ನಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದಿರುವುದು ಈ ಹಗರಣದಿಂದ ಪಾರಾಗುವ ಸುಲಭದ ದಾರಿ
ನಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳದಿರುವುದು ಈ ಹಗರಣದಿಂದ ಪಾರಾಗುವ ಸುಲಭದ ದಾರಿ

ಹುಷಾರು, ಫಿಶಿಂಗ್ ಗಾಳಕ್ಕೆ ಸಿಕ್ಕಬೇಡಿ!

ಬ್ಯಾಂಕ್ ಆಗಲಿ, ಮೊಬೈಲ್ ಸಂಸ್ಥೆಯಾಗಲೀ ಯಾವುದೇ ಅಸಹಜ ಬೇಡಿಕೆಯನ್ನು ನಿಮ್ಮ ಮುಂದಿಡುವುದಿಲ್ಲ ಎನ್ನುವುದು ನೆನಪಿರಲಿ.

ಮೊನ್ನೆ ಬೆಳಿಗ್ಗೆ ನನ್ನ ಪರಿಚಯದ ಹಿರಿಯರಿಂದ ಒಂದು ಇಮೇಲ್ ಬಂತು. "ನಾನು ಸ್ಪೇನ್‍ಗೆ ಬಂದಿದ್ದೆ, ಹುಷಾರು ತಪ್ಪಿದೆ. ನಿನ್ನ ಬಳಿ ಅರ್ಜೆಂಟಾಗಿ ಮಾತನಾಡಬೇಕು, ಈ ಸಂಖ್ಯೆಗೆ ಕರೆಮಾಡು" ಎನ್ನುವುದು ಇಮೇಲಿನ ಸಾರಾಂಶ. ಆ ಹಿರಿಯರು ಆಗಿಂದಾಗ್ಗೆ ವಿದೇಶ ಪ್ರವಾಸ ಮಾಡುವವರೇ ಆದರೂ ಎಂದೂ ಇಂತಹ ಇಮೇಲ್ ಕಳಿಸಿದವರಲ್ಲ. ಹೀಗಾಗಿ ಅವರ ಮನೆಯ ಲ್ಯಾಂಡ್‍ಲೈನನ್ನೂ ಮೊಬೈಲನ್ನೂ ಸಂಪರ್ಕಿಸಲು ಪ್ರಯತ್ನಿಸಿದೆ. ನಾಲ್ಕು ಪ್ರಯತ್ನದ ನಂತರ ಮೊಬೈಲಿನಲ್ಲಿ ಸಿಕ್ಕವರು ನಾನೆಲ್ಲೂ ಹೋಗಿಲ್ಲ, ನಿನಗೆ ಬಂದಿರುವುದು ನಕಲಿ ಇಮೇಲ್ ಎಂದು ಖಚಿತಪಡಿಸಿದರು.

ಹಿಂದೆ ವಿದೇಶಗಳಲ್ಲಷ್ಟೇ ನಡೆಯುತ್ತಿದ್ದ, ಮಾಧ್ಯಮಗಳ ಮೂಲಕ ನಮಗೆ ತಿಳಿಯುತ್ತಿದ್ದ ಇಂತಹ ಹಗರಣಗಳು ಇದೀಗ ನಮ್ಮ ದೇಶದಲ್ಲೂ ವ್ಯಾಪಕವಾಗಿ ಬೆಳೆಯುತ್ತಿವೆ.

ಮೊಬೈಲ್ ಸಂಸ್ಥೆಯವರ ಸೋಗಿನಲ್ಲಿ ಕರೆಮಾಡಿ "ಕೊಂಚಹೊತ್ತು ನಿಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ" ಎಂದು ಕೇಳುವವರು, ಬ್ಯಾಂಕಿನ ಹೆಸರು ಹೇಳಿಕೊಂಡು ಕಾರ್ಡ್ ವಿವರ - ಓಟಿಪಿ ಕೊಡಿ ಎನ್ನುವವರು, ಕ್ರೆಡಿಟ್ ಕಾರ್ಡಿನದೋ ವಿಮಾ ಸಂಸ್ಥೆಯದೋ ಹೆಸರಲ್ಲಿ "ನಿಮಗೆ ಬಹುಮಾನ ಬಂದಿದೆ"ಯೆಂಬ ಆಮಿಷ ತೋರಿಸುವವರು ಈಗ ನಮ್ಮಲ್ಲೂ ಅನೇಕರಿದ್ದಾರೆ. ಇಂತಹ ಯಾವುದೇ ಮೋಸದ ಗಾಳಕ್ಕೆ ಸಿಲುಕಿದಿರೋ, ಒಂದಲ್ಲ ಒಂದು ರೀತಿಯ ನಷ್ಟ ಗ್ಯಾರಂಟಿ.

ಮೀನುಗಾರರು ಮೀನು ಹಿಡಿಯುವ ಹಾಗೆ ಮೋಸದ ಗಾಳ ಬಳಸಿ ಜನರನ್ನು ವಂಚಿಸಲು ಪ್ರಯತ್ನಿಸುವ ಈ ಹಗರಣದ ಹೆಸರು ಫಿಶಿಂಗ್ ಎಂದು. ಕೇಳಿದ ಮಾಹಿತಿಯನ್ನು ಸುಲಭವಾಗಿ ಕೊಡುವ, ಮರುಪ್ರಶ್ನಿಸದೆ ಸೂಚನೆಗಳನ್ನು ಪಾಲಿಸುವ ನಮ್ಮೆಲ್ಲರ ಸಾಮಾನ್ಯ ವರ್ತನೆಯೇ ಈ ಹಗರಣದ ಮೂಲ ಬಂಡವಾಳ. ಖಾತೆ ಬ್ಲಾಕ್ ಆಗಿದೆಯೆಂದೋ, ಉಚಿತ ಕೊಡುಗೆ - ಬಹುಮಾನ ನೀಡುತ್ತೇವೆಂದೋ ಹೇಳಿ ಖಾತೆಯ ವಿವರ ಕೇಳುವ ವಂಚಕರು ನಮ್ಮಿಂದ ತಮಗೆ ಬೇಕಾದ ಮಾಹಿತಿ ಸಿಕ್ಕ ಕೂಡಲೇ ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಸುಳ್ಳು ಹೇಳಿ ತಮ್ಮ ಖಾತೆಗೆ ಹಣ ಹಾಕಿಸಿಕೊಳ್ಳುವುದು, ನಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯುವುದು, ಹಣ ಬೇಕೆಂದು ಕೇಳುವ ಸಂದೇಶಗಳನ್ನು ನಮ್ಮ ಇಮೇಲ್ ವಿಳಾಸದಿಂದ ಇತರರಿಗೆ ಕಳಿಸುವುದು, ತಮ್ಮ ಶಾಪಿಂಗಿಗೆ ನಮ್ಮ ಕ್ರೆಡಿಟ್ ಕಾರ್ಡ್ ಬಳಸುವುದೆಲ್ಲ ಈ ವಂಚನೆಯ ಪರಿಣಾಮಗಳೇ.

ಇಮೇಲ್ ಮೂಲಕ ನಡೆಯುವ ಫಿಶಿಂಗ್ ಪ್ರಯತ್ನಗಳನ್ನು ಬಹುಪಾಲು ಇಮೇಲ್ ಸೇವೆಗಳು ಗುರುತಿಸಿ ನಮ್ಮನ್ನು ಎಚ್ಚರಿಸುತ್ತವೆ. ಹೀಗಾಗಿ ಫಿಶಿಂಗ್ ಹಗರಣ ಇದೀಗ ದೂರವಾಣಿ ಕರೆ, ಎಸ್ಸೆಮ್ಮೆಸ್, ವಾಟ್ಸ್‌ಆಪ್ ಮುಂತಾದ ಬೇರೆಬೇರೆ ಮಾಧ್ಯಮಗಳ ಮೂಲಕವೂ ನಡೆಯುತ್ತಿದೆ. ದೂರವಾಣಿ ಕರೆಯ (ವಾಯ್ಸ್) ಮೂಲಕ ನಡೆಯುವ ಇಂತಹ ವಂಚನೆಗೆ 'ವಿಶಿಂಗ್', ಎಸ್ಸೆಮ್ಮೆಸ್ ಮೂಲಕ ನಡೆಯುವುದಕ್ಕೆ 'ಸ್ಮಿಶಿಂಗ್' ಎಂದೆಲ್ಲ ಪ್ರತ್ಯೇಕವಾಗಿ ಗುರುತಿಸುವ ಅಭ್ಯಾಸವೂ ಇದೆ.

ಯಾರೋ ಕೇಳಿದರೆಂದು ನಮ್ಮ ಖಾಸಗಿ ಮಾಹಿತಿಯನ್ನು (ಉದಾ: ಬ್ಯಾಂಕ್ ಖಾತೆಯ ವಿವರ, ಕಾರ್ಡಿನ ಪಿನ್, ಓಟಿಪಿ ಇತ್ಯಾದಿ) ಥಟ್ಟನೆ ಹಂಚಿಕೊಳ್ಳದಿರುವುದು ಈ ಹಗರಣ ತಡೆಯುವ ಅತ್ಯಂತ ಪರಿಣಾಮಕಾರಿ ಮಾರ್ಗ. ನಮ್ಮ ದಿನನಿತ್ಯದ ಅನೇಕ ವ್ಯವಹಾರಗಳು ಇಮೇಲ್ ಮೂಲಕ ನಡೆಯುವುದರಿಂದ ಇಮೇಲ್ ಖಾತೆಯ ಪಾಸ್‍ವರ್ಡನ್ನೂ ಜೋಪಾನಮಾಡಿಕೊಳ್ಳಬೇಕಾದ್ದು ಅನಿವಾರ್ಯ.

ಬ್ಯಾಂಕ್ ಆಗಲಿ, ಇಮೇಲ್ ಅಥವಾ ಮೊಬೈಲ್ ಸಂಸ್ಥೆಯಾಗಲೀ ಅಸಹಜವೆನಿಸುವಂತಹ ಯಾವುದೇ ಬೇಡಿಕೆಯನ್ನು (ಉದಾ: ಓಟಿಪಿ ಕೊಡಿ, ಪಾಸ್‍ವರ್ಡ್ ಕಳಿಸಿ, ಫೋನ್ ಆಫ್ ಮಾಡಿ) ನಿಮ್ಮ ಮುಂದಿಡುವುದಿಲ್ಲ ಎನ್ನುವುದು ನೆನಪಿರಲಿ. ಸಂಶಯ ಬಂದರೆ ಸಂಸ್ಥೆಯ ಅಧಿಕೃತ ಜಾಲತಾಣವನ್ನೋ ಗ್ರಾಹಕ ಸೇವಾ ಕೇಂದ್ರವನ್ನೋ ಸಂಪರ್ಕಿಸುವುದು ಜಾಣತನ. ಹಣಕ್ಕಾಗಿ ಬೇಡಿಕೆ ಆಪ್ತರ ಹೆಸರಿನಿಂದಲೇ ಬಂದಿದ್ದರೂ ಅವರನ್ನೋ ಅವರ ಕುಟುಂಬದವರನ್ನೋ ಸಂಪರ್ಕಿಸುವ ಮೊದಲು ಹೇಳಿದ ಸಂಖ್ಯೆಗೆ ವರ್ಗಾಯಿಸುವುದು ಆತುರದ ನಿರ್ಧಾರವಾಗಬಲ್ಲದು.

ಇಮೇಲ್‍ನಲ್ಲಿರುವಂತೆ ಎಸ್ಸೆಮ್ಮೆಸ್ ಅಥವಾ ವಾಟ್ಸ್‍ಆಪ್‍ನಲ್ಲಿ ಫಿಶಿಂಗ್ ಸಂದೇಶಗಳನ್ನು ಗುರುತಿಸಿ ಎಚ್ಚರಿಸುವ ಸೌಲಭ್ಯ ಇರುವುದಿಲ್ಲ. ಹೀಗಾಗಿ ಇಲ್ಲಿಯೂ ಅಪರಿಚಿತರಿಂದ ಬರುವ ಸಂದೇಶಗಳ ಬಗ್ಗೆ ಎಚ್ಚರವಹಿಸಬೇಕಾದ್ದು ಅನಿವಾರ್ಯ. ಇಂತಹ ಸಂದೇಶಗಳಲ್ಲಿರಬಹುದಾದ ಯಾವುದೇ ಕೊಂಡಿಯ ಮೇಲೆ ಕ್ಲಿಕ್ ಮಾಡುವುದು ಅಥವಾ ಅವರು ಕೇಳಿದ ಮಾಹಿತಿಯನ್ನು ಹಂಚಿಕೊಳ್ಳುವುದು ಹಾನಿಕಾರಕವಾಗಬಲ್ಲದು. ಇಂಥದ್ದೇ ಎಚ್ಚರಿಕೆ ಅಪರಿಚಿತ ಸಂಖ್ಯೆಗಳಿಂದ ಬರುವ ದೂರವಾಣಿ ಕರೆಗಳ ಬಗೆಗೂ ಇರಬೇಕು.

ಇದೆಲ್ಲ ನಮಗೆ ಚೆನ್ನಾಗಿ ಗೊತ್ತು ಎನ್ನುವವರೂ ಸುಮ್ಮನಿರುವುದು ತಪ್ಪು. ತಂತ್ರಜ್ಞಾನವನ್ನು ಸುಲಲಿತವಾಗಿ ಬಳಸುವ, ಆದರೆ ಅದರ ಅಪಾಯದ ಸಾಧ್ಯತೆಗಳ ಕುರಿತು ಅರಿವಿಲ್ಲದ ಕಿರಿಯರಿಗೆ - ತಂತ್ರಜ್ಞಾನ ಬಳಕೆಯನ್ನು ಈಗಷ್ಟೇ ಕಲಿಯುತ್ತಿರುವ ಹಿರಿಯರಿಗೆ ಇಂತಹ ಅಪಾಯಗಳ ಕುರಿತು ಮಾಹಿತಿ ನೀಡಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಟ್ಯಾಕ್ಸಿಯ ಓಟಿಪಿಯನ್ನು ಚಾಲಕರಿಗೆ ಹೇಳಬೇಕು, ಆದರೆ ಬ್ಯಾಂಕಿನ ಓಟಿಪಿ ಯಾರಿಗೂ ಹೇಳಬಾರದು ಎನ್ನುವಂತಹ ಅಂಶಗಳನ್ನು ಅತ್ಯಂತ ಸ್ಪಷ್ಟವಾಗಿ ವಿವರಿಸುವುದೂ ಅಗತ್ಯ. ಹೀಗೆಲ್ಲ ಮಾಡಿದಾಗ ಮಾತ್ರವೇ ತಂತ್ರಜ್ಞಾನದ ಸವಲತ್ತುಗಳನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳುವುದು, ಸಂತೋಷವಾಗಿ ಬಳಸುವುದು ಸಾಧ್ಯವಾಗುತ್ತದೆ.

ಸೆಪ್ಟೆಂಬರ್ ೧೦, ೨೦೧೭ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com