ್ ಪರಿಕಲ್ಪನೆ ನಿಜಕ್ಕೂ ಕಾರ್ಯಗತಗೊಳ್ಳಬಹುದೇ ಎನ್ನುವುದರ ಬಗ್ಗೆ ನಮಗೆ ಇದ್ದ ಎಲ್ಲ ಸಂದೇಹಗಳನ್ನೂ ಕೋವಿಡ್-೧೯ ಸಂಕಷ್ಟ ಹೋಗಲಾಡಿಸಿದೆ ಎಂದು ಮೈಕ್ರೋಲ್ಯಾಂಡ್ ಸಂಸ್ಥಾಪಕ ಪ್ರದೀಪ್ ಕರ್ ಹೇಳಿದರು. ಈಗಾಗಲೇ ನಡೆದಿದ್ದ ಆಟೋಮೇಶನ್ ಪ್ರಕ್ರಿಯೆಯ ಜೊತೆಗೆ ಕೋವಿಡ್-೧೯ ಕೂಡ ಸೇರಿ ಉದ್ಯೋಗಗಳ ಭವಿಷ್ಯವೇ ಬದಲಾಗಿದೆ, ದೂರಸಂಪರ್ಕ ಜಾಲಗಳ ಸಾಮರ್ಥ್ಯದಿಂದ ಪ್ರಾರಂಭಿಸಿ ಉದ್ಯೋಗಿಗಳ ಯೋಗಕ್ಷೇಮ ನೋಡಿಕೊಳ್ಳುವುದರವರೆಗೆ ಪ್ರತಿಯೊಂದು ಹಂತದಲ್ಲೂ ಎದುರಿಸಬೇಕಾಗಿ ಬಂದ ಸವಾಲುಗಳನ್ನು ಈವರೆಗೆ ಎಲ್ಲರೂ ಒಟ್ಟಾಗಿ ಎದುರಿಸಿರುವ, ಪರಿಹಾರಗಳನ್ನು ಕಂಡುಕೊಂಡಿರುವ ಬಗೆ ನಿಜಕ್ಕೂ ಶ್ಲಾಘನೀಯವೆಂದು ಅವರು ಅಭಿಪ್ರಾಯಪಟ್ಟರು.

ಬೆಂಗಳೂರು ತಂತ್ರಜ್ಞಾನ ಮೇಳ-೨೦೨೦ರ 'ಉದ್ಯೋಗಗಳ ಭವಿಷ್ಯದ ನೋಟ: ಹೊಸ ಸಾಧ್ಯತೆಗಳ ಅನಾವರಣ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹಲವು ಹಿರಿಯ ತಜ್ಞರು ಈ ಕಾರ್ಯಕ್ರಮದ ಅಂಗವಾಗಿ ನಡೆದ ಸಂವಾದದಲ್ಲಿ ಭಾಗವಹಿಸಿದ್ದರು.

ಕೋವಿಡ್-೧೯ ಸಂಕಷ್ಟವು ಸಮಸ್ಯೆಗಳ ಜೊತೆಗೆ ಹೊಸ ಅವಕಾಶಗಳನ್ನೂ ಸೃಷ್ಟಿಸಿದೆ. ಈ ಅವಕಾಶಗಳನ್ನು ಬಳಸಿಕೊಂಡು ಸಂಸ್ಥೆಗಳು ತಮ್ಮ ಕಾರ್ಯಾಚರಣೆಯ ವಿಧಾನವನ್ನು ಬದಲಿಸಿಕೊಳ್ಳಬಹುದು ಹಾಗೂ ಯಾವುದೇ ಸ್ಥಳದಲ್ಲಿರುವ ಉದ್ಯೋಗಿಗಳ ಪರಿಣತಿಯನ್ನು ಭೌಗೋಳಿಕ ಮಿತಿಗಳಿಲ್ಲದೆ ಬಳಸಿಕೊಳ್ಳಬಹುದು. ಯಾವ ಕೆಲಸವನ್ನು ಎಲ್ಲಿಂದ ಬೇಕಾದರೂ ಮಾಡುವುದು ಸಾಧ್ಯವೆಂದು ಈ ಸನ್ನಿವೇಶ ತೋರಿಸಿಕೊಟ್ಟಿದೆ. ಈ ಸಂದರ್ಭದಲ್ಲಿ ನಮ್ಮ ಮಹಾನಗರಗಳ ಮೇಲಿನ ಒತ್ತಡವನ್ನೂ ಕಡಿಮೆಮಾಡಿಕೊಳ್ಳಲು ಪ್ರಯತ್ನಿಸಬಹುದು ಎನ್ನುವ ಅಭಿಪ್ರಾಯ ಈ ಸಂವಾದದಲ್ಲಿ ವ್ಯಕ್ತವಾಯಿತು.

'ಹೊಸ ಸಾಧಾರಣ' ಸನ್ನಿವೇಶಕ್ಕೆ ಹೊಂದಿಕೊಳ್ಳಲು ಎಲ್ಲ ಕ್ಷೇತ್ರಗಳ ಜನರೂ ಮುಂದೆಬಂದಿದ್ದಾರೆ. ಸಂಸ್ಥೆಗಳ ಉದ್ಯೋಗಿಗಳು ಮಾತ್ರವೇ ಅಲ್ಲದೆ ದೂರಸಂಪರ್ಕ ಸಂಸ್ಥೆಗಳು, ಸರಕಾರದ ಅಧಿಕಾರಿಗಳು ಕೂಡ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತೋರಿಸಿರುವ ಉತ್ಸಾಹ ಶ್ಲಾಘನೀಯ ಎಂದು ಆಲ್‌ಸ್ಟೇಟ್ ಇಂಡಿಯಾ ಸಂಸ್ಥೆಯ ಎಂಡಿ ಚೇತನ್ ಗರ್ಗ ಹೇಳಿದರು. ಸದ್ಯದ ಸನ್ನಿವೇಶವು ಎಂತಹುದೇ ಸಂಕಷ್ಟವನ್ನೂ ನಾವು ಹೊಸ ಅವಕಾಶದಂತೆ ನೋಡುವುದು ಸಾಧ್ಯವೆಂದು ತೋರಿಸಿಕೊಟ್ಟಿದೆ, ಬದಲಾದ ಸನ್ನಿವೇಶದಲ್ಲಿ ನಾವು ಕೆಲಸಮಾಡುವ ರೀತಿಯೂ ಬದಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸನ್ನಿವೇಶದಲ್ಲಿ 'ಸೈಬರ್' ಹಾಗೂ 'ಫಿಸಿಕಲ್' ಪ್ರಪಂಚಗಳು ಒಂದುಗೂಡಿ 'ಸೈಬರ್‌ಫಿಸಿಕಲ್' ವ್ಯವಸ್ಥೆಗಳು ರೂಪುಗೊಂಡಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಪ್ರಾರಂಭವಾಗಿದ್ದ ಬದಲಾವಣೆಗಳ ವೇಗವರ್ಧನೆಗೆ ಕೋವಿಡ್-೧೯ ಕಾರಣವಾಗಿದೆ. ಇದರಿಂದಾಗಿ ಭವಿಷ್ಯದ ಉದ್ಯೋಗಗಳು ಮನೆ ಹಾಗೂ ಕಚೇರಿ ಎರಡೂ ಕಡೆಗಳಿಂದ ನಡೆಯುವ 'ಹೈಬ್ರಿಡ್' ರೂಪಕ್ಕೆ ಬದಲಾಗುತ್ತವೆ ಎಂದು ಎಚ್‌ಪಿ ಸಂಸ್ಥೆಯ ತಪಸ್ ಪಾಂಡಾ ಹೇಳಿದರು. ಉದ್ಯೋಗಿಗಳು ಹೆಚ್ಚಿನ ಸಮಯವನ್ನು ಮನೆಯಲ್ಲೇ ಕಳೆಯುವುದರಿಂದ ಕಚೇರಿಗಾಗಿ ನಿರ್ದಿಷ್ಟ ಸ್ಥಳಗಳನ್ನು ಮೀಸಲಿಡಬೇಕಾದ ಅಗತ್ಯ ಕಡಿಮೆಯಾಗುತ್ತದೆ. ಇರುವ ಕಚೇರಿಗಳಲ್ಲೂ ಸ್ಪರ್ಶರಹಿತ (ಟಚ್-ಫ್ರೀ) ಅನುಭವಕ್ಕಾಗಿ ಹೊಸ ತಂತ್ರಜ್ಞಾನಗಳ ಬಳಕೆ ಹೆಚ್ಚುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಉದ್ಯೋಗದ ಸ್ವರೂಪ ಬದಲಾದಂತೆ ಉದ್ಯೋಗಿಗಳ ಮೇಲಿನ ಒತ್ತಡ ಹೆಚ್ಚುವ ಸಾಧ್ಯತೆಯೂ ಜಾಸ್ತಿಯಿದ್ದು, ಇದು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಯುನಿಸಿಸ್ ಇಂಡಿಯಾದ ಸುಮೇದ್ ಮಾರ್ವಾಹಾ ಹೇಳಿದರು. ಇಂತಹ ಸನ್ನಿವೇಶಗಳನ್ನು ತಪ್ಪಿಸಲು, ಹಾಗೂ ಎಲ್ಲಿಂದಲಾದರೂ ಕೆಲಸ ಮಾಡಬಹುದಾದ (ವರ್ಕ್ ಫ್ರಮ್ ಎನಿವೇರ್) ಪರಿಸ್ಥಿತಿಯಲ್ಲಿ ಸೈಬರ್ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಉದ್ಯೋಗಿಗಳು ಮತ್ತು ಉದ್ಯೋಗದಾತರಿಬ್ಬರೂ ಒಟ್ಟಾಗಿ ಶ್ರಮಿಸಬೇಕೆಂದು ಅವರು ಅಭಿಪ್ರಾಯಪಟ್ಟರು.

Related Stories

No stories found.
ಇಜ್ಞಾನ Ejnana
www.ejnana.com